Friday, September 11, 2026
Home ವಿಶ್ಲೇಷಣೆ Vijayanand Kashappanavar: ದ್ವೇಷದ ಅಂಗಳದಲ್ಲಿ ಪ್ರಬುದ್ಧತೆಯ ದಾಳ; ವೈರಿಗಳ ಕುತಂತ್ರಕ್ಕೂ ಮಣಿಯದ ವಿಜಯಾನಂದ ಕಾಶಪ್ಪನವರ್ ಬದಲಾದ...

Vijayanand Kashappanavar: ದ್ವೇಷದ ಅಂಗಳದಲ್ಲಿ ಪ್ರಬುದ್ಧತೆಯ ದಾಳ; ವೈರಿಗಳ ಕುತಂತ್ರಕ್ಕೂ ಮಣಿಯದ ವಿಜಯಾನಂದ ಕಾಶಪ್ಪನವರ್ ಬದಲಾದ ‘ನಡೆ-ನುಡಿ’!

Vijayanand Kashappanavar

ಉತ್ತರ ಕರ್ನಾಟಕದ ರಾಜಕಾರಣ ಎಂದರೆ ತಕ್ಷಣ ನೆನಪಾಗುವುದು ಆಕ್ರಮಣಕಾರಿ ಮಾತುಗಳು, ನೇರ ನುಡಿ ಹಾಗೂ ಎದುರಾಳಿಗಳಿಗೆ ಎದೆಯುಬ್ಬಿಸಿ ನಿಲ್ಲುವ ಗಡಸುತನ. ಇಂತಹ ಮಾದರಿಯ ರಾಜಕಾರಣಕ್ಕೆ ಅತ್ಯಂತ ಸೂಕ್ತ ಉದಾಹರಣೆಯಾಗಿ ದಶಕಗಳ ಕಾಲ ಕಣ್ಣಂದೆ ನಿಂತಿದ್ದವರು ಹುನಗುಂದದ ವಿಜಯಾನಂದ ಕಾಶಪ್ಪನವರ್ (Vijayanand Kashappanavar). ಶಾಸಕರಾಗಿದ್ದ ಅವಧಿಯಲ್ಲಿ ವಿಜಯಾನಂದ ಕಾಶಪ್ಪನವರ್ ಅಂದರೆ ಅದೊಂದು ಪ್ರತ್ಯೇಕ ಅಲೆ. ವಿರೋಧಿಗಳ ವಿರುದ್ಧ ವಾಚಾಮಗೋಚರವಾಗಿ ವಾಗ್ದಾಳಿ ನಡೆಸುವುದು, ಸ್ವಪಕ್ಷದವರ ಮೇಲೂ ಹರಿಹಾಯುವುದು ಮತ್ತು ಬದ್ಧ ವೈರಿಗಳಿಗೆ ರಾಜಕೀಯವಾಗಿ ತಕ್ಕ ಉತ್ತರ ನೀಡುವುದು ಅವರ ಟ್ರೇಡ್‌ಮಾರ್ಕ್ ಶೈಲಿಯಾಗಿತ್ತು.

ಪಕ್ಕದ ವಿಜಯಪುರ ಜಿಲ್ಲೆಯ ಬಿಜೆಪಿಯಿಂದ ಉಚ್ಛಾಟಿತರಾದ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರ ವಿರುದ್ಧ ‘ಗೊಡ್ಡ ಎಮ್ಮೆ’ ಎನ್ನುವಂತಹ ಖಾರವಾದ ಹೇಳಿಕೆ ನೀಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಕಾಶಪ್ಪನವರ ಎಂದರೆ, ಅದೊಂದು ರೌದ್ರಾವತಾರ ಮತ್ತು ಆಕ್ರಮಣಶೀಲ ರಾಜಕಾರಣದ ಮುಖವಾಗಿತ್ತು. ಆದರೆ, ಕಾಲ ಬದಲಾಗಿದೆ; ಸಚಿವ ಸ್ಥಾನದ ಪಟ್ಟ ಸಿಕ್ಕ ಬಳಿಕ ಅವರ ಮಾತು, ನಡವಳಿಕೆ ಹಾಗೂ ಶೈಲಿ ಎಷ್ಟರಮಟ್ಟಿಗೆ ರೂಪಾಂತರಗೊಂಡಿದೆ ಎಂದರೆ, ‘ಇವರೇನಾ ಆ ಹಳೆಯ ಕಾಶಪ್ಪನವರ?’ ಎಂದು ಸ್ವತಃ ಅವರ ಬೆಂಬಲಿಗರೇ ಹುಬ್ಬೇರಿಸುವಂತಾಗಿದೆ!

ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ: ರಾಹುಲ್ ನುಡಿಗೆ ಕಾಶಪ್ಪನವರ ಪ್ರತ್ಯಕ್ಷ ಸಾಕ್ಷಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನೀಡಿದ್ದ “ದ್ವೇಷದ ಬಜಾರ್‌ನಲ್ಲಿ ನಾನು ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ” ಎಂಬ ಮಾತು ಇಡೀ ದೇಶಾದ್ಯಂತ ಕ್ರಾಂತಿಯನ್ನೇ ಸೃಷ್ಟಿಸಿತ್ತು. ರಾಜಕೀಯದಲ್ಲಿ ಹಗೆತನ, ನಿಂದನೆ, ಕುತಂತ್ರಗಳೇ ತಾಂಡವವಾಡುತ್ತಿರುವಾಗ ಸಂಧಾನ ಮತ್ತು ಪ್ರಬುದ್ಧತೆಯೇ ಅಂತಿಮ ಗೆಲುವು ಎಂಬುದು ಅದರ ಹಿಂದಿನ ಸಂದೇಶವಾಗಿತ್ತು.

ಈಗ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ನ ಕುತಂತ್ರ ಹಾಗೂ ಮುಸುಕಿನ ಗುದ್ದಾಟದ ಅಂಗಳದಲ್ಲಿ ನಿಂತು ಸಚಿವ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ರಾಹುಲ್ ಗಾಂಧಿ ಅವರ ಆ ಮಾತನ್ನು ಕಾಶಪ್ಪನವರ ಜಿಲ್ಲೆಯಲ್ಲಿ ಅಕ್ಷರಶಃ ಪಾಲಿಸುತ್ತಿದ್ದಾರೆ ಎನಿಸುತ್ತದೆ. ತಮ್ಮ ವಿರುದ್ಧವೇ ಸ್ವಪಕ್ಷೀಯರು ಕುತಂತ್ರದ ಬಜಾರ್ ಸೃಷ್ಟಿಸಿದರೂ, ತಾವು ಮಾತ್ರ ಪ್ರೀತಿ, ಗೌರವ ಮತ್ತು ಒಗ್ಗಟ್ಟಿನ ದಾಳ ಉರುಳಿಸುವ ಮೂಲಕ ಎದುರಾಳಿಗಳ ಅಸ್ತ್ರಗಳನ್ನೇ ನಿಸ್ಸೇಜಗೊಳಿಸಿದ್ದಾರೆ.‌

ಇದನ್ನೂ ಓದಿ: ‘ಅಸಲಿ ಸುದ್ದಿ’ ತರ್ಕಕ್ಕೆ ಸ್ಫೋಟಕ ಆಡಿಯೋ ಸಾಕ್ಷಿ! ಮಾತೃ ಪಕ್ಷಕ್ಕೇ ನಂಜು ಕಾರಿದ ನಂಜಯ್ಯನಮಠ; ತಿಮ್ಮಾಪುರ ತೆಪ್ಪಗಿದ್ದಿದ್ದೇಕೆ? ‘ಕೈ’ ಹೈಕಮಾಂಡ್ ಮಾನ ಹರಾಜು!

ಜಿಲ್ಲಾ ರಾಜಕಾರಣದ ಆಂತರಿಕ ಬಿಕ್ಕಟ್ಟು ಮತ್ತು ವೈರಲ್ ಆಡಿಯೋ ಸೃಷ್ಟಿಸಿದ ಬಿರುಗಾಳಿ

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಎಂದರೆ ಅಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೊಸದೇನಲ್ಲ. ಜಿಲ್ಲೆಯ ನಾಯಕರ ನಡುವಿನ ಮುಸುಕಿನ ಗುದ್ದಾಟ ರಾಜಕೀಯ ವಲಯದಲ್ಲಿ ಬಹಿರಂಗ ರಹಸ್ಯ. ಅದರಲ್ಲೂ ಮುಖ್ಯವಾಗಿ‌ ಇತ್ತೀಚೆಗೆ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌ಜಿ ನಂಜಯನಮಠ (SG Nanjayyanamath) ಹಾಗೂ ಮಾಜಿ ಸಚಿವ ಆರ್‌ಬಿ ತಿಮ್ಮಾಪುರ (RB Thimmapur) ಮಾತನಾಡಿದ ಕುತಂತ್ರದ ಆಡಿಯೋ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಈ ಆಂತರಿಕ ಕಚ್ಚಾಟಕ್ಕೆ ಅಧಿಕೃತ ಮುದ್ರೆ ಒತ್ತಿದೆ.

ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಹಾಗೂ ಅವರನ್ನು ರಾಜಕೀಯವಾಗಿ ಮುಗಿಸಲು ಜಿಲ್ಲೆಯಲ್ಲೇ ತಂತ್ರ-ಕುತಂತ್ರಗಳು ನಡೆದಿವೆ ಎಂಬುದು ಈ ವೈರಲ್ ಆಡಿಯೋಗಳ ಮೂಲಕ ಜಗಜ್ಜಾಹಿರಾಗಿತ್ತು. ಸ್ವಪಕ್ಷದವರೇ ತಮ್ಮ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ ಎಂಬುದು ಗೊತ್ತಾದಾಗ ಯಾವುದೇ ರಾಜಕಾರಣಿಗೆ ರಕ್ತ ಕುದಿಯುವುದು ಸಹಜ. ಹಳೆಯ ಕಾಶಪ್ಪನವರಾಗಿದ್ದರೆ, ತಕ್ಷಣವೇ ಮೈಕ್ ಮುಂದೆ ನಿಂತು, ಪತ್ರಿಕಾಗೋಷ್ಠಿ ಕರೆದು ಎದುರಾಳಿಗಳ ಚರ್ಮ ಸುಲಿದು, ಜಿಲ್ಲಾ ಕಾಂಗ್ರೆಸ್ ಅಂಗಳದಲ್ಲಿ ಬೆಂಕಿ ಎಬ್ಬಿಸುತ್ತಿದ್ದರು! ಆದರೆ, ಇಲ್ಲೇ ಕಾಶಪ್ಪನವರ್ ತಮ್ಮ ರಾಜಕೀಯ ಚಾಣಕ್ಯತನ ಪ್ರದರ್ಶಿಸಿದ್ದು.

ತಿಮ್ಮಾಪುರ ನಿವಾಸಕ್ಕೆ ದಿಢೀರ್ ಭೇಟಿ: ವೈರಿಗಳ ಬಾಗಿಲಲ್ಲೇ ‘ಮಾಸ್ಟರ್ ಸ್ಟ್ರೋಕ್’!

ತನ್ನ ವಿರುದ್ಧ ರಾಜಕೀಯ ಕುತಂತ್ರ ನಡೆದಿದೆ ಎಂಬುದು ಸ್ಪಷ್ಟವಾಗಿದ್ದರೂ, ಸಚಿವ ಸ್ಥಾನದ ಜವಾಬ್ದಾರಿ ಹೊತ್ತು ಜಿಲ್ಲೆಗೆ ಬಂದ ವಿಜಯಾನಂದ ಕಾಶಪ್ಪನವರ್ ಮಾಡಿದ ಮೊದಲ ಕೆಲಸವೇ ಮುಧೋಳ ನಗರದಲ್ಲಿದ್ದ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ನಿವಾಸಕ್ಕೆ ಭೇಟಿ ನೀಡಿದ್ದು!

ತಮಗೆ ಕೇಡು ಬಯಸಿದವರ ಮನೆಗೇ ಸ್ವತಃ ತೆರಳಿದ ಕಾಶಪ್ಪನವರ, ಉಭಯ ಕುಶಲೋಪರಿ ವಿಚಾರಿಸಿದರು. ಮಾಧ್ಯಮಗಳು ಆಡಿಯೋ ಕುರಿತು ಚುಚ್ಚಿ ಚುಚ್ಚಿ ಪ್ರಶ್ನಿಸಿದಾಗಲೂ, ತೀರ ಸಮಚಿತ್ತದಿಂದ, “ತಿಮ್ಮಾಪುರ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಅವರ ಮನೆಗೆ ಸೌಜನ್ಯದ ಭೇಟಿ ನೀಡಿ ಸಲಹೆ ಸೂಚನೆ ಪಡೆದಿದ್ದೇನೆ. ರಾಜಕೀಯದಲ್ಲಿ ಏನೇ ಭಿನ್ನಾಭಿಪ್ರಾಯ ಅಥವಾ ವೈಮನಸ್ಸುಗಳಿದ್ದರೂ ಅದನ್ನು ಅಲ್ಲೇ ಬಿಟ್ಟು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ನನ್ನ ಆದ್ಯತೆ” ಎಂದು ಖಡಕ್ಕಾಗಿ ಹೇಳಿದರು.

ತಮ್ಮನ್ನು ಕೆರಳಿಸಿ ಮತ್ತೆ ಗಲಾಟೆ ಸೃಷ್ಟಿಸಬೇಕೆಂದಿದ್ದ ಎದುರಾಳಿಗಳ ತಂತ್ರಕ್ಕೆ, ಅವರ ಮನೆ ಬಾಗಿಲಿಗೇ ಹೋಗಿ ಸೌಹಾರ್ದತೆಯ ಹಸ್ತ ಚಾಚುವ ಮೂಲಕ ಕಾಶಪ್ಪನವರ್ ನೀಡಿದ ಈ ‘ಮಾಸ್ಟರ್ ಸ್ಟ್ರೋಕ್’ ಇಡೀ ಜಿಲ್ಲಾ ಕಾಂಗ್ರೆಸ್‌ಗೆ ಅಚ್ಚರಿ ಮೂಡಿಸಿತು.

ಸಭಾಭವನದಿಂದ ಜಮೀನಿನವರೆಗೆ: ಆಡಳಿತ ಯಂತ್ರಕ್ಕೆ ಬಿಸಿ!

ಕೇವಲ ರಾಜಕೀಯ ಸಂಧಾನಗಳಿಗೆ ಸೀಮಿತವಾಗದೆ, ಅಧಿಕಾರದ ಜವಾಬ್ದಾರಿ ನಿಭಾಯಿಸುವಲ್ಲೂ ಕಾಶಪ್ಪನವರ್ ಗಂಭೀರತೆ ತೋರಿದ್ದಾರೆ. ಜಿಲ್ಲೆಗೆ ಆಗಮಿಸಿದ ತಕ್ಷಣವೇ ಅವರು ಜಿಲ್ಲಾ ಪಂಚಾಯತ್‌ನ ನೂತನ ಸಭಾಭವನದಲ್ಲಿ ಜಿಲ್ಲೆಯ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಈ ಸಭೆಯಲ್ಲಿ ಶಾಸಕರಾದ ಉಮೇಶ ಮೇಟಿ, ಜಗದೀಶ್ ಗುಡಗುಂಟಿ, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಹಾಗೂ ಜಿಲ್ಲಾಧಿಕಾರಿ ಎಂ. ಸಂಗಪ್ಪ ಸೇರಿದಂತೆ ಅಧಿಕಾರಿಗಳನ್ನು ಒಂದೇ ಸೂರಿನಡಿ ತಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜಕೀಯ ಸಿದ್ಧಾಂತ ಏನೇ ಇರಲಿ, ಆಡಳಿತದ ವಿಚಾರದಲ್ಲಿ ಎಲ್ಲರನ್ನೂ ಗೌರವದಿಂದ ನಡೆಸಿಕೊಂಡದ್ದು ಅವರ ವಿಶಾಲ ಮನೋಭಾವಕ್ಕೆ ಸಾಕ್ಷಿ.

ಅಷ್ಟಕ್ಕೇ ನಿಲ್ಲದೆ, ಗುಳೇದಗುಡ್ಡ ತಾಲೂಕಿನ ಬೂದನಗಡ ಗ್ರಾಮದ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ, ಇತ್ತೀಚಿನ ಮಳೆಯಿಂದ ಹಾನಿಗೊಳಗಾದ ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿದರು. ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಉಮೇಶ ಮೇಟಿ ಹಾಗೂ ಡಿಸಿ ಸಂಗಪ್ಪ ಅವರೊಂದಿಗೆ ಜಮೀನಿನ ಕೆಸರಿಗೆ ಇಳಿದು ರೈತರ ಸಂಕಟಗಳನ್ನು ಆಲಿಸಿ, ತಕ್ಷಣ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದನ್ನೂ ಓದಿ: ಕುತಂತ್ರಕ್ಕೆ ಬಗ್ಗದ ‘ಮರಿ ಸರ್ಕಾರ್! ಆಡಿಯೋ ಕಂಟಕ ಮೆಟ್ಟಿ ನಿಂತು ಸಚಿವಗಿರಿ ಮುಡಿಗೇರಿಸಿಕೊಂಡ ‘ಫೈರ್ ಬ್ರ್ಯಾಂಡ್’ ವಿಜಯಾನಂದ ಕಾಶಪ್ಪನವರ್

‘ಗೊಡ್ಡ ಎಮ್ಮೆ’ಯಿಂದ ಶಾಂತತೆಯ ಮಂತ್ರದವರೆಗೆ: ಈ ಬದಲಾವಣೆಯ ಹಿಂದಿನ ಸಂದೇಶವೇನು?

ಯತ್ನಾಳ್ ವಿರುದ್ಧ “ಗೊಡ್ಡ ಎಮ್ಮೆ” ಎಂದೋ, ವಿರೋಧಿಗಳ ವಿರುದ್ಧ ವಾಚಾಮಗೋಚರ ಹರಿಹಾಯುತ್ತಿದ್ದ ಕಾಶಪ್ಪನವರ್ ಅವರ ಈ ಹಠಾತ್ ರೂಪಾಂತರದ ಹಿಂದೆ ಗಂಭೀರ ರಾಜಕೀಯ ಲೆಕ್ಕಾಚಾರಗಳಿವೆ:

  • ಸ್ಥಾನಮಾನ ನೀಡಿದ ಗಾಂಭೀರ್ಯ: ಕೇವಲ ಶಾಸಕರಾಗಿದ್ದಾಗ ತಮಗಿದ್ದ ಸ್ವಾತಂತ್ರ್ಯಕ್ಕೂ, ಇಡೀ ಜಿಲ್ಲೆಯ ಜವಾಬ್ದಾರಿ ಹೊತ್ತ ಸಚಿವರಾದಾಗ ಇರಬೇಕಾದ ‘ಆಡಳಿತಾತ್ಮಕ ಗಾಂಭೀರ್ಯ’ಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಗ್ರಹಿಸಿದ್ದಾರೆ.‌
  • ದ್ವೇಷದ ರಾಜಕೀಯಕ್ಕೆ ಮೌನದ ತಿರುಗೇಟು: ತಮ್ಮ ವಿರುದ್ಧ ಮಾತನಾಡಿದ ಆಡಿಯೋ ವೈರಲ್ ಆದ ಬಳಿಕವೂ, ಮಾತನಾಡಿದವರಿಗೆ ಆಕ್ರೋಶದಿಂದ ಉತ್ತರಿಸುವ ಬದಲು ‘ಸಂಸದೀಯ ಸೌಹಾರ್ದತೆ’ಯ ಮೂಲಕವೇ ತಿರುಗೇಟು ನೀಡಿ ಅವರ ಅಸ್ತ್ರಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
  • ದೀರ್ಘಕಾಲೀನ ನಾಯಕತ್ವದ ಹಂಬಲ: ಕೇವಲ ಬೈಗುಳ ಮತ್ತು ಗಲಾಟೆಯಿಂದ ನಾಯಕನಾಗಲು ಸಾಧ್ಯವಿಲ್ಲ, ಬದಲಿಗೆ ತಾಳ್ಮೆ ಮತ್ತು ರಾಜತಾಂತ್ರಿಕತೆಯಿಂದ ಮಾತ್ರ ಭವಿಷ್ಯದ ದೊಡ್ಡ ನಾಯಕನಾಗಬಹುದು ಎಂಬುದನ್ನು ಕಾಶಪ್ಪನವರ್ ಅರ್ಥ ಮಾಡಿಕೊಂಡಿದ್ದಾರೆ‌ ಎನಿಸುತ್ತದೆ.

ಇದು ಕೇವಲ ಪ್ರದರ್ಶನವೋ ಅಥವಾ ಸ್ಥಿರ ನಡವಳಿಕೆಯೋ?

ಉತ್ತರ ಕರ್ನಾಟಕದ ಕಾವು ಹೆಚ್ಚಿರುವ ರಾಜಕೀಯ ಅಂಗಳದಲ್ಲಿ, ಹಳೆಯ ಕೋಪ-ತಾಪಗಳನ್ನು ಬದಿಗೊತ್ತಿ, ದ್ವೇಷದ ನಡುವೆಯೂ ಸೌಹಾರ್ದತೆಯ ದಾಳ ಉರುಳಿಸಿರುವ ವಿಜಯಾನಂದ ಕಾಶಪ್ಪನವರ್ ಅವರ ಈ ರಾಜಕೀಯ ಪ್ರಬುದ್ಧತೆ ನಿಜಕ್ಕೂ ಸಮಯೋಚಿತ.

ಆದರೆ, ರಾಜಕೀಯದಲ್ಲಿ ನಡವಳಿಕೆಗಳು ಸಮಯಕ್ಕೆ ತಕ್ಕಂತೆ ಬದಲಾಗುವುದು ಸಾಮಾನ್ಯ. ಸಚಿವ ಪಟ್ಟ ಸಿಕ್ಕ ಹೊಸದರಲ್ಲಿ ಕಂಡುಬರುತ್ತಿರುವ ಕಾಶಪ್ಪನವರ್ ಅವರ ಈ ‘ಬದಲಾದ ನಡೆ-ನುಡಿ’ ಮುಂದೆಯೂ ಹೀಗೆಯೇ ಸ್ಥಿರವಾಗಿರುತ್ತದೆಯೇ ಅಥವಾ ಸಮಯ ಬಂದಾಗ ಮತ್ತೆ ಹಳೆಯ ರೌದ್ರಾವತಾರಕ್ಕೆ ತಿರುಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಏನೇ ಆದರೂ, ಸದ್ಯದ ಮಟ್ಟಿಗೆ ಬಾಗಲಕೋಟೆಯ ದ್ವೇಷದ ರಾಜಕೀಯದಲ್ಲಿ ಪ್ರಬುದ್ಧತೆಯ ಪ್ರದರ್ಶನ ನೀಡಿರುವ ಕಾಶಪ್ಪನವರ್ ನಡೆ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...