Vijayanand Kashappanavara: ಬಾಗಲಕೋಟೆ ರಾಜಕಾರಣ ಎಂದಾಕ್ಷಣ ನೆನಪಾಗುವುದು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಮಣ್ಣಿನ ಖಾರವಾದ ಮಾತುಗಳು, ಜವಾರಿ ಭಾಷೆಯ ಗತ್ತು ಮತ್ತು ನೇರಾನೇರ ಸವಾಲುಗಳು. ಇಂತಹ ರಾಜಕೀಯ ವಾತಾವರಣದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ‘ಫೈರ್ ಬ್ರ್ಯಾಂಡ್’ ರಾಜಕಾರಣಿಯಾಗಿ ಹೊರಹೊಮ್ಮಿದವರು ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್. ಯಾರೇ ಎದುರಾಳಿ ಇರಲಿ, ಎಷ್ಟೇ ಪ್ರಭಾವಿ ವ್ಯಕ್ತಿ ಇರಲಿ, ಮುಖಕ್ಕೆ ಹೊಡೆದಂತೆ ಮಾತನಾಡುವ ಹಾಗೂ ತಮ್ಮ ಜವಾರಿ ಶೈಲಿಯ ಡೈಲಾಗ್‌ಗಳ ಮೂಲಕವೇ ಎದುರಾಳಿಗಳನ್ನು ಧೂಳೀಪಟ ಮಾಡುವ ಆಕ್ರಮಣಕಾರಿ ಸ್ವಭಾವ ವಿಜಯಾನಂದ ಅವರ ಹುಟ್ಟುಗುಣ. ಹಲವು ರಾಜಕೀಯ ಸವಾಲುಗಳು, ಸ್ವಪಕ್ಷೀಯರ ಕುತಂತ್ರಗಳು, ವೈರಲ್ ಆಡಿಯೋ ಕಂಟಕಗಳು ಹಾಗೂ ಅಪಪ್ರಚಾರದ ಚಕ್ರವ್ಯೂಹಗಳನ್ನು ಭೇದಿಸಿ, ಇದೀಗ ಅವರು ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಯ ‘ಫೈರ್ ಬ್ರ್ಯಾಂಡ್’ ಹಾಗೂ ಜವಾರಿ ಭಾಷೆಯ ‘ಮರಿ ಸರ್ಕಾರ್’
ವಿಜಯಾನಂದ ಕಾಶಪ್ಪನವರ್ (Vijayanand Kashappanavara) ಎಂದರೆ ಬಾಗಲಕೋಟೆ ಜಿಲ್ಲೆಯ ರಾಜಕೀಯ ಅಖಡದಲ್ಲಿ ಒಂದು ಆವೇಗ, ಒಂದು ಸಂಚಲನ. ಎದುರಿಗಿರುವ ವ್ಯಕ್ತಿ ಅಧಿಕಾರಿಯಾಗಿರಲಿ, ರಾಜಕೀಯ ವಿರೋಧಿಯಾಗಿರಲಿ ಅಥವಾ ಯಾವುದೇ ದೊಡ್ಡ ನಾಯಕನೇ ಇರಲಿ, ಬೆದರದೇ ನೇರನುಡಿ ಆಡುವುದು ಅವರ ವೈಶಿಷ್ಟ್ಯ. ಉತ್ತರ ಕರ್ನಾಟಕದ ಉತ್ತರ ನುಡಿ ಹಾಗೂ ಜವಾರಿ ಭಾಷೆಯಲ್ಲಿ ಅವರು ಹೊಡೆಯುವ ಡೈಲಾಗ್‌ಗಳು ಕ್ಷೇತ್ರದ ಜನರಲ್ಲಿ ಹಾಗೂ ಬೆಂಬಲಿಗರಲ್ಲಿ ಹೊಸ ಹುರುಪು ಮೂಡಿಸುತ್ತವೆ.
ಅಧಿಕಾರಿಗಳು ಸಾರ್ವಜನಿಕ ಕೆಲಸಗಳಲ್ಲಿ ವಿಳಂಬ ಧೋರಣೆ ಅನುಸರಿಸಿದಾಗ ಅಥವಾ ಶಾಸಕರ ಮಾತಿಗಿಂತ ಆಡಳಿತ ಯಂತ್ರದ ಬೇಜವಾಬ್ದಾರಿ ಹೆಚ್ಚಾದಾಗ ಕಾಶಪ್ಪನವರ್ ಅಖಡಕ್ಕಿಳಿದು ನೀಡುತ್ತಿದ್ದ ಎಚ್ಚರಿಕೆಗಳು ಸದಾ ಸುದ್ದಿಯಾಗುತ್ತಿದ್ದವು. ಅದೇ ರೀತಿ, ಕ್ಷೇತ್ರದಲ್ಲಿ ತಮ್ಮ ಸಾಂಪ್ರದಾಯಿಕ ಹಾಗೂ ಮುಖ್ಯ ರಾಜಕೀಯ ಎದುರಾಳಿಯಾದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ಧ ಕಾಶಪ್ಪನವರ್ ಬೀಸುತ್ತಿದ್ದ ರಾಜಕೀಯ ವಾಗ್ದಾಳಿಗಳು ಮತ್ತು ಪಂಚ್ ಡೈಲಾಗ್‌ಗಳು ಹುನಗುಂದ ಭಾಗದಲ್ಲಿ ಫುಲ್ ಫೇಮಸ್. ಅವರ ಈ ಕಟು ಮಾತು ಮತ್ತು ಧೈರ್ಯಶಾಲಿ ನಿಲುವಿನಿಂದಾಗಿಯೇ ಬೆಂಬಲಿಗರು ಅವರನ್ನು ಪ್ರೀತಿಯಿಂದ ‘ಮರಿ ಸರ್ಕಾರ್’ ಎಂದೇ ಕರೆಯುತ್ತಾರೆ.
40 ವರ್ಷಗಳ ಕಾಶಪ್ಪನವರ ಕುಟುಂಬದ ರಾಜಕೀಯ ಚರಿತ್ರೆ ಹಾಗೂ ‘ಸರ್ಕಾರ್’ ಪರಂಪರೆ
ವಿಜಯಾನಂದ ಕಾಶಪ್ಪನವರ (Vijayanand Kashappanavara) ರಾಜಕೀಯ ಬಲ ಮತ್ತು ವ್ಯಕ್ತಿತ್ವ ಏಕಾಏಕಿ ಬಂದಿದ್ದಲ್ಲ. ಇದರ ಹಿಂದೆ ಕಳೆದ ನಾಲ್ಕು ದಶಕಗಳ ಕಾಲ ಬಾಗಲಕೋಟೆ ಹಾಗೂ ಹುನಗುಂದ ರಾಜಕಾರಣದಲ್ಲಿ ಸುದೀರ್ಘ ಇತಿಹಾಸ ಬರೆದಿರುವ ಕಾಶಪ್ಪನವರ ಕುಟುಂಬದ ರಕ್ತಗತ ಪರಂಪರೆ ಇದೆ.
1972 ಜುಲೈ 1 ರಂದು ಜನಿಸಿದ ವಿಜಯಾನಂದ ಕಾಶಪ್ಪನವರ್, ಲಿಂಗಾಯತ ಸಮುದಾಯದ ಪ್ರಭಾವಿ ಕುಟುಂಬದಿಂದ ಬಂದವರು. ಇವರ ತಂದೆ ದಿವಂಗತ ಶಿವಶಂಕರಪ್ಪ ಕಾಶಪ್ಪನವರ್ ಉತ್ತರ ಕರ್ನಾಟಕ ಕಂಡ ಅತ್ಯಂತ ಪ್ರಭಾವಿ, ಡೈನಾಮಿಕ್ ಹಾಗೂ ಡೇರಿಂಗ್ ನಾಯಕರಾಗಿದ್ದರು. ಶಿವಶಂಕರಪ್ಪ ಅವರ ಎದುರು ಯಾರೂ ಜೋರು ಧ್ವನಿಯಲ್ಲಿ ಮಾತನಾಡುವಂತಿರಲಿಲ್ಲ. ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಅವರನ್ನು ಗೌರವ ಹಾಗೂ ಭಯದಿಂದ ‘ಸರ್ಕಾರ್’ ಎಂದೇ ಸಂಭೋದಿಸುತ್ತಿದ್ದರು. ‘ಸರ್ಕಾರ್’ ಎಂದರೆ ಆಡಳಿತದ ಗತ್ತು ಮತ್ತು ಜನರ ಪರವಾಗಿ ನಿಲ್ಲುವ ಭರವಸೆ ಎಂಬ ವಾತಾವರಣ ಕ್ಷೇತ್ರದಲ್ಲಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಕಾಶಪ್ಪನವರ್ ಗೆ ಕಂಟಕವಾಗುತ್ತಾ ವೈರಲ್ ‘ಆಡಿಯೋ’? ಇದು ಬಿಜೆಪಿಯ ಗೇಮ್ ಪ್ಲಾನಾ, ಸ್ವಪಕ್ಷೀಯರ ಕೃತ್ಯವಾ?
ತಂದೆ ಶಿವಶಂಕರಪ್ಪ ಕಾಶಪ್ಪನವರ ಹ್ಯಾಟ್ರಿಕ್ ಇತಿಹಾಸ:
- 1985 ರ ಚುನಾವಣೆ: ಶಿವಶಂಕರಪ್ಪ ಕಾಶಪ್ಪನವರು ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುನಗುಂದದಿಂದ ಸ್ಪರ್ಧಿಸಿ, ಜನತಾ ಪಕ್ಷದ ಸಿದ್ದಪ್ಪ ಕಡಪಟ್ಟಿ ವಿರುದ್ಧ ಕೇವಲ 4,000 ಮತಗಳಿಂದ ಸೋಲನುಭವಿಸಿದರು.
- 1989 ರ ಚುನಾವಣೆ: ಬೃಹತ್ ಪ್ರಮಾಣದಲ್ಲಿ ಬೆಂಬಲ ಗಳಿಸಿದ ಶಿವಶಂಕರಪ್ಪ, 19,000 ಮತಗಳ ಬೃಹತ್ ಅಂತರದಿಂದ ಜಯಗಳಿಸಿ ಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದರು.
- 1994 ಮತ್ತು 1999 ರ ಚುನಾವಣೆ: ಹುನಗುಂದ ಕ್ಷೇತ್ರದಲ್ಲಿ ಸತತವಾಗಿ ಭರ್ಜರಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಹುನಗುಂದ ಕ್ಷೇತ್ರವನ್ನು ಕಾಂಗ್ರೆಸ್ ಕೋಟೆಯನ್ನಾಗಿ ಮಾಡಿದರು.
ಆದರೆ, ದುರದೃಷ್ಟವಶಾತ್ 2003 ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಶಂಕರಪ್ಪ ಕಾಶಪ್ಪನವರು ಅಕಾಲಿಕ ನಿಧನ ಹೊಂದಿದರು. ಈ ಘಟನೆ ಇಡೀ ಬಾಗಲಕೋಟೆ ಜಿಲ್ಲೆಯನ್ನು ಶೋಕಸಾಗರದಲ್ಲಿ ತಳ್ಳಿತ್ತು.
ತಾಯಿ ಗೌರಮ್ಮ ಹಾಗೂ ಪತ್ನಿ ವೀಣಾ ಕಾಶಪ್ಪನವರ ರಾಜಕೀಯ ಪ್ರವೇಶ:
ಶಿವಶಂಕರಪ್ಪ ಅವರ ನಿಧನದ ನಂತರ 2003 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಕಾಶಪ್ಪನವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಜೆಪಿಯ ಪಿ.ಎಂ. ಸಂಗನಗೌಡ ವಿರುದ್ಧ 10,000 ಮತಗಳಿಂದ ಭರ್ಜರಿ ಜಯ ಗಳಿಸಿದರು. ಈ ಉಪಚುನಾವಣೆಯ ಸಂದರ್ಭದಲ್ಲೇ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಪತ್ನಿ ವೀಣಾ ಕಾಶಪ್ಪನವರ್ ಸಕ್ರಿಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.
ನಂತರದ ದಿನಗಳಲ್ಲಿ, ವಿಜಯಾನಂದ ಅವರ ಪತ್ನಿ ವೀಣಾ ಕಾಶಪ್ಪನವರ್ 2016 ರಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ‘ಗ್ರಾಮ ವಾಸ್ತವ್ಯ’ ಹಾಗೂ ಗ್ರಾಮೀಣ ಮಹಿಳೆಯರಿಗೆ ಶೌಚಾಲಯ ನಿರ್ಮಾಣದಂತಹ ಗಮನಾರ್ಹ ಕಾರ್ಯಗಳನ್ನು ಮಾಡಿ ಸಬಲ ನಾಯಕಿಯಾಗಿ ಗುರುತಿಸಿಕೊಂಡರು. 2019 ರ ಲೋಕಸಭಾ ಚುನಾವಣೆಯಲ್ಲೂ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗಮನಸೆಳೆದಿದ್ದರು.
ಹುನಗುಂದ ಅಖಡದ ಹೈ-ವೋಲ್ಟೇಜ್ ಕದನ: ವಿಜಯಾನಂದ vs ದೊಡ್ಡನಗೌಡ ಪಾಟೀಲ್
ವಿಜಯಾನಂದ ಕಾಶಪ್ಪನವರ ರಾಜಕೀಯ ಪಯಣ ಸುಲಭದ ಹಾದಿಯಾಗಿರಲಿಲ್ಲ. ಬಿಜೆಪಿಯ ದೊಡ್ಡನಗೌಡ ಪಾಟೀಲ್ ಮತ್ತು ವಿಜಯಾನಂದ ನಡುವಿನ ನೇರ ಹಣಾಹಣಿ ಕರ್ನಾಟಕದ ಕುತೂಹಲಕಾರಿ ರಾಜಕೀಯ ಕಾಳಗಗಳಲ್ಲಿ ಒಂದಾಗಿದೆ.
- 2008 ರ ಚುನಾವಣೆ: ತಾಯಿ ಗೌರಮ್ಮ ಅವರ ಬದಲಾಗಿ ಪ್ರಥಮ ಬಾರಿಗೆ ವಿಜಯಾನಂದ ಕಾಶಪ್ಪನವರ್ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದರು. ಆದರೆ, ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್ ವಿರುದ್ಧ 5,000 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದರು.
- 2013 ರ ಚುನಾವಣೆ: ಕಠಿಣ ಪರಿಶ್ರಮದಿಂದ ಸಂಘಟಿತರಾದ ವಿಜಯಾನಂದ, ದೊಡ್ಡನಗೌಡ ಪಾಟೀಲ್ ವಿರುದ್ಧ 72,000 ಕ್ಕೂ ಹೆಚ್ಚು ಮತಗಳನ್ನು ಪಡೆದು, 16,000 ಮತಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಿ ಪ್ರಥಮ ಬಾರಿಗೆ ಶಾಸಕರಾದರು.
- 2018 ರ ಚುನಾವಣೆ: ಅಲ್ಪ ಮತಗಳ ಅಂತರದಲ್ಲಿ (ಸುಮಾರು 5,000 ಮತಗಳು) ಮತ್ತೆ ದೊಡ್ಡನಗೌಡರ ವಿರುದ್ಧ ಸೋಲು ಕಾಣಬೇಕಾಯಿತು.
- 2023 ರ ಚುನಾವಣೆ: 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ್ ಕಂಬ್ಯಾಕ್ ಮಾಡಿದರು. ಬರೊಬ್ಬರಿ 78,000 ಕ್ಕೂ ಹೆಚ್ಚು ಮತಗಳನ್ನು ಪಡೆದು, 30,000 ಮತಗಳ ಪ್ರಚಂಡ ಅಂತರದಿಂದ ದೊಡ್ಡನಗೌಡ ಪಾಟೀಲರನ್ನು ಧೂಳೀಪಟ ಮಾಡಿ ಮತ್ತೊಮ್ಮೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದರು.
ವೈರಲ್ ಆಡಿಯೋಗಳು, ಸ್ವಪಕ್ಷೀಯರ ಕುತಂತ್ರ ಮತ್ತು ‘ರೌಡಿ ರಾಜಕಾರಣಿ’ ಎಂಬ ಬಿಂಬನೆ
ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ರಾಜಕೀಯ ರಂಗದಲ್ಲಿ ದೊಡ್ಡ ಮಟ್ಟದ ಗೂಢಚರ್ಯೆ ಮತ್ತು ಕುತಂತ್ರಗಳು ನಡೆದಿದ್ದವು ಎಂಬುದು ಬಹಿರಂಗ ಸತ್ಯ. ಜಿಲ್ಲೆಯಲ್ಲಿ ವಿಜಯಾನಂದ ಅವರಿಗೆ ಎದುರಾಳಿ ಬಿಜೆಪಿ ಪಕ್ಷಕ್ಕಿಂತಲೂ ಹೆಚ್ಚಾಗಿ ಸ್ವಪಕ್ಷದ ವಿರೋಧಿಗಳೇ ಹೆಚ್ಚಾಗಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸಾರಥ್ಯಕ್ಕೆ 23 ನಾಯಕರ ಕಸರತ್ತು! “ಕೊಟ್ರೆ ಒಲ್ಲೆ ಎನ್ನಲ್ಲ, ಬೇಕೇಬೇಕು ಅಂತ ಕೇಳೋದೂ ಇಲ್ಲ”- ಹಳೆ ಹುಲಿ ಗುಡುಗು!
ಅವರ ಸಚಿವ ಸ್ಥಾನದ ರೇಸ್ ಮುನ್ನೆಲೆಗೆ ಬರುತ್ತಿದ್ದಂತೆ:
- ಆಡಿಯೋಗಳ ವೈರಲ್: ಅಧಿಕಾರಿಗಳೊಂದಿಗೆ, ಪತ್ರಕರ್ತರೊಂದಿಗೆ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಅವರು ಆಡಿದ ಕೋಪದ ಮಾತುಗಳು ಮತ್ತು ತೀಕ್ಷ್ಣ ಸಂಭಾಷಣೆಗಳ ಆಡಿಯೋ ಕ್ಲಿಪ್‌ಗಳನ್ನು ಯೋಜಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಯಿತು.
- ಬಿಜೆಪಿಗೆ ಅಸ್ತ್ರ ಒದಗಿಸಿದ ಸ್ವಪಕ್ಷೀಯರು: ವಿಜಯಾನಂದ ಅವರನ್ನು ಹದ್ದುಬಸ್ತಿನಲ್ಲಿಡಲು ಹಾಗೂ ಸಚಿವ ಪಟ್ಟ ತಪ್ಪಿಸಲು ಸ್ವಪಕ್ಷದ ಕೆಲ ನಾಯಕರೇ ಈ ಆಡಿಯೋಗಳನ್ನು ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಬಳಸಿಕೊಳ್ಳಲು ನೆರವಾದರು ಎಂಬ ಆರೋಪಗಳಿವೆ.
- ‘ರೌಡಿ ರಾಜಕಾರಣಿ’ ಬ್ರ್ಯಾಂಡಿಂಗ್: ರಾಜ್ಯಮಟ್ಟದಲ್ಲಿ ವಿಜಯಾನಂದ ಕಾಶಪ್ಪನವರನ್ನು ಒಬ್ಬ ‘ರೌಡಿ ರಾಜಕಾರಣಿ’, ‘ಅನಿಯಂತ್ರಿತ ನಾಯಕ’ ಎಂದು ಬಿಂಬಿಸಿ, ಅವರಿಗೆ ಸಚಿವ ಸ್ಥಾನ ನೀಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಅಪಪ್ರಚಾರದ ಚಕ್ರವ್ಯೂಹ ಹೆಣೆಯಲಾಯಿತು.
ಆದರೆ, ಕಾಶಪ್ಪನವರ್ ಅಂದರೆ ಸದಾ ‘ಡೋಂಟ್ ಕೇರ್’ ಆ್ಯಟಿಟ್ಯೂಡ್‌ನ ರಾಜಕಾರಣಿ! ಇಂತಹ ಯಾವುದೇ ಅಪಪ್ರಚಾರ, ಕುತಂತ್ರ ಅಥವಾ ವಿರೋಧಿಗಳ ಬೆದರಿಕೆ ತಂತ್ರಗಳಿಗೆ ಕುಗ್ಗದ ‘ಮರಿ ಸರ್ಕಾರ್’, ತಮ್ಮ ಜನಪ್ರಿಯತೆ, ಲಿಂಗಾಯತ ಸಮುದಾಯದ ಬಲ, ಹಾಗೂ ಹೈಕಮಾಂಡ್ ಮಟ್ಟದಲ್ಲಿ ತಮಗಿದ್ದ ಪ್ರಭಾವವನ್ನು ಬಳಸಿ ಕೊನೆಗೂ ಸಚಿವಗಿರಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಳಿ ತಲೆಗಳ ರಾಜಕಾರಣಕ್ಕೆ ಬ್ರೇಕ್: ಯುವ ನಾಯಕತ್ವಕ್ಕೆ ಮಣೆ, ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು!
ಇಷ್ಟು ದಿನ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಒಂದು ಅಖಂಡ ಅಸಮಾಧಾನವಿತ್ತು. ಪ್ರತಿಸಲ ಅಧಿಕಾರ ಅಥವಾ ಸಚಿವ ಸ್ಥಾನದ ಮಾತು ಬಂದಾಗಲೆಲ್ಲಾ ಹಿರಿತನದ ಆಧಾರದಲ್ಲಿ ‘ಬಿಳಿ ತಲೆಗಳಿಗೆ’ ಮಾತ್ರ ಮಣೆ ಹಾಕಲಾಗುತ್ತಿತ್ತು ಎನ್ನುವ ದೂರು ಪಕ್ಷದ ಒಳಗೇ ಬಲವಾಗಿ ಕೇಳಿಬರುತ್ತಿತ್ತು. ಯುವ ಮುಖಂಡರಿಗೆ ಪ್ರಾತಿನಿಧ್ಯವೇ ಸಿಗದೇ ಯುವ ಕಾರ್ಯಕರ್ತರು ನಿರಾಶೆಯಲ್ಲಿದ್ದರು.
ಆದರೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಆ ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕಿದೆ. ‘ಬಿಳಿ ತಲೆಗಳ’ ರಾಜಕಾರಣದಿಂದ ಆಚೆಗೆ ಬಂದು, ‘ಮರಿ ಸರ್ಕಾರ್’ ವಿಜಯಾನಂದ ಕಾಶಪ್ಪನವರ್ ಅವರಂತಹ ಯುವ, ಆಕ್ರಮಣಕಾರಿ ಹಾಗೂ ಜನಪ್ರಿಯ ನಾಯಕನಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಹಾಗೂ ಹುಮ್ಮಸ್ಸು ಮೂಡಿಸಿದೆ.
ಕಾಶಪ್ಪನವರ್ ಸಚಿವರಾಗುತ್ತಿದ್ದಂತೆ ಬಾಗಲಕೋಟೆ ಕಾಂಗ್ರೆಸ್ ಯುವ ಪಡೆಗೆ ಹೊಸ ಆನೆಬಲ ಬಂದಂತಾಗಿದೆ. ಆದರೆ ಈಗ ಅವರ ಮುಂದಿರುವ ನಿಜವಾದ ಸವಾಲು ಮತ್ತು ಕೌತುಕವೆಂದರೆ—“ತಮಗೆ ಸಿಕ್ಕಿರುವ ಈ ಸಚಿವ ಅಧಿಕಾರವನ್ನು ಬಳಸಿಕೊಂಡು, ಜಿಲ್ಲೆಯಾದ್ಯಂತ ಯುವಜನರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವಲ್ಲಿ ಮತ್ತು ಯುವ ಪಡೆಯನ್ನು ಸಂಘಟಿಸುವಲ್ಲಿ ಕಾಶಪ್ಪನವರ್ ಯಶಸ್ವಿಯಾಗುತ್ತಾರಾ?” ಎನ್ನುವುದು. ಈ ಯುವ ನಾಯಕತ್ವದ ಪ್ರಯೋಗ ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ.
ಅಗ್ರೆಸಿವ್ ಧೋರಣೆಯಿಂದ ಪ್ರಬುದ್ಧತೆಯತ್ತ: ರಾಜಕೀಯ ಭವಿಷ್ಯದ ಹೊಸ ಆಶಾಕಿರಣ
ಇತ್ತೀಚಿನ ದಿನಗಳಲ್ಲಿ ವಿಜಯಾನಂದ ಕಾಶಪ್ಪನವರ ನಡವಳಿಕೆಯಲ್ಲಿ ಎದ್ದು ಕಾಣುವ ಬದಲಾವಣೆಯೊಂದಾಗಿದೆ. ಹಿಂದೆ ಇದ್ದ ಅನಗತ್ಯ ಅಗ್ರೆಸಿವ್ ಮಾತುಗಳು, ಆವೇಶದ ತೀರ್ಮಾನಗಳನ್ನು ಕಡಿಮೆ ಮಾಡಿಕೊಂಡಿರುವ ಅವರು, ಹೆಚ್ಚು ಪ್ರಬುದ್ಧತನ (Maturity) ಹಾಗೂ ರಾಜಕೀಯ ದೂರದೃಷ್ಟಿಯಿಂದ ನಡೆದುಕೊಳ್ಳುತ್ತಿದ್ದಾರೆ.
ಈ ಬದಲಾವಣೆ ಅವರ ರಾಜಕೀಯ ಭವಿಷ್ಯಕ್ಕೆ ಅತ್ಯಂತ ಪೂರಕವಾಗಿದೆ:
- ತಂದೆಯ ಹ್ಯಾಟ್ರಿಕ್ ಗೆಲುವಿನ ಹಾದಿ: ಅವರ ತಂದೆ ಶಿವಶಂಕರಪ್ಪ ಕಾಶಪ್ಪನವರು ಹುನಗುಂದ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ದಾಖಲೆ ಬರೆದಿದ್ದರು. ವಿಜಯಾನಂದ ಅವರು ತಮ್ಮ ಆವೇಶವನ್ನು ಹತೋಟಿಯಲ್ಲಿಟ್ಟುಕೊಂಡು, ಆಡಳಿತಾತ್ಮಕ ಪ್ರಬುದ್ಧತೆ ಮೆರೆದರೆ ಕ್ಷೇತ್ರದಲ್ಲಿ ತಂದೆಯಂತೆಯೇ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಅಸಾಧ್ಯವೇನಲ್ಲ.
- ಜಿಲ್ಲಾ ಹಾಗೂ ರಾಜ್ಯಮಟ್ಟದ ನಾಯಕತ್ವ: ಆಕ್ರಮಣಕಾರಿ ಶೈಲಿಯನ್ನು ಅಭಿವೃದ್ಧಿ ಪರ ಚಿಂತನೆಗೆ ಹಾಗೂ ಜಾಣತನದ ರಾಜಕೀಯಕ್ಕೆ ಬಳಸಿಕೊಂಡರೆ, ಬಾಗಲಕೋಟೆ ಜಿಲ್ಲೆಯನ್ನೂ ಮೀರಿ ಇಡೀ ರಾಜ್ಯಮಟ್ಟದಲ್ಲಿ ಪ್ರಭಾವಿ ನಾಯಕರಾಗಿ ಬೆಳೆಯುವ ಎಲ್ಲ ಅರ್ಹತೆಗಳು ಇವರಿಗಿವೆ.
ಕುತಂತ್ರದ ಆಡಿಯೋ ಕಂಟಕಗಳನ್ನು ದಾಟಿ, ‘ರೌಡಿ ರಾಜಕಾರಣಿ’ ಎಂಬ ವಿರೋಧಿಗಳ ಅಪಪ್ರಚಾರದ ಮುಖಕ್ಕೆ ತಕ್ಕ ಉತ್ತರ ನೀಡಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಕಾಶಪ್ಪನವರ್ ಅವರಿಗೆ ಈಗ ದೊಡ್ಡ ಜವಾಬ್ದಾರಿ ಬಂದೊದಗಿದೆ. ಬಾಗಲಕೋಟೆಯಲ್ಲಿ ಬಿಳಿ ತಲೆಗಳ ರಾಜಕಾರಣದ ಬಳಿಕ ಸಿಕ್ಕ ಈ ಯುವ ನಾಯಕತ್ವದ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಹಾಗೂ ಜಿಲ್ಲೆಯ ಯುವ ಶಕ್ತಿಯನ್ನು ಹೇಗೆ ಸಂಘಟಿಸುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






