Friday, September 25, 2026
Home ವಿಶ್ಲೇಷಣೆ ಕಾಂಗ್ರೆಸ್‌ಗೆ ‘ಮಹಾನಾಯಕ’ನೇ ಕಂಟಕವಾದ್ರಾ? ED ಸುಪಾರಿ, ಸಿದ್ದರಾಮಯ್ಯ ವಿರುದ್ಧ ಮೂಡಾ ಸಂಚು, ‘ಅಹಿಂದ’ ನಾಯಕರ ಟಾರ್ಗೆಟ್...

ಕಾಂಗ್ರೆಸ್‌ಗೆ ‘ಮಹಾನಾಯಕ’ನೇ ಕಂಟಕವಾದ್ರಾ? ED ಸುಪಾರಿ, ಸಿದ್ದರಾಮಯ್ಯ ವಿರುದ್ಧ ಮೂಡಾ ಸಂಚು, ‘ಅಹಿಂದ’ ನಾಯಕರ ಟಾರ್ಗೆಟ್ – ಹೆಚ್‌ಡಿಕೆ, ರಾಜಣ್ಣ ಬಾಂಬ್!

ಕಾಂಗ್ರೆಸ್‌ಗೆ 'ಮಹಾನಾಯಕ'ನೇ ಕಂಟಕವಾದ್ರಾ? ED ಸುಪಾರಿ, ಸಿದ್ದರಾಮಯ್ಯ ವಿರುದ್ಧ ಮೂಡಾ ಸಂಚು, 'ಅಹಿಂದ' ನಾಯಕರ ಟಾರ್ಗೆಟ್ – ಹೆಚ್‌ಡಿಕೆ, ರಾಜಣ್ಣ ಬಾಂಬ್!

ED Raid: ಕರ್ನಾಟಕ ರಾಜಕೀಯ ಅಂಗಳದಲ್ಲಿ ಪ್ರಸ್ತುತ ಸಾಂಪ್ರದಾಯಿಕ ವೈರತ್ವಕ್ಕಿಂತಲೂ ಸ್ವಪಕ್ಷೀಯರ ಆಂತರಿಕ ಶಡ್ಯಂತ್ರಗಳೇ ಜೋರಾಗಿ ಸದ್ದು ಮಾಡುತ್ತಿವೆ. ವಿರೋಧ ಪಕ್ಷಗಳು ನೇರವಾಗಿ ವಾಗ್ದಾಳಿ ನಡೆಸಿ ದಾಖಲೆ ಬಿಡುಗಡೆ ಮಾಡುವ ಬದಲಿಗೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ನಾಯಕರೇ ಪರಸ್ಪರ ಕಾಲೇಳೆಯಲು ತನಿಖಾ ಸಂಸ್ಥೆಗಳನ್ನು (ED ದಾಳಿ) ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಕಾಂಗ್ರೆಸ್ ನಾಯಕರಾದ ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಸ್ಫೋಟಕ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

“ನನ್ನ ವಿರುದ್ಧ ED ಗೆ ದಾಖಲೆ ಕೊಟ್ಟವರು ಕಾಂಗ್ರೆಸ್‌ನವರೇ!” – ಸತೀಶ್ ಜಾರಕಿಹೊಳಿ ಬಾಂಬ್

ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿಯ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ, ಈ ದಾಳಿಯ ಹಿಂದೆ ಸ್ವಪಕ್ಷೀಯರೇ ಇದ್ದಾರೆ ಎನ್ನುವ ಆಘಾತಕಾರಿ ಸತ್ಯ ಹೊರಬಿದ್ದಿದೆ.

  • ಸತೀಶ್ ಜಾರಕಿಹೊಳಿ ಅವರ ಸ್ಪಷ್ಟ ಉಲ್ಲೇಖ: ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ, “ನನ್ನ ವಿರುದ್ಧ ಇಡಿಗೆ ದೂರು ನೀಡಿ, ದಾಖಲೆಗಳನ್ನು ಒದಗಿಸಿದವರು ಕಾಂಗ್ರೆಸ್‌ನ ಲೀಡರ್ – ಬಿಜೆಪಿಯ ವೋಟರ್” ಎಂದು ನೇರವಾಗಿ ಆರೋಪಿಸಿದ್ದಾರೆ.
  • ‘ಪೊಲಿಟಿಕಲ್ ಸುಪಾರಿ’ ತನಿಖೆ: ಜಾರಕಿಹೊಳಿ ಸಹೋದರರು ತಮ್ಮ ಆಪ್ತರ ಹಾಗೂ ಮಾಜಿ ಶಾಸಕರೊಬ್ಬರ ಮೂಲಕ ನಡೆಸಿದ ಆಂತರಿಕ ವಿಚಾರಣೆಯಲ್ಲಿ, ನಾಯಕರು ನೇರವಾಗಿ EDಗೆ ಹೋಗುವ ಬದಲು ಖಾಸಗಿ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳಿಗೆ ‘ಸುಪಾರಿ’ ನೀಡಿ ಈ ದಾಳಿಯನ್ನು ಯೋಜಿಸಿದ್ದಾರೆ ಎನ್ನಲಾಗಿದೆ.
  • ಸಿಎಂ ಪಟ್ಟದ ಸ್ಪರ್ಧೆಯೇ ಕಾರಣ?: ಸತೀಶ್ ಜಾರಕಿಹೊಳಿ ಅವರು “2028ರ ಚುನಾವಣೆಯಲ್ಲಿ ನಾನೂ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ” ಎಂದು ಬಹಿರಂಗವಾಗಿ ಹೇಳಿಕೊಂಡಿದ್ದೇ ಕಾಂಗ್ರೆಸ್‌ನ ‘ಮಹಾನಾಯಕ’ನಿಗೆ ಕಣ್ಣು ಕೆಂಪಾಗಲು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪ್ರೋಟೋಕಾಲ್ ನೆಪ, ಸಾಂಸ್ಥಿಕ ಕಡೆಗಣನೆ! ಡಿಕೆ ‘ಇಮೇಜ್‌’ ರಾಜಕಾರಣಕ್ಕೆ ಬಿಕೆ ಮುನಿಸು?

“ಮೂಡಾ ದಾಖಲೆಗಳನ್ನು ಬಿಜೆಪಿಗೆ ಕೊಟ್ಟಿದ್ದೇ ಆ ಮಹಾನಾಯಕ!” – ರಾಜಣ್ಣ

ಸಿದ್ದರಾಮಯ್ಯ ಅವರ ಅತ್ಯಾಪ್ತರಾದ ಕೆ.ಎನ್. ರಾಜಣ್ಣ ಅವರು ED ದಾಳಿ ವಿಚಾರವಾಗಿ ನೀಡಿರುವ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತವನ್ನು ಸಂಪೂರ್ಣವಾಗಿ ಬೀದಿಗೆ ತಂದಿವೆ.

  • ಮೂಡಾ ಹಗರಣದ ಹಿಂದೆ ಸ್ವಪಕ್ಷೀಯರು: ಕೆ.ಎನ್. ರಾಜಣ್ಣ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ (MUDA) ಪ್ರಕರಣದ ಬಹುಪಾಲು ದಾಖಲೆಗಳನ್ನು ತನಿಖಾ ಸಂಸ್ಥೆಗಳಿಗೆ ಮತ್ತು ಬಿಜೆಪಿಗೆ ತಲುಪಿಸಿದ್ದೇ ನಮ್ಮ ಕಾಂಗ್ರೆಸ್ ಪಕ್ಷದ ಒಳಗಿರುವ ಮಹಾನಾಯಕ” ಎಂದು ಗಂಭೀರ ಆರೋಪ ಮಾಡಿದ್ದಾರೆ.
  • ಅದೇ ಸೂತ್ರಧಾರನ ಕೈಚಳಕ: ರಾಜಣ್ಣ ಅವರ ಪ್ರಕಾರ, ಸಿದ್ದರಾಮಯ್ಯ ಅವರನ್ನು ಮೂಡಾ ಹಗರಣದಲ್ಲಿ ಸಿಲುಕಿಸಿ ಅವರ ವರ್ಚಸ್ಸಿಗೆ ಧಕ್ಕೆ ತರಲು ಸಂಚು ರೂಪಿಸಿದ ಅದೇ ನಾಯಕನೇ ಈಗ ಸತೀಶ್ ಜಾರಕಿಹೊಳಿ ಅವರ ವಿರುದ್ಧವೂ ಇಡಿಗೆ ದಾಖಲೆಗಳನ್ನು ಒದಗಿಸಿ ಮುಗಿಸಲು ಸ್ಕೆಚ್ ಹಾಕಿದ್ದಾನೆ.
  • ಸಿದ್ದರಾಮಯ್ಯ ಮಾತಿಗಿಲ್ಲ ಬೆಲೆ: “ಅವತ್ತು ಸಿದ್ದರಾಮಯ್ಯ ಅವರ ಮಾತು ನಡೀತಿತ್ತು, ಇವತ್ತು ನಡೀತಿಲ್ಲ” ಎಂದು ರಾಜಣ್ಣ ಅವರು ಹೇಳುವ ಮೂಲಕ ಹೈಕಮಾಂಡ್ ಮಟ್ಟದಲ್ಲೂ ಈ ಮಹಾನಾಯಕ ತಂತ್ರ ಹೆಣೆದಿದ್ದಾನೆ ಎಂದು ಸುಳಿವು ನೀಡಿದ್ದಾರೆ.

“ಒಂದೊಂದೇ ಅಹಿಂದ ನಾಯಕರ ವಿಕೆಟ್ ಬೀಳಿಸುತ್ತಿದ್ದಾರೆ!” – ಹೆಚ್‌ಡಿಕೆ ಚಾಟಿ

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬೆಳವಣಿಗೆಗಳ ಕುರಿತು ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ತಂತ್ರಗಾರಿಕೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  • ಕುಮಾರಸ್ವಾಮಿ ಅವರ ನೇರ ಆರೋಪ: ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸುತ್ತಾ, “ರಮೇಶ್ ಜಾರಕಿಹೊಳಿ ಅವರನ್ನು ಆವತ್ತೇ ಮುಗಿಸಿದರು. ಆ ನಂತರ ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಿದರು. ಈಗ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಇಡಿ ದಾಳಿ ಮಾಡಿಸಿದ್ದಾರೆ. ಮುಂದಿನ ಟಾರ್ಗೆಟ್ ಸ್ವತಃ ಸಿದ್ದರಾಮಯ್ಯನವರೇ!” ಎಂದು ಹೇಳಿದ್ದಾರೆ.
  • ಅಹಿಂದ ನಾಯಕರ ದಮನ: ಕುಮಾರಸ್ವಾಮಿ ಅವರ ವಿಶ್ಲೇಷಣೆಯಂತೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಹಾಗೂ ಶೋಷಿತ ಸಮುದಾಯದ ಬಲಿಷ್ಠ ನಾಯಕರಾಗಿ ಬೆಳೆಯುತ್ತಿರುವ ‘ಅಹಿಂದ‘ ನಾಯಕರ ಒಗ್ಗಟ್ಟನ್ನು ಒಂದೊಂದಾಗಿ ಕಳಚಿ ಬೀಳಿಸುವ ಸಂಚು ರಾಜ್ಯದಲ್ಲಿ ನಡೆಯುತ್ತಿದೆ.

‘ಶಕುನಿ-‘ ಮಾದರಿಯ ಹೊಸ ರಾಜಕೀಯ ತಂತ್ರ

ಪ್ರಸ್ತುತ ರಾಜಕೀಯದಲ್ಲಿ ನೇರಾನೇರ ಸೈದ್ಧಾಂತಿಕ ಹೋರಾಟದ ದಿನಗಳು ಮುಗಿದುಹೋಗಿವೆ ಈಗ ಏನೇ ಇದ್ರೂ ಅದು ಶಕುನಿ ಕುತಂತ್ರದಾಟ…

  • ಪೊಲಿಟಿಕಲ್ ಸುಪಾರಿ ಸಂಸ್ಕೃತಿ: ಈ ಹಿಂದೆ ದೇವೇಗೌಡರು, ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಅವರ ಕಾಲದಲ್ಲಿ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಪ್ರದರ್ಶಿಸಲಾಗುತ್ತಿತ್ತು. ಆದರೆ ಇಂದಿನ ಮಹಾನಾಯಕ ಬಳಸುತ್ತಿರುವುದು ‘ಶಕುನಿ’ ಮಾದರಿಯ ಕುತಂತ್ರ.
  • ಮೈಲೇಜ್ ಬೇಕಿಲ್ಲ, ಎದುರಾಳಿ ಮುಗಿದರೆ ಸಾಕು: ತಾವೆಲ್ಲೂ ಪಿಕ್ಚರ್‌ಗೆ ಬರದಂತೆ, ಕ್ರೆಡಿಟ್ ಅಥವಾ ಪಬ್ಲಿಸಿಟಿಯನ್ನು ಪಡೆದುಕೊಳ್ಳದಂತೆ, ಎದುರಾಳಿಯ ಶತ್ರುಗಳನ್ನು ಮತ್ತು ಮಧ್ಯವರ್ತಿಗಳನ್ನು ಬಳಸಿಕೊಂಡು ‘ಪ್ರೈವೇಟ್ ಸುಪಾರಿ’ ನೀಡಿ ತನಿಖಾ ಸಂಸ್ಥೆಗಳನ್ನು ಎತ್ತಿಕಟ್ಟುವುದು ಈ ಹೊಸ ಅಪ್ಡೇಟೆಡ್ ಶೈಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ED ದಾಳಿ ರಹಸ್ಯ: ಸತೀಶ್‌ಗೆ ಖೆಡ್ಡಾ ತೋಡಿದ್ಯಾರು? ಯಾರ ಹೆಗಲ ಮೇಲೆ ಯಾರ ಬಂದೂಕು?

ಕಾಂಗ್ರೆಸ್‌ಗೆ ಕಾದಿದೆಯೇ ಐತಿಹಾಸಿಕ ಹಿನ್ನಡೆ?

ಇತಿಹಾಸವನ್ನು ನೋಡಿದ್ರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗುವ ಲಕ್ಷಣಗಳಿವೆ ಎಂದು ಎನಿಸುತ್ತಿದೆ…:

  • ದೇವರಾಜ ಅರಸು, ಬಂಗಾರಪ್ಪ ಇತಿಹಾಸ ಮರುಕಳಿಸುತ್ತದೆಯೇ?: ಹಿಂದೆ ಕಾಂಗ್ರೆಸ್ ಪಕ್ಷವು ದೇವರಾಜ ಅರಸು ಹಾಗೂ ಬಂಗಾರಪ್ಪ ಅವರಂತಹ ಮಾಸ್ ನಾಯಕರನ್ನು ನಡೆಸಿಕೊಂಡ ರೀತಿಯ ಪರಿಣಾಮವಾಗಿ, ಚುನಾವಣೆಯಲ್ಲಿ ಪಕ್ಷವು ಎರಡಂಕಿಗೆ (50ಕ್ಕಿಂತ ಕಡಿಮೆ ಸ್ಥಾನಗಳಿಗೆ) ಕುಸಿಯಬೇಕಾಯಿತು.
  • 2028ರ ಚುನಾವಣಾ ಆತಂಕ: ಪ್ರಸ್ತುತ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರಂತಹ ನಾಯಕರನ್ನು ಆಂತರಿಕ ಶಡ್ಯಂತ್ರದ ಮೂಲಕ ಕಟ್ಟಿಹಾಕಲು ಹೊರಟರೆ, 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೂವತ್ತು ಸೀಟು ಬರುವುದೂ ಕಷ್ಟವಾಗಲಿದೆ ಹಾಗೂ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವುದು ಕೆ.ಎನ್. ರಾಜಣ್ಣ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳ ಇಂಗಿತವಾಗಿದೆ.

ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಸಮಗ್ರವಾಗಿ ಗಮನಿಸಿದಾಗ, ಕಾಂಗ್ರೆಸ್ ಪಕ್ಷದ ಒಳಗಿನ ಆಂತರಿಕ ಅಧಿಕಾರದಾಹ ಹಾಗೂ ‘ಮಹಾನಾಯಕ’ನ ಶಡ್ಯಂತ್ರಗಳು ಬೀದಿಗೆ ಬಂದಿರುವುದು ಸುಸ್ಪಷ್ಟವಾಗಿದೆ. ಸ್ವಪಕ್ಷೀಯರನ್ನೇ ಮುಗಿಸಲು ಹೊರಟಿರುವ ಈ ‘ಪ್ರೈವೇಟ್ ಸುಪಾರಿ’ ರಾಜಕಾರಣ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಭೂಕಂಪ ಸೃಷ್ಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...