ಬಾಗಲಕೋಟೆ (Bagalkot) ಜಿಲ್ಲೆಯ ಬಿಜೆಪಿ ರಾಜಕಾರಣದಲ್ಲಿ ಈಗ ಹತ್ತಿ ಉರಿಯುತ್ತಿರುವ ಕಿಚ್ಚು ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ, ಒಳಗೊಳಗೇ ಇಡೀ ಪಕ್ಷದ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ. ವಿಪರ್ಯಾಸವೆಂದರೆ, ಜಿಲ್ಲೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ತೀವ್ರ ಆಂತರಿಕ ಕಚ್ಚಾಟ ಹಾಗೂ ಶಾಸಕರ ಏಕಪಕ್ಷೀಯ ನಡವಳಿಕೆಯಿಂದಾಗಿ ದಿನದಿಂದ ದಿನಕ್ಕೆ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಶಾಸಕರ ಗೆಲುವಿಗೆ ಕಾರಣರಾದ ಪ್ರಮುಖ ಮುಖಂಡರನ್ನೇ ಕಾಂಗ್ರೆಸ್ ಶಾಸಕರು ದೂರ ಮಾಡಿಕೊಂಡಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಆ ಮುಖಂಡರು ಬಿಜೆಪಿಗೆ ಹತ್ತಿರವಾಗುವ ಸೂಕ್ತ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಬಿಜೆಪಿಗೆ ಗೆಲುವು ತಟ್ಟೆಯಲ್ಲಿಟ್ಟು ನೀಡಿದಷ್ಟೇ ಸುಲಭವಾಗಿತ್ತು. ಆದರೆ, ಕಾಂಗ್ರೆಸ್‌ನ ಆಂತರಿಕ ಬಂಡಾಯವನ್ನು ತಮಗೆ ಅನುಕೂಲಕರವಾಗಿ ಬಳಸಿಕೊಂಡು ರಾಜಕೀಯ ಲಾಭ ಪಡೆಯಬೇಕಿದ್ದ ಬಾಗಲಕೋಟೆ ಬಿಜೆಪಿ ನಾಯಕತ್ವ, ತಾನೇ ತೋಡಿದ ಹಳ್ಳಕ್ಕೆ ಬೀಳುತ್ತಿದೆಯೇ? ಎಂಬ ಪ್ರಶ್ನೆ ಈಗ ಸ್ಥಳೀಯ ಕಾರ್ಯಕರ್ತರು ಮತ್ತು ರಾಜಕೀಯ ವಿಶ್ಲೇಷಕರಲ್ಲಿ ತೀವ್ರವಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ್ ಅವರ ಏಕಪಕ್ಷೀಯ, ದ್ವಂದ್ವ ಹಾಗೂ ತಾರತಮ್ಯದ ನಡವಳಿಕೆ ಎಂಬ ಆಕ್ರೋಶ ಕಮಲ ಪಾಳೆಯದಲ್ಲೇ ಬುಸುಗುಡುತ್ತಿದೆ.
ರಬ್ಬರ್ ಸ್ಟ್ಯಾಂಪ್ ಅಧ್ಯಕ್ಷರು ಮತ್ತು ‘ಉಚ್ಛಾಟನೆ’ಯ ರಾಜಕೀಯ
ಬಾಗಲಕೋಟೆ (Bagalkot) ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ ಎಂಬುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬಹಿರಂಗ ಆರೋಪ. ಜಿಲ್ಲೆಯ ಪ್ರಮುಖ ಮೂವರು ನಾಯಕರ ಆಜ್ಞಾಪಾಲಕರಾಗಿ, ಅವರ ಹಿಡಿತದಲ್ಲಿರುವ ‘ರಬ್ಬರ್ ಸ್ಟ್ಯಾಂಪ್’ ರೀತಿ ಶಾಂತಗೌಡರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೇವಲ ಅಡಿಯಾಳು ತನದಿಂದಾಗಿಯೇ ಅವರು ಸತತ ಮೂರು ಬಾರಿ ಜಿಲ್ಲಾಧ್ಯಕ್ಷ ಗಾದಿಯಲ್ಲಿ ಸುಲಭವಾಗಿ ಸೇಫ್ ಆಗಿ ಉಳಿದುಕೊಂಡಿದ್ದಾರೆ ಎನ್ನುವುದು ಬಿಜೆಪಿಯ ಇನ್‌ಸೈಡ್ ಮಾಹಿತಿ.
ಅಧಿಕಾರದ ಪೀಠ ಉಳಿಸಿಕೊಳ್ಳಲು ಹಿರಿಯ ನಾಯಕರ ಕೃಪಾಕಟಾಕ್ಷಕ್ಕೆ ಕಾಯುವ ಜಿಲ್ಲಾಧ್ಯಕ್ಷರು, ಪಕ್ಷಕ್ಕಾಗಿ ರಾತ್ರಿ-ಹಗಲು ದುಡಿದ ನಿಷ್ಠಾವಂತ ಮುಖಂಡರನ್ನು ಮಾತ್ರ ಬಲಿಪಶು ಮಾಡುತ್ತಿದ್ದಾರೆ. ಇದಕ್ಕೆ ಮುಂಚಿನ ಉದಾಹರಣೆಯಾಗಿ ಸಂತೋಷ್ ಹೊಕ್ರಾಣಿ ಅವರ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ಪಕ್ಷದ ಕಟ್ಟಾಳು ಆಗಿದ್ದ ಹೊಕ್ರಾಣಿ ಅವರನ್ನು ಮಾಜಿ ಶಾಸಕರೊಬ್ಬರ ಕಿವಿಮಾತಿಗೆ ಓಗೊಟ್ಟು, ಯಾವುದೇ ಸೂಕ್ತ ತನಿಖೆ ಇಲ್ಲದೆ ಏಕಾಏಕಿ ಪಕ್ಷದಿಂದ ಉಚ್ಛಾಟಿಸಲಾಯಿತು. ನಿಷ್ಠಾವಂತರಿಗೆ ಬಾಗಿಲು ತೋರಿಸುವ ಈ ಅಧ್ಯಕ್ಷರು, ಪಕ್ಷದ್ರೋಹಿಗಳಿಗೆ ಮಾತ್ರ ಕೆಂಪು ಹಾಸು ಹಾಸಿ ಸ್ವಾಗತಿಸುತ್ತಿರುವುದು ಬಾಗಲಕೋಟೆ ಬಿಜೆಪಿಯ ದುರಂತ.
ಪಕ್ಷದ್ರೋಹಿಗಳಿಗೆ ರಕ್ಷಣೆ, ನಿಷ್ಠಾವಂತರಿಗೆ ಶಿಕ್ಷೆ!
ಬಿಜೆಪಿಯಲ್ಲಿ ಶಿಸ್ತಿನ ಮಂತ್ರ ಜಪಿಸುವ ನಾಯಕರಿಗೆ ಸ್ವಪಕ್ಷದ ನಾಯಕರ ಕರಾಳ ಕೃತ್ಯಗಳು ಕಾಣಿಸದಿರುವುದು ಅತ್ಯಂತ ವಿಪರ್ಯಾಸ. ಕಳೆದ ಬಾಗಲಕೋಟೆ (Bagalkot) ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಾಜಿ ಶಾಸಕರ ಅಡಿಯಾಳುಗಳಂತಿದ್ದ ಕೆಲವು ಬಿಜೆಪಿ ನಾಯಕರು, ಅಂದಿನ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರನ್ನು ರಾತ್ರೋರಾತ್ರಿ ಭೇಟಿಯಾಗಿ ಸಂಚು ರೂಪಿಸಿದ್ದು ಬಹಿರಂಗ ಸತ್ಯ. ಚುನಾವಣೆ ಹೊತ್ತಿನಲ್ಲಿ ನಡೆದ ಈ ‘ರಾತ್ರಿ ಭೇಟಿಗಳ’ ಹಿಂದಿನ ಉದ್ದೇಶವೇನು ಎಂಬುದು ಸಣ್ಣ ಮಗುವಿಗೂ ತಿಳಿಯುವ ವಿಷಯ. ಆದರೂ ಅವರ ಮೇಲೆ ಯಾವುದೇ ಶಿಸ್ತುಕ್ರಮ ಜರುಗಿಲ್ಲ, ಕಾರಣ ಅವರು ಮಾಜಿ ಶಾಸಕರ ಅಡಿಯಾಳಿನಂತಿದ್ದಾರೆ ಅವರನ್ನು ಉಚ್ಛಟನೆ ಮಾಡಿದ್ರೆ ತಮಗೆ ಕಂಟಕ ಬರಬಹುದೆಂಬ ಆತಂಕದಲ್ಲಿದ್ದಾರಾ ಶಾಂತಗೌಡರು?
ಇದೀಗ ಮತ್ತೊಂದು ಪ್ರಸಂಗವೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜನಪರ ಕಾಳಜಿ ವಹಿಸದ ಜಮಖಂಡಿಯ ಬಿಜೆಪಿ ಶಾಸಕರ ವಿರುದ್ಧ ಯುವ ಹೋರಾಟಗಾರ ವೀರಣ್ಣ ಹಳೇಗೌಡರ ಮಾತನಾಡಿದ್ದನ್ನೇ ನೆಪ ಮಾಡಿಕೊಂಡು, ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ವೀರಣ್ಣ ಹಳೇಗೌಡರ ಅವರು ಜಮಖಂಡಿ ಶಾಸಕರ ವಿರುದ್ಧ ಏಕವಚನ ಬಳಸಿ ಮಾತನಾಡಿದ್ದು ತಪ್ಪು ಎನ್ನುವುದಾದರೆ, ವಿಧಾನ ಪರಿಷತ್ ಸದಸ್ಯರಾದ ಪಿ. ಎಚ್. ಪೂಜಾರ್ ಅವರಂತಹ ಪಕ್ಷದ ಜೇಷ್ಠ, ಹಿರಿಯ ಮುತ್ಸದ್ದಿ ನಾಯಕನಿಗೆ ಏಕವಚನದಲ್ಲಿ ಬಾಯಿಗೆ ಬಂದಂತೆ ನಿಂದಿಸಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ?
ಪಿ. ಎಚ್. ಪೂಜಾರ್ ಅವರು ಬಾಗಲಕೋಟೆಯಲ್ಲಿ ರಕ್ತ ಸುರಿಸಿ ಪಕ್ಷ ಕಟ್ಟಿದ ಕಟ್ಟಾಳು. ರಾಜಕೀಯ ಕುತಂತ್ರದಿಂದಾಗಿ ಅವರನ್ನು ಸೈಡ್‌ಲೈನ್ ಮಾಡಲಾಗಿದ್ದರೂ, ಅವರ ಕೊಡುಗೆಯನ್ನು ಜನರು ಇಂದಿಗೂ ಗೌರವಿಸುತ್ತಾರೆ. ಅಂತಹ ನಾಯಕನಿಗೆ ಸಾರ್ವಜನಿಕವಾಗಿ ಅವಮಾನಿಸಿದ ಪ್ರಧಾನ ಕಾರ್ಯದರ್ಶಿ ವಿರುದ್ಧ ಕಣ್ಣು ಮುಚ್ಚಿ ಕುಳಿತ ಅಧ್ಯಕ್ಷರು, ಇವತ್ತು ಅದೇ ಪ್ರಧಾನ ಕಾರ್ಯದರ್ಶಿಯು ಜನಪರ ಕಾಳಜಿ ವಹಿಸದ ಶಾಸಕನ ವಿರುದ್ಧ ಮಾತನಾಡಿದ್ದಕ್ಕೆ ರೊಚ್ಚಿಗೆದ್ದು ಬಿಟ್ಟ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ವಿಡಿಯೋ ಮಾಡಿಬಿಟ್ಟವರ ಹಳೆಯ ಇತಿಹಾಸ ನೆನಪಿದ್ದವರೆಲ್ಲಾ ಅವರ ಮಾತುಗಳನ್ನು ಕೇಳಿ ನಗುವಂತಾಗಿದೆ.
ಇದನ್ನೂ ಓದಿ: DHO ಅಮಾನತಿನ ಅಸಲಿ ಸತ್ಯ! ಸಿಇಒ ಉದ್ಧಟತನ ಮತ್ತು ರಾಜಕೀಯ ಶಕ್ತಿಗಳ ಜಂಟಿ ಶಡ್ಯಂತ್ರ?
‘ಪಕ್ಷ ವಿರೋಧಿ’ಯ ವ್ಯಾಪ್ತಿ ಯಾವುದು? ಉಚ್ಛಾಟಿತ ನಾಯಕನ ಬೆನ್ನ ಹಿಂದೆ ಬಾಗಲಕೋಟೆ ಬಿಜೆಪಿ!
ಇಲ್ಲಿ ಬಾಗಲಕೋಟೆ ಬಿಜೆಪಿ ನಾಯಕರಿಗೆ ‘ಪಕ್ಷ ವಿರೋಧಿ ಚಟುವಟಿಕೆ’ ಎಂದರೆ ಏನು ಎಂಬ ಅರಿವಿದೆಯೇ ಎನ್ನುವ ಬಲವಾದ ಪ್ರಶ್ನೆ ಮೂಡುತ್ತದೆ! ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಬಿಜೆಪಿಯ ಪ್ರಶ್ನಾತೀತ ನಾಯಕ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ನಿರಂತರವಾಗಿ ನಾಲಿಗೆ ಹರಿಬಿಟ್ಟು, ಪಕ್ಷದ ಶಿಸ್ತು ಉಲ್ಲಂಘಿಸಿ ಕೊನೆಗೆ ಉಚ್ಛಾಟನೆಗೆ ಒಳಗಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಎಂದರೆ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಲ್ಲಿಲ್ಲದ ಪ್ರೀತಿ, ಮಮಕಾರ!
ಪಕ್ಷದ ಅಧಿಕೃತ ನಾಯಕತ್ವವನ್ನೇ ಧೂಳೀಪಟ ಮಾಡುತ್ತಿರುವ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದ ಬಳಿಕವೂ, ಅವರನ್ನು ಬಾಗಲಕೋಟೆಗೆ ಕರೆಸುವುದಾಗಲಿ, ಅವರೊಂದಿಗೆ ಅತ್ಯಾಪ್ತತೆ ಕಾಯ್ದುಕೊಳ್ಳುವುದಾಗಲಿ ‘ಪಕ್ಷ ವಿರೋಧಿ’ ವ್ಯಾಪ್ತಿಗೆ ಬರುವುದಿಲ್ಲವೇ?
ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಉಚ್ಛಾಟಿತ ಶಾಸಕರಾದ ಯತ್ನಾಳ್ ಬಾಗಲಕೋಟೆಗೆ ಬಂದಾಗ ರಾಜ್ಯಸಭಾ ಸದಸ್ಯರು ಸೇರಿದಂತೆ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರೆಲ್ಲಾ ಅವರ ಹಿಂದೆಯೇ ಸುತ್ತಾಡಿದ್ದರು! ಅಷ್ಟೇ ಏಕೆ, ಸ್ವತಃ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ್ ಅವರೇ ಯತ್ನಾಳ್ ಅವರನ್ನು ಭೇಟಿ ಮಾಡಲು ಐಬಿ (Inspection Bungalow) ವರೆಗೂ ಓಡೋಡಿ ಹೋಗಿದ್ದರಂತೆ! ಕೊನೆಗೆ ಯಾರೋ ಬುದ್ಧಿವಂತರು, “ನೀವು ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದೀರಿ, ಪಕ್ಷದಿಂದಲೇ ಉಚ್ಛಾಟನೆಗೊಂಡ ವ್ಯಕ್ತಿಯನ್ನು ನೀವು ಹೀಗೆ ಬಹಿರಂಗವಾಗಿ ಭೇಟಿಯಾಗುವುದು ಸರಿಯಲ್ಲ” ಎಂದು ತಿಳಿವಳಿಕೆ ಹೇಳಿ ಎಚ್ಚರಿಸಿದ ಮೇಲಷ್ಟೇ ಅಧ್ಯಕ್ಷರು ಅರ್ಧದಾರಿಯಿಂದ ವಾಪಸ್ ಬಂದಿದ್ದರಂತೆ!
ಕಳೆದ ಉಪಚುನಾವಣೆಯ ಪ್ರಚಾರದ ವೇಳೆಯಲ್ಲಂತೂ, ಪಕ್ಷದ ರಾಜ್ಯ ಅಧ್ಯಕ್ಷರು ಪ್ರಚಾರಕ್ಕೆ ಬರ್ತಾರೋ ಬಿಡ್ತಾರೋ ‘ಡೋಂಟ್ ಕೇರ್’, ಉಚ್ಛಾಟಿತ ನಾಯಕ ಯತ್ನಾಳ್ ಬಂದರೆ ಸಾಕು ಎನ್ನುವಂತೆ ನಡೆದುಕೊಂಡಿದ್ದು ಇದೇ ಜಿಲ್ಲಾ ಬಿಜೆಪಿ ನಾಯಕರು! ಸ್ವತಃ ಪಕ್ಷದ ರಾಜ್ಯಾಧ್ಯಕ್ಷರನ್ನೇ ಕಡೆಗಣಿಸಿ, ಉಚ್ಛಾಟಿತ ನಾಯಕನಿಗೆ ಜೈಕಾರ ಹಾಕುವ ಇಂತಹ ಜಿಲ್ಲಾ ಅಧ್ಯಕ್ಷರು ಮತ್ತು ನಾಯಕರು, ಇವತ್ತು ಇತರ ನಿಷ್ಠಾವಂತ ಕಾರ್ಯಕರ್ತರಿಗೆ “ಪಕ್ಷದ ಶಿಸ್ತು ಉಲ್ಲಂಘನೆ”ಯ ಪಾಠ ಮಾಡಲು ಹೊರಟಿರುವುದು ಎಂಥ ವಿಪರ್ಯಾಸ ಮತ್ತು ಹಾಸ್ಯಾಸ್ಪದ ಸಂಗತಿ!
ಕೊಣ್ಣೂರು ಮಡ್ಡಿ ಪ್ಲಾಟ್ ಹೋರಾಟ ಮತ್ತು 550 ಕಿ.ಮೀ. ಪಾದಯಾತ್ರೆಯ ಅಸಲಿ ಕಥೆ
ವೀರಣ್ಣ ಹಳೇಗೌಡರ ಅವರ ಉಚ್ಛಾಟನೆಯ ಹಿಂದೆ ಒಂದು ಸುದೀರ್ಘ ಜನಪರ ಹೋರಾಟದ ಹಿನ್ನೆಲೆಯಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರು ಮಡ್ಡಿ ಪ್ಲಾಟ್‌ನ ಸುಮಾರು 300 ಬಡ ಕುಟುಂಬಗಳು ಕಳೆದ 30 ವರ್ಷಗಳಿಂದ ಸೂರು ಮತ್ತು ಹಕ್ಕುಪತ್ರಕ್ಕಾಗಿ ರಕ್ತಕಣ್ಣೀರು ಸುರಿಸುತ್ತಿವೆ. ಕಳೆದ 8 ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮನೆ ಬಾಗಿಲು ತಟ್ಟಿ ಅಲೆದಾಡಿದರೂ ಅವರಿಗೆ ಸಿಕ್ಕಿದ್ದು ಬರಿ ಶೂನ್ಯ ಭರವಸೆಗಳು ಮಾತ್ರ.
ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ಘೋರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದ ಬಡ ಕುಟುಂಬಗಳು, “ಸ್ಥಳೀಯವಾಗಿ ಮನವಿ ಕೊಟ್ಟು ಪ್ರಯೋಜನವಿಲ್ಲ, ರಾಜ್ಯದ ಮುಖಂಡರ ಬಳಿಯೇ ನ್ಯಾಯ ಕೇಳುತ್ತೇವೆ” ಎಂದು ರಾಜಧಾನಿ ಬೆಂಗಳೂರಿಗೆ ಬರೋಬ್ಬರಿ 550 ಕಿಲೋಮೀಟರ್ ಸುದೀರ್ಘ ಪಾದಯಾತ್ರೆ ಆರಂಭಿಸಿದ್ದರು.
ಬಡವರ ಹಕ್ಕುಗಳೇನು?
- 300 ಕುಟುಂಬಗಳಿಗೆ ತಕ್ಷಣವೇ ಹಕ್ಕುಪತ್ರ ಹಾಗೂ ಇ-ಸ್ವತ್ತು ವಿತರಣೆ.
- ಆಶ್ರಯ ಯೋಜನೆಯಡಿ ಮನೆಗಳ ಮಂಜೂರಾತಿ.
- ಗ್ರಾಮದ ರಸ್ತೆಗಳ ಡಾಂಬರೀಕರಣ ಮತ್ತು ಮೂಲಸೌಕರ್ಯ.
- ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪಿಯು ಕಾಲೇಜು ಸ್ಥಾಪನೆ…
ಈ ನ್ಯಾಯಯುತ ಬೇಡಿಕೆಗಳಿಗಾಗಿ ವೃದ್ಧರು, ಗರ್ಭಿಣಿಯರು, ಮಹಿಳೆಯರು ಮತ್ತು ಯುವಕರು ಕೈಯಲ್ಲಿ ಬುತ್ತಿ-ರೊಟ್ಟಿ ಕಟ್ಟಿಕೊಂಡು ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ವಿಧಾನಸೌಧದ ಎದುರು ಬೃಹತ್ ಧರಣಿ ನಡೆಸಿ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಿ, ಸರ್ಕಾರಿ ಆದೇಶದ ಪ್ರತಿಯೊಂದಿಗೆ ಊರಿಗೆ ಮರಳುವ ಪಣ ತೊಟ್ಟಿದ್ದರು.
ಈ ಸುದೀರ್ಘ ಪಾದಯಾತ್ರೆಯ ನೇತೃತ್ವವನ್ನು ಯುವ ಹೋರಾಟಗಾರ ವೀರಣ್ಣ ಹಳೇಗೌಡರ ವಹಿಸಿದ್ದರು. ಈ ಹೋರಾಟದ ವೇಳೆ, ಜನಪ್ರತಿನಿಧಿಯಾಗಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸದ ಜಮಖಂಡಿಯ ಸ್ಥಳೀಯ ಬಿಜೆಪಿ ಶಾಸಕನ ಮೌನವನ್ನು ವೀರಣ್ಣ ಪ್ರಶ್ನಿಸಿದ್ದರು. ಮಾಧ್ಯಮಗಳು ಈ ಸುದ್ದಿಯನ್ನು ಪ್ರಮುಖವಾಗಿ ಬಿತ್ತರಿಸುತ್ತಿದ್ದಂತೆ ಜಾಗೃತರಾದ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು, ಪಾದಯಾತ್ರೆ ನಿರತರನ್ನು ವಾಪಸ್ ಕರೆಸಿ ಬೇಡಿಕೆ ಈಡೇರಿಸುವ ಅಧಿಕೃತ ಭರವಸೆ ನೀಡಿದರು. ಇದು ಹೋರಾಟಗಾರರ ಹಾಗೂ ಬಡ ಗ್ರಾಮಸ್ಥರ ಅಭೂತಪೂರ್ವ ಗೆಲುವಾಗಿದೆ.
ಆದರೆ, ಜನಪರ ಹೋರಾಟ ಮಾಡಿ ಬಡವರಿಗೆ ನ್ಯಾಯ ಕೊಡಿಸಿದ ಯುವ ನಾಯಕನನ್ನು ಅಭಿನಂದಿಸಬೇಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷರು, ಶಾಸಕನ ಅಹಂಗೆ ಪೆಟ್ಟು ಬಿದ್ದಿದ್ದಕ್ಕೋ ಅಥವಾ ಸ್ವಂತ ಅಸ್ತಿತ್ವದ ಭಯಕ್ಕೋ ವೀರಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸುವ ತರಾತುರಿಯ ನಿರ್ಧಾರ ಕೈಗೊಂಡರು!
“ಕಟ್ಟಿಹಾಕ್ತಾರೋ ನೋಡಿಯೇ ಬಿಡ್ತೇನೆ” – ವೀರಣ್ಣ ಸವಾಲು!
ತಮ್ಮ ಉಚ್ಛಾಟನೆಯ ಕುರಿತು ‘ಅಸಲಿ ಸುದ್ದಿ’ ಸಂಸ್ಥೆಯೊಂದಿಗೆ ಮಾತನಾಡಿದ ವೀರಣ್ಣ ಹಳೇಗೌಡರ, ಶಾಂತಗೌಡ ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾ ನಾಯಕತ್ವಕ್ಕೆ ನೇರ ಸವಾಲು ಹಾಕಿದ್ದಾರೆ:
“ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ್ದರ ಬಗ್ಗೆ ನನಗೇನೂ ಬೇಸರವಿಲ್ಲ. ಏಕೆಂದರೆ ನಾನು ಯಾವುದೇ ಪಕ್ಷವಿರೋಧಿ ಕೆಲಸ ಮಾಡಿಲ್ಲ. ನಾನು ಹುಟ್ಟು ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅನುಯಾಯಿ. ಅನ್ಯಾಯ ನಡೆದ ಜಾಗದಲ್ಲಿ ಯಾರೇ ಇರಲಿ, ಅವರನ್ನು ಕಂಡತುಂಡಾಗಿ ಪ್ರಶ್ನೆ ಮಾಡುವುದು ಹಾಗೂ ನೊಂದ ಜನರ ಪರವಾಗಿ ನಿಲ್ಲುವುದು ನನ್ನ ಸಿದ್ಧಾಂತ. ನಾನು ಈಗಲೂ ಅದನ್ನೇ ಮಾಡಿದ್ದೇನೆ. ಇಂತಹ ಉಚ್ಛಾಟನೆ ಗಿಚ್ಚಾಟನೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಈಗ ನಾನು ಸ್ವತಂತ್ರನಾಗಿದ್ದೇನೆ. ನನ್ನ ಹೋರಾಟ ಇನ್ನೂ ಪ್ರಬಲವಾಗಿ ಮುಂದುವರೆಯುತ್ತದೆ, ಅದನ್ನು ಹೇಗೆ ಕಟ್ಟಿಹಾಕ್ತಾರೋ ನೋಡಿಯೇ ಬಿಡುತ್ತೇನೆ!”
ವೀರಣ್ಣ ಅವರ ಈ ಖಡಕ್ ಮಾತುಗಳು ಬಾಗಲಕೋಟೆ ಬಿಜೆಪಿಗೆ ಭವಿಷ್ಯದಲ್ಲಿ ಕಂಟಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಾಂಗ್ರೆಸ್‌ಗೆ ವರ, ಬಿಜೆಪಿಗೆ ಸ್ವಯಂಕೃತ ಅಪರಾಧ!
ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆಂತರಿಕ ಶೀತಲ ಸಮರ, ಶಾಸಕರ ಶೈಲಿಗೆ ಬೆಸತ್ತು ಪ್ರಮುಖ ಮುಖಂಡರು ದೂರವಾಗುತ್ತಿದ್ದಾರೆ. ಈ ಅಸಮಾಧಾನಿತ ಕಾಂಗ್ರೆಸ್ ನಾಯಕರು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಾಗಿತ್ತು. ಮುಂಬರುವ ಚುನಾವಣೆಗಳನ್ನು ಬಿಜೆಪಿಗೆ ಸುಲಭವಾಗಿ ಗೆಲ್ಲುವ ವಾತಾವರಣ ನಿರ್ಮಾಣವಾಗಿತ್ತು.
ಆದರೆ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಅವರ ಇಂತಹ ಏಕಪಕ್ಷೀಯ ನಿರ್ಧಾರಗಳು, ಉಚ್ಛಾಟಿತ ನಾಯಕರ ಹಿಂದೆ ಬಿದ್ದು ಪಕ್ಷದ ರಾಜ್ಯಾಧ್ಯಕ್ಷರನ್ನೇ ಕಡೆಗಣಿಸುವ ‘ಡಬಲ್ ಸ್ಟ್ಯಾಂಡರ್ಡ್’ ರಾಜಕೀಯವು ಬಿಜೆಪಿ ಬೆಂಬಲಿಗರನ್ನೇ ದೂರ ಮಾಡುತ್ತಿದೆ. ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದ ಹಣ್ಣಾಗಿ ತಟ್ಟೆಗೆ ಬೀಳಬೇಕಿದ್ದ ರಾಜಕೀಯ ಫಲವನ್ನು, ಬಿಜೆಪಿ ಜಿಲ್ಲಾಧ್ಯಕ್ಷರು ತಮ್ಮ ಯಡವಟ್ಟುಗಳಿಂದ ತಾವೇ ನೆಲಕ್ಕೆ ಚೆಲ್ಲುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ…
ಕೊಣ್ಣೂರು ಮಡ್ಡಿ ಪ್ಲಾಟ್‌ನಂತಹ ಬಡವರ ಹೋರಾಟವನ್ನು ಹತ್ತಿಕ್ಕಲು ಹೋಗಿ, ಪಕ್ಷನಿಷ್ಠ ಯುವ ನಾಯಕನನ್ನು ಹೊರಹಾಕಿ, ಪಕ್ಷದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಶಾಂತಗೌಡರ ಈ ನಡೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಖಂಡಿತವಾಗಿಯೂ ದೊಡ್ಡ ಹಿನ್ನಡೆಯಾಗಲಿದೆ. ಜಿಲ್ಲಾ ನಾಯಕರು ತಕ್ಷಣವೇ ಜಾಗೃತರಾಗದಿದ್ದರೆ, ಸುಲಭವಾಗಿ ಸಿಗಬೇಕಿದ್ದ ಗೆಲುವನ್ನು ಬಿಜೆಪಿಯೇ ಸ್ವತಃ ಕೈಯಾರೆ ಕಾಂಗ್ರೆಸ್‌ಗೆ ಉಡುಗೊರೆಯಾಗಿ ನೀಡಿದರೂ ಆಶ್ಚರ್ಯವಿಲ್ಲ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






