Sunday, October 25, 2026
Home ವಿಶ್ಲೇಷಣೆ AHINDA: ಮುಖ ಕೊಟ್ಟು ಮಾತನಾಡದ ಗುರು-ಶಿಷ್ಯರು ಒಂದಾಗ್ತಾರಾ? ತೆರೆಮರೆಯಲ್ಲಿ ಸಜ್ಜಾಯಿತು ರಾಜಿಸೂತ್ರ; ಅಹಿಂದ ಒಡಕು ಸರಿಪಡಿಸಲು...

AHINDA: ಮುಖ ಕೊಟ್ಟು ಮಾತನಾಡದ ಗುರು-ಶಿಷ್ಯರು ಒಂದಾಗ್ತಾರಾ? ತೆರೆಮರೆಯಲ್ಲಿ ಸಜ್ಜಾಯಿತು ರಾಜಿಸೂತ್ರ; ಅಹಿಂದ ಒಡಕು ಸರಿಪಡಿಸಲು ಹರಿಪ್ರಸಾದ್-ರಾಜಣ್ಣ ರಂಗಪ್ರವೇಶ!

AHINDA: ಮುಖ ಕೊಟ್ಟು ಮಾತನಾಡದ ಗುರು-ಶಿಷ್ಯರು ಒಂದಾಗ್ತಾರಾ? ತೆರೆಮರೆಯಲ್ಲಿ ಸಜ್ಜಾಯಿತು ರಾಜಿಸೂತ್ರ; ಅಹಿಂದ ಒಡಕು ಸರಿಪಡಿಸಲು ಹರಿಪ್ರಸಾದ್-ರಾಜಣ್ಣ ರಂಗಪ್ರವೇಶ!

AHINDA: ಕರ್ನಾಟಕದ ರಾಜಕೀಯ ಇತಿಹಾಸವನ್ನು ಒಮ್ಮೆ ಮಗುಚಿ ನೋಡಿದರೆ, ಇಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ. ಬದಲಿಗೆ ಶಾಶ್ವತವಾಗಿರುವುದು ‘ಅಧಿಕಾರದ ಹಸಿವು’ ಮತ್ತು ‘ರಾಜಕೀಯ ಅಸ್ತಿತ್ವದ ಭೀತಿ’ ಮಾತ್ರ! ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಹೈಡ್ರಾಮಾ, ರಾಜಕೀಯ ದಾಳಗಳ ಉರುಳಿಸುವಿಕೆ ಹಾಗೂ ಒಳಗೊಳಗೇ ಹೊಗೆಯಾಡುತ್ತಿರುವ ಬಣ ಗದ್ದಲಗಳನ್ನು ಗಮನಿಸಿದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಎನಿಸುತ್ತದೆ.

ಯಾವ ನಾಯಕರು ಒಂದಾನೊಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಕಬ್ಬಿಣದ ಕೋಟೆ’, ‘ಬಲಗೈ’ ಹಾಗೂ ‘ಅಹಿಂದ ಪಡೆ’ ಎಂದೇ ಮೆರೆದಿದ್ದರೊ, ಯಾವ ನಾಯಕರು ಸಿದ್ದರಾಮಯ್ಯ ಅವರ ಹೆಸರಿನಲ್ಲೇ ಅಧಿಕಾರ ಹಾಗೂ ಪ್ರಭಾವದ ಅನುಭವ ಪಡೆದಿದ್ದರೊ, ಅದೇ ನಾಯಕರು ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರದ ವೇಳೆ ಸಿದ್ದರಾಮಯ್ಯರಿಂದ ಮೆಲ್ಲನೆ ಕಾಲು ತೆಗೆದು ದೂರ ನಿಂತಿದ್ದರು. ಆದರೆ, ‘ಕೆಟ್ಟ ಮೇಲೆ ಬುದ್ಧಿ ಬಂತು’ ಎನ್ನುವ ನಾಣ್ಣುಡಿಯಂತೆ, ಇಂದು ತಮ್ಮ ರಾಜಕೀಯ ಭವಿಷ್ಯವೇ ತೂಗುಉಯ್ಯಾಲೆಯಲ್ಲಿದೆ ಎಂಬ ಸತ್ಯ ಅರಿವಾಗುತ್ತಿದ್ದಂತೆ ಮತ್ತೆ ಸಿದ್ದರಾಮಯ್ಯ ಅವರ ಸಾಂಗತ್ಯ ಬಯಸಿ ಬಾಗಿಲಿಗೆ ಬಂದು ನಿಂತಂತೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ!

ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಹಾಗೂ ಹೆಚ್.ಸಿ. ಮಹಾದೇವಪ್ಪ ಎಂಬ ಸಿದ್ದರಾಮಯ್ಯ ಅವರ ಮಾಜಿ ಆಪ್ತ ಬಳಗದ ನಾಯಕರು, ಇದೀಗ ಎದುರಾದರೂ ಮುಖ ಕೊಟ್ಟು ಮಾತನಾಡದಷ್ಟು, ಪರಸ್ಪರ ಮುಖ ಗಂಟುಹಾಕಿಕೊಂಡು ತಿರುಗುವಷ್ಟು ಸಿದ್ದರಾಮಯ್ಯ ಅವರಿಂದ ದೂರವಾಗಿದ್ದಾರೆ. ಈ ಒಡೆದು ಚೂರಾಗಿರುವ ಸಿದ್ದರಾಮಯ್ಯ ಅವರ ಅಹಿಂದ ಕೋಟೆಯನ್ನು ಮತ್ತೆ ಜೋಡಿಸಲು, ‘ಮನೆಯೊಂದು ಮೂರು ಬಾಗಿಲು’ ಆಗಿರುವುದನ್ನು ಸರಿಪಡಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ತೆರೆಮರೆಯಲ್ಲಿ ಬೃಹತ್ ರಾಜಿಸೂತ್ರ ಹೆಣೆದು ಅಖಾಡಕ್ಕೆ ಇಳಿದಿದ್ದಾರೆ.

ಹಾಗಾದರೆ, ಈ ನಾಯಕರು ಬಣ ಬದಲಾಯಿಸಿ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಹರಿಪ್ರಸಾದ್ ಮತ್ತು ರಾಜಣ್ಣ ಅವರ ಈ ರಾಜಿಸೂತ್ರ ಸಿದ್ದರಾಮಯ್ಯ ಮತ್ತು ಶಿಷ್ಯಂದಿರ ನಡುವಿನ ಕಂದಕವನ್ನು ಮುಚ್ಚಬಲ್ಲದೇ? 2028ರ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹಾಗೂ ಅಹಿಂದ ಮತಗಳು ಎಷ್ಟು ಅನಿವಾರ್ಯ? ಎಂಬುದರ ಸಂಪೂರ್ಣ,ಆಳವಾದ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಇದನ್ನೂ ಓದಿ: ಕ್ಲೇಮ್ ಕೈ ಬಿಟ್ಟ ಸಾಹುಕಾರ್! ಮತ್ತೆ ಒಂದಾಗ್ತಾರಾ ಸಿದ್ದು-ಸತೀಶ್? ‘2028 ಡಿಕೆ ಸಿಎಂ’- ಮಾತಿನ ಮರ್ಮವೇನು?

ಬಣ ಬದಲಾಯಿಸಿ ಬರಿಗೈಯಾದ ಮಾಜಿ ಆಪ್ತರು: ಲೆಕ್ಕಾಚಾರಗಳೆಲ್ಲ ತಲೆಕೆಳಗೆ!

ಅಹಿಂದ (AHINDA) ನಾಯಕ ಸಿದ್ದರಾಮಯ್ಯ ಅವರ ಸುದೀರ್ಘ ಅಧಿಕಾರಾವಧಿಯ ಅಂತ್ಯದ ವೇಳೆಗೆ ಹಾಗೂ ನಾಯಕತ್ವ ಬದಲಾವಣೆಯ ಸೂಕ್ಷ್ಮ ಘಟ್ಟದಲ್ಲಿ, ಈ ಮೂವರೂ ನಾಯಕರು ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಬಣಕ್ಕೆ ವಾಲಿಬಿದ್ದರು. ಸಿದ್ದರಾಮಯ್ಯ ಅವರ ಕೃಪಾಕಟಾಕ್ಷವಿಲ್ಲದೆಯೂ ನಾವು ರಾಜ್ಯ ರಾಜಕಾರಣದಲ್ಲಿ ಮೆರೆಯಬಲ್ಲೆವು, ಪ್ರಭಾವಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಲ್ಲೆವು ಎಂಬ ಮಹತ್ವಾಕಾಂಕ್ಷೆ ಈ ನಾಯಕರದ್ದಾಗಿತ್ತು. ಆದರೆ, ರಾಜಕೀಯದ ಚದುರಂಗದಾಟದಲ್ಲಿ ಇವರ ಲೆಕ್ಕಾಚಾರಗಳು ಸಂಪೂರ್ಣವಾಗಿ ಉಲ್ಟಾ ಆಗಿವೆ. ಲಾಭಕ್ಕಿಂತ ನಷ್ಟವೇ ಬೆಟ್ಟದಷ್ಟಾಗಿ, ಮೂವರೂ ನಾಯಕರು ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ.

  • ಸತೀಶ್ ಜಾರಕಿಹೊಳಿ: ಕೆಪಿಸಿಸಿ ಸ್ವಪ್ನ ಭಂಗ, ಬೆಳಗಾವಿಯ ಹಿಡಿತ ಸಡಿಲ ಹಾಗೂ ED ಶಾಕ್!

ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಆಸೆಗಳು ಸಣ್ಣದೇನಲ್ಲ. ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೇರಬೇಕು. ಸಧ್ಯ ಕನಿಷ್ಠ ಪಕ್ಷ ಉಪಮುಖ್ಯಮಂತ್ರಿ (DCM) ಸ್ಥಾನ ಗಿಟ್ಟಿಸಿಕೊಳ್ಳಬೇಕು ಮುಂದೆ 2028ರ ವೇಳೆಗೆ ಸಿಎಂ ಸ್ಥಾನಕ್ಕೆ ಟವಲ್‌ ಹಾಕುವುದು ಅವರ ತೀವ್ರ ಬಯಕೆಯಾಗಿತ್ತು. ಆದರೆ, ಅಧಿಕಾರ ಹಸ್ತಾಂತರದ ನಂತರ ಅವೆಲ್ಲವೂ ಅವರ ಕೈಜಾರಿದವು. ಇಷ್ಟಕ್ಕೇ ಮುಗಿಯಲಿಲ್ಲ; ಜಾರಿ ನಿರ್ದೇಶನಾಲಯದ (ED) ದಾಳಿಯ ಶೋಧನೆ ಇವರಿಗೆ ಬಿಗ್ ಕರೆಂಟ್ ಶಾಕ್ ನೀಡಿತು. ಅತ್ಯಂತ ರೋಚಕ ಸಂಗತಿಯೆಂದರೆ, ತಮ್ಮ ಮೇಲಿನ ಈ ಇಡಿ ದಾಳಿಗೆ ಹೊರಗಿನ ಶತ್ರುಗಳಿಗಿಂತ ಹೆಚ್ಚಾಗಿ “ಸ್ವಪಕ್ಷೀಯರೇ ಕಾರಣ” ಎಂದು ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಇನ್ನೊಂದೆಡೆ, ಸ್ವಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಮೇಲಿದ್ದ ಅವರ ಗಟ್ಟಿ ಹಿಡಿತವೂ ದಿನದಿಂದ ದಿನಕ್ಕೆ ಸಡಿಲಗೊಳ್ಳುತ್ತಿದೆ. ಸಹಕಾರಿ ಸಚಿವ ಲಕ್ಷ್ಮಣ ಸವದಿ ಅವರು ಬೆಳಗಾವಿ ರಾಜಕಾರಣದಲ್ಲಿ ಮೇಲುಗೈ ಸಾಧಿಸುತ್ತಿದ್ದು, ಜಾರಕಿಹೊಳಿ ಅವರ ನಾಯಕತ್ವಕ್ಕೇ ಸವಾಲೊಡ್ಡಿದ್ದಾರೆ. ಸಿದ್ದರಾಮಯ್ಯ ಅವರ ಸಖ್ಯ ತೊರೆದು ಬಂದ ಮೇಲೆ ಜಾರಕಿಹೊಳಿ ಅವರಿಗೆ ಸಿಕ್ಕಿದ್ದು ನಿರಾಸೆ ಮತ್ತು ತನಿಖಾ ಸಂಸ್ಥೆಗಳ ಕಿರುಕುಳ ಮಾತ್ರ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

  • ಜಮೀರ್ ಅಹ್ಮದ್ ಖಾನ್: ‘ಮಹಾ ನಾಯಕ’ನಿಗೆ ರಿಜ್ವಾನ್ ಅರ್ಶದ್ ಕರೆಂಟ್ ಶಾಕ್!

ರಾಜ್ಯದ ಮುಸ್ಲಿಂ ಸಮುದಾಯದ ಅನಭಿಷಿಕ್ತ ‘ಮಹಾ ನಾಯಕ’ ನಾನೇ, ಅಲ್ಪಸಂಖ್ಯಾತ ಮತಗಳೆಲ್ಲ ನನ್ನ ಜೇಬಿನಲ್ಲೇ ಇವೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಜಮೀರ್ ಅಹ್ಮದ್ ಖಾನ್ ಪರಿಸ್ಥಿತಿ ಇಂದು ತೀರಾ ಡೋಲಾಯಮಾನವಾಗಿದೆ. ಡಿ.ಕೆ. ಶಿವಕುಮಾರ್ ಸಂಪುಟದ ಮೊದಲ ಹಂತದ ವಿಸ್ತರಣೆಯಲ್ಲೇ ಜಮೀರ್ ಅವರಿಗೆ ಸಚಿವ ಸ್ಥಾನ ಸಿಗದೆ ಕಂಗಾಲಾಗಿದ್ದರು. ನಂತರ ಹೈಕಮಾಂಡ್ ಮಟ್ಟದಲ್ಲಿ ಸರ್ಕಸ್ ಮಾಡಿ, ಹರಸಾಹಸಪಟ್ಟು ಎರಡನೇ ಹಂತದಲ್ಲಿ ಸಂಪುಟ ಸೇರಿದರಾದರೂ, ಅವರಿಗೆ ಸಿಕ್ಕಿದ್ದು ಶಕ್ತಿಯಿಲ್ಲದ ಅಪ್ರಮುಖ ಖಾತೆಗಳು. ಅಲ್ಪಸಂಖ್ಯಾತ ಕಲ್ಯಾಣದಂತಹ ಪ್ರಭಾವಿ ಖಾತೆಗಳು ಇವರ ಕೈಜಾರಿದವು.

ಇದರ ಜೊತೆಗೆ, ಕಾಂಗ್ರೆಸ್ ಪಕ್ಷದೊಳಗೆ ರಿಜ್ವಾನ್ ಅರ್ಶದ್ ಅವರಂತಹ ಯುವ, ವಿದ್ಯಾವಂತ ಮುಸ್ಲಿಂ ನಾಯಕರು ಮುನ್ನೆಲೆಗೆ ಬರತೊಡಗಿದ್ದಾರೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮಟ್ಟದಲ್ಲಿ ರಿಜ್ವಾನ್ ಪ್ರಭಾವ ಹೆಚ್ಚಾಗುತ್ತಿದ್ದಂತೆ ಜಮೀರ್ ಅವರಿಗೆ ರಾಜಕೀಯವಾಗಿ ಜುಂ ಎಂದು ಕರೆಂಟ್ ಹೊಡೆದಂತಾಗಿದೆ. ಸಿದ್ದರಾಮಯ್ಯ ಅವರ ಜೊತೆ ಇದ್ದಾಗ ರಾಜಾರೋಷವಾಗಿ ಮೆರೆಯುತ್ತಿದ್ದ ಜಮೀರ್, ಇಂದು ತಮ್ಮ ರಾಜಕೀಯ ನೆಲೆ ಕಾಪಾಡಿಕೊಳ್ಳಲು ತತ್ತರಿಸುತ್ತಿದ್ದಾರೆ.

  • ಹೆಚ್.ಸಿ. ಮಹಾದೇವಪ್ಪ: ವೈಚಾರಿಕ ನಾಯಕನಿಗೆ ‘ಮನೆಗೆ ಕಳುಹಿಸುವ’ ಸನ್ಮಾನ!

ಸಿದ್ದರಾಮಯ್ಯ ಅವರ ‘ಛಾಯೆಯಂತೆ’ ಇರುತ್ತಿದ್ದ, ದಲಿತ ಸಮುದಾಯದ ಹಿರಿಯ ವೈಚಾರಿಕ ನಾಯಕ ಹೆಚ್.ಸಿ. ಮಹಾದೇವಪ್ಪ ಅವರ ಗತಿಯಂತೂ ತೀರಾ ಶೋಚನೀಯವಾಗಿದೆ. ನಾಯಕತ್ವ ಬದಲಾವಣೆಯ ನಂತರ ಡಿಕೆ ಸಂಪುಟದಲ್ಲಿ ಸ್ಥಾನ ಕೊಡಿಸಲು, “ತಮ್ಮ ಪರವಾಗಿ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾಗಿ ನಿಲ್ಲಲಿಲ್ಲ” ಎಂಬ ವೈಯಕ್ತಿಕ ಅಸಮಾಧಾನದಿಂದ ಮಹಾದೇವಪ್ಪ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡರು. ಡಿಕೆ ಸರ್ಕಾರದಲ್ಲಿ ಮಹಾದೇವಪ್ಪ ಅವರಿಗೆ ಸಚಿವ ಸ್ಥಾನವೇ ದಕ್ಕಲಿಲ್ಲ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದರೂ ಮಹಾದೇವಪ್ಪ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲವಿಲ್ಲದೆ ಮಹಾದೇವಪ್ಪ ಅವರ ರಾಜಕೀಯ ಶಕ್ತಿ ಶೂನ್ಯ ಎಂಬುದು ಸಾಬೀತಾಗಿದ್ದು, ಅವರನ್ನು ಪಕ್ಷವೇ ‘ಮನೆಗೆ ಕಳುಹಿಸುವ’ ಸನ್ನಿವೇಶ ನಿರ್ಮಾಣವಾಗಿದೆ.

ತೆರೆಮರೆಯ ರಂಗಪ್ರವೇಶ: ಹರಿಪ್ರಸಾದ್ ಮತ್ತು ರಾಜಣ್ಣ ಅವರ ‘ರಾಜಿಸೂತ್ರ’!

ಒಂದಾನೊಂದು ಕಾಲದಲ್ಲಿ ಅಹಿಂದ (AHINDA) ನಾಯಕ ಸಿದ್ದರಾಮಯ್ಯ ಅವರ ನೆರಳಿನಲ್ಲೇ ಬೆಳೆದ ಈ ಮೂವರೂ ಶಿಷ್ಯಂದಿರು, ಕಳೆದ ಕೆಲವು ತಿಂಗಳುಗಳಿಂದ ಸಿದ್ದರಾಮಯ್ಯ ಅವರ ಕಣ್ಣಿಗೆ ಬಿದ್ದರೂ ಮುಖ ಕೊಟ್ಟು ಮಾತನಾಡುತ್ತಿಲ್ಲ. ಎರಡೆರಡು ಬಾರಿ ಎದುರಾದರೂ ಮುಖ ಗಂಟುಹಾಕಿಕೊಂಡು ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಈ ಮಾಜಿ ಆಪ್ತರ ವರ್ತನೆಯಿಂದ ತೀವ್ರ ಆಕ್ರೋಶಗೊಂಡಿದ್ದು, ಜಮೀರ್ ಮೇಲಂತೂ ಅತಿಯಾದ ಕೋಪದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಈ ಒಡಕು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬೀಳಲಿದೆ ಎಂಬುದನ್ನು ಅರಿತ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಕ್ರಿಯವಾಗಿ ಅಖಾಡಕ್ಕಿಳಿದಿದ್ದಾರೆ.

  • ಬಿ.ಕೆ. ಹರಿಪ್ರಸಾದ್ ತಂತ್ರ: ಸಂಘಟನಾ ಚತುರರಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಒಗ್ಗೂಡಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯಿದೆ. ಹರಿಪ್ರಸಾದ್ ಅವರು ಪ್ರತ್ಯೇಕವಾಗಿ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹಾದೇವಪ್ಪ ಹಾಗೂ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಅವರ ಅಸಮಾಧಾನಗಳನ್ನು ಆಲಿಸಿ, ತದನಂತರ ಸಿದ್ದರಾಮಯ್ಯ ಅವರ ಬಳಿ ತೆರಳಿ ಅವರ ಮನವೊಲಿಸುವ ತಂತ್ರ ಹೆಣೆದಿದ್ದಾರೆ. ಅಹಿಂದ ನಾಯಕರು ಚಿದ್ರವಾದರೆ ಕಾಂಗ್ರೆಸ್‌ನ ಅಡಿಪಾಯವೇ ಅಲ್ಲಾಡುತ್ತದೆ ಎಂಬುದು ಹರಿಪ್ರಸಾದ್ ಲೆಕ್ಕಾಚಾರ.
  • ಕೆ.ಎನ್. ರಾಜಣ್ಣ ಅವರ ‘ಒಗ್ಗಟ್ಟಿನಲ್ಲಿ ಬಲವಿದೆ’ ಜಪ: ಸಿದ್ದರಾಮಯ್ಯ ಅವರ ಮತ್ತೊಬ್ಬ ಪ್ರಭಾವಿ ಬೆಂಬಲಿಗರಾದ ಕೆ.ಎನ್. ರಾಜಣ್ಣ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತೀಚೆಗಷ್ಟೇ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ರಾಜಣ್ಣ, ಸುದೀರ್ಘ ಚರ್ಚೆ ನಡೆಸಿ ‘ರಾಜಿಸೂತ್ರ’ದ ಮಂತ್ರ ಬೋಧಿಸಿದ್ದಾರೆ. ರಾಜಣ್ಣ ಅವರ ಭೇಟಿಯ ಬೆನ್ನಲ್ಲೇ ಜಾರಕಿಹೊಳಿ ಮೈಸೂರಿನಲ್ಲಿ ಮಾಧ್ಯಮಗಳ ಮುಂದೆ ಬಂದು, “ನಮ್ಮಲ್ಲಿ ಯಾವುದೇ ಒಡಕಿಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಕ್ಯಾಪ್ಟನ್, ನಾವೆಲ್ಲಾ ಅವರ ನೆಕ್ಸ್ಟ್ ಲೆಫ್ಟಿನೆಂಟ್ಸ್” ಎಂದು ರಾಗ ಬದಲಾಯಿಸಿರುವುದು ಈ ರಾಜಿಸೂತ್ರ ಯಶಸ್ವಿಯಾಗುತ್ತಿರುವುದಕ್ಕೆ ಸಾಕ್ಷಿ.

ಆದರೆ, ಇಲ್ಲಿ ಓದುಗರು ಗಮನಿಸಬೇಕಾದ ಪ್ರಮುಖ ವಿಷಯವೆಂದರೆ—ಈ ರಾಜಿಸೂತ್ರದ ಹಿಂದೆ ಇದ್ಯಾವ ತತ್ವ, ಸಿದ್ಧಾಂತ ಅಥವಾ ಪಕ್ಷಪ್ರೇಮವಿಲ್ಲ! ಬದಲಿಗೆ, ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಅವರೂ ಶಕ್ತಿಹೀನರಾಗುತ್ತಿದ್ದಾರೆ, ಇತ್ತ ಸಿದ್ದರಾಮಯ್ಯ ಬೆಂಬಲವಿಲ್ಲದೆ ಈ ಮಾಜಿ ಆಪ್ತರಿಗೂ ರಾಜಕೀಯ ಅಸ್ತಿತ್ವವಿಲ್ಲದಂತಾಗಿದೆ. ಹೀಗಾಗಿ, ತಮ್ಮ ತಮ್ಮ ‘ರಾಜಕೀಯ ಚರ್ಮ ರಕ್ಷಣೆ’ಗಾಗಿ ರೂಪುಗೊಂಡಿರುವ ಸ್ವಾರ್ಥದ ಒಪ್ಪಂದ ಇದಾಗಿದೆ!

ಇದನ್ನೂ ಓದಿ: ಸಿದ್ದರಾಮಯ್ಯ ಶರಪಂಜರ, ಡಿಕೆಶಿ ಪಾಳೆಗಾರಿಕೆ! ಅಹಿಂದ ಒಕ್ಕೂಟದ ಧ್ವಂಸ ಮತ್ತು ಬಿ.ಕೆ. ಹರಿಪ್ರಸಾದ್ ಬೇಸರದಿಂದ ಕಾಂಗ್ರೆಸ್‌ಗೆ ಮರಣಮೃದಂಗ ಗ್ಯಾರಂಟಿ?

2028ರ ಎಲೆಕ್ಷನ್ ಲೆಕ್ಕಾಚಾರ: ಕಾಂಗ್ರೆಸ್‌ಗೆ ‘ಅಹಿಂದ’ ಅನಿವಾರ್ಯ, ಸಿದ್ದು ಅಪರಿಹಾರ್ಯ!

ರಾಜ್ಯ ರಾಜಕಾರಣದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಇನ್ನು ಹೆಚ್ಚಿನ ಸಮಯವೇನೂ ಉಳಿದಿಲ್ಲ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಬ್ಯಾಂಕ್ ಸಂಪೂರ್ಣ ಅನಿವಾರ್ಯವಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಇದೇ ಅಹಿಂದ ಮತಗಳು ಕಾಂಕ್ರೀಟ್ ಅಡಿಪಾಯವಾಗಿದ್ದವು. ಆದರೆ ಈಗ ಈ ಅಹಿಂದ ಮತಗಳು ಛಿದ್ರವಾಗುವ ಎಲ್ಲ ಮುನ್ಸೂಚನೆಗಳೂ ಗೋಚರಿಸುತ್ತಿವೆ.

  • ವಾಲ್ಮೀಕಿ ಸಮುದಾಯದ ಕಳಚುವ ಭೀತಿ: ಸತೀಶ್ ಜಾರಕಿಹೊಳಿ ಅವರ ಬೆನ್ನಿಗೆ ಪ್ರಬಲವಾಗಿ ವಾಲ್ಮೀಕಿ/ನಾಯಕ ಸಮುದಾಯ ಗಟ್ಟಿಯಾಗಿ ನಿಂತಿದೆ. ತಮ್ಮ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಸಿಗಲಿಲ್ಲ, ಸಚಿವ ಸಂಪುಟದಲ್ಲೂ ಅನ್ಯಾಯವಾಯಿತು ಹಾಗೂ ಅವರ ಮೇಲೆ ಸ್ವಪಕ್ಷೀಯರೇ ಇಡಿ ದಾಳಿ ಮಾಡಿಸಿದರು ಎಂಬ ಭಾವನೆ ವಾಲ್ಮೀಕಿ ಸಮುದಾಯದಲ್ಲಿದೆ. ಇದು ಹೀಗೆಯೇ ಮುಂದುವರಿದರೆ, ರಾಜ್ಯದಲ್ಲಿರುವ ಪ್ರಭಾವಿ ವಾಲ್ಮೀಕಿ ಮತಗಳು ಕಾಂಗ್ರೆಸ್ ಕೈತಪ್ಪುವ ತೀವ್ರ ಆತಂಕ ಪಕ್ಷದ ಹೈಕಮಾಂಡ್‌ಗೆ ಎದುರಾಗಿದೆ.
  • ಮುಸ್ಲಿಂ ಹಾಗೂ ದಲಿತ ಮತಗಳ ವಿಭಜನೆ: ಜಮೀರ್ ಅಹ್ಮದ್ ಖಾನ್ ಅವರನ್ನು ಮೂಲೆಗುಂಪು ಮಾಡಿರುವುದರಿಂದ ಮುಸ್ಲಿಂ ಸಮುದಾಯದಲ್ಲೂ ಹಾಗೂ ಹಿರಿಯ ನಾಯಕ ಮಹಾದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದೆ ಅಲಕ್ಷಿಸಿರುವುದರಿಂದ ದಲಿತ ಸಮುದಾಯದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಈ ಸಮುದಾಯಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗಳಾಗಿದ್ದು, ಇವುಗಳಲ್ಲಿ ಒಡಕು ಉಂಟಾದರೆ ಕಾಂಗ್ರೆಸ್ ಚುನಾವಣೆಯಲ್ಲಿ ಧೂಳಿಪಟವಾಗುವುದು ಖಚಿತ.
  • ಸಿದ್ದರಾಮಯ್ಯ ಎಂಬ ಮಾಸ್ ಲೀಡರ್: ಇಡೀ ಕರ್ನಾಟಕದಲ್ಲಿ ಅಹಿಂದ ಸಮುದಾಯಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ, ರಾಜ್ಯಾದ್ಯಂತ Mass Appeal ಹೊಂದಿರುವ ಏಕೈಕ ನಾಯಕ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೇ ನಾಯಕರಿದ್ದರೂ ಸಿದ್ದರಾಮಯ್ಯ ಅವರಷ್ಟ ಮಟ್ಟಿಗೆ ಅಹಿಂದ ಮತಗಳನ್ನು ಕ್ರೋಡೀಕರಿಸುವ ಸಾಮರ್ಥ್ಯ ಬೇರಾರಿಗೂ ಇಲ್ಲ. ಸಿದ್ದರಾಮಯ್ಯ ಅವರ ಬಣ ಚಿದ್ರವಾದರೆ ಅಥವಾ ಸಿದ್ದರಾಮಯ್ಯ ತಟಸ್ಥರಾದರೆ ಕಾಂಗ್ರೆಸ್ ಬಲಿಯಾಗುವುದು ನಿಶ್ಚಿತ. ಹೀಗಾಗಿ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಬದುಕಬೇಕೆಂದರೆ ಸಿದ್ದರಾಮಯ್ಯ ‘ಅಪರಿಹಾರ್ಯ ಶಕ್ತಿ’!

‘ಕೆಟ್ಟ ಮೇಲೆ ಬಂದ ಬುದ್ಧಿ’ ಪಕ್ಷವನ್ನು ದಡ ಸೇರಿಸುವುದೇ?

ಒಟ್ಟಾರೆಯಾಗಿ ಹೇಳುವುದಾದರೆ, ಸಿದ್ದರಾಮಯ್ಯ ಅವರ ಕೋಟೆಯಿಂದ ಹೊರಬಂದು, ಬೇರೆ ಬಣದ ನೆರಳು ಹಿಡಿದು ಸ್ವಯಂಭೂ ನಾಯಕರಾಗಲು ಹೊರಟ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಹಾಗೂ ಹೆಚ್.ಸಿ. ಮಹಾದೇವಪ್ಪ ಅವರಿಗೆ ರಾಜಕೀಯ ವಾಸ್ತವದ ಅರಿವಾಗಿದೆ. ಸಿದ್ದರಾಮಯ್ಯ ಎಂಬ ವಟವೃಕ್ಷದ ನೆರಳಿನಲ್ಲಿ ಮಾತ್ರ ತಮಗೆ ರಕ್ಷಣೆ ಮತ್ತು ಗೌರವ ಸಿಗಲು ಸಾಧ್ಯ, ಅದನ್ನು ಹೊರತುಪಡಿಸಿದರೆ ತಮ್ಮ ಅಸ್ತಿತ್ವವೇ ಅಪಾಯದಲ್ಲಿದೆ ಎಂಬ ಸತ್ಯ ತಡವಾಗಿಯಾದರೂ ಇವರಿಗೆ ಜ್ಞಾನೋದಯವಾಗಿದೆ. ಆದರೆ, ಬಿ.ಕೆ. ಹರಿಪ್ರಸಾದ್ ಹಾಗೂ ಕೆ.ಎನ್. ರಾಜಣ್ಣ ಅವರ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ‘ಮರುಮಿಲನ’ ಎಷ್ಟು ದಿನ ಬಾಳಿಕೆ ಬರಲಿದೆ ಎಂಬುದು ದೊಡ್ಡ ಪ್ರಶ್ನೆ.

  • ಒಡೆದ ಕನ್ನಡಿ ಒಂದಾಗುವುದೇ?: ರಾಜಕೀಯ ಲಾಭಕ್ಕಾಗಿ ವೇದಿಕೆ ಮೇಲೆ ಇವರು ಕಟ್ಟಿಕೊಳ್ಳುವ ಸಡಿಲ ಒಗ್ಗಟ್ಟು, ಒಡೆದು ಹೋಗಿರುವ ಗುರು-ಶಿಷ್ಯರ ಮನಸ್ಸುಗಳನ್ನು ನಿಜವಾಗಿಯೂ ಒಂದಾಗಿಸಬಲ್ಲದೇ?
  • ಸಿದ್ದರಾಮಯ್ಯ ಅವರ ಮನಸ್ಸು ಒಪ್ಪುವುದೇ?: ಕಷ್ಟದ ಸಮಯದಲ್ಲಿ ತಮಗೆ ಕೈಕೊಟ್ಟು, ಬಣ ಬದಲಾಯಿಸಿ ಹೋಗಿದ್ದ ಮಾಜಿ ಶಿಷ್ಯಂದಿರನ್ನು ಸಿದ್ದರಾಮಯ್ಯ ಅವರು ಮತ್ತೆ ಪೂರ್ಣ ಮನಸ್ಸಿನಿಂದ ಎದೆಗೆ ಅಪ್ಪಿಕೊಳ್ಳುತ್ತಾರೆಯೇ? ಅಥವಾ ಇದು ಕೇವಲ ಮೇಲ್ನೋಟದ ರಾಜಕೀಯ ತೇಪೆ ಹಚ್ಚುವ ಕೆಲಸವಾಗಲಿದೆಯೇ?

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುಂತೆ, ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂದು ಮರಳಿ ಗುರುಕುಲಕ್ಕೆ ಓಡಿ ಬರುತ್ತಿರುವ ಈ ನಾಯಕರ ನಡೆ, ಮುಂಬರುವ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ ಹಾಗೂ ರಾಜ್ಯ ರಾಜಕಾರಣವನ್ನು ಯಾವ ಹಂತಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲಿಯವರೆಗೆ, ಈ ಗುರು-ಶಿಷ್ಯರ ನಾಟಕೀಯ ರಾಜಕೀಯದಾಟ ಸಾರ್ವಜನಿಕರಿಗೆ ಹಾಗೂ ರಾಜಕೀಯ ವಿಶ್ಲೇಷಕರಿಗೆ ತೀವ್ರ ಕುತೂಹಲಕಾರಿ ಸಂಗತಿಯಾಗಿರುವುದಂತೂ ಸುಳ್ಳಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...