Karnataka Congress: ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರ ಹಿಡಿಯುವುದು ಎಷ್ಟು ಕಷ್ಟವೋ, ಹಿಡಿದ ಅಧಿಕಾರವನ್ನು ಹಂಚಿ ಸಮಸ್ಥಿತ ಕಾಯ್ದುಕೊಳ್ಳುವುದು ಅದಕ್ಕಿಂತಲೂ ದೊಡ್ಡ ಪ್ರಹಸನ ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸಾಬೀತುಪಡಿಸಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಗದ್ದುಗೆ ಏರಿದ ಬೆನ್ನಲ್ಲೇ ಸೃಷ್ಟಿಯಾದ ಸಚಿವ ಸಂಪುಟದ ಹೈಡ್ರಾಮಾ, ಕೇವಲ ಒಬ್ಬ ಸಚಿವರ ಅಸಮಾಧಾನದ ಕಥೆಯಲ್ಲ. ಬದಲಿಗೆ ಇದು ಇಬ್ಬರು ಪ್ರಭಾವಿ ನಾಯಕರ ನಡುವಿನ ಅಧಿಪತ್ಯದ ಹೋರಾಟ, ಸಿಎಂ ಸ್ಥಾನದಲ್ಲಿದ್ದೂ ಅಸಹಾಯಕರಾದ ನಾಯಕನ ಅಳಲು ಹಾಗೂ ತೆರೆಯ ಮರೆಯಿಂದಲೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸಿದ ಮಾಜಿ ಮುಖ್ಯಮಂತ್ರಿಯ ಚಾಣಕ್ಯ ನೀತಿ!
ಸಾರ್ವಜನಿಕ ವಲಯದಲ್ಲಿ ಇಂದು ಒಂದು ಮಾತು ದಟ್ಟವಾಗಿ ಕೇಳಿಬರುತ್ತಿದೆ—“ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂತಿರುವುದು ಡಿ.ಕೆ. ಶಿವಕುಮಾರ್ ಇರಬಹುದು, ಆದರೆ ರಿಮೋಟ್ ಕಂಟ್ರೋಲ್ ಮಾತ್ರ ಸಿದ್ದರಾಮಯ್ಯ ಅವರ ಕೈಯಲ್ಲಿದೆ.” ಈ ಮಾತುಗಳಿಗೆ ಇತ್ತೀಚಿನ ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ಇಡೀ ಪ್ರಕ್ರಿಯೆಯೇ ಜೀವಂತ ಸಾಕ್ಷಿಯಾಗಿ ನಿಂತಿದೆ.
ಸಂಪುಟದ ಚಿತ್ರಣ: ಸಿದ್ದರಾಮಯ್ಯ ಒನ್-ಮ್ಯಾನ್ ಶೋ!
ನೂತನ ಸಚಿವ ಸಂಪುಟದ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣಕ್ಕೆ ತೀವ್ರ ನಿರಾಸೆಯಾಗಿರುವುದು ಯಾರಿಗಾದರೂ ಅರ್ಥವಾಗುತ್ತದೆ. ಇಡೀ ಸಂಪುಟದಲ್ಲಿ ಮುಖ್ಯಮಂತ್ರಿಗಳ ಆಪ್ತ ವಲಯದ ಅಥವಾ ಅವರ ಬಣದ ನಾಯಕರೆಂದು ಗುರುತಿಸಿಕೊಂಡವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಉಳಿದಂತೆ ಸಿಂಹಪಾಲು ಸಿದ್ದರಾಮಯ್ಯ ಅವರ ಕ್ಯಾಂಪ್‌ನ ನಾಯಕರ ಪಾಲಾಗಿದೆ. ಹೈಕಮಾಂಡ್‌ನ ಈ ನಡೆ ಡಿಕೆ ಬಣದೊಳಗೆ ತೀವ್ರ ಅಸಮಾಧಾನದ ಹೊಗೆಯಾಡಲು ಮೊದಲ ಕಾರಣವಾಯಿತು.
ಇಷ್ಟಕ್ಕೇ ಮುಗಿಯಲಿಲ್ಲ, ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವುದು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ವಿವೇಚನೆ ಮತ್ತು ಸಾಂವಿಧಾನಿಕ ಹಕ್ಕಿಗೆ ಬಿಟ್ಟ ವಿಚಾರ. ಆದರೆ, ಇಲ್ಲಿ ಮುಖ್ಯಮಂತ್ರಿಗಳ ಜವಾಬ್ದಾರಿಯನ್ನೇ ಕಿತ್ತುಕೊಂಡ ದೆಹಲಿ ಹೈಕಮಾಂಡ್, ತಾನೇ ಖಾತೆಗಳ ಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿತು. ಯಾವುದೇ ಒಬ್ಬ ಸ್ವಾಭಿಮಾನಿ ಮುಖ್ಯಮಂತ್ರಿಗೆ ಇದು ನುಂಗಲಾರದ ತುತ್ತು. ತನ್ನದೇ ಸಚಿವರಿಗೆ ತಾನೇ ಖಾತೆ ಹಂಚಲು ಸಾಧ್ಯವಾಗದ ಸ್ಥಿತಿಗೆ ಮುಖ್ಯಮಂತ್ರಿಗಳನ್ನು ತಂದು ನಿಲ್ಲಿಸಿದಾಗ, ಅದು ಅವರ ಬಣದ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿಯಿತು. ಈ ನಡೆ ನೇರವಾಗಿ ಮುಖ್ಯಮಂತ್ರಿ ಸ್ಥಾನದ ಘನತೆ ಹಾಗೂ ಸ್ವಾಯತ್ತತೆಯನ್ನು ಪ್ರಶ್ನಿಸುವಂತೆ ಮಾಡಿತು.
ಇದನ್ನೂ ಓದಿ: Siddaramaiah ಒಂಟಿಯಾದ್ರಾ? ಇದು ಮಾಧ್ಯಮಗಳ ಬೌದ್ಧಿಕ ನಗ್ನತೆ!
ಖಾತೆ ಪ್ರಕಟ ಬೆನ್ನಲ್ಲೇ ಸ್ಪೋಟಗೊಂಡ ಜ್ವಾಲಾಮುಖಿ
ಯಾವಾಗ ಖಾತೆಗಳ ಅಧಿಕೃತ ಪಟ್ಟಿ ಹೊರಬೀಳುತ್ತದೆಯೋ, ತಕ್ಷಣವೇ ಸಚಿವರ ಭವನದಿಂದ ಹಿಡಿದು ರಾಜಭವನದವರೆಗೂ ಅಸಮಾಧಾನದ ಜ್ವಾಲಾಮುಖಿ ಸ್ಪೋಟಗೊಂಡಿತು. ಡಿಕೆ ಬಣದ ಇಬ್ಬರು ಅತ್ಯಂತ ಹಿರಿಯ ಮತ್ತು ಪ್ರಭಾವಿ ನಾಯಕರಾದ ರಾಮಲಿಂಗಾರೆಡ್ಡಿ ಹಾಗೂ ಕೆ.ಎಚ್. ಮುನಿಯಪ್ಪ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಿಡಿದು ರಸ್ತೆಗಿಳಿದರು. ಅಚ್ಚರಿಯೆಂದರೆ, ಈ ಹೈಡ್ರಾಮಾ ನಡೆಯುತ್ತಿದ್ದ ಸರಿಯಾದ ಸಮಯದಲ್ಲೇ ಹೈಕಮಾಂಡ್‌ನ ಅಗ್ರ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಉಸ್ತುವಾರಿಗಳು ಬೆಂಗಳೂರಿಗೆ ಆಗಮಿಸಿದ್ದರು.
ರಾಜ್ಯಕ್ಕೆ ಬಂದಿಳಿದ ಹೈಕಮಾಂಡ್ ನಾಯಕರು ಮೊದಲಿಗೆ ಮುನಿಸಿಕೊಂಡಿದ್ದ ಕೆ.ಎಚ್. ಮುನಿಯಪ್ಪ ಅವರನ್ನು ತರಾತುರಿಯಲ್ಲಿ ಭೇಟಿಯಾಗಿ, ಮಾತುಕತೆಯ ಮೂಲಕ ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಆದರೆ, ಜಲಸಂಪನ್ಮೂಲ ಖಾತೆಯನ್ನು ನೀಡಿರುವುದಕ್ಕೆ ಕೆಂಡಾಮಂಡಲವಾಗಿದ್ದ ರಾಮಲಿಂಗಾರೆಡ್ಡಿ ಅವರ ಹಠವನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ತನಗೆ ನಿಗದಿಪಡಿಸಿದ ಖಾತೆ ಬಗ್ಗೆ ಎಳ್ಳಷ್ಟು ತಿಳಿದಿಲ್ಲ ಅಂತಹ ಖಾತೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೆಡ್ಡಿ, ನೇರವಾಗಿ ಕ್ಯಾಮೆರಾಗಳ ಮುಂದೆ ಪತ್ರಿಕಾಗೋಷ್ಠಿ ನಡೆಸಿ, ರಾಜೀನಾಮೆ ಪತ್ರವನ್ನು ಪ್ರದರ್ಶಿಸಿ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಇದು ಕೇವಲ ಸಚಿವರೊಬ್ಬರ ರಾಜೀನಾಮೆ ಪ್ರಹಸನವಾಗಿರಲಿಲ್ಲ, ಇಡೀ ಸರ್ಕಾರದ ಅಸ್ತಿತ್ವಕ್ಕೆ ಹೈಕಮಾಂಡ್ ಮಟ್ಟದಲ್ಲಿ ಸವಾಲು ಹಾಕುವ ಒಂದು ವ್ಯವಸ್ಥಿತ ರಾಜಕೀಯ ತಂತ್ರವಾಗಿತ್ತು.
ಬೆಂಗಳೂರು’ ಖಾತೆಯ ಹಠ ಹಾಗೂ ಏಕಚಕ್ರಾಧಿಪತ್ಯದ ಹುನ್ನಾರ
ರಾಮಲಿಂಗಾರೆಡ್ಡಿ ಅವರು ಕೇವಲ ‘ಜಲಸಂಪನ್ಮೂಲ’ ಬೇಡ ಎಂದು ಹಠ ಹಿಡಿದಿರಲಿಲ್ಲ, ಬದಲಿಗೆ ತನಗೆ ‘ಬೆಂಗಳೂರು ನಗರ ಅಭಿವೃದ್ಧಿ’ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಠದ ಹಿಂದೆ ಕೇವಲ ಒಬ್ಬ ವ್ಯಕ್ತಿಯ ಆಸೆಯಿರಲಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿಗಳ ಬಜೆಟ್ ಹೊಂದಿರುವ ಸಿಲಿಕಾನ್ ಸಿಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಒಂದು ಬೃಹತ್ ರಾಜಕೀಯ ತಂತ್ರ ಅಡಗಿತ್ತು ಎನ್ನುವ ಸಂಶಯಗಳು ಈಗ ದಟ್ಟವಾಗಿವೆ.
ಮುಂಬರುವ ಬಿಬಿಎಂಪಿ (ಜಿಬಿಎ) ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ರಾಹುಲ್ ಗಾಂಧಿ ಅವರು, ಬೆಂಗಳೂರು ನಗರದ ಉಸ್ತುವಾರಿಗೆ ಅತ್ಯಂತ ದಕ್ಷ, ತಾಂತ್ರಿಕವಾಗಿ ಪ್ರಬುದ್ಧ ಹಾಗೂ ಕ್ಲೀನ್ ಇಮೇಜ್ ಹೊಂದಿರುವ ‘ಎಫಿಸಿಯೆಂಟ್’ ರಾಜಕಾರಣಿ ಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ ಸಿದ್ದರಾಮಯ್ಯ ಬಣದ ಅತ್ಯಂತ ನಂಬಿಕಸ್ಥ ನಾಯಕ ಕೃಷ್ಣ ಬೈರೇಗೌಡ ಅವರಿಗೆ ಈ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿತು. ಆದರೆ, ಈ ನಿರ್ಧಾರ ಬೆಂಗಳೂರು ನಗರದ ಮೇಲೆ ತಮ್ಮದೇ ಆದ ಏಕಚಕ್ರಾಧಿಪತ್ಯ ಸಾಧಿಸಬೇಕು, ಇಡೀ ನಗರದ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಬೇಕು ಎಂದುಕೊಂಡಿದ್ದ ಕಾಣದ ಕೈಗಳಿಗೆ ತೀವ್ರ ಆಘಾತ ನೀಡಿತು. ಹಾಗಾಗಿಯೇ, ರಾಮಲಿಂಗಾರೆಡ್ಡಿ ಅವರ ಹೆಗಲ ಮೇಲೆ ಬಂದೂಕನ್ನಿಟ್ಟು, ಹೈಕಮಾಂಡ್ ಮೇಲೆ ಒತ್ತಡ ಹೇರಿ, ಕೃಷ್ಣ ಬೈರೇಗೌಡರಿಂದ ಆ ಪ್ರಭಾವಿ ಖಾತೆಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯಿತು ಎಂಬ ಮಾತುಗಳು ಇಂದು ಕಾಂಗ್ರೆಸ್ ಪಾಳಯದಿಂದಲೇ ಬಹಿರಂಗವಾಗಿ ಕೇಳಿಬರುತ್ತಿವೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಇದೊಂದು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ತಂತ್ರವಾಗಿತ್ತು.
ಇದನ್ನೂ ಓದಿ: D.K. Shivakumar: ಡಿಕೆ ಸಂಪುಟದ ಮತ್ತೊಂದು ವಿಕೆಟ್ ಪತನ? ಶುಭಗಳಿಗೆನಾ ಅಶುಭಗಳಿಗೆನಾ? ಶಿವ ಶಿವ…
ಸಿದ್ದರಾಮಯ್ಯ ಚಾಣಕ್ಯ ನೀತಿ: ಒಂದೇ ಏಟಿಗೆ ಬಿದ್ದ ಡಿಕೆ ಬಣ!
ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿ ನಾಪತ್ತೆಯಾದ ತಕ್ಷಣ ರಾಜಧಾನಿಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಆದರೆ, ಈ ಇಡೀ ಬಂಡಾಯದ ಹಿಂದೆ ಯಾರಿದ್ದಾರೆ, ಇದರ ಅಸಲಿ ಉದ್ದೇಶವೇನು ಹಾಗೂ ಬೆಂಗಳೂರು ಖಾತೆಯನ್ನು ಕಿತ್ತುಕೊಳ್ಳಲು ನಡೆಯುತ್ತಿರುವ ಸಂಚು ಎಂತಹುದ್ದು ಎಂಬುದನ್ನು ಹಿರಿಯ ಮುತ್ಸದ್ದಿ ಸಿದ್ದರಾಮಯ್ಯ ಕ್ಷಣಾರ್ಧದಲ್ಲಿ ಅರಿತುಕೊಂಡರು. ತಡಮಾಡದ ಸಿದ್ದರಾಮಯ್ಯ, ತಕ್ಷಣವೇ ರಾಹುಲ್ ಗಾಂಧಿ ಅವರ ಬಳಿ ತೆರಳಿ ಇಡೀ ಬೆಳವಣಿಗೆಯ ಇಂಚಿಂಚೂ ಮಾಹಿತಿಯನ್ನು ಅತ್ಯಂತ ಚಾಣಕ್ಯತನದಿಂದ ಬ್ರೀಫ್ ಮಾಡಿದರು. ಇದು ಸರ್ಕಾರದ ಉಳಿವಿಗಾಗಿ ಮಾಡುತ್ತಿರುವ ಹೋರಾಟವಲ್ಲ, ಬದಲಿಗೆ ಹೈಕಮಾಂಡ್ ನಿರ್ಧಾರವನ್ನೇ ಬ್ಲ್ಯಾಕ್‌ಮೇಲ್ ಮೂಲಕ ಬದಲಾಯಿಸುವ ತಂತ್ರ ಎಂದು ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.
ಸಿದ್ದರಾಮಯ್ಯ ಅವರ ಬ್ರೀಫಿಂಗ್‌ನಿಂದ ಅಲರ್ಟ್ ಆದ ರಾಹುಲ್ ಗಾಂಧಿ ತೀವ್ರ ಆಕ್ರೋಶಗೊಂಡರು. ಅವರು ತಕ್ಷಣವೇ ರಾಜ್ಯ ಉಸ್ತುವಾರಿಗೆ ಅತ್ಯಂತ ಖಡಕ್ ಮತ್ತು ಗಂಭೀರ ಸೂಚನೆಯೊಂದನ್ನು ರವಾನಿಸಿದರು: “ರಾಜೀನಾಮೆ ನೀಡುತ್ತಿರುವ ನಾಯಕರ ಮನವೊಲಿಸಲು ಒಮ್ಮೆ ಪ್ರಾಮಾಣಿಕವಾಗಿ ಪ್ರಯತ್ನಿಸಿ. ಒಂದು ವೇಳೆ ಅವರು ಒಪ್ಪಿ ಸಚಿವರಾಗಿ ಮುಂದುವರಿದರೆ ಸರಿ. ಇಲ್ಲದಿದ್ದರೆ, ಯಾವುದೇ ಮುಲಾಜಿಲ್ಲದೆ ಅವರ ರಾಜೀನಾಮೆಯನ್ನು ತಕ್ಷಣವೇ ಸ್ವೀಕರಿಸಿ, ಸಂಪುಟದಿಂದ ಕೈಬಿಡಿ!”
ಹೈಕಮಾಂಡ್‌ನಿಂದ ಇಂತಹದೊಂದು ಹಂಟರ್ ತರಹದ ಖಡಕ್ ಸಂದೇಶ ರವಾನೆಯಾಗುತ್ತಿದ್ದಂತೆ, ಬ್ಲ್ಯಾಕ್‌ಮೇಲ್ ತಂತ್ರದ ಮೂಲಕ ಖಾತೆ ಬದಲಾಯಿಸಿಕೊಳ್ಳಬಹುದು, ಹೈಕಮಾಂಡ್ ತಲೆಬಾಗಿಯೇ ತೀರುತ್ತದೆ ಅಂದುಕೊಂಡಿದ್ದ ನಾಯಕರ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಯಿತು. ತಕ್ಷಣವೇ ಸೈಲೆಂಟ್ ಆದ ಬಂಡಾಯದ ನಾಯಕರು, ಅನಿವಾರ್ಯವಾಗಿ ರಾಜೀನಾಮೆ ನಾಟಕವನ್ನು ಮುಚ್ಚಿಟ್ಟು ಶರಣಾಗಬೇಕಾಯಿತು. ಆ ಮೂಲಕ ಒಂದೇ ಒಂದು ಖಡಕ್ ನಿರ್ಧಾರದಿಂದ ಡಿಕೆ ಬಣದ ಆಟ ಸಂಪೂರ್ಣವಾಗಿ ಬಂದ್ ಆಯಿತು.
ಇದನ್ನೂ ಓದಿ: Ramalinga Reddy: ಖಾತೆ ಕ್ಯಾತೆ! ಡಿಕೆ ಸಂಪುಟದ ಮೊದಲ ವಿಕೆಟ್ ಔಟ್? ರಾಜೀನಾಮೆಯ ಬಾಂಬ್ ಸಿಡಿಸಿದ ರೆಡ್ಡಿ!
ಇದು ಜನಸೇವೆಯೋ ಅಥವಾ ಕಾಸಿನ ಕದನವೋ?
ಇಡೀ ಪ್ರಹಸನವನ್ನು ನೋಡಿದಾಗ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳೇ ನಮಗೂ ಕಾಡುತ್ತಿವೆ. ಹೊಸ ಸರ್ಕಾರ ರಚನೆಯಾಗಿ ಕೇವಲ 42 ಗಂಟೆಗಳೂ ಕಳೆಯುವ ಮುನ್ನವೇ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ನಾಯಕರು ಖಾತೆಗಳಿಗಾಗಿ ಬೀದಿಗೆ ಬಂದು ಕಿತ್ತಾಡುತ್ತಿರುವುದು ಎಷ್ಟು ಸರಿ? ಹಿರಿಯ ನಾಯಕರೆನಿಸಿಕೊಂಡವರು ವಯಸ್ಸು ಮತ್ತು ಅನುಭವದ ಕಾರ್ಡ್ ಪ್ಲೇ ಮಾಡುತ್ತಾ, ತಮಗೆ ಭರ್ಜರಿ ಬಜೆಟ್ ಇರುವ, ಕಮಿಷನ್ ಸಿಗುವ ಇಲಾಖೆಗಳೇ ಬೇಕು ಎಂದು ಹಠ ಹಿಡಿಯುವುದು ಇವರ ಸ್ವಾರ್ಥ ಮನಸ್ಥಿತಿಯನ್ನು ತೋರಿಸುತ್ತದೆ. ನಿಜವಾದ ಜನಸೇವಕನಿಗೆ ಯಾವುದೇ ಖಾತೆ ಕೊಟ್ಟರೂ ಅಲ್ಲಿ ಕೆಲಸ ಮಾಡಿ ತೋರಿಸಲು ಸಾಧ್ಯವಿದೆ. ಆದರೆ, ಇಂದಿನ ರಾಜಕಾರಣಿಗಳಿಗೆ ಇಲಾಖೆಯ ಘನತೆಗಿಂತ ಗಲ್ಲಾಪೆಟ್ಟಿಗೆಯ ಗಾತ್ರವೇ ಮುಖ್ಯವಾಗಿರುವುದು ದುರಂತ.
ರಾಜ್ಯದಲ್ಲಿ ಈಗಾಗಲೇ ಹತ್ತಾರು ಜ್ವಲಂತ ಸಮಸ್ಯೆಗಳಿವೆ, ಆಡಳಿತದ ಬಗ್ಗೆ ಜನರಲ್ಲೇ ಅಸಮಾಧಾನದ ಹೊಗೆಯಾಡುತ್ತಿದೆ. ಇಂತಹ ಸಂದರ್ಭದಲ್ಲಿ ಹಸಿದವರಂತೆ ಕೇವಲ ವೈಯಕ್ತಿಕ ಹಿತಾಸಕ್ತಿ ಹಾಗೂ ಅಧಿಕಾರದ ಆಸೆಗಾಗಿ ನಡೆಸುವ ಇಂತಹ ಆಂತರಿಕ ಕದನಗಳು ಕಾಂಗ್ರೆಸ್ ಪಕ್ಷದ ಪಾಲಿಗೆ ‘ಆತ್ಮಹತ್ಯಾ ರಾಜಕಾರಣ’ವಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೈಕಮಾಂಡ್‌ನ ಗಟ್ಟಿ ನಿಲುವಿನಿಂದ ಸದ್ಯಕ್ಕೆ ಈ ಬಿಕ್ಕಟ್ಟು ಶಮನಗೊಂಡಂತೆ ಕಂಡರೂ, ಮುಂದಿನ ದಿನಗಳಲ್ಲಿ ಈ ಬಣ ರಾಜಕೀಯದ ಒಳಜಗಳ ಇಡೀ ಸರ್ಕಾರದ ಅಸ್ತಿತ್ವಕ್ಕೇ ದೊಡ್ಡ ಕಂಟಕ ತಂದೊಡ್ಡುವುದಂತೂ ಗ್ಯಾರಂಟಿ.

