Homeವಿಶ್ಲೇಷಣೆBagalkot BJP: ಯಡಿಯೂರಪ್ಪ ಹಾಕಿದ ಅನ್ನ ತಿಂದು ಯತ್ನಾಳ್ ತಾಳಕ್ಕೆ ಕುಣಿಯುತ್ತಿದೆಯೇ ಬಾಗಲಕೋಟೆ ಬಿಜೆಪಿ? ಬೆಳೆಸಿದ...

Bagalkot BJP: ಯಡಿಯೂರಪ್ಪ ಹಾಕಿದ ಅನ್ನ ತಿಂದು ಯತ್ನಾಳ್ ತಾಳಕ್ಕೆ ಕುಣಿಯುತ್ತಿದೆಯೇ ಬಾಗಲಕೋಟೆ ಬಿಜೆಪಿ? ಬೆಳೆಸಿದ ಕೈಯ್ಯನ್ನೇ ಕಚ್ಚುವ ‘ಅನಿಷ್ಟ’ ರಾಜಕೀಯ!

Bagalkot BJP: ಕರ್ನಾಟಕ ರಾಜಕೀಯದ ದೈತ್ಯ ಶಕ್ತಿ, ಬಿಜೆಪಿಯನ್ನು ಶೂನ್ಯದಿಂದ ಶಿಖರಕ್ಕೆ ಏರಿಸಿದ ‘ಅಪರಂಜಿ’ ಬಿ.ಎಸ್. ಯಡಿಯೂರಪ್ಪನವರು (B.S. Yediyurappa) ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ ಸಂಭ್ರಮ ಚಿತ್ರದುರ್ಗದಲ್ಲಿ ಮೇಳೈಸಿತ್ತು. ಒಂದು ಕಾಲದಲ್ಲಿ ಬಿಎಸ್ವೈ ಎಂದರೆ ಕೆಂಡ ಕಾರುತ್ತಿದ್ದ ವಿರೋಧಿ ಬಣದವರೂ ಅಂದು ವೇದಿಕೆಯ ಮೇಲೆ ‘ರಾಜಾಹುಲಿ’ಯ ಗುಣಗಾನ ಮಾಡುತ್ತಿದ್ದರು. ಆದರೆ, ಕರುನಾಡಿನ ಈ ಅಪ್ರತಿಮ ನಾಯಕನಿಗೆ ಅತಿ ಹೆಚ್ಚು ಸಚಿವ ಸ್ಥಾನ, ಶಾಸಕ ಸ್ಥಾನಗಳನ್ನು ನೀಡಿ ಬೆಳೆಸಿದ ಬಾಗಲಕೋಟೆ ಜಿಲ್ಲೆಯ ಬಿಜೆಪಿ ಘಟಕ ಮಾತ್ರ ಅಂದು ತೋರಿದ ಅಸಡ್ಡೆ, ನಿರ್ಲಕ್ಷ್ಯ ಮತ್ತು ಮೌನ ಇದೀಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಇದು ಕೇವಲ ಒಂದು ಕಾರ್ಯಕ್ರಮಕ್ಕೆ ಗೈರಾದ ವಿಷಯವಲ್ಲ; ಇದು ರಾಜಕೀಯದಲ್ಲಿ ಬೆಳೆಸಿದವರ ಕೈಯ್ಯನ್ನೇ ಕಚ್ಚುವ ‘ಕೃತಘ್ನತೆ’ಯ ಪರಮಾವಧಿ ಎಂದರೆ ತಪ್ಪಾಗಲಾರದು.

ಅಧಿಕಾರದ ಏಣಿ ಏರಿದ ಮೇಲೆ ಆಸರೆ ಮರೆತ ನಾಯಕರು!

ಬಾಗಲಕೋಟೆ ಜಿಲ್ಲೆಯ ಇಂದಿನ ಬಹುತೇಕ ಬಿಜೆಪಿ (Bagalkot BJP) ನಾಯಕರ ರಾಜಕೀಯ ಅಸ್ತಿತ್ವದ ಹಿಂದೆ ಯಡಿಯೂರಪ್ಪನವರ ಬೆವರು ಮತ್ತು ಶ್ರಮವಿದೆ. ಚುನಾವಣೆ ಬಂದಾಗ ಟಿಕೆಟ್ ಪಡೆಯಲು ಕಾವೇರಿ ನಿವಾಸದ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ ಇದೇ ನಾಯಕರಿಗೆ, ಯಡಿಯೂರಪ್ಪನವರು ಸಚಿವರಾಗಿ ಮುದ್ರೆ ಒತ್ತಿದಾಗ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುವಾಗ ಇದ್ದ ಉತ್ಸಾಹ, ಇಂದು ಅವರ 50 ವರ್ಷದ ಸಂಭ್ರಮಕ್ಕೆ ಯಾಕೆ ಇರಲಿಲ್ಲ?

ಜಿಲ್ಲೆಯ ತೇರದಾಳ ಮತ್ತು ಜಮಖಂಡಿ ಕ್ಷೇತ್ರದ ನಾಯಕರು ತಮಮ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿದ್ದು ಹೊರತುಪಡಿಸಿದರೆ, ಉಳಿದ ಘಟಾನುಘಟಿಗಳು ಈ ಕಾರ್ಯಕ್ರಮದ ಕಡೆಗೆ ತಿರುಗಿಯೂ ನೋಡಲಿಲ್ಲ. ಜಿಲ್ಲಾ ಬಿಜೆಪಿ ಘಟಕವಂತೂ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದು ಜಿಲ್ಲೆಯ ಕೆಳಹಂತದ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಬಿಎಸ್ವೈ ಎಂಬ ಹೆಸರಿನ ಮೇಲೆ ಮತ ಕೇಳಿ ಗೆದ್ದು ಬಂದ ನಾಯಕರು, ಇಂದು ಅವರನ್ನೇ ‘ಕೌಟುಂಬಿಕ ಕಾರ್ಯಕ್ರಮ’ ಎಂದು ಹಣೆಪಟ್ಟಿ ಕಟ್ಟಿ ದೂರ ಉಳಿದಿರುವುದು ಜಿಲ್ಲಾ ಬಿಜೆಪಿಯಲ್ಲಿ ಅಶಿಸ್ತು ಎಷ್ಟರ ಮಟ್ಟಿಗೆ ಮನೆಮಾಡಿದೆ ಎಂಬುದಕ್ಕೆ ಸಾಕ್ಷಿ.

ಇದನ್ನೂ ಓದಿ: Dharwad Politics: ಕುಲಕರ್ಣಿ ಕಂಡ್ರೆ ಜೋಶಿಗ್ಯಾಕೆ ಜಿದ್ದು? ಅಸಲಿ ಕಾರಣ ಇಲ್ಲಿದೆ ನೋಡಿ…

ಯತ್ನಾಳ್ ನೆರಳು ಮತ್ತು ಜಿಲ್ಲಾ ಘಟಕದ ದ್ವಂದ್ವ

ಈ ಅಸಡ್ಡೆಯ ಹಿಂದೆ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರ ಪ್ರಭಾವವಿರುವುದು ಸೂರ್ಯನಷ್ಟೇ ಸತ್ಯ. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ (B.Y. Vijayendra) ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್ ಅವರ ಬಣದ ಜೊತೆ ಜಿಲ್ಲೆಯ ಕೆಲವು ಪ್ರಮುಖ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ? ಎಂಬ ಅನುಮಾನ ದಟ್ಟವಾಗಿದೆ.

ವಿಶೇಷವಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ (Veeranna Charanthimath) ಅವರ ನಡೆ ಅಚ್ಚರಿ ಮೂಡಿಸಿದೆ. ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಉಚ್ಛಾಟಿತಗೊಂಡ ಯತ್ನಾಳ್ ಅವರನ್ನು ಕರೆಸಿ ಪ್ರಚಾರ ಮಾಡಿಸಿದ ಚರಂತಿಮಠ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರ ಕಾರ್ಯಕ್ರಮಕ್ಕೆ ಹೋಗಲು ಮನಸ್ಸು ಮಾಡಲಿಲ್ಲ. ಸೋತ ನಂತರವೂ ಪಾಠ ಕಲಿಯದ ಇವರು, ಹಿರಿಯ ನಾಯಕನಿಗೆ ಗೌರವ ಕೊಡಲು ಇಷ್ಟೊಂದು ಮೀನಾಮೇಷ ಎಣಿಸುತ್ತಿರುವುದು ಯಾವ ರಾಜಕೀಯ ನೈತಿಕತೆ? ದಿನವಿಡೀ ಯಡಿಯೂರಪ್ಪನವರ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡುವವರೇ ಇವರಿಗೆ ಹತ್ತಿರವಾದರೆ, ಜಿಲ್ಲೆಯಲ್ಲಿ ಪಕ್ಷದ ನಿಷ್ಠೆ ಎತ್ತ ಸಾಗುತ್ತಿದೆ?

ಜಿಲ್ಲಾಧ್ಯಕ್ಷರ ಮೌನ: ಸಮ್ಮತಿಯ ಲಕ್ಷಣವೇ?

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರ ಕಾರ್ಯವೈಖರಿಯೂ ಈಗ ಚರ್ಚೆಯಲ್ಲಿದೆ. ಪ್ರತಿ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಕಾರ್ಯಕರ್ತರನ್ನು ಚಿತ್ರದುರ್ಗಕ್ಕೆ ಕೊಂಡೊಯ್ಯುವ ಶಕ್ತಿ ಜಿಲ್ಲಾ ಘಟಕಕ್ಕಿತ್ತು. ಆದರೆ, ಜಿಲ್ಲಾಧ್ಯಕ್ಷರು ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆಯೇ ಅಥವಾ ಯತ್ನಾಳ್ ಅವರ ‘ಟೀಂ’ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ. ಜಿಲ್ಲೆಯ ಎರಡನೇ ಹಂತದ ನಾಯಕರು ಮತ್ತು ನಿಷ್ಠಾವಂತ ಕಾರ್ಯಕರ್ತರು ಯಡಿಯೂರಪ್ಪನವರ ಪರವಾಗಿದ್ದರೂ, ನಾಯಕರು ಮಾತ್ರ ತಮ್ಮ ಸ್ವಹಿತಾಸಕ್ತಿಗಾಗಿ ಗಾಳಿ ಬೀಸುವ ಕಡೆಗೆ ಮುಖ ಮಾಡುತ್ತಿರುವುದು ಅತೀವ ವಿಷಾದನೀಯ.

ಇದನ್ನೂ ಓದಿ: Congress: ಲಂಗುಲಗಾಮಿಲ್ಲದ ಮಹಾದೇವಿ ಪೋಸ್ಟ್; ಶಾಸಕ ಉಮೇಶ್‌ಗೆ ಮುಜುಗರ, ಬಿಜೆಪಿಗೆ ಹಬ್ಬದೂಟ!

ಯಡಿಯೂರಪ್ಪ ಇಲ್ಲದ ಬಾಗಲಕೋಟೆ ಬಿಜೆಪಿ ಸಾಧ್ಯವೇ?

ಇಂದು ಅಸಡ್ಡೆ ತೋರುತ್ತಿರುವ ನಾಯಕರಿಗೆ ಒಂದು ಕಟು ವಾಸ್ತವದ ಅರಿವಿರಲಿ: ಮುಂದಿನ ಚುನಾವಣೆ ಬಂದಾಗ ಜನ ಸಾಮಾನ್ಯರ ಮುಂದೆ ಹೋಗಲು ನಿಮಗೆ ಮತ್ತೆ ಅದೇ ಯಡಿಯೂರಪ್ಪನವರ ಮುಖ ಬೇಕು. ವಿಜಯೇಂದ್ರ ಅವರ ಸಂಘಟನಾ ಶಕ್ತಿ ಬೇಕು. ಯಡಿಯೂರಪ್ಪನವರ ಪ್ರಭಾವವಿಲ್ಲದೆ ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಲ್ಲದು ಎಂಬುದು ಇತಿಹಾಸ ನೋಡಿದರೆ ಅರ್ಥವಾಗುತ್ತದೆ. ಹಿರಿಯ ನಾಯಕನಿಗೆ ಸಲ್ಲಿಸಬೇಕಾದ ಕನಿಷ್ಠ ಗೌರವವನ್ನೂ ನೀಡದ ಈ ನಾಯಕರು, ನಾಳೆ ಯಾವ ಮುಖ ಹೊತ್ತು ಅವರ ಮುಂದೆ ಟಿಕೆಟ್ ಕೇಳಲು ಹೋಗುತ್ತಾರೆ?

ಇದು ಕೇವಲ ಕೃತಘ್ನತೆಯಲ್ಲ, ಇದು ಜಿಲ್ಲಾ ಬಿಜೆಪಿಯ ಪಾಲಿಗೆ ವಿನಾಶಕಾಲದ ಲಕ್ಷಣ. ಪಕ್ಷದ ಶಿಸ್ತನ್ನು ಗಾಳಿಗೆ ತೂರಿ, ಉಚ್ಛಾಟಿತ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಇವರಿಗೆ ಶಿಸ್ತು ಸಮಿತಿಯ ಬಿಸಿ ಮುಟ್ಟಲೇಬೇಕಿದೆ.

ಇದನ್ನೂ ಓದಿ: Vinay Kulkarni: ಜನವರಿಯಲ್ಲೇ ರೆಡಿಯಾಗಿತ್ತಾ ಜನಿ’ವಾರ್’ ಕುಣಿಕೆ? ಅವರ ಮುಂದಿನ ಪ್ಲ್ಯಾನ್ ಏನು?

ವಿಜಯೇಂದ್ರ ಅವರ ಮುಂದಿರುವ ಸವಾಲು

ಈಗ ಎಲ್ಲರ ಕಣ್ಣು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲಿದೆ. ತನ್ನ ತಂದೆಯ ಹಾಗೂ ಪಕ್ಷದ ಪರಮೋಚ್ಛ ನಾಯಕನ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಗೈರಾದ ಬಾಗಲಕೋಟೆ ಘಟಕದ ವಿರುದ್ಧ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ? ಪಕ್ಷದಲ್ಲಿ ಬೆಳೆದು, ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಈ ನಾಯಕರ ಅಶಿಸ್ತನ್ನು ಅವರು ಸಹಿಸಿಕೊಳ್ಳುತ್ತಾರೆಯೇ? ಜಿಲ್ಲೆಯಲ್ಲಿ ಸಮರ ಸಾರಿರುವ ವಿರೋಧಿ ಬಣಕ್ಕೆ ಮಣೆ ಹಾಕುತ್ತಿರುವ ನಾಯಕರ ರೆಕ್ಕೆ ಕತ್ತರಿಸದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಜಿಲ್ಲೆಯಲ್ಲಿ ಹಳ್ಳ ಹಿಡಿಯುವುದು ನಿಶ್ಚಿತ.

ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ, ಆದರೆ ಗೌರವ ಮತ್ತು ನಿಷ್ಠೆ ಶಾಶ್ವತ. ಯಡಿಯೂರಪ್ಪ ಎಂಬ ಅದ್ವಿತೀಯ ಶಕ್ತಿಯನ್ನು ನಿರ್ಲಕ್ಷಿಸಿ ಬಾಗಲಕೋಟೆಯ ಬಿಜೆಪಿ ನಾಯಕರು ತಮಗೇ ತಾವೇ ರಾಜಕೀಯ ಗೋರಿ ತೋಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ನೀಡಿದ ಈ ಅವಮಾನವು ಅವರ ಲಕ್ಷಾಂತರ ಅಭಿಮಾನಿಗಳಿಗೆ ಮಾಡಿದ ಅವಮಾನವಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಮತದಾರರು ಮತ್ತು ನಿಷ್ಠಾವಂತ ಕಾರ್ಯಕರ್ತರು ತಕ್ಕ ಉತ್ತರ ನೀಡುವುದರಲ್ಲಿ ಸಂಶಯವಿಲ್ಲ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments