Friday, October 23, 2026
Home ವಿಶ್ಲೇಷಣೆ Siddaramaiah: ‘ಸ್ಟಿಂಗ್’ ಹೆಸರಲ್ಲಿ ತೇಜೋವಧೆಗೆ ಯತ್ನಿಸಿದ ಕಪಟಿಗಳ ಬಣ್ಣ ಬಯಲು! ನಕಲಿ ಟೀಮ್ ನ ಅಸಲಿ...

Siddaramaiah: ‘ಸ್ಟಿಂಗ್’ ಹೆಸರಲ್ಲಿ ತೇಜೋವಧೆಗೆ ಯತ್ನಿಸಿದ ಕಪಟಿಗಳ ಬಣ್ಣ ಬಯಲು! ನಕಲಿ ಟೀಮ್ ನ ಅಸಲಿ ಕಥೆ ಬಿಚ್ಚಿಟ್ಟ ‘ಪವರ್’ ಶೆಟ್ರು!

Siddaramaiah: 'ಸ್ಟಿಂಗ್' ಹೆಸರಲ್ಲಿ ತೇಜೋವಧೆಗೆ ಯತ್ನಿಸಿದ ಕಪಟಿಗಳ ಬಣ್ಣ ಬಯಲು! ನಕಲಿ ಟೀಮ್ ನ ಅಸಲಿ ಕಥೆ ಬಿಚ್ಚಿಟ್ಟ 'ಪವರ್' ಶೆಟ್ರು!

ರಾಜ್ಯ ರಾಜಕಾರಣದ ನಿದ್ದೆಗೆಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಕೇವಲ ಗುಸುಗುಸು ಸುದ್ದಿಯಂತೆ ಹಬ್ಬಿದ್ದ ಈ ವಿಚಾರ, ಈಗ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಈ ಎಲ್ಲಾ ವಿವಾದಗಳ ಕೇಂದ್ರಬಿಂದುವಾಗಿರುವ ‘ಪವರ್ ಟಿವಿ’ ಎಂಡಿ ರಾಕೇಶ್ ಶೆಟ್ಟಿ ಅವರು ಮೌನ ಮುರಿದು ಕ್ಯಾಮರಾ ಮುಂದೆ ಬಂದು, “ಆ ಸ್ಟಿಂಗ್ ಆಪರೇಷನ್ ಮಾಡಿದ್ದು ನಾನೇ!” ಎಂದು ಸತ್ಯದ ಬಾಂಬ್ ಸಿಡಿಸಿದ್ದಾರೆ. ವಿಡಿಯೋ ಲೀಕ್ ಹಿಂದಿರುವ ಕರಾಳ ರಾಜಕೀಯ ಮುಖವಾಡ ಹಾಗೂ ಕುಮಾರಸ್ವಾಮಿ ಅವರ ವಿರುದ್ಧದ ನೇರ ಆರೋಪಗಳ ಸಂಪೂರ್ಣ ವಿವರ ಇಲ್ಲಿದೆ.

ರಾಕೇಶ್ ಶೆಟ್ಟಿ ವಿಡಿಯೋದಲ್ಲಿ ಬಿಚ್ಚಿಟ್ಟ ರೋಚಕ ಹಾಗೂ ಸ್ಫೋಟಕ ಸಂಗತಿಗಳು:

ʻʻಸಿದ್ದರಾಮಯ್ಯ (Siddaramaiah) ಕುರಿತಾದ ವಿಡಿಯೋದ ನಾಯಕ ನಾನೇʼʼ: ರಾಕೇಶ್ ಶೆಟ್ಟಿ

ಸಿನಿಮಾಗಳಲ್ಲಿ ವಿಲನ್‌ಗಳು ತಲೆಮರೆಸಿಕೊಳ್ಳುವಂತೆ, ಕಳೆದ ಕೆಲವು ದಿನಗಳಿಂದ “ರಾಕೇಶ್ ಶೆಟ್ಟಿ ಎಸ್ಕೇಪ್, ವಿದೇಶಕ್ಕೆ ಓಡಿಹೋಗಿದ್ದಾರೆ, ಪೊಲೀಸರಿಗೆ ಸಿಗುತ್ತಿಲ್ಲ” ಎಂಬ ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಆದರೆ, ಇವತ್ತು ಎಲ್ಲೂ ಓಡಿಹೋಗದೆ ನೇರವಾಗಿ ಸ್ಟುಡಿಯೋಗೆ ಬಂದಿದ್ದೇನೆ ಎಂದು ಹೇಳಿದ ರಾಕೇಶ್ ಶೆಟ್ಟಿ, “ಆ ವಿಡಿಯೋದಲ್ಲಿ ಇರುವುದು ನಾನೇ, ಬೇರೆ ಯಾರೂ ಕುಮಾರನಲ್ಲ. ನನ್ನ ಹೆಸರಿನಲ್ಲಿರುವ ‘ಶೆಟ್ಟಿ’ ಪದಕ್ಕೊಂದು ಘನತೆ ಮತ್ತು ಮರ್ಯಾದೆ ಇದೆ. ತಪ್ಪು ಮಾಡಿದ್ದರೆ ಓಡಿಹೋಗುವ ಹೇಡಿ ನಾನಲ್ಲ, ನಾನೇ ವಾಲಂಟರಿಯಾಗಿ ಬಂದು ಎವಿಡೆನ್ಸ್ ಕೊಟ್ಟಿದ್ದೇನೆ” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಎಂದರೆ ನನಗೆ ತಂದೆಯ ಸಮಾನ!

ರಾಜಕೀಯ ನಾಯಕರಲ್ಲಿ ತಾನು ಅತ್ಯಂತ ಗೌರವಿಸುವ, ಮುಸ್ಸದ್ದಿ ರಾಜಕಾರಣಿಗಳಲ್ಲಿ ಅಗ್ರಗಣ್ಯರು ಎಂದರೆ ಅದು ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ (Siddaramaiah) ಎಂದು ರಾಕೇಶ್ ಶೆಟ್ಟಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪನವರ ಮೇಲೂ ಹಿಂದೆ ಸ್ಟೋರಿ ಮಾಡಿದ್ದರೂ, ಅವರ ವ್ಯಕ್ತಿತ್ವದ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯನವರನ್ನು ತಾನು ಕೇವಲ ಒಬ್ಬ ರಾಜಕೀಯ ನಾಯಕನನ್ನಾಗಿ ನೋಡಿಲ್ಲ, ಬದಲಿಗೆ ತನ್ನ ಸ್ವಂತ ತಂದೆಯ ಸ್ಥಾನದಲ್ಲಿಟ್ಟುಕೊಂಡು ಗೌರವಿಸಿದ್ದೇನೆ ಮತ್ತು ಅವರೂ ಅದೇ ರೀತಿಯ ವಾತ್ಸಲ್ಯ ತೋರಿದ್ದಾರೆ ಎಂದು ತಮ್ಮ ಭಾವನಾತ್ಮಕ ನಂಟನ್ನು ಬಿಚ್ಚಿಟ್ಟಿದ್ದಾರೆ. ಹಾಗಿದ್ದರೂ ಈ ಸ್ಟಿಂಗ್ ಆಪರೇಷನ್ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಹನಿಟ್ರ್ಯಾಪ್’ ಸ್ಟಿಂಗ್ ವಿವಾದ; ಷಡ್ಯಂತ್ರದ ತೆರೆಮರೆಯ ಕಥೆ ಏನು? ಬೆಚ್ಚಿಬೀಳಿಸುವ ರಾಜಕೀಯ ಒಳನೋಟಗಳು!

ಅಸಲಿಗೆ ಆಪರೇಷನ್ ನಡೆದದ್ದು ಯಾವಾಗ ಮತ್ತು ಯಾಕೆ?

ಈ ಸ್ಟಿಂಗ್ ಆಪರೇಷನ್ ಮಾಡಿದ್ದು ಈಗಲ್ಲ, ಬದಲಿಗೆ 2023ರ ಫೆಬ್ರವರಿ 25ರಂದು (ಅಂದರೆ ಕಳೆದ ವಿಧಾನಸಭಾ ಚುನಾವಣೆಗೆ ಒಂದು ತಿಂಗಳ ಮುಂಚೆ) ಎಂದು ರಾಕೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಎರಡು ಪ್ರಮುಖ ಸುದ್ದಿಗಳು ಹರಿದಾಡುತ್ತಿದ್ದವು:

  • ಒಂದು, ಇವಿಎಂ (EVM) ಮೆಷಿನ್ ಹ್ಯಾಕ್ ಮಾಡಲು ಹೊರಟಿರುವ ಒಂದು ಟೀಮ್ ಬೆಂಗಳೂರಿನಲ್ಲಿ ತಿರುಗಾಡುತ್ತಿದೆ. (ಆ ಟೀಮ್ ಅನ್ನು ಕೂಡ ಪವರ್ ಟಿವಿ ಸ್ಟುಡಿಯೋಗೆ ಕರೆಸಿ ರಿಯಾಲಿಟಿ ಚೆಕ್ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿತ್ತು).
  • ಎರಡನೆಯದು, ಸಿದ್ದರಾಮಯ್ಯನವರ ವರ್ಚಸ್ಸಿಗೆ ಮಸಿ ಬಳೆದು ಅವರನ್ನು ರಾಜಕೀಯವಾಗಿ ಮುಗಿಸಲು ಒಳಗೊಳಗೆ ದೊಡ್ಡ ಮಟ್ಟದ ಸಂಚು ರೂಪಿಸುತ್ತಿರುವ ಕಪಟಿಗಳ ತಂಡವೊಂದು ಸಕ್ರಿಯವಾಗಿದೆ ಎಂಬ ಮಾಹಿತಿ ಬಂದಿತ್ತು.

ಕಾಂಗ್ರೆಸ್ ಪಕ್ಷದ ಒಳಗಡೆಯೂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ‘ಸಿಕ್ಸರ್’ ಹೊಡೆದು ಬಲಿಪಶು ಮಾಡಲು ಹವಣಿಸುತ್ತಿರುವ ಬಣಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಕಾಂಗ್ರೆಸ್ ಮಹಿಳಾ ಮುಖಂಡರೊಬ್ಬರ ಜೊತೆ ಕೇರಳಕ್ಕೆ ತೆರಳಿ ಈ ರಿಯಾಲಿಟಿ ಚೆಕ್/ಸ್ಟಿಂಗ್ ಆಪರೇಷನ್ ನಡೆಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಎರಡು ಗಂಟೆಗಳ ಸುದೀರ್ಘ ರಿಯಾಲಿಟಿ ಚೆಕ್ ಮತ್ತು ಹಣದ ಬೇಡಿಕೆ!

ಈ ವಿಡಿಯೋವನ್ನು ಕೇವಲ ಹತ್ತು ನಿಮಿಷಕ್ಕೋ, ಐದು ನಿಮಿಷಕ್ಕೋ ಕಟ್ ಮಾಡಿ ಈಗ ಯೂಟ್ಯೂಬ್‌ನಲ್ಲಿ ಹರಿಬಿಡಲಾಗಿದೆ. ಆದರೆ ಅಂದು ನಡೆದ ಆ ರಿಯಾಲಿಟಿ ಚೆಕ್ ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದಿತ್ತು!

  • ಕೇರಳದ ಒಂದು ಮನೆಗೆ ಹೋದಾಗ ಅಲ್ಲಿ ಬುರ್ಕಾ ಧರಿಸಿದ ಮಹಿಳೆಯೊಬ್ಬಳನ್ನು ಕರೆತರಲಾಗುತ್ತದೆ. ಆ ಮಹಿಳೆ 2011ರಲ್ಲಿ (ಆಗ ತನಗೆ ಕೇವಲ 14 ವರ್ಷ ವಯಸ್ಸಂತೆ, ಸಿದ್ದರಾಮಯ್ಯನವರಿಗೆ 60 ವರ್ಷ ದಾಟಿದೆ!) ಮಣಿಪಾಲ್ ಆಸ್ಪತ್ರೆ ಎದುರಿನ ಬಿಲ್ಡಿಂಗ್‌ನಲ್ಲಿ ಸಿದ್ದರಾಮಯ್ಯ ತನ್ನನ್ನು ಬಳಸಿಕೊಂಡರು ಎಂದು ಕಥೆ ಕಟ್ಟುತ್ತಾಳೆ.
  • ರಾಕೇಶ್ ಶೆಟ್ಟಿ ಆಕೆಯನ್ನು ಬಿಡದೆ ಒನ್‌ ಬೈ ಒನ್‌ ಕ್ರಾಸ್ ಪ್ರಶ್ನೆ ಮಾಡುತ್ತಾರೆ: “ಯಾವಾಗ ಪರಿಚಯವಾಯಿತು? ಮುಖ ಹೇಗಿತ್ತು? ದುಡ್ಡು ಕೊಟ್ಟರಾ?” ಎಂದಾಗ, ಆಕೆ “ನನಗೆ ದುಡ್ಡು ಕೊಟ್ಟಿಲ್ಲ, ಮಧ್ಯವರ್ತಿಗೆ ಕೊಟ್ಟರು, ಆ ಮಧ್ಯವರ್ತಿ ಯಾರು ಅಂದ್ರೆ ನನ್ನ ಅಮ್ಮನ ಫ್ರೆಂಡ್, ಅವ್ರು ಯಾರು ನಂಗೆ ಗೊತ್ತಿಲ್ಲ” ಎಂದು ಹಾರಿಕೆ ಉತ್ತರ ನೀಡುತ್ತಾಳೆ.
  • “ಈ ಘಟನೆಗೆ ಏನಾದರೂ ಸಾಕ್ಷಿ ಇದೆಯಾ?” ಎಂದು ಕೇಳಿದಾಗ ಆಕೆ “ಇಲ್ಲ” ಎನ್ನುತ್ತಾಳೆ. ಕೊನೆಗೆ ರಾಕೇಶ್ ಶೆಟ್ಟಿ, “ನಿನಗೆ ಅಣ್ಣನ ತರ ನಿಂತು ಜಸ್ಟಿಸ್ ಕೊಡಿಸುತ್ತೇನೆ” ಎಂದಾಗ, ಆ ಮಹಿಳೆ ನನಗೆ ಜಸ್ಟಿಸ್ ಬೇಡ, “ದುಡ್ಡು ಬೇಕು” ಎಂದು ಸ್ಪಷ್ಟವಾಗಿ ಬಾಯಿಬಿಡುತ್ತಾಳೆ.
  • ಇದರಿಂದ ಇದು ಸಂಪೂರ್ಣವಾಗಿ ರೋಲ್ ಕಾಲ್ ಮಾಡಲು ಮತ್ತು ಹನಿಟ್ರ್ಯಾಪ್ ಮಾಡುವ ಮೂಲಕ ಬ್ಲಾಕ್‌ಮೇಲ್ ಮಾಡುವ ನಕಲಿ ಟೀಮ್‌ನ ಕೃತ್ಯ ಎಂಬುದು ರಾಕೇಶ್ ಶೆಟ್ಟಿಗೆ ಮನವರಿಕೆಯಾಗಿದೆ.

ಮೂರು ವರ್ಷಗಳ ಮೌನ ಮತ್ತು ವೀಡಿಯೋ ಸೋರಿಕೆಯ ಕೈವಾಡ

ಇದು ಕೇವಲ ಬ್ಲಾಕ್‌ಮೇಲ್ ಮಾಡಲು ಹೊರಟ ನಕಲಿ ಜಾಲ. ಆ ಹುಡುಗಿಯನ್ನು ಆನಂತರ ಸಂಪರ್ಕಿಸಲು ಹೋದಾಗ ಆಕೆಯ ಸುಳಿವೇ ಸಿಗಲಿಲ್ಲ. ಹಾಗಾಗಿ ಇದೊಂದು ಫೇಕ್ ಗೇಮ್ ಎಂದು ತಿಳಿದು ರಾಕೇಶ್ ಶೆಟ್ಟಿ ಸುಮ್ಮನಾಗಿದ್ದರು. ಆದರೆ ಮೂರು ವರ್ಷಗಳ ನಂತರ, ಅದೇ ಕಚೇರಿಯಲ್ಲಿ ಭದ್ರವಾಗಿದ್ದ ಎರಡೂವರೆ ಗಂಟೆಗಳ ವಿಡಿಯೋವನ್ನು ಕದ್ದು, ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ, ತುಣುಕುಗಳನ್ನು ಮಾತ್ರ ಹೊರಬಿಟ್ಟು ಹನಿಟ್ರ್ಯಾಪ್ ವೀಡಿಯೋ ಎಂದು ಬಿಂಬಿಸಲಾಗಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಕೋಟಿ-ಕೋಟಿ ಗೋಲ್ಮಾಲ್! ಬಡ ನೌಕರರ ಪಿಎಫ್ ದುಡ್ಡು ಗುಳುಂ ಮಾಡ್ತಾ ಖಾಸಗಿ ಏಜೆನ್ಸಿ?ಕಚೇರಿಯ ಕಡತಗಳೇ ಬಿಚ್ಚಿದ ಕರಾಳ ಸತ್ಯ ಇಲ್ಲಿದೆ…

“ಇದು ತಜ್‌ವೆಸ್ಟಂಟ್ ರೂಮ್ ಅಲ್ಲ, ಗ್ರಾಮಾಸ್ತವ್ಯದ ಕಥೆಯೂ ಅಲ್ಲ!”: ರಾಕೇಶ್ ಶೆಟ್ಟಿ

ಈ ಇಡೀ ವಿಡಿಯೋ ಲೀಕ್ ಮತ್ತು ಷಡ್ಯಂತ್ರದ ಹಿಂದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ರಾಕೇಶ್ ಶೆಟ್ಟಿ ನೇರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಪ್ರೆಸ್‌ಮೀಟ್‌ಗಳನ್ನು ಟೀಕಿಸುತ್ತಾ ರಾಕೇಶ್ ಶೆಟ್ಟಿ ಸಿಡಿಮಿಡಿಗೊಂಡಿದ್ದಾರೆ:

  • “ಕುಮಾರಣ್ಣ ನೀನು ಹೇಳುವ ಮಾತುಗಳಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು? ಸ್ಟಿಂಗ್ ಅಸ್ತ್ರವನ್ನು ನಾವು ಬ್ರಹ್ಮಾಸ್ತ್ರವಾಗಿ ಉಪಯೋಗಿಸಿದ್ದು ರಾಜ್ಯದ ಭ್ರಷ್ಟಾಚಾರವನ್ನು ತೊಡೆದುಹಾಕಲಿಕ್ಕೆ ವಿನಃ, ಯಾರೋ ಮಲಗಿರುವ ಬೆಡ್ರೂಮ್ ಸೀನ್‌ಗಳನ್ನು ಕದ್ದು ಮುಚ್ಚಿ ಶೂಟ್ ಮಾಡಲಿಕ್ಕಲ್ಲ! ನಿಮ್ಮ ‘ಗ್ರಾಮಾಸ್ತವ್ಯ’ದ ಹೆಸರಲ್ಲಿ ಯಾರ ಮನೆಯಲ್ಲೇ ಏನೆಲ್ಲ ನಡೆಯುತ್ತದೆ ಎಂಬುದು ನಮಗೆ ಗೊತ್ತಿಲ್ಲ ಎಂದಲ್ಲ.”
  • “ರಾತ್ರಿ ವೇಳೆ ಉದ್ವಿಗ್ನರಾಗಿ ಮೂಗಿನಲ್ಲಿ ರಕ್ತ ಬರಿಸಿಕೊಳ್ಳುವ ವಿಡಿಯೋಗಳು ಅಥವಾ ಹನಿಟ್ರ್ಯಾಪ್ ಕಥೆಗಳನ್ನು ಕಟ್ಟಿಬಿಡುವವರ ಕರಾಳ ಮುಖ ನಮಗೆ ಗೊತ್ತಿದೆ. ಗಂಡಸ್ತನ ಇದ್ದರೆ ಮುಖಾಮುಖಿ ಬಂದು ಮಾತನಾಡಿ, ಕೇವಲ ಕಟ್ ಆಂಡ್ ಪೇಸ್ಟ್ ಮಾಡಿ ಅಪಪ್ರಚಾರ ಮಾಡುವುದಲ್ಲ. ಇದು ಪವರ್ ಟಿವಿಯ ಪವರ್, ನಾವು ರಣಕಹಳೆ ಮೊಳಗಿಸಿದ್ದೇವೆ, ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ!” ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ರಾಜಕೀಯ ಕೆಸರೆರೆಚಾಟದ ಮತ್ತೊಂದು ಕರಾಳ ಮುಖ

ಒಟ್ಟಾರೆಯಾಗಿ, ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರಲು ಮತ್ತು ರಾಜಕೀಯವಾಗಿ ಅಸ್ಥಿರಗೊಳಿಸಲು ಕೆಲವರು ಹೆಣೆದಿದ್ದ ಕಪಟ ಜಾಲದ ಅಸಲಿ ಮುಖವಾಡವನ್ನು ರಾಕೇಶ್ ಶೆಟ್ಟಿ ತಮ್ಮ ಸ್ಪಷ್ಟನೆಯ ಮೂಲಕ ಕಳಚಿದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಕೇವಲ ಹಣದ ದುರಾಸೆಗೆ ಬಿದ್ದ ಕೆಲ ವಂಚಕರ ಬಲೆಗೆ ಬಿದ್ದು, ರಾಜಕೀಯ ದ್ವೇಷ ಸಾಧಿಸಲು ವಿಡಿಯೋಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ನಿಜವಾದ ಬಣ್ಣ ಈಗ ಬಯಲಾಗಿದೆ. ಸತ್ಯ ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ, ಅದು ಹೊಸ್ತಿಲು ದಾಟುವಾಗ ಕುಂಟುತ್ತಾ ಬರಬಹುದು ಆದರೆ ಸುಳ್ಳಿನ ಸಾಮ್ರಾಜ್ಯ ದೀರ್ಘಕಾಲ ಬಾಳಲಾರದು ಎಂಬುದಕ್ಕೆ ಈ ಘಟನೆಯೇ ಮುಕುಟಪ್ರಾಯವಾಗಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...