Saturday, October 24, 2026
Home ವಿಶ್ಲೇಷಣೆ Farmers Protest: ರೈತ ಹೋರಾಟದ ‘ಕೋಡಿ’ಮರೆತ ನೈತಿಕತೆ! ಸ್ವಾರ್ಥದ ಅಸೂಯೆಯೋ, ಉತ್ತರ ಕರ್ನಾಟಕದ ರೈತರ ಮೇಲಿನ...

Farmers Protest: ರೈತ ಹೋರಾಟದ ‘ಕೋಡಿ’ಮರೆತ ನೈತಿಕತೆ! ಸ್ವಾರ್ಥದ ಅಸೂಯೆಯೋ, ಉತ್ತರ ಕರ್ನಾಟಕದ ರೈತರ ಮೇಲಿನ ಹೊಟ್ಟೆಕಿಚ್ಚೋ?

Farmers Protest: ರೈತ ಹೋರಾಟದ 'ಕೋಡಿ'ಮರೆತ ನೈತಿಕತೆ! ಸ್ವಾರ್ಥದ ಅಸೂಯೆಯೋ, ಉತ್ತರ ಕರ್ನಾಟಕದ ರೈತರ ಮೇಲಿನ ಹೊಟ್ಟೆಕಿಚ್ಚೋ?

ಬೆವರು ಹರಿಸಿದ ರೈತನ ಹೋರಾಟಕ್ಕೆ ಸ್ವಾರ್ಥ ನಾಯಕತ್ವದ ಕಳಂಕ!

ಕರ್ನಾಟಕದಲ್ಲಿ ರೈತ ಚಳುವಳಿ (Farmers Protest) ಎಂದರೆ ಅದಕ್ಕೊಂದು ಪವಿತ್ರವಾದ ಚರಿತ್ರೆಯಿದೆ. ಪ್ರೊ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಹಾಗೂ ರುದ್ರಪ್ಪನವರಂತಹ ಮಹಾನಾಯಕರು ತಮ್ಮ ರಕ್ತ-ಬೆವರನ್ನು ನೀರೆರೆದು ಕಟ್ಟಿದ ಸಂಘಟನೆಯದು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಸ್ವಯಂಘೋಷಿತ ‘ರೈತ ನಾಯಕರು’ ತಮ್ಮ ಸ್ವಾರ್ಥ ಹಾಗೂ ನಾಯಕತ್ವದ ಅಭದ್ರತೆಗಾಗಿ ಅದೇ ರೈತರ ಹೋರಾಟಕ್ಕೆ ಚೂರಿ ಹಾಕುವ ಕೆಲಸಕ್ಕೆ ಕೈಹಾಕಿರುವುದು ಅತ್ಯಂತ ಅಸಹ್ಯಕರ.

ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರು ತಮ್ಮ ರಕ್ತ ಸುರಿಸಿ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ (FRP/SAP) ಹಾಗೂ ಎಂ.ಎಸ್.ಪಿ (MSP) ಪಡೆಯಲ್ಲಿ ಹಗಲಿರುಳು ಧರಣಿ ನಡೆಸಿ ಜಯಗಳಿಸಿದ್ದಾರೆ. ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ಕಷ್ಟಪಟ್ಟು ಸಂಘಟಿಸಿದ ಈ ಐತಿಹಾಸಿಕ ಚಳುವಳಿಯನ್ನು, ಕೋಡಿಹಳ್ಳಿ ಚಂದ್ರಶೇಖರ್ ಅವರು “ಕಾಂಗ್ರೆಸ್ ಕೃಪಾಪೋಷಿತ ಹೋರಾಟ” ಹಾಗೂ “ಸರ್ಕಾರವೇ ಜನರನ್ನು ಸೇರಿಸಿಕೊಟ್ಟಿದೆ” ಎಂದು ಹೀಗಳೆದಿರುವುದು ಉತ್ತರ ಕರ್ನಾಟಕದ ಶ್ರಮಜೀವಿ ರೈತರ ಮುಖಕ್ಕೆ ಹೊಡೆದಂತಾಗಿದೆ.

ಇದನ್ನೂ ಓದಿ: ಅಹಿಂದಾಕ್ರೋಶ ಯಾತ್ರೆ- ಸಾಮಾಜಿಕ ನ್ಯಾಯದ ಹಾದಿಯಲ್ಲಿ ಯುವ ನಾಯಕ ಯಲ್ಲಪ್ಪ ಹೆಗಡೆ ಅವರ ಐತಿಹಾಸಿಕ ಹೆಜ್ಜೆ

ಚೂನಪ್ಪ ಪೂಜಾರಿ-ಗುರೂಜಿ ಬೆಳೆದರೆ ಕೋಡಿಹಳ್ಳಿಗೆ ಹೊಟ್ಟೆಯುರಿಯೇ?

Farmers Protest: ಉತ್ತರ ಕರ್ನಾಟಕದ ಪ್ರತಿಯೊಬ್ಬ ಸಣ್ಣ ಮತ್ತು ಅತಿ ಸಣ್ಣ ರೈತನ ಇಂದಿನ ಗಂಭೀರ ಪ್ರಶ್ನೆ ಇದು: “ಅತ್ತ ದಕ್ಷಿಣದಲ್ಲಿ ನೆಲೆ ಕಳೆದುಕೊಂಡಿರುವ ಕೋಡಿಹಳ್ಳಿಗೆ, ಇತ್ತ ಉತ್ತರ ಕರ್ನಾಟಕದ ನೈಜ ರೈತ ನಾಯಕರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಶುರುವಾಗಿದೆಯೇ?”

  • ನೆಲದ ಸತ್ಯ ಅರಿಯದ ಕಪಟ ಆರೋಪ:

ಸಕ್ಕರೆ ಕಾರ್ಖಾನೆ ಮಾಲೀಕರ ಕಳ್ಳತೂಕ, ಕಮಿಷನ್ ದಂಧೆ ಹಾಗೂ ಎಫ್.ಆರ್.ಪಿ ಮೋಸದಿಂದ ಕಂಗೆಟ್ಟಿದ್ದ ರೈತರನ್ನು ಸಂಘಟಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಳಿಯನ್ನೂ ಲೆಕ್ಕಿಸದೆ ನಿಂತವರು ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ. ಸಾವಿರಾರು ರೈತರು ತಮ್ಮ ಹಕ್ಕಿಗಾಗಿ ಸ್ವಪ್ರೇರಣೆಯಿಂದ ರಸ್ತೆಗೆ ಇಳಿದಿದ್ದರೆ, ಅದನ್ನು “ರಾಜಕೀಯ ಪ್ರಾಯೋಜಿತ” ಎಂದು ಕರೆಯುವುದು ರೈತರ ಬೆವರಿನ ಹನಿಗಳಿಗೆ ಎಸಗಿದ ನಂಬಿಕೆದ್ರೋಹ.

  • ಅಭದ್ರತೆಯಿಂದ ಹುಟ್ಟಿದ ಅಸೂಯೆ:

ತಮ್ಮ ಕಣ್ಣೆದುರೇ ಉತ್ತರ ಕರ್ನಾಟಕದ ಹೊಸ ಪೀಳಿಗೆಯ ನಾಯಕರು ಸಾವಿರಾರು ಜನರನ್ನು ಒಟ್ಟುಗೂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಮಂಡಿಯೂರುವಂತೆ ಮಾಡಿದ್ದನ್ನು ಸಹಿಸಿಕೊಳ್ಳಲು ಕೋಡಿಹಳ್ಳಿಯವರ ಅಹಂಗೆ ಸಾಧ್ಯವಾಗುತ್ತಿಲ್ಲ. ತಮ್ಮ ಪೀಠ ಅಲ್ಲಾಡುತ್ತಿದೆ ಎಂಬ ಭಯದಿಂದಲೇ ಅವರು ಈ ರೀತಿ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವುದು ರೈತರ ಆಕ್ರೋಶದ ನುಡಿಯಾಗಿದೆ.

ನೈತಿಕತೆಯ ಮಾತಾಡುವ ಕೋಡಿಹಳ್ಳಿಯದ್ದೇ ಸರಣಿ ಕಪ್ಪು ಚುಕ್ಕೆಗಳ ಇತಿಹಾಸ!

ಇನ್ನೊಬ್ಬರ ಹೋರಾಟದ (Farmers Protest) ಪವಿತ್ರತೆಯನ್ನು ಪ್ರಶ್ನಿಸುವ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಒಮ್ಮೆ ಕನ್ನಡಿಯ ಮುಂದೆ ನಿಂತು ತಮ್ಮ ಇತಿಹಾಸವನ್ನು ನೋಡಿಕೊಳ್ಳಬೇಕಿದೆ:

  • ರೈತ ಸಂಘದಿಂದಲೇ ಗೇಟ್‌ಪಾಸ್ ಪಡೆದ ನಾಯಕ!

ಇಡೀ ರಾಜ್ಯಕ್ಕೆ ರೈತ ನಾಯಕ ಎಂದು ಕೊಚ್ಚಿಕೊಳ್ಳುವ ಕೋಡಿಹಳ್ಳಿಯವರನ್ನು, ರೈತ ಸಂಘದ ಮೂಲ ಪದಾಧಿಕಾರಿಗಳೇ ಅವರ ಸ್ವಾರ್ಥ ನಡವಳಿಕೆಗಾಗಿ ಸಂಘಟನೆಯಿಂದ ಉಚ್ಚಾಟನೆ (ವಜಾ) ಮಾಡಿದ್ದರು. ಸಂಘಟನೆಯ ಹೆಸರನ್ನು ತಮ್ಮ ರಾಜಕೀಯ ಒಪ್ಪಂದಗಳಿಗೆ ಹಾಗೂ ಸ್ವಂತ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಹೊತ್ತು ಮುಖಭಂಗ ಅನುಭವಿಸಿದವರು ಇದೇ ಕೋಡಿಹಳ್ಳಿ.

  • ಪ್ರಾಮಾಣಿಕ ಕಾರ್ಯಕರ್ತರ ಕಣ್ಣೀರು:

ಸಂಘಟನೆಗಾಗಿ ಜೀವನವನ್ನೇ ಮುಡಿಪಾಡಿಗಿಟ್ಟ ಹೋರಾಟಗಾರರನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟು, ಅವರನ್ನು ಸಾರ್ವಜನಿಕವಾಗಿ ಕಣ್ಣೀರಿಡುವಂತೆ ಮಾಡಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ.

  • ಶ್ರಮಜೀವಿ ಕುರುಬ ಸಮುದಾಯಕ್ಕೆ ಜಾತಿನಿಂದನೆ ಹಾಗೂ ಕ್ಷಮೆಯಾಚನೆ!

ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ಲೆಕ್ಕಾಚಾರದ ಬಗ್ಗೆ ಮಾತನಾಡುತ್ತಾ, “ಈ ಕುರಿಕಾಯೋನ ಕೈಗೆ ಲೆಕ್ಕಾಚಾರ ಕೊಟ್ರೆ ಹೇಗೆ?” ಎಂದು ಬಾಯಿಗೆ ಬಂದಂತೆ ಮಾತನಾಡಿ, ರಾಜ್ಯದ ಪ್ರಮುಖ ಶ್ರಮಜೀವಿ ಕುರುಬ ಸಮುದಾಯಕ್ಕೆ ಬಹಿರಂಗವಾಗಿ ಅವಮಾನ ಮಾಡಿದ್ದರು. ಆ ಬಳಿಕ ಇಡೀ ರಾಜ್ಯ ಉರಿದು ಬಿದ್ದಾಗ, ಗತಿ ಕಾಣದೆ ವೀಡಿಯೋ ಮುಂದೆ ಬಂದು ತಗ್ಗಿ-ಬಗ್ಗಿ ಕ್ಷಮೆ ಕೇಳಿದ ಘಟನೆ ಇವರ ನೈತಿಕತೆ ಎಷ್ಟು ಪಾತಾಳಕ್ಕೆ ಕುಸಿದಿದೆ ಎಂಬುದಕ್ಕೆ ಸಾಕ್ಷಿ!

ಸ್ವಂತ ಸಂಘಟನೆಯಲ್ಲೇ ಗೆಟ್‍ಔಟ್ ಎನಿಸಿಕೊಂಡು, ಜಾತಿನಿಂದನೆ ಮಾಡಿ ಕ್ಷಮೆ ಕೇಳಿದ ಇಂತಹ ವ್ಯಕ್ತಿ, ಇಂದು ಪ್ರಾಮಾಣಿಕವಾಗಿ ಹೋರಾಡುತ್ತಿರುವ ಚೂನಪ್ಪ ಪೂಜಾರಿ ಮತ್ತು ಶಶಿಕಾಂತ್ ಗುರೂಜಿ ಅವರ ನಾಯಕತ್ವಕ್ಕೆ ಬೆರಳು ತೋರಿಸುವುದು ಎಷ್ಟರ ಮಟ್ಟಿಗೆ ಸರಿ?

ಇದನ್ನೂ ಓದಿ: ದೆಹಲಿಯಲ್ಲಿ ಮುಗ್ಗರಿಸಿದ ಮಾತುಕತೆ: ಅನ್ನದಾತರ ಗೋಳು, ಆಕ್ರೋಶ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ರಣಕಹಳೆ

ಉತ್ತರ ಕರ್ನಾಟಕದ ರೈತರ ಸ್ವಾಭಿಮಾನಕ್ಕೆ ಸವಾಲು!

ಬೆಂಗಳೂರಿನ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಮಾಧ್ಯಮಗಳ ಮುಂದೆ ಬೈಟ್ ಕೊಡುವುದನ್ನೇ ಹೋರಾಟ ಎಂದುಕೊಂಡವರಿಗೆ, ಉತ್ತರ ಕರ್ನಾಟಕದ ರೈತನ ಹಸಿವು ಮತ್ತು ಹೋರಾಟದ ಉರಿ ಅರ್ಥವಾಗುವುದಿಲ್ಲ.

  • ರೈತರ ಬೆವರಿನ ಪ್ರತಿಕ್ರಿಯೆ:

ಕೋಡಿಹಳ್ಳಿಯವರ ಈ ಅಸಹ್ಯಕರ ಹೇಳಿಕೆಗೆ ಚೂನಪ್ಪ ಪೂಜಾರಿ ಅವರು ತಕ್ಷಣವೇ ತಕ್ಕ ಉತ್ತರ ನೀಡಿದ್ದು, “ನಮ್ಮದು ರೈತರ ನೈಜ ಹೋರಾಟ. ನಮಗೆ ಯಾರೋ ಸರ್ಕಾರ ಜನರನ್ನು ಸೇರಿಸಿಕೊಡಬೇಕಿಲ್ಲ, ರೈತರ ಹೊಟ್ಟೆಯ ಹಸಿವು ನಮ್ಮನ್ನು ರಸ್ತೆಗೆ ತಂದಿದೆ” ಎಂದು ಕೋಡಿಹಳ್ಳಿಯವರ ಕಪಟತನದ ಮುಖವಾಡವನ್ನು ಕಳಚಿ ಬಿಸಾಕಿದ್ದಾರೆ.

ಪ್ರಾದೇಶಿಕ ಅಸಮಾನತೆಯ ಗರ್ವ:

ಉತ್ತರ ಕರ್ನಾಟಕದ ರೈತರು ಹೋರಾಟ ಮಾಡಿ ಗೆದ್ದರೆ ಅದನ್ನು ಸಹಿಸದ, ಅವರ ನಾಯಕತ್ವವನ್ನು ಕೀಳಾಗಿ ಕಾಣುವ ಈ ದಕ್ಷಿಣದ ಕೆಲವು ಸ್ವಾರ್ಥ ನಾಯಕರ ಧೋರಣೆ ಇಡೀ ರೈತ ಕುಲಕ್ಕೇ ಮಾರಕ. ಕಷ್ಟಪಟ್ಟು ಹೋರಾಡಿ ಕಬ್ಬಿಗೆ ದರ ನಿಗದಿ ಮಾಡಿಸುವ ಹಂತಕ್ಕೆ ತಂದ ನಾಯಕರನ್ನು ಪ್ರೋತ್ಸಾಹಿಸುವ ಬದಲು, ಅವರ ಕಾಲಳೆಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಸ್ವಾರ್ಥದ ‘ಕೋಡಿ’ಗೆ ರೈತ ಸಮುದಾಯವೇ ತಕ್ಕ ಪಾಠ ಕಲಿಸಲಿದೆ!

ರೈತ ಹೋರಾಟ ಎನ್ನುವುದು ಯಾರೋ ಒಬ್ಬಿಬ್ಬರ ಎಸ್ಟೇಟ್ ಅಲ್ಲ! ಅದು ಕೋಟಿ ಕೋಟಿ ಶ್ರಮಿಕರ ಉಸಿರು. ಸರಣಿ ವಿವಾದಗಳು, ಸ್ವಂತ ಸಂಘಟನೆಯಿಂದಲೇ ಉಚ್ಚಾಟನೆ, ಜಾತಿನಿಂದನೆಯ ಕಳಂಕ ಹೊತ್ತು ನೈತಿಕತೆ ಕಳೆದುಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಇನ್ನಾದರೂ ತಮ್ಮ ಕುಹಕದ ಹೇಳಿಕೆಗಳನ್ನು ನಿಲ್ಲಿಸಲಿ.

ಉತ್ತರ ಕರ್ನಾಟಕದ ಶ್ರಮಜೀವಿ ರೈತರು ಹಾಗೂ ಚೂನಪ್ಪ ಪೂಜಾರಿ-ಶಶಿಕಾಂತ್ ಗುರೂಜಿ ಅವರಂತಹ ನೈಜ ಹೋರಾಟಗಾರರು ಇಂತಹ ಸಸ್ತಾ ಪ್ರಚಾರದ ತಂತ್ರಗಳಿಗೆ ಬಗ್ಗುವುದಿಲ್ಲ. ನಕಲಿ ನಾಯಕರ ಕಪಟ ನಾಟಕಗಳನ್ನು ಚೆನ್ನಾಗಿ ಬಲ್ಲ ರೈತ ಸಮುದಾಯ, ಇಂತಹ ಹೊಟ್ಟೆಕಿಚ್ಚಿನ ಹೇಳಿಕೆಗಳನ್ನು ಕಸದ ಬುಟ್ಟಿಗೆ ಎಸೆದು ತಮ್ಮ ಒಗ್ಗಟ್ಟಿನ ಹೋರಾಟವನ್ನು ಮುಂದುವರಿಸಲಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...