Homeರಾಜ್ಯRB Timmapur: ​'ಮನೆ ಮಗ'ನ ಕಮೀಷನ್ ದಂಧೆಗೆ ಮುಧೋಳ ಜನ ತತ್ತರ! ಸಚಿವರ ವಿರುದ್ಧ ಅರುಣ್...

RB Timmapur: ​’ಮನೆ ಮಗ’ನ ಕಮೀಷನ್ ದಂಧೆಗೆ ಮುಧೋಳ ಜನ ತತ್ತರ! ಸಚಿವರ ವಿರುದ್ಧ ಅರುಣ್ ಕಾರಜೋಳ ಗರ್ಜನೆ!

ಬಾಗಲಕೋಟೆ (ಮುಧೋಳ) : ಅಧಿಕಾರದ ಮದದಲ್ಲಿ ಆಡಳಿತಗಾರರು ಜನರ ಕಣ್ಣೀರಿಗೆ ಕುರುಡಾದಾಗ ಮತ್ತು ಸ್ವಕ್ಷೇತ್ರದ ಜ್ವಲಂತ ಸಮಸ್ಯೆಗಳು ಕೇವಲ ಚುನಾವಣಾ ಭಾಷಣಗಳಿಗೆ ಸೀಮಿತವಾದಾಗ ಜನರೇ ದಂಗೆ ಏಳುವುದು ಇತಿಹಾಸ ಸಾಬೀತುಪಡಿಸಿದ ಸತ್ಯ. ನಿನ್ನೆ ನಮ್ಮ “ಅಸಲಿ ಸುದ್ದಿ” ನ್ಯೂಸ್ ವೆಬ್ಸೈಟ್ ನಲ್ಲಿ ‘ಮುಧೋಳದ ಕರಾಳ ಮುಖ’ವನ್ನು ಬಿಂಬಿಸುವ ಲೇಖನವನ್ನು ಪ್ರಕಟಿಸಿದ್ದೇವು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅದರ ಪ್ರಭಾವದಿಂದಾಗಿ ಇಂದು ಇಡೀ ಮುಧೋಳ ಕ್ಷೇತ್ರವೇ ಎದ್ದು ನಿಂತಿದೆ. ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ (RB Timmapur) ಅವರ ಬೇಜವಾಬ್ದಾರಿ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ಧ ಇಂದು ಮುಧೋಳ ನಗರಸಭೆಯ ಮುಂಭಾಗದಲ್ಲಿ ಸಾರ್ವಜನಿಕ ಆಕ್ರೋಶದ ಜ್ವಾಲೆ ಸ್ಪೋಟಗೊಂಡಿದೆ.

ಬಿಜೆಪಿ ಮುಖಂಡ ಅರುಣ್ ಕಾರಜೋಳ ನೇತೃತ್ವದಲ್ಲಿ ನಡೆದ ಈ ಬೃಹತ್ ಮುತ್ತಿಗೆ ಪ್ರತಿಭಟನೆಯು ಸಚಿವರ ಮತ್ತು ಅಧಿಕಾರಿಗಳ ಭ್ರಷ್ಟ ಕೂಟದ ಹಣೆಬರಹವನ್ನು ಸಾರ್ವಜನಿಕವಾಗಿ ಬೆತ್ತಲು ಮಾಡಿದೆ. “ಇವತ್ತಿನ ದಿನ ನಮ್ಮ ಮುಧೋಳ ತಾಲೂಕಿನ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ” ಎಂದು ಗುಡುಗಿದ ಬಿಜೆಪಿ ಮುಖಂಡ ಅರುಣ್ ಕಾರಜೋಳ, ಸಚಿವರ ಆಡಳಿತ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಮನೆ ಮಗ’ನ ಮುಖವಾಡ ಕಳಚಿ ಬಿತ್ತು: ಬೆಂಗಳೂರಲ್ಲಿ ಸಚಿವರ ಐಷಾರಾಮಿ ನಿದ್ರೆ!

ಚುನಾವಣಾ ಸಮಯದಲ್ಲಿ ಇದೇ ಮುಧೋಳದ ಶಿವಾಜಿ ಸರ್ಕಲ್‌ನಲ್ಲಿ ನಿಂತು ಹೂವಿನ ಹಾರ ಹಾಕಿಸಿಕೊಂಡು “ನಾನು ನಿಮ್ಮ ಮನೆ ಮಗನಿದ್ದಂತೆ, ನನ್ನನ್ನು ಗೆಲ್ಲಿಸಿ” ಎಂದು ನಾಟಕವಾಡಿದ್ದ ಸಚಿವರು (RB Timmapur), ಇಂದು ಅಧಿಕಾರ ಸಿಕ್ಕ ತಕ್ಷಣ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಅರುಣ್ ಕಾರಜೋಳ ನೇರವಾಗಿ ಚಾಟಿ ಬೀಸಿದರು. “ಎಲ್ಲಿದೀಯಪ್ಪಾ ಮನೆ ಮಗನೇ? ಧೈರ್ಯವಿದ್ದರೆ ಇಲ್ಲಿ ಬಾ!” ಎಂದು ಸಚಿವರಿಗೆ ಸವಾಲು ಹಾಕಿದ ಕಾರಜೋಳ, ಸಚಿವರು ಬೆಂಗಳೂರಿನ ಎಸಿ ರೂಮ್‌ನಲ್ಲಿ ಕುಳಿತು ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳುವ ಮತ್ತು ಮದ್ಯದ ಪರವಾನಗಿ ದಂಧೆಯಲ್ಲೇ ಬ್ಯುಸಿಯಾಗಿದ್ದಾರೆ ಹೊರತು, ಕ್ಷೇತ್ರದ ಜನರ ಕುಂದುಕೊರತೆಗಳನ್ನು ಕೇಳಲು ಅವರಿಗೆ ಪುರಸೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಬರೀ ರಾಜಕೀಯ ಆರೋಪವಲ್ಲ, ಮುಧೋಳದ ನಾಗರಿಕರು ಅನುಭವಿಸುತ್ತಿರುವ ದಿನನಿತ್ಯದ ನರಕಯಾತನೆ. ಜನ ಇವರನ್ನು ‘ಮನೆ ಮಗ’ ಎಂದು ನಂಬಿ ವೋಟ್ ಹಾಕಿ ಗೆಲ್ಲಿಸಿದರೆ, ಇಂದು ಇಡೀ ಕ್ಷೇತ್ರದಲ್ಲಿ ಕುಡಿಯುವ ನೀರಿನ ಭೀಕರ ಅಭಾವ ತಲೆದೋರಿದೆ, ರಸ್ತೆಗಳು ಕತ್ತಲಲ್ಲಿ ಮುಳುಗಿವೆ. 30 ವರ್ಷಗಳ ಕಾಲ ಗೋವಿಂದ ಕಾರಜೋಳ ಅವರು ರಕ್ತ ಬೆವರು ಸುರಿಸಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದು ಉಸ್ತುವಾರಿ ಸಚಿವರ ದಿವ್ಯ ನಿರ್ಲಕ್ಷ್ಯದಿಂದಾಗಿ ಸಂಪೂರ್ಣವಾಗಿ ಧೂಳೀಪಟವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಇದನ್ನೂ ಓದಿ: RB Timmapur: ಬಾಗಲಕೋಟೆ ಕೆಡಿಪಿಗೆ ‘ಲಾಕ್’..! ಮುಧೋಳ ‘ಮಿನಿ ಗೋವಾ’? ಸಚಿವರಿಗೆ ತಟ್ಟಿದ ಜನಾಕ್ರೋಶ!

ಗಂಡ-ಹೆಂಡತಿ ವಿಷಯ ಬಿಟ್ಟರೆ ಉಳಿದೆಲ್ಲದರಲ್ಲೂ ಶೇ.40 ರಷ್ಟು ಕಮೀಷನ್ ದಂಧೆ!

ಅರುಣ್ ಕಾರಜೋಳ ಅವರ ಭಾಷಣದಲ್ಲಿದ್ದ ಅತ್ಯಂತ ತೀಕ್ಷ್ಣ ಮತ್ತು ಖಾರವಾದ ಮಾತು ಎಂದರೆ ಅದು ಕ್ಷೇತ್ರದಲ್ಲಿ ತಲೆಯೆತ್ತಿರುವ ಕಮೀಷನ್ ಮತ್ತು ಅಕ್ರಮ ದಂಧೆಗಳ ಕುರಿತಾದ ಭ್ರಷ್ಟಾಚಾರದ ಸತ್ಯ ದರ್ಶನ. “ಗಂಡ-ಹೆಂಡತಿ ಸಂಸಾರದ ವಿಷಯ ಒಂದನ್ನು ಬಿಟ್ಟರೆ, ಮುಧೋಳ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಕೆಲಸದಲ್ಲೂ ಇವರು ಕಮೀಷನ್ ಫಿಕ್ಸ್ ಮಾಡಿದ್ದಾರೆ” ಎಂದು ಕಾರಜೋಳ ಅತ್ಯಂತ ವ್ಯಂಗ್ಯವಾಗಿ ಹಾಗೂ ಜಗಜ್ಜಾಹೀರಾಗಿ ಸಚಿವರ ಹಾಗೂ ಅಧಿಕಾರಿಗಳ ಲಂಚಾವತಾರವನ್ನು ತರಾಟೆಗೆ ತೆಗೆದುಕೊಂಡರು.

ಇಂದು ಮುಧೋಳ ಕ್ಷೇತ್ರದಲ್ಲಿ ಮರಳು ದಂಧೆ, ಹಾದಿ-ಬೀದಿಗಳಲ್ಲಿ ಅಕ್ರಮ ಮರಳು ಮಾರಾಟ ಮಾಡುವುದು ಸಚಿವರ ಕೃಪಾಕಟಾಕ್ಷದಿಂದ ರಾಜಾರೋಷವಾಗಿ ನಡೆಯುತ್ತಿದೆ. ಪ್ರತಿಯೊಂದು ಆಡಳಿತಾತ್ಮಕ ಫೈಲುಗಳಿಗೂ ಕಮೀಷನ್ ನಿಗದಿಯಾಗಿದೆ. ಇಲಾಖೆಗಳ ಅಭಿವೃದ್ಧಿ ಎಂದರೆ ಸಚಿವರ ಕಣ್ಣಿನಲ್ಲಿ ಕೇವಲ ಅಕ್ರಮ ದಂಧೆಕೋರರಿಗೆ ಮಣೆ ಹಾಕುವುದು ಮತ್ತು ಲೂಟಿ ಹೊಡೆಯುವುದೇ ಆಗಿದೆ ಎಂಬುದು ಇಂದಿನ ಪ್ರತಿಭಟನೆಯಲ್ಲಿ ಸಾಬೀತಾಗಿದೆ. ಸಚಿವರ ಬೆಂಬಲ ಇರುವುದರಿಂದಲೇ ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ಮಾಡಲು ಬಹಿರಂಗವಾಗಿಯೇ ಲಂಚ ಕೇಳುತ್ತಿದ್ದಾರೆ, ಕೇಳುವ ಧಣಿಯೇ ಇಲ್ಲದಂತಾಗಿದೆ.

ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಗಾಂಜಾ ಅಟ್ಟಹಾಸ!

ಇಂದಿನ ಪ್ರತಿಭಟನೆಯಲ್ಲಿ ಕೇಳಿಬಂದ ಅತ್ಯಂತ ಆತಂಕಕಾರಿ ಮತ್ತು ರಕ್ತ ಕುದಿಸುವ ವಿಷಯವೆಂದರೆ ಮುಧೋಳ ತಾಲೂಕಿನಲ್ಲಿ ಹೆಮ್ಮರವಾಗಿ ಬೆಳೆದಿರುವ ಗಾಂಜಾ ಮತ್ತು ಮದ್ಯದ ಕರಾಳ ದಂಧೆ. “ತಾಲೂಕಿನ ಇನ್ನು ಮೀಸೆ ಮೂಡದ ಸಣ್ಣ ಸಣ್ಣ ಹುಡುಗರು ಇವತ್ತು ಗಾಂಜಾ ಸೇದಿಕೊಂಡು ಅಡ್ಡಾಡುತ್ತಿದ್ದಾರೆ, ಇದು ನೇರವಾಗಿ ನಿಮ್ಮ ಕೃಪಾರ್ಶೀವಾದದಿಂದಲೇ ನಡೆಯುತ್ತಿದೆ ಅಲ್ವೇ?” ಎಂದು ಸಚಿವ ತಿಮ್ಮಾಪುರ ಅವರ ಮುಖಕ್ಕೆ ಹೊಡೆದಂತೆ ಕಾರಜೋಳ ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಶಾಲೆಗಳ ಸಂಖ್ಯೆಗಿಂತ ಬಾರ್ ಮತ್ತು ವೈನ್‌ಶಾಪ್‌ಗಳ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ಸುಲಭವಾಗಿ ಸಿಗುತ್ತಿರುವುದು ಕ್ಷೇತ್ರದ ಯುವ ಪೀಳಿಗೆಯನ್ನು ಸಂಪೂರ್ಣ ವಿನಾಶದತ್ತ ನೂಕುತ್ತಿದೆ. ಇಡೀ ರಾಜ್ಯಕ್ಕೆ ಅಬಕಾರಿ ಸಚಿವರಾಗಿರುವವರೇ ತಮ್ಮ ಸ್ವಕ್ಷೇತ್ರದಲ್ಲಿ ಇಂತಹ ಅಕ್ರಮ ಮದ್ಯ ಮತ್ತು ಮಾದಕ ದ್ರವ್ಯಗಳ ದಂಧೆಗೆ ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿರುವುದು ಕ್ಷೇತ್ರದ ಜನತೆಗೆ ಮಾಡಿದ ಮಹಾ ದ್ರೋಹವಾಗಿದೆ.

ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ

ಕೊನೆಯ ಎಚ್ಚರಿಕೆ: ‘ತಿಮ್ಮಾಪುರ ಅವರೇ, ಹುಷಾರ್!’

ಇಂದು ಮುಧೋಳ ನಗರಸಭೆಯ ಮುಂಭಾಗದಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರ ರೋಷಾವೇಶ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸಚಿವರಿಗೆ ಅಂತಿಮ ‘ಡೆಡ್‌ಲೈನ್’ ನೀಡಿದೆ. “ತಿಮ್ಮಾಪುರ ಅವರೇ, ಬರೀ ಇಲೆಕ್ಷನ್ ಬಂದಾಗ ಕೈಮುಗಿದು ಭಾಷಣ ಮಾಡಿ ಬೆಂಗಳೂರಲ್ಲಿ ಕೂತರೆ ಜನ ಸುಮ್ಮನಿರಲ್ಲ. ಸಾರ್ವಜನಿಕರ ಕುಂದುಕೊರತೆಗಳನ್ನು ತಕ್ಷಣವೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಇನ್ನೂ ಉಗ್ರ ಹೋರಾಟ ನಡೆಸಿ, ನಿಮ್ಮ ಮನೆಗೆ ಬಂದು ಹಲಗಿ ಬಾರಿಸಬೇಕಾಗುತ್ತದೆ, ಹುಷಾರ್!” ಎಂದು ಅರುಣ್ ಕಾರಜೋಳ ಗರ್ಜನೆ ಮಾಡಿದ್ದಾರೆ.

ಒಟ್ಟಾರೆಯಾಗಿ, ಮುಧೋಳದ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪತ್ರಿಕೋದ್ಯಮದ ಬರಹಗಳು ಜನರ ಧ್ವನಿಯಾಗಿ ಬದಲಾದಾಗ ಇಂತಹ ಆಡಳಿತಾತ್ಮಕ ಮುತ್ತಿಗೆಗಳು ಮತ್ತು ಜನಾಂದೋಲನಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಸಾಕ್ಷಿಯಾಗಿ ಅಸಲಿ ಸುದ್ದಿಯ ಒಂದೇ ಒಂದು ವರದಿ ಇಂದು ಹೋರಾಟಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಸಚಿವರು ತಮ್ಮ ಎಸಿ ಕಾರ್, ಬೆಂಗಳೂರಿನ ವ್ಯಾಮೋಹ ಮತ್ತು ಕಮೀಷನ್ ಆಸೆಯನ್ನು ಬಿಟ್ಟು ಮುಧೋಳದ ಜನರ ಕಡೆ ಮುಖ ಮಾಡಬೇಕಿದೆ. ಈ ಕಮೀಷನ್ ದಂಧೆ, ಗಾಂಜಾ ಹಾವಳಿ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ತಕ್ಷಣವೇ ನೀಗಿಸದಿದ್ದರೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕರೇ ಸಚಿವರಿಗೆ ರಾಜಕೀಯವಾಗಿ ಸಮಾಧಿ ಕಟ್ಟುವುದು ನಿಶ್ಚಿತ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments