Satish Jarkiholi: ಕರ್ನಾಟಕ ರಾಜಕಾರಣದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರ ರಾಜ್ಯ ಕಾಂಗ್ರೆಸ್ನಲ್ಲಿ ಅತಿದೊಡ್ಡ ರಾಜಕೀಯ ತಲ್ಲಣವನ್ನೇ ಸೃಷ್ಟಿಸಿತ್ತು. ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್ (D.K. Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದ ಬೆಳವಣಿಗೆಗಳು, ಒಳಗೊಳಗಿನ ಅಸಮಾಧಾನಗಳು ಹಾಗೂ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ನಾಯಕರ ಮರುಸಂಘಟನೆಯ ಯತ್ನಗಳು ಈಗ ಹೊಸ ತಿರುವು ಪಡೆದುಕೊಂಡಿವೆ.
ಬೆನ್ನಿಗೆ ಬಿದ್ದ ಪತ್ರದ ಪೆಟ್ಟು ಮತ್ತು ಸಿದ್ದರಾಮಯ್ಯ ಅವರ ‘ಮಹಾ ಮೌನ’
ಅಧಿಕಾರ ಹಸ್ತಾಂತರದ ವೇಳೆ ನಡೆದಿದೆಯೆನ್ನಲಾದ ವಿದ್ಯಮಾನ ಅತ್ಯಂತ ಆಘಾತಕಾರಿಯಾಗಿತ್ತು. ಸಿದ್ದರಾಮಯ್ಯ ಅವರ ಅತ್ಯಾಪ್ತ ಬಳಗದಲ್ಲಿದ್ದ ಸತೀಶ್ ಜಾರಕಿಹೊಳಿ (Satish Jarkiholi), ಡಾ. ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್, ಹಾಗೂ ಎಂ.ಬಿ. ಪಾಟೀಲ್ ಅವರಂತಹ ನಾಯಕರು ಡಿಕೆ ಶಿವಕುಮಾರ್ ಅವರಿಂದ ಸ್ಥಾನಮಾನ ಹಾಗೂ ಉನ್ನತ ಹುದ್ದೆಗಳ ಆಶ್ವಾಸನೆ ಸಿಕ್ಕ ತಕ್ಷಣ ಬಣ ಬದಲಾಯಿಸಿದ್ದರು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶಾಸಕರ ಸಹಿ ಸಂಗ್ರಹಿಸಿ ಹೈಕಮಾಂಡ್ಗೆ ತಲುಪಿಸಲಾಗಿತ್ತು ಎನ್ನುವುದು ಎಲ್ಲಕಡೆ ಹರಡಿಕೊಂಡಿರುವ ಮಾತು…
ದೆಹಲಿಗೆ ಸಿದ್ದರಾಮಯ್ಯ ಅವರನ್ನು ಕರೆಸಿದ ಕಾಂಗ್ರೆಸ್ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವಂತೆ ಸೂಚಿಸಿದಾಗ, “ನನ್ನ ಶಾಸಕರ ಜೊತೆ ಮಾತುಕತೆ ನಡೆಸಿ ನಿರ್ಧರಿಸುತ್ತೇನೆ” ಎಂದಿದ್ದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಅದೇ ಸಹಿ ಸಂಗ್ರಹದ ಪತ್ರವನ್ನು ಮುಂದಿಟ್ಟಿತ್ತು. ಅದರಲ್ಲಿ ಮೊದಲ ಹೆಸರೇ ಸತೀಶ್ ಜಾರಕಿಹೊಳಿ ಅವರದ್ದಾಗಿತ್ತು ಎಂದು ಇತ್ತೀಚೆಗೆ ಆರ್ ಅಶೋಕ್ ಅವರು ಸದನದಲ್ಲಿ ಹೇಳಿದ್ದಾರೆ. ತೀರಾ ನಂಬಿದ್ದ ಆಪ್ತರೇ ನಡೆಸಿದ್ದ ಈ ‘ಮಹಾ ದ್ರೋಹ’ದಿಂದ ತೀವ್ರ ಆಘಾತಕ್ಕೊಳಗಾದ ಸಿದ್ದರಾಮಯ್ಯ, ಮೌನವಾಗಿಯೇ ರಾಜೀನಾಮೆ ನೀಡಿ ಸೈಲೆಂಟ್ ಆಗಿದ್ದರು.
‘ಕೆಟ್ಟ ಮೇಲೆ ಬುದ್ಧಿ ಬಂತು’: ಆಮಿಷವೂ ಸಿಗಲಿಲ್ಲ, ಸಂಕಟವೂ ತಪ್ಪಲಿಲ್ಲ!
ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಪೀಠಕ್ಕೆ ತರಲು ಸಿದ್ದರಾಮಯ್ಯ ಆಪ್ತ ಪಡೆ ಸಾಥ್ ನೀಡಿತ್ತಾದರೂ, ಅಧಿಕಾರಕ್ಕೆ ಬಂದ ಡಿ.ಕೆ. ಶಿವಕುಮಾರ್ ಸಾಹೇಬರು ಇವರಾರಿಗೂ ಕೊಟ್ಟ ಮಾತು ಹಾಗೂ ಆಮಿಷಗಳನ್ನು ಈಡೇರಿಸಲು ಸಾಧ್ಯವಾಗಲೇ ಇಲ್ಲ. ಬದಲಿಗೆ, ಈ ನಾಯಕರೆಲ್ಲರಿಗೂ ಒಂದೊಂದೇ ಸಂಕಟಗಳು ಎದುರಾಗತೊಡಗಿದವು. “ಕೆಟ್ಟ ಮೇಲೆ ಬುದ್ಧಿ ಬಂತು” ಎನ್ನುವಂತೆ, ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿದ್ದ ಖುಷಿಯಾಗಲಿ, ಉತ್ಸಾಹವಾಗಲಿ ಈಗ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಜಮೀರ್ ಅಹ್ಮದ್ ಖಾನ್ ಮುಖದಲ್ಲಿ ಉಳಿದಿಲ್ಲ.
- ಸತೀಶ್ ಜಾರಕಿಹೊಳಿ: ಕೆಪಿಸಿಸಿ ಅಧ್ಯಕ್ಷ ಪೀಠ ಸಿಗದೆ ಕೈತಪ್ಪಿತು. ಇದರ ಮಧ್ಯೆ ಇಡಿ ದಾಳಿಯ ಬಿಸಿ ತಟ್ಟುತ್ತಿದ್ದಂತೆ ಸಂಪೂರ್ಣ ಮೆತ್ತಗಾಗಿರುವ ಸಾಹುಕಾರ್, ಈಗ ಮತ್ತೆ ಸಿದ್ದರಾಮಯ್ಯ ಕ್ಯಾಂಪ್ಗೆ ಮರಳಲು ತೀವ್ರ ಹವಣಿಸುತ್ತಿದ್ದಾರೆ,. ಆರಂಭದಲ್ಲಿ “ನಮ್ಮಿಬ್ಬರ ನಡುವೆ ಸಣ್ಣ ವೈಮನಸ್ಸಿದೆ” ಎಂದು ಒಪ್ಪಿಕೊಂಡಿದ್ದ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಂದ ದೂರವೇ ಉಳಿದಿದ್ದರು. ಆದರೆ ಈಗ “ನಮ್ಮ ನಡುವೆ ಏನೂ ನಡೆದಿಲ್ಲ” ಎಂದು ಮಾತು ಬದಲಿಸಿ, ಮತ್ತೆ ಸಿದ್ದರಾಮಯ್ಯ ಅವರ ಸಮೀಪಕ್ಕೆ ಹೋಗಲು ಹವಣಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
- ಜಮೀರ್ ಅಹಮದ್ ಖಾನ್: ಸಚಿವ ಸ್ಥಾನ ಕಳೆದುಕೊಳ್ಳುವ ಹಾಗೂ ತನಿಖಾ ಸಂಸ್ಥೆಗಳ ತೂಗುಕತ್ತಿಯ ಭೀತಿಯಲ್ಲಿ ದೆಹಲಿ ಅಲೆದಾಡುವಂತಾಗಿದ್ದು, ತಮಗೂ ಸಿದ್ದರಾಮಯ್ಯ ಅವರ ಅಭಯವೇ ಬೇಕು ಎಂಬ ವಾಸ್ತವಕ್ಕೆ ಬಂದಿದ್ದಾರೆ,.
ಡಿ.ಕೆ. ಶಿವಕುಮಾರ್ ಅವರಿಂದ ಆಮಿಷ ಈಡೇರದೆ, ಎಲ್ಲ ಹುದ್ದೆಗಳನ್ನೂ ಕಳೆದುಕೊಂಡು ‘ಮನೆಯೊಂದು ಮೂರು ಬಾಗಿಲು’ ಆಗಿದ್ದ ಈ ನಾಯಕರಿಗೆ ಒಗ್ಗಟ್ಟಿನ ಬಲ ತಡವಾಗಿ ಅರ್ಥವಾಗಿದೆ. ಹೀಗಾಗಿ, ಕೆ.ಎನ್. ರಾಜಣ್ಣ ಅವರ ಮಧ್ಯಸ್ಥಿಕೆಯಲ್ಲಿ ಸಿದ್ದರಾಮಯ್ಯ ಅವರ ಮನವೊಲಿಸಿ ಮತ್ತೆ ‘ಅಹಿಂದ ಒಕ್ಕೂಟ’ವನ್ನು ಒಂದಾಗಿಸುವ ‘ರಾಜಿ ಸೂತ್ರ’ಕ್ಕೆ ಚಾಲನೆ ಸಿಕ್ಕಿದೆ.
“ನನಗಿನ್ನೂ ವಯಸ್ಸಿದೆ” ಎಂಬ ಹಾಸ್ಯಾಸ್ಪದ ನೆಪ & ಕ್ಲೇಮ್ ಬದಿಗಿಟ್ಟ ಸಾಹುಕಾರ್!
2028ರ ಸಿಎಂ ಸ್ಥಾನಕ್ಕೆ ತಾನೂ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದ ಸತೀಶ್ ಜಾರಕಿಹೊಳಿ (Satish Jarkiholi), ಇಡಿ ದಾಳಿಯ ಬಳಿಕ ಸಂಪೂರ್ಣ ಸೈಲೆಂಟ್ ಆಗಿದ್ದಾರೆ,. ಇತ್ತೀಚೆಗೆ ಮಾಧ್ಯಮಗಳ ಮುಂದೆ, “2028ರಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಂತ ಬಲ ಹಾಗೂ ಸಂಘಟನಾ ಸಾಮರ್ಥ್ಯದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೆ ಅವರೇ ಸಿಎಂ ಆಗಲಿ, ನನಗಿನ್ನೂ ವಯಸ್ಸಿದೆ” ಎಂದು ಸತೀಶ್ ಹೇಳಿಕೆ ನೀಡಿದ್ದಾರೆ.
ಆದರೆ, ಈ ‘ವಯಸ್ಸಿನ’ ನೆಪದ ಹಿಂದೆ ದೊಡ್ಡ ರಾಜಕೀಯ ತಮಾಷೆಯಿದೆ!
ಅಸಲಿಗೆ ಸತೀಶ್ ಜಾರಕಿಹೊಳಿ ಅವರ ವಯಸ್ಸು 64 ವರ್ಷ, ಡಿ. ಕೆ. ಶಿವಕುಮಾರ್ ಅವರ ವಯಸ್ಸು ಸಹ 64 ವರ್ಷ! ಇಬ್ಬರ ವಯಸ್ಸಿನ ಮಧ್ಯೆ ಇರುವ ಅಂತರ ಕೇವಲ ಒಂದೇ ಒಂದು ತಿಂಗಳು ಅಷ್ಟೇ! ವಯಸ್ಸಿನಲ್ಲಿ ಸಮಾನರಾಗಿದ್ದರೂ “ನನಗಿನ್ನೂ ವಯಸ್ಸಿದೆ” ಎಂದು ಸತೀಶ್ ಹೇಳುತ್ತಿರುವುದು ತಮ್ಮ ಸಿಎಂ ಕ್ಲೇಮ್ ಅನ್ನು ಪಲಾಯನವಾದದಿಂದ ಬದಗಿಡಲು ಹುಡುಕಿದ ನೆಪದಂತೆ ಕಾಣುತ್ತಿದೆ.
ಅಷ್ಟೇ ಅಲ್ಲದೆ, “ಅಹಿಂದ ಪಡೆ ಚಿದ್ರವಾಗಿಲ್ಲ. ನಮ್ಮ ಆರ್ಮಿಗೆ ಎಂದಿಗೂ ಸಿದ್ದರಾಮಯ್ಯ ಅವರೇ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್,” ಎನ್ನುವ ಮೂಲಕ ಸಿಎಂ ಸ್ಥಾನಕ್ಕಿದ್ದ ಸದ್ಯದ ತಮ್ಮ ಹಕ್ಕನ್ನು ಸಂಪೂರ್ಣವಾಗಿ ಕೈಬಿಟ್ಟು, ಸಿದ್ದರಾಮಯ್ಯ ಅವರ ಶರಣಾಗತಿಗೆ ಸಾಹುಕಾರ್ ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಆರ್. ಅಶೋಕ್ ಅವರ “ಸಹಿ ಸಂಗ್ರಹ” ಆರೋಪವನ್ನು ತಳ್ಳಿಹಾಕುತ್ತಾ, ಯತೀಂದ್ರ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಅವರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ,.
‘2028 ಡಿಕೆ ಸಿಎಂ’ ಎನ್ನುವ ಮಾತಿನ ಅಸಲಿ ಮರ್ಮವೇನು?
ಸತೀಶ್ ಜಾರಕಿಹೊಳಿ ಅವರು “2028ರಲ್ಲಿ ಡಿ.ಕೆ. ಶಿವಕುಮಾರ್ ಅವರೇ ಸ್ವಸಾಮರ್ಥ್ಯದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದರೆ ಅವರೇ ಸಿಎಂ ಆಗಲಿ” ಎಂದು ಆಡಿದ ಮಾತು ಮೇಲ್ನೋಟಕ್ಕೆ ಶರಣಾಗತಿಯಂತೆ ಕಂಡರೂ, ಅದರ ಹಿಂದೆ ಆಳವಾದ ರಾಜಕೀಯ ತಂತ್ರವಿದೆ:
1. ಸ್ವಸಾಮರ್ಥ್ಯದ ಸವಾಲು: ಮುಂದಿನ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಏಕಾಂಗಿಯಾಗಿ ಪಕ್ಷವನ್ನು ಬಹುಮತಕ್ಕೆ ತರುವುದು ಕಷ್ಟ ಎಂಬ ವಾಸ್ತವ ಸತೀಶ್ ಅವರಿಗೆ ತಿಳಿದಿದೆ.
2. 2028ರ ಗೇಮ್ ಪ್ಲಾನ್: ಮೈತ್ರಿ ಅಥವಾ ಅಸ್ಪಷ್ಟ ಬಹುಮತ ಬರುವ ಸಂದರ್ಭದಲ್ಲಿ ಅಹಿಂದ ಪಡೆಯೇ ನಿರ್ಣಾಯಕವಾಗಲಿದ್ದು, ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ತಾವೇ ಮುಂದಿನ ನಾಯಕರಾಗುವ ರಾಜಕೀಯ ಲೆಕ್ಕಾಚಾರವನ್ನು ಕಾಯ್ದಿರಿಸಿಕೊಂಡಿದ್ದಾರೆ.
ರಾಜಣ್ಣ-ಜಮೀರ್ ತಂತ್ರ ಹಾಗೂ ಸಿದ್ದರಾಮಯ್ಯ ಅವರ ಒಳಗಿನ ಕುದಿ!
ಇತ್ತ ಸಂಪುಟ ಪುನಾರಚನೆ ಹಾಗೂ ಅಹಿಂದ ನಾಯಕರ ರಕ್ಷಣೆಗೆ ಕೆ.ಎನ್. ರಾಜಣ್ಣ ಹಾಗೂ ಜಮೀರ್ ಅಹಮದ್ ಖಾನ್ ಭಾರಿ ಕಸರತ್ತು ನಡೆಸುತ್ತಿದ್ದಾರೆ,. ವಾಲ್ಮೀಕಿ ನಿಗಮದ ಹಗರಣದ ತನಿಖೆಯಿಂದ ರಿಲೀಫ್ ಪಡೆಯಲು ಯತ್ನಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಕ್ಯಾಬಿನೆಟ್ಗೆ ತರಲು ಜಮೀರ್ ಲಾಬಿ ಮಾಡುತ್ತಿದ್ದರೆ, ಸಿದ್ದರಾಮಯ್ಯ ಅವರನ್ನು ರಾಜಣ್ಣ ಅವರು ತಮ್ಮ ಮನೆಗೆ ಕರೆದು ಔತಣಕೂಟದ ಮೂಲಕ ಎಲ್ಲರನ್ನೂ ಒಂದೇ ವೇದಿಕೆಗೆ ತರಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ರವಿ ಬೆಳಗೆರೆ ನೆಚ್ಚಿನ ‘ಅಣ್ಣ’, ಧಾರವಾಡದ ಧೈರ್ಯ; ಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಎಂಬ ಜೀವಂತ ಅಧ್ಯಾಯ ಅಂತ್ಯ…!
ಆದರೆ ಅಸಲಿ ಪ್ರಶ್ನೆ ಇರುವುದು ಸಿದ್ದರಾಮಯ್ಯ ಅವರ ನಿಲುವಿನಲ್ಲಿ!
ತಮಗೆ ಬೆನ್ನಿಗೆ ಚೂರಿ ಹಾಕಿದ, ತಮಗೆ ಆಘಾತ ತಂದಿತ್ತ ಆಪ್ತರ ನಡೆಗೆ ಸಿದ್ದರಾಮಯ್ಯ ಒಳಗೊಳಗೇ ತೀವ್ರವಾಗಿ ಕುದಿಯುತ್ತಿದ್ದಾರೆ. ಅಧಿಕಾರ ಹಸ್ತಾಂತರದ ವೇಳೆ ಗಾಯಗೊಂಡಿದ್ದ ಸಿದ್ದರಾಮಯ್ಯ, ಈಗ ತಮ್ಮ ಬಳಿಗೆ ಮರಳಲು ಯತ್ನಿಸುತ್ತಿರುವ ಈ ನಾಯಕರನ್ನು ಮತ್ತೆ ಮೊದಲಿನಂತೆ ನಂಬುತ್ತಾರೆಯೇ? ಅಥವಾ ರಾಜಕೀಯವಾಗಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆಯೇ? ಎಂಬುದು ಸದ್ಯದ ಕುತೂಹಲ.
ನಾಲ್ಕು ತಿಂಗಳ ಹಿಂದೆ ನಡೆದ ಅಧಿಕಾರ ಹಸ್ತಾಂತರದ ಕಹಿ ನೆನಪುಗಳು, ಡಿಕೆಶಿ ಸಾಹೇಬರಿಂದ ಸಿಗದ ಆಮಿಷಗಳು, ಇಡಿ ದಾಳಿಯ ಭೀತಿ ಹಾಗೂ ರಾಜಕೀಯ ಅಸ್ತಿತ್ವದ ಸಂಕಟ ಅಹಿಂದ ನಾಯಕರನ್ನು ಮತ್ತೆ ಸಿದ್ದರಾಮಯ್ಯ ಅವರ ಅಂಗಳಕ್ಕೆ ತಂದು ನಿಲ್ಲಿಸಿದೆ,. ಸತೀಶ್ ಜಾರಕಿಹೊಳಿ ವಯಸ್ಸಿನ ನೆಪ ಹೇಳಿ ತಮ್ಮ ಸಿಎಂ ಕ್ಲೇಮ್ ಕೈಬಿಟ್ಟು “ಸಿದ್ದು ಕ್ಯಾಪ್ಟನ್” ಎಂದು ಜಪಿಸುತ್ತಿರುವುದು ಹಾಗೂ ತುಮಕೂರು/ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸುತ್ತಿರುವುದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಒಳಗಿನ ಬಣ ರಾಜಕೀಯ ಮತ್ತಷ್ಟು ರೋಚಕ ಹಾಗೂ ಮುಖವಾಡ ಕಳಚುವ ಹಂತಕ್ಕೆ ತಲುಪಲಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






