ವಿಶೇಷ ತನಿಖಾ ವರದಿ:
ಬಾಗಲಕೋಟೆ (Bagalkot): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂದರೆ ಬಡವರ ಪಾಲಿಗೆ ಜೀವ ದೇವಸ್ಥಾನವಿದ್ದಂತೆ. ರಾಜ್ಯದ ಮೂಲೆಮೂಲೆಯಿಂದ ಬರುವ ಬಡ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರ ಆರೋಗ್ಯ ರಕ್ಷಣೆ ಮಾಡಬೇಕಾದ ಪ್ರಮುಖ ಜವಾಬ್ದಾರಿ ಈ ಇಲಾಖೆಯ ಮೇಲಿದೆ. ಆದರೆ, ಬಾಗಲಕೋಟೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ (DHO) ಕಚೇರಿಯಲ್ಲಿ ಮಾತ್ರ ಇದಕ್ಕೆ ಸಂಪೂರ್ಣ ವಿಪರೀತವಾದ ದೃಶ್ಯಗಳು ಕಂಡುಬರುತ್ತಿವೆ. ಇಲಾಖೆಯ ನಿಯಮಗಳಿಗೆ ತಿಲಾಂಜಲಿ ಇಟ್ಟು, ಟೆಂಡರ್ ಪ್ರಕ್ರಿಯೆಗಳಲ್ಲಿ ಹಾಗೂ ಕಡತಗಳ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಈಗ ಕಚೇರಿಯ ಅಧಿಕೃತ ದಾಖಲೆಗಳ ಮೂಲಕವೇ ಬೆತ್ತಲಾಗಿವೆ. ಕೆ.ಟಿ.ಟಿ.ಪಿ (KTTP) ಕಾಯ್ದೆಯ ನಿಯಮಗಳನ್ನು ಮೀರಿ, ನ್ಯಾಯಾಲಯದ ತಡೆಯಾಜ್ಞೆಯ ಮರೆಯಲ್ಲಿ ಖಾಸಗಿ ಏಜೆನ್ಸಿಯೊಂದಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಗಂಭೀರ ಸಂಗತಿಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಕಚೇರಿಯಲ್ಲಿ ದಶಕಗಳ ನಂಟು ಮತ್ತು ವರ್ಗಾವಣೆ ನಿಯಮಗಳ ಚರ್ಚೆ
ಯಾವುದೇ ಸರ್ಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ವರ್ಗಾವಣೆ ಮತ್ತು ಸೇವಾ ನಿಯಮಗಳು ಅತ್ಯಂತ ಮುಖ್ಯವಾದವು. ಆದರೆ, ಬಾಗಲಕೋಟೆ (Bagalkot)ಯ DHO ಕಚೇರಿಯಲ್ಲಿ ದಶಕಗಳಿಂದ ಒಂದೇ ವೃಂದದಲ್ಲಿ ಅಥವಾ ಪ್ರಮುಖ ವಿಭಾಗಗಳಲ್ಲಿ ಸಿಬ್ಬಂದಿಗಳು ಮುಂದುವರಿಯುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಚೇರಿಯ ಆಡಳಿತ ಯಂತ್ರದೊಳಗೆ ನಡೆದಿರುವ ಈ ಬೆಳವಣಿಗೆಗಳು ಮತ್ತು ಈ ಹಿಂದೆ ದಾಖಲಾಗಿರುವ ಇಲಾಖಾ ತನಿಖೆಗಳು ಅಥವಾ ಪ್ರಕ್ರಿಯೆಗಳ ಬಗ್ಗೆ ಸ್ಥಳೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಲೇ ಇವೆ. ಆಡಳಿತದ ಚುಕ್ಕಾಣಿ ಹಿಡಿಯಬೇಕಾದವರು ನಿಯಮಗಳನ್ನು ಪಕ್ಕಕ್ಕಿಟ್ಟು, ತಮಗೆ ಬೇಕಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆಕ್ಷೇಪಣೆಗಳು ಕಚೇರಿಯ ಆಂತರಿಕ ಬೆಳವಣಿಗೆಗಳಿಂದಲೇ ಹೊರಬರುತ್ತಿವೆ.
ಇದನ್ನೂ ಓದಿ: ಬಾಗಲಕೋಟೆ DHO ಭ್ರಷ್ಟಾಚಾರದ ‘ಅಸಲಿ’ ಮುಖ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ ‘ಸುವರ್ಣ’ ಸುಳ್ಳು!
ಟೆಂಡರ್ ಅಕ್ರಮ: ‘ಶ್ರೀ ಸಾಯಿನಾಥ್ ಏಜೆನ್ಸಿ’ ಮೇಲೆ ಅತಿಯಾದ ಒಲವು ಏಕೆ?
ಬಾಗಲಕೋಟೆ (Bagalkot): ಲಭ್ಯವಿರುವ ದಾಖಲೆಗಳ ಪ್ರಕಾರ, 2023 ನೇ ಸಾಲಿನಿಂದ ಎನ್ಹೆಚ್ಎಂ (NHM) ಹಾಗೂ DHO ಕಚೇರಿಯ ಅಡಿಯಲ್ಲಿ ಬರುವ ವಿವಿಧ ಆರೋಗ್ಯ ಸಂಸ್ಥೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪೂರೈಸುವ ಗುತ್ತಿಗೆಯನ್ನು ವಿಜಯಪುರದ ‘ಶ್ರೀ ಸಾಯಿನಾಥ್ ಏಜೆನ್ಸೀಸ್’ ಸಂಸ್ಥೆಯು ಪಡೆದುಕೊಂಡಿದೆ.
- ನಿಯಮಗಳ ಪ್ರಕಾರ, ಹೊರಗುತ್ತಿಗೆ ಏಜೆನ್ಸಿಯನ್ನು ಬದಲಾಯಿಸುವಾಗ ಅಥವಾ ಹೊಸ ಟೆಂಡರ್ ಕರೆಯುವಾಗ KTTP ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಆದರೆ, ಈ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ.
- ನ್ಯಾಯಾಲಯದ ಆದೇಶಗಳನ್ನು ಕಚೇರಿಯ ಹಂತದಲ್ಲಿ ತಮ್ಮ ಸ್ವಂತ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿ, ಬೇರೆ ಸಂಸ್ಥೆಗೆ ಅವಕಾಶ ನೀಡಬೇಕಿದ್ದ ಜಾಗದಲ್ಲಿ ಹಳೆ ಏಜೆನ್ಸಿಯನ್ನೇ ಮತ್ತೆ ಮುಂದುವರಿಸಿರುವುದು ಕಡತಗಳ ಟಿಪ್ಪಣಿಗಳಲ್ಲಿ ದಾಖಲಾಗಿದೆ.

ಬಡ ನೌಕರರ ಪಿಎಫ್ (EPF) ಮತ್ತು ಇಎಸ್ಐ (ESI) ಹಣದಲ್ಲೂ ಕನ್ನ!
ಈ ಇಡೀ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ಮತ್ತು ಭೀಕರ ಸಂಗತಿಯೆಂದರೆ ಬಡ ಹೊರಗುತ್ತಿಗೆ ನೌಕರರ ಭವಿಷ್ಯನಿಧಿಯ (EPF) ಮತ್ತು ಇಎಸ್ಐ (ESI) ಹಣದಲ್ಲಿ ನಡೆದಿರುವ ನೇರ ವಂಚನೆ. ಕೋರ್ಟ್ ತಡೆಯಾಜ್ಞೆಯ ಮರೆಯಲ್ಲಿ ಗುತ್ತಿಗೆಯನ್ನು ಮುಂದುವರಿಸಿಕೊಂಡು ಬಂದಿರುವ ಸಾಯಿನಾಥ್ ಏಜೆನ್ಸಿಯು, ನೌಕರರ ಬೆವರಕ್ತದ ದುಡ್ಡಿಗೆ ಕತ್ತರಿ ಹಾಕಿರುವುದು DHO ಕಚೇರಿಯಿಂದಲೇ ಆ ಸಂಸ್ಥೆಗೆ ಬಿಡಲಾಗಿರುವ ‘Final Notice’ ಮೂಲಕ ಅಧಿಕೃತವಾಗಿ ಬಹಿರಂಗಗೊಂಡಿದೆ:
- ಎನ್ಹೆಚ್ಎಂ (NHM) ಸಿಬ್ಬಂದಿ ವಂಚನೆ: ಕಚೇರಿಯ ದಾಖಲೆಗಳ ಪ್ರಕಾರ, 2025-26 ನೇ ಸಾಲಿನಲ್ಲಿ ಎನ್ಹೆಚ್ಎಂ ಅಡಿಯಲ್ಲಿ ಕೆಲಸ ಮಾಡುತ್ತಿರುವ 111 ಸಿಬ್ಬಂದಿಗೆ ಸರ್ಕಾರದಿಂದ ಬರಬೇಕಿದ್ದ ಇ.ಪಿ.ಎಫ್ ಮತ್ತು ಇ.ಎಸ್.ಐ ಹಣದಲ್ಲಿ ಬರೋಬ್ಬರಿ ರೂ. 5,50,870/- ಕಡಿಮೆ ಪಾವತಿಸಿರುವುದು ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಇದರಲ್ಲಿ ಇ.ಪಿ.ಎಫ್ ವ್ಯತ್ಯಾಸದ ಮೊತ್ತ ರೂ. 3,57,181/- ಹಾಗೂ ಇ.ಎಸ್.ಐ ವ್ಯತ್ಯಾಸದ ಮೊತ್ತ ರೂ. 1,85,772/- ಸೇರಿದೆ.
- ನಮ್ಮ ಕ್ಲಿನಿಕ್ ಸಿಬ್ಬಂದಿ ಕಥೆ: ಅದೇ ರೀತಿ, ‘ನಮ್ಮ ಕ್ಲಿನಿಕ್’ ಅಡಿಯಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುವ 28 ಸಿಬ್ಬಂದಿಗಳ ವೇತನ, ಪಿಎಫ್ ಮತ್ತು ಇಎಸ್ಐ ಹಣದಲ್ಲೂ ಒಟ್ಟು ರೂ. 6,02,499/- ರಷ್ಟು ದೊಡ್ಡ ಮೊತ್ತದ ವ್ಯತ್ಯಾಸ/ಗೋಲ್ಮಾಲ್ ನಡೆದಿರುವುದು ಕಚೇರಿಯ ಅಧಿಕೃತ ಪತ್ರಗಳಿಂದ ಹೊರಬಿದ್ದಿದೆ.
ಬಡ ಕಾರ್ಮಿಕರು ತಮ್ಮ ಸಂಸಾರ ನಿರ್ವಹಿಸಲು ಪಡುವ ಕಷ್ಟದ ದುಡ್ಡಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಕಡಿತಗೊಳಿಸಿ ವಂಚಿಸುತ್ತಿದ್ದರೂ, ಇಲಾಖೆಯ ಕಚೇರಿಯಿಂದ ಕೇವಲ ನೋಟಿಸ್ಗಳನ್ನು ನೀಡಿ ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ಹಿರಿಯ ಅಧಿಕಾರಿಗಳ ಎಚ್ಚರಿಕೆಯನ್ನೂ ಕಡೆಗಣಿಸಿದ ಕಡತಗಳ ಕಥೆ!
ಕಚೇರಿಯಲ್ಲಿ ನಡೆಯುತ್ತಿರುವ ಈ ಏಕಪಕ್ಷೀಯ ಮತ್ತು ನಿಯಮಬಹಿರ ನಿರ್ಧಾರಗಳನ್ನು ಪ್ರಶ್ನಿಸಿ ಹಿರಿಯ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದರೂ, ಅವುಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡಲಾಗಿದೆ.
- ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹಿಂದೆಯೇ ಕಡತದಲ್ಲಿ ಸ್ಪಷ್ಟವಾಗಿ ಟಿಪ್ಪಣಿ ಬರೆಯುತ್ತಾ, “ಸದರಿ ಏಜೆನ್ಸಿಯನ್ನು ಹೀಗೆಯೇ ಮುಂದುವರಿಸುವುದು KTTP ನಿಯಮಗಳ ಸ್ಪಷ್ಟ ಉಲ್ಲಂಘನೆ, ತಕ್ಷಣ ಇದನ್ನು ಸರಿಪಡಿಸಿ” ಎಂದು ಎಚ್ಚರಿಸಿದ್ದರು.
- ಅಷ್ಟೇ ಅಲ್ಲದೆ, ನ್ಯಾಯಾಲಯದ ಆದೇಶವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದೂ, ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಲಿಖಿತವಾಗಿ ಗಮನಕ್ಕೆ ತರಲಾಗಿತ್ತು.
- ಆದರೂ ಕೂಡ, ಆಡಳಿತಾತ್ಮಕ ಹಂತದಲ್ಲಿ ಆ ಹಿರಿಯ ಅಧಿಕಾರಿಗಳ ಎಚ್ಚರಿಕೆಗಳನ್ನು ಕಡೆಗಣಿಸಿ, ಅದೇ ಏಜೆನ್ಸಿಯ ಕಡತಗಳನ್ನು ಮಂಡಿಸಿ ಮುಂದುವರಿಸಲು ಹೂಡಿರುವ ತಂತ್ರಗಳು ಈಗ ಕಚೇರಿಯ ಕಡತಗಳಲ್ಲೇ ಬೆತ್ತಲಾಗಿವೆ.
ಕಚೇರಿಯ ಆಡಳಿತ ವೈಖರಿ ಹಾಗೂ ಮುಂದುವರಿದ ಕಸರತ್ತು
ಅಧಿಕೃತ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಇಷ್ಟು ದೊಡ್ಡ ಪ್ರಮಾಣದ ಹಣಕಾಸು ವ್ಯತ್ಯಾಸಗಳು ಪತ್ತೆಯಾಗಿದ್ದರೂ ಮತ್ತು ನೋಟಿಸ್ಗಳನ್ನು ಜಾರಿಗೊಳಿಸಿದ್ದರೂ, ಸದರಿ ಏಜೆನ್ಸಿಯು ಪುನಃ 2026-27 ನೇ ಸಾಲಿಗೂ ತಮ್ಮ ಟೆಂಡರ್ ಮುಂದುವರೆಸಬೇಕೆಂದು ಕೋರಿ ಮನವಿ ಸಲ್ಲಿಸಿದೆ.
ಅದಕ್ಕೆ ತಕ್ಕಂತೆ ಕಚೇರಿಯ ಒಳಗೆ ಕೆಲ ಸಿಬ್ಬಂದಿಗಳನ್ನು ನಿರ್ದಿಷ್ಟವಾಗಿ ನಿಯೋಜಿಸಿ, ಈ ಕಡತವನ್ನು ಮುಂದೆ ಸಾಗಿಸಲು ನಡೆಸುತ್ತಿರುವ ಆಂತರಿಕ ಕಸರತ್ತುಗಳು ಈಗ ತನಿಖೆಗೆ ಒಳಪಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಇದರ ಜೊತೆಗೆ, ಕಚೇರಿಯಲ್ಲಿ CAMS ಪ್ರಕ್ರಿಯೆಗಳು, ಮಾಸಿಕ ಟಿಎ (TA) ಬಿಲ್ಗಳ ವಿಲೇವಾರಿ ಹಾಗೂ ಪ್ರಮುಖ ಕಡತಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡದೆ ಮುಚ್ಚಿಡುವ ಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ದೂರುಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸಾರ್ವಜನಿಕರ ಮತ್ತು ನೌಕರರ ಒಕ್ಕೊರಲ ಒತ್ತಾಯ:
ಬಡ ನೌಕರರ ಬೆವರಕ್ತ ಹರಿದು ಬಂದ ಹಣದಲ್ಲಿ ಕಡಿತವಾಗಿರುವ EPF ಮತ್ತು ESI ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸದೆ ವಂಚಿಸುತ್ತಿರುವ ಖಾಸಗಿ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ, ಕಚೇರಿಯಲ್ಲಿ ನಡೆಯುತ್ತಿರುವ ಈ ಆಡಳಿತಾತ್ಮಕ ಬೇಜವಾಬ್ದಾರಿ ಹಾಗೂ ಕಡತಗಳ ಗೋಲ್ಮಾಲ್ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂಬ ಬಲವಾದ ಆಗ್ರಹ ಈಗ ನೌಕರರಿಂದ ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಈ ಬೃಹತ್ ಹಗರಣದ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






