Homeವಿಶ್ಲೇಷಣೆDharwad: ಕಲಬುರ್ಗಿ ಸಾವಿಗೆ ಮೌನ, ರೌಡಿ ಶೀಟರ್‌ ಕೊಲೆ ಕೇಸ್‌ಗೆ ಬಿಜೆಪಿಯಿಂದ ಫಂಡಿಂಗ್? ಇದು ನ್ಯಾಯವೋ...

Dharwad: ಕಲಬುರ್ಗಿ ಸಾವಿಗೆ ಮೌನ, ರೌಡಿ ಶೀಟರ್‌ ಕೊಲೆ ಕೇಸ್‌ಗೆ ಬಿಜೆಪಿಯಿಂದ ಫಂಡಿಂಗ್? ಇದು ನ್ಯಾಯವೋ ಅಥವಾ ವಿನಯ್ ಕುಲಕರ್ಣಿ ವಿರುದ್ಧದ ಸ್ಕ್ರಿಪ್ಟೆಡ್ ಸಂಚೋ?

ಧಾರವಾಡ (Dharwad): ಕರ್ನಾಟಕದ ರಾಜಕಾರಣ ಮತ್ತು ಸಾರ್ವಜನಿಕ ಜೀವನ ಇಂದು ಅತ್ಯಂತ ಸಂಕೀರ್ಣವಾದ ತಿರುವಿನಲ್ಲಿದೆ. ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಇರುವ ವೈಚಾರಿಕ ಧ್ವನಿಗಳು ಹತ್ತಿಕ್ಕಲ್ಪಡುತ್ತಿವೆ, ಆದರೆ ಕ್ರಿಮಿನಲ್ ಹಿನ್ನೆಲೆಯ ಘಟನೆಗಳು ರಾಜಕೀಯ ಲಾಭದ ಬಂಡವಾಳವಾಗುತ್ತಿವೆ. 2015 ಮತ್ತು 2016ರಲ್ಲಿ ನಡೆದ ಎರಡು ಪ್ರಮುಖ ಹತ್ಯೆಗಳು ಇಂದು ನಾಡಿನ ನ್ಯಾಯಾಂಗ ಮತ್ತು ರಾಜಕೀಯ ವ್ಯವಸ್ಥೆಯ ದ್ವಂದ್ವ ನೀತಿಯನ್ನು ಬೆತ್ತಲೆ ಮಾಡಿ ನಿಲ್ಲಿಸಿವೆ. ಒಂದು ಕಡೆ ನಾಡಿನ ಶ್ರೇಷ್ಠ ಸಂಶೋಧಕ, ಪ್ರೊ. ಎಂ.ಎಂ. ಕಲಬುರ್ಗಿಯವರ ವೈಚಾರಿಕ ಹತ್ಯೆ, ಮತ್ತೊಂದು ಕಡೆ ರೌಡಿ ಶೀಟರ್ ಯೋಗೇಶ್ ಗೌಡನ ಕೊಲೆ. ಈ ಎರಡೂ ಪ್ರಕರಣಗಳನ್ನು ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರು ನೋಡುತ್ತಿರುವ ದೃಷ್ಟಿಕೋನವೇ ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಕಲಬುರ್ಗಿ: ಒಂದು ಅಡಗಿಸಲಾದ ಸತ್ಯದ ಧ್ವನಿ

ಆಗಸ್ಟ್ 30, 2015. ಧಾರವಾಡದ (Dharwad) ಕಲ್ಯಾಣ ನಗರದ ಮನೆಯಲ್ಲಿ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿಯವರನ್ನು ಹಂತಕರು ಗುಂಡಿಟ್ಟು ಕೊಂದರು. ಕಲಬುರ್ಗಿಯವರು ಕೇವಲ ಒಬ್ಬ ಸಾಹಿತಿಯಾಗಿರಲಿಲ್ಲ; ಅವರು ಬಸವಣ್ಣನವರ ಆದರ್ಶಗಳನ್ನು, ಶರಣರ ವಿಚಾರಧಾರೆಗಳನ್ನು ಸಮಾಜದ ಮೂಲೆ ಮೂಲೆಗೆ ತಲುಪಿಸಿದವರು. ಸನಾತನ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅಂಧಶ್ರದ್ಧೆಗಳನ್ನು ವೈಚಾರಿಕವಾಗಿ ಎದುರಿಸಿದವರು. ಯಾವಾಗ ಹಂತಕರಿಗೆ ಅವರ ವಿಚಾರಗಳನ್ನು ತರ್ಕದಿಂದ ಎದುರಿಸಲು ಸಾಧ್ಯವಾಗಲಿಲ್ಲವೋ, ಅಂದು ‘ಹೇಡಿಗಳು’ ಅಸ್ತ್ರ ಹಿಡಿದರು.

ಈ ಹತ್ಯೆಯ ಹಿಂದೆ ಒಂದು ನಿರ್ದಿಷ್ಟ ವಿಚಾರಧಾರೆಯ ‘ಕೇಸರಿ ಪಡೆಯ’ ಸಂಚು ಇರುವುದು ಜಗತ್ತಿಗೇ ತಿಳಿದ ವಿಷಯ. ಆದರೆ, ಈ ಹತ್ಯೆ ನಡೆದು ಇಷ್ಟು ವರ್ಷಗಳಾದರೂ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿದೆಯೇ? ಇಲ್ಲ. ಆಗಿನಿಂದ ಇಂದಿನವರೆಗೂ ಬಿಜೆಪಿಯ ಪ್ರಮುಖ ನಾಯಕರಾದ ಪ್ರಹ್ಲಾದ್ ಜೋಶಿಯಾಗಲಿ ಅಥವಾ ಜಗದೀಶ್ ಶೆಟ್ಟರ್ ಆಗಲಿ ಈ ಬಗ್ಗೆ ತುಟಿ ಬಿಚ್ಚಿಲ್ಲ. ಇವರ ಕಣ್ಣಿಗೆ ಒಬ್ಬ ಮೇರು ಸಾಹಿತಿಯ ಹತ್ಯೆ ದೊಡ್ಡ ವಿಷಯವಾಗಿ ಕಾಣಲೇ ಇಲ್ಲ. ಏಕೆಂದರೆ, ಕಲಬುರ್ಗಿಯವರ ವಿಚಾರಗಳು ಇವರ ರಾಜಕೀಯ ಅಜೆಂಡಾಕ್ಕೆ ಪೂರಕವಾಗಿರಲಿಲ್ಲ.

ಇದನ್ನೂ ಓದಿ: Vinay Kulkarni: ಸಿಬಿಐ ತನಿಖೆಯೋ ಅಥವಾ ಬಿಜೆಪಿಯ ಸ್ಕ್ರಿಪ್ಟೋ? ಹಿರಿಯ ವಕೀಲ ಬಾಲನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

ಯೋಗೇಶ್ ಗೌಡ: ರೌಡಿ ಶೀಟರ್‌ನ ಪಟ್ಟಾಭಿಷೇಕ!

ಕಲಬುರ್ಗಿಯವರ ಹತ್ಯೆಯಾದ ಕೇವಲ ಹತ್ತು ತಿಂಗಳಲ್ಲಿ, ಅಂದರೆ ಜೂನ್ 15, 2016 ರಂದು ಧಾರವಾಡದಲ್ಲಿ ಯೋಗೇಶ್ ಗೌಡ ಎಂಬ ವ್ಯಕ್ತಿಯ ಕೊಲೆಯಾಗುತ್ತದೆ. ಈ ಯೋಗೇಶ್ ಗೌಡ ಯಾರು? ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಆತನೊಬ್ಬ ರೌಡಿ ಶೀಟರ್ ಆಗಿದ್ದವನು. ಬಡ ರೈತರ ಭೂಮಿಯನ್ನು ಕಬಳಿಸಿದ ಆರೋಪ, ಸಾಮಾನ್ಯ ಜನರ ಮೇಲಿನ ದೌರ್ಜನ್ಯ ಮತ್ತು ಅಸಭ್ಯ ವರ್ತನೆಯ ಕಪ್ಪು ಚುಕ್ಕೆಗಳು ಆತನ ಹೆಸರಿನ ಮುಂದಿವೆ.

ಆದರೆ, ಈ ರೌಡಿಯ ಕೊಲೆಯನ್ನು ಬಿಜೆಪಿ ನಾಯಕರು ಕೈಗೆತ್ತಿಕೊಂಡ ರೀತಿ ನೋಡಿ. ಒಬ್ಬ ಮಹಾತ್ಮ ಗಾಂಧಿಯ ಕೊಲೆಯಾದಂತೆ ಬಿಂಬಿಸಿ, ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದರು. ಈ ಹೋರಾಟಕ್ಕೆ ಬಿಜೆಪಿ ನಾಯಕರೇ ದೊಡ್ಡ ಮಟ್ಟದ ‘ಫಂಡಿಂಗ್’ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಒಬ್ಬ ಸಾಹಿತಿಯ ಸಾವಿಗೆ ಮೌನ ವಹಿಸಿದವರು, ಒಬ್ಬ ರೌಡಿ ಶೀಟರ್ ಸಾವಿಗೆ ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ ಎಂದರೆ ಇವರ ಆದ್ಯತೆಗಳು ಎಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಸಿಬಿಐ ಎಂಬ ರಾಜಕೀಯ ಅಸ್ತ್ರ ಮತ್ತು ‘ಬಾಲನ್’ ಅವರ ಗಂಭೀರ ಆರೋಪ

ಇತ್ತೀಚೆಗೆ ಜನಪ್ರತಿನಿಧಿಗಳ ನ್ಯಾಯಾಲಯವು ಈ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಜೀವಾವಧಿ ಶಿಕ್ಷೆ, ಓರ್ವ ಆರೋಪಿ ಇನ್‌ಸ್ಪೆಕ್ಟರ್‌ ಚನ್ನಕೇಶವ ಟಿಂಕರಿಕರ್‌ಗೆ 7 ವರ್ಷ ಜೈಲು ಮತ್ತು ದಂಡ ವಿಧಿಸಿದೆ. ಈ ತೀರ್ಪು ಹೊರಬರುತ್ತಿದ್ದಂತೆಯೇ ಕೆಲವು ಪೇಯ್ಡ್ ಪತ್ರಕರ್ತರು ಮತ್ತು ಬಿಜೆಪಿ ಪ್ರೇರಿತ ಹೋರಾಟಗಾರರು ತಾವು ಗೆದ್ದೆವು ಎಂಬ ಅಹಂಕಾರದಲ್ಲಿ ಮೆರೆಯುತ್ತಿದ್ದಾರೆ. ಆದರೆ, ಈ ಗೆಲುವು ಶಾಶ್ವತವೇ? ಖಂಡಿತ ಇಲ್ಲ.

ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಬಾಲನ್ ಅವರು ಈ ಬಗ್ಗೆ ಅತೀ ದೊಡ್ಡ ಬಾಂಬ್ ಸಿಡಿಸಿದ್ದಾರೆ. “ಸಿಬಿಐ ಸಲ್ಲಿಸಿರುವ ತನಿಖಾ ವರದಿಯು ತನಿಖಾ ವರದಿಯಂತೆ ಇಲ್ಲ, ಬದಲಿಗೆ ಅದು ಬಿಜೆಪಿಯ ಕಚೇರಿಯಲ್ಲಿ ಬರೆದ ‘ಸ್ಕ್ರಿಪ್ಟ್’ ನಂತಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸಿಬಿಐ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಎಂಬುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಒಬ್ಬ ಕಾಂಗ್ರೆಸ್ ನಾಯಕನನ್ನು ರಾಜಕೀಯವಾಗಿ ಮುಗಿಸಲು, ಕೇಂದ್ರದ ಅಧಿಕಾರ ಬಳಸಿ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆರೋಪದಲ್ಲಿ ಹುರುಳಿಲ್ಲವೇ?

ಇದನ್ನೂ ಓದಿ: Vinay Kulkarni ಕೊಲೆಗಾರನಲ್ಲ, ಪಿತೂರಿದಾರ? ಮಾಫಿ ಸಾಕ್ಷಿಯ ಮಾಸ್ಟರ್ ಸ್ಟ್ರೋಕ್ ಗೆ ಕೇಸ್‌ ಜಾತಕವೇ ಬದಲಾಯಿತೇ?

ಮಾಧ್ಯಮಗಳ ಎದುರು ಮೀಸೆ ತಿರುವವವರ ಅಸಲಿ ಮುಖ

ಈ ತೀರ್ಪು ಬಂದ ನಂತರ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಮುಂದೆ ತಾವು ದೊಡ್ಡ ಸತ್ಯವಂತರು ಎಂಬಂತೆ ಪೋಸ್ ಕೊಡುತ್ತಿರುವ ಹೋರಾಟಗಾರರ ಹಿನ್ನೆಲೆ ನಮಗೆ ತಿಳಿದಿದೆ. ಇವರೆಲ್ಲರೂ ಬಿಜೆಪಿಯ ಕೃಪಾಪೋಷಿತ ಮಂಡಳಿಯ ಸದಸ್ಯರೇ ಆಗಿದ್ದಾರೆ. ನ್ಯಾಯಾಲಯದ ತೀರ್ಪು ಅಂತಿಮ ಎಂದು ಸಂಭ್ರಮಿಸುತ್ತಿರುವ ಇವರಿಗೆ ತಿಳಿದಿರಲಿ, ಜನಪ್ರತಿನಿಧಿಗಳ ನ್ಯಾಯಾಲಯದ ಮೇಲೆ ಉನ್ನತ ನ್ಯಾಯಾಲಯಗಳಿವೆ. ಅಲ್ಲಿ ಈ ‘ಪೇಯ್ಡ್ ಸ್ಕ್ರಿಪ್ಟ್’ಗಳು ನಡೆಯುವುದಿಲ್ಲ.

ಬಡ ರೈತರನ್ನು ಶೋಷಿಸಿದ ಒಬ್ಬ ರೌಡಿ ಶೀಟರ್‌ಗೆ ನ್ಯಾಯ ಕೊಡಿಸಲು ಇಷ್ಟೊಂದು ಉತ್ಸಾಹ ತೋರುವ ಈ ಮಂದಿ, ಕಲಬುರ್ಗಿಯವರ ಮನೆಯಲ್ಲಿ ಅವರ ಪತ್ನಿ ಮತ್ತು ಮಕ್ಕಳು ಕಣ್ಣೀರಿಡುವಾಗ ಎಲ್ಲಿ ಹೋಗಿದ್ದರು? ಪ್ರಗತಿಪರ ಚಿಂತನೆಗಳನ್ನು ಹತ್ಯೆ ಮಾಡಿದಾಗ ಇವರ ಸಮಾಜಮುಖಿ ಕಳಕಳಿ ಎಲ್ಲಿ ಅಡಗಿತ್ತು?

ಇದನ್ನೂ ಓದಿ: Vinay Kulkarni: ಕುಲಕರ್ಣಿ ಕಾಲುಜಾರಿದ್ದೆಲ್ಲಿ? ವಿಧಿಯಾಟದ ಪೆಟ್ಟೋ ಅಥವಾ ಷಡ್ಯಂತ್ರವೋ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಬರಲಿದೆ ‘ಅಸಲಿ ಸುದ್ದಿ’ಯ ಮಹಾ ಸ್ಫೋಟ

ಯೋಗೇಶ್ ಗೌಡನ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿದೆ ಎಂದು ಬೀಗುತ್ತಿರುವವರಿಗೆ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಈ ಹೋರಾಟದ ಹಿಂದೆ ಯಾರಿದ್ದಾರೆ? ಯಾರಿಂದ ಎಷ್ಟು ಹಣ ಹರಿದು ಬಂದಿದೆ? ಯಾವ ಕಾರಣಕ್ಕೆ ಒಬ್ಬ ರೌಡಿ ಶೀಟರ್‌ನನ್ನು ಇವರು ಹೀರೋ ಮಾಡಲು ಹೊರಟಿದ್ದಾರೆ? ಎಂಬ ವಿಸ್ತಾರವಾದ ಮಾಹಿತಿಯ ಸರಣಿ ಲೇಖನವನ್ನು ನಾವು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇವೆ.

ವಿನಯ್ ಕುಲಕರ್ಣಿಯವರಂತಹ ಜನಪ್ರಿಯ ನಾಯಕನನ್ನು ರಾಜಕೀಯ ದ್ವೇಷಕ್ಕಾಗಿ ಬಲಿಪಶು ಮಾಡಲಾಗಿದೆಯೇ ಅಥವಾ ಕಾನೂನು ತನ್ನ ಹಾದಿ ಹಿಡಿದಿದೆಯೇ ಎಂಬುದು ಮೇಲ್ಮನವಿಯ ನಂತರ ಸಾಬೀತಾಗಲಿದೆ. ಅಲ್ಲಿಯವರೆಗೆ ಈ ತಾತ್ಕಾಲಿಕ ಜಯದ ಸಂಭ್ರಮ ಇರಲಿ. ಆದರೆ ನೆನಪಿರಲಿ, ಜನಸಾಮಾನ್ಯರ ನ್ಯಾಯಾಲಯವೇ ಅಂತಿಮ. ಅಲ್ಲಿ ಸತ್ಯಕ್ಕೆ ಎಂದಿದ್ದರೂ ಗೆಲುವು ಖಚಿತ.

ಕಲಬುರ್ಗಿಯವರ ವಿಚಾರಧಾರೆಗಳನ್ನು ಕೊಂದವರಿಗೆ ಶಿಕ್ಷೆಯಾಗದ ಈ ದೇಶದಲ್ಲಿ, ಒಬ್ಬ ಕ್ರಿಮಿನಲ್‌ನ ಸಾವಿಗೆ ರಾಜಕೀಯ ಬಣ್ಣ ಬಳಿದು ನ್ಯಾಯದ ಆಟವಾಡುತ್ತಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಅಣಕ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments