Homeವಿಶ್ಲೇಷಣೆBUDA ಬುಡಮೇಲು: ಕಮೀಷನರ್ ವಾಸಣ್ಣ ಸುತ್ತ ಅಕ್ರಮದ ವಾಸನೆ? ಠರಾವು, MLA ಪತ್ರಕ್ಕೂ ಬಗ್ಗದ ಭ್ರಷ್ಟ...

BUDA ಬುಡಮೇಲು: ಕಮೀಷನರ್ ವಾಸಣ್ಣ ಸುತ್ತ ಅಕ್ರಮದ ವಾಸನೆ? ಠರಾವು, MLA ಪತ್ರಕ್ಕೂ ಬಗ್ಗದ ಭ್ರಷ್ಟ ಯಂತ್ರ – ಲೋಕಾಯುಕ್ತ ಕುರುಡಾಯಿತೇ?

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (BUDA) ನಡೆದಿರುವ ಬೃಹತ್ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖ ಅಧಿಕೃತ ದಾಖಲೆಗಳು ಹಾಗೂ ಶಾಸಕ ಉಮೇಶ್ ಮೇಟಿ ಅವರು ಸರಕಾರಕ್ಕೆ ಬರೆದಿರುವ ದೂರಿನ ಪತ್ರದ ಸಂಪೂರ್ಣ ಅಸಲಿ ಪ್ರತಿಗಳು ನಮ್ಮ ‘ಅಸಲಿ ಸುದ್ದಿ’ಗೆ ಲಭ್ಯವಾಗಿವೆ.

ಬಾಗಲಕೋಟೆ ನಗರದ ಶಿಸ್ತುಬದ್ಧ ಬೆಳವಣಿಗೆ ಹಾಗೂ ಸಾರ್ವಜನಿಕರಿಗೆ ಕಾನೂನುಬದ್ಧವಾಗಿ ನಿವೇಷನ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಬೇಕಾದ ಈ ಪ್ರಾಧಿಕಾರವು ಇವತ್ತು ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಹಾಗೂ ಆಡಳಿತಾತ್ಮಕ ಹಗರಣಗಳ ಅಡ್ಡಾವಾಗಿ ಮಾರ್ಪಟ್ಟಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ‘ಅಸಲಿ ಸುದ್ದಿ’ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಈ ಇಡೀ ಅಕ್ರಮ ಜಾಲದ ಕೇಂದ್ರಬಿಂದುವಾಗಿ ಬುಡಾ ಆಯುಕ್ತ ವಾಸಣ್ಣ (KMAS) ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಖಾಸಗಿ ಲೇಔಟ್ ಮಾಲೀಕರ ಜತೆ ಕೈಜೋಡಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಹಾಗೂ ಸರಕಾರಿ ಸ್ವತ್ತನ್ನು ಬಲಿಕೊಡಲು ಆಯುಕ್ತರೇ ನೇರ ಸಾರಥ್ಯ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಸಿಕ್ಕಿದ್ದರೂ, ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಆಡಳಿತ ಯಂತ್ರ ಸಂಪೂರ್ಣ ಮೌನ ವಹಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಆಯುಕ್ತ ವಾಸಣ್ಣ ನಡೆಸಿದ ‘ಆಡಳಿತಾತ್ಮಕ ಜಾದೂ’: ಪಕ್ಕಾ ಸಾಕ್ಷಿ ಸಮೇತ ಬಯಲು!

BUDA: ಬಾಗಲಕೋಟೆ ಪಟ್ಟಣದ ಸರ್ವೇ ನಂಬರ್ 217/*/3 ರ ಒಟ್ಟು 03 ಎಕರೆ 03 ಗುಂಟೆ ಜಮೀನಿನಲ್ಲಿ ನಿಯಮಬಾಹಿರವಾಗಿ ಅಂತಿಮ ವಿನ್ಯಾಸ (Final Layout Approval) ಮಂಜೂರು ಮಾಡುವಲ್ಲಿ ಬುಡಾ ಆಯುಕ್ತ ವಾಸಣ್ಣ ಅವರು ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ಶಾಸಕರಾದ ಉಮೇಶ್ ಹುಲ್ಲಪ್ಪ ಮೇಟಿ ಅವರು ನಗರಾಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಬರೆದಿರುವ ಕಠಿಣ ದೂರಿನ ಪತ್ರದಲ್ಲಿ ಆಯುಕ್ತರ ಭ್ರಷ್ಟಾಚಾರದ ಸರಮಾಲೆಯನ್ನೇ ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ:

  • ಅರ್ಜಿ ಸಲ್ಲಿಕೆಯಾಗುವ ಮುನ್ನವೇ ಆದೇಶ ಹೊರಡಿಸಿದ ಕಮಿಷನರ್!: ಜಮೀನಿನ ಮಾಲೀಕರು ಲೇಔಟ್ ಅನುಮೋದನೆ ಕೋರಿ ಬುಡಾಗೆ ಅರ್ಜಿ ಸಲ್ಲಿಸಿದ್ದೇ 2026 ಮಾರ್ಚ್ 03 ರಂದು. ಆದರೆ, ಬುಡಾ ಆಯುಕ್ತರು ಅಂತಿಮ ಅನುಮೋದನೆ ಆದೇಶ ಹೊರಡಿಸಿದ್ದು 2026 ಫೆಬ್ರವರಿ 24 ರಂದು! ಅಂದರೆ, ಅರ್ಜಿದಾರರು ಕೋರಿಕೆಯನ್ನೇ ಸಲ್ಲಿಸದಿದ್ದಾಗ, ಫೆಬ್ರವರಿಯಲ್ಲೇ ಆಯುಕ್ತರು ಅಂತಿಮ ಅನುಮೋದನೆ ಪತ್ರ ಸಿದ್ಧಪಡಿಸಿ ಸಹಿ ಹಾಕಿದ್ದು ಹೇಗೆ ಎನ್ನುವ ದೊಡ್ಡ ಪ್ರಶ್ನೆ ಮೂಡಿದೆ.
  • ಇಲಾಖೆಗಳ NOC ತಲುಪುವ ಮುನ್ನವೇ ಮಂಜೂರಾತಿ ನೀಡಿದ ಜಾಣತನ!: ನೀರು ಸರಬರಾಜು ಮಂಡಳಿ ನಿರಾಕ್ಷೇಪಣಾ ಪತ್ರ (NOC) ನೀಡಿದ್ದು ಮಾರ್ಚ್ 02 ರಂದು ಹಾಗೂ ತೋಟಗಾರಿಕೆ ಇಲಾಖೆ NOC ನೀಡಿದ್ದು ಮಾರ್ಚ್ 20 ರಂದು. ಆದರೆ, ಈ ಯಾವುದೇ ತಪಾಸಣಾ ವರದಿಗಳು ಬುಡಾ ಕಚೇರಿಗೆ ತಲುಪುವ ಮೊದಲೇ ಆಯುಕ್ತರು ಅಂತಿಮ ಅನುಮೋದನೆ ನೀಡಿ ಜೇಬಿಗಿಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
  • ಅಧ್ಯಕ್ಷರ ‘ನಕಲಿ ಸಹಿ’ ದುರ್ಬಳಕೆ ಮಾಡಿದ ಆರೋಪ!: ಈ ವಿಷಯವನ್ನು ಬುಡಾದ ಅಧಿಕೃತ ಸಾಮಾನ್ಯ ಸಭೆಯಲ್ಲೇ ಮಂಡಿಸದೇ, ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರದೆ, ಅಧ್ಯಕ್ಷರ ಸಹಿಯನ್ನೇ ನಕಲು (Forgery) ಮಾಡಿ ಕಾಯ್ದೆ 1961ರ ಪ್ರಕರಣ 17(2)(B)(C) ಯನ್ನು ಗಾಳಿಗೆ ತೂರಿದ್ದಾರೆ ಎಂದು ಶಾಸಕರು ಆಯುಕ್ತರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: Bagalkot ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ‘ಒಳಸಂಚಿನ’ ಜ್ವಾಲೆ! ಸ್ವಪಕ್ಷೀಯರೇ ಹೆಣೆದ ಪಿತೂರಿಯ ಬಲೆಯಲ್ಲಿ ಸಿಲುಕಿತೇ ಹದ್ಲಿ ಪಕ್ಷ ನಿಷ್ಠೆ?

ಸಭೆಯಲ್ಲಿ ರಾದ್ಧಾಂತ, ಬೆವರಿದ ಕಮಿಷನರ್: ಆಯುಕ್ತರ ವಿರುದ್ಧವೇ ಪಾಸ್ ಆಗಿತ್ತು ಠರಾವು!

ಬುಡಾ (BUDA) ಕಚೇರಿಯಲ್ಲಿ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲೇ ಆಯುಕ್ತ ವಾಸಣ್ಣ ಅವರ ಈ ಜಮೀನು ಮಂಜೂರಾತಿ ಹಗರಣ ದಂಗೆಯೆಬ್ಬಿಸಿತ್ತು. ಬುಡಾ ಅಧ್ಯಕ್ಷ ಅಬ್ದುಲ್ ರಜಾಕ್ ಮೈನುದ್ದೀನ್ ಬೀನೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಶಾಸಕ ಉಮೇಶ್ ಮೇಟಿ ಹಾಗೂ ಬುಡಾ ಸದಸ್ಯರು ಆಯುಕ್ತರ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸಭೆಯಲ್ಲೇ ಶರಮಾರಿ ಪ್ರಶ್ನೆಗಳನ್ನು ಕೇಳಿದ್ದರು.

ಜನಪ್ರತಿನಿಧಿಗಳ ತೀಕ್ಷ್ಣ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಆಯುಕ್ತರು ಸಭೆಯಲ್ಲೇ ಅಕ್ಷರಶಃ ಬೆವತು ಹೋಗಿದ್ದರು. ಬುಡಾ ಸಭೆಯ ಗಮನಕ್ಕೇ ತರದೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಂತಿಮ ಅನುಮೋದನೆ ನೀಡಿದ್ದಕ್ಕಾಗಿ ಬುಡಾ ಸಭೆಯಲ್ಲಿ ಆಯುಕ್ತ ಆರ್. ವಾಸಣ್ಣ ಅವರ ವಿರುದ್ಧವೇ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ಸರಕಾರಕ್ಕೆ ವರದಿ ರವಾನಿಸಬೇಕು ಎಂದು ಸರ್ವಾನುಮತದ ಠರಾವು (ನಿರ್ಣಯ) ಪಾಸ್ ಮಾಡಲಾಗಿತ್ತು.

ಠರಾವು ಪಾಸಾದರೂ ಆಗದ ಕ್ರಮ: ಶಾಸಕ ಉಮೇಶ್ ಮೇಟಿ ಬರೆದರು ಸುದೀರ್ಘ ಪತ್ರ!

ಪ್ರಾಧಿಕಾರದ ಸಭೆಯಲ್ಲೇ ಆಯುಕ್ತರ ವಿರುದ್ಧ ಅಧಿಕೃತವಾಗಿ ಠರಾವು ಪಾಸಾಗಿದ್ದರೂ ಆಡಳಿತ ಯಂತ್ರ ಮಾತ್ರ ಆಯುಕ್ತರನ್ನು ಮುಟ್ಟುವ ಧೈರ್ಯ ಮಾಡಲಿಲ್ಲ. ಸಭೆಯ ನಿರ್ಣಯಕ್ಕೂ ಬೆಲೆ ಸಿಗದಿದ್ದಾಗ, ಸ್ವತಃ ಶಾಸಕ ಉಮೇಶ್ ಮೇಟಿ ಅವರೇ ಸರ್ಕಾರದ ಕಾರ್ಯದರ್ಶಿಗಳಿಗೆ ಆಯುಕ್ತ ಆರ್. ವಾಸಣ್ಣ ಅವರ ಅಕ್ರಮಗಳ ಸಾಕ್ಷ್ಯಾಧಾರ ಸಮೇತ ಸುದೀರ್ಘವಾದ ದೂರಿನ ಪತ್ರವನ್ನು ಬರೆದರು.

ಆಡಳಿತಾತ್ಮಕವಾಗಿ ಅಧ್ಯಕ್ಷರ ಸಹಿ ಫೋರ್ಜರಿ, ದಿನಾಂಕಗಳ ಗೋಲ್ ಮಾಲ್ ಹಾಗೂ ನಿಯಮಗಳ ಸ್ಪಷ್ಟ ಉಲ್ಲಂಘನೆಯನ್ನು ಪಟ್ಟಿಯ ಸಹಿತ ವಿವರಿಸಿ, ಆಯುಕ್ತರನ್ನು ಕೂಡಲೇ ಅಮಾನತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಾಸಕರು ಆ ಪತ್ರದಲ್ಲಿ ಪಟ್ಟು ಹಿಡಿದಿದ್ದರು. ಆದರೆ, ಶಾಸಕರಂತಹ ಉನ್ನತ ಜನಪ್ರತಿನಿಧಿ ಬರೆದ ಸುದೀರ್ಘ ಪತ್ರಕ್ಕೂ ಸರಕಾರದ ಮಟ್ಟದಲ್ಲಿ ಸೂಕ್ತ ಬೆಲೆ ಸಿಗದಂತೆ ಮಾಡಲಾಯಿತು ಎನ್ನುವುದು ಈಗ ಬಯಲಾಗಿದೆ.

ಪ್ರಭಾವಿ ನಾಯಕನ ‘ಶಕ್ತಿ ಪ್ರದರ್ಶನ’: ಕಮಿಷನರ್ ಕೈಗೊಂಬೆ!

ಈ ಇಡೀ ಅಕ್ರಮ ಜಮೀನು ಮಂಜೂರಾತಿ ಹಗರಣದ ಹಿಂದೆ ಜಮೀನಿನ ಮಾಲೀಕ ವೀರಕುಮಾರಯ್ಯ ಶಿವಯ್ಯ ಮಶಿ ಅವರ ಪ್ರಭಾವಿ ಹಸ್ತವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮ್ಮ ಆಡಳಿತಾತ್ಮಕ ಮತ್ತು ರಾಜಕೀಯ ಪ್ರಭಾವವನ್ನು ಅತಿಯಾಗಿ ಬಳಸಿಕೊಂಡ ವೀರಭದ್ರಯ್ಯ, ಕಮಿಷನರ್ ವಾಸಣ್ಣ ಅವರನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಿ ತಮಗೆ ಬೇಕಾದಂತೆ ಕಡತಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸರಕಾರಿ ನಿಯಮಗಳು, ಇಲಾಖೆಯ ಎನ್‌ಒಸಿ (NOC) ಹಾಗೂ ಸ್ವತಃ ಶಾಸಕರ ಪತ್ರವನ್ನೂ ಬದಿಗೊತ್ತಿ, ಕಮಿಷನರ್ ವಾಸಣ್ಣ ಅವರು ವೀರಭದ್ರಯ್ಯ ಅವರ ಆಜ್ಞಾಧಾರಕನಂತೆ ವರ್ತಿಸಿ ಈ ಕೃತ್ಯ ಎಸಗಿರುವುದು ಸಾರ್ವಜನಿಕರ ಹಾಗೂ ತನಿಖಾ ಸಂಸ್ಥೆಗಳ ಹುಬ್ಬೇರಿಸುವಂತೆ ಮಾಡಿದೆ.

ಗುಳೆದಗುಡ್ಡದ ಪ್ರಭಾವಿ ಮುಖಂಡನ ಕವರ್ ಅಪ್: ಇಂತಹ ಭ್ರಷ್ಟ ಅಧಿಕಾರಿಗಳಿಗೆ ಈತನಿಂದಲೇ ಅಭಯ!

ಶಾಸಕರ ಪತ್ರಕ್ಕೂ ಬೆಲೆ ಸಿಗದಂತೆ ತಡೆದು, ಬುಡಾ ಆಯುಕ್ತ ವಾಸಣ್ಣ ಅವರ ಮೇಲಿನ ಅಮಾನತು ತಡೆದಿದ್ದರ ಹಿಂದೆ ಬೃಹತ್ ರಾಜಕೀಯ ಹಸ್ತ ಕೆಲಸ ಮಾಡಿದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿ. ಹೆಚ್. ವೈ. ಮೇಟಿ ಅವರ ಅತ್ಯಂತ ಆಪ್ತರೆನ್ನಲಾದ, ಗುಳೆದಗುಡ್ಡದ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ಈ ಅಧಿಕಾರಿಯ ರಕ್ಷಣೆಗೆ ನಿಂತಿದ್ದಾರೆ ಎಂದು ಬಲವಾಗಿ ಹೇಳಲಾಗುತ್ತಿದೆ.

ಬೆಂಗಳೂರು ಮಟ್ಟದಲ್ಲಿ ಶಾಸಕ ಉಮೇಶ್ ಮೇಟಿ ಬರೆದ ಸುದೀರ್ಘ ದೂರಿನ ಪತ್ರಕ್ಕೆ ಬೆಲೆ ಸಿಗದಂತೆ ಮಾಡಿ, ಕಡತಗಳು ಮೂಲೆಗೆ ಬೀಳುವಂತೆ ಮಾಡಿದ್ದು ಇದೇ ಗುಳೆದಗುಡ್ಡದ ಪ್ರಭಾವಿ ಮುಖಂಡ ಎನ್ನಲಾಗುತ್ತಿದೆ. ವಾಸ್ತವವಾಗಿ, ಜಿಲ್ಲೆಯಲ್ಲಿ ಆಯುಕ್ತ ವಾಸಣ್ಣ ಅವರಂತಹ ಭ್ರಷ್ಟ ಅಧಿಕಾರಿಗಳು ಗಟ್ಟಿಯಾಗಿ ನೆಲೆಯೂರಿ, ಅಕ್ರಮಗಳನ್ನು ಎಸಗಲು ಹಾಗೂ ಯಾವುದೇ ತನಿಖೆಗೆ ಜಗ್ಗಂದೆ ಮೆರೆಯಲು ಈ ಗುಳೆದಗುಡ್ಡದ ಪ್ರಭಾವಿ ಮುಖಂಡನೇ ಮುಖ್ಯ ಕಾರಣ! ಈ ಮುಖಂಡ ನೀಡುತ್ತಿರುವ ರಾಜಕೀಯ ಅಭಯದಿಂದಾಗಿಯೇ ಆಯುಕ್ತರು ಶಾಸಕರ ದೂರಿಗೂ ಹೆದರದೆ, ಕಚೇರಿಯಿಂದ ದೂರ ಉಳಿದು ಪ್ರಕರಣವನ್ನು ತಂಪು ಮಾಡಲು ಯಶಸ್ವಿಯಾಗುತ್ತಿದ್ದಾರೆ ಎನ್ನುವ ತೀವ್ರ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ: Bagalkote ಕಾಂಗ್ರೆಸ್‌ನಲ್ಲಿ ಹದ್ಲಿ ಟಾರ್ಗೆಟ್! ‘ಕೈ’ಗೆ ನೆಲೆ ತಂದವರ ವಿರುದ್ಧವೇ ‘ಪಿಎ ಶೆಟ್ಟಿ’ ಕುತಂತ್ರ?

ಲೋಕಾಯುಕ್ತರು ಇನ್ನೂ ಕಣ್ಣುಮುಚ್ಚಿ ಕುಳಿತಿದ್ದಾರಾ?

ಇಲ್ಲಿ ಅರ್ಜಿ ಬರುವುದಕ್ಕಿಂತ ಮುಂಚೆಯೇ ಆಯುಕ್ತ ವಾಸಣ್ಣ ಆದೇಶ ನೀಡಿದ್ದಾರೆ, ತಪಾಸಣಾ ವರದಿಗಳಿಲ್ಲದೆ ಅನುಮೋದನೆ ಕೊಟ್ಟಿದ್ದಾರೆ, ಅಧ್ಯಕ್ಷರ ಸಹಿಯನ್ನೇ ನಕಲು ಮಾಡಲಾಗಿದೆ ಹಾಗೂ ಹೆಚ್ಚುವರಿ ಪ್ರಭಾರ (Additional Charge) ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಆಸ್ತಿಗೆ ಕನ್ನ ಹಾಕಲು ಯತ್ನಿಸಲಾಗಿದೆ ಎನ್ನಲಾಗಿದೆ. ಇಷ್ಟೆಲ್ಲಾ ಹಸಿಹಸಿ ಸಾಕ್ಷ್ಯಗಳು ಕಣ್ಣೆದುರಿಗಿದ್ದರೂ ಲೋಕಾಯುಕ್ತ ಸಂಸ್ಥೆ ಇಷ್ಟೊಂದು ಕಣ್ಣುಮುಚ್ಚಿ ಕುಳಿತಿದ್ದೇಕೆ? ಎನ್ನುವ ನೇರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

  • ಶಾಸಕರ ದೂರಿನಲ್ಲಿ ಕ್ರಿಮಿನಲ್ ಸ್ವರೂಪದ ಫೋರ್ಜರಿ ಹಾಗೂ ಅಕ್ರಮದ ಆರೋಪವಿದ್ದರೂ ಲೋಕಾಯುಕ್ತರು ಸ್ವಯಂಪ್ರೇರಿತ ದೂರು (Suo Moto) ದಾಖಲಿಸಿಕೊಳ್ಳದಿರುವುದು ಏಕೆ?
  • ಕಾಗದಪತ್ರಗಳಲ್ಲೇ ಆಯುಕ್ತರ ಅಕ್ರಮದ ಕಥೆ ಎದ್ದು ಕಾಣುತ್ತಿದ್ದರೂ ತನಿಖಾ ತಂಡ ಬುಡಾ ಕಚೇರಿಗೆ ಧಾವಿಸಿ ಕಡತಗಳನ್ನು ಜಪ್ತಿ ಮಾಡದಿರುವುದು ಯಾರ ಒತ್ತಡಕ್ಕೆ ಎನ್ನುವ ಶಂಕೆಗಳು ವ್ಯಕ್ತವಾಗುತ್ತಿವೆ.

ಸಾಮಾನ್ಯ ಜನರು ಸಣ್ಣ ನಿವೇಷನ ಅಥವಾ ಮನೆ ನಿರ್ಮಾಣದ ಪರ್ಮಿಷನ್ ಪಡೆಯಲು ಬುಡಾ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇರುವಾಗ, ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಆಸ್ತಿಯನ್ನು ನುಂಗಲು ಯತ್ನಿಸಿದ ಬುಡಾ ಆಯುಕ್ತರಿಗೆ ರಾಜಕೀಯ ಶ್ರೀರಕ್ಷೆ ನೀಡಿ, ಲೋಕಾಯುಕ್ತದಂತಹ ಸಂಸ್ಥೆಗಳು ನಿಷ್ಕ್ರಿಯವಾದರೆ ವ್ಯವಸ್ಥೆಯ ಮೇಲೆ ಜನರಿಗಿರುವ ಭರವಸೆ ಸಂಪೂರ್ಣವಾಗಿ ಕುಸಿಯಲಿದೆ.

ಬುಡಾದಲ್ಲಿ (BUDA) ನಡೆದಿರುವ ಈ ಭೂ-ಅಕ್ರಮವು ಈಗ ಬರೀ ಒಂದು ಕಚೇರಿಯ ವಿಚಾರವಾಗಿ ಉಳಿಬಾರದು; ಬದಲಿಗೆ ಭ್ರಷ್ಟ ಆಯುಕ್ತ ವಾಸಣ್ಣ ಮತ್ತು ಅವರಿಗೆ ಅಭಯ ನೀಡುತ್ತಿರುವ ರಾಜಕೀಯ ಶಕ್ತಿಗಳ ವಿರುದ್ಧದ ಹೋರಾಟವಾಗಬೇಕಿದೆ. ಶಾಸಕರು ಬರೆದ ಸುದೀರ್ಘ ಪತ್ರಕ್ಕೂ ಬೆಲೆ ನೀಡದೆ ಗುಳೆದಗುಡ್ಡದ ಪ್ರಭಾವಿ ಮುಖಂಡನ ಮಾತು ಕೇಳುತ್ತಿರುವ ಸರಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ಭ್ರಷ್ಟ ಆಯುಕ್ತ ವಾಸಣ್ಣ ಅವರನ್ನು ತಕ್ಷಣವೇ ಅಮಾನತುಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸದಿದ್ದರೆ ಮತ್ತು ಲೋಕಾಯುಕ್ತರು ತನಿಖೆ ಆರಂಭಿಸದಿದ್ದರೆ, ಬಾಗಲಕೋಟೆಯ ಜನತೆ ಬೀದಿಗಿಳಿದು ಹೋರಾಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ..!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments