Friday, September 11, 2026
Home ವಿಶ್ಲೇಷಣೆ Satish Jarkiholi: ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು! ಸಾಹುಕಾರನ ‘ನಿಗೂಢ’ ಮಾತುಗಳ ಅಸಲಿ ಅರ್ಥವೇನು?

Satish Jarkiholi: ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು! ಸಾಹುಕಾರನ ‘ನಿಗೂಢ’ ಮಾತುಗಳ ಅಸಲಿ ಅರ್ಥವೇನು?

Satish Jarkiholi: ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು! ಸಾಹುಕಾರನ ‘ನಿಗೂಢ’ ಮಾತುಗಳ ಅಸಲಿ ಅರ್ಥವೇನು?

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಕುಟುಂಬ ಹಾಗೂ ಅವರ ಆಪ್ತರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಸುದೀರ್ಘ 36 ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯ ಸದ್ಯಕ್ಕೆ ಮುಕ್ತಾಯಗೊಂಡಿರಬಹುದು. ಆದರೆ ದಾಳಿಯ ಬಳಿಕ ಸಾಹುಕಾರ್ ನಡೆಸಿದ ಸುದ್ದಿಗೋಷ್ಠಿ ಮೇಲ್ನೋಟಕ್ಕೆ ಎಷ್ಟು ಶಾಂತ ಹಾಗೂ ಸಹಜ ಎಂಬಂತೆ ಕಂಡುಬಂದಿತ್ತೋ, ಅವರ ಮಾತುಗಳ ಆಳದಲ್ಲಿದ್ದ ರಾಜಕೀಯ ತಂತ್ರಗಾರಿಕೆ, ಕಾನೂನಾತ್ಮಕ ತಡವರಿಕೆ ಹಾಗೂ ಅಪ್ರತ್ಯಕ್ಷ ಅಪರಾಧ ಒಪ್ಪಿಗೆಯ ಸುಳಿವುಗಳು ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿವೆ. ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡ ಕೆಲವು ಸೂಕ್ಷ್ಮ ಹಾಗೂ ಅತಿ ಮುಖ್ಯ ವಿಚಾರಗಳ‌ ವಿಶ್ಲೇಷಣೆ ಇಲ್ಲಿದೆ…

‘ಸ್ವಯಂ ಅಪರಾಧ ಒಪ್ಪಿಗೆ’: “ನಾವು ಸಣ್ಣ ತಪ್ಪು ಮಾಡಿರಬಹುದು…”!

ಸತೀಶ್ ಜಾರಕಿಹೊಳಿ (Satish Jarkiholi) ಅವರ ಈ ಇಡೀ ಸುದ್ದಿಗೋಷ್ಠಿಯ ಅತ್ಯಂತ ಧ್ವನಿಪೂರ್ಣ ಹಾಗೂ ಗಂಭೀರ ಸಾಲು ಎಂದರೆ: “ನಾವು ಸಣ್ಣ ತಪ್ಪು ಮಾಡಿರಬಹುದು, ನೂರಕ್ಕೆ ನೂರು ನಾವೆಲ್ಲಾ ಸರಿ ಅಂತ ಹೇಳೋಕೆ ಆಗಲ್ಲ…” ಎಂಬುದು. ಒಬ್ಬ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಹಿರಿಯ ನಾಯಕ, ತನಿಖಾ ಸಂಸ್ಥೆಯ ದಾಳಿ ನಡೆದ ತಕ್ಷಣ ಮಾಧ್ಯಮಗಳ ಮುಂದೆ ನಿಂತು, “ನಾವು ತಪ್ಪು ಮಾಡಿರಬಹುದು” ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವುದು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಕೇವಲ ಆತ್ಮಸಾಕ್ಷಿಯ ಮಾತಲ್ಲ; ಬದಲಿಗೆ ಅದೊಂದು ಅಪರಾಧದ ಪ್ರತ್ಯಕ್ಷ/ಅಪ್ರತ್ಯಕ್ಷ ಒಪ್ಪಿಗೆ (Admission of Guilt).

ತಪ್ಪು ಸಣ್ಣದಿರಲಿ ಅಥವಾ ದೊಡ್ಡದಿರಲಿ, ಕಾನೂನಿನ ಕಣ್ಣಿನಲ್ಲಿ ತಪ್ಪು ತಪ್ಪೇ. “ನಮಗಿಂತ ದೊಡ್ಡ ತಪ್ಪು ಮಾಡಿದವರು ಬಿಜೆಪಿಯಲ್ಲಿದ್ದಾರೆ, ಅವರನ್ನು ಬಿಟ್ಟು ಸಣ್ಣ ಮೀನಾದ ನಮ್ಮನ್ನು ಹಿಡಿಯುತ್ತಿದ್ದಾರೆ” ಎಂಬ ಸಮರ್ಥನೆ ನೀಡುವ ಮೂಲಕ, ತಾವಿಲ್ಲಿ ರಾಜಕೀಯವಾಗಿ “ಸಣ್ಣ ಮೀನು” ಎನಿಸಿಕೊಂಡಿರಬಹುದು, ಆದರೆ ತಪ್ಪು ಮಾಡಿದ್ದೇವೆಂಬ ವಿಚಾರವನ್ನು ತಾವೇ ಅಧಿಕೃತವಾಗಿ ದೃಢಪಡಿಸಿಕೊಂಡಿದ್ದಾರೆ! ಇದು ಮುಂಬರುವ ತನಿಖೆಯಲ್ಲಿ ಅವರಿಗೆ ಬೂಮರಾಂಗ್ ಆಗುವುದು ನಿಶ್ಚಿತ.

ವಿದೇಶಿ ಹೂಡಿಕೆ ಹಾಗೂ ‘ಫೆಮಾ’ (FEMA) ಸುಳಿ: “ಅವರು ಮಾಡಿದೀವಿ ಅಂತಾರೆ, ನಾವು ಮಾಡ್ತಿದ್ದೀವಿ ಅಂತೀವಿ”

ವಿದೇಶದಲ್ಲಿ ಹಣ ಹೂಡಿಕೆ ಮಾಡಿರುವ ವಿಚಾರದಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ನೀಡಿರುವ ಹೇಳಿಕೆ ಅತ್ಯಂತ ವೈಪರೀತ್ಯದಿಂದ ಕೂಡಿದೆ. “ಅವರು ಹೂಡಿಕೆ ಮಾಡಿದ್ದೀರಾ ಎಂದು ಲೆಕ್ಕ ತಂದಿದ್ದಾರೆ, ಆದರೆ ನಾವು ಇನ್ನು ಹೂಡಿಕೆ ಮಾಡುತ್ತಿದ್ದೇವೆ, ಅದಕ್ಕೆ ಆರ್‌ಬಿಐ (RBI) ಹಾಗೂ ಲೀಗಲ್ ಪರ್ಮಿಷನ್ ತೆಗೆದುಕೊಳ್ಳಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅಂದರೆ, ವಿದೇಶದಲ್ಲಿ ಹಣ ಹೂಡಿಕೆ ಮಾಡುವ ಪ್ರಯತ್ನ ನಡೆದಿರುವುದು ಸತ್ಯ. ಆದರೆ, ಸೂಕ್ತ ಪ್ರಕ್ರಿಯೆಗಳು ಹಾಗೂ ಅನುಮತಿ ಪೂರ್ಣಗೊಳ್ಳುವ ಮೊದಲೇ ಹಣ ವಿದೇಶಕ್ಕೆ ಹರಿದುಹೋಗಿದೆಯೇ? ಅದಕ್ಕಾಗಿಯೇ ಇಡಿ ‘ಫಾರೆನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್’ (FEMA) ಅಡಿಯಲ್ಲಿ ತನಿಖೆಗೆ ಬಂದಿದೆಯೇ? ಎಂಬ ಬಲವಾದ ಅನುಮಾನ ಮೂಡುತ್ತದೆ. ಆರ್‌ಬಿಐ ಅನುಮತಿ ಪಡೆಯುವ ಮೊದಲೇ ಯಾವುದೇ ಹಣಕಾಸಿನ ವಹಿವಾಟುಗಳು ಆರಂಭವಾಗಿದ್ದರೆ, ಅದು ನೇರವಾಗಿ ಕಾನೂನು ಬಾಹಿರ ಹಣ ವರ್ಗಾವಣೆಯ ವ್ಯಾಪ್ತಿಗೆ ಬರುತ್ತದೆ.

ಇದನ್ನೂ ಓದಿ: ‘ದಾರಿ ತಪ್ಪಿದ ಮಗ’ ಆದ್ರಾ ಮೇಟಿ ಪುತ್ರ? ಗೆಲುವಿನ ಬೆನ್ನಲ್ಲೇ ಉಮೇಶ್ ನಡೆ ಬದಲು; ನಂಬಿ ಟಿಕೆಟ್ ಕೊಡಿಸಿದವರಿಗೇ ಭ್ರಮನಿರಸನ!

ಕೋಟಿ ಕೋಟಿ ನಗದು ಪತ್ತೆ: “ದುಡ್ಡು ನಮ್ಮದೇ ಅಂತ ಒಪ್ಪಿಕೊಂಡಿದ್ದೀವಿ”

ದಾಳಿಯ ವೇಳೆ ಸಿಕ್ಕ ಕೋಟ್ಯಂತರ ರೂಪಾಯಿ ನಗದಿನ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡುತ್ತಾ, “1-2 ಕೋಟಿ ಸಿಕ್ಕಿದೆ, ಅವೆಲ್ಲಾ ನಾಮ್ಮದೇ ಅಂತ ನಾವು ಒಪ್ಪಿಕೊಂಡಿದೀವಿ” ಎಂದು ಹೇಳಿದ್ದಾರೆ. ಮನೆಯಲ್ಲಿ ದೊರೆತ ಹಣಕ್ಕೆ ತಕ್ಷಣ ಸೂಕ್ತ ದಾಖಲೆ ನೀಡಲು ಸಾಧ್ಯವಾಗದೆ, “ದಾಖಲೆ ಕೊಟ್ಟು ಆಮೇಲೆ ವಾಪಸ್ ತಗೋತೀವಿ” ಎನ್ನುವುದು ಸಾಮಾನ್ಯ ರಾಜಕಾರಣಿಯೊಬ್ಬನ ಹಾರಿಕೆ ಉತ್ತರದಂತೆ ಕಾಣುತ್ತದೆ. ಕೋಟಿ ಕೋಟಿ ಹಣವನ್ನು ಮನೆಯಲ್ಲಿಟ್ಟುಕೊಂಡು, ಅದು ಇಡಿ ವಶಕ್ಕೆ ಹೋದ ಬಳಿಕ “ದಾಖಲೆ ಕೊಡ್ತೀವಿ” ಎನ್ನಲು ಇದು ಕೇವಲ ಹಣಕಾಸಿನ ಸಣ್ಣ ಅಡಚಣೆಯಲ್ಲ, ಬದಲಿಗೆ ಲೆಕ್ಕಕ್ಕೆ ಸಿಗದ ಕಪ್ಪುಹಣದ ನೆರಳು ಎನ್ನುವುದನ್ನು ಎತ್ತಿ ತೋರಿಸುತ್ತದೆ.

‘ದಾಳಿಯಲ್ಲ, ಬರೀ ಸರ್ಚ್’: ಶಬ್ದಗಳ ಕಸರತ್ತು ಮತ್ತು ಭಯದ ನೆರಳು

“ಇದು ದಾಳಿಯಲ್ಲ, ಬರೀ ಸರ್ಚ್ ಆಗಿದೆ”, “ಇನ್ನು ನೋಟೀಸ್ ನಿಂದ ತನಿಖೆ ಶುರುವಾಗಲಿದೆ”, “ಕಂಟಕದಿಂದ ಪಾರಾಗಿದ್ದೀವಾ ಅಂತ ಈಗಲೇ ಹೇಳೋಕೆ ಆಗಲ್ಲ, ಅವರು ಎಲ್ಲಿವರೆಗೆ ತಗೆದುಕೊಂಡು ಹೋಗ್ತಾರೋ ಗೊತ್ತಿಲ್ಲ” ಎಂದು ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಇದು ಕೇವಲ ತಾಂತ್ರಿಕ ಶಬ್ದಗಳ ಆಟ. ಇಡಿ ಅಧಿಕಾರಿಗಳು ಬಂದು 36 ಗಂಟೆಗಳ ಕಾಲ ದಾಖಲೆಗಳನ್ನು ಶೋಧಿಸಿ, ನಗದು ಜಪ್ತಿ ಮಾಡಿ, ಕೆಲ ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದರೆ ಅದಕ್ಕಿಂತ ದಾಳಿ ಮತ್ತೇನಾಗಬೇಕು? “ಇನ್ನೂ ತನಿಖೆ ಶುರುವಾಗಿಲ್ಲ, ನಿಗೂಢವಾಗಿದೆ” ಎನ್ನುವ ಮೂಲಕ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕಠಿಣ ಕ್ರಮಗಳ ಭೀತಿ ಅವರ ಮಾತುಗಳಲ್ಲಿ ಎದ್ದುಕಾಣುತ್ತಿದೆ.

‘ದೊಡ್ಡ ಮೀನು – ಸಣ್ಣ ಮೀನು’ ಮತ್ತು ಬಿಜೆಪಿ ಸೇರ್ಪಡೆ ಬಗೆಗಿನ ಮೌನ

“ಇಡಿಯವರು ದೊಡ್ಡ ಮೀನ ಬಿಟ್ಟು ಸಣ್ಣ ಮೀನ ಹಿಡಿಯುತ್ತಿದ್ದಾರೆ” ಎಂಬ ಹೇಳಿಕೆಯ ಹಿಂದೆ ಆಡಳಿತಾರೂಢ ಬಿಜೆಪಿ ನಾಯಕರ ಮೇಲಿನ ಆಕ್ರೋಶ ಮಾತ್ರವಲ್ಲ, ತಮ್ಮ ಪಕ್ಷದವರೇ ಆದ ಪ್ರಭಾವಿ ನಾಯಕರ ಮೇಲಿನ ಪರೋಕ್ಷ ಅಸಮಾಧಾನವೂ ಅಡಗಿರಬಹುದು.

ಅಷ್ಟೇ ಅಲ್ಲದೆ, “ಬೆದರಿಕೆ ಇದೆಯಾ ಅಥವಾ ಬಿಜೆಪಿ ಸೇರುವಂತೆ ಒತ್ತಡವಿದೆಯಾ?” ಎಂಬ ಪ್ರಶ್ನೆಗೆ, “ಆ ಸ್ಟೇಜ್ ಇನ್ನೂ ಬಂದಿಲ್ಲ, ತನಿಖೆಯಾದ ಬಳಿಕ ಅಂತಹ ಸಂದರ್ಭ ಬರುತ್ತೋ ಇಲ್ವೋ ಗೊತ್ತಿಲ್ಲ” ಎಂದು ಉತ್ತರಿಸಿರುವುದು ಅತ್ಯಂತ ಸೂಕ್ಷ್ಮ ವಿಚಾರ. ಅವರು “ಖಂಡಿತ ಇಲ್ಲ, ನಾನು ಬಿಜೆಪಿ ಸೇರುವುದಿಲ್ಲ” ಎಂದು ನೇರವಾಗಿ ನಿರಾಕರಿಸದೆ, ‘ಆ ಸಂದರ್ಭ ಬಂದಾಗ ನೋಡೋಣ’ ಎನ್ನುವ ರೀತಿಯಲ್ಲಿ ಬಾಗಿಲು ತೆರೆದಿಟ್ಟಿರುವುದು ಅವರ ರಾಜಕೀಯ ನಡೆ ಯಾವ ದಿಕ್ಕಿಗೆ ಬೇಕಾದರೂ ತಿರುಗಬಹುದು ಎಂಬುದಕ್ಕೆ ದಾರಿದೀಪವಾಗಿದೆ.

ಇದನ್ನೂ ಓದಿ: ಚಹಾ ಕೊಡ್ತಿದ್ದವನು ಚೇರ್‌ಮನ್ ರೇಂಜ್‌ಗೆ ಬೆಳೆದಿದ್ದು ಹೇಗೆ? ಅಕ್ರಮಗಳ ಕಿಂಗ್‌ಪಿನ್‌ನ ಅಸಲಿ ಮುಖವಾಡ ಬಯಲು!

ನಿಗೂಢ ಹಾದಿಯಲ್ಲಿ ರಾಜಕೀಯ ಭವಿಷ್ಯ

ಒಟ್ಟಾರೆಯಾಗಿ ಹೇಳುವುದಾದರೆ, ಸತೀಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿಯಲ್ಲಿ ತೋರಿದ ‘ಶಾಂತ ಮುಖಭಾವ’ ಅವರ ಒಳಗಿನ ಆತಂಕವನ್ನು ಮುಚ್ಚಿಡಲು ಸಾಧ್ಯವಾಗಿಲ್ಲ. ಮಾಧ್ಯಮದ ಎದುರು “ನನ್ನ ಮೇಲೆ ಯಾವುದೇ ಗ್ರಿಲ್-ಡ್ರಿಲ್ ಆಗಿಲ್ಲ” ಎಂದು ಮುಗುಳ್ನಕ್ಕರೂ, “ನಾವು ಸಣ್ಣ ತಪ್ಪು ಮಾಡಿರಬಹುದು” ಎನ್ನುವ ಅವರ ಮಾತೇ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಇಡಿ ಈಗಷ್ಟೇ ಮೊದಲ ಹೆಜ್ಜೆ ಇಟ್ಟಿದೆ. ಬ್ಯಾಂಕ್ ಖಾತೆಗಳ ಫ್ರೀಜ್, ಸಮನ್ಸ್ ಜಾರಿ ಹಾಗೂ ವಿಚಾರಣೆ ಮುಂದುವರಿದಂತೆ ಸತೀಶ್ ಜಾರಕಿಹೊಳಿ ಅವರು ನೀಡಿರುವ ಈ ‘ಒಪ್ಪಿಗೆಯ ಹೇಳಿಕೆಗಳು’ ಕಾನೂನಿನ ಅಂಗಳದಲ್ಲಿ ಅವರ ವಿರುದ್ಧವೇ ಪ್ರಬಲ ಅಸ್ತ್ರವಾಗಿ ಬಳಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...