Wednesday, September 9, 2026
Home ವಿಶ್ಲೇಷಣೆ BTDA: ತಪ್ಪು ಮಾಡಿದ್ರಾ ತಪಶೆಟ್ಟಿ? ಶಾಸಕ ಉಮೇಶನದ್ದು ದುರಾಸೆಯೋ ಅಥವಾ ಸೂತಧಾರಿಯ ಕೈಗೊಂಬೆ ಆಟವೋ?

BTDA: ತಪ್ಪು ಮಾಡಿದ್ರಾ ತಪಶೆಟ್ಟಿ? ಶಾಸಕ ಉಮೇಶನದ್ದು ದುರಾಸೆಯೋ ಅಥವಾ ಸೂತಧಾರಿಯ ಕೈಗೊಂಬೆ ಆಟವೋ?

BTDA: ತಪ್ಪು ಮಾಡಿದ್ರಾ ತಪಶೆಟ್ಟಿ? ಶಾಸಕ ಉಮೇಶನದ್ದು ದುರಾಸೆಯೋ ಅಥವಾ ಸೂತಧಾರಿಯ ಕೈಗೊಂಬೆ ಆಟವೋ?

ಬಾಗಲಕೋಟೆ ಮುಳುಗಡೆ ಸಂತ್ರಸ್ತರು ತಮ್ಮ ಬದುಕು, ಮನೆ, ಮಠ, ಜಮೀನು ಎಲ್ಲವನ್ನೂ ತ್ಯಾಗ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ, ಅವರಿಗೆ ಆಸರೆಯಾಗಬೇಕಿದ್ದ ‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA)’ ಕೆಲ ವರ್ಷಗಳ ಕಾಲ ರಕ್ತ ಹೀರುವ ಜಿಗಣೆಗಳ ಅಡ್ಡೆಯಾಗಿತ್ತು. ಕಚೇರಿಯ ತುಂಬಾ ದಲ್ಲಾಳಿಗಳ ದರ್ಬಾರು, ಫೈಲ್‌ಗಳ ಮೇಲೆ ನೋಟಿನ ಕಂತೆಗಳ ನೃತ್ಯವಾಡುವ ವಾತಾವರಣವಿತ್ತು. ಇಂತಹ ನರಕಸದೃಶ ವ್ಯವಸ್ಥೆಗೆ ಬ್ರೇಕ್ ಹಾಕಿ, ಭ್ರಷ್ಟಾಚಾರದ ಕೂಪವನ್ನು ಶುಚಿಗೊಳಿಸಿ, ಸಂತ್ರಸ್ತರ ಪರವಾಗಿ ನಿಂತಿದ್ದೇ ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ (Prakash Tapashetti) ಮಾಡಿದ ತಪ್ಪಾ?

ಪಾರದರ್ಶಕ ಆಡಳಿತ ನೀಡುತ್ತಿರುವ ತಪಶೆಟ್ಟಿ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಶಾಸಕ ಉಮೇಶ್ ಮೇಟಿ (Umesh H Meti) ಹಾಗೂ ಆ ‘ಸೂತ್ರಧಾರ’ ತೆರೆಮರೆಯಲ್ಲಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುತಂತ್ರದ ಆಳ-ಅಗಲ ಕೆದಕುತ್ತಾ ಹೋದರೆ, ಬಾಗಲಕೋಟೆಯ ರಾಜಕೀಯದ ಕರಾಳ ಮುಖವೊಂದು ಅನಾವರಣಗೊಳ್ಳುತ್ತದೆ. ಇಲ್ಲಿ ಶಾಸಕರದ್ದು ಮುಗ್ಧತೆಯೋ ಅಥವಾ ಆ ಬಿಟಿಡಿಎ ಅಧ್ಯಕ್ಷ ಗಾದಿಯ ಮೇಲಿನ ತಣಿಯದ ದುರಾಸೆಯೋ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ.

ದಲ್ಲಾಳಿಗಳ ಅಗ್ರಹಾರವಾಗಿದ್ದ ಬಿಟಿಡಿಎ ಮತ್ತು ‘ಶೆಟ್ಟರ್’ ದರ್ಬಾರ್!

ತಪಶೆಟ್ಟಿ ಅವರು ಅಧಿಕಾರ ವಹಿಸಿಕೊಳ್ಳುವ ಹಿಂದಿನ ಮೂರು ವರ್ಷಗಳ ಕಾಲ ಬಿಟಿಡಿಎ (BTDA) ಸಂಪೂರ್ಣವಾಗಿ ದಲ್ಲಾಳಿಗಳ ಅಗ್ರಹಾರವಾಗಿತ್ತು, ಭ್ರಷ್ಟಾಚಾರದ ಹೆಡ್ ಆಫೀಸ್ ಆಗಿತ್ತು ಎಂದು ಸಂತ್ರಸ್ತರು ನೆನಪಿಸಿಕೊಳ್ಳುತ್ತಾರೆ. ಕಚೇರಿಗೆ ಕೆಲಸಕ್ಕಾಗಿ ಬರುವ ಸಂತ್ರಸ್ತರು ಅಕ್ಷರಶಃ ಚಪ್ಪಲಿ ಸವೆಸಿ, ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಹಿಡಿಶಾಪ ಹಾಕುತ್ತಾ ವಾಪಸ್ ಹೋಗುತ್ತಿದ್ದರು. ಬಿಟಿಡಿಎ ಕಥೆ ಇನ್ನೇನು ಮುಗಿದೇ ಹೋಯಿತು, ನಮಗೆ ನ್ಯಾಯ ಸಿಗುವುದಿಲ್ಲ ಎಂದು ಸಂತ್ರಸ್ತರು ಹತಾಶೆಯ ಮಡುವಿಗೆ ಬಿದ್ದಿದ್ದರು.

ಈ ಭ್ರಷ್ಟಾಚಾರದ ಕಚೇರಿ ಸಂಸ್ಕೃತಿಯ ಹಿಂದೆ ಹೊಳೆಬಸು ಶೆಟ್ಟರ್ ಎನ್ನುವ ವ್ಯಕ್ತಿಯ ಕೈವಾಡವಿತ್ತು ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಬಿಟಿಡಿಎ ಕಚೇರಿಯಲ್ಲಿ ಒಂದೇ ಒಂದು ಕಡತ (ಫೈಲ್) ಮುಂದಕ್ಕೆ ಹೋಗಬೇಕೆಂದರೂ, ಅದಕ್ಕೆ ಹೊಳೆಬಸು ಶೆಟ್ಟರ್ ಅವರ ಕೃಪಾಕಟಾಕ್ಷ ಇರಲೇಬೇಕಿತ್ತು ಎನ್ನಲಾಗಿದೆ. ಅಲ್ಲಿ ಅಧಿಕಾರ ಸ್ಥಾನದಲ್ಲಿ ಕೂರುವ ಪ್ರತಿಯೊಬ್ಬ ಅಧಿಕಾರಿಯೂ ಶೆಟ್ಟರ್ ಅವರ ಸೂಚನೆಯಂತೆ ನಡೆಯಬೇಕಾದ ಸ್ಥಿತಿಯಿತ್ತು ಎನ್ನುವುದು ಸ್ಥಳೀಯರ ಆರೋಪ. ಇದರ ಭಾಗವಾಗಿಯೇ ‘ಬಾರಿಗಿಡದ’ ಎನ್ನುವ ಅಧಿಕಾರಿಯನ್ನು (RO) ತಂದು ಕೂರಿಸಿದ್ದು ಇದೇ ಹೊಳೆಬಸು ಶೆಟ್ಟರ್ ಎನ್ನಲಾಗಿದ್ದು, ಆ ಭ್ರಷ್ಟ ಅಧಿಕಾರಿಯ ಕೃತ್ಯಗಳನ್ನು ನಮ್ಮ ‘ಅಸಲಿ ಸುದ್ದಿ’ ನ್ಯೂಸ್ ಪೋರ್ಟಲ್ ದಾಖಲೆ ಸಮೇತ ಬಿಚ್ಚಿಟ್ಟಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಆ ಅಧಿಕಾರಿಯ ಎತ್ತಂಗಡಿಯಾಗಿತ್ತು.

ಇದನ್ನೂ ಓದಿ: BTDA ‘ಬಾರಿಗಿಡದ’ ಗೂಂಡಾಗಿರಿ! ಅಕ್ರಮ ಪ್ಲಾಟ್ ಲೂಟಿಯ ಕಡತ ಜಾಲ ಬಯಲು; ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ಅಧಿಕಾರಿಯ ದರ್ಪ!

ತಪಶೆಟ್ಟಿ ಎಂಟ್ರಿ: ಭ್ರಷ್ಟಾಚಾರಕ್ಕೆ ಬ್ರೇಕ್ ಮತ್ತು ಸಂತ್ರಸ್ತರ ಮುಖದಲ್ಲಿ ಮಂದಹಾಸ!

ಯಾವಾಗ ಪ್ರಕಾಶ್ ತಪಶೆಟ್ಟಿ ಅವರು ಬಿಟಿಡಿಎ (BTDA) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೋ, ಅಂದೇ ಈ ಭ್ರಷ್ಟ ವ್ಯವಸ್ಥೆಗೆ ನಡುಕ ಶುರುವಾಯಿತು. ಅಧಿಕಾರ ವಹಿಸಿದ ಮೊದಲ ದಿನವೇ ತಪಶೆಟ್ಟಿ ಅವರು, “ಇಷ್ಟು ದಿನ ಬಿಟಿಡಿಎ ಎಂದರೆ ಭ್ರಷ್ಟಾಚಾರದ ಕೂಪವಾಗಿತ್ತು, ದಲ್ಲಾಳಿಗಳ ಅಗ್ರಹಾರವಾಗಿತ್ತು. ಆದರೆ ಇನ್ನುಮುಂದೆ ನನ್ನ ಅಧಿಕಾರದ ಅವಧಿಯಲ್ಲಿ ಅಂತಹ ಯಾವುದೇ ಕಾನೂನುಬಾಹಿರ ಕೆಲಸ ಆಗಲು ಬಿಡುವುದಿಲ್ಲ” ಎಂದು ಖಡಕ್ ಸಂದೇಶ ನೀಡಿದ್ದರು.

ಅವರು ಕೇವಲ ಭಾಷಣಕ್ಕೆ ಸೀಮಿತವಾಗದೆ, ದಲ್ಲಾಳಿಗಳನ್ನು ಕಚೇರಿಯಿಂದ ದೂರವಿಟ್ಟು, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆದರು. ಸಂತ್ರಸ್ತರು ಯಾವುದೇ ಭಯವಿಲ್ಲದೆ ನೇರವಾಗಿ ಕಚೇರಿಗೆ ಬಂದು, ತಮ್ಮ ದಾಖಲಾತಿಗಳನ್ನು ನೀಡಿ ಇ-ಸ್ವತ್ತು ಮತ್ತು ಹಕ್ಕುಪತ್ರಗಳನ್ನು ಪಡೆಯುವಂತಹ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದರು. ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿದ್ದ ಫೈಲ್‌ಗಳು ಧೂಳು ಕೊಡವಿಕೊಂಡು ವಿಲೇವಾರಿಯಾಗಲು ಶುರುವಾದವು. ಬಿಟಿಡಿಎ ಕಚೇರಿಯ ಮೆಟ್ಟಿಲು ಹತ್ತಲು ಹೆದರುತ್ತಿದ್ದ ಸಂತ್ರಸ್ತರ ಮುಖದಲ್ಲಿ ಇಂದು ನೆಮ್ಮದಿಯ ಮಂದಹಾಸ ಮೂಡಿದ್ದರೆ, ಅದಕ್ಕೆ ತಪಶೆಟ್ಟಿ ಅವರ ದಿಟ್ಟ ನಿಲುವುಗಳೇ ಕಾರಣ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇ ತಪಶೆಟ್ಟಿ ಅವರು ಮಾಡಿದ ತಪ್ಪಾ?

ಶೆಟ್ಟರ್ ಕುತಂತ್ರ: ಶಾಸಕ ಉಮೇಶ ಮೇಟಿಯವರ ‘ಮುಗ್ಧತೆ’ ಬಲಿಯಾಯಿತೇ?

ಬಿಟಿಡಿಎ ಕಚೇರಿಯಲ್ಲಿ ತಪಶೆಟ್ಟಿ ಆಡಳಿತ ಶುರುವಾಗುತ್ತಿದ್ದಂತೆ, ತಮ್ಮ ನಿಯಂತ್ರಣ ತಪ್ಪಿ ಹೋಗುತ್ತಿದೆ ಎಂಬುದನ್ನು ಅರಿತ ಹೊಳೆಬಸು ಶೆಟ್ಟರ್, ಕಚೇರಿಯಲ್ಲಿ ಯಾವುದೇ ಅಕ್ರಮ ಮಾಡಲು ಅವಕಾಶ ಸಿಗದ ಕಾರಣಕ್ಕೆ ಶಾಸಕ ಉಮೇಶ್ ಮೇಟಿ ಅವರನ್ನು ದಾಳವಾಗಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎನ್ನುವ ಬಲವಾದ ಆರೋಪಗಳನ್ನು ತಪಶೆಟ್ಟಿ ಬೆಂಬಲಿಗರು ಮಾಡುತ್ತಿದ್ದಾರೆ.

ಶಾಸಕರ ಮುಗ್ಧತೆಯನ್ನೋ ಅಥವಾ ಬಿಟಿಡಿಎ ಕುರ್ಚಿಯ ಮೇಲಿನ ಆಸೆಯನ್ನೋ ಬಂಡವಾಳವಾಗಿಸಿಕೊಂಡು, ತಪಶೆಟ್ಟಿಯವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಶಾಸಕರನ್ನು ಆ ಜಾಗದಲ್ಲಿ ಕೂರಿಸಿದರೆ ಮತ್ತೆ ಬಿಟಿಡಿಎ ಅನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಬಹುದು ಎನ್ನುವುದು ಶೆಟ್ಟರ್ ಅವರ ಕುತಂತ್ರವಾಗಿದೆ ಎಂದು ತಪಶೆಟ್ಟಿ ಬೆಂಬಲಿಗರು ಹಾಗೂ ಸಂತ್ರಸ್ತರು ಆರೋಪಿಸುತ್ತಿದ್ದಾರೆ.

ಅಭಿವೃದ್ಧಿಗೆ ಅಡ್ಡಗಾಲು: ಶಾಸಕರ ಅಸಹಕಾರದಿಂದ ಸಂತ್ರಸ್ತರಿಗೆ ಕಂಟಕ!

ಒಬ್ಬ ಜನಪ್ರತಿನಿಧಿಯಾಗಿ, ಶಾಸಕ ಉಮೇಶ್ ಮೇಟಿ ಅವರು ಬಿಟಿಡಿಎಯಲ್ಲಿ ನಡೆಯುತ್ತಿರುವ ಜನಪರ ಕೆಲಸಗಳನ್ನು ನೋಡಿ ಖುಷಿಪಡಬೇಕಿತ್ತು. ತಪಶೆಟ್ಟಿ ಅವರ ಬೆನ್ನಿಗೆ ನಿಂತು ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಶಕ್ತಿ ತುಂಬಬೇಕಿತ್ತು. ಆದರೆ, ವಿಪರ್ಯಾಸವೆಂದರೆ, ಶಾಸಕರು ಬಿಟಿಡಿಎ ಕಚೇರಿಯಿಂದಲೇ ದೂರ ಉಳಿದು ಅಸಹಕಾರ ತೋರುತ್ತಿದ್ದಾರೆ ಎನ್ನಲಾಗಿದೆ.

ನಿಯಮಿತವಾಗಿ ಬಿಟಿಡಿಎ ಸಭೆಗಳನ್ನು ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕಿದ್ದ ಶಾಸಕರು, ಪದೇ ಪದೇ ಸಭೆಯ ದಿನಾಂಕಗಳನ್ನು ಮುಂದೂಡುತ್ತಾ ಆಡಳಿತಾತ್ಮಕ ಕೆಲಸಗಳಿಗೆ ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ 14 ತಿಂಗಳಿಂದ ಸರಿಯಾದ ಒಂದು ಸಭೆಯೂ ನಡೆದಿಲ್ಲ. 2025ರ ಜೂನ್ 20ರಂದು 166ನೇ ಸಭೆ ನಡೆದರೆ, ಅದರ ಮುಂದಿನ 167ನೇ ಸಭೆ ನಡೆದದ್ದು ಬರೋಬ್ಬರಿ ಒಂದು ವರ್ಷದ ಬಳಿಕ, 2026ರ ಮೇ ತಿಂಗಳಲ್ಲಿ! ಅದೂ ಕೇವಲ ಒಂದೇ ಒಂದು ನಿರ್ಣಯಕ್ಕೆ ಸೀಮಿತವಾಗಿ. ಶಾಸಕರು ಸಭೆ ನಡೆಸದೆ ತೋರುತ್ತಿರುವ ಈ ಅಸಹಕಾರದಿಂದಾಗಿ ಆಡಳಿತಾತ್ಮಕ ಕೆಲಸಗಳು ವಿಳಂಬವಾಗುತ್ತಿದ್ದು, ಸಂತ್ರಸ್ತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಶಾಸಕ ಮೇಟಿ ಅಭಿವೃದ್ಧಿ ಪರ ಕೆಲಸ ಮಾಡುತ್ತಾರೆ ಎಂದು ನಂಬಿದ್ದ ಜನರಿಗೆ ಇದು ತೀವ್ರ ನಿರಾಸೆ ಮೂಡಿಸಿದೆ.

‘ಬೆಂಗಳೂರು ಪೆರೇಡ್’: ಕುರ್ಚಿ ಕಸಿದುಕೊಳ್ಳಲು ಹೈಕಮಾಂಡ್ ಮುಂದೆ ಲಾಬಿ!

ತಪಶೆಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವು ಅನುಕೂಲಸಿಂಧು ಕಾಂಗ್ರೆಸ್ ಮುಖಂಡರು ಬೆಂಗಳೂರಿಗೆ ತೆರಳಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಭೇಟಿ ಮಾಡಿದ್ದಾರೆ. “ತಪಶೆಟ್ಟಿಯವರನ್ನು ಬಿಟಿಡಿಎ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ, ಆ ಜಾಗಕ್ಕೆ ಶಾಸಕರನ್ನು ನೇಮಕ ಮಾಡಿ” ಎಂದು ಲಾಬಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ತಮ್ಮ ವಿರುದ್ಧ ಕೇಳಿಬಂದಿರುವ ಪಕ್ಷವಿರೋಧಿ ಚಟುವಟಿಕೆಗಳ ಆರೋಪಗಳಿಗೆ ತಪಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ ಅತ್ಯಂತ ಖಾರವಾಗಿಯೇ ತಿರುಗೇಟು ನೀಡಿದ್ದಾರೆ:

“ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ. ಬಿಟಿಡಿಎ ಕುರ್ಚಿ ಮೇಲೆ ಕಣ್ಣು ಇಟ್ಟವರೇ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಕೆಲಸಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ, ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ಎಷ್ಟೇ ವಿರೋಧಗಳು ಬಂದರೂ, ಯಾರೇ ಬೆದರಿಸಿದರೂ ನಾನು ಬಗ್ಗುವುದಿಲ್ಲ. ಸಂತ್ರಸ್ತರ ಹಿತದ ವಿಷಯದಲ್ಲಿ, ಅವರ ರಕ್ಷಣೆಗಾಗಿ ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ” ಎಂದು ಗರ್ಜಿಸಿದ್ದಾರೆ.

ಇದನ್ನೂ ಓದಿ: ‘ದಾರಿ ತಪ್ಪಿದ ಮಗ’ ಆದ್ರಾ ಮೇಟಿ ಪುತ್ರ? ಗೆಲುವಿನ ಬೆನ್ನಲ್ಲೇ ಉಮೇಶ್ ನಡೆ ಬದಲು; ನಂಬಿ ಟಿಕೆಟ್ ಕೊಡಿಸಿದವರಿಗೇ ಭ್ರಮನಿರಸನ!

ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ: ಸಂತ್ರಸ್ತರ ಶಾಪ ಸುಮ್ಮನೆ ಬಿಡದು!

ಒಂದು ವೇಳೆ ರಾಜ್ಯ ಕಾಂಗ್ರೆಸ್ ನಾಯಕರು, ಕುತಂತ್ರಿಗಳ ಒತ್ತಡಕ್ಕೆ ಮಣಿದು ಸಂತ್ರಸ್ತರ ಪರವಾಗಿ ಶ್ರಮಿಸುತ್ತಿರುವ ತಪಶೆಟ್ಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸಕ್ಕೆ ಮುಂದಾದರೆ, ಅದರಿಂದ ನಷ್ಟವಾಗುವುದು ತಪಶೆಟ್ಟಿಗಲ್ಲ — ಬದಲಾಗಿ ಬಾಗಲಕೋಟೆಯ ಮುಗ್ಧ ಮುಳುಗಡೆ ಸಂತ್ರಸ್ತರಿಗೆ ಎನ್ನುವುದು ಕಟು ಸತ್ಯ.

ಕಾಂಗ್ರೆಸ್ ಪಕ್ಷದ ವರಿಷ್ಠರು ಈ ವಾಸ್ತವವನ್ನು ಅರಿಯದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಷಡ್ಯಂತ್ರದ ಭಾಗವಾಗಿ ಬೆಂಗಳೂರು ಪೆರೇಡ್ ನಡೆಸಿರುವ ಕೆಲವು ಮುಖಂಡರು ಹಾಗೂ ಶಾಸಕರು, ಹೊಳೆಬಸು ಶೆಟ್ಟರ್ ಅವರ ಕುತಂತ್ರವನ್ನು ಅರಿತು ಹಿಂದೆ ಸರಿದರೆ ಸಂತ್ರಸ್ತರ ಶುಭ ಹಾರೈಕೆ ಸಿಗಲಿದೆ; ಇಲ್ಲವಾದರೆ ಸಂತ್ರಸ್ತರ ಶಾಪ ಕಾಡದೆ ಇರದು.

ತೀರ್ಮಾನ ನಿಮ್ಮ ಕೈಯಲ್ಲಿದೆ ಶಾಸಕರೇ: ನೀವು ದಲ್ಲಾಳಿಗಳ ಪರವೋ? ಅಥವಾ ನಿಮಗೆ ಮತ ಹಾಕಿದ ಸಂತ್ರಸ್ತರ ಪರವೋ?

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...