ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ (Siddaramaiah) ಅವರ “ನನ್ನ ಮಾತು ಎಷ್ಟರಮಟ್ಟಿಗೆ ನಡೆಯುತ್ತೆ ಅನ್ನೋದು ನನಗೂ ಗೊತ್ತಿದೆ” ಎಂಬ ಬಹಿರಂಗ ಹೇಳಿಕೆ ಕೇವಲ ಒಬ್ಬ ನಾಯಕನ ಹತಾಶೆಯಲ್ಲ. ಅದರ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಅಂತರಂಗದಲ್ಲಿ ನಡೆದ ಬೃಹತ್ ಅಧಿಕಾರ ಹಿಡಿತದ ತಂತ್ರಗಾರಿಕೆ, ಅಹಿಂದ ಒಕ್ಕೂಟವನ್ನು ಚಿದ್ರಗೊಳಿಸಿದ ವೈಖರಿ ಹಾಗೂ ಸೈದ್ಧಾಂತಿಕ ನಾಯಕರನ್ನು ಕಡೆಗಣಿಸಿದ ‘ಪಾಳೆಗಾರಿಕೆ’ ಶೈಲಿಯ ಆಡಳಿತದ ಕರಾಳ ಮುಖ ಅನಾವರಣಗೊಂಡಿದೆ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಆ ಕುರ್ಚಿಯಲ್ಲಿ ಕುಳಿತ ದಿನದಿಂದಲೂ ಡಿ.ಕೆ. ಶಿವಕುಮಾರ್ ಅವರು ನಡೆಸುತ್ತಿರುವ ತಂತ್ರಗಾರಿಕೆ ಕೇವಲ ಅಧಿಕಾರ ಚಲಾವಣೆಗೆ ಸೀಮಿತವಾಗಿಲ್ಲ; ಬದಲಿಗೆ, ದಶಕಗಳಿಂದ ಗಟ್ಟಿಯಾಗಿದ್ದ ಅಹಿಂದ ನಾಯಕತ್ವದ ಸೇತುವೆಯನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸಿದೆ.
ಅಹಿಂದ ಒಕ್ಕೂಟದ ವಿಭಜನೆ: ಸಿದ್ದರಾಮಯ್ಯ ಅವರನ್ನು ಒಂಟಿ ಮಾಡಿದ ಚಾಣಕ್ಯ ತಂತ್ರ
ಸಿದ್ದರಾಮಯ್ಯ (Siddaramaiah) ಅವರ ನಾಯಕತ್ವಕ್ಕೆ ಮತ್ತು ರಾಜಕೀಯ ಶಕ್ತಿಗೆ ಮೂಲ ಅಡಿಪಾಯವಾಗಿದ್ದದ್ದು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಒಕ್ಕೂಟ. ಆದರೆ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬರಲು ಮಾಡಿದ ಮೊದಲ ಕೆಲಸ – ಈ ಅಹಿಂದ ನಾಯಕರನ್ನು ಒಂದೊಂದಾಗಿ ಬೇರ್ಪಡಿಸಿ, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ‘ಒಂಟಿ’ ಮಾಡಿದ್ದು.
- ಸಿದ್ದರಾಮಯ್ಯ ಕ್ಯಾಂಪ್ನಿಂದ ಡಿ ಕೆ ಕ್ಯಾಂಪ್ಗೆ ಜಂಪ್: ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಜೊತೆಗಿದ್ದು, ‘ನಮ್ಮ ನಾಯಕ ಸಿದ್ದರಾಮಯ್ಯ’ ಎಂದು ಎದೆ ಉಬ್ಬಿಸಿ ಹೇಳುತ್ತಿದ್ದ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಹಾಗೂ ಜಮೀರ್ ಅಹ್ಮದ್ ಅವರಂತಹ ನಾಯಕರೇ ಗಾಳಿ ಬಂದ ಕಡೆ ತೂರಿಕೊಂಡರು. ಸಿಎಂ ಪಟ್ಟ ಬದಲಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಪರವಾಗಿ ಶಾಸಕರ ಸಹಿ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ನಾಯಕರು ಎಂಬ ಆರೋಪ ಇದೆ..
- ಹುಲಿಗಳಂತಿದ್ದ ನಾಯಕರು ಈಗ ಇಲಿಗಳಂತೆ!: ಸಿದ್ದರಾಮಯ್ಯ ಅವರ ಗರಡಿಯಲ್ಲಿದ್ದಾಗ, ಸ್ವತಂತ್ರ ಧ್ವನಿಯಾಗಿ, ಹೈಕಮಾಂಡ್ಗೆ ಎದುರಾಗಿ ನಿಲ್ಲುವ ಧೈರ್ಯ ತೋರುತ್ತಿದ್ದ ಅಹಿಂದ ನಾಯಕರೆಲ್ಲರೂ ಇಂದು ಡಿ.ಕೆ. ಶಿವಕುಮಾರ್ ಅವರ ‘ಪಾಳೆಗಾರಿಕೆ’ ಆಡಳಿತದ ಮುಂದೆ ಮಂಡಿಯೂರಿ ನಿಂತಿದ್ದಾರೆ. ಮುಂಚೆ ಹುಲಿಗಳಂತೆ ಗರ್ಜಿಸುತ್ತಿದ್ದ ನಾಯಕರೀಗ ತಮ್ಮ ಅಸ್ತಿತ್ವ ಮತ್ತು ಸಚಿವ ಪಟ್ಟ ಉಳಿಸಿಕೊಳ್ಳಲು ‘ಡಿಕೆ’ ಎನ್ನುವ ಹೊಸ ಪಾಳೆಗಾರ ಹೇಳಿದ್ದಕ್ಕೆಲ್ಲ ‘ಹೌದಪ್ಪ’ ಎನ್ನುವ ಸೇವಕರಂತೆ ಬಾಗುವ ಪರಿಸ್ಥಿತಿ ಬಂದೊದಗಿದೆ.
ಅಧಿಕಾರದಲ್ಲಿದ್ದಾಗಲೇ ಹೆಣೆದ ‘ಆಮಿಷದ ಬಲೆ’: ಸ್ವಂತ ಗರಡಿಯಾಳುಗಳಿಂದಲೇ ಸಿದ್ದರಾಮಯ್ಯಗೆ ಬೆನ್ನಿಗೆ ಇರಿತ!
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಮಾಸ್ಟರ್ ಪ್ಲಾನ್ ನಿನ್ನೆ-ಮೊನ್ನೆ ಶುರುವಾಗಿದ್ದಲ್ಲ. ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೇ, ಸುಮಾರು 6 ತಿಂಗಳ ಮುಂಚಿನಿಂದಲೇ ‘ಅಹಿಂದ’ ಬಳಗವನ್ನು ಒಡೆಯುವ ಕರಾಳ ಕಾರ್ಯಾಚರಣೆ ತೆರೆಮರೆಯಲ್ಲಿ ಕಾರ್ಯರೂಪಕ್ಕೆ ಬಂದಿತ್ತು. ಸಿದ್ದರಾಮಯ್ಯ ಕ್ಯಾಂಪ್ನಲ್ಲಿದ್ದ ಅತ್ಯಾಪ್ತ ನಾಯಕರಿಗೆ “ನಾನು ಮುಖ್ಯಮಂತ್ರಿಯಾದ ಮೇಲೆ ನಿಮಗೆ ಉಪಮುಖ್ಯಮಂತ್ರಿ (DCM) ಪಟ್ಟ ಕಟ್ಟುತ್ತೇನೆ, ಕೆಪಿಸಿಸಿ ಅಧ್ಯಕ್ಷ ಮಾಡ್ತೀನಿ, ಪ್ರಭಾವಿ ಖಾತೆಗಳನ್ನು ಕೊಡಿಸುತ್ತೇನೆ” ಎಂದು ಮುಂದಿನ ರಾಜಕೀಯ ಭವಿಷ್ಯದ ಬಣ್ಣ ಬಣ್ಣದ ಆಮಿಷ ಒಡ್ಡಲಾಯಿತು ಎಂದು ಹೇಳಲಾಗುತ್ತಿದೆ. ಹತ್ತಾರು ವರ್ಷಗಳಿಂದ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ‘ಅಹಿಂದ ಹುಲಿಗಳು’ ಈ ಹುಸಿ ಆಮಿಷಕ್ಕೆ ಬಿದ್ದು, ದಶಕಗಳ ಕಾಲ ತಮ್ಮೊಟ್ಟಿಗೆ ಗಟ್ಟಿಯಾಗಿದ್ದ ನಾಯಕನ ವಿರುದ್ಧವೇ ಆಂತರಿಕವಾಗಿ ಬಂಡಾಯದ ಬಾವುಟ ಹಾರಿಸಲು ಸಿದ್ಧರಾದರು. ತಮ್ಮದೇ ಗರಡಿಯಲ್ಲಿ ಬೆಳೆದ ಆಪ್ತ ಬಳಗವೇ ಎದುರು ಬಿದ್ದಾಗ, ಸಿದ್ದರಾಮಯ್ಯ ಅವರು ಅಸಹಾಯಕರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದು ರಾಜಕೀಯ ಸೌಹಾರ್ದತೆಯಲ್ಲ, ಬದಲಿಗೆ ಆಮಿಷದ ಬಲೆ ಹೆಣೆದು, ಅಹಿಂದ ನಾಯಕರನ್ನೇ ಕಾಯಿಗಳನ್ನಾಗಿ ಮಾಡಿಕೊಂಡು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯಕ್ಕೆ ಹೆಣೆದ ‘ಮಾಸ್ಟರ್ ಸ್ಟ್ರೋಕ್’!
ಜಾರಕಿಹೊಳಿ ಮೇಲಿನ ED ದಾಳಿ: ‘2028 ಸಿಎಂ’ ಕ್ಲೇಮ್ಗೆ ಮಹಾನಾಯಕರ ಆಂತರಿಕ ‘ಸುಪಾರಿ’?
ಈ ಅಹಿಂದ ಮುಕ್ತ ತಂತ್ರಗಾರಿಕೆಗೆ ಮತ್ತೊಂದು ಉರಿಯುವ ಉದಾಹರಣೆ ಎಂದರೆ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ED) ಹಠಾತ್ ದಾಳಿ! “2028ಕ್ಕೆ ನಾನೂ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ, ನನಗೂ ಸಿಎಂ ಆಗುವ ಅರ್ಹತೆಯಿದೆ” ಎಂದು ಸತೀಶ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಹಾಗಾಗಿ ಈ ದಾಳಿ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಗಂಭೀರ ಆರೋಪ ಮಾಡಿದ್ದು, “ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಮತ್ತು ಸೈಡ್ಲೈನ್ ಮಾಡಲು ಕಾಂಗ್ರೆಸ್ನ ಒಳಗಿನ ಮಹಾನಾಯಕರೇ ಇ.ಡಿಗೆ ಬೇಕಾದ ಲೀಡ್ ಹಾಗೂ ತನಿಖಾ ‘ಸುಪಾರಿ’ ಕೊಟ್ಟಿದ್ದಾರೆ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ! ಸಿದ್ದರಾಮಯ್ಯ ಅವರನ್ನು ಒಂಟಿ ಮಾಡಿದಂತೆ, ಭವಿಷ್ಯದಲ್ಲಿ ತನಗೆ ಎದುರಾಗಬಹುದಾದ ಅಹಿಂದ ನಾಯಕರ ಪ್ರಬಲ ಸಿಎಂ ಪೈಪೋಟಿಯನ್ನೇ ಬುಡಸಮೇತ ಚಿವುಟಿ ಹಾಕಲು ಸ್ವಪಕ್ಷೀಯರೇ ನಡೆಸಿದ ಈ ಕರಾಳ ‘ಒಳಸಂಚು’ – ಕಾಂಗ್ರೆಸ್ನಲ್ಲಿ ಆವರಿಸಿರುವ ಭಯಾನಕ ‘ಪಾಳೆಗಾರಿಕೆ’ ಧೋರಣೆಗೆ ಜ್ವಲಂತ ಸಾಕ್ಷಿಯಾಗಿದೆ.
ಸೈದ್ಧಾಂತಿಕ ಚೌಕಟ್ಟು vs ಪಾಳೆಗಾರಿಕೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ಅಸಮಾಧಾನ!
ಪಕ್ಷದಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಸೈದ್ಧಾಂತಿಕವಾಗಿ ಬದ್ಧತೆ ಹೊಂದಿರುವ ಹಿರಿಯ ನಾಯಕ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೂ ಕೂಡ ಈಗಿನ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.
- ಆತ್ಮಗೌರವಕ್ಕೆ ಧಕ್ಕೆ: ಹರಿಪ್ರಸಾದ್ ಅವರು ರಾಜಿ ಇಲ್ಲದ ಕಾಂಗ್ರೆಸ್ ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸದಾ ಗಟ್ಟಿಯಾಗಿ ನಿಲ್ಲುವವರು. ಆದರೆ, ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ, ಅಹಿಂದ ನಾಯಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಮತ್ತು ಪಕ್ಷವನ್ನು ‘ವೈಯಕ್ತಿಕ ಸಾಮ್ರಾಜ್ಯ’ದಂತೆ ನಡೆಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಧೋರಣೆ ಬಿ.ಕೆ. ಹರಿಪ್ರಸಾದ್ ಅವರ ಆತ್ಮಗೌರವಕ್ಕೆ ಪೆಟ್ಟು ನೀಡಿದೆ.
- ಪಕ್ಷದ ಸಿದ್ಧಾಂತಕ್ಕೆ ಮಾರಕ: ಕಾಂಗ್ರೆಸ್ನ ಮೂಲ ತತ್ವವಾದ ‘ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯ’ವನ್ನು ಬದಿಗೊತ್ತಿ, ಹಣ ಹಾಗೂ ಅಧಿಕಾರದ ಬಲದಿಂದ ನಾಯಕರನ್ನು ನಿಯಂತ್ರಿಸುವ ‘ಪಾಳೆಗಾರಿಕೆಗೆ’ ಪಕ್ಷ ಸಾಕ್ಷಿಯಾಗುತ್ತಿರುವುದು ಹರಿಪ್ರಸಾದ್ ಅವರಂತಹ ಸೈದ್ಧಾಂತಿಕ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಇದು ಹೈಕಮಾಂಡ್ ಮಟ್ಟದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಸಮಾಧಾನದ ಪಟ್ಟಿ: ಸಿದ್ದರಾಮಯ್ಯ ಮಾತಿಗೆ ಕಿಂಚಿತ್ತೂ ಬೆಲೆಯಿಲ್ಲ!
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ತಮ್ಮ ಆಪ್ತ ಕೆ.ಎನ್. ರಾಜಣ್ಣ ಪರವಾಗಿ ನಿಂತರೂ, ಡಿಕೆ ಶಿವಕುಮಾರ್ ತಮ್ಮ ಸಂಬಂಧಿ ರವಿ ಅವರಿಗೆ ಪಟ್ಟ ಕಟ್ಟುವಲ್ಲಿ ಯಶಸ್ವಿಯಾದರು. ಅದೇ ರೀತಿ, ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದ ಬಸವರಾಜ ಶಿವಣ್ಣ ಹಾಗೂ ಅನ್ನಪೂರ್ಣ ತುಕಾರಾಮ್ ಅವರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಎಷ್ಟು ಹೆಣಗಾಡಿದರೂ ದೆಹಲಿ ಮತ್ತು ರಾಜ್ಯ ನಾಯಕತ್ವ ಅದಕ್ಕೆ ಕಿವಿಕೊಡಲಿಲ್ಲ.
ಜೊತೆಗೆ, ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೂ, ಡಿಕೆಶಿ ಕ್ಯಾಂಪ್ ಜಮೀರ್ಗೆ ರಕ್ಷಣೆ ನೀಡಿ ಸಿದ್ದರಾಮಯ್ಯ ಅವರ ಪಟ್ಟನ್ನು ಗಾಳಿಯಲ್ಲಿ ತೂರಿಬಿಟ್ಟಿತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೂ ಈಗ ಸೂಕ್ತ ಪೋಸ್ಟಿಂಗ್ ಕೊಡಿಸಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಪ್ರೋಟೋಕಾಲ್ ನೆಪ, ಸಾಂಸ್ಥಿಕ ಕಡೆಗಣನೆ! ಡಿಕೆ ‘ಇಮೇಜ್’ ರಾಜಕಾರಣಕ್ಕೆ ಬಿಕೆ ಮುನಿಸು?
ಕಾಂಗ್ರೆಸ್ ಭವಿಷ್ಯ ಧೂಳಿಪಟ ಆಗುವುದು ನಿಶ್ಚಿತ!
ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ‘ಪ್ರಭಾವದ ಛಾಯೆ’ಯನ್ನು ಅಳಿಸಿಹಾಕಲು ಮುನ್ನುಗ್ಗುತ್ತಿರಬಹುದು. ಆದರೆ, ಈ ಅತಿರೇಕದ ಅಧಿಕಾರ ದಾಹ ಮತ್ತು ಅಹಿಂದ ನಾಯಕರನ್ನು ಮೂಲೆಗುಂಪು ಮಾಡಿದ ತಂತ್ರವೇ ಕಾಂಗ್ರೆಸ್ಗೆ ಕಂಠಕವಾಗಲಿದೆ:
- ಮತಬ್ಯಾಂಕ್ ಉಡೀಸ್: ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಶಕ್ತಿಯಾಗಿದ್ದದ್ದು ‘ಅಹಿಂದ’ ಮತಗಳು. ಸಿದ್ದರಾಮಯ್ಯನವರನ್ನು ಹೀಗೆ ನಡೆಸಿಕೊಳ್ಳುತ್ತಿರುವುದು, ವಾಲ್ಮೀಕಿ ನಾಯಕರನ್ನು ಸೈಡ್ಲೈನ್ ಮಾಡುವ ತಂತ್ರಗಳು ಮತ್ತು ಅಹಿಂದ ನಾಯಕರನ್ನು ‘ಇಲಿ’ಗಳಂತೆ ಮಾಡಿರುವುದನ್ನು ನೋಡುತ್ತಿರುವ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಕಾಯುತ್ತಿವೆ.
- ಆಂತರಿಕ ಸ್ಪೋಟ: ಒಂದೆಡೆ ಸಿದ್ದರಾಮಯ್ಯ ಅವರ ಬೆಂಬಲಿಗರ ಆಕ್ರೋಶ, ಇನ್ನೊಂದೆಡೆ ಬಿ.ಕೆ. ಹರಿಪ್ರಸಾದ್ ಅವರಂತಹ ಸೈದ್ಧಾಂತಿಕ ನಾಯಕರ ಬೇಸರ – ಇವೆರಡೂ ಸೇರಿ ಕಾಂಗ್ರೆಸ್ನಲ್ಲಿ ಯಾವ ಕ್ಷಣದಲ್ಲಾದರೂ ಬಹಿರಂಗ ಬಂಡಾಯ ಸೃಷ್ಟಿಯಾಗಬಹುದು.
- ಜನಪ್ರಿಯತೆ ಇಲ್ಲದ ಸಂಘಟನೆ: ಸಂಘಟನಾ ಶಕ್ತಿ ಬೇರೆ, ಸಾರ್ವಜನಿಕ ಜನಪ್ರಿಯತೆ (ಮಾಸ್ ಅಪೀಲ್) ಬೇರೆ. ಸಿದ್ದರಾಮಯ್ಯ ಎಂಬ ಅಪಾರ ಜನಪ್ರಿಯತೆಯ ನಾಯಕನನ್ನು ಒಂಟಿ ಮಾಡಿ, ಇಡೀ ಪಕ್ಷವನ್ನು ‘ಪಾಳೆಗಾರಿಕೆ’ ಮಾದರಿಯಲ್ಲಿ ನಡೆಸಲು ಹೊರಟರೆ, ಚುನಾವಣೆಯಲ್ಲಿ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸುವುದು ಖಚಿತ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿ, ಅವರ ಬೆಂಬಲಿಗರನ್ನು ಒಡೆದು, ಅಹಿಂದ ನಾಯಕರನ್ನು ತಮಗೆ ಬೇಕಾದಂತೆ ಕುಣಿಸುತ್ತಿರುವ ಹೊಸ ನಾಯಕತ್ವದ ನಡೆ – ಕಾಂಗ್ರೆಸ್ ಪಕ್ಷವನ್ನು ಜಯದ ಹಾದಿಗೆ ಒಯ್ಯುತ್ತಿಲ್ಲ; ಬದಲಿಗೆ ಸ್ವತಃ ತಾನೇ ಅಗೆದುಕೊಂಡ ಆಳವಾದ ಗುಂಡಿಗೆ ನೂಕುತ್ತಿದೆ. ‘ಟಗರು’ ಸೈಲೆಂಟ್ ಆಗಿದೆ ಎಂದರೆ ಅದು ಸೋತಿದೆ ಎಂದರ್ಥವಲ್ಲ, ಕಾಂಗ್ರೆಸ್ನ ಈ ಆಂತರಿಕ ಅಹಂಕಾರ ಮತ್ತು ಪಾಳೆಗಾರಿಕೆ ಧೋರಣೆಯೇ ಮುಂಬರುವ ದಿನಗಳಲ್ಲಿ ಇಡೀ ಪಕ್ಷವನ್ನು ಧೂಳಿಪಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






