Friday, September 11, 2026
Home ಸುದ್ದಿಗಳು ಸಿದ್ದು-ಡಿಕೆಶಿ ಕುರ್ಚಿ ಸಮರ: ಎಕ್ಸ್‌ ಅಖಾಡದಲ್ಲಿ ಶುರುವಾಯ್ತು ಓಪನ್‌ ಫೈಟ್!

ಸಿದ್ದು-ಡಿಕೆಶಿ ಕುರ್ಚಿ ಸಮರ: ಎಕ್ಸ್‌ ಅಖಾಡದಲ್ಲಿ ಶುರುವಾಯ್ತು ಓಪನ್‌ ಫೈಟ್!

ಸಿದ್ದು-ಡಿಕೆಶಿ ಕುರ್ಚಿ ಸಮರ: ಎಕ್ಸ್‌ ಅಖಾಡದಲ್ಲಿ ಶುರುವಾಯ್ತು ಓಪನ್‌ ಫೈಟ್!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟ ಸಂಭವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಶೀತಲ ಸಮರ ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಈಗ ‘ಎಕ್ಸ್’ (ಟ್ವಿಟರ್) ಅಂಗಳವನ್ನೇ ಅಖಾಡವನ್ನಾಗಿಸಿಕೊಂಡು, ಓಪನ್‌ ಫೈಟ್‌ ಮಾಡಲು ಶುರು ಮಾಡಿದ್ದಾರೆ.

ಡಿಕೆಶಿ ‘ಮರ್ಮ’ದ ಟ್ವೀಟ್: ಅಜ್ಜಯ್ಯನ ಮಠದಿಂದ ಕುರ್ಚಿಗೆ ಸಂದೇಶ?

ಹೌದು ಸಿದ್ದು-ಡಿಕೆಶಿ ಕುರ್ಚಿ ಸಮರ ಬಹಿರಂಗವಾಗಿ ಶುರುವಾಗಿದೆ. ಡಿ.ಕೆ. ಶಿವಕುಮಾರ್ ಅವರು ಫೆಬ್ರವರಿ 14ರಂದು ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದರು, ಅಲ್ಲಿ ಪೂಜೆ ಸಲ್ಲಿಸಿದ ಫೋಟೋದೊಂದಿಗೆ ಒಂದು ಮಾರ್ಮಿಕ ಸಂದೇಶ ಹಂಚಿಕೊಂಡಿದ್ದಾರೆ. “ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಎಂದಿಗೂ ಕೈಬಿಡುವುದಿಲ್ಲ.” ಎಂದು ತುಂಬಾ ಮಾರ್ಮಿಕವಾಗಿಯೇ ಕೆಣಕುವಂತಹ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಈ ಟ್ವೀಟ್ ಕೇವಲ ಆಧ್ಯಾತ್ಮಿಕ ಸಾಲುಗಳಲ್ಲ, ಬದಲಿಗೆ ಸಿಎಂ ಸಿದ್ದರಾಮಯ್ಯನವರಿಗೆ ರವಾನಿಸಿದ ಪರೋಕ್ಷ ಎಚ್ಚರಿಕೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. “ನಾನು ಇಷ್ಟು ದಿನ ಭಿಕ್ಷುಕನಂತೆ ತಾಳ್ಮೆಯಿಂದ ಕಾಯುತ್ತಿದ್ದೇನೆ, ಈಗ ಫಲ ನೀಡುವ ಸಮಯ ಬಂದಿದೆ” ಎಂಬ ಅರ್ಥ ಇದರಲ್ಲಿ ಅಡಗಿದೆ ಎನ್ನಲಾಗುತ್ತಿದೆ.

ಸಿದ್ದು ಖಡಕ್ ಟಕ್ಕರ್: “ಹೈಕಮಾಂಡ್ ಏನಾದ್ರೂ ಟ್ವೀಟ್ ಮಾಡಿದೆಯಾ?”

ಸಿದ್ದು-ಡಿಕೆಶಿ ಕುರ್ಚಿ ಸಮರ: ಡಿಕೆಶಿ ಅವರ ಈ ‘ಟ್ವೀಟ್ ಬಾಂಬ್’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟೇ ವೇಗವಾಗಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಡಿಕೆ ಶಿವಕುಮಾರ್ ಅವರಿಗೆ ಟ್ವೀಟ್ ಮಾಡೋ ಹಕ್ಕಿದೆ, ಅವರು ಮಾಡಿದ್ದಾರೆ. ಅದಕ್ಕೆ ನಾನೇನು ಹೇಳಲಿ? ಆದರೆ, ಹೈಕಮಾಂಡ್ ಏನಾದರೂ ಈ ಬಗ್ಗೆ ಟ್ವೀಟ್ ಮಾಡಿದೆಯಾ? ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಹೇಳುವ ಮೂಲಕ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು, “ದೆಹಲಿ ನಾಯಕರು ಹೇಳುವವರೆಗೂ ನಾನು ಈ ಕುರ್ಚಿಯಿಂದ ಕದಲುವುದಿಲ್ಲ” ಎಂಬ ನೇರ ಸಂದೇಶವನ್ನು ಡಿಕೆಶಿ ಬಣಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ‘ನಾ ಕೊಡೆ’, ಡಿಕೆಶಿ ‘ನಾ ಬಿಡೆ’!: ಡೆಲ್ಲಿಯಿಂದ ಗನ್ ಹಿಡಿದು ಬಂದ್ರಾ ಡಿಕೆ?

ಗೊಂದಲದ ಗೂಡಾದ ‘ಕೈ’ ಪಾಳಯ

ಒಂದೆಡೆ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಮಂಡನೆಗೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಡಿಕೆಶಿ ಬಣ ‘ಪವರ್ ಶಿಫ್ಟ್’ಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ. ಎಕ್ಸ್ ಅಖಾಡದಲ್ಲಿ ನಡೆದ ಈ ವಾಕ್ಸಮರ ಕಾರ್ಯಕರ್ತರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮುಂದೆ ತಮ್ಮ ಹಕ್ಕು ಮಂಡಿಸಿ ಬಂದಿರುವ ಡಿಕೆಶಿ, ಈಗ “ಕಾಲವೇ ಉತ್ತರಿಸಲಿದೆ” ಎನ್ನುವ ನಿಗೂಢ ಮಂತ್ರ ಜಪಿಸುತ್ತಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ಸಜ್ಜಾಗುವ ಮೂಲಕ “ನಾನೇ ಬಾಸ್” ಎಂಬ ಸಂದೇಶ ರವಾನಿಸುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ‘ನಾ ಕೊಡೆ – ನಾ ಬಿಡೆ’ ಪಟ್ಟು ಈಗ ಫೆಬ್ರವರಿ 17ರ ನಂತರ ಹೊಸ ತಿರುವು ಪಡೆಯುವ ಲಕ್ಷಣಗಳಿವೆ.

ಅಸಲಿ ಸುದ್ದಿಯ ವಿಶ್ಲೇಷಣೆ:

ಇದು ಕೇವಲ ವೈಯಕ್ತಿಕ ಟ್ವೀಟ್‌ಗಳಲ್ಲ, ಬದಲಿಗೆ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯಲಿರುವ ದೊಡ್ಡ ಮಟ್ಟದ ‘ನಾಯಕತ್ವ ಬದಲಾವಣೆ’ಯ ಮುನ್ಸೂಚನೆ. ಬಜೆಟ್ ನಂತರ ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮಹಾ ಸ್ಫೋಟ’ ಸಂಭವಿಸಿದರೂ ಆಶ್ಚರ್ಯವಿಲ್ಲ!

ಈ ರಾಜಕೀಯ ಜಿದ್ದಾಜಿದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸಿದ್ದು ಬಜೆಟ್ ಮಂಡಿಸುತ್ತಾರಾ ಅಥವಾ ಡಿಕೆಶಿ ಪಟ್ಟ ಏರುತ್ತಾರಾ? ಕಾಮೆಂಟ್ ಮಾಡಿ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...