ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Election 2026) ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಬಿಜೆಪಿಗೆ ದೊಡ್ಡ ಸವಾಲು ಎದುರಾಗಿದೆ. ತಮಿಳುನಾಡು ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ Annamalai ಅವರು ಪಕ್ಷದ ಚುನಾವಣಾ ಉಸ್ತುವಾರಿ ಜವಾಬ್ದಾರಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಹೈಕಮಾಂಡ್ ಸೂಚನೆಯಂತೆ ಅಣ್ಣಾಮಲೈ ಅವರನ್ನು ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅಣ್ಣಾಮಲೈ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಕೇಸರಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.
ತಂದೆಯ ಆರೋಗ್ಯದ ನೆಪ, ಆಂತರಿಕ ಅಸಮಾಧಾನದ ಸುಳಿವು?
ಫೆಬ್ರವರಿ 03 ರಂದು ತುರ್ತು ಸುದ್ದಿಗೋಷ್ಠಿ ನಡೆಸಿದ Annamalai ಅವರು, “ನನ್ನ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಅವರ ಆರೈಕೆ ಮಾಡುವುದು ನನ್ನ ಮೊದಲ ಕರ್ತವ್ಯ. ಹೀಗಾಗಿ ಕೊಯಂಬತ್ತೂರಿನಲ್ಲಿಯೇ ಉಳಿಯಬೇಕಾಗಿರುವುದರಿಂದ, ಪಕ್ಷ ನೀಡಿರುವ 6 ಕ್ಷೇತ್ರಗಳ ಪ್ರವಾಸ ಮತ್ತು ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ನಾನು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,” ಎಂದು ಹೇಳಿದ್ದಾರೆ. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ ಈ ರಾಜೀನಾಮೆಯ ಹಿಂದೆ ದೊಡ್ಡ ಮಟ್ಟದ ಅಸಮಾಧಾನ ಅಡಗಿದೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಇಡೀ ತಮಿಳುನಾಡಿನಲ್ಲಿ ಬಿಜೆಪಿಯ ಅಲೆ ಎಬ್ಬಿಸಿದ್ದ ನಾಯಕನಿಗೆ, ಕೇವಲ ಆರು ಕ್ಷೇತ್ರಗಳ (ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಪಕ್ಕಂ, ಕಾರೈಕುಡಿ, ಶ್ರೀವೈಕುಂಡಂ ಮತ್ತು ಪದ್ಮನಾಭಪುರಂ) ಉಸ್ತುವಾರಿ ನೀಡಿರುವುದು ಅಣ್ಣಾಮಲೈ ಅವರ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇದು ಅವರ ರಾಜಕೀಯ ಪ್ರಭಾವವನ್ನು ಕುಗ್ಗಿಸುವ ತಂತ್ರ ಎಂದು ಅವರ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಲೋಕಸಭೆ ಸೋಲು ಮತ್ತು ಬದಲಾದ ಸಮೀಕರಣ
2024ರ ಲೋಕಸಭಾ ಚುನಾವಣೆಯಲ್ಲಿ ಕೊಯಂಬತ್ತೂರಿನಿಂದ ಸ್ಪರ್ಧಿಸಿ ಸೋಲು ಕಂಡ ನಂತರ ಅಣ್ಣಾಮಲೈ ಅವರ ನಡೆ ನಿಗೂಢವಾಗಿತ್ತು. ಸದ್ಯ ಅವರು ಕೊಯಂಬತ್ತೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು, ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದಾರೆ. ಆದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. “ಪಕ್ಷದ ಹಿರಿಯ ನಾಯಕರ ತೀರ್ಮಾನಕ್ಕೆ ನಾನು ಬದ್ಧ, ಸೂಕ್ತ ಸಮಯದಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ,” ಎಂದು ಹೇಳುವ ಮೂಲಕ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.
ಬಿಜೆಪಿಗೆ ದೊಡ್ಡ ಸವಾಲು!
ದಕ್ಷಿಣ ಭಾರತದಲ್ಲಿ ಕರ್ನಾಟಕದ ನಂತರ ತಮಿಳುನಾಡನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಹವಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಣ್ಣಾಮಲೈ ಅವರಂತಹ ವರ್ಚಸ್ಸಿರುವ ನಾಯಕ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುವುದು ನಿಶ್ಚಿಯ ಎಂದು ಹೇಲಲಾಗುತ್ತಿದೆ,
ಅಣ್ಣಾಮಲೈ ಅವರು ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ರಾಜಕೀಯ ವಲಯದಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ. ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಡೀ ರಾಜ್ಯದ ಜವಾಬ್ದಾರಿ ಹೊತ್ತಿದ್ದ ಅಣ್ಣಾಮಲೈ ಅವರಿಗೆ, ಈಗ ಕೇವಲ ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಪಕ್ಕಂ, ಕಾರೈಕುಡಿ, ಶ್ರೀವೈಕುಂಡಂ ಮತ್ತು ಪದ್ಮನಾಭಪುರಂ ಸೇರಿದಂತೆ ಕೇವಲ ಆರು ಕ್ಷೇತ್ರಗಳಿಗೆ ಸೀಮಿತಗೊಳಿಸಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂಬ ಲೆಕ್ಕಾಚಾರಗಳಿವೆ. ಇದು ಅವರ ಪ್ರಭಾವವನ್ನು ಕುಗ್ಗಿಸುವ ಪಕ್ಷದೊಳಗಿನ ಕೆಲವು ನಾಯಕರ ತಂತ್ರ ಎಂಬ ಮಾತುಗಳು ಅಣ್ಣಾಮಲೈ ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ.
ಅಣ್ಣಾಮಲೈ ಮುಂದಿನ ನಡೆಯೇನು?
ಕರ್ನಾಟಕದಲ್ಲಿ ‘ಸಿಂಗಂ’ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ, ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ಯುವ ಪಡೆಯನ್ನು ಹೊಂದಿದ್ದಾರೆ. ಈಗ ಅವರು ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ಕೇವಲ ತಂದೆಯ ಅನಾರೋಗ್ಯಕ್ಕಾಗಿಯೋ ಅಥವಾ ಹೊಸ ರಾಜಕೀಯ ದಾರಿ ತುಳಿಯುವ ಮುನ್ಸೂಚನೆಯೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ, 2026ರ ಸಮರಕ್ಕೆ ಸಜ್ಜಾಗುತ್ತಿರುವ ಬಿಜೆಪಿಗೆ ಅಣ್ಣಾಮಲೈ ಅವರ ಈ ನಡೆ “ಆರಂಭದಲ್ಲೇ ವಿಘ್ನ” ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಾರೋ ಅಥವಾ ಪಕ್ಷವನ್ನೇ ತೊರೆಯುತ್ತಾರೋ ಎನ್ನುವುದು ಗೊಂದಲದ ಗೂಡಾಗಿದೆ.

