ಬಾಗಲಕೋಟೆ (Bagalkote) ಜಿಲ್ಲಾ ರಾಜಕೀಯದ ಇತಿಹಾಸವನ್ನು ಬಲ್ಲವರಿಗೆ, ಈ ನೆಲದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವುದು ಎಷ್ಟು ಸವಾಲಿನ ಕೆಲಸವಾಗಿತ್ತು ಎಂಬುದು ಚೆನ್ನಾಗಿ ಗೊತ್ತಿದೆ. ಒಂದು ಕಾಲದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯ ಭದ್ರಕೋಟೆಯಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ‘ಕೈ’ ಪಾಳಯ ಗಟ್ಟಿಯಾಗಿ ನಿಂತಿದೆ ಎಂದರೆ, ಅದಕ್ಕೆ ಹಲವು ನಾಯಕರ ವರ್ಷಗಳ ರಕ್ತ ಮತ್ತು ಬೆವರಿನ ಪರಿಶ್ರಮವಿದೆ. ಆದರೆ, ರಾಜಕೀಯದಲ್ಲಿ ಅಧಿಕಾರ ಹತ್ತಿರವಾಗುತ್ತಿದ್ದಂತೆ, ಕಷ್ಟಕಾಲದಲ್ಲಿ ಪಕ್ಷಕ್ಕೆ ಹೆಗಲು ಕೊಟ್ಟವರನ್ನೇ ಮೂಲೆಗುಂಪು ಮಾಡುವ ಹಳೇ ಚಾಳಿ ಮತ್ತೆ ಶುರುವಾದಂತೆ ಕಾಣುತ್ತಿದೆ. ಸದ್ಯ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ್ ಹದ್ಲಿ (Nagaraj Hadli) ಅವರ ಸುತ್ತ ಸೃಷ್ಟಿಸಲಾಗಿರುವ ವಿವಾದ ಮತ್ತು ಅವರ ವಿರುದ್ಧ ಕೇಳಿಬರುತ್ತಿರುವ ಶಿಸ್ತು ಕ್ರಮದ ಕೂಗು ಕೇವಲ ಸದ್ಧಾಂತಿಕ ಸಂಘರ್ಷವಲ್ಲ, ಬದಲಿಗೆ ಬಾಗಲಕೋಟೆ ಕಾಂಗ್ರೆಸ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ತೆರೆಮರೆಯಲ್ಲಿ ನಡೆಯುತ್ತಿರುವ ದೊಡ್ಡದೊಂದು ರಾಜಕೀಯ ಹತ್ಯೆಯ ಭಾಗ ಎನ್ನುವ ಮಾತುಗಳು ಈಗ ಜೋರಾಗಿ ಕೇಳಿಬರುತ್ತಿವೆ.
ಸೌಹಾರ್ದ ಭೇಟಿಗೆ ‘ಸಿದ್ಧಾಂತ’ದ ಬಣ್ಣ ಬಳಿದವರಾರು?
ಕಳೆದ ಜೂನ್ 21 ರಂದು ಬೆಳಗಾವಿಯಲ್ಲಿ ನಡೆದ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಗರಾಜ್ ಹದ್ಲಿ ಅವರು ಭಾಗವಹಿಸಿ, ಸಂಘದ ಪ್ರಮುಖರನ್ನು ಭೇಟಿ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜಿಲ್ಲೆಯ ಕೆಲವು ಹಿತಶತ್ರುಗಳು, ಹದ್ಲಿ ವಿರುದ್ಧ ರಾಜ್ಯ ನಾಯಕರಿಗೂ ದೂರು ನೀಡಲು ತರಾತುರಿ ನಡೆಸಿದ್ದಾರೆ. ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಂಘದ ನೋಂದಣಿ ವಿಚಾರವಾಗಿ ನೀಡಿರುವ ಹೇಳಿಕೆಗಳನ್ನು ಮುಂದಿಟ್ಟುಕೊಂಡು, ಹದ್ಲಿ ಅವರ ನಿಷ್ಠೆಯನ್ನೇ ಪ್ರಶ್ನಿಸುವ ಮಟ್ಟಿಗೆ ಈ ವಿವಾದವನ್ನು ದೊಡ್ಡದು ಮಾಡಲಾಗುತ್ತಿದೆ. ಆದರೆ, ಜಿಲ್ಲಾ ಕಾಂಗ್ರೆಸ್ನ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಇದು ಸಿದ್ಧಾಂತದ ಮೇಲಿನ ಪ್ರೀತಿಯಿಂದ ಪ್ರೇರಿತವಾದ ಪ್ರತಿಭಟನೆಯಲ್ಲ. ಬದಲಿಗೆ, ಮುಂಬರುವ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪುನಾರಚನೆ ಹಾಗೂ ಪದಾಧಿಕಾರಿಗಳ ಬದಲಾವಣೆಯಾಗಲಿದ್ದು, ಆ ಸಂದರ್ಭದಲ್ಲಿ ನಾಗರಾಜ್ ಹದ್ಲಿ ಅವರಂತಹ ಪ್ರಭಾವಿ ಮತ್ತು ಜನಪ್ರಿಯ ನಾಯಕನನ್ನು ರೇಸ್ನಿಂದ ಹೊರದಬ್ಬಲು ಹೆಣೆಯಲಾದ ವ್ಯವಸ್ಥಿತ ಕುತಂತ್ರ ಎನ್ನಲಾಗುತ್ತಿದೆ.
‘ಪಿಎ ಶೆಟ್ಟಿ’ ಎಂಬ ಹೆಸರಿನ ಸುತ್ತ ಸುತ್ತುತ್ತಿದೆ ಸಂಚಿನ ಸುಳಿ!
ಬಾಗಲಕೋಟೆ (Bagalkote) ಕಾಂಗ್ರೆಸ್ ವಲಯದಲ್ಲಿ ಸದ್ಯ ಅತ್ಯಂತ ಖಾರವಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ, ಈ ಇಡೀ ವಿವಾದದ ಸೂತ್ರಧಾರ ಯಾರು ಎನ್ನುವುದು. ಜಿಲ್ಲಾ ರಾಜಕೀಯದ ಆಂತರಿಕ ಮೂಲಗಳ ಪ್ರಕಾರ, ನಾಗರಾಜ್ ಹದ್ಲಿ ಅವರ ಬೆಳವಣಿಗೆಯನ್ನು ಸಹಿಸದ, ತಾನೇ ಬಾಗಲಕೋಟೆ ಕಾಂಗ್ರೆಸ್ನ ಸರ್ವಾಧಿಕಾರಿಯಾಗಬೇಕು ಎಂಬ ಹಪಾಹಪಿತನ ಹೊಂದಿರುವ ‘ಪಿಎ ಶೆಟ್ಟಿ’ ಕಡೆಗೆ ಎಲ್ಲರ ಬೆರಳುಗಳು ರಾರಾಜಿಸುತ್ತಿವೆ. ತಳಮಟ್ಟದಲ್ಲಿ ಯಾವುದೇ ಜನಾಧಾರವಿಲ್ಲದಿದ್ದರೂ, ಕೇವಲ ರಾಜ್ಯ ಕಾಂಗ್ರೆಸ್ ನಾಯಕರ ಜೊತೆಗಿನ ಒಡನಾಟ ಹಾಗೂ ಓಡಾಟಗಳನ್ನೇ ಬಂಡವಾಳ ಮಾಡಿಕೊಂಡಿರುವ ಈ ‘ಪಿಎ ಶೆಟ್ಟಿ’, ಹದ್ಲಿ ಅವರ ಹೆಗಲ ಮೇಲೆ ಸಿದ್ಧಾಂತದ ತೂಗುಗತ್ತಿ ಇಡಲು ದೀರ್ಘಾವಧಿಯ ಸ್ಕೆಚ್ ಹಾಕಿದ್ದಾರೆ ಎನ್ನುವ ಗಂಭೀರ ಆರೋಪಗಳು ಕಾಂಗ್ರೆಸ್ ಒಳಗಿನಿಂದಲೇ ಕೇಳಿಬರುತ್ತಿವೆ. ಹದ್ಲಿ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು ಎನ್ನುವ ಹಳೆಯ ಇತಿಹಾಸದ ಮೂಟೆಯನ್ನು ಈಗ ಸಾರ್ವಜನಿಕವಾಗಿ ಬಿಚ್ಚಿಟ್ಟು, ಆ ಮೂಲಕ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಬಾಗಲಕೋಟೆ ರಾಜಕಾರಣದಲ್ಲಿ ತಮಗೆ ಎದುರಾಳಿಯೇ ಇರುವುದಿಲ್ಲ ಎನ್ನುವುದು ಈ ‘ಪಿಎ ಶೆಟ್ಟಿ’ಯ ಲೆಕ್ಕಾಚಾರ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ: Holebasu Shettar: ಚಹಾ ಕೊಡ್ತಿದ್ದವನು ಚೇರ್ಮನ್ ರೇಂಜ್ಗೆ ಬೆಳೆದಿದ್ದು ಹೇಗೆ? ಅಕ್ರಮಗಳ ಕಿಂಗ್ಪಿನ್ನ ಅಸಲಿ ಮುಖವಾಡ ಬಯಲು!
ಪಕ್ಷಕ್ಕೆ ನೆಲೆ ತಂದವರನ್ನೇ ಸೈಡ್ಲೈನ್ ಮಾಡುವ ಹುನ್ನಾರ
ಇತಿಹಾಸವನ್ನು ತಿರುವಿ ಹಾಕಿದರೆ, ನಾಗರಾಜ್ ಹದ್ಲಿ ಮತ್ತು ಅವರ ತಂಡ ಬಾಗಲಕೋಟೆ ಕಾಂಗ್ರೆಸ್ಗೆ ಮಾಡಿರುವ ಉಪಕಾರ ಸಣ್ಣದೇನಲ್ಲ. 2004 ಮತ್ತು 2008ರ ವಿಧಾನಸಭಾ ಚುನಾವಣೆಗಳಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಅವರ ಗೆಲುವಿನ ಹಿಂದೆ ಇದೇ ಹದ್ಲಿ ತಂಡದ ಪರಿಶ್ರಮವಿತ್ತು. ಆದರೆ ಆ ಅಲ್ಲಿಯ ಏಕಚಕ್ರಾಧಿಪತ್ಯ ಹಾಗೂ ಅಹಂಕಾರದ ವರ್ತನೆಯಿಂದ ಬೇಸತ್ತು, 2012ರಲ್ಲಿ ಹದ್ಲಿ ತಮ್ಮಬೃಹತ್ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ಆ ಸಮಯದಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕೇವಲ ಹೆಸರಿಗಷ್ಟೇ ಇತ್ತು. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಗುಳೆದಗುಡ್ಡದಿಂದ ಬಾಗಲಕೋಟೆಗೆ ವಲಸೆ ಬಂದು ಮೊದಲ ಚುನಾವಣೆಯಲ್ಲಿ ಸೋತು ಕಂಗೆಟ್ಟಿದ್ದ ದಿ. ಎಚ್.ವೈ. ಮೇಟಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ನಾಗರಾಜ್ ಹದ್ಲಿ ಮತ್ತು ಅವರ ಬೆಂಬಲಿಗರ ಪಡೆ. 2018ರ ಹಿನ್ನಡೆಯನ್ನು ಹೊರತುಪಡಿಸಿದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲು ಎಚ್.ವೈ. ಮೇಟಿ ಅವರ ಜನಪ್ರಿಯತೆ ಎಷ್ಟು ಕಾರಣವೋ, ಹದ್ಲಿ ತಂಡದ ಚುನಾವಣಾ ರಣತಂತ್ರವೂ ಅಷ್ಟೇ ಪ್ರಮುಖವಾಗಿತ್ತು. ಇಂತಹ ನಾಯಕನನ್ನು ಇಂದು ಕೇವಲ ಒಂದು ಸೌಹಾರ್ದಯುತ ಭೇಟಿಯ ಕಾರಣಕ್ಕೆ ಮೂಲೆಗುಂಪು ಮಾಡಲು ಹೊರಟಿರುವುದು ಪಕ್ಷದ ಹಿತದೃಷ್ಟಿಯಿಂದ ಎಷ್ಟು ಸರಿ ಎನ್ನುವ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.
ಉಪಚುನಾವಣೆ ಗೆಲುವಿನ ‘ಕ್ರೆಡಿಟ್’ ಕಳ್ಳತನ!
ಇತ್ತೀಚೆಗೆ ಶಾಸಕ ಎಚ್.ವೈ. ಮೇಟಿ ಅವರ ಹಠಾತ್ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಉಮೇಶ್ ಮೇಟಿ ಅವರು ಭರ್ಜರಿ ಗೆಲುವು ಸಾಧಿಸಿದರು. ಈ ಗೆಲುವಿನ ಹಿಂದೆ ತಂದೆಯ ನಿಧನದಿಂದ ಸೃಷ್ಟಿಯಾದ ಅನುಕಂಪದ ಅಲೆ ಇದ್ದದ್ದು ಹೌದಾದರೂ, ಮತಗಟ್ಟೆ ಮಟ್ಟದಲ್ಲಿ ಹಗಲಿರುಳು ಶ್ರಮಿಸಿ ತಂತ್ರ ರೂಪಿಸಿದ್ದು ಇದೇ ನಾಗರಾಜ್ ಹದ್ಲಿ ಮತ್ತು ಅವರ ತಂಡ. ಆದರೆ, ಚುನಾವಣೆ ಮುಗಿದು ಫಲಿತಾಂಶ ಬರುತ್ತಿದ್ದಂತೆ, ಈ ಇಡೀ ಗೆಲುವಿನ ‘ಕ್ರೆಡಿಟ್’ ಅನ್ನು ತನ್ನ ಖಾತೆಗೆ ಹಾಕಿಕೊಳ್ಳಲು ಇದೇ ‘ಪಿಎ ಶೆಟ್ಟಿ’ ಮುಂದಾಗಿದ್ದಾನೆ ಎಂಬ ಆಕ್ರೋಶ ಹದ್ಲಿ ಬೆಂಬಲಿಗರಲ್ಲಿ ಮನೆಮಾಡಿದೆ. ಉಮೇಶ್ ಮೇಟಿ ಅವರ ಜೊತೆಯಲ್ಲೇ ಓಡಾಡುತ್ತಾ, ರಾಜ್ಯ ನಾಯಕರ ಕಣ್ಣಿಗೆ ತಾನೇ ಈ ಚುನಾವಣೆಯನ್ನು ಗೆಲ್ಲಿಸಿಕೊಟ್ಟ ಮಹಾವೀರ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಈ ವ್ಯಕ್ತಿ, ಈಗ ಹದ್ಲಿ ಅವರನ್ನು ಸೈಡ್ಲೈನ್ ಮಾಡಲು ತನ್ನ ಆಪ್ತ ಬಳಗವನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.
ದೂರು ನೀಡಿದ ಮುಖವಾಡದ ಹಿಂದಿರುವ ಅಸಲಿಯತ್ತೇನು?
ನಾಗರಾಜ್ ಹದ್ಲಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ದೂರು ನೀಡಿರುವ ವ್ಯಕ್ತಿಯ ಹಿನ್ನೆಲೆಯನ್ನು ಕೆದಕಿದರೆ, ಈ ಇಡೀ ನಾಟಕದ ಆಳ-ಅಗಲ ಅರ್ಥವಾಗುತ್ತದೆ. ದೂರು ನೀಡಿರುವ ಆ ಸಾಚಾ ವ್ಯಕ್ತಿ ಕಾಂಗ್ರೆಸ್ನ ಯಾವುದೇ ಅಧಿಕೃತ ಪದಾಧಿಕಾರಿಯೋ ಅಲ್ಲ! ಈ ಹಿಂದೆ ಒಮ್ಮೆ MIM ಪಕ್ಷದಲ್ಲಿ, ಮತ್ತೊಮ್ಮೆ SDPI ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈತ, ಈಗ ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಹೊಸದೊಂದು ತಂಡವನ್ನು ಕಟ್ಟಿಕೊಂಡು ಬಂದು ದೂರು ನೀಡಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೂ ಈತನಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಈತ ನೇರವಾಗಿ ಜಿಲ್ಲಾ ಅಧ್ಯಕ್ಷರ ಬಳಿ ಹೋಗಿ ದೂರು ನೀಡಲು ಧೈರ್ಯ ಮಾಡಿದ್ದಾನೆ ಎಂದರೆ, ಆತನ ಹಿಂದೆ ಕಾಂಗ್ರೆಸ್ ಒಳಗಿನ ಪ್ರಭಾವಿ ಶಕ್ತಿಯ ಬೆಂಬಲವಿದೆ ಎನ್ನುವುದು ಸ್ಪಷ್ಟ. ಈ ದೂರುದಾರ ಮತ್ಯಾರೂ ಅಲ್ಲ, ಹದ್ಲಿ ಅವರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿರುವ ಅದೇ ‘ಪಿಎ ಶೆಟ್ಟಿ’ಯ ಪರಮ ಬಂಟ ಎನ್ನುವ ರಹಸ್ಯ ಮಾಹಿತಿ ಈಗ ಹೊರಬಿದ್ದಿದೆ. ಅಲ್ಪಸಂಖ್ಯಾತ ಸಮುದಾಯದ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು, ಪಕ್ಷದಲ್ಲಿ ಒಡಕು ಮೂಡಿಸಿ, ಬಾಗಲಕೋಟೆ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತನ್ನ ಕಂಟ್ರೋಲ್ಗೆ ತೆಗೆದುಕೊಳ್ಳಲು ಈ ‘ಪಿಎ ಶೆಟ್ಟಿ’ ನಡೆಸಿರುವ ಈ ಕುತಂತ್ರ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಲಿಂಗಾಯತ ಯುವ ವೇದಿಕೆಯ ತಿರುಗೇಟು
ಹದ್ಲಿ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಬಾಗಲಕೋಟೆ ಲಿಂಗಾಯತ ಯುವ ವೇದಿಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತೊಂದು ಪತ್ರ ಬರೆದು ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ. ಪಕ್ಷಕ್ಕಾಗಿ ನಿರಂತರವಾಗಿ ದುಡಿದಿರುವ ನಾಗರಾಜ್ ಹದ್ಲಿ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ, ಸುಳ್ಳು ಆರೋಪಗಳನ್ನು ಮಾಡಿ ದೂರು ನೀಡಿರುವವರ ಮೇಲೆಯೇ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಬಾಗಲಕೋಟೆ ಕಾಂಗ್ರೆಸ್ನಲ್ಲಿ ಹದ್ಲಿ ಮತ್ತು ಅವರ ತಂಡದ ಅನಿವಾರ್ಯತೆ ಹಾಗೂ ಪ್ರಭಾವ ಎಷ್ಟಿದೆ ಎಂಬುದಕ್ಕೆ ಲಿಂಗಾಯತ ಯುವ ವೇದಿಕೆಯ ಈ ಖಡಕ್ ತಿರುಗೇಟೇ ಸಾಕ್ಷಿ.
ಇದನ್ನೂ ಓದಿ: Media Masala: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!
ಶಾಸಕ ಉಮೇಶ್ ಮೇಟಿ ಅವರೇ, ಇಂದಾದರೂ ಎಚ್ಚೆತ್ತುಕೊಳ್ಳಿ!
ಇತ್ತೀಚಿನ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಯುವ ಶಾಸಕ ಉಮೇಶ್ ಮೇಟಿ ಅವರ ಮೇಲೆ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ತಂದೆ ದಿ. ಎಚ್.ವೈ. ಮೇಟಿ ಅವರು ಕಷ್ಟಪಟ್ಟು ಸಂಪಾದಿಸಿದ ರಾಜಕೀಯ ಗತ್ತನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಉಮೇಶ್ ಅವರ ಮೇಲಿದೆ. ಆದರೆ, ಈ ಇಡೀ ಪ್ರಸಂಗದ ಬಳಿಕವಾದರೂ ಶಾಸಕರು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ತಮ್ಮ ಸುತ್ತಮುತ್ತ ಯಾರಿರಬೇಕು, ಯಾರ ಸಲಹೆ ಕೇಳಬೇಕು ಮತ್ತು ಯಾರಿಗೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ಅವರು ಗಂಭೀರವಾಗಿ ನಿರ್ಣಯಿಸಬೇಕಾದ ಕಾಲ ಈಗ ಬಂದಿದೆ.
ಏಕೆಂದರೆ, ಪಕ್ಷಕ್ಕಾಗಿ ದಶಕಗಳ ಕಾಲ ರಕ್ತ-ಬೆವರು ಹರಿಸಿದ ನಾಗರಾಜ್ ಹದ್ಲಿ ಅವರಂತಹ ನಾಯಕರ ವಿರುದ್ಧವೇ ಇಷ್ಟೊಂದು ಕೆಟ್ಟದಾಗಿ ಕುತಂತ್ರದ ಜಾಲ ಹೆಣೆಯುತ್ತಿರುವ ಈ ‘ಪಿಎ ಶೆಟ್ಟಿ’, ನಾಳೆ ಸ್ವತಃ ಶಾಸಕ ಉಮೇಶ್ ಮೇಟಿ ಅವರ ವಿರುದ್ಧವೇ ಇದೇ ರೀತಿಯ ಚಕ್ರವ್ಯೂಹ ರಚಿಸಲು ಹಿಂಜರಿಯಲಾರ! ರಾಜಕೀಯದಲ್ಲಿ ಹಿತಶತ್ರುಗಳನ್ನು ಅತಿಯಾಗಿ ನಂಬಿದರೆ, ಭವಿಷ್ಯದಲ್ಲಿ ಸ್ವಂತ ಕ್ಷೇತ್ರದಲ್ಲೇ ನಿಲ್ಲಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೆತ್ತ ತಂದೆಯ ಜೊತೆ ನಿಂತು ಬೆನ್ನೆಲುಬಾಗಿದ್ದವರನ್ನು ಮೂಲೆಗುಂಪು ಮಾಡಲು ಹೊರಟಿರುವ ‘ಅದೃಶ್ಯ ಕೈ’ಗಳನ್ನು ಗುರುತಿಸಿ, ಶಾಸಕರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಸ್ವಯಂಕೃತ ಅಪರಾಧಕ್ಕೆ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳು ಈಗ ಬಾಗಲಕೋಟೆ ಕಾಂಗ್ರೆಸ್ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿವೆ.
ರಾಜಕೀಯದಲ್ಲಿ ಸೌಹಾರ್ದತೆ ಮತ್ತು ವೈಯಕ್ತಿಕ ಸಂಬಂಧಗಳು ಪಕ್ಷದ ಚೌಕಟ್ಟನ್ನು ಮೀರಿದ್ದಾಗಿರುತ್ತವೆ. ಇದನ್ನು ಅರಿಯದ ಅಥವಾ ಅರಿತೂ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವ ಆಂತರಿಕ ಕುತಂತ್ರಿಗಳು ನಡೆಸುತ್ತಿರುವ ಈ ‘ಪಿಎ ಶೆಟ್ಟಿ ಕುತಂತ್ರ’ಕ್ಕೆ ಜಿಲ್ಲಾ ಕಾಂಗ್ರೆಸ್ ಬಲಿಯಾಗುತ್ತದೆಯೇ ಅಥವಾ ನಿಷ್ಠಾವಂತ ನಾಯಕನ ಪರವಾಗಿ ನಿಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಇಂತಹ ನಕಲಿ ದೂರುಗಳಿಗೆ ಮಣಿದು, ಬಾಗಲಕೋಟೆಯಲ್ಲಿ ಪಕ್ಷಕ್ಕೆ ಅಸ್ತಿತ್ವ ತಂದುಕೊಟ್ಟ ನಾಯಕರ ವಿರುದ್ಧವೇ ಕ್ರಮಕ್ಕೆ ಮುಂದಾದರೆ, ಅದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ತನಗೆ ತಾನೇ ತೋಡಿಕೊಳ್ಳುವ ರಾಜಕೀಯ ಗೋರಿಯಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

