Friday, September 11, 2026
Home ವಿಶ್ಲೇಷಣೆ RB Timmapur: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ...

RB Timmapur: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ ‘ಟಿಕೆಟ್’ ಕಂಠಕವೂ ಬಂತು!

RB Timmapur: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ 'ಟಿಕೆಟ್' ಕಂಠಕವೂ ಬಂತು!

ಬಾಗಲಕೋಟೆ ಜಿಲ್ಲೆಯ ಮುಧೋಳ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹೊತ್ತಿಕೊಂಡಿದೆ. 2028ರ ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶ ಇರುವಾಗಲೇ, ಕೇಸರಿ ಪಡೆ ಕ್ಷೇತ್ರದಲ್ಲಿ ತಳಮಟ್ಟದಿಂದ ಸಜ್ಜಾಗಲು ತೊಡಗಿಸಿಕೊಂಡಿದ್ದರೆ, ಇತ್ತ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ಮಾತ್ರ ನಿಗೂಢ ಮೌನ ಆವರಿಸಿದೆ. ಈ ಮೌನದ ಕೇಂದ್ರಬಿಂದು ಬೇರಾರೂ ಅಲ್ಲ; ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ಆರ್. ಬಿ. ತಿಮ್ಮಾಪುರ (RB Timmapur). ಸದಾ ಸಚಿವ ಸ್ಥಾನದ ಗತ್ತಿನಲ್ಲಿ, ಬೆಂಬಲಿಗರ ದಂಡಿನೊಂದಿಗೆ ಅಬ್ಬರಿಸುತ್ತಿದ್ದ ದಲಿತ ಪ್ರಭಾವಿ ನಾಯಕ ತಿಮ್ಮಾಪುರ ಅವರು, ಇತ್ತೀಚಿನ ರಾಜಕೀಯ ವಿದ್ಯಮಾನಗಳ ನಂತರ ಸಂಪೂರ್ಣ ಒಂಟಿಯಾದಂತೆ ಕಾಣಿಸುತ್ತಿದ್ದಾರೆ.

ಅಧಿಕಾರದ ಗತ್ತಿನಿಂದ ದಿಢೀರ್ ‘ಸೈಲೆಂಟ್’ ಮೋಡ್!

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಆರ್. ಬಿ. ತಿಮ್ಮಾಪುರ (RB Timmapur) ಅವರಿಗೆ ಸಚಿವ ಪದವಿ ಹುಡುಕಿಕೊಂಡು ಬರುತ್ತಿತ್ತು. 2023ರ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಗೋವಿಂದ ಕಾರಜೋಳರನ್ನು ಪರಾಭವಗೊಳಿಸಿ ಸಿದ್ದರಾಮಯ್ಯ ಅವರ ಸಂಪುಟ ಸೇರಿದಾಗ ತಿಮ್ಮಾಪುರ ಅವರ ರಾಜಕೀಯ ಖದರ್ರೇ ಬೇರೆಯಾಗಿತ್ತು. ಆದರೆ, ಯಾವಾಗ ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಹಾಗೂ ಡಿ. ಕೆ. ಶಿವಕುಮಾರ್ ಸಂಪುಟ ಸೇರ್ಪಡೆಯ ಕಸರತ್ತುಗಳು ನಡೆದವೋ, ಅಲ್ಲಿ ತಿಮ್ಮಾಪುರ ಅವರ ಪ್ರಯತ್ನಗಳೆಲ್ಲವೂ ನೀರುಪಾಲಾದವು. ಇಂದು ಅವರು ಸಚಿವ ಸ್ಥಾನವನ್ನೂ ಕಳೆದುಕೊಂಡು ಮಾಜಿ ಎನಿಸಿಕೊಂಡಿದ್ದಾರೆ.

ಈ ದಿಢೀರ್ ಹಿನ್ನಡೆಗೆ ಕಾಂಗ್ರೆಸ್‌ನ ಆಂತರಿಕ ರಾಜಕಾರಣ ಕಾರಣವೋ ಅಥವಾ ಅವರ ಸುತ್ತಲಿನವರೇ ಮಾಡಿದ ಸಂಚೋ ಎಂಬ ಚರ್ಚೆ ಈಗ ಗಲ್ಲಿಗಲ್ಲಿಗಳಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!

ವೈರಲ್ ಆಡಿಯೋ ಮತ್ತು ಆಪ್ತರೇ ತೋಡಿದ ತಾಣ!

ಆರ್. ಬಿ. ತಿಮ್ಮಾಪುರ (RB Timmapur) ಅವರ ರಾಜಕೀಯ ಜೀವನದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನಮಠ ಹಾಗೂ ಅವರ ನಡುವೆ ನಡೆದ ಆಡಿಯೋ ಲೀಕ್ ಪ್ರಕರಣ. ಪೇಮೆಂಟ್ ಕೋಟಾದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಿದೆ ಎಂಬ ವಿಚಾರವನ್ನು ಒಳಗೊಂಡಿದ್ದ ಈ ಆಡಿಯೋ ಮಾಧ್ಯಮಗಳಲ್ಲಿ ವಾರಗಟ್ಟಲೆ ಪ್ರಸಾರವಾಗಿ ಬಿಜೆಪಿಗೆ ದೊಡ್ಡ ಅಸ್ತ್ರವನ್ನೇ ಒದಗಿಸಿಕೊಟ್ಟಿತ್ತು.

ಆಪ್ತರೇ ಹೆಣೆದ ಆಡಿಯೋ ಜಾಲ:

ಈ ಲೀಕ್ ಆದ ಆಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಸ್ವತಃ ತಿಮ್ಮಾಪುರ ಅವರ ವಾಹನದಲ್ಲೇ ರೆಕಾರ್ಡ್ ಆಗಿದೆ ಎನ್ನಲಾಗುತ್ತಿದೆ! ಈ ಬಗ್ಗೆ ಹಿರಿಯ ನಾಯಕ ನಂಜಯ್ಯನಮಠ ಅವರೂ ಕೂಡ ತಮ್ಮ ಸಂದೇಹ ವ್ಯಕ್ತಪಡಿಸಿದ್ದರು. ಹೀಗಾಗಿ, ತಿಮ್ಮಾಪುರ ಅವರ ಅತ್ಯಂತ ಆಪ್ತರೇ ಸ್ವಹಿತಾಸಕ್ತಿಗಾಗಿ ಈ ಆಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡಿರಬಹುದು ಎನ್ನುವ ಅನುಮಾನ ರಾಜಕೀಯ ವಲಯದಲ್ಲಿ ತೀವ್ರವಾಗಿ ದಟ್ಟವಾಗಿದೆ

ಈ ಘಟನೆಯ ನಂತರ ಜಿಲ್ಲಾ ಕಾಂಗ್ರೆಸ್‌ನ ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ಇಬ್ಬರೂ ನಾಯಕರ ವಿರುದ್ಧ ತಿರುಗಿಬಿದ್ದರು. ಆದರೆ, ಅತ್ಯಂತ ಹಿರಿಯ ನಾಯಕರಾದ ನಂಜಯ್ಯನಮಠ ಅವರು ತಕ್ಷಣವೇ ಎಚ್ಚೆತ್ತುಕೊಂಡು ಜಿಲ್ಲಾ ಕೇಂದ್ರದಲ್ಲಿದ್ದುಕೊಂಡೇ ಕಾರ್ಯಕರ್ತರೊಂದಿಗೆ ಬೆರೆತು, ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಆದರೆ, ತಿಮ್ಮಾಪುರ ಮಾತ್ರ ಆ ಘಟನೆಯಿಂದ ಮುಕ್ತರಾಗಲು ಸಾಧ್ಯವಾಗಲೇ ಇಲ್ಲ. ಅವರ ಸುತ್ತಲಿದ್ದ ‘ಕಿವಿಮಾತು ಹೇಳುವ’ ಆಪ್ತರು ಹಾಗೂ ಸ್ವಹಿತಾಸಕ್ತಿಯ ಕೆಲವು ಪತ್ರಕರ್ತರ ಮಾತುಗಳನ್ನು ನಂಬಿ ಅವರು ದೂರ ಉಳಿಯುವಂತಾಯಿತು.

ಒಬ್ಬ ಸಚಿವ ಅಥವಾ ಜನಪ್ರತಿನಿಧಿಯಾದವನು ತನ್ನ ಸುತ್ತ ನಿಸ್ವಾರ್ಥಿ ಹಾಗೂ ಬುದ್ಧಿವಂತ ಸಲಹೆಗಾರರನ್ನು ಇಟ್ಟುಕೊಳ್ಳಬೇಕು. ಆದರೆ, ತಿಮ್ಮಾಪುರ ಅವರು ಎಡವಿದ್ದೇ ಇಲ್ಲಿಯೇ…! ಸಚಿವರಾಗಿದ್ದಾಗ ಅವರಿಂದ ಸಾಧ್ಯವಾದಷ್ಟು ಲಾಭ ಪಡೆದುಕೊಂಡ ಕೆಲವು ಕೆಟ್ಟ ಹುಳುಗಳು, ಅವರನ್ನೇ ದಾರಿ ತಪ್ಪಿಸಿದವು. ಸಚಿವರ ಅಧಿಕಾರದ ದಿನಗಳಲ್ಲಿ ‘ಸಾಹೇಬ್ರೇ ಎಲ್ಲವೂ ಸರಿ ಇದೆ’ ಎಂದು ಹೊಗಳಿ ನೆತ್ತಿಗೇರಿಸಿದ ಅದೇ ಸ್ವಾರ್ಥಿ ಬಳಗ (ಆಪ್ತರು ಹಾಗೂ ಸ್ವಹಿತಾಸಕ್ತಿಯ ಕೆಲವು ಪತ್ರಕರ್ತರು), ಇಂದು ಪರಿಸ್ಥಿತಿ ಕೈಮೀರಿದಾಗ ಅವರನ್ನು ಒಂಟಿ ಮಾಡಿದೆ. ಇವರೇ ಮಾಡಿದ ಸ್ವಯಂಕೃತ ಅಪರಾಧಗಳಿಂದಾಗಿ ತಿಮ್ಮಾಪುರ ಅವರು ಸಂಪುಟದಲ್ಲಿ ಸ್ಥಾನ ಕಳೆದುಕೊಳ್ಳಬೇಕಾಯಿತು.

2028ಕ್ಕೆ ಟಿಕೆಟ್ ಸಿಗುವುದು ಡೌಟ್?

ಮತ್ತೊಂದೆಡೆ, ಚಿತ್ರದುರ್ಗ ಸಂಸದರಾಗಿ ಆಯ್ಕೆಯಾಗಿದ್ದರೂ ಹಳೆ ಕ್ಷೇತ್ರ ಮುಧೋಳದ ಮೇಲೆ ಕಣ್ಣಿಟ್ಟಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮುಖಂಡರ ಸಭೆಗಳನ್ನು ನಡೆಸಿ ಕ್ಷೇತ್ರದಲ್ಲಿ ಅಬ್ಬರದ ಚಟುವಟಿಕೆ ಆರಂಭಿಸಿದ್ದಾರೆ. ಕಳೆದುಕೊಂಡ ಕ್ಷೇತ್ರವನ್ನು 2028ರಲ್ಲಿ ವಾಪಸ್ ಪಡೆಯಲು ಕೇಸರಿ ಪಡೆ ತಳಮಟ್ಟದಿಂದ ಸಜ್ಜಾಗುತ್ತಿದೆ. ಕಾರಜೋಳರ ಈ ಅಬ್ಬರದ ಮುಂದೆ ತಿಮ್ಮಾಪುರ ಅವರು ತೀರಾ ಸೈಲೆಂಟ್ ಆಗಿರುವುದು ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ರಾಜಕೀಯ ಪಂಡಿತರ ಪ್ರಕಾರ, ಮುಂಬರುವ 2028ರ ಚುನಾವಣೆಯಲ್ಲಿ ತಿಮ್ಮಾಪುರ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದೇ ದೊಡ್ಡ ಅನುಮಾನ ಎನ್ನಲಾಗುತ್ತಿದೆ. ಪಕ್ಷದಲ್ಲೇ ಅವರ ಪರ ವಹಿಸುವವರ ಸಂಖ್ಯೆ ಕ್ಷೀಣಿಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಾದರೂ ಮಾಜಿ ಸಚಿವರು ಎಚ್ಚೆತ್ತುಕೊಳ್ಳಬೇಕಿದೆ. ಈಗಲೂ ಅದೇ ಸವಕಲು ನಾಣ್ಯಗಳನ್ನು, ಸ್ವಾರ್ಥಿ ಆಪ್ತರನ್ನೇ ಸುತ್ತಲೂ ಇಟ್ಟುಕೊಂಡು ಓಡಾಡಿದರೆ ಮುಂಬರುವ ದಿನಗಳಲ್ಲಿ ಮತ್ತೆ ಭಾರಿ ರಾಜಕೀಯ ಪೆಟ್ಟು ತಿನ್ನುವುದು ಖಚಿತ.

ಸಿದ್ದರಾಮಯ್ಯ ಆಪ್ತನ ಸುದೀರ್ಘ ರಾಜಕೀಯ ಪ್ರಯಾಣ

ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ದಲಿತ ನಾಯಕ ಆರ್. ಬಿ. ತಿಮ್ಮಾಪುರ ಅವರದ್ದು ಸಣ್ಣ ರಾಜಕೀಯ ಇತಿಹಾಸವೇನಲ್ಲ:

  • 1989: ಮುಧೋಳ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ.
  • 1999: ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಎಪಿಎಂಸಿ ಸಚಿವರಾಗಿ ಕಾರ್ಯನಿರ್ವಹಣೆ.
  • 2002-2003: ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.
  • 2016-2017: 2013ರ ಸೋಲಿನ ನಂತರವೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, 2017ರಲ್ಲಿ ಅಬಕಾರಿ, ಸಕ್ಕರೆ ಹಾಗೂ ಮೀನುಗಾರಿಕೆ ಖಾತೆ ಸಚಿವರನ್ನಾಗಿ ಮಾಡಿತು.
  • 2023: ಸಾಂಪ್ರದಾಯಿಕ ಎದುರಾಳಿ ಕಾರಜೋಳರನ್ನು ಸೋಲಿಸಿ ಮತ್ತೆ ಸಂಪುಟ ಸೇರಿದರು.

ಇದನ್ನೂ ಓದಿ: ​’ಮನೆ ಮಗ’ನ ಕಮೀಷನ್ ದಂಧೆಗೆ ಮುಧೋಳ ಜನ ತತ್ತರ! ಸಚಿವರ ವಿರುದ್ಧ ಅರುಣ್ ಕಾರಜೋಳ ಗರ್ಜನೆ!

ಯಾರು ಗೆದ್ದರೂ ಸಚಿವ ಪಟ್ಟ ಎನ್ನುವ ಹೆಗ್ಗಳಿಕೆ ಹೊಂದಿರುವ ಮುಧೋಳ ಕ್ಷೇತ್ರದಲ್ಲಿ ತಿಮ್ಮಾಪುರ ಅವರ ಈ ಇತಿಹಾಸವೇ ಇಂದಿನ ಸ್ಥಿತಿಗೆ ವೈರುಧ್ಯವಾಗಿ ನಿಂತಿದೆ. ಸೋತಾಗಲೂ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ನಾಯಕ, ಇಂದು ಗೆದ್ದು ಶಾಸಕರಾಗಿದ್ದರೂ ಸಚಿವ ಸ್ಥಾನವನ್ನೂ ಕಳೆದುಕೊಂಡು, ಸ್ವಪಕ್ಷೀಯರಿಂದಲೇ ಅಂತರ ಕಾಯ್ದುಕೊಳ್ಳುವ ಹಂತಕ್ಕೆ ತಲುಪಿರುವುದು ಶೋಚನೀಯ.

ಒಟ್ಟಾರೆಯಾಗಿ, ಮುಧೋಳ ಕ್ಷೇತ್ರದಲ್ಲಿ 2028ರ ಜಂಗಿ ಕುಸ್ತಿಗೆ ಕಮಲ ಪಡೆ ಈಗಿನಿಂದಲೇ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನ ಸಾರಥಿ ತಿಮ್ಮಾಪುರ ಅವರು ಆಪ್ತರ ಜಾಲದಲ್ಲಿ ಸಿಲುಕಿ ಕೈಚೆಲ್ಲಿ ಕುಳಿತಂತಿದೆ. ಈ ಸವಕಲು ನಾಣ್ಯಗಳನ್ನು ಬದಿಗೊತ್ತಿ ಅವರು ಮತ್ತೆ ಫೀಲ್ಡ್‌ಗೆ ಇಳಿಯುತ್ತಾರೋ ಅಥವಾ ಹಿನ್ನಡೆ ಅನುಭವಿಸುತ್ತಾರೋ ಕಾದು ನೋಡಬೇಕಿದೆ.

(ಗಮನಿಸಿ: ಇತ್ತೀಚೆಗೆ ಬಾಗಲಕೋಟೆ ಉಪಚುನಾವಣೆಯಲ್ಲಿ ಗೆಲುವು ಕಂಡ ಉಮೇಶ್ ಮೇಟಿ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರ ಸುತ್ತಲೂ ಹೆಣೆದುಕೊಂಡಿರುವ ರಾಜಕೀಯ ತಂತ್ರಗಳು ಮತ್ತು ಅವರ ಹಾದಿಯ ಕುರಿತು ಮುಂದಿನ ಸುದೀರ್ಘ ಲೇಖನದಲ್ಲಿ ವಿಶ್ಲೇಷಿಸಲಾಗುವುದು…)

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...