SWIFT City: ಒಂದು ಕಡೆ ಪ್ರಜಾಪ್ರಭುತ್ವದ ಪರಮೋಚ್ಚ ವೇದಿಕೆಗಳ ಮೇಲೆ ನಿಂತು “ಯುವಕರೇ, ಹಳ್ಳಿಗಳಿಗೆ ವಾಪಸ್ ಹೋಗಿ ಕೃಷಿ ಮಾಡಿ, ದೇಶದ ಬೆನ್ನೆಲುಬಾಗಿ” ಎಂದು ಗಂಟಲು ಹರಿಯುವಂತೆ ಭಾಷಣ ಬಿಗಿಯುವ ಅದೇ ಸರ್ಕಾರ, ಇನ್ನೊಂದೆಡೆ ಹಸಿರಾಗಿ ನಳನಳಿಸುತ್ತಿರುವ ಕೃಷಿ ಭೂಮಿಗೆ ಜೆಸಿಬಿ ನುಗ್ಗಿಸಿ ಅನ್ನದಾತನ ಒಡಲು ಸೀಳಲು ನಿಲ್ಲುತ್ತದೆ! ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರೈತರ ಆಕ್ರೋಶ, ಇವತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ದಂಗೆಯ ಸ್ವರೂಪವನ್ನು ಪಡೆದುಕೊಂಡಿದೆ.
ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿಯೇ ಸರ್ಜಾಪುರ ಭಾಗವನ್ನು ನಗರದ ಮೂರನೇ ಅತಿ ದೊಡ್ಡ ಕೈಗಾರಿಕಾ ಹಾಗೂ ತಂತ್ರಜ್ಞಾನ ಹಬ್ Startups, Workspaces, Innovation, Finance, and Technology ಸಿಟಿ (SWIFT City) ಮಾಡುತ್ತೇವೆ ಎಂಬ ಆಕರ್ಷಕ ಜಗಮಗಿಸುವ ಮುಖವಾಡದ ಹಿಂದೆ, KIADB ಮೂಲಕ ಸುಮಾರು 2,500 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಒತ್ತಾಯಪೂರ್ವಕವಾಗಿ ಕಸಿದುಕೊಳ್ಳಲು ಹೊರಟಿರುವ ಸರ್ಕಾರದ ನಡೆ, ಕೇವಲ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಅನ್ನದಾತನ ಬದುಕಿನ ಮೇಲೆ ಎಸಗುತ್ತಿರುವ ಸಾಂಸ್ಥಿಕ ದೌರ್ಜನ್ಯದಂತೆ ಕಾಣುತ್ತಿದೆ.
‘ಬರಡಲ್ಲ ಬುರುಡೆ’: ನ್ಯಾಯಾಲಯಕ್ಕೆ ಸಲ್ಲಿಸಿದ ಸುಳ್ಳು ದಾಖಲೆಗಳ ಮುಖವಾಡ!
ಈ ಇಡೀ ಹಗರಣದ ಅತ್ಯಂತ ನಾಚಿಕೆಗೇಡಿನ ಮತ್ತು ಲಜ್ಜೆಗೆಟ್ಟ ನಡೆ ಎಂದರೆ, ಸರ್ಕಾರದ ಪರ ವಕೀಲರು ಮತ್ತು ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ “ಬುರುಡೆ” ವರದಿ! ಈ ಜಮೀನುಗಳನ್ನು “ಬರಡು ಭೂಮಿ (Dry Land), ಇಲ್ಲಿ ರೈತರು ಏನನ್ನೂ ಬೆಳೆಯುತ್ತಿಲ್ಲ” ಎಂದು ಬಿಂಬಿಸಿ ಕೋರ್ಟ್ ದಾರಿ ತಪ್ಪಿಸಲಾಗಿದೆ. ಆದರೆ, ಮೈದಾನದ ರಿಯಾಲಿಟಿ ಚೆಕ್ ಮಾಡಿದರೆ ಆಡಳಿತ ವ್ಯವಸ್ಥೆಯ ಹಸಿ ಹಸಿ ಸುಳ್ಳುಗಳು ಬೆತ್ತಲಾಗುತ್ತವೆ. ಬಿರು ಬೇಸಿಗೆಯಲ್ಲೂ ಇಲ್ಲಿನ ಬಿ. ಹೊಸಳ್ಳಿ, ಹಂದೇನಹಳ್ಳಿ ಮತ್ತು ಮುತ್ತಾನಲ್ಲೂರು ಭಾಗದ ಮಣ್ಣಿನಲ್ಲಿ ಬಂಗಾರದಂತಹ ಬೆಳೆಗಳು ನಳನಳಿಸುತ್ತಿವೆ.
ಇದನ್ನೂ ಓದಿ: D.K. Shivakumar: ಡಿಕೆಶಿ ಕನಸು ಭಗ್ನ! ಟ್ರಬಲ್ ಶೂಟರ್ ಸಿಎಂ ಆಗೋದೇ ಡೌಟ್?
ನಿಖರವಾದ ಆರ್ಥಿಕ ಹಾಗೂ ಕೃಷಿ ಅಂಕಿ-ಅಂಶಗಳು ಇಲ್ಲಿವೆ:
- ಬಿ. ಹೊಸಳ್ಳಿ ಗ್ರಾಮವೊಂದರಿಂದಲೇ ಪ್ರತಿದಿನ ಸಾಧಾರಣ 100 ಟನ್ ಅತ್ಯುನ್ನತ ಗುಣಮಟ್ಟದ ತರಕಾರಿ (ಹಾಗಲಕಾಯಿ, ಹೀರೆಕಾಯಿ, ಟೊಮೋಟೊ, ಬೀನ್ಸ್, ಕ್ಯಾರೆಟ್, ಬೀಟ್ರೂಟ್ ಮತ್ತು ವಿವಿಧ ಸೊಪ್ಪುಗಳು) ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಹಾಗೂ ನೆರೆಯ ತಮಿಳುನಾಡು, ಕೇರಳದ ಮಾರುಕಟ್ಟೆಗಳಿಗೆ ರಫ್ತಾಗುತ್ತಿದೆ.
- ಜಾಗತಿಕ ಮಟ್ಟದಲ್ಲಿ ವ್ಯಾಲೆಂಟೈನ್ಸ್ ಡೇಗೆ ರಫ್ತಾಗುವ ಅರ್ಧದಷ್ಟು ಪ್ರೀಮಿಯಂ ರೋಸ್ (ಗುಲಾಬಿ) ಹೋಗುವುದು ಇದೇ ಆನೇಕಲ್‌ನ ಹಂದೇನಹಳ್ಳಿಯ ಹೈಟೆಕ್ ಪಾಲಿಹೌಸ್‌ಗಳಿಂದ!
- ಇಲ್ಲಿನ ಒಂದೊಂದು ಹೈಟೆಕ್ ಪಾಲಿಹೌಸ್ ನಿರ್ಮಿಸಲು ರೈತರು ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಶ್ರಮ ಹಾಕಿ ವರ್ಷಕ್ಕೆ 15ರಿಂದ 20 ಲಕ್ಷ ರೂಪಾಯಿಗಳಷ್ಟು ನಿವ್ವಳ ಆದಾಯವನ್ನು ಗಳಿಸುತ್ತಿದ್ದಾರೆ.
ವರ್ಷದ 365 ದಿನವೂ ರಜೆಯಿಲ್ಲದೆ ದುಡಿಯುವ ಅನ್ನದಾತನ ಈ ಸಮೃದ್ಧ ಸಾಮ್ರಾಜ್ಯವನ್ನು “ಬರಡು ಭೂಮಿ” ಎಂದು ಕಾಗದದ ಮೇಲೆ ಬರೆದ ಅಧಿಕಾರಿಗಳ ನಾಲಗೆಗೆ ಹುಳ ಬಿಡಬೇಕಲ್ಲವೇ? ಎಸಿ ರೂಮಿನಲ್ಲಿ ಕುಳಿತು, ಡ್ರೋನ್ ಹಾರಿಸಿ, ಹೆಲಿಕಾಪ್ಟರ್‌ನಲ್ಲಿ ಸುತ್ತಿ ‘ಬರಡು’ ಎಂದು ಕರೆದ ಅಧಿಕಾರಿಗಳ ಕಣ್ಣಿಗೆ ಪೊರೆ ಬಂದಿದೆಯೇ ಅಥವಾ ರಿಯಲ್ ಎಸ್ಟೇಟ್ ದಂಧೆಯ ಕೋಟಿ ಕೋಟಿ ಕಮಿಷನ್ ನೋಟಿನ ಕಂತೆಗಳು ಅವರ ಕಣ್ಣನ್ನು ಕುರುಡು ಮಾಡಿದೆಯೇ ಎಂಬ ಕಟು ಪ್ರಶ್ನೆ ಉದ್ಭವಿಸುತ್ತದೆ.
ಶೇ. 73 ರಷ್ಟು ಭೂಮಿ ಖಾಲಿ: ಇದು ಲ್ಯಾಂಡ್ ಬ್ಯಾಂಕ್ ಹೆಸರಿನ ರಿಯಲ್ ಎಸ್ಟೇಟ್ ಮಾಫಿಯಾ!
ಸರ್ಕಾರ ಹೇಳುವ “ಕೈಗಾರಿಕೀಕರಣ ಮತ್ತು ಉದ್ಯೋಗ ಸೃಷ್ಟಿ”ಯ ವಾದ ಎಷ್ಟು ಟೊಳ್ಳು ಎಂಬುದಕ್ಕೆ ಸ್ವತಃ ವಿಧಾನಸಭೆಯ ಅಧಿಕೃತ ದಾಖಲೆಗಳೇ ಸಾಕ್ಷಿ ನುಡಿಯುತ್ತವೆ. ಕೆಐಎಡಿಬಿ ಇದುವರೆಗೆ ರಾಜ್ಯಾದ್ಯಂತ ಒಟ್ಟು 1,55,000ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ, ಅದರಲ್ಲಿ ಕೈಗಾರಿಕೆಗಳಿಗೆ ಹಂಚಿಕೆಯಾಗಿ ಅಭಿವೃದ್ಧಿಗೊಂಡಿರುವುದು ಕೇವಲ 41,000 ಎಕರೆ ಮಾತ್ರ (ಅಂದರೆ ಬರೀ ಶೇ. 27)! ಇನ್ನುಳಿದ ಶೇ. 73 ರಷ್ಟು (ಅಂದರೆ ಸುಮಾರು 1,14,000 ಎಕರೆ) ಭೂಮಿ ಅಭಿವೃದ್ಧಿಯಾಗದೆ, ಹಂಚಿಕೆಯಾಗದೆ ಕೇವಲ ‘ಲ್ಯಾಂಡ್ ಬ್ಯಾಂಕ್’ ಹೆಸರಿನಲ್ಲಿ ಬಿದ್ದಿದೆ.
ಆನೇಕಲ್ ವ್ಯಾಪ್ತಿಯಲ್ಲೇ ಈ ಹಿಂದೆ ಸೂರ್ಯ ಸಿಟಿ, ಚಂದಾಪುರ, ಆಹನಹಳ್ಳಿ ಹಾಗೂ ಇಂಗಳವಾಡಿಯಲ್ಲಿ ಸಾವಿರಾರು ಎಕರೆ ಜಮೀನನ್ನು ಕೆಐಎಡಿಬಿ ಕಿತ್ತುಕೊಂಡಿದೆ. ಅದರಲ್ಲಿ ಶೇ. 10ರಷ್ಟು ಭಾಗವೂ ಇಂದಿಗೂ ಭರ್ತಿಯಾಗಿಲ್ಲ, ಕೈಗಾರಿಕೆಗಳೂ ಬಂದಿಲ್ಲ. ಪರಿಸ್ಥಿತಿ ಹೀಗಿರುವಾಗ, ಮತ್ತೆ 2,500 ಎಕರೆ ಹಸಿರು ಭೂಮಿಗೆ ಕೈಹಾಕುತ್ತಿರುವುದರ ಹಿಂದಿರುವ ಅಸಲಿ ಉದ್ದೇಶ ಕೈಗಾರಿಕೆಯಲ್ಲ, ಬದಲಿಗೆ ರಿಯಲ್ ಎಸ್ಟೇಟ್ ದಂಧೆ! ರೈತರಿಂದ 2-3 ಕೋಟಿ ಬಿಡಿಗಾಸು ಪರಿಹಾರ ನೀಡಿ ಕಿತ್ತುಕೊಳ್ಳುವ ಭೂಮಿಯನ್ನು, ಆನಂತರ ಅದಾನಿ, ಅಂಬಾನಿ ಅಥವಾ ಹೊರರಾಜ್ಯದ ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ ಚದರ ಅಡಿಗೆ ಸಾವಿರಾರು ರೂಪಾಯಿಗಳಂತೆ ಮಾರಿ ಕೋಟಿ ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುವ ರಾಜಕೀಯ ದಲ್ಲಾಳಿ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ.
ಇದನ್ನೂ ಓದಿ: Vinay Vs Joshi: ‘ಸೇಡಿನ’ ರಾಜಕಾರಣದ ಅನಾವರಣ; ಕುಲಕರ್ಣಿ ಮುಗಿಸಲು ನಡೆದ ‘ಸಿಸ್ಟಮ್ಯಾಟಿಕ್’ ಗೇಮ್ ಪ್ಲಾನ್?
ಕೃಷಿ ಕೊಲ್ಲುವ ವ್ಯವಸ್ಥಿತ ಮಾಫಿಯಾ ಮತ್ತು ಕೆರೆಗಳ ಮಾರಣಹೋಮ
ಭೂಮಿ ಕಬಳಿಸಲು ಈ ಮಾಫಿಯಾ ಅತ್ಯಂತ ಕ್ರೂರಾತಿಕ್ರೂರವಾದ ಹಂತಗಳನ್ನು ಬಳಸುತ್ತದೆ. ಮೊದಲಿಗೆ ಕೃಷಿ ಜಮೀನುಗಳ ಸುತ್ತಮುತ್ತಲಿರುವ ಕೆರೆಗಳಿಗೆ ಅಪಾರ್ಟ್‌ಮೆಂಟ್ ಹಾಗೂ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯವನ್ನು ಹರಿಸಲಾಗುತ್ತದೆ. ಆನೇಕಲ್ ಭಾಗದ ಕೆರೆಗಳು ನೊರೆ ಉಕ್ಕಿ ಕಲುಷಿತಗೊಳ್ಳುತ್ತಿರುವುದು ಇದಕ್ಕೇ. ಈ ಕಲುಷಿತ ನೀರು ಅಂತರ್ಜಲ ಸೇರಿ ರೈತರ ಬೆಳೆಗಳು ರೋಗಬಾಧೆಯಿಂದ ಒಣಗುವಂತೆ ಮಾಡಲಾಗುತ್ತದೆ. ರೈತ ಕೃಷಿ ಮಾಡಲು ಸಾಧ್ಯವಾಗದೆ ಕಂಗೆಟ್ಟಾಗ, “ನೋಡಿ, ಇಲ್ಲಿ ಕೃಷಿ ಸಾಧ್ಯವಿಲ್ಲ” ಎಂದು ಬಿಂಬಿಸಿ ಕಾನೂನಿನ ಅಡಿಯಲ್ಲಿ ಜಮೀನನ್ನು ಕಬಳಿಸಲಾಗುತ್ತದೆ. ತಾನು ಆರಿಸಿ ಕಳಿಸಿದ ಸರ್ಕಾರವೇ ತನ್ನದೇ ಜನರ ಮೇಲೆ ಇಂತಹ ವ್ಯವಸ್ಥಿತ ‘ಪರಿಸರ ಭಯೋತ್ಪಾದನೆ’ ನಡೆಸುತ್ತಿರುವುದು ಕರುನಾಡಿನ ದುರಂತ.
ಬಸವಣ್ಣನ ಹೆಸರಿನ ಜಪ ಮತ್ತು ನೈತಿಕತೆಯ ಪತನ
ಪ್ರಸ್ತುತ ಸರ್ಕಾರದ ಮುಖಂಡರು ತಾವೇನು ಬಸವಣ್ಣನ ನಿಜವಾದ ಅನುಯಾಯಿಗಳು ಎಂದು ಎದೆತಟ್ಟಿಕೊಳ್ಳುತ್ತಾರೆ. ಆದರೆ ಜಗದ ಜ್ಯೋತಿ ಬಸವಣ್ಣನವರು “ಕಾಯಕವೇ ಕೈಲಾಸ” ಎಂದಿದ್ದರು, “ರೈತನ ಕಾಲಿಗೆ ಬಿದ್ದು ನಮಸ್ಕರಿಸಿದಾಗ ಮಾತ್ರ ದೇಶ ಉದ್ಧಾರವಾಗುತ್ತದೆ” ಎಂದಿದ್ದರು. ಇವತ್ತು ಅನ್ನ ಕೊಡುವ ರೈತನಿಗೆ ನೋಟಿಸ್ ಕೊಟ್ಟು, ಅವನ ಕಾಯಕ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ದಾರೆ ಎರೆಯುತ್ತಿರುವುದು ಯಾವ ಸೀಮೆಯ ಬಸವ ತತ್ವ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ನೋವಿಗೆ ಸ್ಪಂದಿಸುವ ಬದಲು, “ಜಾಸ್ತಿ ಮಾತನಾಡಬೇಡಿ, ಹೋರಾಟ ನಡೆಸಬೇಡಿ” ಎಂದು ಬಿಡದಿಯಲ್ಲಿ ದಬಾಯಿಸುವುದು ಪ್ರಜಾಪ್ರಭುತ್ವದ ಅಣಕ. ರಾಜಕಾರಣಿಗಳ ನೂರಾರು ಎಕರೆ ವೈಯಕ್ತಿಕ ಆಸ್ತಿಯನ್ನು ದೇಶದ ಅಭಿವೃದ್ಧಿಗೆ ಬಿಟ್ಟುಕೊಡದ ಇವರು, ರೈತನ ಅರ್ಧ ಎಕರೆ, ಒಂದು ಎಕರೆ ಜೀವನಾಧಾರದ ಜಮೀನಿನ ಮೇಲೆ ಕಣ್ಣಿಟ್ಟಿರುವುದು ಅತ್ಯಂತ ಶೋಚನೀಯ.
ಉದ್ಯೋಗ ಸೃಷ್ಟಿಯ ಕಾಗೆ ಹಾರಾಟ vs ಕೃಷಿಯ ಅಸಲಿ ಉದ್ಯಮ
ಮಂತ್ರಿಗಳಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲರು “18,000 ಕೋಟಿ ಬಂಡವಾಳ ತರುತ್ತೇವೆ, ಉದ್ಯೋಗ ನೀಡುತ್ತೇವೆ” ಎಂದು ಪೋಸ್ಟ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಇವರು ತರುವ ಕಾರ್ಖಾನೆಗಳಲ್ಲಿ ನಮ್ಮ ಕರುನಾಡಿನ ಯುವಕರಿಗೆ ಸಿಗುತ್ತಿರುವುದು ಕೇವಲ ಸೆಕ್ಯೂರಿಟಿ ಗಾರ್ಡ್ ಅಥವಾ ಜವಾನ ಹುದ್ದೆಗಳು!
ಅದೇ ಕೃಷಿಯ ಅಸಲಿ ಉದ್ಯಮವನ್ನು ನೋಡಿ. ಕೇವಲ ಒಂದು ಹಂದೇನಹಳ್ಳಿ ಗ್ರಾಮದ ಪಾಲಿಹೌಸ್‌ಗಳಲ್ಲೇ ಪ್ರತಿದಿನ 2,000ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರಿಗೆ ನೇರ ಉದ್ಯೋಗ ಸಿಗುತ್ತಿದೆ. ಬಿ. ಹೊಸಳ್ಳಿ ಗ್ರಾಮದಲ್ಲಿ ಪ್ರತಿದಿನ 500 ರಿಂದ 600 ಜನ ದಿನಗೂಲಿ ಪಡೆಯುತ್ತಿದ್ದಾರೆ. ರೈತನೇ ಇಲ್ಲಿ ಉದ್ಯೋಗದಾತ, ಅವನೇ ಈ ಮಣ್ಣಿನ ಮೂಲ ಉದ್ಯಮಿ. ಪ್ರಧಾನಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡುತ್ತಾರೆ. ಆದರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ರೈತನನ್ನು ಇವತ್ತು ಭಿಕ್ಷುಕನನ್ನಾಗಿ ಮಾಡಲು ಸರ್ಕಾರ ಹೊರಟಿದೆ.
ಇದನ್ನೂ ಓದಿ: Revanasiddeshwara: ಕುರುಬರ ಕುಲಗುರು ರೇವಣಸಿದ್ದರನ್ನೇ ಕದ್ದರೇ ವೀರಶೈವರು? ಸಾಂಸ್ಕೃತಿಕ ಹೈಜಾಕ್‌ನ ಅಸಲಿ ಆಟ ಇಲ್ಲಿದೆ!
ಅನ್ನದಾತನ ಸ್ವಾಭಿಮಾನದ ರಣಕಹಳೆ: ಪ್ರಾಣ ಕೊಟ್ಟೇವು, ಮಣ್ಣು ಬಿಡೆವು!
“ನಮ್ಮ ವೋಟಿನಿಂದ ಗೆದ್ದು ಕುಳಿತ ಶಾಸಕರು ನಮ್ಮ ಬಟ್ಟೆಯ ಮೇಲೆ, ಜೀನ್ಸ್ ಪ್ಯಾಂಟ್ ಮೇಲೆ ಕಾಮೆಂಟ್ ಮಾಡುತ್ತಾರೆ. ರೈತರು ಐಷಾರಾಮಿ ಕಾರು ಹೊಂದಿರಬಾರದು, ಜೀನ್ಸ್ ಹಾಕಬಾರದು ಎಂಬುದು ಇವರ ಆಲೋಚನೆಯೇ?” ಎಂದು ಸ್ಥಳೀಯ ಮಹಿಳೆಯರು ಮತ್ತು ಯುವಕರು ಆಡಳಿತ ಪಕ್ಷದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರಭಾವದ ಆಸ್ತಿಗಳು ಅಥವಾ ಇನ್ಫೋಸಿಸ್‌ನ 400 ಎಕರೆ, ವಿಪ್ರೋ ಸಂಸ್ಥೆಯ ಜಮೀನುಗಳ ಭೂಸ್ವಾಧೀನಕ್ಕೆ ಕೈಹಾಕದ ಈ ಸರ್ಕಾರಕ್ಕೆ, ಕೇವಲ ಬಡ ರೈತರ ಒಡಲು ಸೀಳುವಾಗ ಮಾತ್ರ ಶೌರ್ಯ ಬರುತ್ತದೆ!
ರಾಹುಲ್ ಗಾಂಧಿಯವರು ದೇಶದಲ್ಲಿ ಪಾದಯಾತ್ರೆ ಮಾಡುತ್ತಾರೆ, ಆದರೆ ತಮ್ಮದೇ ಹಕ್ಕಿಗಾಗಿ ರೈತರು ಬೀದಿಗೆ ಬಂದರೆ ಪೊಲೀಸರನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಲಾಗುತ್ತದೆ, ಪ್ರತಿಭಟನಾ ನಿರತ ಮಹಿಳೆಯರನ್ನು ಬಾಯಿಬಜಾರಿಗಳು ಎಂದು ನಿಂದಿಸಲಾಗುತ್ತದೆ. ಎರಡು ತಿಂಗಳಿನಿಂದ ನಿರಂತರವಾಗಿ ಬೀದಿಯಲ್ಲಿ ಕುಳಿತಿರುವ ರೈತ ಸಮುದಾಯ ಇವತ್ತು ನೇರ ಎಚ್ಚರಿಕೆ ನೀಡಿದೆ:
ʻʻಬಲವಂತದ ಭೂಸ್ವಾಧೀನ ಎಂದರೆ ಅದು ಭೂತಾಯಿಯ ಮೇಲಿನ ಅತ್ಯಾಚಾರ! ನಮಗೆ ನಿಮ್ಮ ಮೂರು ಕಾಸಿನ ಭಿಕ್ಷೆ ಬೇಡ. ನಮಗೆ ಸತ್ತ ಮೇಲೆ ಹೂಳಲು ನಮ್ಮದೇ ಆದ ಮಣ್ಣು ಬೇಕು. ನಿಮ್ಮ ಬೆದರಿಕೆ, ದಬ್ಬಾಳಿಕೆಗೆ ಹೆದರಲು ನಾವು ದಡ್ಡರಲ್ಲ. ಜೆಸಿಬಿ ತಂದರೆ ಇಲ್ಲ ಅವರು ಸಾಯಬೇಕು, ಇಲ್ಲ ನಾವು ಸಾಯಬೇಕು!”
ಹಸಿರಿಲ್ಲದೆ ಉಸಿರಿಲ್ಲ
ಮುಖ್ಯಮಂತ್ರಿಗಳೇ, ನೀವು ಬಸವಣ್ಣನ ಅನುಯಾಯಿ ಎಂದು ಹೇಳಿಕೊಳ್ಳುತ್ತೀರಲ್ಲವೇ? “ಕಾಯಕವೇ ಕೈಲಾಸ” ಎಂದ ಬಸವ ತತ್ವವನ್ನು ನಂಬಿದ್ದರೆ ತಕ್ಷಣವೇ ಈ ವಿನಾಶಕಾರಿ ಸ್ವಿಫ್ಟ್ ಸಿಟಿ ಯೋಜನೆಯನ್ನು ಡಿನೋಟಿಫೈ ಮಾಡಿ. ಅಭಿವೃದ್ಧಿ ಎಂದರೆ ಕೇವಲ ಕಾಂಕ್ರೀಟ್ ಕಾಡು ನಿರ್ಮಿಸುವುದಲ್ಲ, ‘ಸಸ್ಟೈನಬಲ್ ಡೆವಲಪ್ಮೆಂಟ್’ ಎಂದರೆ ಹಸಿರು ಇರಬೇಕು, ಜನರ ಉಸಿರು ಇರಬೇಕು. ಬಂಗಾರದಂತಹ ಬೆಳೆ ಬೆಳೆಯುವ ಆನೇಕಲ್ ತಾಲೂಕನ್ನು ನಾಶಮಾಡಿ ಬಿಲ್ಡಿಂಗ್ ಕಟ್ಟಿದರೆ, ಮುಂದಿನ ಪೀಳಿಗೆ ಹಣವನ್ನೋ ಅಥವಾ ಕಾಂಕ್ರೀಟ್ ಅನ್ನೋ ತಿಂದು ಬದುಕಲು ಸಾಧ್ಯವಿಲ್ಲ. ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡು ಸರ್ಕಾರ ಈ ಕರಾಳ ಆದೇಶವನ್ನು ಹಿಂಪಡೆಯದಿದ್ದರೆ, ಅನ್ನದಾತನ ಉದರಾಗ್ನಿಯು ಈ ಇಡೀ ರಾಜಕೀಯ ವ್ಯವಸ್ಥೆಯನ್ನು ಸುಟ್ಟು ಬೂದಿ ಮಾಡುವುದು ನಿಶ್ಚಿತ! ಇದು ಬರೀ ಪ್ರತಿಭಟನೆಯಲ್ಲ, ಇದು ಅನ್ನದಾತನ ಅಸ್ತಿತ್ವದ ಮಹಾ ದಂಗೆ!

