Homeವಿಶ್ಲೇಷಣೆAHINDA ದ್ರೋಹಿಗಳಿಗೆ ಸಂಘಟನೆಯಿಂದಲೇ ಗೇಟ್ ಪಾಸ್! ಸ್ವಾರ್ಥಕ್ಕಾಗಿ ಸಾರಥಿಯನ್ನೇ ಬಲಿ ಕೊಟ್ಟ ಸತೀಶ್ ಜಾರಕಿಹೊಳಿ ತಾವೇ...

AHINDA ದ್ರೋಹಿಗಳಿಗೆ ಸಂಘಟನೆಯಿಂದಲೇ ಗೇಟ್ ಪಾಸ್! ಸ್ವಾರ್ಥಕ್ಕಾಗಿ ಸಾರಥಿಯನ್ನೇ ಬಲಿ ಕೊಟ್ಟ ಸತೀಶ್ ಜಾರಕಿಹೊಳಿ ತಾವೇ ತೋಡಿದ ಹಳ್ಳಕ್ಕೆ ಬಿದ್ರಾ?

ರಾಜ್ಯದ ‘ಅಹಿಂದ’ (AHINDA) ನಾಯಕ ಎಂದ ತಕ್ಷಣ ಜನಮಾನಸದಲ್ಲಿ ಕಣ್ಣಮುಂದೆ ಬರುವ ಏಕೈಕ ಮುಖ ಸಿದ್ದರಾಮಯ್ಯ (Siddaramaiah). ಅಂತಹ ಧೀಮಂತ ನಾಯಕನಿಗೆ ಸ್ವತಃ ಅಹಿಂದ ಒಡಲಲ್ಲೇ ಬೆಳೆದ ಆಪ್ತ ನಾಯಕರೊಬ್ಬರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳುವುದು ಯಾರಿಗೂ ಸಾಧ್ಯವಾಗುತ್ತಿಲ್ಲ; ಆದರೆ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಈ ಅನಿವಾರ್ಯ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಸ್ಥಿತಿ ತಂದಿಟ್ಟಿವೆ.

ಮೂಲಗಳ ಪ್ರಕಾರ, ಈ ನಂಬಿಕೆ ದ್ರೋಹದ ಸುದ್ದಿ ಸ್ವತಃ ಸಿದ್ದರಾಮಯ್ಯ ಅವರಿಗೇ ಅತಿದೊಡ್ಡ ಆಘಾತ ನೀಡಿದೆ. ದೆಹಲಿಯ ಹೈವೋಲ್ಟೇಜ್‌ ಮೀಟಿಂಗ್ ಮುಗಿಸಿ ಬಂದ ನಂತರ ಮತ್ತು ರಾಜೀನಾಮೆ ನೀಡುವ ಮುನ್ನಾದಿನ ಸಿದ್ದರಾಮಯ್ಯ ಅವರು ಇದ್ದಕ್ಕಿದ್ದಂತೆ ನಿಗೂಢ ಮೌನಕ್ಕೆ ಶರಣಾಗಿದ್ದರ ಹಿಂದೆ ಇದೇ ಕರಾಳ ಸತ್ಯವಿತ್ತು. ಹೈಕಮಾಂಡ್ ತಮಗೆ ರಾಜೀನಾಮೆ ನೀಡಲು ಸೂಚಿಸಿತು ಎಂಬುದು ಅವರಿಗೆ ದೊಡ್ಡ ವಿಷಯವಾಗಿರಲಿಲ್ಲ. ಆದರೆ, ತಾವು ಇಷ್ಟು ದಿನ ನಂಬಿ ಅಪ್ಪಿಕೊಂಡಿದ್ದ ಸ್ವಂತ ಆಪ್ತರೇ ತಮಗೆ ಈ ಸ್ಥಿತಿ ತರಲು ಹಿನ್ನೆಲೆಯಲ್ಲಿ ನಿಂತು ತಂತ್ರ ಹೂಡಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ ರಾಜಕೀಯ ಜೀವಕ್ಕೆ ತಗುಲಿದ ಅತ್ಯಂತ ಆಳವಾದ ಗಾಯವಾಗಿತ್ತು. ಆ ತೀವ್ರ ಆಘಾತವೇ ಅವರನ್ನು ಮೌನವಾಗಿಸಿತ್ತು.

ಈ ನಂಬಿಕೆ ದ್ರೋಹದ ಕಥೆಗಳು ಸಾಮಾಜಿಕ ಮಾಧ್ಯಮಗಳು, ಪ್ರಮುಖ ಸುದ್ದಿ ವಾಹಿನಿಗಳು ಹಾಗೂ ವೆಬ್‌ಸೈಟ್‌ಗಳಲ್ಲಿ ಸಾಕ್ಷ್ಯಸಮೇತ ಬಿತ್ತರಗೊಳ್ಳುತ್ತಿದ್ದಂತೆ ಇತ್ತ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶದ ಜ್ವಾಲೆ ಎದ್ದಿದೆ. ಇದು ತಮ್ಮ ನಾಯಕನಿಗೆ ರಾಜಕೀಯವಾಗಿ ಸರಿಪಡಿಸಲಾಗದ ದೊಡ್ಡ ಮಟ್ಟದ ಹೊಡೆತ (ಡ್ಯಾಮೇಜ್) ತರಬಹುದು ಎಂದು ಆತಂಕಗೊಂಡಿರುವ ಸತೀಶ್ ಬೆಂಬಲಿಗರು ಈಗ ಹೊಸ ರಕ್ಷಣಾತ್ಮಕ ನಾಟಕ ಶುರು ಮಾಡಿದ್ದಾರೆ. “ಇದು ಅಹಿಂದ ಒಡೆಯುವ ಕುತಂತ್ರ, ಬಿಜೆಪಿಯವರು ಹರಿಬಿಟ್ಟಿರುವ ಸುಳ್ಳು ಸುದ್ದಿ” ಎಂದು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ, ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಅಡಗಿ ಕುಳಿತಿದ್ದ ನಾಯಕರು, ನಿನ್ನೆ ಕ್ಯಾಮೆರಾಗಳ ಮುಂದೆ ಬಂದು ನಗುನಗುತ್ತಲೇ ಮಾತನಾಡಿದ್ದು ಅಹಿಂದ ಜನರನ್ನು ಮತ್ತಷ್ಟು ಕೆರಳಿಸಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ತಾವೇ ತೆರೆಮರೆಯ ಸೂತ್ರಧಾರಿ ಎನ್ನುವ ಸತ್ಯ ಎಲ್ಲೆಡೆ ಪಸರಿಸಲು ಶುರುವಾಗುತ್ತಿದ್ದಂತೆ ಎಚ್ಚೆತ್ತ ಸತೀಶ್, ಇಂದು ಮಧ್ಯಾಹ್ನ ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಅವರೊಂದಿಗಿನ ಹಳೆಯ ಫೋಟೋ ಒಂದನ್ನು ಹಂಚಿಕೊಂಡು ಅವರ ಗುಣಗಾನ ಮಾಡುವ ಪೋಸ್ಟ್ ಹಾಕಿದ್ದಾರೆ! ಆದರೆ, “ರಾಜಕೀಯ ಗುರುವಾಗಿರುವ ಸಿದ್ದರಾಮಯ್ಯ ಅವರ ಪರವಾಗಿ ಒಂದು ಪೋಸ್ಟ್ ಹಾಕಲು ನಿಮಗೇಕೆ ಮೂರು ದಿನಗಳ ಸುದೀರ್ಘ ಸಮಯ ಬೇಕಾಯಿತು?” ಎಂದು ಅಹಿಂದ ವರ್ಗದ ಜಾಗೃತ ಜನರು ಸಾಮಾಜಿಕ ಜಾಲತಾಣಗಳಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತೆರೆಮರೆಯಲ್ಲಿ ಮಾಡುವುದೆಲ್ಲಾ ಮಾಡಿ, ಸಿದ್ದರಾಮಯ್ಯ ಅವರ ರಾಜಕೀಯ ಮುಳುಗಿಸಲು ತಾವೇ ಕೊಡಲಿಯಾಗಿ, ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಣ್ಣ ಬದಲಿಸಿದರೆ ನಂಬಲು ಅಹಿಂದ ಜನರೇನು ಮೂರ್ಖರಲ್ಲ ಎನ್ನುವುದನ್ನು ಈ ಸ್ವಾರ್ಥ ನಾಯಕರು ಅರಿಯಬೇಕಿದೆ. ಮತ್ತೊಂದು ಮಾಹಿತಿ, ಇಂದು ನಡೆದ ಸಿಎಲ್‌ಪಿ ಸಭೆಗೆ ಡಿಕೆ ಶಿವಕುಮಾರ್‌ ಜೊತೆಯಾಗಿ ಒಂದೇ ಕಾರಿನಲ್ಲಿ ಬಂದಿದ್ದಾರಂತೆ ಸಿದ್ದರಾಮಯ್ಯರ ಮಾಜಿ ಆಪ್ತ ಸತೀಶ್‌ ಜಾರಕಿಹೊಳಿ ಅವರು…. ಇಷ್ಟಾದಮೇಲೂ ಇಂತಹ ಮುಖವಾಡದ ಪೋಸ್ಟ್‌ಗಳನ್ನು ಜನರು ನಂಬುತ್ತಾರಾ?

ಕಳಚಿದ ಮುಖವಾಡ: ಅಹಿಂದ ಪುನಶ್ಚೇತನಕ್ಕೆ ಹೊಸ ರಣಕಹಳೆ

ಇದೇ ವಿಷಯವಾಗಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ (K.M. Ramachandrappa) ಅವರು ಕಟು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಅಹಿಂದ (AHINDA) ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡಿದ್ದಾರೆ. “ಈಗ ಕೆಲವರ ಮುಖವಾಡ ಸಾರ್ವಜನಿಕವಾಗಿ ಕಳಚಿ ಬಿದ್ದಿದೆ. ಅಂತಹ ದ್ರೋಹಿಗಳನ್ನು ಅಹಿಂದ ಚಳವಳಿಯಿಂದಲೇ ಶಾಶ್ವತವಾಗಿ ದೂರ ಇಡಲಾಗುವುದು. ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲೇ ಬಿ.ಕೆ. ಹರಿಪ್ರಸಾದ್, ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಎಚ್.ಎಂ. ರೇವಣ್ಣ ಹಾಗೂ ಸಿ.ಎಂ. ಇಬ್ರಾಹಿಂ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ, ಇವರಲ್ಲೇ ಒಬ್ಬರನ್ನು ಅಹಿಂದದ ಮುಂದಿನ ಮುಂಚೂಣಿ ನಾಯಕನನ್ನಾಗಿ ಆಯ್ಕೆ ಮಾಡಲಾಗುವುದು. ಈ ಹಿಂದೆ ಅಹಿಂದ ಸಾರಥಿಗೆ ಮೋಸ ಮಾಡಿದ ನಂಬಿಕೆದ್ರೋಹಿಗಳನ್ನು ಸಂಘಟನೆಯ ಹತ್ತಿರವೂ ಸೇರಿಸುವುದಿಲ್ಲ” ಎಂದು ರಾಮಚಂದ್ರಪ್ಪ ಖಡಕ್ ಆಗಿ ಗುಡುಗಿದ್ದಾರೆ.

ರಾಜಕಾರಣದಲ್ಲಿ ಅಧಿಕಾರದ ಆಸೆ ಸಹಜ, ಆದರೆ ಅದೇ ಆಸೆ ಅತಿಯಾಗಿ ಸ್ವಂತ ವರ್ಗದ ನಾಯಕನನ್ನೇ ಬಲಿಪೀಠಕ್ಕೆ ತಳ್ಳುವ ಹಂತಕ್ಕೆ ತಲುಪಿದರೆ ಅದು ಅಕ್ಷಮ್ಯ ಅಪರಾಧ ಎನಿಸಿಕೊಳ್ಳುತ್ತದೆ. ಅಹಿಂದ ವರ್ಗಗಳ ಸಂಘಟಿತ ಶಕ್ತಿಯಿಂದಲೇ 2013 ಹಾಗೂ 2023ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಾಧ್ಯವಾಯಿತು ಎನ್ನುವುದು ಇತಿಹಾಸ. ಮುಸ್ಲಿಂ ಸಮುದಾಯದ ಶೇ. 80ರಷ್ಟು ಮತಗಳು ಹಾಗೂ ಹಿಂದುಳಿದ ವರ್ಗಗಳ ಶೇ. 60ಕ್ಕೂ ಹೆಚ್ಚು ಮತಗಳ ಧ್ರುವೀಕರಣದಿಂದ ಹುಟ್ಟಿದ ಈ ಅಧಿಕಾರದ ಸಾರಥ್ಯವನ್ನು ಸಹಿಸದ ಕೆಲವು ಒಳಗಿನ ಶಕ್ತಿಗಳೇ ಕಳೆದ ಆರು ತಿಂಗಳುಗಳಿಂದ ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆಯುತ್ತಿದ್ದವು ಎಂಬುದು ರಾಮಚಂದ್ರಪ್ಪ ಅವರ ಮಾತುಗಳಿಂದ ಜಗಜ್ಜಾಹೀರಾಗಿದೆ.

ಗುರುವಿಗೆ ಗುನ್ನಾ ಇಟ್ಟ ಸತೀಶ್‌: ತಾನೇ ತೋಡಿದ ಖೆಡ್ಡಾಕೆ ಬಿದ್ದ ಸಾಹುಕಾರ್‌?

ನಮ್ಮ ‘ಅಸಲಿ ಸುದ್ದಿ’ ರಾಜಕೀಯ ವಿಶ್ಲೇಷಣಾ ವಿಭಾಗದ ಆಳವಾದ ಅಧ್ಯಯನದ ಪ್ರಕಾರ, ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲೇ ಇದ್ದುಕೊಂಡು, ಬುದ್ಧ-ಬಸವ-ಅಂಬೇಡ್ಕರ್ ಸಿದ್ಧಾಂತಗಳ ಜಪ ಮಾಡುತ್ತಿದ್ದ ಸತೀಶ್ ಜಾರಕಿಹೊಳಿ ಅವರ ಅಸಲಿ ಮುಖವಾಡ ಈಗ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಸಿದ್ದರಾಮಯ್ಯ ವಿರುದ್ಧ ತೆರೆಮರೆಯಲ್ಲಿ ನಡೆದ ವ್ಯವಸ್ಥಿತ ಕುತಂತ್ರಗಳ ಸಾರಥ್ಯವನ್ನು ಇದೇ ಸತೀಶ್ ವಹಿಸಿದ್ದರು ಎನ್ನುವ ಸ್ಫೋಟಕ ಮಾಹಿತಿ ಕಾಂಗ್ರೆಸ್ ಪಡಸಾಲೆಯಿಂದಲೇ ಹರಿದುಬರುತ್ತಿದೆ. ಕೇವಲ ಸಿದ್ದರಾಮಯ್ಯ ಅವರಿಂದ ದೂರ ಉಳಿಯುವುದಷ್ಟೇ ಅಲ್ಲದೆ, ಸಿದ್ದು ವಿರುದ್ಧ ಶಾಸಕರ ಸಹಿ ಸಂಗ್ರಹಿಸಿ, ಆ ಕರಾಳ ಪಟ್ಟಿಯನ್ನು ಡಿಕೆ ಶಿವಕುಮಾರ್ ಕೈಗಿಟ್ಟು ಕೃತಜ್ಞತೆ ಸಲ್ಲಿಸಿದ್ದರು ಎಂಬ ಮಾತುಗಳು ಅಹಿಂದ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಗೆದ್ದೆತ್ತಿನ ಬಾಲ ಹಿಡಿಯುವುದೇ ಚಾಣಕ್ಷತನ” ಎಂಬ ಸ್ವಾರ್ಥ ಲೆಕ್ಕಾಚಾರಕ್ಕೆ ಬಿದ್ದ ಸತೀಶ್, ಸಿದ್ದರಾಮಯ್ಯ ಅವರ ರಾಜಕೀಯ ಮುಗಿಯುತ್ತಿದೆ ಎಂದು ಭಾವಿಸಿ, ಡಿಕೆಶಿ ಬಣಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಆದರೆ, ಈ ನಂಬಿಕೆ ದ್ರೋಹದ ಆಟಕ್ಕೆ ಸಿದ್ದರಾಮಯ್ಯ ಅಷ್ಟೇ ಚಾಣಕ್ಷತನದಿಂದ ತಿರುಗೇಟು ನೀಡಲಾರಂಭಿಸಿದ್ದಾರೆ. ಡಿಕೆಶಿ ಮುಖ್ಯಮಂತ್ರಿಯಾದರೆ ತಮಗೆ ಸಿಗಬಹುದು ಅಂದುಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಗದ್ದುಗೆಗೆ ಸಿದ್ದರಾಮಯ್ಯ ಅವರು ಜಿ. ಪರಮೇಶ್ವರ್, ಎಂಬಿ ಪಾಟೀಲ್‌ ಹಾಗೂ ಬಿಕೆ ಹರಿಪ್ರಸಾದ್ ಅವರ ಹೆಸರನ್ನು ಮುನ್ನೆಲೆಗೆ ತಂದು ಸತೀಶ್ ಆಸೆಗೆ ತಣ್ಣೀರು ಸುರಿದಿದ್ದಾರೆ.

ದೆಹಲಿಯ ಜಂಟಿ ಸುದ್ದಿಗೋಷ್ಠಿ ಹಾಗೂ ಬ್ರೇಕ್ ಫಾಸ್ಟ್ ಮೀಟಿಂಗ್‌ಗಳಲ್ಲಿ ಸಿದ್ದರಾಮಯ್ಯ ಅವರು ತಮ್ಮ ಇಕ್ಕೆಲಗಳಲ್ಲಿ ಡಿಕೆಶಿ ಮತ್ತು ಪರಮೇಶ್ವರ್ ಅವರನ್ನು ಕೂರಿಸಿಕೊಳ್ಳುವ ಮೂಲಕ, ತಮಗೆ ದ್ರೋಹ ಬಗೆದ ಜಾರಕಿಹೊಳಿಗೆ ಅತ್ಯಂತ ರಾಜತಾಂತ್ರಿಕವಾಗಿ ಮತ್ತು ಖಡಕ್ ಆಗಿ ಸೈಡ್ ಲೈನ್ ಮಾಡುವ ಸಂದೇಶ ರವಾನಿಸಿದ್ದಾರೆ. ಗುರುವಿಗೆ ಖೆಡ್ಡಾ ತೋಡಲು ಹೋದ ಶಿಷ್ಯ, ಇಂದು ತಾನು ತೋಡಿದ ಹಳ್ಳದಲ್ಲೇ ತಾನೇ ನಲುಗುವಂತಾಗಿದೆ.

ಇದನ್ನೂ ಓದಿ: Siddaramaiah vs Satish: ಗುರುವಿಗೆ ಗುನ್ನಾ! ಹಣದ ‘ಹೊಳೆ’ ಹರಿಸಿದ್ರೆ ಅಹಿಂದ ವರ್ಗ ‘ಜಾರಿ’ ಬರಲ್ಲ; ಸಿದ್ದು ಬೆನ್ನಿಗೆ ಚೂರಿ ಹಾಕಿದ್ರಾ ಸತೀಶ್?

ಆತುರದ ನಾಯಕತ್ವದ ಹಪಹಪಿ ಮತ್ತು ಹಾಸ್ಯಾಸ್ಪದ ನಿಲುವುಗಳು

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುತ್ತಿದ್ದಂತೆ, ಇತ್ತ ಸತೀಶ್ ಜಾರಕಿಹೊಳಿ ತಾವೇ ಮುಂದಿನ ಅಹಿಂದ ಸಾಮ್ರಾಜ್ಯದ ಚಕ್ರವರ್ತಿ ಎಂಬಂತೆ ಅಹಂಕಾರದ ಧಾಟಿಯಲ್ಲಿ ಮಾತನಾಡುತ್ತಿರುವುದು ಇಡೀ ಶೋಷಿತ ವರ್ಗಕ್ಕೆ ಮಾಡಿದ ಅವಮಾನ. “ರಾಜ್ಯದಲ್ಲಿ 500 ಜಾತಿಗಳ ದೊಡ್ಡ ಸಂಖ್ಯೆಯಿದೆ, ಯಾರಾದರೂ ಒಬ್ಬರು ಅಹಿಂದ ಧ್ವಜ ಹಿಡಿಯಬೇಕು, ನಾನು ಸಿದ್ದರಾಮಯ್ಯ ಅವರ ಸ್ಥಾನ ತುಂಬಲು ಪ್ರಯತ್ನಿಸುತ್ತೇನೆ” ಎಂದು ಸತೀಶ್ ನೀಡಿರುವ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ.

ಸ್ವತಃ ಸಿದ್ದರಾಮಯ್ಯ ಅವರೇ ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಘಂಟಾಘೋಷವಾಗಿ ಸಾರಿದ್ದಾರೆ. ನಾಯಕ ಇನ್ನೂ ಉಸಿರಾಡುತ್ತಿರುವಾಗಲೇ ಅವರ ಶವಪೆಟ್ಟಿಗೆಯ ಮೇಲೆ ನಿಂತು ನಾಯಕತ್ವದ ಪಟ್ಟಾಭಿಷೇಕಕ್ಕೆ ಹಪಹಪಿಸುತ್ತಿರುವ ಸತೀಶ್ ಅವರ ಈ ನಡೆ ರಾಜಕೀಯ ಅಪಕ್ವತೆಯ ಪರಮಾವಧಿ. 2004-05ರ ಹುಬ್ಬಳ್ಳಿಯ ಅಹಿಂದ ಚಳವಳಿಯ ದಿನಗಳಲ್ಲಿ ಜಾರಕಿಹೊಳಿ family ಹಣದ ಹೊಳೆ ಹರಿಸಿರಬಹುದು. ಆದರೆ ಸಾಹುಕಾರರು ಒಂದನ್ನು ನೆನಪಿಡಬೇಕು; ಧನಬಲ ಮತ್ತು ತೋಳ್ಬಲದಿಂದ ಚುನಾವಣೆಗಳನ್ನು ಗೆಲ್ಲಬಹುದೇ ಹೊರತು, ಕೋಟ್ಯಂತರ ಶೋಷಿತರ ಹೃದಯ ಗೆದ್ದು ಸಿದ್ದರಾಮಯ್ಯ ಆಗಲು ಸಾಧ್ಯವಿಲ್ಲ. ನಂಬಿಕೆ ಮತ್ತು ತ್ಯಾಗದಿಂದ ಬರುವ ಅಹಿಂದ ನಾಯಕತ್ವವನ್ನು ಗುರುವಿಗೆ ಗುನ್ನಾ ಇಟ್ಟ ದ್ರೋಹಿಗೆ ಬಿಟ್ಟುಕೊಡಲು ಈ ನಾಡಿನ ಜನ ಮೂರ್ಖರಲ್ಲ.

ಕಾಂಗ್ರೆಸ್ ಹೈಕಮಾಂಡ್‌ನ ದ್ವಂದ್ವ ನೀತಿ ಮತ್ತು ಶೋಷಿತರಿಗೊಂದು ನ್ಯಾಯ!

ಕಾಂಗ್ರೆಸ್ ಪಕ್ಷದೊಳಗಿನ ಅಹಿಂದ ವಿರೋಧಿ ಧೋರಣೆ ಇಂದು ನಿನ್ನೆಯದಲ್ಲ. ಈ ಹಿಂದೆ ಕೆ.ಎನ್. ರಾಜಣ್ಣ, ಅಬ್ದುಲ್ ಜಬ್ಬಾರ್, ಮತ್ತು ನಸೀರ್ ಅಹಮದ್ ಅವರಂತಹ ಮುಂಚೂಣಿ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ನೆಪವೊಡ್ಡಿ ಹಂತ-ಹಂತವಾಗಿ ಮೂಲೆಗುಂಪು ಮಾಡಲಾಯಿತು. ಆದರೆ, ಇದೇ ಕಾಂಗ್ರೆಸ್‌ನ ಮುಂದುವರಿದ ವರ್ಗದ ಪ್ರಭಾವಿ ನಾಯಕ ಶಿವಶಂಕರಪ್ಪ ಅವರು ಶಿವಮೊಗ್ಗದ ಬಹಿರಂಗ ಸಭೆಯಲ್ಲೇ ವಿರೋಧ ಪಕ್ಷದ ಅಭ್ಯರ್ಥಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಮತಯಾಚಿಸಿದಾಗ ಹೈಕಮಾಂಡ್ ಕಣ್ಣು ಮುಚ್ಚಿ ಕುಳಿತಿತ್ತು! ಅವರ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸುವ ಧೈರ್ಯ ಪಕ್ಷಕ್ಕೆ ಬರಲಿಲ್ಲ.

ಶೋಷಿತ ಹಾಗೂ ಹಿಂದುಳಿದ ವರ್ಗದ ನಾಯಕರಿಗೆ ಒಂದು ನ್ಯಾಯ, ಮುಂದುವರಿದ ಜಾತಿಗೆ ಮತ್ತೊಂದು ನ್ಯಾಯ ಎಂಬ ಕಾಂಗ್ರೆಸ್‌ನ ಈ ತಾರತಮ್ಯ ಧೋರಣೆ ಅಹಿಂದ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ ಮಟ್ಟದ ನಾಯಕರಿಗೆ ಕರ್ನಾಟಕದಲ್ಲಿ ಅಹಿಂದದ ನಿಜವಾದ ಶಕ್ತಿ ಏನೆಂಬುದೇ ತಿಳಿದಿಲ್ಲ. ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಮೂಲಕ ಹೈಕಮಾಂಡ್ ಜೇನುಗೂಡಿಗೆ ಕೈಹಾಕಿದೆ.

ಇದನ್ನೂ ಓದಿ: Siddaramaiah: ಕರಗಿದ ವಿಧಾನಸೌಧದ ಕಲ್ಲುಗಳು, ಮೌನವಾಯ್ತು ಬಡವರ ಗಟ್ಟಿ ಧ್ವನಿ: ‘ಭಾಗ್ಯಗಳ ಸರದಾರ’ನ ವಿದಾಯದ ಭಾವಯಾನ!

ಸಿದ್ದರಾಮಯ್ಯ ಎಂಬ ಅನಿವಾರ್ಯತೆ ಮತ್ತು ಮುನ್ನಡೆಯಬೇಕಾದ ಚಳವಳಿ

ಸಿದ್ದರಾಮಯ್ಯ ಕೇವಲ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ. ಸಿಎಂ ಕಚೇರಿಯಲ್ಲಿ ಕೇವಲ ಒಂದು ಸಮುದಾಯದವರೇ ಇದ್ದರು ಎಂಬ ವಿರೋಧಿಗಳ ಕುಹಕದ ಆರೋಪಗಳಿಗೆ ಯಾವುದೇ ತರ್ಕವಿಲ್ಲ. ಅವರ ಆಡಳಿತಾವಧಿಯಲ್ಲಿ ಎಲ್ಲಾ ಶೋಷಿತ ಜನಾಂಗಗಳಿಗೂ ಸಮಾನ ಪ್ರಾತಿನಿಧ್ಯವಿತ್ತು. ಪ್ರಸ್ತುತ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿರಬಹುದು ಅಥವಾ ಅವರು ಸಕ್ರಿಯ ರಾಜಕಾರಣದ ಮುಖ್ಯವಾಹಿನಿಯಿಂದ ತುಸು ದೂರ ಸರಿದಿರಬಹುದು, ಆದರೆ ಅಹಿಂದ ಚಳವಳಿಗೆ ಅವರ ಮಾರ್ಗದರ್ಶನ ಮತ್ತು ನಾಯಕತ್ವ ಇಂದಿಗೂ ಪರಮ ಅನಿವಾರ್ಯ.

ಒಂದು ಫೋನ್ ಕರೆಗೆ ಇಡೀ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯ ಬೆಂಕಿ ಉರಿಯುವಂತೆ ಮಾಡುವ ತಾಕತ್ತು ಸಿದ್ದರಾಮಯ್ಯ ಅವರ ಹೆಸರಿಗಿದೆ. ಇಂತಹ ಜನನಾಯಕನಿಗೆ ದ್ರೋಹ ಬಗೆದವರನ್ನು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಈಗ ಅಹಿಂದ ಸಂಘಟನೆಯು ತನ್ನೊಳಗಿನ ಕಳೆಗಳನ್ನು ಕಿತ್ತೆಸೆದು, ಸಿದ್ದರಾಮಯ್ಯ ಅವರ ಸಾರಥ್ಯದಲ್ಲೇ ಮರುಸಂಘಟಿತಗೊಳ್ಳಲು ತೀರ್ಮಾನಿಸಿದೆ. ಹೊಸ ಸಂಪುಟದಲ್ಲಿ ಹಿರಿಯ ಸಚಿವರಿಗೆ ಕೋಕ್ ನೀಡುವ ಮುನ್ಸೂಚನೆ ಸಿಗುತ್ತಿದ್ದಂತೆ ಎಚ್.ಸಿ. ಮಹದೇವಪ್ಪ ಮತ್ತು ಜಮೀರ್ ಅಹಮದ್ ಖಾನ್ ರಹಸ್ಯ ಸಭೆಗಳನ್ನು ಆರಂಭಿಸಿದ್ದು, ಮುಂದಿನ ಚಳವಳಿ ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ. ನಾಯಕತ್ವದ ದುರಾಸೆಗಾಗಿ ಸಮುದಾಯವನ್ನು ಮಾರಿಕೊಂಡ ಸಾಹುಕಾರರಿಗೆ ಅಹಿಂದ ಸಂಘಟನೆಯ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಇದು ಶೋಷಿತರ ಸ್ವಾಭಿಮಾನದ ಹೋರಾಟ, ಇಲ್ಲಿ ದ್ರೋಹಿಗಳಿಗೆ ಸ್ಥಾನವಿಲ್ಲ ಎನ್ನುವ ನಿಲುವಿಗೆ ಅಹಿಂದ ಸಂಘಟನೆ ಬಂದಿದೆ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments