Homeವಿಶ್ಲೇಷಣೆAnnamalai: ಖಾಕಿ ಕಳಚಿದ್ರು, ಕಮಲ ಮುಡಿದ್ರು, ಕೊನೆಗೆ ಸಿಕ್ಕಿದ್ದು ಚಿಪ್ಪು! ಬಿಜೆಪಿಗೆ ಗುಡ್‌ಬೈ ಹೇಳಿದ ಹತ್ತೇ...

Annamalai: ಖಾಕಿ ಕಳಚಿದ್ರು, ಕಮಲ ಮುಡಿದ್ರು, ಕೊನೆಗೆ ಸಿಕ್ಕಿದ್ದು ಚಿಪ್ಪು! ಬಿಜೆಪಿಗೆ ಗುಡ್‌ಬೈ ಹೇಳಿದ ಹತ್ತೇ ಗಂಟೆಯಲ್ಲಿ 10 ಲಕ್ಷದ ಆರ್ಮಿ ಕಟ್ಟಿದ ಮಾಜಿ ಐಪಿಎಸ್!

ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ‘ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದ ಕೆ. ಅಣ್ಣಾಮಲೈ (Annamalai) ಅವರು ಅಂದು ಖಾಕಿ ಕಳಚಿ ರಾಜಕೀಯ ರಂಗಕ್ಕೆ ಧುಮುಕಿದಾಗ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಆಗಿರುವ ಮಹತ್ತರ ಬೆಳವಣಿಗೆಗಳು ಅವರ ಮುಂದಿನ ನಡೆ ಏನು ಎಂಬ ಕುತೂಹಲಕ್ಕೆ ಕಾರಣವಾಗಿದ್ದವು. ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪಕ್ಷ ಕಟ್ಟುತ್ತಾರೆ ಎಂಬ ಊಹಾಪೋಹಗಳು ಜೋರಾಗಿಯೇ ಕೇಳಿಬಂದಿದ್ದವು. ಆದರೆ ಆ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಅಣ್ಣಾಮಲೈ, “ಸದ್ಯಕ್ಕೆ ನಾನು ಯಾವುದೇ ಹೊಸ ರಾಜಕೀಯ ಪಕ್ಷ ಕಟ್ಟುವುದಿಲ್ಲ, ಬದಲಿಗೆ ಹೊಸ ಸಂಘಟನೆ ಕಟ್ಟುತ್ತೇನೆ” ಎಂದು ಘೋಷಿಸಿದ್ದರು. ಇದೀಗ ಆ ಮಾತು ನಿಜವಾಗಿದ್ದು, ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೊಸ ಸಂಘಟನೆಯ ಆರಂಭದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಣ್ಣಾಮಲೈ ಅವರ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಅವರು ತಮ್ಮ ಹೊಸ ಸಂಘಟನೆಯ ಮಾಹಿತಿ ಹಂಚಿಕೊಂಡಿದ್ದಾರೆ. “ವಿ ದಿ ಲೀಡರ್” (wetheleader.org) ಎನ್ನುವ ತಳಮಟ್ಟದ ನಾಯಕತ್ವದ ಚಳವಳಿಯನ್ನು (A Grassroots Leadership Movement) ಆರಂಭಿಸಿದ್ದಾರೆ. “ಇದು ನಮ್ಮ ಚಳವಳಿ, ಈ ಚಳವಳಿ ಜನರಿಗೆ ಸೇರಿದ್ದು” ಎಂದು ಬರೆದುಕೊಂಡಿರುವ ಅವರು, ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ನಾಯಕರು (Active Leaders) ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಪೋಸ್ಟ್ ಮಾಡಿದ್ದಾರೆ. ಆದರೆ, ಈ ಹೊಸ ಮುಖದ ಹಿಂದೆ ಅಡಗಿರುವ ಅಣ್ಣಾಮಲೈ ಅವರ ರಾಜಕೀಯ ವೈಫಲ್ಯ, ಪಶ್ಚಾತ್ತಾಪ ಮತ್ತು ದ್ರಾವಿಡ ನೆಲದ ವಾಸ್ತವದ ಕುರಿತಾದ ವಿಶ್ಲೇಷಣೆ ಇಲ್ಲಿದೆ.

ಮೊದಲ ಹೆಜ್ಜೆಯಲ್ಲೇ ಎಡವಿದ ಮಾಜಿ ಐಪಿಎಸ್ ಅಧಿಕಾರಿ!

ಐಪಿಎಸ್ ಅಧಿಕಾರಿಯಾಗಿ ಸಾರ್ವಜನಿಕ ವಲಯದಲ್ಲಿ ಅಪ್ರತಿಮ ಹೆಸರು, ಗೌರವ ಗಳಿಸಿದ್ದ ಅಣ್ಣಾಮಲೈ ಅವರಿಗೆ ಸಮಾಜ ಸೇವೆ ಮಾಡುವ ಹಂಬಲವಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ರಾಜಕೀಯ ಪ್ರವೇಶ ಮಾಡುವಾಗ ಅವರು ತೆಗೆದುಕೊಂಡ ಮೊದಲ ನಿರ್ಧಾರವೇ ಅವರ ಪಾಲಿಗೆ ಅತಿ ದೊಡ್ಡ ಎಡವಟ್ಟಾಗಿ ಪರಿಣಮಿಸಿತು ಎನ್ನುವುದು ಸದ್ಯದ ಕಹಿ ಸತ್ಯ. ದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಚಾಲ್ತಿಯಲ್ಲಿದ್ದ ಸಾರಾಸಗಟು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಅಣ್ಣಾಮಲೈ ತಮ್ಮ ರಾಜಕೀಯ ಭವಿಷ್ಯದ ಅಡಿಪಾಯವನ್ನೇ ತಪ್ಪಾದ ಜಾಗದಲ್ಲಿ ಹಾಕಿದರು.

ಖಾಕಿ ಉಡುಪಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದ ಅಧಿಕಾರಿಗೆ, ತಮಿಳುನಾಡಿನ ರಾಜಕೀಯ ರಂಗಭೂಮಿಯ ಕನಿಷ್ಠ ಜ್ಞಾನವೂ ಇಲ್ಲದೇ ಹೋದದ್ದು ದುರಂತ. ದ್ರಾವಿಡ ಚಳವಳಿಗಳ ಹಿನ್ನೆಲೆಯಿರುವ, ಪ್ರಾದೇಶಿಕ ಅಸ್ಮಿತೆಗೆ ಮೊದಲ ಆದ್ಯತೆ ನೀಡುವ ತಮಿಳುನಾಡಿನ ಮಣ್ಣಿನಲ್ಲಿ ಬಿಜೆಪಿಯಂತಹ ಧರ್ಮಾಧಾರಿತ ಅಥವಾ ರಾಷ್ಟ್ರೀಯ ಅಜೆಂಡಾದ ಪಕ್ಷಗಳಿಗೆ ಅಷ್ಟು ಸುಲಭವಾಗಿ ಮನ್ನಣೆ ಸಿಗುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಒಬ್ಬ ಮಾಜಿ ಐಪಿಎಸ್ ಅಧಿಕಾರಿಗೆ ಇಲ್ಲದೇ ಹೋದದ್ದು ಅವರ ರಾಜಕೀಯ ಮುಗ್ಧತೆಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Annamalai: ಬಿಜೆಪಿಗೆ ಬೈ ಬೈ ಹೇಳ್ತಾರಾ ಅಣ್ಣಾಮಲೈ? ‘ಯೂಸ್ ಅಂಡ್ ತ್ರೋ’ ನೀತಿಗೆ ಸಿಂಗಂ ಹೊಸ ಅಸ್ತ್ರ!

ಆರು ವರ್ಷಗಳ ಬೆವರು ಮತ್ತು ಮುಖಭಂಗದ ಕಥೆ

ತಮಿಳುನಾಡು ಬಿಜೆಪಿಯ ಚುಕ್ಕಾಣಿ ಹಿಡಿದು, ಕಮಲ ಮುಡಿಯಲು ಅಣ್ಣಾಮಲೈ ಸತತ ಆರು ವರ್ಷಗಳ ಕಾಲ ಹಗಲಿರುಳು ಶ್ರಮಿಸಿದರು. ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಲು ತಮಿಳುನಾಡಿನ ಗಲ್ಲಿ ಗಲ್ಲಿಗಳಲ್ಲಿ ಪಾದಯಾತ್ರೆ ಮಾಡಿದರು, ಕಮಲದ ಪರವಾಗಿ ಬೆವರು ಹರಿಸಿದರು. ಆದರೆ ರಾಜಕೀಯದಲ್ಲಿ ಕೇವಲ ಕಠಿಣ ಪರಿಶ್ರಮವಷ್ಟೇ ಸಾಲುವುದಿಲ್ಲ, ಅದಕ್ಕೆ ತಕ್ಕ ಸಿದ್ಧಾಂತ ಮತ್ತು ಮಣ್ಣಿನ ಗುಣವೂ ಮುಖ್ಯವಾಗುತ್ತದೆ. ಬಿಜೆಪಿಯ ಸಿದ್ಧಾಂತವನ್ನು ದ್ರಾವಿಡ ನೆಲದ ಜನ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

ಯಾವಾಗ ಅಣ್ಣಾಮಲೈ ನಾಯಕತ್ವದಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ತಮಿಳುನಾಡಿನಲ್ಲಿ ಸಿಗಲಿಲ್ಲವೋ, ಆವಾಗಲೇ ದೆಹಲಿ ಮಟ್ಟದ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡಲು ಆರಂಭಿಸಿತು. ಆರು ವರ್ಷಗಳ ಕಾಲ ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿದ ನಾಯಕನನ್ನು ದಿಢೀರನೆ ಮೂಲೆಗೆ ಸರಿಸಿದಾಗ ಅಣ್ಣಾಮಲೈ ಅವರಿಗೆ ತಾವು ಮಾಡಿದ ತಪ್ಪು ಮತ್ತು ಬಿಜೆಪಿಯ ನೈಜ ಮುಖದ ಅರಿವಾಗಿದೆ. ಪಕ್ಷದ ಈ ವರ್ತನೆಯಿಂದ ತೀವ್ರ ಬೇಸರಗೊಂಡ ಅವರು ಇತ್ತೀಚೆಗೆ ದೆಹಲಿಗೆ ತೆರಳಿ ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಪಕ್ಷ ಬೇಡ, ಸಂಘಟನೆ ಸಾಕು: ಹೊಸ ಆಟದ ಆರಂಭ!

ರಾಜೀನಾಮೆಯ ಬೆನ್ನಲ್ಲೇ ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷ ಉದಯಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮತ್ತೊಮ್ಮೆ ಅವಸರದ ನಿರ್ಧಾರ ಕೈಗೊಂಡು ಕೈ ಸುಟ್ಟುಕೊಳ್ಳಲು ಅಣ್ಣಾಮಲೈ ಸಿದ್ಧರಿಲ್ಲದ ಕಾರಣ, ಅವರು “ಸಂಘಟನೆ”ಯ ಹಾದಿ ಹಿಡಿದಿದ್ದಾರೆ. ಅವರು ಸದ್ಯಕ್ಕೆ ರಾಜಕೀಯ ಲೇಬಲ್ ಇಲ್ಲದ “ಜನಸಾಮಾನ್ಯರ ಚಳವಳಿ”ಯನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಇದನ್ನೂ ಓದಿ: Annamalai: ಬಿಜೆಪಿಗೆ ಬಿಗ್‌ ಶಾಕ್!‌ ಚುನಾವಣೆ ಹೊತ್ತಲ್ಲೇ ಅಣ್ಣಾಮಲೈ ರಾಜೀನಾಮೆ; ‘ಸಿಂಗಂ’ ಮುಂದಿನ ನಡೆಯೇನು?

“ನಮ್ಮ ಜಂಟಿ ದೃಷ್ಟಿಕೋನ ಮತ್ತು ಸಾಮೂಹಿಕ ಆಶಯದ ಮೇಲೆ ಜನರಿಟ್ಟಿರುವ ನಂಬಿಕೆಗೆ ಈ ಅಭೂತಪೂರ್ವ ಪ್ರತಿಕ್ರಿಯೆಯೇ ಸಾಕ್ಷಿ” ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಡಿಜಿಟಲ್ ರೂಪದಲ್ಲಿ ಇವರ ಚಳವಳಿಗೆ ಕೈಜೋಡಿಸಿರಬಹುದು. ಆದರೆ, ಸಾಮಾಜಿಕ ಜಾಲತಾಣದ ಈ ಲೈಕ್ಸ್‌ಗಳು ಮತ್ತು ನೋಂದಣಿಗಳು ನೇರವಾಗಿ ಚುನಾವಣಾ ರಾಜಕೀಯದಲ್ಲಿ ಓಟುಗಳಾಗಿ ಪರಿವರ್ತನೆಯಾಗುತ್ತವೆಯೇ ಎನ್ನುವುದು ಯಕ್ಷಪ್ರಶ್ನೆ.

ರಾಜಕೀಯ ಪ್ರವೇಶದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ಅಣ್ಣಾಮಲೈ ಅವರ ನಡೆಗಳು ತಮಿಳುನಾಡು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಬಿಜೆಪಿಯನ್ನು ನಂಬಿ ಆರು ವರ್ಷಗಳ ಕಾಲ ರಾಜಕೀಯ ಜೀವನವನ್ನು ವ್ಯರ್ಥ ಮಾಡಿಕೊಂಡ ನಂತರ, ಈಗ ಸ್ವತಂತ್ರವಾಗಿ ತಳಮಟ್ಟದಿಂದ ಸಂಘಟನೆ ಕಟ್ಟಲು ಹೊರಟಿರುವುದು ಅವರ ತಡವಾದ ಜ್ಞಾನೋದಯವನ್ನು ತೋರಿಸುತ್ತದೆ. ಕಮಲದ ಸಹವಾಸ ಬಿಟ್ಟು ಈಗ “ವಿ ದಿ ಲೀಡರ್” ಮೂಲಕ ಜನರ ಬಳಿ ಹೋಗುತ್ತಿರುವ ಅಣ್ಣಾಮಲೈ ಅವರ ಈ ಹೊಸ ರಾಜಕೀಯ ಪ್ರಯೋಗ ದ್ರಾವಿಡ ನೆಲದಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments