Tuesday, October 27, 2026
Home ವಿಶ್ಲೇಷಣೆ Bagalkot: ಬೆಕ್ಕು ಹಾಲು ಕಾಯ್ದ ಕಥೆ! DHO ಹಗರಣಕ್ಕೆ ಟ್ವಿಸ್ಟ್; ಕುಲಕರ್ಣಿ ಅಕ್ರಮದ ತನಿಖೆಗೆ ಆರೋಪಿಯನ್ನೇ...

Bagalkot: ಬೆಕ್ಕು ಹಾಲು ಕಾಯ್ದ ಕಥೆ! DHO ಹಗರಣಕ್ಕೆ ಟ್ವಿಸ್ಟ್; ಕುಲಕರ್ಣಿ ಅಕ್ರಮದ ತನಿಖೆಗೆ ಆರೋಪಿಯನ್ನೇ ನೇಮಿಸಿದ್ರಾ DC? ಇದು ಎಡವಟ್ಟೋ ಅಥವಾ ಪ್ರಭಾವದ ಪ್ರತಾಪವೋ?

Bagalkot: ಬೆಕ್ಕು ಹಾಲು ಕಾಯ್ದ ಕಥೆ! DHO ಹಗರಣಕ್ಕೆ ಟ್ವಿಸ್ಟ್; ಕುಲಕರ್ಣಿ ಅಕ್ರಮದ ತನಿಖೆಗೆ ಆರೋಪಿಯನ್ನೇ ನೇಮಿಸಿದ್ರಾ DC? ಇದು ಎಡವಟ್ಟೋ ಅಥವಾ ಪ್ರಭಾವದ ಪ್ರತಾಪವೋ?

ಬಾಗಲಕೋಟೆ (Bagalkot) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ಸುವರ್ಣ ಕುಲಕರ್ಣಿ ಅವರ ಕುಟುಂಬಕ್ಕೆ ಸೇರಿದ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ಅಕ್ರಮಗಳ ಬಂಡವಾಳ ಒಂದೊಂದಾಗಿ ಬಯಲಾಗುತ್ತಿದೆ. ಇದೇ ವೇಳೆ ಜಿಲ್ಲಾಡಳಿತದ ವತಿಯಿಂದ ಬೆಚ್ಚಿಬೀಳಿಸುವ ಆಡಳಿತಾತ್ಮಕ ಬೆಳವಣಿಗೆಯೊಂದು ನಡೆದಿದೆ. ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಅನುಮಾನಕ್ಕೆ ಕಾರಣವಾಗಿದೆ.

ಆರೋಪಗಳ ಸುಳಿಯಲ್ಲಿ ಸಿಲುಕಿರುವ ಪ್ರಭಾರ DHO ಅವರ ಮೇಲೆಯೇ ದೂರು ಸಲ್ಲಿಕೆಯಾಗಿತ್ತು. ಆದರೆ ಈ ದೂರಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸ್ವತಃ ಆರೋಪಿ ಡಾ. ಸುವರ್ಣ ಕುಲಕರ್ಣಿ ಅವರಿಗೇ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ಈ ವಿಷಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಆರೋಪಿಯ ಕೈಗೆ ತನಿಖಾ ಪತ್ರ ನೀಡಿರುವುದು ಆಡಳಿತಾತ್ಮಕ ಎಡವಟ್ಟೋ ಅಥವಾ ಉನ್ನತ ಮಟ್ಟದ ಪ್ರಭಾವದ ಪ್ರತಾಪವೋ ಎಂಬ ಗಂಭೀರ ಪ್ರಶ್ನೆ ಮೂಡಿದೆ.

ಆರೋಪಿಯ ಕೈಗೇ ತನಿಖಾ ಪತ್ರ ನೀಡಿದ ಜಿಲ್ಲಾಡಳಿತ!

ಬಾಗಲಕೋಟೆ (Bagalkot)ಯ ನವನಗರದಲ್ಲಿರುವ ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಯಮ ಉಲ್ಲಂಘನೆ, ವೈದ್ಯಕೀಯ ನಿಯಮ ಮೀರಿರುವುದು, ಸ್ಕ್ಯಾನಿಂಗ್ ಅಕ್ರಮಗಳು ಹಾಗೂ ಅಧಿಕಾರ ದುರುಪಯೋಗದ ಕುರಿತು ಸಕ್ಷಮ ದೂರುಗಳು ದಾಖಲಾಗಿವೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಬಾಗಲಕೋಟೆ ಜಿಲ್ಲಾಧಿಕಾರಿಗಳು (DC) ಆದೇಶ ಪ್ರತಿಯೊಂದನ್ನು ಹೊರಡಿಸಿದ್ದಾರೆ. ಆದರೆ ಆ ಪತ್ರವೇ ಈಗ ಅಚ್ಚರಿಗೆ ಕಾರಣವಾಗಿದೆ.

  • ಆರೋಪಿಯೇ ಇಲ್ಲಿ ತನಿಖಾಧಿಕಾರಿ!: ನವನಗರದ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತ ಪತ್ರ ಬರೆಯಲಾಗಿದೆ. ಆದರೆ ಅಚ್ಚರಿಯೆಂದರೆ ಆ ಪತ್ರವನ್ನು ಕಳುಹಿಸಿರುವುದು ಸ್ವತಃ ಆರೋಪ ಹೊತ್ತಿರುವ ಪ್ರಭಾರ DHO ಡಾ. ಸುವರ್ಣ ಕುಲಕರ್ಣಿ ಅವರಿಗೆ…!!!
  • ಬೆಕ್ಕು ಹಾಲು ಕಾಯ್ದ ಕಥೆ: ಇಲ್ಲಿರುವುದು DHO ಅವರ ಸ್ವಂತ ಖಾಸಗಿ ಆಸ್ಪತ್ರೆ. ಸ್ಕ್ಯಾನಿಂಗ್ ಯಂತ್ರಗಳ ಲಾಗಿನ್ ಐಡಿ ಕೂಡ ಅವರ ವೈಯಕ್ತಿಕ ಇಮೇಲ್‌ನಲ್ಲಿದೆ. ತಮ್ಮದೇ ಕುಟುಂಬದ ವೈದ್ಯಕೀಯ ದಂಧೆಯ ವಿರುದ್ಧ ಬಂದಿರುವ ದೂರಿನ ಬಗ್ಗೆ ಸ್ವತಃ ಆರೋಪಿಯೇ ತನಿಖೆ ನಡೆಸಿ ವರದಿ ಕೊಡುವುದು ಎಷ್ಟರ ಮಟ್ಟಿಗೆ ನ್ಯಾಯ?
  • ಜಿಲ್ಲಾಧಿಕಾರಿಗಳ ಎಡವಟ್ಟೋ ಅಥವಾ ಒತ್ತಡವೋ?: ಇದು ಜಿಲ್ಲಾಡಳಿತದ ಕಚೇರಿಯಲ್ಲಿ ನಡೆದ ಕಣ್ಣು ಮುಚ್ಚಾಲೆ ತಂತ್ರವೋ ಅಥವಾ DHO ಮೇಡಂ ಅವರ ಅಧಿಕಾರದ ಪ್ರಭಾವವೋ ಎಂಬ ಪ್ರಶ್ನೆಗೆ ಜಿಲ್ಲೆಯ ಜನತೆ ಉತ್ತರ ಹುಡುಕುತ್ತಿದ್ದಾರೆ. ತಾವೇ ತನಿಖೆ ನಡೆಸಿ “ನಮ್ಮಲ್ಲಿ ಯಾವುದೇ ತಪ್ಪು ನಡೆದಿಲ್ಲ” ಎಂದು ಸ್ವತಃ ಪ್ರಮಾಣಪತ್ರ ಬರೆದುಕೊಳ್ಳಲು ಜಿಲ್ಲಾಧಿಕಾರಿಗಳೇ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ.

ಈ ಆದೇಶ ಪ್ರತಿ ಬಗ್ಗೆ ಜಿಲ್ಲಾಧಿಕಾರಿಗಳ ಸ್ಪಷ್ಟನೆಗೆ ಕರೆ ಮಾಡಿದಾಗ ಅವರು ಲಭ್ಯರಾಗಿರುವುದಿಲ್ಲ.

Bagalkot: ಬೆಕ್ಕು ಹಾಲು ಕಾಯ್ದ ಕಥೆ! DHO ಹಗರಣಕ್ಕೆ ಟ್ವಿಸ್ಟ್; ಕುಲಕರ್ಣಿ ಅಕ್ರಮದ ತನಿಖೆಗೆ ಆರೋಪಿಯನ್ನೇ ನೇಮಿಸಿದ್ರಾ DC? ಇದು ಎಡವಟ್ಟೋ ಅಥವಾ ಪ್ರಭಾವದ ಪ್ರತಾಪವೋ?
ಜಿಲ್ಲಾಧಿಕಾರಿಗಳ ತನಿಖಾ ಆದೇಶ ಪ್ರತಿ

ಮಾಧ್ಯಮಗಳ ಎದುರು ‘ಒಪಿಡಿ’ ನಾಟಕ: ಸ್ವತಃ ನೀಡಿದ ಹೇಳಿಕೆಯಲ್ಲೇ ಸಿಕ್ಕಿಬಿದ್ದ DHO!

ಈ ಹಿಂದೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಾಗಲಕೋಟೆ (Bagalkot) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ಸುವರ್ಣ ಕುಲಕರ್ಣಿ ಅವರು ಮಾತನಾಡುತ್ತಾ, “ನನ್ನ ಗಂಡನ ಹೆಸರಲ್ಲಿ ಆಸ್ಪತ್ರೆ ಇದೆ. ನಾನು ಸರ್ಕಾರಿ ಕರ್ತವ್ಯದ ಅವಧಿ ಮುಗಿದ ನಂತರ ಅಲ್ಲಿ ಕೇವಲ ಒಪಿಡಿ (OPD) ಮಾತ್ರ ನೋಡುತ್ತಿದ್ದೆ. ಬೇರೇನೂ ಮಾಡುತ್ತಿರಲಿಲ್ಲ” ಎಂದು ಅವರು ಸಮರ್ಥನೆ ನೀಡಿದ್ದರು.

ಆದರೆ ‘ಅಸಲಿ ಸುದ್ದಿ’ಗೆ ಲಭ್ಯವಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಅಧಿಕೃತ ದಾಖಲೆಗಳು ಅವರ ಸುಳ್ಳನ್ನು ಬಯಲು ಮಾಡಿವೆ.

  • ಒಪಿಡಿಯಲ್ಲಿ 30,000 ರೂ. ಶಸ್ತ್ರಚಿಕಿತ್ಸೆ ಶುಲ್ಕವೇ?: KPME ಪೋರ್ಟಲ್‌ನಲ್ಲಿ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್’ನ ಅಧಿಕೃತ ದರ ಪಟ್ಟಿ ಲಭ್ಯವಿದೆ. ಅದರಲ್ಲಿ ಡಾ. ಸುವರ್ಣ ಕುಲಕರ್ಣಿ (KMC Reg No: 51585) ಅವರ ಹೆಸರಿನ ಎದುರು “ಶಸ್ತ್ರಚಿಕಿತ್ಸೆ ಶುಲ್ಕ” (Surgery Fee) ರೂ. 30,000/- ಹಾಗೂ “ಸಂದರ್ಶನ ಶುಲ್ಕ” (Consultation Fee) ರೂ. 250/- ಎಂದು ಸ್ಪಷ್ಟವಾಗಿ ದಾಖಲಾಗಿದೆ.
  • ಕೇವಲ ಹೊರರೋಗಿಗಳನ್ನು (OPD) ನೋಡಿ ಮಾತ್ರೆ ಬರೆದುಕೊಡುವ ವೈದ್ಯರು ರೋಗಿಯಿಂದ 30,000 ರೂ. ಶಸ್ತ್ರಚಿಕಿತ್ಸೆ ಶುಲ್ಕ ವಸೂಲಿ ಮಾಡಲು ಹೇಗೆ ಸಾಧ್ಯ? ಒಪಿಡಿಯಲ್ಲಿ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ಇದುವರೆಗೆ ಉತ್ತರವಿಲ್ಲ.

ಸಂಪೂರ್ಣ ದಾಖಲೆಗಳಿಗೆ:- ಬಾಗಲಕೋಟೆ DHO ಭ್ರಷ್ಟಾಚಾರದ ‘ಅಸಲಿ’ ಮುಖ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ ‘ಸುವರ್ಣ’ ಸುಳ್ಳು!

‘ಇನ್‌ಪೇಷೆಂಟ್ ಚಿಕಿತ್ಸೆ ಕಟ್ಟುನಿಟ್ಟಾಗಿ ನಿಷೇಧ’: ಸರ್ಕಾರಿ ಆದೇಶಕ್ಕೆ ತಿಲಾಂಜಲಿ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಪಷ್ಟ ನಿಯಮಾವಳಿಗಳಿವೆ. ಅದರಂತೆ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು (IPD) ಅಥವಾ ಶಸ್ತ್ರಚಿಕಿತ್ಸೆ ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸರ್ಕಾರಿ ವೇತನ ಪಡೆಯುವ DHO ಡಾ. ಸುವರ್ಣ ಕುಲಕರ್ಣಿ ಅವರು ಸರ್ಕಾರಕ್ಕೆ ಮುಚ್ಚಳಿಕೆ (Bond) ನೀಡಿದ್ದಾರೆ. ಆದರೆ ಸರ್ಕಾರದ ಆದೇಶ ಹಾಗೂ ಮುಚ್ಚಳಿಕೆಯನ್ನು ಗಾಳಿಗೆ ತೂರಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಕಾನೂನುಬಾಹಿರವಾಗಿದೆ.

ಸ್ಕ್ಯಾನಿಂಗ್ ಯಂತ್ರಗಳ ಇಮೇಲ್ ಲಾಗಿನ್ ಹಾಗೂ ‘ಭ್ರೂಣ ಪತ್ತೆ’ ಗಂಭೀರ ಆರೋಪ!

  • ವೈಯಕ್ತಿಕ ಇಮೇಲ್ ಲಾಗಿನ್: ಆಸ್ಪತ್ರೆಯಲ್ಲಿದ್ದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳು (HITACHI ALOKA ಹಾಗೂ Ultrasound F-31) ನೋಂದಾಯಿಸಲ್ಪಟ್ಟಿವೆ. ಅವು ಸ್ವತಃ DHO ಡಾ. ಸುವರ್ಣ ಕುಲಕರ್ಣಿ ಅವರ ವೈಯಕ್ತಿಕ ಇಮೇಲ್ ಐಡಿ (`drsuvarnakulkarni01@gmail.com`) ಮೂಲಕವೇ ಚಾಲನೆಯಲ್ಲಿವೆ.
  • ಸಾಮಾಜಿಕ ಮಾಧ್ಯಮಗಳಲ್ಲಿ ಭ್ರೂಣ ಪತ್ತೆ ಆರೋಪ: ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ಲಿಂಗ ಪತ್ತೆ ಅಥವಾ ಭ್ರೂಣ ಪತ್ತೆ (Sex Determination) ಮಾಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. PCPNDT ಕಾಯ್ದೆಯಡಿ ಜಿಲ್ಲೆಯಲ್ಲಿ ಇದನ್ನು ತಡೆಯಬೇಕಾದ ಮುಖ್ಯಸ್ಥರೇ DHO ಆಗಿರುವುದು ದೊಡ್ಡ ವಿಪರ್ಯಾಸ.

ಜಿಲ್ಲಾಧಿಕಾರಿಗಳು ನೀಡಿರುವ ಅನುಮಾನಾಸ್ಪದ ತನಿಖಾ ಪತ್ರವನ್ನು ತಕ್ಷಣ ಹಿಂಪಡೆಯಬೇಕು. ವಿಶೇಷ ತಂಡದಿಂದ ಆಸ್ಪತ್ರೆಗೆ ಏಕಾಏಕಿ ದಾಳಿ ನಡೆಸಬೇಕು. ಸ್ಕ್ಯಾನಿಂಗ್ ಯಂತ್ರಗಳ ಡಿಜಿಟಲ್ ಹಿಸ್ಟರಿಯನ್ನು (Scanning Logs) ವಶಕ್ಕೆ ಪಡೆದು ಉನ್ನತ ಮಟ್ಟದ ತನಿಖೆ ನಡೆಸಬೇಕು.

ಆಯುರ್ವೇದ ವೈದ್ಯರ ಹೆಸರಲ್ಲಿ ‘ಅಲೋಪತಿ’ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ!

ಆಸ್ಪತ್ರೆಯ ಮಾಲೀಕರು ಹಾಗೂ ನಿರ್ವಾಹಕರು ಡಾ. ವಿವೇಕಾನಂದ ಎನ್. ಕುಲಕರ್ಣಿ. ಇವರು ಹೊಂದಿರುವ ಪದವಿ BAMS, MD (ಕಾಯಚಿಕಿತ್ಸಾ). ಅಂದರೆ ಇವರು ಆಯುರ್ವೇದ ವೈದ್ಯರು. ಆದರೆ ಇವರ ಹೆಸರಿನಲ್ಲಿ ‘ಅಲೋಪತಿ ಲೆವೆಲ್-2 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ನೋಂದಣಿ ಸಿಕ್ಕಿರುವುದು ಹೇಗೆ ಎಂಬುದು ದೊಡ್ಡ ಹಗರಣವಾಗಿದೆ. ಪತ್ನಿ ಡಾ. ಸುವರ್ಣ ಕುಲಕರ್ಣಿ ಅವರ ಅಲೋಪತಿ ವೈದ್ಯಕೀಯ ಪದವಿ ಹಾಗೂ ಅಧಿಕಾರವನ್ನು ಬಳಸಿ ಈ ಅಕ್ರಮ ನಡೆಸಲಾಗಿದೆ.

ಸಾರ್ವಜನಿಕರ ಪ್ರಮುಖ ಆಗ್ರಹಗಳು:

  • ಆರೋಪಿ DHO ಕೈಗೇ ತನಿಖೆ ನೀಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು. ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಮಿತಿ ರಚಿಸಬೇಕು.
  • ಸರ್ಕಾರಿ ಸೇವಾ ನಿಯಮ ಉಲ್ಲಂಘಿಸಿ ಖಾಸಗಿ ಆಸ್ಪತ್ರೆಯಲ್ಲಿ ದಂಧೆ ನಡೆಸುತ್ತಿರುವ DHO ಡಾ. ಸುವರ್ಣ ಕುಲಕರ್ಣಿ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು.
  • ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿರುವ ಭ್ರೂಣ ಪತ್ತೆ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸ್ಕ್ಯಾನಿಂಗ್ ಮೆಷಿನ್ ಹಿಸ್ಟರಿಯನ್ನು ವಿಧಿವಿಜ್ಞಾನ ತನಿಖೆಗೆ ಒಳಪಡಿಸಬೇಕು.
  • ಆಯುರ್ವೇದ ವೈದ್ಯರ ಹೆಸರಿನಲ್ಲಿ ನಡೆಯುತ್ತಿರುವ ಅಲೋಪತಿ ಆಸ್ಪತ್ರೆಯ KPME ನೋಂದಣಿಯನ್ನು ರದ್ದುಗೊಳಿಸಬೇಕು.
ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...