Homeವಿಶ್ಲೇಷಣೆPrakash Raj: ‘ಮಾರಿಕೊಂಡ ಮಾಧ್ಯಮ’ಗಳ ಆತ್ಮಸಾಕ್ಷಿ ಕೆಣಕಿದ ಪ್ರಕಾಶ್ ರಾಜ್!

Prakash Raj: ‘ಮಾರಿಕೊಂಡ ಮಾಧ್ಯಮ’ಗಳ ಆತ್ಮಸಾಕ್ಷಿ ಕೆಣಕಿದ ಪ್ರಕಾಶ್ ರಾಜ್!

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಗುರುವಾರ) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ನಟ ಪ್ರಕಾಶ್ ರಾಜ್ (Prakash Raj) ಅವರ ಪತ್ರಿಕಾಗೋಷ್ಠಿ ಕೇವಲ ಒಂದು ವೈಯಕ್ತಿಕ ಸ್ಪಷ್ಟನೆಯ ವೇದಿಕೆಯಾಗಿ ಉಳಿಯಲಿಲ್ಲ. ಬದಲಿಗೆ, ಅದು ಇವತ್ತಿನ ಮಾಧ್ಯಮ ರಂಗದ ನೈತಿಕತೆ, ಮೌಲ್ಯಚ್ಯುತಿ ಮತ್ತು ‘ಗೋದಿ ಮೀಡಿಯಾ’ (Godi Media) ಸಂಸ್ಕೃತಿಯನ್ನು ಸಾರ್ವಜನಿಕವಾಗಿ ಬೆತ್ತಲಾಗಿಸಿದ ಒಂದು ಐತಿಹಾಸಿಕ ಮುಖಾಮುಖಿಯಾಗಿ ಮಾರ್ಪಟ್ಟಿತು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಲಾಗುವ ಮಾಧ್ಯಮಗಳು ಜನರ ಪರವಾಗಿ ನಿಲ್ಲುವುದನ್ನು ಬಿಟ್ಟು, ಅಧಿಕಾರಸ್ಥರ ಮತ್ತು ಟಿಆರ್‌ಪಿ ದಂಧೆಯ ಗುಲಾಮರಾಗುತ್ತಿರುವುದನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದ ಪ್ರಕಾಶ್ ರಾಜ್, ಇಡೀ ಪತ್ರಿಕೋದ್ಯಮದ ಆತ್ಮಸಾಕ್ಷಿಯನ್ನು ಕೆಣಕಿದ್ದಾರೆ.

ಪ್ರಕಾಶ್ ರಾಜ್ ನೀಡಿದ ಖಡಕ್ ತಿರುಗೇಟು ಮತ್ತು ಮಾಧ್ಯಮಗಳ ಅಸಹನೆ

ಧರ್ಮಸ್ಥಳ ಪ್ರಕರಣದ ಆರೋಪಿಯೊಬ್ಬ ಪ್ರಕಾಶ್ ರಾಜ್ (Prakash Raj) ಹೆಸರನ್ನು ಪ್ರಸ್ತಾಪಿಸಿದ ತಕ್ಷಣ, ಯಾವುದೇ ಕನಿಷ್ಠ ಪರಿಶೀಲನೆ ಇಲ್ಲದೆ ಸುದ್ದಿ ಬಿತ್ತರಿಸಿದ ಮಾಧ್ಯಮಗಳಿಗೆ ಉತ್ತರಿಸಲು ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ಅದಕ್ಕೂ ಮುನ್ನ ಅವರು ಸಾಮಾಜಿಕ ಜಾಲತಾಣದಲ್ಲಿ “ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ” ಎಂದು ಹಾಕಿದ್ದ ಪೋಸ್ಟ್ ಕೆಲವು ಪತ್ರಕರ್ತರ ಕೆರಳಿಕೆಗೆ ಕಾರಣವಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ “ನೀವು ಮಾಧ್ಯಮಗಳ ಕ್ಷಮೆ ಕೇಳಬೇಕು” ಎಂದು ಪತ್ರಕರ್ತರು ಪಟ್ಟು ಹಿಡಿದಾಗ ಪ್ರಕಾಶ್ ರಾಜ್ ನೀಡಿದ ಉತ್ತರ ಇವತ್ತಿನ ಮಾಧ್ಯಮಗಳ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು.

Prakash Raj: ‘ಮಾರಿಕೊಂಡ ಮಾಧ್ಯಮ’ಗಳ ಆತ್ಮಸಾಕ್ಷಿ ಕೆಣಕಿದ ಪ್ರಕಾಶ್ ರಾಜ್!
ಪ್ರಕಾಶ್‌ ರಾಜ್‌ ಅವರ ಪೋಸ್ಟ್

“ನಾನು ಮಾರಿಕೊಂಡವರನ್ನು ಬೈದರೆ, ಪ್ರಾಮಾಣಿಕವಾಗಿರುವ ನೀವು ಯಾಕೆ ರೊಚ್ಚಿಗೇಳುತ್ತೀರಿ? ನೀವು ಮಾರಿಕೊಂಡಿಲ್ಲ ಎಂದಾದರೆ ನಿಮಗೇಕೆ ಆ ಮಾತು ಅನ್ವಯಿಸುತ್ತದೆ?” ಎಂದು ಅವರು ಅತ್ಯಂತ ಶಾಂತಚಿತ್ತದಿಂದಲೇ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಕೆಲವು ಮಾಧ್ಯಮ ಪ್ರತಿನಿಧಿಗಳು ತಡಕಾಡಿದರು. “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ” ಎಂಬ ಗಾದೆಯಂತೆ, ಪ್ರಕಾಶ್ ರಾಜ್ ಒಟ್ಟಾರೆ ವ್ಯವಸ್ಥೆಯಲ್ಲಿದ್ದ ಭ್ರಷ್ಟರನ್ನು ಉದ್ದೇಶಿಸಿ ಮಾತನಾಡಿದಾಗ, ರಾಜ್ಯದ ಕೆಲವು ಮಾಧ್ಯಮಗಳು ತಮಗೇ ಆ ಮಾತು ಅನ್ವಯಿಸಿದೆ ಎಂಬಂತೆ ವರ್ತಿಸಿದ್ದು ಅವರೊಳಗಿನ ಅಪರಾಧಿ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. “ಐ ಸ್ಟಾಂಡ್ ಆನ್ ಮೈ ಸ್ಟೇಟ್ಮೆಂಟ್, ಈ ದೇಶದಲ್ಲಿ ಒಳ್ಳೆಯ ಮಾಧ್ಯಮಗಳೂ ಇವೆ, ಮಾರಿಕೊಂಡ ಮಾಧ್ಯಮಗಳೂ ಇವೆ, ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂಬ ಅವರ ಖಡಕ್ ನಿಲುವು ಮಾಧ್ಯಮಗಳ ದ್ವಂದ್ವ ನೀತಿಯನ್ನು ಪ್ರಶ್ನಿಸಿತು.

ಊಹಾಪೋಹಗಳ ಸಂತೆ ಮತ್ತು ಪ್ರಶ್ನಾರ್ಥಕ ಚಿಹ್ನೆಯ ಮುಖವಾಡ

ಪ್ರಕಾಶ್ ರಾಜ್‌ (Prakash Raj) ಈ ಮಟ್ಟಿಗೆ ಆಕ್ರೋಶ ಹೊರಹಾಕಲು ಇವತ್ತಿನ ಮಾಧ್ಯಮಗಳು ತಲುಪಿರುವ ತಳಮಟ್ಟದ ಪ್ರವೃತ್ತಿಯೇ ಕಾರಣ. ಒಂದು ಸುದ್ದಿ ಸಾರ್ವಜನಿಕ ವಲಯಕ್ಕೆ ಬರುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪತ್ರಿಕಾ ಧರ್ಮ. ಆದರೆ ಇವತ್ತಿನ ಮಾಧ್ಯಮ ಸಂಸ್ಥೆಗಳು ಸತ್ಯ ತಿಳಿಯುವ ಮೊದಲೇ ಸುದ್ದಿ ಮಾಡಿ, ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಚಾರಿತ್ರ್ಯ ವಧೆ ಮಾಡಿ, ಆ ಬಳಿಕ ಏನಾಗಿದೆ ಎಂದು ಹುಡುಕುವ ಮಟ್ಟಕ್ಕೆ ಬಂದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಗಾಸಿಪ್‌ಗಳನ್ನು ಮತ್ತು ವೈಯಕ್ತಿಕ ದ್ವೇಷದ ಹೇಳಿಕೆಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಮುಲಾಜಿಲ್ಲದೆ ಎತ್ತಿಕೊಳ್ಳುತ್ತವೆ. ಅದರ ಹಿಂದೆ-ಮುಂದೆ ಯೋಚಿಸದೆ, ಕಾನೂನು ಬದ್ಧ ತೊಂದರೆಗಳಿಂದ ಪಾರಾಗಲು ಸುದ್ದಿಯ ಕೊನೆಯಲ್ಲಿ ಒಂದು ಪ್ರಶ್ನಾರ್ಥಕ ಚಿಹ್ನೆ (?) ಮತ್ತು ಒಂದು ಆಶ್ಚರ್ಯಸೂಚಕ ಚಿಹ್ನೆಗಳನ್ನು (!) ಬಳಸಿ ಜನರನ್ನು ದಾರಿ ತಪ್ಪಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಪ್ರಕಾಶ್ ರಾಜ್ ಅವರ ವಿಷಯದಲ್ಲೂ ಮಾಧ್ಯಮಗಳು ಮಾಡಿದ್ದು ಇದನ್ನೇ. ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು, ಕೇವಲ ಬ್ರೇಕಿಂಗ್ ಸುದ್ದಿಗಳ ಹಪಾಹಪಿಗೆ ಬಳಸಿಕೊಂಡಾಗ ಒಬ್ಬ ಸೃಜನಶೀಲ ಕಲಾವಿದನಾಗಿ ಮತ್ತು ಜವಾಬ್ದಾರಿಯುತ ನಾಗರಿಕನಾಗಿ ಅವರು ಮಾಧ್ಯಮಗಳ ನೈತಿಕತೆಯನ್ನು ಪ್ರಶ್ನಿಸಬೇಕಾಗಿ ಬಂತು.

ಇದನ್ನೂ ಓದಿ: BTDA ‘ಬಾರಿಗಿಡದ’ ಗೂಂಡಾಗಿರಿ! ಅಕ್ರಮ ಪ್ಲಾಟ್ ಲೂಟಿಯ ಕಡತ ಜಾಲ ಬಯಲು; ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ಅಧಿಕಾರಿಯ ದರ್ಪ!

‘ಗೋದಿ ಮೀಡಿಯಾ’ ಸಂಸ್ಕೃತಿ ಮತ್ತು ವಿಪಕ್ಷಗಳ ಮೇಲಿನ ಬುಸುಗುಡುವಿಕೆ

ಪ್ರಕಾಶ್ ರಾಜ್ ತಮ್ಮ ಇತ್ತೀಚಿನ ರಾಜಕೀಯ ಮತ್ತು ವೈಯಕ್ತಿಕ ಜೀವನದ ಅನುಭವಗಳ ಆಧಾರದ ಮೇಲೆ ದೇಶದಲ್ಲಿ ಇಂದು ಸೃಷ್ಟಿಯಾಗಿರುವ ‘ಗೋದಿ ಮೀಡಿಯಾ’ (Godi Media) ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಸದಾ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಆಡಳಿತಾರೂಢರನ್ನು ಪ್ರಶ್ನಿಸಬೇಕು. ಆದರೆ ಇಂದಿನ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೇಂದ್ರ ಸರ್ಕಾರದ ಅಧಿಕೃತ ಸೌಂಡ್‌ಬಾಕ್ಸ್‌ಗಳಂತೆ ಕೆಲಸ ಮಾಡುತ್ತಿವೆ.

ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆಯಂತಹ ನೈಜ ಪ್ರಮುಖ ವಿಷಯಗಳನ್ನು ಮುಚ್ಚಿಹಾಕಿ, ದಿನದ 24 ಗಂಟೆಯೂ ವಿರೋಧ ಪಕ್ಷಗಳ ವಿರುದ್ಧ ಬುಸುಗುಡುವುದು ಮತ್ತು ಸರ್ಕಾರದ ಪರವಾಗಿ ತುತ್ತೂರಿ ಊದುವುದೇ ಈ ಮಾಧ್ಯಮಗಳ ಮುಖ್ಯ ಕೆಲಸವಾಗಿದೆ. ಟಿವಿಯಲ್ಲಿನ ಚರ್ಚೆಗಳು ಜನರ ಸಮಸ್ಯೆಗಳ ಪರಿಹಾರ ಹುಡುಕುವ ವೇದಿಕೆಯಾಗುವುದಕ್ಕಿಂತ, ರಾಜಕೀಯ ಕಿತ್ತಾಟ ಮತ್ತು ಕೂಗಾಟಗಳ ವೇದಿಕೆಗಳಾಗಿವೆ. ಅಧಿಕಾರದ ಮಡಿಲಲ್ಲಿ ಕುಳಿತು ಸತ್ಯದ ಕತ್ತು ಹಿಸುಕುವ ಇಂತಹ ಮಾಧ್ಯಮಗಳನ್ನು ಜನಸಾಮಾನ್ಯರು ಮತ್ತು ಪ್ರಕಾಶ್ ರಾಜ್ ಅವರಂತಹ ಪ್ರಗತಿಪರ ಚಿಂತಕರು ‘ಮಾರಿಕೊಂಡ ಮಾಧ್ಯಮಗಳು’ ಎಂದು ಕರೆಯುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ.

‘ಜೆನ್ ಜಿ’ ಯುವ ಪೀಳಿಗೆಯ ಬಹಿಷ್ಕಾರ ಮತ್ತು ಮಾಧ್ಯಮಗಳ ಉಪಟಳ

ಮಾಧ್ಯಮಗಳ ಈ ಪಕ್ಷಪಾತಿ ಧೋರಣೆ ಮತ್ತು ಸಾರ್ವಜನಿಕರ ಹಾದಿ ತಪ್ಪಿಸುವ ಉಪಟಳ ಇವತ್ತು ಮಿತಿಮೀರಿದೆ. ಇದರ ಪರಿಣಾಮವಾಗಿಯೇ ಇಂದಿನ ‘ಜೆನ್ ಜಿ’ (Gen Z) ಹೋರಾಟಗಾರರು ಹಾಗೂ ಪ್ರಗತಿಪರ ಸಂಘಟನೆಗಳು ಹೊಸದೊಂದು ಕ್ರಾಂತಿಗೆ ನಾಂದಿ ಹಾಡಿವೆ. ದೇಶದ ಯಾವುದೇ ಭಾಗದಲ್ಲಿ ಜನಪರ ಹೋರಾಟಗಳು, ಹಕ್ಕುಗಳಿಗಾಗಿ ಸಭೆ-ಸಮಾರಂಭಗಳು ನಡೆದರೆ, ಅಲ್ಲಿಗೆ ಇಂತಹ ‘ಗೋದಿ ಮೀಡಿಯಾ’ ಮತ್ತು ಸುಳ್ಳು ಸುದ್ದಿ ಹರಡುವ ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಲಾಗುತ್ತಿದೆ. “ನಮ್ಮ ಹೋರಾಟದ ನೈಜ ಆಶಯಗಳನ್ನು ತಿರುಚಿ, ನಮ್ಮನ್ನು ದೇಶದ್ರೋಹಿಗಳಂತೆ ಬಿಂಬಿಸುವ ನಿಮ್ಮ ಟಿಆರ್‌ಪಿ ದಂಧೆಗೆ ನಮ್ಮ ವೇದಿಕೆಗಳನ್ನು ಬಳಸಿಕೊಳ್ಳಲು ಬಿಡುವುದಿಲ್ಲ” ಎಂಬ ಯುವ ಪೀಳಿಗೆಯ ಖಡಕ್ ನಿರ್ಧಾರ, ಮಾಧ್ಯಮಗಳಿಗೆ ಸಾರ್ವಜನಿಕರು ನೀಡುತ್ತಿರುವ ಕಪಾಳಮೋಕ್ಷವಾಗಿದೆ.

ಇದನ್ನೂ ಓದಿ: Dharamsthala Case: ಡಿ-ಗ್ಯಾಂಗ್‌ನ ‘200 ಕೋಟಿ’ ನಾಟಕಕ್ಕೆ ಮಾಧ್ಯಮಗಳ ಸಾಥ್: ಹೆಣಗಳ ಮೇಲೆ ಬಲಿಯಾಯಿತೇ ತನಿಖೆಯ ಆತ್ಮಸಾಕ್ಷಿ?

ಪ್ರಾಮಾಣಿಕ ಪತ್ರಕರ್ತರ ಅಸಹಾಯಕತೆ ಮತ್ತು ಮೌಲ್ಯಗಳ ಮರುಸ್ಥಾಪನೆ

ಇಷ್ಟೆಲ್ಲಾ ನಕಾರಾತ್ಮಕತೆಗಳ ನಡುವೆಯೂ, ಎಲ್ಲಾ ಪತ್ರಕರ್ತರು ಅಥವಾ ಎಲ್ಲಾ ಮಾಧ್ಯಮ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿವೆ ಎಂದು ಹೇಳಲು ಸಾಧ್ಯವಿಲ್ಲ. ಇಂದಿಗೂ ಅನೇಕ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಅಪಾಯಗಳನ್ನು ಎದುರಿಸಿ ಸತ್ಯವನ್ನು ಹೊರತರುವ ಕೆಲಸ ಮಾಡುತ್ತಿದ್ದಾರೆ. ಆದರೆ ಬಹುತೇಕ ಕಾರ್ಪೊರೇಟ್ ಮಾಧ್ಯಮಗಳು ಮಾರಿಕೊಂಡಿರುವುದರಿಂದ, ಅವುಗಳ ತಪ್ಪುಗಳು ಇಡೀ ವೃತ್ತಿಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎತ್ತುವಂತೆ ಮಾಡುತ್ತಿರುವುದು ಸುಳ್ಳಲ್ಲ. ಪರಿಣಾಮವಾಗಿ, ಹಗಲಿರುಳು ಪ್ರಾಮಾಣಿಕವಾಗಿ ದುಡಿಯುವ ಸಣ್ಣ ಪತ್ರಕರ್ತರೂ ಸಹ ಸಾರ್ವಜನಿಕ ವಲಯದಲ್ಲಿ ತಲೆತಗ್ಗಿಸುವಂತಾಗಿದೆ.

ಮಾಧ್ಯಮಗಳ ಕರ್ತವ್ಯ ಸರ್ಕಾರಗಳು ಮತ್ತು ಆಡಳಿತದ ಪರವಾಗಿ ನಿಲ್ಲುವುದಲ್ಲ. ರಾಜಕೀಯ ಪಕ್ಷಗಳ ಮುಖವಾಣಿಗಳಾಗಿ ಕೆಲಸ ಮಾಡಲು ಅವುಗಳಿಲ್ಲ. ಅವುಗಳಿರುವುದು ಜನರ ಪರವಾಗಿ ನಿಲ್ಲಲು ಮತ್ತು ಸತ್ಯವನ್ನು ಹೆಕ್ಕಿ ತೆಗೆಯಲು. ನಟ ಪ್ರಕಾಶ್ ರಾಜ್ ಮಾರಿಕೊಂಡ ಮಾಧ್ಯಮಗಳು ಎಂದು ಹೇಳಿದಾಗ ಪತ್ರಕರ್ತರಿಗೆ ನೋವಾಗುತ್ತದೆ ನಿಜ. ಆದರೆ, ಅವರಾಡುವ ಮಾತುಗಳಲ್ಲಿ ಕಹಿಯಾದ ಸತ್ಯವಿದೆ ಎಂಬುದನ್ನು ನಾವು ಮರೆಯಬಾರದು.

ಪತ್ರಕರ್ತರ ಕೆಲಸ ಏನು ಎನ್ನುವುದನ್ನೇ ಮಾಧ್ಯಮ ಸಂಸ್ಥೆಗಳು ಮರೆಯುವಂತೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ನಾವು ಅದೆಷ್ಟು ಜಾಗರೂಕರಾಗಿ ಕೆಲಸ ಮಾಡಿದರೂ ಕಡಿಮೆಯೇ. ಇನ್ನಾದರೂ ಕೆಲವು ಮಾಧ್ಯಮಗಳು ತಮ್ಮ ಮೊಂಡುತನ ಮತ್ತು ಪ್ರತಿಷ್ಠೆಯನ್ನು ಬದಿಗಿಟ್ಟು, ತಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ಹೆಗಲು ಮುಟ್ಟಿ ನೋಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಸಾರ್ವಜನಿಕರೇ ಇಡೀ ಮಾಧ್ಯಮ ರಂಗವನ್ನು ಸಂಪೂರ್ಣವಾಗಿ ತಿರಸ್ಕರಿಸುವ ದಿನಗಳು ದೂರವಿಲ್ಲ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments