ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಇಂದು ಕೇವಲ ಕಾಗದದ ಮೇಲಿನ ಅಭಿವೃದ್ಧಿ ಸಂಸ್ಥೆಯಾಗಿ ಉಳಿದಿದೆಯೇ ಹೊರತು, ಸಾಮಾನ್ಯ ಜನರ ಕಣ್ಣೀರು ಒರೆಸುವ ಮಾನವೀಯತೆಯನ್ನು ಕಳೆದುಕೊಂಡಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ದಟ್ಟವಾಗುತ್ತಿದೆ. ಇತ್ತೀಚೆಗೆ ಬಿಟಿಡಿಎ ಕಚೇರಿಯ ಸುತ್ತಮುತ್ತ ನಡೆದ ಸರಣಿ ಘಟನೆಗಳು ಆಡಳಿತ ವ್ಯವಸ್ಥೆಯ ಅಟ್ಟಹಾಸ ಮತ್ತು ಸಂತ್ರಸ್ತರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತಿವೆ.
ನೌಕರರ ಬೆನ್ನಿಗೆ ನಿಂತ ಆಡಳಿತ; ಸಂತ್ರಸ್ತರ ಅಳಲಿಗೆ ಕಿವುಡಾದ ವ್ಯವಸ್ಥೆ
ರೈತ ಬಸಪ್ಪ ದೊಡ್ಡಮನಿ ಎಂಬುವವರು ತಮ್ಮ ಕೆಲಸಕ್ಕಾಗಿ ಬಿಟಿಡಿಎ (BTDA) ಕಚೇರಿಗೆ ಅಲೆದಾಡಿ, ರೋಸಿಹೋಗಿ ಕಾನೂನು ಕೈಗೆತ್ತಿಕೊಂಡು ನೌಕರ ನೀಲಕಂಠ ಅಂಕದ ಅವರಿಗೆ ಚಪ್ಪಲಿಯಿಂದ ಹೊಡೆದ ಘಟನೆ ಖಂಡನೀಯ. ಯಾವುದೇ ನಾಗರಿಕ ಸಮಾಜದಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ (Prakash Tapashetti) ಹಾಗೂ ಅಧಿಕಾರಿಗಳು ಸೇರಿ ಪೊಲೀಸ್ ಠಾಣೆಗೆ ದೂರು ನೀಡಿ, ಕಠಿಣ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಸರಿ. ತಮ್ಮ ಸಿಬ್ಬಂದಿಯ ರಕ್ಷಣೆಗೆ ನಿಲ್ಲುವುದು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಮಾಡಬೇಕಿದ್ದ ಕರ್ತವ್ಯ ಕೂಡ ಹೌದು.
ಆದರೆ, ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಪ್ರತಿಭಟನೆ ಮುಗಿದ ತಕ್ಷಣ ಅಲ್ಲಿ ಅನಾವರಣಗೊಂಡ ದೃಶ್ಯಗಳು ಬಿಟಿಡಿಎ ಆಡಳಿತದ ಅಸಲಿ ಮುಖವನ್ನು ಬಯಲು ಮಾಡಿದೆ.
ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ ಕಟು ವಾಸ್ತವ:
” ಬಿಟಿಡಿಎ (BTDA) ಸಿಬ್ಬಂದಿಗಳ ಪ್ರತಿಭಟನೆ ಮುಗಿಯುತ್ತಿದ್ದಂತೆಯೇ, ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿರುವ ತಮ್ಮ ಆಸ್ತಿ ಸಮಸ್ಯೆಯನ್ನು ಬಗೆಹರಿಸಿ ಹಕ್ಕು ನೀಡುವಂತೆ ಕೋರಿ ಮೂವರು ಮಹಿಳೆಯರು ಕಣ್ಣೀರು ಹಾಕುತ್ತಾ ಅಲ್ಲಿಗೆ ಬಂದರು. ಆದರೆ, ‘ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ್ದ ಅದೇ ಸಿಬ್ಬಂದಿಗಳು, ಈ ಮಹಿಳೆಯರ ರೋಧನೆಯನ್ನು ಕಣ್ಣಾರೆ ಕಂಡೂ ತಿಂಡಿ-ಹಣ್ಣು ತಿನ್ನಲು ಓಡಿದರು! ನೌಕರನೊಬ್ಬ ಬೈಕ್ ಹತ್ತಿ ಹೊರಟಾಗ ಮಹಿಳೆಯರು ಅಳುತ್ತಾ ಕಿರುಚಾಡಿದ್ರೂ ಆತ ತಿರುಗಿಯೂ ನೋಡದೆ ಹೋದ. ಕಣ್ಣೆದುರೇ ಅಸಹಾಯಕರು ನರಳುತ್ತಿದ್ದರೂ ಕ್ಯಾರೇ ಎನ್ನದ ಇಂತಹ ಜಡತ್ವ ಬಿಟಿಡಿಎಗೆ ಶಾಪದಂತಿದೆ.”
ಅತ್ಯಂತ ಬೇಸರದ ಸಂಗತಿಯೆಂದರೆ, ಆ ಮಹಿಳೆಯರು ಮೊದಲು ಧಾವಿಸಿದ್ದು ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರ ಬಳಿಗೆ. ಆದರೆ ಈ ಜವಾಬ್ದಾರಿಯುತ ವ್ಯಕ್ತಿಯೂ ಆ ಮಹಿಳೆಯರ ನೋವಿಗೆ ಸ್ಪಂದಿಸಲಿಲ್ಲ, ಅವರ ಕಣ್ಣೀರು ಒರೆಸುವ ಸೌಜನ್ಯವನ್ನೂ ತೋರಲಿಲ್ಲ ಎನ್ನುವದೇ ವಿಪರ್ಯಾಸದ ಸಂಗತಿ.
ಇದನ್ನೂ ಓದಿ: BTDA ‘ಬಾರಿಗಿಡದ’ ಗೂಂಡಾಗಿರಿ! ಅಕ್ರಮ ಪ್ಲಾಟ್ ಲೂಟಿಯ ಕಡತ ಜಾಲ ಬಯಲು; ಪ್ರಶ್ನಿಸಿದ ಪತ್ರಕರ್ತರ ಮೇಲೆಯೇ ಅಧಿಕಾರಿಯ ದರ್ಪ!
ಡಜನ್ ಗಟ್ಟಲೆ ಚಪ್ಪಲಿ ಸವೆಸಿದರೂ ಸಿಗದ ಸೈಟು; ಲಂಚಕೋರರಿಗೆ ರೆಡ್ ಕಾರ್ಪೆಟ್!
ಇಲ್ಲಿ ದಿನಂಪ್ರತಿ ನೂರಾರು ಸಂತ್ರಸ್ತರು ಬಿಟಿಡಿಎ ಕಚೇರಿ ಅಲೆದಾಡುತ್ತಲೇ ಇದ್ದಾರೆ. ಕಳೆದ ಹತ್ತು ಹಲವು ವರ್ಷಗಳಿಂದ ಸಂತ್ರಸ್ತರು ಬಿಟಿಡಿಎ ಕಚೇರಿಯ ಮೆಟ್ಟಿಲು ಹತ್ತಿ ಇಳಿದು, ಡಜನ್ ಗಟ್ಟಲೇ ಚಪ್ಪಲಿಗಳನ್ನೇ ಸವೆಸಿದರೂ ಅವರಿಗೆ ನ್ಯಾಯವಾಗಿ ಸಿಗಬೇಕಾದ ಸೈಟ್ ಗಳು ಮಾತ್ರ ಸಿಗುತ್ತಿಲ್ಲ! ಆದರೆ, ಪ್ರಭಾವಿಗಳ ಕಡೆಯಿಂದ ಬಂದವರಿಗೆ ಮತ್ತು ಲಕ್ಷ ಲಕ್ಷ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಮೇಜು ಮುಚ್ಚಿ ಕೊಟ್ಟವರಿಗೆ ಮಾತ್ರ ಬಿಟಿಡಿಎ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿದೆ ಎನ್ನುವ ಗಂಭೀರ ಆರೋಪಗಳು ಇಂದು ಜಗಜ್ಜಾಹೀರಾಗಿವೆ.
ಇನ್ನೂ ಆಘಾತಕಾರಿ ಮತ್ತು ಅಚ್ಚರಿಯ ಸಂಗತಿ ಎಂದರೆ, ಕಳೆದುಕೊಳ್ಳಲು ಏನೂ ಇಲ್ಲದ, ಅಸಲಿ ಸಂತ್ರಸ್ತರೇ ಅಲ್ಲದ ಕೆಲವು ಪ್ರಭಾವಿ ನೌಕರಸ್ಥರು ನವನಗರದಲ್ಲಿ ಅಕ್ರಮವಾಗಿ ಸೈಟ್ ಪಡೆದುಕೊಂಡಿದ್ದಾರೆ ಎನ್ನುವ ಬಲವಾದ ಆರೋಪ ಕೇಳಿಬರುತ್ತಿದೆ, ಅದರಲ್ಲೂ ಬಿಟಿಡಿಎ ಅಧಿಕಾರಿಗಳು, ನೌಕರರು ಎನ್ನುವುದು ಇನ್ನಷ್ಟು ದಿಗ್ಭ್ರಮೆಗೊಳಿಸುವಂತಹ ಸಂಗತಿ… ಈ ಹಗರಣದ ಕುರಿತು ನಮ್ಮ ‘ಅಸಲಿ ಸುದ್ದಿ’ ನ್ಯೂಸ್ ವೆಬ್ಸೈಟ್ ಅತೀ ಶೀಘ್ರದಲ್ಲೇ ಪಕ್ಕಾ ದಾಖಲೆಗಳೊಂದಿಗೆ ಸಂಪೂರ್ಣ ಮಾಹಿತಿಪೂರ್ಣ ತನಿಖಾ ವರದಿ ಪ್ರಕಟಿಸಿ, ಯಾರ ಮುಖವಾಡ ಎಲ್ಲೆಲ್ಲಿ ಕಳಚಿಬೀಳಲಿದೆ ಎಂಬುದನ್ನು ಬಹಿರಂಗಪಡಿಸಲಿದೆ.
ಅಕ್ರಮಗಳ ತಾಣವಾಯಿತೇ ಬಿಟಿಡಿಎ? ತನಿಖೆಗೆ ಹಿಂದೇಟು ಏಕೆ?
ಬಿಟಿಡಿಎ ಕಚೇರಿಯಲ್ಲಿ ಕೇವಲ ಸಂತ್ರಸ್ತರ ನಿರ್ಲಕ್ಷ್ಯ ಮಾತ್ರವಲ್ಲ, ಭ್ರಷ್ಟಾಚಾರದ ಸದ್ದೂ ಜೋರಾಗಿಯೇ ಕೇಳಿಸುತ್ತಿದೆ.
- ಇತ್ತೀಚೆಗೆ ಬಿಟಿಡಿಎ R.O. ಪ್ರಶಾಂತ ಬಾರಿಗಿಡದ ಮೇಲೆ ಭ್ರಷ್ಟಾಚಾರ ಹಾಗೂ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
- ಈ ಹಗರಣಕ್ಕೆ ಸಂಬಂಧಿಸಿದ ಪಕ್ಕಾ ದಾಖಲೆಗಳನ್ನು ಪತ್ರಕರ್ತರು ಬಿಟಿಡಿಎ ಚೀಫ್ ಇಂಜಿನಿಯರ್ ಚಂದ್ರಹಾಸ ಬಂಡಿ ಅವರ ಮುಂದಿಟ್ಟು, ತನಿಖೆಯ ಬಗ್ಗೆ ಪ್ರಶ್ನಿಸಿದ್ದರು.
- ನಾಲ್ಕು ದಿನಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗಲೂ ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರಿಗೆ ಪತ್ರಕರ್ತರು ಈ ದಾಖಲೆಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು.
- ನಮ್ಮ ‘ಅಸಲಿ ಸುದ್ದಿ’ ನ್ಯೂಸ್ ವೆಬ್ಸೈಟ್ ಕೂಡ ಈ ಅಕ್ರಮದ ತನಿಖಾ ವರದಿಯನ್ನು ಬಿತ್ತರಿಸಿದೆ.
ಆದರೆ, ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿದ್ದರೂ, ಅಕ್ರಮದ ಆರೋಪ ಹೊತ್ತ ಅಧಿಕಾರಿಯ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು? ರೈತನೊಬ್ಬ ನೌಕರನ ಮೇಲೆ ಕೈಮಾಡಿದಾಗ ಒಟ್ಟಾಗುವ ನಿಮ್ಮ ವ್ಯವಸ್ಥೆ, ದಿನನಿತ್ಯ ನೂರಾರು ಜನರನ್ನು ಸತಾಯಿಸುವ ನೌಕರರ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತದೆಯೇ? ನೌಕರರ ಮೇಲಿನ ಪ್ರೀತಿ ಸಂತ್ರಸ್ತರ ಮೇಲೂ ಇರಲಿ ಪ್ರಕಾಶ್ ತಪಶೆಟ್ಟಿ ಅವರೇ….
ಇದನ್ನೂ ಓದಿ: BTDA ಕಚೇರಿಯೋ ಅಥವಾ ನಿವೇಷನ ಮಾರಾಟದ ಕಾಳಸಂತೆನೋ? ಸಂತ್ರಸ್ತರಿಗೆ ನಾಮ, ಪ್ರಭಾವಿಗಳಿಗೆ ‘ಮೂರು’ ಸೈಟಿನ ಇನಾಮು!
ಮುಖಾಮುಖಿ ಸವಾಲು: ಎಸಿ ರೂಂ ಬಿಟ್ಟು ಜನರ ಬಳಿ ಬನ್ನಿ ಅಧ್ಯಕ್ಷರೇ!
ಇತ್ತೀಚೆಗೆ ಅಧ್ಯಕ್ಷಗಿರಿಗೆ ಏರಿರುವ ಪ್ರಕಾಶ್ ತಪಶೆಟ್ಟಿ ಅವರಿಗೆ ಬಿಟಿಡಿಎ ಎನ್ನುವುದು ಅಕ್ರಮಗಳ ಕೂಪ ಎನ್ನುವುದು ಚೆನ್ನಾಗಿಯೇ ಗೊತ್ತಿರುವ ಸಂಗತಿ. ಅಧಿಕಾರ ಸ್ವೀಕರಿಸುವ ದಿನ ನೀವು, “ಇನ್ನು ಮುಂದೆ ಬಿಟಿಡಿಎ ಸಂತ್ರಸ್ತರ ಪರವಾಗಿ ಕೆಲಸ ಮಾಡುತ್ತದೆ, ಇಷ್ಟು ದಿನ ಇದ್ದಂತೆ ಇರಲ್ಲ, ಎಲ್ಲಾ ಬದಲಾಗುತ್ತದೆ” ಎಂದು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದ ಭರವಸೆಯ ಮಾತುಗಳನ್ನು ದಯವಿಟ್ಟು ಮರೆಯಬೇಡಿ.
ಇನ್ನಾದರೂ ಕೇವಲ ನಿಮ್ಮ ಸಿಬ್ಬಂದಿಗಳ ಪರವಾಗಿ ಮಾತ್ರ ನಿಲ್ಲುವುದನ್ನು ಬಿಟ್ಟು, ಕೇವಲ ಬಾಗಿಲು ಮುಚ್ಚಿದ ಕೋಣೆಯಲ್ಲಿ ಅಧಿಕಾರಿಗಳ ಸಭೆ ಮಾಡುವುದನ್ನು ನಿಲ್ಲಿಸಿ. ನಿಜವಾದ ಬದಲಾವಣೆ ತರಬೇಕಿದ್ದರೆ ಈ ಕೆಳಗಿನ ಕ್ರಾಂತಿಕಾರಿ ಹೆಜ್ಜೆಯನ್ನು ಇಡಬೇಕಿದೆ:
- ಬಹಿರಂಗ ಅಹವಾಲು ಸಭೆ ನಡೆಸಿ: ಕಚೇರಿ ಆವರಣದಲ್ಲೇ ಸಂತ್ರಸ್ತರ ಅಹವಾಲು ಸ್ವೀಕಾರ ಮಾಡುವ ಬಹಿರಂಗ ಸಭೆ ನಡೆಸಿ ಜನರ ನೋವನ್ನು ಆಲಿಸಿ.
- ಏರಿಯಾಗಳಿಗೆ ಧಾವಿಸಿ: ಇಲ್ಲದಿದ್ದರೆ, ಸಂತ್ರಸ್ತರು ವಾಸಿಸುವ ಆಯಾ ಏರಿಯಾಗಳಿಗೇ ಖುದ್ದಾಗಿ ಹೋಗಿ ಸಭೆ ನಡೆಸಿ, ಅವರ ಅಳಲನ್ನು ಕೇಳಿ ಸ್ಥಳದಲ್ಲೇ ಅಹವಾಲು ಸ್ವೀಕರಿಸುವ ಕೆಲಸ ಮಾಡಿ.
ಇದು ಬಿಟಿಡಿಎ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಲಿದೆ ಮತ್ತು ಇಷ್ಟು ವರ್ಷಗಳಿಂದ ನರಳಿ ಸವೆಯುತ್ತಿರುವ ಸಂತ್ರಸ್ತರ ಗೋಳಾಟಕ್ಕೆ ಮುಕ್ತಿ ನೀಡಿದಂತಾಗುತ್ತದೆ.
ಇನ್ನಾದರೂ ದಕ್ಷತೆಗೆ ಹೆಸರಾದ ಪ್ರಕಾಶ್ ತಪಶೆಟ್ಟಿ ಅವರು ಅಕ್ರಮಕೋರರಿಗೆ ಗೇಟ್ ಪಾಸ್ ಕೊಟ್ಟು, ಸಂತ್ರಸ್ತರ ಪರವಾಗಿ ನಿಂತು, ಸುಲಲಿತವಾಗಿ ಕೆಲಸವಾಗುವಂತೆ ಆಡಳಿತ ಸಿಬ್ಬಂದಿಯನ್ನು ಟೈಟ್ ಮಾಡಬೇಕು. ಆಗ ಬಾಗಲಕೋಟೆಯ ಜನರಿಗೆ ನಿಮ್ಮ ಮೇಲಿನ ಗೌರವ ದುಪ್ಪಟ್ಟು ಆಗುತ್ತದೆ. ಇಲ್ಲದಿದ್ದರೆ, ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆಯುವುದರಲ್ಲಿ ಸಂಶಯವಿಲ್ಲ!

