ಧಾರವಾಡ (Dharwad Politics): ಉತ್ತರ ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ಹೊಸ ಇತಿಹಾಸವೊಂದು ಬರೆಯಲ್ಪಡುತ್ತಿದೆ. ಇದು ಕೇವಲ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲ; ಬದಲಾಗಿ ದೆಹಲಿ ಮಟ್ಟದ ‘ರಿಮೋಟ್ ಕಂಟ್ರೋಲ್’ ರಾಜಕಾರಣ ಮತ್ತು ಮಣ್ಣಿನ ಮಗನ ‘ನೇರ ನಡೆ-ನುಡಿ’ಯ ನಡುವಿನ ಅಸ್ತಿತ್ವದ ಸಮರ. ಒಂದು ಕಡೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ (Pralhad Joshi) ಅತಿ ಚಾಣಾಕ್ಷ ನಡೆಗಳಿದ್ದರೆ, ಮತ್ತೊಂದೆಡೆ ಯಾವುದೇ ಹಂಗಿಲ್ಲದೆ, ಯಾವುದಕ್ಕೂ ಬಗ್ಗದೆ ಸವಾಲು ಹಾಕುವ ವಿನಯ್ ಕುಲಕರ್ಣಿ (Vinay Kulkarni) ಅವರ ವರ್ಚಸ್ವಿ ನಾಯಕತ್ವವಿದೆ.
‘ಆಕಳ ಮೋತಿ’ ಸೌಮ್ಯತೆಯ ಹಿಂದಿನ ರಾಜಕೀಯ ಕ್ರೌರ್ಯ!
ಧಾರವಾಡ (Dharwad Politics) ಜಿಲ್ಲೆಯಲ್ಲಿ ಪ್ರಲ್ಹಾದ್ ಜೋಶಿ ಎಂದರೆ ಒಂದು ರೀತಿಯ ‘ಅನಭಿಷಿಕ್ತ ದೊರೆ’ ಎಂಬ ಬಿಂಬಿತ ಚಿತ್ರಣವಿದೆ. ಮೇಲ್ನೋಟಕ್ಕೆ ಸೌಮ್ಯ ಸ್ವಭಾವದಂತೆ, ಮೃದುಭಾಷಿಯಂತೆ ಕಾಣುವ ಜೋಶಿ, ರಾಜಕೀಯವಾಗಿ ಅಷ್ಟೇನೂ ಸರಳ ವ್ಯಕ್ತಿಯಲ್ಲ ಎಂಬುದು ಜಿಲ್ಲೆಯ ಜನತೆಗೆ ತಿಳಿದಿರುವ ಗುಟ್ಟು. ಜಿಲ್ಲೆಯಲ್ಲಿ ಒಂದು ಜನಪ್ರಿಯ ಮಾತಿದೆ— “ಆಕಳ ಮೋತಿ, ಕತ್ತಿ ಒದಕಿ” ಎಂದು. ಅಂದರೆ, ಶಾಂತವಾಗಿ ಕಾಣುತ್ತಲೇ ಎದುರಾಳಿಯ ರಾಜಕೀಯ ಭವಿಷ್ಯವನ್ನು ಸದ್ದಿಲ್ಲದೆ ಹೊಸಕಿ ಹಾಕುವ ಕಲೆ ಜೋಶಿಯವರಿಗೆ ಕರಗತ.
ಇದೇ ಕಾರಣಕ್ಕೆ ಜಿಲ್ಲೆಯ ಬಹುತೇಕ ಲಿಂಗಾಯತ ನಾಯಕರು ಜೋಶಿಯವರ ಕೆಂಗಣ್ಣಿಗೆ ಗುರಿಯಾಗಲು ಹೆದರುತ್ತಾರೆ. ದೆಹಲಿ ಮಟ್ಟದ ಪ್ರಭಾವವನ್ನು ಬಳಸಿ ಸ್ಥಳೀಯ ನಾಯಕರನ್ನು ಮೂಲೆಗುಂಪು ಮಾಡುವ ಜೋಶಿಯವರ ಈ ‘ಸೈಲೆಂಟ್’ ಕಾರ್ಯಾಚರಣೆ ಜಿಲ್ಲೆಯ ರಾಜಕೀಯದ ಗತಿಯನ್ನೇ ಬದಲಿಸಿದೆ.
ಇದನ್ನೂ ಓದಿ: Vinay Kulkarni: ಜನವರಿಯಲ್ಲೇ ರೆಡಿಯಾಗಿತ್ತಾ ಜನಿ’ವಾರ್’ ಕುಣಿಕೆ? ಅವರ ಮುಂದಿನ ಪ್ಲ್ಯಾನ್ ಏನು?
ಶರಣಾದ ನಾಯಕರು ಮತ್ತು ಕುಲಕರ್ಣಿ ಎಂಬ ಏಕೈಕ ಅಡೆತಡೆ
ಜಿಲ್ಲೆಯ ಕಾಂಗ್ರೆಸ್ ನಾಯಕರ ಪರಿಸ್ಥಿತಿಯನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಎನ್.ಎಸ್. ಕೋನರೆಡ್ಡಿ (N.H. Konaraddi) ಅವರು ಇಂದು ‘ಸೇಫ್ ಪಾಲಿಟಿಕ್ಸ್’ ಮೊರೆ ಹೋಗಿದ್ದಾರೆ. ಇನ್ನು ಸಚಿವ ಸಂತೋಷ್ ಲಾಡ್ (Santosh Lad) ಅವರ ಕಥೆಯಂತೂ ವಿಚಿತ್ರ. ಟಿವಿಯಲ್ಲಿ ಮೋದಿ ವಿರುದ್ಧ ಭಾಷಣ ಬಿಗಿಯುವ ಲಾಡ್, ಜಿಲ್ಲೆಗೆ ಬಂದರೆ ಜೋಶಿ ವಿರುದ್ಧ ತುಟಿ ಬಿಚ್ಚುವುದಿಲ್ಲ. ವ್ಯವಹಾರಿಕ ಹಿತಾಸಕ್ತಿಗಳು ರಾಜಕೀಯ ಬದ್ಧತೆಯನ್ನು ಹೇಗೆ ನುಂಗಿ ಹಾಕುತ್ತವೆ ಎಂಬುದಕ್ಕೆ ಲೋಕಸಭಾ ಚುನಾವಣೆಯಲ್ಲಿ ಲಾಡ್ ಅವರ ಸ್ವಕ್ಷೇತ್ರದಲ್ಲೇ ಜೋಶಿಯವರಿಗೆ ಸಿಕ್ಕ 35 ಸಾವಿರ ಮತಗಳ ಲೀಡ್ ಸಾಕ್ಷಿ.
ಇಂತಹ ‘ಶರಣಾಗತಿಯ ರಾಜಕಾರಣ’ದ ನಡುವೆ ಒಬ್ಬ ಪರ್ವತದಂತೆ ಅಚಲವಾಗಿ ನಿಂತಿರುವುದು ವಿನಯ್ ಕುಲಕರ್ಣಿ. ಜೋಶಿಯವರ ಯಾವುದೇ ಪ್ರಭಾವಕ್ಕೆ ಮಣಿಯದ, ಅವರ ದರ್ಪಕ್ಕೆ ‘ಸಲಾಂ’ ಹೊಡೆಯದ ಏಕೈಕ ನಾಯಕ ಎಂದರೆ ಅದು ವಿನಯ್ ಕುಲಕರ್ಣಿ ಮಾತ್ರ. ಜೋಶಿಯವರ ಕಾಮಗಾರಿಗಳಲ್ಲಿನ ಲೋಪದೋಷಗಳನ್ನು ನೇರವಾಗಿ ಪ್ರಶ್ನಿಸಿ, ನಿಯಮಾನುಸಾರ ಕೆಲಸ ನಡೆಯಬೇಕೆಂದು ಹಠಕ್ಕೆ ಬೀಳುವ ಕುಲಕರ್ಣಿ, ಜೋಶಿಯವರ ಅಹಂಗೆ ತಟ್ಟಿದ ದೊಡ್ಡ ಪೆಟ್ಟು.
ಸಜ್ಜಾದ ವ್ಯೂಹ: ಅಂದುಕೊಂಡಂತೆಯೇ ವರ್ಕೌಟ್ ಆಯ್ತಾ ‘ಖೆಡ್ಡಾ’?
ಕಳೆದ ಡಿಸೆಂಬರ್ ಅಂತ್ಯ ಹಾಗೂ ಜನವರಿ ತಿಂಗಳಲ್ಲೇ ಬಿಜೆಪಿ ವಲಯದಲ್ಲಿ ಒಂದು ಗಂಭೀರ ಚರ್ಚೆ ನಡೆದಿತ್ತು. ವಿನಯ್ ಕುಲಕರ್ಣಿ ಎಂಬ ಈ ‘ಡೈನಾಮಿಕ್’ ನಾಯಕತ್ವಕ್ಕೆ ಹೇಗಾದರೂ ಮಾಡಿ ಬ್ರೇಕ್ ಹಾಕಬೇಕು, ಧಾರವಾಡದಲ್ಲಿ ಉಪಚುನಾವಣೆ ತರಬೇಕು ಎಂಬ ಸ್ಕೆಚ್ ಸಿದ್ಧವಾಗಿತ್ತು ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬರುತ್ತಿವೆ… ಅದರಂತೆ, ಏಪ್ರಿಲ್ ತಿಂಗಳಿನಲ್ಲಿ ಯೋಗೇಶ್ ಗೌಡ ಮರ್ಡರ್ ಕೇಸ್‌ನಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದು ಕೇವಲ ಕಾನೂನಾತ್ಮಕ ಪ್ರಕ್ರಿಯೆಯೋ ಅಥವಾ ಇದರ ಹಿಂದೆ ರಾಜಕೀಯ ಮಾಸ್ಟರ್‌ಮೈಂಡ್‌ಗಳ ಕೈವಾಡವಿದೆಯೋ ಎಂಬ ಚರ್ಚೆ ಈಗ ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿದೆ.
ಪ್ರಸ್ತುತ ವಿನಯ್ ಕುಲಕರ್ಣಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶಕ್ಕೆ ತಡೆ ತರಲು ಹಾಗೂ ಜಾಮೀನು ಪಡೆಯಲು ಕಾನೂನು ಹೋರಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ: Vinay Kulkarni: ಸಿಬಿಐ ತನಿಖೆಯೋ ಅಥವಾ ಬಿಜೆಪಿಯ ಸ್ಕ್ರಿಪ್ಟೋ? ಹಿರಿಯ ವಕೀಲ ಬಾಲನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!
ದೂರವಿದ್ದೂ ಗೆದ್ದ ಜನನಾಯಕ: ಕುಲಕರ್ಣಿ ಎಂಬ ಫೀನಿಕ್ಸ್!
ವಿನಯ್ ಕುಲಕರ್ಣಿ ಅವರ ಶಕ್ತಿ ಇರುವುದೇ ಅವರ ಜನರ ಬೆಂಬಲದಲ್ಲಿ. ಈ ಹಿಂದೆ ಇದೇ ಕೇಸ್‌ನಲ್ಲಿ ವಿನಯ್ ಅವರಿಗೆ ಕ್ಷೇತ್ರಕ್ಕೆ ಕಾಲಿಡದಂತೆ ಕೋರ್ಟ್ ಆದೇಶವಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದಿಂದ ಹೊರಗಿದ್ದರೂ, ವಿನಯ್ ಕುಲಕರ್ಣಿ ಕುಗ್ಗಲಿಲ್ಲ. ತನ್ನ ಜನಪರ ಕೆಲಸಗಳು, ಜನರೊಂದಿಗೆ ಸಂಪರ್ಕ ಹಾಗೂ ಕಾರ್ಯಕರ್ತರ ಮೇಲಿಟ್ಟಿದ್ದ ಅಚಲ ನಂಬಿಕೆಯಿಂದಾಗಿ ಅವರು ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದರು.
ಕ್ಷೇತ್ರದಲ್ಲಿ ಇಲ್ಲದಿದ್ದರೂ ಜನರ ಮನಸ್ಸಿನಲ್ಲಿ ಹೇಗೆ ನೆಲೆಸಬಹುದು ಎಂಬುದನ್ನು ಕುಲಕರ್ಣಿ ಸಾಬೀತುಪಡಿಸಿದ್ದರು. ಇದೇ ಸಂಗತಿ ಜೋಶಿಯವರ ನಿದ್ದೆ ಗೆಡಿಸಿರುವುದು. “ನನ್ನ ಅಪ್ಪಣೆಯಿಲ್ಲದೆ ಜಿಲ್ಲೆಯಲ್ಲಿ ಯಾವುದೂ ನಡೆಯಬಾರದು” ಎಂಬ ಅಹಂಕಾರಕ್ಕೆ ಕುಲಕರ್ಣಿ ಹೆಜ್ಜೆ ಹೆಜ್ಜೆಗೂ ತೊಡಕಾಗುತ್ತಿರುವುದು ಈಗ ಜಗಜ್ಜಾಹೀರಾಗಿದೆ.
ಧಾರವಾಡದ ಮಣ್ಣಿನಲ್ಲಿ ಈಗ ಸತ್ಯ ಮತ್ತು ಕುತಂತ್ರದ ನಡುವೆ ಯುದ್ಧ ಆರಂಭವಾಗಿದೆ. ಪ್ರಲ್ಹಾದ್ ಜೋಶಿಯವರ ಅಧಿಕಾರ ಬಲ ಮತ್ತು ದೆಹಲಿಯ ಪ್ರಭಾವದ ಮುಂದೆ ವಿನಯ್ ಕುಲಕರ್ಣಿ ಅವರ ಜನಬಲ ಮತ್ತು ಸ್ವಾಭಿಮಾನದ ಹೋರಾಟ ಮತ್ತೊಮ್ಮೆ ಪರೀಕ್ಷೆಗೆ ಒಡ್ಡಲ್ಪಟ್ಟಿದೆ.
ಜೋಶಿಯವರ ಚಾಣಾಕ್ಷ ಸ್ಕೆಚ್‌ಗಳನ್ನು ಧೂಳೀಪಟ ಮಾಡಿ ವಿನಯ್ ಕುಲಕರ್ಣಿ ಅವರು ಕಾನೂನು ಹೋರಾಟದಲ್ಲಿ ಜಯಗಳಿಸಿ ಮತ್ತೆ ಪುಟಿದೇಳುತ್ತಾರಾ? ಅಥವಾ ಲಿಂಗಾಯತ ನಾಯಕತ್ವವನ್ನು ಹತ್ತಿಕ್ಕುವ ಸಂಚು ಯಶಸ್ವಿಯಾಗುತ್ತದೆಯೇ? ಧಾರವಾಡದ ಜನರು ಕುತಂತ್ರಕ್ಕೆ ತಕ್ಕ ಪಾಠ ಕಲಿಸುತ್ತಾರೋ ಅಥವಾ ಮೌನಕ್ಕೆ ಶರಣಾಗುತ್ತಾರೋ? ಕಾದು ನೋಡಬೇಕಿದೆ.

