ಬಾಗಲಕೋಟೆ (Bagalkot) ಜಿಲ್ಲಾ ರಾಜಕಾರಣದಲ್ಲಿ ಸದ್ಯಕ್ಕೆ ಹತ್ತಿಕೊಂಡಿರುವ ಕಿಚ್ಚು ಅಷ್ಟು ಸುಲಭವಾಗಿ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ನಾಗರಾಜ್ ಹದ್ಲಿ (Nagaraj Hadli) ಅವರಿಗೆ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ (S.G. Nanjayyanamath) ಅವರು ಜಾರಿ ಮಾಡಿರುವ ನೋಟಿಸ್ ರಾಜಕೀಯ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಂಘ ಪರಿವಾರದ ಮುಖಂಡರೊಂದಿಗಿನ ಕೇವಲ ಒಂದು ಸೌಹಾರ್ದಯುತ, ವೈಯಕ್ತಿಕ ಭೇಟಿಯನ್ನೇ ಮಹಾಪರಾಧ ಎಂಬಂತೆ ಬಿಂಬಿಸಿ, ಹದ್ಲಿ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವು ಆಂತರಿಕ ಕುತಂತ್ರಿಗಳೇ ಈ ಕೃತ್ಯದ ಸೂತ್ರಧಾರರು ಎನ್ನುವುದು ಅವರ ಬೆಂಬಲಿಗರ ವಾದವಾಗಿದೆ. ಇಡೀ ಪ್ರಕರಣದ ಆಳ-ಅಗಲದ ಕುರಿತು ವಿವರಣೆ ಹಾಗೂ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗದಿರುವುದು ಅವರ ಇಬ್ಬಂದಿ ನಿಲುವಿಗೆ ಸಾಕ್ಷಿ ಹೇಳುವಂತಿದೆ.
ಅಯೂಬ್ ಬಾಗೇವಾಡಿ ಎಂಬ ಎಸ್‌ಡಿಪಿಐ ಮುಖಂಡನ ಪತ್ರಕ್ಕೆ ಜಿಲ್ಲಾಧ್ಯಕ್ಷರ ಸಾಷ್ಟಾಂಗ ನಮನವೇಕೆ?
ಈ ಇಡೀ ವಿವಾದದ ಹುಟ್ಟಿಗೆ ಕಾರಣವಾದ ಅಯೂಬ್ ಬಾಗೇವಾಡಿ ಎಂಬ ವ್ಯಕ್ತಿಯ ಹಿನ್ನೆಲೆಯೇ ಒಂದು ದೊಡ್ಡ ಯಕ್ಷಪ್ರಶ್ನೆ. ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ನ ಸೈದ್ಧಾಂತಿಕ ಕಡು ವೈರಿಯಾಗಿರುವ ಎಸ್‌ಡಿಪಿಐ ಸಂಘಟನೆಯ ಮುಖಂಡನಾಗಿ ಗುರುತಿಸಿಕೊಂಡಿರುವ ಬಾಗೇವಾಡಿಯ ಪತ್ರಕ್ಕೆ ಬಾಗಲಕೋಟೆ (Bagalkot) ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಮಂಡಿಯೂರಿದ್ದು ಏಕೆ ಎಂಬ ಪ್ರಶ್ನೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರನ್ನು ಕಾಡುತ್ತಿದೆ. ಜಿಲ್ಲಾಧ್ಯಕ್ಷರು ಆತನನ್ನು ತಮ್ಮದೇ ಪಕ್ಷದ ಸದಸ್ಯ ಎಂದು ತೇಪೆ ಹಚ್ಚಲು ಯತ್ನಿಸುತ್ತಿದ್ದಾರಾದರೂ, ರಾಜಕೀಯ ವಲಯದಲ್ಲಿ ಈ ನಾಟಕ ಸೋಗಲಾಡಿತನದಂತೆ ಕಾಣುತ್ತಿದೆ. ದಶಕಗಳ ಕಾಲ ಪಕ್ಷಕ್ಕಾಗಿ ಬೆವರು ಹರಿಸಿದ ಪ್ರಮುಖ ನಾಯಕ ನಾಗರಾಜ್ ಹದ್ಲಿ ಅವರ ನಿಷ್ಠೆಗಿಂತ, ಹೊರಗಿನಿಂದ ಬಂದ ಸೈದ್ಧಾಂತಿಕ ವಿರೋಧಿಗಳ ಪತ್ರ ಜಿಲ್ಲಾ ನಾಯಕತ್ವಕ್ಕೆ ವೇದವಾಕ್ಯದಂತೆ ಕಂಡಿರುವುದು ನಿಜಕ್ಕೂ ದುರಂತ.

ಬಾಗಲಕೋಟೆಯ ನೆಲದ ವಾಸ್ತವ: ಆರೆಸ್ಸೆಸ್ ‘ಮೃದು ಧೋರಣೆ’ ಇಲ್ಲಿ ರಾಜಕೀಯ ಅನಿವಾರ್ಯತೆ
ಬಾಗಲಕೋಟೆ (Bagalkot) ಜಿಲ್ಲೆಯ ಭೌಗೋಳಿಕ ಮತ್ತು ರಾಜಕೀಯ ಇತಿಹಾಸವನ್ನು ಬದಿಗೊತ್ತಿ ಯಾರೂ ಇಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಇಲ್ಲಿ ಮೊದಲಿನಿಂದಲೂ ಆರ್‌ಎಸ್‌ಎಸ್ ಪ್ರಭಾವ ಅತ್ಯಂತ ಗಟ್ಟಿಯಾಗಿದೆ. ಇಲ್ಲಿ ಕೇವಲ ಆರೆಸ್ಸೆಸ್ ವಿರೋಧಿ ರಾಜಕಾರಣವನ್ನೇ ಉಸಿರಾಡುತ್ತೇನೆ ಎಂದು ಹೊರಟರೆ ರಾಜಕೀಯ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಂತ ಹಂತವಾಗಿ ಪಕ್ಷದ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಹಾಗಂತ ಇಲ್ಲಿ ಆರೆಸ್ಸೆಸ್‌ನ ಕಟ್ಟರ್ ಕಾರ್ಯಕರ್ತರೇ ತುಂಬಿದ್ದಾರೆ ಎಂದಲ್ಲ, ಬದಲಾಗಿ ಬಹುಸಂಖ್ಯಾತ ಜನರಲ್ಲಿ ಸಂಘದ ಬಗ್ಗೆ ಒಂದು ಮೃದು ಧೋರಣೆಯಿದೆ (ಸಾಫ್ಟ್ ಕಾರ್ನರ್). ಇಂತಹ ಸೂಕ್ಷ್ಮ ಕ್ಷೇತ್ರದಲ್ಲಿ ರಾಜಕಾರಣ ಮಾಡಬೇಕಾದರೆ ಸಂಘ ಪರಿವಾರದ ಬಗ್ಗೆ ಸೌಹಾರ್ದತೆ ಇಟ್ಟುಕೊಳ್ಳುವುದು ಕೇವಲ ರಾಜತಾಂತ್ರಿಕತೆಯಲ್ಲ, ಬದಲಿಗೆ ಅನಿವಾರ್ಯತೆ ಕೂಡ ಹೌದು. ಈ ಕನಿಷ್ಠ ತಿಳಿವಳಿಕೆಯೂ ಇಲ್ಲದೆ ಜಿಲ್ಲಾಧ್ಯಕ್ಷರು ನೋಟಿಸ್ ಜಾರಿ ಮಾಡಿರುವುದು ಅವರ ರಾಜಕೀಯ ಅಪಕ್ವತೆಯ ಮುಖವಾಡವನ್ನು ಕಳಚಿಹಾಕಿದೆ.
ಹೆಚ್.ವೈ. ಮೇಟಿ ಅವರ ಚಾಣಾಕ್ಷ ನಾಯಕತ್ವ ಹಾಗೂ ಹದ್ಲಿ ತಂಡದ ಭಗೀರಥ ಪ್ರ ಯತ್ನ
ಬಾಗಲಕೋಟೆಯಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಲು ದಿವಂಗತ ಹೆಚ್.ವೈ. ಮೇಟಿ ಅವರ ಜನಪ್ರಿಯ ರಾಜಕೀಯ ಶೈಲಿ, ಜನಸ್ನೇಹಿ ಗುಣ ಮತ್ತು ಸಂಘಟನಾ ಚತುರತೆಯೇ ಮುಖ್ಯ ಕಾರಣ. ಆದರೆ, ಒಂದು ಕಾಲದ ಬಿಜೆಪಿಯ ಭದ್ರಕೋಟೆಯನ್ನು ನಡುಗಿಸಿ, ಅಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಹೆಚ್.ವೈ. ಮೇಟಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಗಟ್ಟಿಯಾಗಿ ನಿಂತವರಲ್ಲಿ ನಾಗರಾಜ್ ಹದ್ಲಿ ಹಾಗೂ ಅವರ ಬದ್ಧತೆಯುಳ್ಳ ಕಾರ್ಯಕರ್ತರ ತಂಡ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
2012ರ ಅವಧಿಯಲ್ಲಿ ಮೇಟಿ ಅವರ ತತ್ವಾದರ್ಶ ಹಾಗೂ ಆಕರ್ಷಕ ನಾಯಕತ್ವಕ್ಕೆ ಮಾರುಹೋಗಿ, ನಾಗರಾಜ್ ಹದ್ಲಿ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಸೇರ್ಪಡೆಯಾದರು. ಮೇಟಿ ಅವರ ಮಾರ್ಗದರ್ಶನದಲ್ಲಿ ಹದ್ಲಿ ಮತ್ತು ಅವರ ಬೆಂಬಲಿಗರ ದಂಡು ಹಗಲಿರುಳು ಬೂತ್ ಮಟ್ಟದಲ್ಲಿ ಪಕ್ಷಕ್ಕಾಗಿ ದುಡಿಯಿತು. ಮೇಟಿ ಅವರ ನಾಯಕತ್ವದ ಶಕ್ತಿ ಹಾಗೂ ಹದ್ಲಿ ತಂಡದ ತಳಮಟ್ಟದ ಸಾಂಘಿಕ ಹೋರಾಟದ ಜುಗಲ್‌ಬಂದಿಯಿಂದಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಕಾಂಗ್ರೆಸ್ ಗೆದ್ದು ಬೀಗುವ ಹಂತಕ್ಕೆ ಬಂದು ನಿಂತಿದೆ. ಇಂತಹ ಸುದೀರ್ಘ ಪರಿಶ್ರಮದ ಇತಿಹಾಸವನ್ನು ಹೊಂದಿರುವ ನಾಯಕನನ್ನು ಕೇವಲ ಒಂದು ಸೌಜನ್ಯದ ಭೇಟಿಯನ್ನು ನೆಪವಾಗಿಟ್ಟುಕೊಂಡು ಶಂಕಿಸುವುದು ಯಾವ ನ್ಯಾಯ?
ಇದನ್ನೂ ಓದಿ: Bagalkote ಕಾಂಗ್ರೆಸ್‌ನಲ್ಲಿ ಹದ್ಲಿ ಟಾರ್ಗೆಟ್! ‘ಕೈ’ಗೆ ನೆಲೆ ತಂದವರ ವಿರುದ್ಧವೇ ‘ಪಿಎ ಶೆಟ್ಟಿ’ ಕುತಂತ್ರ?
ದ್ರೋಹಿಗಳಿಗೆ ರತ್ನಗಂಬಳಿ; ಪಕ್ಷಕ್ಕಾಗಿ ದುಡಿದ ನಾಯಕನಿಗೆ ಶೂಟ್ ಔಟ್ ನೋಟಿಸ್!
ಬಾಗಲಕೋಟೆ ಕಾಂಗ್ರೆಸ್‌ನ ಇಂದಿನ ದೊಡ್ಡ ದುರಂತವೆಂದರೆ, ಹಿಂದೆ ಚುನಾವಣೆಗಳಲ್ಲಿ ಸ್ವಪಕ್ಷದ ಅಧಿಕೃತ ನಾಯಕರನ್ನೇ ಸೋಲಿಸಲು ಒಳಸಂಚು ನಡೆಸಿ, ಬೆನ್ನಿಗೆ ಚೂರಿ ಹಾಕಿದ ಇತಿಹಾಸವಿರುವ ಕೆಲವು ನಾಯಕರು ಇಂದು ಜಿಲ್ಲಾ ಕಾಂಗ್ರೆಸ್‌ನಲ್ಲಿ ರಾಜಾರೋಷವಾಗಿ ಹಾರಾಡುತ್ತಿದ್ದಾರೆ. ಅವರಿಗೆ ಜಿಲ್ಲಾ ನಾಯಕತ್ವ ಯಾವುದೇ ಪ್ರಶ್ನೆಗಳನ್ನು ಕೇಳದೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ. ಆದರೆ, ಪಕ್ಷದ ಗೆಲುವಿಗಾಗಿ ನಿರಂತರವಾಗಿ ಶ್ರಮಿಸಿದ ನಾಗರಾಜ್ ಹದ್ಲಿ ಅವರಿಗೆ ಜಿಲ್ಲಾಧ್ಯಕ್ಷರು ಶೋಕಾಸ್ ನೋಟಿಸ್ ಕೊಟ್ಟು ಅತ್ಯಂತ ‘ವಿಷಕಾರಿ ಬಹುಮಾನ’ವನ್ನೇ ನೀಡಲು ಮುಂದಾಗಿದ್ದಾರೆ.
ದಶಕಗಳ ಕಾಲ ಸಂಘದಲ್ಲಿದ್ದ ಕಾರಣ ಸಹಜವಾಗಿಯೇ ನಾಗರಾಜ್ ಹದ್ಲಿ ಅವರು ಅಲ್ಲಿ ಅತ್ಯಾಪ್ತ ಸ್ನೇಹ ಬಳಗವನ್ನು ಹೊಂದಿರುತ್ತಾರೆ. ಅವರೊಂದಿಗಿನ ಕೇವಲ ಸೌಜನ್ಯದ ಭೇಟಿಯನ್ನೇ ‘ಪಕ್ಷ ವಿರೋಧಿ’ ಎಂದು ಕರೆಯುವುದಾದರೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ನಿರಂತರವಾಗಿ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರೊಂದಿಗೆ ಬಹಿರಂಗವಾಗಿ ಕೈಕುಲುಕುತ್ತಾ, ವೇದಿಕೆ ಹಂಚಿಕೊಳ್ಳುತ್ತಿರುತ್ತಾರೆ. ಅವರ ವಿರುದ್ಧ ಇಲ್ಲದ ಶಿಸ್ತು ಕ್ರಮದ ಚಾವಟಿ, ಬಾಗಲಕೋಟೆಯಲ್ಲಿ ಕಷ್ಟಪಟ್ಟು ಪಕ್ಷ ಸಂಘಟಿಸಿದ ನಾಗರಾಜ್ ಹದ್ಲಿ ವಿರುದ್ಧ ಮಾತ್ರ ಏತಕ್ಕಾಗಿ ಬೀಸಲಾಗುತ್ತಿದೆ? ಇದು ಶುದ್ಧ ರಾಜಕೀಯ ದ್ವೇಷವಲ್ಲದೆ ಬೇರೇನೂ ಅಲ್ಲ.
ಹದ್ಲಿ ವಿರುದ್ಧದ ಕ್ರಮ: ಕಾಂಗ್ರೆಸ್‌ಗೆ ಕಾದಿದೆ ಸ್ವಯಂಕೃತ ಆತ್ಮಹತ್ಯೆಯ ಪೆಟ್ಟು!
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧವಾಗಿ ನಾಗರಾಜ್ ಹದ್ಲಿ ಹಾಗೂ ಅವರ ತಂಡ ಬೃಹತ್ ಕಾರ್ಯಕರ್ತರ ಸೈನ್ಯವನ್ನೇ ಕಟ್ಟಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಒಂದು ವೇಳೆ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಜಿಲ್ಲಾ ನಾಯಕತ್ವ ನಾಗರಾಜ್ ಹದ್ಲಿ ಅವರ ವಿರುದ್ಧ ಯಾವುದೇ ಮುಖಭಂಗ ತರುವ ಕ್ರಮ ಕೈಗೊಂಡರೆ, ಅದರಿಂದ ಹದ್ಲಿ ಅವರಿಗೆ ವೈಯಕ್ತಿಕವಾಗಿ ಯಾವುದೇ ನಷ್ಟವಾಗುವುದಿಲ್ಲ.
ಆದರೆ, ಇದರಿಂದ ನಷ್ಟ ಅನುಭವಿಸುವುದು ಮಾತ್ರ ಗ್ಯಾರಂಟಿ ಕಾಂಗ್ರೆಸ್ ಪಕ್ಷ. ಹದ್ಲಿ ಮತ್ತು ಅವರ ತಂಡದ ಬೆನ್ನಿಗೆ ನಿಂತಿರುವ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಸೈನ್ಯವೇ ಒಮ್ಮೆಲೇ ದಂಗೆದ್ದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಧೂಳೀಪಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾರದ್ದೋ ದುರುದ್ದೇಶಪೂರಿತ ಪಿತೂರಿಗೆ ಬಲಿಯಾಗಿ, ಪಕ್ಷದ ಭದ್ರಕೋಟೆಯನ್ನು ತಾವೇ ಕೈಯಾರೆ ಧ್ವಂಸ ಮಾಡಲು ಹೊರಟಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ. ಇನ್ನು ಹದ್ಲಿ ಅವರ ನಿಷ್ಠೆಯನ್ನು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿರುವ ಅಧ್ಯಕ್ಷರು, ಈ ಕುರಿತು ಅವರ ಅಭಿಪ್ರಾಯ ಪಡೆಯಲು ಪ್ರಯತ್ನಿಸಿದಾಗ ಸಂಪರ್ಕಕ್ಕೆ ಸಿಗದೆ ಮುಖ ಮುಚ್ಚಿಕೊಳ್ಳುತ್ತಿರುವುದು ಈ ಇಡೀ ನಾಟಕದ ಹಿಂದಿರುವ ಅವರ ರಹಸ್ಯ ಪಿತೂರಿಯನ್ನು ಮತ್ತಷ್ಟು ಬೆತ್ತಲಾಗಿಸಿದೆ.
ಇದು ಕೇವಲ ನೋಟಿಸ್ ಅಲ್ಲ, ಸ್ವತಃ ಕಾಂಗ್ರೆಸ್ ತನ್ನ ಕಾಲಿಗೆ ತಾನೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿರುವ ಆತ್ಮಹತ್ಯಾತ್ಮಕ ರಾಜಕೀಯ ನಡೆ. ಈ ಪಿತೂರಿ ಮುಂದುವರಿದರೆ ಹದ್ಲಿ ಅವರು ಕೈಗೊಳ್ಳುವ ಸಂಘಟನಾತ್ಮಕ ಹಾಗೂ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕತ್ವವೇ ಭಾರಿ ಬೆಲೆ ತೆರಬೇಕಾಗುತ್ತದೆ!

