Dharamsthala Case: ಕರ್ನಾಟಕದ ಸಾಮಾಜಿಕ, ಧಾರ್ಮಿಕ ಮತ್ತು ಕಾನೂನು ಇತಿಹಾಸದಲ್ಲೇ ಅತ್ಯಂತ ನಿಗೂಢ ಹಾಗೂ ಭೀಕರ ಸರಣಿ ಸಾವುಗಳ ಕರಾಳ ರಹಸ್ಯವನ್ನು ಹೊತ್ತಿರುವ ಧರ್ಮಸ್ಥಳದ ಅಸ್ತಿಪಂಜರಗಳ ಪ್ರಕರಣವೀಗ ಅತ್ಯಂತ ಕುತ್ಸಿತ ಹಾಗೂ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ, “ನಾನೇ ಹೆಣಗಳನ್ನು ಹೂತಿದ್ದೇನೆ, ಧರ್ಮಸ್ಥಳದಲ್ಲಿ ನಡೆದ ಅನಾಚಾರಗಳಿಗೆ ನಾನೇ ಸಾಕ್ಷಿ, ಬೇಕಿದ್ದರೆ ನನ್ನನ್ನು ಮಂಪರು ಪರೀಕ್ಷೆಗಾದರೂ ಒಳಪಡಿಸಿ” ಎಂದು ಇಡೀ ಸಮಾಜದ ಮುಂದೆ ಸಾರುತಿದ್ದ ಮುಸುಕುಧಾರಿ ವ್ಯಕ್ತಿ ಚಿನ್ನಯ್ಯ, ಇಂದು ಹೈಕೋರ್ಟ್ ಮೆಟ್ಟಿಲೇರಿ ಕಂಪ್ಲೀಟ್ ‘ಪಲ್ಟಿ’ ಹೊಡೆದಿದ್ದಾನೆ. ಹೈಕೋರ್ಟ್ನಲ್ಲಿ ಆತ ಸಲ್ಲಿಸಿರುವ ರಿಟ್ ಅರ್ಜಿ ಮತ್ತು ಅಫಿಡವಿಟ್ ಕೇವಲ ಸಾಕ್ಷಿಯೊಬ್ಬನ ಯೂ-ಟರ್ನ್ ಅಲ್ಲ; ಬದಲಿಗೆ ಈ ರಾಜ್ಯದ ಪ್ರಭಾವಿ ದುಷ್ಟ ಕೂಟ ಅಥವಾ ‘ಡಿ-ಗ್ಯಾಂಗ್’ (D-Gang) ಸತ್ಯವನ್ನು ಹೂತುಹಾಕಲು ವ್ಯವಸ್ಥೆಯನ್ನು ಹೇಗೆ ತನ್ನ ಇಷ್ಟದಂತೆ ಕುಣಿಸುತ್ತಿದೆ ಎಂಬುದಕ್ಕೆ ಸಿಕ್ಕ ಅತ್ಯಂತ ಬೆತ್ತಲೆ ಸಾಕ್ಷಿಯಾಗಿದೆ.
‘200 ಕೋಟಿ’ಯ ಕಾಲ್ಪನಿಕ ಬ್ರಹ್ಮಾಂಡ ಮತ್ತು ದಿಕ್ಕುತಪ್ಪಿಸುವ ಸಿನಿಮಾ ಸ್ಕ್ರಿಪ್ಟ್
ಧರ್ಮಸ್ಥಳದ ಪ್ರಕರಣಕ್ಕೆ (Dharamsthala Case) ಸಂಬಂಧಿಸಿದಂತೆ ಚಿನ್ನಯ್ಯ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ಇಷ್ಟು ದಿನ ತಾನು ಹೇಳಿದ್ದನ್ನೆಲ್ಲಾ ಉಲ್ಟಾ ಮಾಡಿ, ಈ ಇಡೀ ಹೋರಾಟ ಮತ್ತು ತನಿಖೆಯ ಹಿಂದೆ ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಷಡ್ಯಂತ್ರ ಅಡಗಿದೆ ಎಂಬ ಕಟ್ಟುಕಥೆಯನ್ನು ಹೆಣೆದಿದ್ದಾನೆ. ಚಿತ್ರದುರ್ಗದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜು, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಅವರು ಸೇರಿ ತನಗೆ ಬ್ರೈನ್ ವಾಶ್ ಮಾಡಿ, ಪ್ರಭಾವಿಗಳ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರು ಎಂಬುದು ಚಿನ್ನಯ್ಯನ ಈಗಿನ ಹೊಸ ವಾದ.
ಇಲ್ಲಿ ಕೇಳಬೇಕಾದ ಅತ್ಯಂತ ಖಾರವಾದ ಪ್ರಶ್ನೆಯೆಂದರೆ, ದಿನಬೆಳಗಾದರೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುವ, ಬಡ ಹೆಣ್ಣುಮಕ್ಕಳ ಪರವಾಗಿ ಧರಣಿ ಸಂಸ್ಥೆ ಕಟ್ಟಿ ನ್ಯಾಯಕ್ಕಾಗಿ ಬೀದಿಗಿಳಿಯುವ ರಮಾ ನಾಗರಾಜು ಅವರಂತಹ ನಿಷ್ಠಾವಂತ ಹೋರಾಟಗಾರರಿಗೆ 200 ಕೋಟಿ ರೂಪಾಯಿ ಎಲ್ಲಿಂದ ಬಂತು? ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಅವರು ಅತ್ಯಂತ ತೀಕ್ಷ್ಣವಾಗಿ ವ್ಯಂಗ್ಯವಾಡಿರುವಂತೆ, “ಅವರಿಗೆ 200 ಹುಣಸೆ ಬೀಜ ಕೊಡುವಷ್ಟು ಆರ್ಥಿಕ ಶಕ್ತಿಯೂ ಇಲ್ಲ, ಇನ್ನು 200 ಕೋಟಿ ಎಲ್ಲಿಂದ ತರುತ್ತಾರೆ?” ಪ್ರಾರಂಭದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೇ ಪತ್ರ ಬರೆದು ಸತ್ಯ ಒಪ್ಪಿಕೊಂಡಿದ್ದ ಈ ಚಿನ್ನಯ್ಯ, ಜೈಲಿನಲ್ಲಿದ್ದಾಗ ಕಾನೂನು ನೆರವು ನೀಡಿ ಬಿಡಿಸಿದ್ದು ಇದೇ ಸೌಜನ್ಯಪರ ಹೋರಾಟಗಾರರ ತಂಡ. ಆದರೆ, ಇಂದು ಲಕ್ಷಾಂತರ ರೂಪಾಯಿ ಸುರಿದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿಸಿ, ಈತನ ಕೈಯಲ್ಲಿ ಇಂತಹ ಸ್ಕ್ರಿಪ್ಟೆಡ್ ನಾಟಕ ಆಡಿಸುತ್ತಿರುವುದು ಆ ಪ್ರಭಾವಿ ದುಷ್ಟ ಗ್ಯಾಂಗ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸತ್ಯದ ಜ್ವಾಲೆ ತಮ್ಮ ಮನೆ ಬಾಗಿಲಿಗೆ ಬರುತ್ತಿರುವುದನ್ನು ಕಂಡು ಹತಾಶರಾಗಿರುವ ಪ್ರಭಾವಿಗಳು ಹೆಣೆದಿರುವ ಕುತಂತ್ರವಷ್ಟೇ.
ಇದನ್ನೂ ಓದಿ: Siddaramaiah: ಖಾವಿಯ ಮರೆಯಲ್ಲಿ ಸುಪಾರಿ ರಾಜಕಾರಣ; ಸಿದ್ದು ಇಮೇಜ್ಗೆ ಧಕ್ಕೆ ತರಲು ಹೊರಟ ನಕಲಿ ಸ್ವಾಮಿಯ ಅಸಲಿ ಸತ್ಯ ಇಲ್ಲಿದೆ!
ನಟ ಪ್ರಕಾಶ್ ರೈ ಟಾರ್ಗೆಟ್ ಮತ್ತು ಬೂಟು ನೆಕ್ಕುವ ಮಾಧ್ಯಮಗಳ ಶ್ರದ್ಧಾಂಜಲಿ
ಈ ಇಡೀ ಪಿತೂರಿಯ ಚಿತ್ರಕಥೆಗೆ ರಾಷ್ಟ್ರ ಮಟ್ಟದ ಪ್ರಚಾರ ಸಿಗಲಿ ಎಂಬ ಕಾರಣಕ್ಕೆ ಬಹುಭಾಷಾ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರ ಹೆಸರನ್ನು ಅತ್ಯಂತ ಚಾಣಾಕ್ಷತನದಿಂದ ಎಳೆದು ತರಲಾಗಿದೆ. ತನಗೆ ಬಂದ ಫೋನ್ ಕರೆಯಲ್ಲಿ ಪ್ರಕಾಶ್ ರೈ ಅವರು ಮಾತನಾಡಿ, “ಹೋರಾಟಗಾರರು ಹೇಳಿದಂತೆ ಕೇಳು, ನಾನು ನಿನ್ನನ್ನು ವೈಯಕ್ತಿಕವಾಗಿ ಬಂದು ಭೇಟಿ ಮಾಡಿ ಶಹಬಾಷ್ ಗಿರಿ ನೀಡುತ್ತೇನೆ” ಎಂದು ಆಮಿಷ ಒಡ್ಡಿದ್ದರು ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ. ಪ್ರಕಾಶ್ ರೈ ಸದಾ ಪ್ರಭುತ್ವ, ಕೋಮುವಾದ ಮತ್ತು ಪ್ರಸ್ತುತ ರಾಜಕೀಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ವ್ಯಕ್ತಿ. ಇದನ್ನು ಕಾಯುತ್ತಿದ್ದ ಕೆಲವು ‘ಗೋದಿ ಮಾಧ್ಯಮಗಳು’ ಮತ್ತು ಪ್ರಭಾವಿಗಳ ಎಂಜಲು ಕಾಸಿಗೆ ಮಾರಿಕೊಂಡಿರುವ ಕೆಲವು ಸ್ಯಾಟಲೈಟ್ ಚಾನೆಲ್ಗಳು ಸತ್ಯಾಸತ್ಯತೆ ಅರಿಯದೆ ಪ್ರಕಾಶ್ ರೈ ವಿರುದ್ಧ ಮುಗಿಬಿದ್ದಿವೆ.
ರಂಗು ರಂಗಿನ ಹೆಡ್ಲೈನ್ಗಳನ್ನು ಹಾಕಿ, ಇಡೀ ಪ್ರಕರಣವನ್ನೇ ಪ್ರಕಾಶ್ ರೈ ಸುತ್ತ ಸುತ್ತುವಂತೆ ಮಾಡುತ್ತಿರುವ ಇಂತಹ ಮಾಧ್ಯಮಗಳ ಪತ್ರಿಕೋದ್ಯಮಕ್ಕೆ ನಿಜಕ್ಕೂ ಶ್ರದ್ಧಾಂಜಲಿ ಸಲ್ಲಿಸಬೇಕು. ಪತ್ರಕರ್ತನಾದವನಿಗೆ ಸತ್ಯದ ವಾಸನೆಯನ್ನು ಕಂಡುಹಿಡಿಯುವ ಕನಿಷ್ಠ ಸಂವೇದನೆಯೂ ಇಲ್ಲದಿದ್ದರೆ ಅವರು ಪತ್ರಕರ್ತರಾಗಲು ನಾಲಾಯಕ್. ಬಕೇಟ್ ಹಿಡಿಯುವ, ಗುಲಾಮಿತನ ಮಾಡುವ ಮತ್ತು ಪ್ರಭಾವಿಗಳ ಬೂಟು ನೆಕ್ಕುವ ಇಂತಹ ಮಾಧ್ಯಮಗಳಿಗೆ ಬಡವರ, ಕೂಲಿ ಕಾರ್ಮಿಕರ ಮತ್ತು ಸೌಜನ್ಯಳ ತಾಯಿಯ ಕಣ್ಣೀರಿನ ಬೆಲೆ ಗೊತ್ತಿಲ್ಲ. ಪ್ರಕಾಶ್ ರೈ ಈಗಾಗಲೇ ತಾವು ವಿದೇಶದಲ್ಲಿದ್ದು, ವಾಪಸ್ ಬಂದ ತಕ್ಷಣ ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಸುದ್ದಿ ಹರಡುವ ಮಾಧ್ಯಮಗಳಿಗೆ ಮತ್ತು ಈ ಕುತಂತ್ರಕ್ಕೆ ತಕ್ಕ ಉತ್ತರ ನೀಡುವುದಾಗಿ ಗಟ್ಟಿಯಾಗಿ ಸಾರಿದ್ದಾರೆ.
ಆಕಾಶದಿಂದ ಉದುರಿದವೇ ಅಸ್ತಿಪಂಜರಗಳು? ನೈಜ ಪ್ರಶ್ನೆಗಳನ್ನು ಹೂತುಹಾಕುವ ಯತ್ನ
ಸಾಕ್ಷಿಗಳನ್ನು ಹಣದಿಂದ ಕೊಳ್ಳಬಹುದು, ಮಾಧ್ಯಮಗಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದರೆ ಬಂಗ್ಲಗುಡ್ಡೆಯ ‘ಸಾವಿನ ಗುಡ್ಡ’ದ ಉತ್ಖನನದಲ್ಲಿ ಸಿಕ್ಕ ಆ ಹತ್ತಾರು ಮೂಳೆಗಳು, ಅಸ್ತಿಪಂಜರಗಳು ಮತ್ತು ತಲೆಬುರಡೆಗಳನ್ನು ಏನು ಮಾಡುತ್ತೀರಿ? ಅವು ಕೇವಲ ಕಲ್ಪನೆಯೇ? ಅವು ಆಕಾಶದಿಂದ ಉದುರಿ ಬಂದವೇ ಅಥವಾ ಯಾರೋ ತಂದು ಅಲ್ಲಿ ಬಿತ್ತನೆ ಮಾಡಿದರೇ? ಸ್ವತಃ ತನಿಖಾಧಿಕಾರಿಗಳೇ ಆ ಜಾಗವನ್ನು ನೋಡಿ ಆತಂಕ ವ್ಯಕ್ತಪಡಿಸಿದ್ದರು. ಪೋಸ್ಟ್ಮಾರ್ಟಂ ಇಲ್ಲದೆ, ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಆ ಗುಡ್ಡದ ತುತ್ತತುದಿಯಲ್ಲಿ ಅನಾಮಧೇಯ ಶವಗಳನ್ನು ಹೂತುಹಾಕಿದ್ದು ಏಕೆ?
ಮಣ್ಣಿನಲ್ಲಿ ಕರಗಿ ಹೋಗುತ್ತಿದ್ದ ಆ ಮೂಳೆಗಳ ಸ್ಯಾಂಪಲ್ಸ್ ಇಂದು ಎಫ್ಎಸ್ಎಲ್ (FSL) ಪ್ರಯೋಗಾಲಯದಲ್ಲಿದೆ, ವರದಿಯೂ ಸಿದ್ಧವಾಗಿದೆ ಮತ್ತು ಅದರಲ್ಲಿ ಒಂದು ತಲೆಬುರಡೆ ಮಹಿಳೆಗೆ ಸೇರಿದ್ದು ಎಂದು ಸ್ಪಷ್ಟವಾಗಿದೆ. ಇಷ್ಟೊಂದು ಗಂಭೀರವಾದ ನರಮೇಧ, ಅತ್ಯಾಚಾರ ಮತ್ತು ಬಹುಶಃ ಭೀಕರವಾದ ಮಾನವ ಅಂಗಾಂಗ ಕಳ್ಳಸಾಗಣೆಯ (Organ Trafficking) ಕರಾಳ ಜಾಲ ಕಣ್ಣೆದುರಿಗಿರುವಾಗ, ಕೇವಲ “200 ಕೋಟಿಯ ಷಡ್ಯಂತ್ರ” ಎಂಬ ಒಂದೇ ಒಂದು ಕಾಲ್ಪನಿಕ ಪದದ ಮೂಲಕ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಹೊರಟಿರುವುದು ಮೃತಪಟ್ಟ ಆತ್ಮಗಳಿಗೆ ಮತ್ತು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡುತ್ತಿರುವ ಘೋರ ದ್ರೋಹವಾಗಿದೆ.
ಇದನ್ನೂ ಓದಿ: Beḷagavi Politics: ಸವದಿ ಹೆಲ್ಮೆಟ್ಗೆ ಸಾಹುಕಾರ್ ಬೌನ್ಸರ್! ಬೆಳಗಾವಿಯಲ್ಲಿ ಶುರುವಾಯ್ತಾ ಕಿಲ್ಲರ್ ಪಾಲಿಟಿಕ್ಸ್?
ಸರ್ಕಾರದ ನಿಗೂಢ ಮೌನ ಮತ್ತು ಕಪಾಟು ಸೇರಿದ ಎಸ್ಐಟಿ ವರದಿ
ಯಾವುದೇ ಒಂದು ಸಂವೇದನಾಶೀಲ ಪ್ರಕರಣದಲ್ಲಿ ಸರ್ಕಾರದ ಮೌನ ಅತ್ಯಂತ ಅಪಾಯಕಾರಿ. ವಿಶೇಷ ತನಿಖಾ ದಳ (SIT) ರಚನೆಯಾಗಿ, ಉತ್ಖನನ ನಡೆದು, ಎಫ್ಎಸ್ಎಲ್ ವರದಿಗಳು ಬಂದಿದ್ದರೂ ಸರ್ಕಾರ ಇಂದಿಗೂ ಆ ವರದಿಯನ್ನು ಸಾರ್ವಜನಿಕರ ಮುಂದೆ ಇಡದೆ ರಹಸ್ಯವಾಗಿ ಭದ್ರವಾಗಿ ಕಪಾಟಿನಲ್ಲಿ ಮುಚ್ಚಿಟ್ಟಿರುವುದರ ಮರ್ಮವೇನು? ಇಷ್ಟೊಂದು ಪ್ರಮಾಣದಲ್ಲಿ ಹತ್ಯಾಕಾಂಡ ನಡೆದಿರುವ ದುಷ್ಟತನದ ವಾಸನೆ ಗೊತ್ತಾಗಿಯೇ ಸರ್ಕಾರ ಎಸ್ಐಟಿ ರಚಿಸಿತ್ತು. ಆದರೆ ಈಗ ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿರುವುದು ಏಕೆ? ಸರ್ಕಾರ ಯಾರನ್ನು ರಕ್ಷಿಸಲು ಹೊರಟಿದೆ?
ವಿಚಿತ್ರವೆಂದರೆ, ಇಂದು ಉಲ್ಟಾ ಹೊಡೆದಿರುವ ಸಾಕ್ಷಿ ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ “ಎಸ್ಐಟಿ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು” ಎಂದು ಒತ್ತಾಯಿಸಿದ್ದಾನೆ. ಇತ್ತ ಹೋರಾಟಗಾರರೂ ಸಹ “ವರದಿ ಹೊರಬರಲಿ, ನಮಗೂ ಅದೇ ಬೇಕಾಗಿದೆ” ಎನ್ನುತ್ತಿದ್ದಾರೆ. ಹಾಗಾದರೆ ವರದಿ ಹೊರಬರಲು ತೊಂದರೆ ಎಲ್ಲಿದೆ? ಸರ್ಕಾರ ಯಾರಿಗೆ ಹೆದರುತ್ತಿದೆ? ಆ ವರದಿಯಲ್ಲಿ ಕರಾವಳಿಯ ಪ್ರಭಾವಿ ಧರ್ಮದರ್ಶಿಗಳ ಅಥವಾ ರಾಜಕಾರಣಿಗಳ ಹೆಸರುಗಳಿವೆಯೇ? ವರದಿ ಬಹಿರಂಗವಾದರೆ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಯೇ? ಈ ತನಿಖಾ ವರದಿ ಜನರ ಮುಂದೆ ಬಂದರೆ ಮಾತ್ರ ದೊಡ್ಡ ಮನುಷ್ಯರ ಮುಖವಾಡ ಕಳಚಿ ಬೀಳುತ್ತದೆ.
ಕರ್ತವ್ಯ ಭ್ರಷ್ಟರನ್ನು ರಕ್ಷಿಸುತ್ತಿರುವ ವ್ಯವಸ್ಥೆ ಮತ್ತು ಅನುಸರಿಸದ ನಿಯಮಗಳು
ಮಾನ್ಯ ನ್ಯಾಯಾಲಯವು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದವರ ತನಿಖೆಗಾಗಿ ‘ಅಕ್ವಿಟಲ್ ಕಮಿಟಿ’ (Acquittal Committee) ರಚಿಸಲು ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ ಆ ಕಮಿಟಿ ಇಂದಿಗೂ ಸಕ್ರಿಯವಾಗಿಲ್ಲದಿರುವುದು ಇಡೀ ವ್ಯವಸ್ಥೆಯ ಬೆತ್ತಲೆತನವನ್ನು ತೋರಿಸುತ್ತದೆ. ಸೌಜನ್ಯಳ ಮರಣೋತ್ತರ ಪರೀಕ್ಷೆ ನಡೆಸುವಾಗ ನಿಯಮಗಳನ್ನು ಗಾಳಿಗೆ ತೂರಿದ ಆ ವೈದ್ಯನನ್ನು ಸರಿಯಾಗಿ ತನಿಖೆಗೊಳಪಡಿಸಿದರೆ ಸತ್ಯ ಹೊರಬರುವುದಿಲ್ಲವೇ? ಅಂದು ಸಾಕ್ಷ್ಯಗಳನ್ನು ನಾಶಪಡಿಸಿ, ಇಡೀ ಕೇಸನ್ನು ಹಳ್ಳಹಿಡಿಸಿದ ತನಿಖಾಧಿಕಾರಿಗೆ ಯಾರಿಂದ ಫೋನ್ ಕಾಲ್ ಬಂದಿತ್ತು, ಯಾರ ಒತ್ತಡವಿತ್ತು ಎಂದು ಕಟುವಾಗಿ ಪ್ರಶ್ನಿಸಿದರೆ ಸತ್ಯದ ಮುಖ ಸಾರ್ವಜನಿಕರಿಗೆ ತಿಳಿಯುತ್ತದೆ. ಆದರೆ ನಮ್ಮ ಮಾಧ್ಯಮಗಳಿಗಾಗಲಿ, ಸರ್ಕಾರಕ್ಕಾಗಲಿ ಈ ನೈಜ ಪ್ರಶ್ನೆಗಳನ್ನು ಕೇಳುವ ಯೋಗ್ಯತೆ ಇಲ್ಲ.
ಇದನ್ನೂ ಓದಿ: DK Shivakumar: ಬಂಡೆ ಕೋಟೆಗೆ ಸತೀಶ್ ಸುರಂಗ! ಕಸದ ಹಗರಣದ ನಡುವೆ ಡಿಕೆಶಿ ‘ಏಕಚಕ್ರಾಧಿಪತ್ಯ’ಕ್ಕೆ ಸರಣಿ ವಿಘ್ನ?
ಸತ್ಯದ ಜ್ವಾಲೆಯ ಮುಂದೆ ಕಮರಿ ಹೋಗಲಿದೆ ದುಷ್ಟಕೂಟ!
13 ವರ್ಷಗಳ ಹಿಂದೆ ಮುಗ್ಧ ಹೆಣ್ಣುಮಗಳು ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ, ಭೀಕರವಾಗಿ ಕೊಲೆ ಮಾಡಿದ್ದು ಕಟು ವಾಸ್ತವ. “ಅವಳನ್ನು ಕೊಂದ ನರಾಧಮರು ಯಾರು, ಅವರಿಗೆ ಶಿಕ್ಷೆ ಕೊಡಿ” ಎಂದು ಕೇಳುವುದು ಅಪರಾಧವೇ? ಇಂದು ಸ್ಟುಡಿಯೋಗಳಲ್ಲಿ ಕುಳಿತು ಹೋರಾಟಗಾರರನ್ನು ನಿಂದಿಸುತ್ತಿರುವ ನಾಲಗೆಗಳು, ಒಂದು ವೇಳೆ ತಮ್ಮದೇ ಕುಟುಂಬದ ಹೆಣ್ಣುಮಗಳಿಗೆ ಇಂತಹ ಸ್ಥಿತಿ ಬಂದಿದ್ದರೆ ಹೀಗೆಯೇ ಸುಮ್ಮನಿರುತ್ತಿದ್ದವೇ? ಸಾಕ್ಷಿಗಳನ್ನು ಬೆದರಿಸಬಹುದು, ವ್ಯವಸ್ಥೆಯನ್ನು ಕಾಸಿನ ಬಲದಿಂದ ಕೊಳ್ಳಬಹುದು, ಆದರೆ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಸತ್ಯವನ್ನು ಎಂದಿಗೂ ಹೂತುಹಾಕಲು ಸಾಧ್ಯವಿಲ್ಲ.
ದುಷ್ಟರ ಆಟಗಳು, ಸ್ಕ್ರಿಪ್ಟೆಡ್ ಸಿನಿಮಾಗಳು ಬಹಳ ದಿನ ನಡೆಯಲ್ಲ. ಸತ್ಯದ ಪ್ರಖರತೆಯ ಜ್ವಾಲೆಯ ಮುಂದೆ ಈ ಇಡೀ ಪ್ರಭಾವಿ ಡಿ-ಗ್ಯಾಂಗ್ ಮತ್ತು ಅವರ ಬೂಟು ನೆಕ್ಕುವ ಗುಲಾಮ ಮಾಧ್ಯಮಗಳು ಒಂದು ದಿನ ಭಸ್ಮವಾಗುವುದು ಖಂಡಿತ. ಸೌಜನ್ಯಳ ರಕ್ತ ಮತ್ತು ಬಂಗ್ಲಗುಡ್ಡೆಯ ಅಸ್ತಿಪಂಜರಗಳ ಶಾಪ ಈ ವ್ಯವಸ್ಥೆಯನ್ನು ಸುಮ್ಮನೆ ಬಿಡಲಾರದು! ಸರ್ಕಾರ ತಕ್ಷಣವೇ ಎಸ್ಐಟಿ ವರದಿಯನ್ನು ಜನರ ಮುಂದೆ ಇಡಬೇಕು. ಇಲ್ಲದಿದ್ದರೆ, ಈ ದೇಶದ ಕಾನೂನು ಕೇವಲ ಬಡವರಿಗಾಗಿ ಮಾತ್ರ ಸೀಮಿತವಾಗುತ್ತದೆ ಮತ್ತು ಶ್ರೀಮಂತರು-ಪ್ರಭಾವಿಗಳು ಹೆಣಗಳ ಮೇಲೆ ತಮ್ಮ ಸಾಮ್ರಾಜ್ಯವನ್ನು ರಾಜಾರೋಷವಾಗಿ ಮುಂದುವರಿಸುತ್ತಾರೆ.

