Friday, September 11, 2026
Home ರಾಜ್ಯ State politics: ಸಿದ್ದರಾಮಯ್ಯ ಸೈದ್ಧಾಂತಿಕ ದೀಕ್ಷೆ, ಡಿಕೆಶಿಗೆ ಆಡಳಿತದ ಹೆಗಲು! ‘ಸಂಗಾತಿ’ಗೆ ಸಿಎಂ ಸಿದ್ದು ಕೊಟ್ಟ...

State politics: ಸಿದ್ದರಾಮಯ್ಯ ಸೈದ್ಧಾಂತಿಕ ದೀಕ್ಷೆ, ಡಿಕೆಶಿಗೆ ಆಡಳಿತದ ಹೆಗಲು! ‘ಸಂಗಾತಿ’ಗೆ ಸಿಎಂ ಸಿದ್ದು ಕೊಟ್ಟ ಸಂದೇಶವೇನು?

State politics: ಸಿದ್ದರಾಮಯ್ಯ ಸೈದ್ಧಾಂತಿಕ ದೀಕ್ಷೆ, ಡಿಕೆಶಿಗೆ ಆಡಳಿತದ ಹೆಗಲು! 'ಸಂಗಾತಿ'ಗೆ ಸಿಎಂ ಸಿದ್ದು ಕೊಟ್ಟ ಸಂದೇಶವೇನು?

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (State politics) ಬಹುದೊಡ್ಡ ತಿರುವು ಸಿಕ್ಕಂತಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾಗಿ ಆಯ್ಕೆಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಹಾಗೂ ಸೈದ್ಧಾಂತಿಕ ಮೌಲ್ಯಗಳುಳ್ಳ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಪೋಸ್ಟ್ ಕೇವಲ ಶುಭಾಶಯಕ್ಕೆ ಸೀಮಿತವಾಗಿರದೆ, ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಮುಂದಿನ ದಿನಗಳಲ್ಲಿ ಡಿಕೆಶಿ ಹೆಗಲಿಗೆ ವಹಿಸಿಕೊಡುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದೆ.

‘ಅಭಿವೃದ್ಧಿಯ ಬಂಡಿ ಎಳೆದೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ’: ಸಿದ್ದರಾಮಯ್ಯ ಹಾರೈಕೆ

State politics: ತಮ್ಮ ಪೋಸ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು “ಸಂಗಾತಿ” ಮತ್ತು “ಪ್ರಿಯ ಶಿವಕುಮಾರ್” ಎಂದು ಅತ್ಯಂತ ಆತ್ಮೀಯವಾಗಿ ಸಂಬೋಧಿಸಿರುವ ಸಿದ್ದರಾಮಯ್ಯ, “ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ,” ಎಂದು ಆಶಿಸಿದ್ದಾರೆ.

ಎಂಟು ವರ್ಷಗಳ ಸೇವೆಯ ಹೆಮ್ಮೆ:

“ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ಧತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು,” ಎಂದು ಬರೆಯುವ ಮೂಲಕ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ಬಹುತೇಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: AHINDA ದ್ರೋಹಿಗಳಿಗೆ ಸಂಘಟನೆಯಿಂದಲೇ ಗೇಟ್ ಪಾಸ್! ಸ್ವಾರ್ಥಕ್ಕಾಗಿ ಸಾರಥಿಯನ್ನೇ ಬಲಿ ಕೊಟ್ಟ ಸತೀಶ್ ಜಾರಕಿಹೊಳಿ ತಾವೇ ತೋಡಿದ ಹಳ್ಳಕ್ಕೆ ಬಿದ್ರಾ?

ಸೈದ್ಧಾಂತಿಕ ಹೋರಾಟ ಮತ್ತು ದೇಶದ ಸ್ಥಿತಿಗತಿಯ ಆತಂಕ

ಮುಖ್ಯಮಂತ್ರಿಯವರ ಈ ಪೋಸ್ಟ್ ಕೇವಲ ರಾಜ್ಯ ರಾಜಕಾರಣಕ್ಕೆ (State politics) ಸೀಮಿತವಾಗಿರದೆ, ರಾಷ್ಟ್ರೀಯ ಮಟ್ಟದ ಸವಾಲುಗಳು ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಗಂಭೀರ ಬೆಳಕು ಚೆಲ್ಲಿದೆ:

  • ಚುನಾವಣಾ ಸೋಲಿಗಿಂತ ಸೈದ್ಧಾಂತಿಕ ಸೋಲು ಅಪಾಯಕಾರಿ: “ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ,” ಎಂದು ಎಚ್ಚರಿಸಿದ್ದಾರೆ.
  • ಕರ್ನಾಟಕವೇ ದೇಶಕ್ಕೆ ಮಾದರಿ: ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿ ದೇಶಕ್ಕೆ ಮಾದರಿಯಾಗಿದ್ದು, ನಮ್ಮ ಯೋಜನೆಗಳನ್ನು ಉಳಿದ ರಾಜ್ಯಗಳು ಅನುಷ್ಠಾನಕ್ಕೆ ತರುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
  • ಎರಡನೇ ಸ್ವಾತಂತ್ರ್ಯ ಹೋರಾಟದ ಕರೆ: ದೇಶದಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ಸೌಹಾರ್ದತೆಯನ್ನು ಒಡೆಯಲಾಗುತ್ತಿದೆ, ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ ಮತ್ತು ಗಾಂಧಿಯವರನ್ನು ಕೊಂದವರು ಗೋಡ್ಸೆಯನ್ನು ಮೆರೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಉಳಿಸಲು “ಎರಡನೇ ಸ್ವಾತಂತ್ರ್ಯ ಹೋರಾಟ” ನಡೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಹಾಗೂ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಗಿರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: Siddaramaiah vs Satish: ಗುರುವಿಗೆ ಗುನ್ನಾ! ಹಣದ ‘ಹೊಳೆ’ ಹರಿಸಿದ್ರೆ ಅಹಿಂದ ವರ್ಗ ‘ಜಾರಿ’ ಬರಲ್ಲ; ಸಿದ್ದು ಬೆನ್ನಿಗೆ ಚೂರಿ ಹಾಕಿದ್ರಾ ಸತೀಶ್?

ಸಿದ್ದರಾಮಯ್ಯ ಅವರ ಈ ಪೋಸ್ಟ್ ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಹುಕಾಲದಿಂದ ಚರ್ಚೆಯಲ್ಲಿದ್ದ ಅಧಿಕಾರ ಹಂಚಿಕೆಯ ಸೂತ್ರ ಅಧಿಕೃತವಾಗಿ ಜಾರಿಯಾಗುತ್ತಿರುವುದನ್ನು ಸೂಚಿಸುತ್ತಿದೆ. ತಾವೇ ಖುದ್ದಾಗಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸುತ್ತಾ, ಮುಂದಿನ ಆಡಳಿತದ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಹೆಗಲಿಗೆ ಹೊರಿಸುತ್ತಿರುವುದು ಉಭಯ ನಾಯಕರ ನಡುವಿನ ಪರಸ್ಪರ ಒಪ್ಪಂದ ಮತ್ತು ಹೈಕಮಾಂಡ್ ತೀರ್ಮಾನಕ್ಕೆ ಸಿಕ್ಕ ಗೌರವದಂತೆ ಕಾಣುತ್ತಿದೆ. ದೇಶ ಮತ್ತು ಪಕ್ಷ ಎದುರಿಸುತ್ತಿರುವ ಅಗ್ನಿದಿವ್ಯಗಳ ಮಧ್ಯೆ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಸಿದ್ದರಾಮಯ್ಯ ಅವರು ನೀಡಿರುವ ಈ ಬೆಂಬಲ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...