ದೇಶದ ಬೆನ್ನೆಲುಬಾದ ರೈತರ ದೆಹಲಿ ಯಾತ್ರೆ ಮತ್ತು ಕೇಂದ್ರ ಸರ್ಕಾರದ ಜೊತೆಗಿನ ಮಹತ್ವದ ಸಭೆಯು ಕೊನೆಗೂ ವಿಫಲಗೊಂಡಿದೆ. ದೆಹಲಿಯಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯು ಯಾವುದೇ ನಿರ್ಣಾಯಕ ತೀರ್ಮಾನಕ್ಕೆ ಬಾರದೆ ಮುಕ್ತಾಯಗೊಂಡಿರುವುದು ಅನ್ನದಾತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಸೇರಿ ದೊಡ್ಡ ಮಟ್ಟದಲ್ಲಿ ಹೋರಾಟ (Farmers Protest) ನಡೆಸಿ, ಅಪಾರ ನಿರೀಕ್ಷೆಗಳೊಂದಿಗೆ ದೆಹಲಿಗೆ ತೆರಳಿದ್ದ ರೈತ ಮುಖಂಡರಿಗೆ ಕೇಂದ್ರ ಸರ್ಕಾರದಿಂದ “ಒಂದು ತಿಂಗಳು ಅಥವಾ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ” ಎಂಬ ನಿರಾಶಾದಾಯಕ ಉತ್ತರ ಸಿಕ್ಕಿದೆ. ಇದರ ಬೆನ್ನಲ್ಲೇ ಕೆಂಡಾಮಂಡಲವಾಗಿರುವ ರಾಜ್ಯ ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಅಧ್ಯಕ್ಷರಾದ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ, ರಾಜ್ಯಾದ್ಯಂತ ಇಂದು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಭರ್ಜರಿ ಸಿದ್ಧತೆಗಳು ನಡೆದಿವೆ.
ದೆಹಲಿ ಸಭೆಯ ವೈಫಲ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ
Farmers Protest: ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕೃಷಿ ಮತ್ತು ಪೆಟ್ರೋಲಿಯಂ ಸಚಿವರುಗಳ ಸಮ್ಮುಖದಲ್ಲಿ ಸಭೆ ನಿಗದಿಯಾಗಿತ್ತು. ರಾಜ್ಯದಿಂದ ನೂರಕ್ಕೂ ಅಧಿಕ ರೈತ ಮುಖಂಡರು ಭಾಗವಹಿಸಿ, ಕಬ್ಬಿನ ಕನಿಷ್ಠ ಬೆಂಬಲ ಬೆಲೆ (MSP) ಅಥವಾ FRP ದರವನ್ನು ಪ್ರತಿ ಟನ್ ಕಬ್ಬಿಗೆ ಕನಿಷ್ಠ 60 ರೂಪಾಯಿಗಳಂತೆ (ಹಾಗೂ ಸಕ್ಕರೆಗೆ 60ರೂ.) ಹೆಚ್ಚಿಸಬೇಕು, ಎಥೆನಾಲ್ ಖರೀದಿಯನ್ನು ಸಂಪೂರ್ಣವಾಗಿ ಮಾಡಬೇಕು, ವಾಣಿಜ್ಯ ಬಳಕೆಯ ಸಕ್ಕರೆ ಬೆಲೆಯನ್ನು 100ರೂ.ಗೆ ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ದಾಖಲೆ ಸಮೇತ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದರು.
ಆದರೆ, ರೈತರ ಈ ಎಲ್ಲಾ ಪ್ರಮುಖ ಬೇಡಿಕೆಗಳ ಬಗ್ಗೆ ತಕ್ಷಣವೇ ಯಾವುದೇ ಸಕಾರಾತ್ಮಕ ನಿರ್ಧಾರ ಕೈಗೊಳ್ಳದೆ, ಕಾಲಾವಕಾಶಾವನ್ನು ಕೇಳುವ ಮೂಲಕ ಕೇಂದ್ರ ಸಚಿವರು ಸಭೆಯನ್ನು ಮುಗಿಸಿದ್ದಾರೆ. ರೈತರ ಸಂಕಷ್ಟಗಳನ್ನು ಆಲಿಸಿದರೂ ಸಹ ಅಂತಿಮವಾಗಿ ಯಾವುದೇ ಸ್ಪಷ್ಟ ಭರವಸೆ ನೀಡದಿರುವುದು ಅನ್ನದಾತರಿಗೆ ಮಾಡಿರುವ ದೊಡ್ಡ ವಂಚನೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹುಬ್ಬಳ್ಳಿಯಲ್ಲಿ ನಮ್ಮವರ ಮುಂದೆ ವಿಶ್ವಾಸದ ಮಾತುಗಳನ್ನಾಡಿ, ಇಂದು ದೆಹಲಿಗೆ ಕರೆಸಿಕೊಂಡು ಸಭೆ ನಡೆಸಿ ಕಾಲಹರಣ ಮಾಡಿರುವುದು ನಮ್ಮನ್ನು ಅವಮಾನಿಸಿದಂತೆ” ಎಂದು ಚೂನಪ್ಪ ಪೂಜಾರಿ ತೀವ್ರವಾಗಿ ಕಿಡಿಕಾರಿದ್ದಾರೆ.
ಮುಗಿಲುಮುಟ್ಟಿದ ರೈತರ ಆಕ್ರೋಶ: ಚೂನಪ್ಪ ಪೂಜಾರಿ ಉಗ್ರ ನುಡಿಗಳು
ಕೇಂದ್ರ ಸರ್ಕಾರದ ಈ ಧೋರಣೆಯನ್ನು ಖಂಡಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ (Farmers Protest) ಅವರು ಮಾತನಾಡಿ, ರೈತರ ಬದುಕಿನ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ. ದೇಶದಲ್ಲಿ ಡೀಸೆಲ್, ಪೆಟ್ರೋಲ್ ಹಾಗೂ ರಸಗೊಬ್ಬರಗಳ ಬೆಲೆಗಳನ್ನು ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಿರುವ ಸರ್ಕಾರ, ರಾತ್ರಿಕರಾತ್ರಿ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆದರೆ ಅನ್ನದಾತರಿಗೆ ನ್ಯಾಯ ಒದಗಿಸುವ ವಿಚಾರ ಬಂದಾಗ ಮಾತ್ರ ಮೀನಾಮೇಷ ಎಣಿಸುತ್ತದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ಬರಗಾಲದಿಂದ ನಾಡಿನ ರೈತರು ಕಂಗಾಲಾಗಿದ್ದಾರೆ. ಹೊಲಗಳಲ್ಲಿ ಬೆಳೆಗಳು ಒಣಗಿ ಹೋಗುತ್ತಿದ್ದು, ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕೇಂದ್ರ ಸರ್ಕಾರ ರೈತರ ಪರವಾಗಿ ಸ್ಪಂದಿಸದೆ ಕಾರ್ಖಾನೆಗಳ ಮಾಲೀಕರಿಗೆ ಮಣಿದಿದೆ” ಎಂದು ಚೂನಪ್ಪ ಪೂಜಾರಿ ಆರೋಪಿಸಿದ್ದಾರೆ. ಕಬ್ಬು ಬೆಳೆಗಾರರನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ಮೊಂಡುತನ ಮುಂದುವರಿದರೆ ರಾಜ್ಯದಲ್ಲಿ ರೈತರು ಬದುಕುವುದೇ ಕಷ್ಟವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ
ದೆಹಲಿ ಸಭೆ ವಿಫಲವಾಗಿರುವುದನ್ನು ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಇಂದು (ಮಂಗಳವಾರ) ಬೆಳಿಗ್ಗೆ 11 ಗಂಟೆಯಿಂದ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಕರೆಯಿಡಲಾಗಿದೆ. ಬೆಳಗಾವಿ ಜಿಲ್ಲೆಯ ಕೋಗನಳ್ಳಿ ಚೆಕ್‌ಪೋಸ್ಟ್, ಹತ್ತರಗಿ ಟೋಲ್ ನಾಕಾ ಹಾಗೂ ಹಿರೆಭಾಗ್ಯವಾಡಿ ಟೋಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವ ಪ್ರತಿಯೊಂದು ಜಿಲ್ಲೆಯಲ್ಲೂ ರೈತರು ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟವನ್ನು ತೀವ್ರಗೊಳಿಸಲಿದ್ದಾರೆ. ಮಹಾರಾಷ್ಟ್ರದಲ್ಲೂ ಕೂಡ ರೈತ ಮುಖಂಡರು ಇದಕ್ಕೆ ಬೆಂಬಲ ಸೂಚಿಸಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಉಗ್ರ ಪ್ರತಿಭಟನೆಗೆ ರಣಕಹಳೆ ಮೊಳಗಿದೆ. ವಿವಿಧ ಕನ್ನಡಪರ ಸಂಘಟನೆಗಳು, ವಕೀಲರು ಹಾಗೂ ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗಿದೆ.
ಪೊಲೀಸ್ ಇಲಾಖೆಗೆ ಮನವಿ ಹಾಗೂ ಶಾಂತಿಯುತ ಪ್ರತಿಭಟನೆಗೆ ಸೂಚನೆ
ರಸ್ತೆ ಬಂದ್ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಥವಾ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ರೈತ ಮುಖಂಡರು ಎಚ್ಚರಿಕೆ ವಹಿಸಿದ್ದಾರೆ. ಪೊಲೀಸ್ ಇಲಾಖೆಗೆ ಕೈ ಮುಗಿದು ವಿನಂತಿಸಿಕೊಂಡಿರುವ ಚೂನಪ್ಪ ಪೂಜಾರಿ, “ನಾವು ಸಾಯುವ ಸ್ಥಿತಿಯಲ್ಲಿದ್ದೇವೆ, ನಮಗೆ ಸಾವಿನ ಬಾಗ್ಯ ಕೊಡಬೇಡಿ. ದಯವಿಟ್ಟು ನಮ್ಮ ಹೋರಾಟಕ್ಕೆ ಪೊಲೀಸ್ ಇಲಾಖೆಯೂ ಸಹಕರಿಸಿ, ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ನಮ್ಮ ಜೊತೆ ನಿಲ್ಲಿ” ಎಂದು ಮನವಿ ಮಾಡಿದ್ದಾರೆ. ಸಾರ್ವಜನಿಕರು ಸಹ ಈ ಹೋರಾಟದಲ್ಲಿ ಕೈಜೋಡಿಸಿ, ಅನ್ನದಾತರ ಉಳುವಿಗಾಗಿ ಒಂದು ದಿನ ಸಹಕರಿಸಬೇಕೆಂದು ಕೋರಲಾಗಿದೆ.
ಕೇಂದ್ರ ಸರ್ಕಾರದ ಜೊತೆಗಿನ ಸಭೆಯ ವೈಫಲ್ಯವು ಕೇವಲ ಕಬ್ಬು ಬೆಳೆಗಾರರ ಸಮಸ್ಯೆಯಷ್ಟೇ ಅಲ್ಲದೆ, ಇಡೀ ಕೃಷಿ ಕ್ಷೇತ್ರದ ಅಸ್ಥಿರತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಬೆಲೆ ಏರಿಕೆಯ “ಬೆನ್ನಿಗೆ ಬಿದ್ದಿರುವ” ರೈತರಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಇಂದಿನ ರಾಷ್ಟ್ರೀಯ ಹೆದ್ದಾರಿ ಬಂದ್ ಸಾರಲಿದೆ. ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಾದ MSP ಹಾಗೂ FRP ದರವನ್ನು ತಕ್ಷಣವೇ ಹೆಚ್ಚಿಸಬೇಕಿದೆ. ಇಲ್ಲದಿದ್ದರೆ ಅನ್ನದಾತರ ಆಕ್ರೋಶದ ಕಿಚ್ಚು ಇಡೀ ರಾಜ್ಯದಾದ್ಯಂತ ಮತ್ತಷ್ಟು ಉರಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






