ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯ ಹೈಡ್ರಾಮಾವೊಂದು ಸದ್ಯ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಅನಾವರಣಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ವಿಚಾರ ಸದ್ಯದ ಅತಿ ದೊಡ್ಡ ಚರ್ಚಾ ವಿಷಯವಾಗಿದ್ದು, ಬೆಳಗಿನಿಂದಲೇ ಮಾಧ್ಯಮಗಳು “ಇಂದೇ ಸಿಎಂ ರಾಜೀನಾಮೆ ಫಿಕ್ಸ್”, “ರಾಜಭವನದತ್ತ ಸಿದ್ದರಾಮಯ್ಯ ಮುಖ” ಎಂಬಿತ್ಯಾದಿ ಬ್ರೇಕಿಂಗ್ ನ್ಯೂಸ್ಗಳ ಮಹಾಪೂರವನ್ನೇ ಹರಿಸುತ್ತಿವೆ. ಆದರೆ, ತೆರೆಮರೆಯ ಸತ್ಯ ಮತ್ತು ರಾಜಕೀಯ ಚದುರಂಗದಾಟದ ಅಸಲಿ ಚಿತ್ರಣವೇ ಬೇರೆಯಾಗಿದೆ — ಇಂದು ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುತ್ತಿಲ್ಲ! ಸಿಎಂ ನಿವಾಸ ‘ಕಾವೇರಿ’ಯಲ್ಲಿ ಬಿರುಸಿನ ರಾಜಕೀಯ ತಂತ್ರಗಾರಿಕೆ ಮುನ್ನೆಲೆಗೆ ಬಂದಿದ್ದರೆ, ಅತ್ತ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಮಾತ್ರ ದಿಢೀರನೆ ‘ನೀರವ ಮೌನ’ ಆವರಿಸಿದೆ. ಈ ರಹಸ್ಯ ನಡೆಗಳು ಇಡೀ ಹೈಕಮಾಂಡ್ ಪಾಳಯಕ್ಕೆ ತಲೆನೋವು ತಂದಿಟ್ಟಿವೆ.
ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಆಡಿದ್ದ ಆ ಒಂದು ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. “ಸಿದ್ದರಾಮಯ್ಯ ಹಳೆ ಹುಲಿ, ಅವರು ಯಾವಾಗ ಏನ ಬೇಕಾದರೂ ಮಾಡಬಹುದು, ಯಾರಿಗೆ ಬೇಕಾದರೂ ಚಕಿತಗೊಳಿಸಬಹುದು” ಎಂದು ಶೋಭಾ ಕರಂದ್ಲಾಜೆ ಎಚ್ಚರಿಸಿದ್ದರು. ಸದ್ಯದ ಗೊಂದಲಮಯ ಹಾಗೂ ನಿಗೂಢ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದರೆ, ಆ ಮಾತು ಅಕ್ಷರಶಃ ಸತ್ಯವಾಗುತ್ತಿರುವಂತೆ ಕಾಣುತ್ತಿದೆ. ಸಿದ್ದರಾಮಯ್ಯ ತಾವು ಅಷ್ಟು ಸುಲಭವಾಗಿ ಶರಣಾಗುವ ರಾಜಕಾರಣಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲು ಹೊರಟಿದ್ದಾರೆ.
ರಾಜ್ಯಪಾಲರ ‘ನಾಲ್ಕು ದಿನ’ಗಳ ನಿಗೂಢ ಗೈರು: ಸಿದ್ದು ಹೆಣೆದ ಜಾಲವೇ?
ರಾಜ್ಯ ರಾಜಕಾರಣದಲ್ಲಿ ಇಂದು ಸಿಎಂ (Siddaramaiah) ರಾಜೀನಾಮೆಗೆ ಮುಹೂರ್ತ ನಿಗದಿಯಾಗಿದೆ, ಎಲ್ಲವೂ ಅಂತಿಮಗೊಂಡಿದೆ ಎನ್ನುವ ಹೊತ್ತಲ್ಲೇ ಅತ್ಯಂತ ರೋಚಕ ಬೆಳವಣಿಗೆಯೊಂದು ಸಂಭವಿಸಿದೆ. ಅದೇನೆಂದರೆ, ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕಾದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ದಿಢೀರನೆ ನಾಲ್ಕು ದಿನಗಳ ಕಾಲ ಲಭ್ಯವಿರುವುದಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ! ಇಂದು ರಾಜೀನಾಮೆ ನಿಗದಿಯಾಗಿದ್ದರೆ, ಸಾಂವಿಧಾನಿಕ ಮುಖ್ಯಸ್ಥರೇ ಸದ್ದಿಲ್ಲದೆ ನಾಲ್ಕು ದಿನಗಳ ಕಾಲ ನಾಪತ್ತೆಯಾಗುವುದು ಅಥವಾ ಪ್ರವಾಸ ಕೈಗೊಳ್ಳುವುದು ಸಾಧಾರಣ ವಿಚಾರವೇನಲ್ಲ. ಇದು ಸಿದ್ದರಾಮಯ್ಯ ಅವರದ್ದೇ ಮಾಸ್ಟರ್ ಪ್ಲ್ಯಾನ್ ಮತ್ತು ರಾಜಕೀಯ ತಂತ್ರಗಾರಿಕೆ ಯಾಕಾಗಿರಬಾರದು? ಎನ್ನುವ ಬಲವಾದ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ತೀವ್ರವಾಗಿ ಮೂಡಿದೆ.
ಒಳಗೆ ನಡೆದ ಆಟವೇನು?: ರಾಜಕೀಯ ವಲಯದ ಸೂಕ್ಷ್ಮ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷವಾದ ಬಿಜೆಪಿಯಲ್ಲೂ ಹಳೆಯ, ಅತ್ಯಂತ ಆಪ್ತ ಹಾಗೂ ಪ್ರಭಾವಿ ಸ್ನೇಹಿತರಿದ್ದಾರೆ. ತಮ್ಮ ಕುರ್ಚಿಗೆ ಕಂಟಕ ಬಂದಾಗ ಪಕ್ಷದ ಗಡಿಗಳನ್ನು ಮೀರಿ ನಿಲ್ಲುವ ರಾಜತಾಂತ್ರಿಕ ಸ್ನೇಹ ಸಿದ್ದರಾಮಯ್ಯ ಅವರದ್ದು. ಇದೇ ಸ್ನೇಹದ ಬಲವನ್ನು ಬಳಸಿಕೊಂಡು, ಹೈಕಮಾಂಡ್ಗೆ ಮತ್ತು ತಮಗೆ ಪರ್ಯಾಯವಾಗಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಎದುರಾಳಿ ಬಣಕ್ಕೆ ಟಾಂಗ್ ನೀಡಲು ಸಿದ್ದರಾಮಯ್ಯ ಇಂತಹದ್ದೊಂದು ವಿಲಕ್ಷಣ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
“ನಾಲ್ಕು ದಿನ ಕಳೆದ ಮೇಲಾದರೂ ರಾಜೀನಾಮೆ ಕೊಡಲೇಬೇಕಲ್ಲವೇ, ನಾಲ್ಕು ದಿನ ತಡೆದರೆ ಏನು ಲಾಭ?” ಎಂದು ಮೇಲ್ನೋಟಕ್ಕೆ ಕೆಲವರು ಸರಳವಾಗಿ ಪ್ರಶ್ನಿಸಬಹುದು. ಆದರೆ, ರಾಜಕೀಯದಲ್ಲಿ 24 ಗಂಟೆಗಳೇ ಒಂದು ಯುಗದಂತೆ. ಈ ನಾಲ್ಕು ದಿನಗಳ ಸುದೀರ್ಘ ಅವಧಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆಯ ದಿಕ್ಕನ್ನು ಬದಲಿಸಬಹುದು, ಶಾಸಕರನ್ನು ಒಗ್ಗೂಡಿಸಬಹುದು ಅಥವಾ ಕಾನೂನು ಚೌಕಟ್ಟಿನಲ್ಲಿ ಕೋರ್ಟ್ ಮೂಲಕ ಬೇರೆ ಯಾವುದೇ ರೀತಿಯ ದಿಢೀರ್ ತಡೆಯಾಜ್ಞೆ ತರುವಂತಹ ಬೆಳವಣಿಗೆಗಳು ನಡೆದರೂ ಅಚ್ಚರಿ ಇಲ್ಲ! ತಮಗೆ ಸಿಕ್ಕಿರುವ ಈ ನಾಲ್ಕು ದಿನಗಳ ಕಾಲಾವಕಾಶವನ್ನು ಸಿದ್ದರಾಮಯ್ಯ ತಮ್ಮ ಪರವಾಗಿ ದಾಳ ಉರುಳಿಸಲು ಬಳಸಿಕೊಳ್ಳಲಿದ್ದಾರೆ. ಹೀಗಾಗಿಯೇ ಇಂದು ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಸ್ಪಷ್ಟವಾಗಿದೆ.
ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಹೆಣೆದ ‘ಸೈಲೆಂಟ್ ಮಾಸ್ಟರ್ ಸ್ಟ್ರೋಕ್’!
ಸಿದ್ದರಾಮಯ್ಯನವರು (Siddaramaiah) ಒಂದು ಕಡೆ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಕಾಲಹರಣದ ತಂತ್ರ ರೂಪಿಸುತ್ತಿದ್ದರೆ, ಅತ್ತ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಿದ್ದು ಆಪ್ತ ಬಣ ತಾವಾಗಿಯೇ ಬೇರೆ ಏನೋ ಗೇಮ್ ಪ್ಲ್ಯಾನ್ ನಡೆಸಿದೆ ಎನ್ನುವ ಗುಸುಗುಸು ಕಾಂಗ್ರೆಸ್ ಪಾಳಯವನ್ನು ಒಳಗೊಳಗೇ ನಡುಗಿಸುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಮತ್ತು ಆ ಜಾಗದಲ್ಲಿ ಡಿ.ಕೆ. ಶಿವಕುಮಾರ್ ಬಂದು ಕೂರುವುದು ಸತೀಶ್ ಜಾರಕಿಹೊಳಿ ಸೇರಿದಂತೆ ಸಚಿವ ಸಂಪುಟದ ಪ್ರಮುಖ ಅಹಿಂದ ಸಚಿವರಿಗೆ ಹಾಗೂ ಶಾಸಕರಿಗೆ ಸುತಾರಾಂ ಇಷ್ಟವಿಲ್ಲ ಎನ್ನುವುದು ಜಗಜ್ಜಾಹೀರಾದ ಸತ್ಯ.
ಮೂಲಗಳು ನೀಡಿರುವ ಅತ್ಯಂತ ಪ್ರಮುಖ ಮಾಹಿತಿ ಪ್ರಕಾರ, ಸತೀಶ್ ಜಾರಕಿಹೊಳಿ ಈಗಾಗಲೇ ಕನಿಷ್ಠ 32 ಕೈ ಶಾಸಕರ ಸಹಿ ಸಂಗ್ರಹಣೆ ಮಾಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಕೇಳಿಬಂದಿದೆ. ಈ ಸಹಿ ಸಂಗ್ರಹದ ಒಕ್ಕಣೆಯಲ್ಲಿ ಏನಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿದ್ದರೂ, ಸಿದ್ದರಾಮಯ್ಯನವರನ್ನು ಬದಲಾಯಿಸಬಾರದು ಅಥವಾ ಬದಲಾಯಿಸಿದರೆ ನಾಯಕತ್ವ ಯಾರಿಗೆ ಸಿಗಬೇಕು ಎಂಬ ಷರತ್ತುಗಳಿರಬಹುದು. ಈ ಸಹಿ ಸಂಗ್ರಹದ ತಂತ್ರಕ್ಕೆ ಸ್ವತಃ ಸಿದ್ದರಾಮಯ್ಯ ಒಪ್ಪಿಲ್ಲ, ಕಾನೂನು ಹೋರಾಟದ ಮೂಲಕವೇ ಹೋಗೋಣ ಎಂದು ಹೇಳಿದ್ದಾರೆ ಎನ್ನುವ ಮಾತುಗಳಿದ್ದರೂ, ಹೈಕಮಾಂಡ್ನ ಏಕಪಕ್ಷೀಯ ನಿರ್ಧಾರಕ್ಕೆ ಮತ್ತು ಡಿಕೆಶಿ ಬಣದ ಒತ್ತಡಕ್ಕೆ ಬ್ರೇಕ್ ಹಾಕಲು ಸಿದ್ದು ಆಪ್ತರು ಈ ಪ್ರತ್ಯೇಕ ಚದುರಂಗದಾಟ ಆಡಿದ್ದಾರೆ. ಒಂದು ವೇಳೆ ಇಂದು ಕರೆಯಲಾಗಿರುವ ಮಹತ್ವದ ‘ಬ್ರೇಕ್ ಫಾಸ್ಟ್ ಮೀಟಿಂಗ್’ಗೆ ಸತೀಶ್ ಜಾರಕಿಹೊಳಿ ಗೈರಾದರೆ ಕಾಂಗ್ರೆಸ್ ಸರ್ಕಾರಕ್ಕೆ ಗಂಡಾಂತರ ಫಿಕ್ಸ್ ಅಂತಲೇ ಹೇಳಬಹುದು.
‘ನಾಳೆ ಕಾದು ನೋಡಿ’ ಮತ್ತು ಎಂ.ಬಿ. ಪಾಟೀಲ್ ಖಡಕ್ ಉತ್ತರ!
ಈ ಎಲ್ಲಾ ಊಹಾಪೋಹಗಳಿಗೆ ಮತ್ತು ತಂತ್ರಗಾರಿಕೆಗೆ ಪುಷ್ಟಿ ನೀಡುವಂತೆ ಸತೀಶ್ ಜಾರಕಿಹೊಳಿ ಅವರ ಇತ್ತೀಚಿನ ನಡವಳಿಕೆಗಳು ಕಂಡುಬರುತ್ತಿವೆ. ಅವರು ಮಾಧ್ಯಮಗಳ ಮುಂದೆ ಎಲ್ಲೂ ಸಿಎಂ ರಾಜೀನಾಮೆ ಕೊಡ್ತಾರೆ ಅಂತ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ, ಮುಗುಮ್ಮಾಗಿ ನಗುತ್ತಾ ಮಾಧ್ಯಮಗಳ ಮುಂದೆ “ನಾಳೆ ಕಾದು ನೋಡಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು” ಅಂತಲೇ ನಿಗೂಢವಾಗಿ ಹೇಳುತ್ತಿದ್ದಾರೆ. ಇದು ಡಿಕೆಶಿ ಕ್ಯಾಂಪ್ನ ಆತಂಕವನ್ನು ಇಮ್ಮಡಿಗೊಳಿಸಿದೆ.
ಇನ್ನು ಸಿದ್ದು ಬಣದ ಮತ್ತೊಬ್ಬ ಅತ್ಯಂತ ಪ್ರಭಾವಿ ಹಾಗೂ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆಗಳು ಈ ಸೈಲೆಂಟ್ ಗೇಮ್ ಪ್ಲ್ಯಾನ್ಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿವೆ. ಮುಖ್ಯಮಂತ್ರಿಗಳ ರಾಜೀನಾಮೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ ಮತ್ತು ಊಹಾಪೋಹ ಅಂತಲೇ ನಿನ್ನೆ ಮಧ್ಯಾಹ್ನ ಎಂ.ಬಿ. ಪಾಟೀಲ್ ಕಡಾಖಂಡಿತವಾಗಿ ಹೇಳಿದ್ದರು. “ನಾಳೆ ಈ ಹೊತ್ತಿಗೆ ಅಂದರೆ ಇಂದು ಕೂಡ ನೀವು ಇದೇ ಉತ್ತರ ನೀಡುತ್ತೀರಾ?” ಎಂದು ಮಾಧ್ಯಮದವರು ಕೆಣಕಿದಾಗಲೂ, ಎಂ.ಬಿ. ಪಾಟೀಲ್ ಯಾವುದೇ ಅಳುಕಿಲ್ಲದೇ, ಅತ್ಯಂತ ಆತ್ಮವಿಶ್ವಾಸದಿಂದ “ಹೌದು, ನಾಳೆಯೂ ನಾನೇ ಸಿಎಂ ಸಿದ್ದರಾಮಯ್ಯ ಪರವಾಗಿ ಇದೇ ಉತ್ತರ ನೀಡುತ್ತೇನೆ” ಅಂತಲೇ ಉತ್ತರಿಸಿದ್ದಾರೆ. ಹಿರಿಯ ಸಚಿವರೊಬ್ಬರು ಇಷ್ಟು ಸಾರ್ವಜನಿಕವಾಗಿ ಖಡಕ್ ಆಗಿ ನಿಲ್ಲುತ್ತಿದ್ದಾರೆ ಎಂದರೆ, ತೆರೆಮರೆಯ ಸೈಲೆಂಟ್ ಗೇಮ್ ಪ್ಲ್ಯಾನ್ ಎಷ್ಟು ಭದ್ರವಾಗಿ ಮತ್ತು ವ್ಯವಸ್ಥಿತವಾಗಿ ಹೆಣೆಯಲ್ಪಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಡಿಕೆಶಿ ಮನೆಯಲ್ಲಿ ನೀರವ ಮೌನ ಆವರಿಸಿದ್ದೇಕೆ?
ಬೆಳಗಿನಿಂದಲೇ ಮುಖ್ಯಮಂತ್ರಿ ಪಟ್ಟ ತಮಗೆ ಸಿಗಲಿದೆ, ಹೈಕಮಾಂಡ್ ಹಸಿರು ನಿಶಾನೆ ನೀಡಿದೆ ಎಂದು ಉತ್ಸಾಹದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರ ನಿವಾಸದ ಸುತ್ತ ಈಗ ದಿಢೀರ್ ಶಾಂತತೆ ಮತ್ತು ನೀರವ ಮೌನ ಆವರಿಸಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ವಿಳಂಬವಾಗುತ್ತಿರುವುದು, ರಾಜ್ಯಪಾಲರ ಗೈರುಹಾಜರಿ ಮತ್ತು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿರುವ 32 ಶಾಸಕರ ಸಹಿ ಸಂಗ್ರಹದ ವರದಿಗಳು ಡಿಕೆಶಿ ಕ್ಯಾಂಪ್ ತಲುಪುತ್ತಿದ್ದಂತೆ ಅಲ್ಲಿನ ಸಚಿವರು ಮತ್ತು ಶಾಸಕರು ಸದ್ದಿಲ್ಲದೆ ಜಾಗ ಖಾಲಿ ಮಾಡುತ್ತಿದ್ದಾರೆ. ಹೈಕಮಾಂಡ್ ಮನಸ್ಸು ಮಾಡಿದರೂ ಸಿದ್ದರಾಮಯ್ಯ ಬಣವನ್ನು ಎದುರಿಸಿ ತಕ್ಷಣಕ್ಕೆ ಅಧಿಕಾರ ಹಿಡಿಯುವುದು ಸುಲಭವಲ್ಲ ಎಂಬ ಸತ್ಯ ಈಗ ಮನವರಿಕೆಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಿದ್ದರಾಮಯ್ಯನವರ ಸೈಲೆಂಟ್ ನಡೆ ಮತ್ತು ಅವರ ಆಪ್ತರ ವೈಲೆಂಟ್ ತಂತ್ರಗಾರಿಕೆ ಇಡೀ ಕೈ ಪಾಳಯವನ್ನು ಕಂಗಾಲು ಮಾಡಿದೆ. ‘ಹಳೆ ಹುಲಿ’ಯ ಈ ಅದೃಶ್ಯ ರಾಜಕೀಯ ಜಾಲವನ್ನು ಭೇದಿಸಲು ಸಾಧ್ಯವಾಗದೆ ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಕ್ಯಾಂಪ್ ಮೌನಕ್ಕೆ ಶರಣಾಗಿದೆ. ಹೈಕಮಾಂಡ್ ಕಣ್ಣು ನೆಟ್ಟಿರುವ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬರೀ ಉಪಾಹಾರ ಕೂಟವಾಗಿ ಉಳಿಯದೆ, ಶಕ್ತಿ ಪ್ರದರ್ಶನದ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ. ಮುಂದಿನ ನಾಲ್ಕು ದಿನಗಳಲ್ಲಿ ಕರ್ನಾಟಕ ರಾಜಕಾರಣ ಯಾವ ಮಹಾ ತಿರುವು ಪಡೆದುಕೊಳ್ಳಲಿದೆ ಮತ್ತು ಈ ಮಹಾ ಚದುರಂಗದಾಟದಲ್ಲಿ ಅಂತಿಮವಾಗಿ ಯಾರಿಗೆ ‘ಚೆಕ್ ಮೇಟ್’ ಸಿಗಲಿದೆ ಎಂಬುದೇ ಸದ್ಯದ ಮಹಾ ಕುತೂಹಲ!

