ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು (Soujanya Case) ಕೇವಲ ದಕ್ಷಿಣ ಕನ್ನಡದ ಉಜಿರೆಯ ಸಂತ್ರಸ್ತ ಕುಟುಂಬದ ದುರಂತವಾಗಿ ಉಳಿದಿಲ್ಲ; ಅದು ಈ ನಾಡಿನ ಪೊಲೀಸ್ ವ್ಯವಸ್ಥೆ, ರಾಜಕೀಯ ಇಚ್ಛಾಶಕ್ತಿ ಮತ್ತು ಕಾರ್ಯಾಂಗದ ಕಪಟತನಕ್ಕೆ ಹಿಡಿದ ಕನ್ನಡಿಯಾಗಿದೆ. 14 ವರ್ಷಗಳ ಸುದೀರ್ಘ ಕಾಯುವಿಕೆ, ಸ್ಥಳೀಯ ಪೊಲೀಸರ ಶಾಮೀಲಾತಿ, ಸಿಐಡಿ ಹಾಗೂ ಅತ್ಯುನ್ನತ ತನಿಖಾ ಸಂಸ್ಥೆ ಎನಿಸಿಕೊಂಡ ಸಿಬಿಐನ ಹಸಿಬಿಸಿ ರಕ್ಷಣೆ—ಇಷ್ಟೆಲ್ಲಾ ‘ಪ್ರಭಾವಿ ಆಟಗಳ’ ನಂತರವೂ ಮಗಳನ್ನು ಕಳೆದುಕೊಂಡ ಆ ತಾಯಿಯ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಮರುತನಿಖೆಯ ಐತಿಹಾಸಿಕ ಆದೇಶ ನೀಡಿದೆ. ಆದರೆ, ಆ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ರಚಿಸಿರುವ ವಿಶೇಷ ತನಿಖಾ ತಂಡದ (SIT) ವೈಖರಿ ಹಾಗೂ ಅಧಿಕಾರಿಗಳ ಆಯ್ಕೆಯನ್ನು ನೋಡಿದರೆ, “ಇದು ಸತ್ಯವನ್ನು ಸಮಾಧಿ ಮಾಡಲು ಹೆಣೆದ ಇನ್ನೊಂದು ವ್ಯವಸ್ಥಿತ ಸಂಚೇ?” ಎನ್ನುವ ಅನುಮಾನ ಎದ್ದಿದೆ.
ಸರ್ಕಾರದ ಆದೇಶ ಮತ್ತು SIT ತಂಡದ ನೈಜ ಸ್ವರೂಪ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Soujanya Case) ಮರುತನಿಖೆಗೆ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ 5 ಸದಸ್ಯರ SIT ತಂಡವನ್ನು ರಚಿಸಲಾಗಿದೆ:
- ಎನ್. ಶಶಿಕುಮಾರ್, ಐ.ಪಿ.ಎಸ್. (ಪೋಲಿಸ್ ಮಹಾನಿರೀಕ್ಷಕರು) – ಮುಖ್ಯಸ್ಥರು.
- ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. (ಪೋಲಿಸ್ ಆಯುಕ್ತರು, ಮಂಗಳೂರು ನಗರ) – ಸದಸ್ಯರು.
- ನಿಶಾ ಜೇಮ್ಸ್, ಐ.ಪಿ.ಎಸ್. (ಪೋಲಿಸ್ ಅಧೀಕ್ಷಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು) – ಸದಸ್ಯರು.
- ಲೋಕೇಶ್ ಜಗಲಸಾರ್, ಐ.ಪಿ.ಎಸ್. (ಪೋಲಿಸ್ ಅಧೀಕ್ಷಕರು, ಸಿ.ಐ.ಡಿ, ಬೆಂಗಳೂರು) – ಸದಸ್ಯರು.
- ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಪೋಲಿಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ) – ಸದಸ್ಯರು.
ಈ ಇಡೀ ತಂಡದ ಚುಕ್ಕಾಣಿಯನ್ನು ಐಜಿಪಿ ಎನ್. ಶಶಿಕುಮಾರ್ ಅವರ ಕೈಗೆ ನೀಡಲಾಗಿದೆ. ಆದರೆ, ಸುಪ್ರೀಂ ಕೋರ್ಟ್ “ದಕ್ಷ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನಡೆಸಬಲ್ಲ ಹಾಗೂ ಸಂಪೂರ್ಣ ಮುಕ್ತ ಮನಸ್ಸಿನ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು” ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸರ್ಕಾರ ಇಂತಹ ಸಂಶಯಾಸ್ಪದ ಹಾಗೂ ವಿವಾದಾತ್ಮಕ ಅಧಿಕಾರಿಗಳ ತಂಡವನ್ನು ಆಯ್ಕೆ ಮಾಡಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಹುಟ್ಟುಹಾಕಿದೆ.
ಇದನ್ನೂ ಓದಿ: ರವಿ ಬೆಳಗೆರೆ ನೆಚ್ಚಿನ ‘ಅಣ್ಣ’, ಧಾರವಾಡದ ಧೈರ್ಯ; ಹಿರಿಯ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಎಂಬ ಜೀವಂತ ಅಧ್ಯಾಯ ಅಂತ್ಯ…!
ಹಾಡು-ಪಾಡುಗಳ ಶೋಮ್ಯಾನ್ ಕರದಲ್ಲೇ ‘ನ್ಯಾಯದ’ ಚುಕ್ಕಾಣಿ?
ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಎಂದರೆ ನೆನಪಾಗುವುದು ಕಠಿಣ ತನಿಖೆಗಳಲ್ಲ, ಭ್ರಷ್ಟರನ್ನು ಜೈಲಿಗಟ್ಟಿದ ಇತಿಹಾಸವಲ್ಲ; ಕಮಿಷನರ್ ಕಾರಿನಲ್ಲಿ ಕುಳಿತು ರೀಲ್ಸ್ ಮಾಡಿದ್ದು, ಜಾನಪದ ಹಾಡುಗಳನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದದ್ದಷ್ಟೇ. ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ವ್ಯಾಪ್ತಿಯಲ್ಲಿ ಇವರ ಅಧಿಕಾರದ ಅವಧಿಯನ್ನು ಹತ್ತಿರದಿಂದ ನೋಡಿದವರಿಗೆ ಚೆನ್ನಾಗಿ ಗೊತ್ತು—ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುವುದಕ್ಕಿಂತ, ಸಾರ್ವಜನಿಕ ಸಂಪರ್ಕ ಮತ್ತು ಪಬ್ಲಿಸಿಟಿ ಗಿಮಿಕ್ಗಳಲ್ಲೇ ಇವರು ಬ್ಯುಸಿಯಾಗಿದ್ದರು.
ಒಂದು ಹಸಿಬಿಸಿ ಕೊಲೆ, ಪ್ರಭಾವಿಗಳ ಶಾಮೀಲಾತಿ ಹಾಗೂ ಅತ್ಯಂತ ಕಟಿಬದ್ಧ ಸಾಕ್ಷ್ಯ ನಾಶ ನಡೆದಿರುವ ಮಹಾನ್ ದುರಂತದ (Soujanya Case) ತನಿಖೆಯನ್ನು, ‘ಲೈಕ್ಸ್ ಮತ್ತು ವ್ಯೂಸ್’ ಬೆನ್ನತ್ತುವ ಅಧಿಕಾರಿಯ ಕೈಗೆ ನೀಡಿದ್ದು ಸರ್ಕಾರ ಸೌಜನ್ಯ ಕುಟುಂಬಕ್ಕೆ ಮಾಡುತ್ತಿರುವ ದೊಡ್ಡ ದ್ರೋಹವಲ್ಲವೇ? ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರಂತಹ ಅನುಭವಿಗಳಿದ್ದರೂ, ನಾಯಕತ್ವವನ್ನು ಇಂತಹ ಲಘು ಮನಸ್ಥಿತಿಯ ಅಧಿಕಾರಿಗೆ ವಹಿಸಿರುವುದರ ಹಿಂದಿನ ಆಂತರಂಗಿಕ ಕರಾಳ ಉದ್ದೇಶವೇನು?
ಆರೋಪಗಳ ನೆರಳು ಇರುವ ವೆಂಕಟೇಶ್ ಪ್ರಸನ್ನಗೆ SIT ಯಲ್ಲಿ ಸ್ಥಾನ ಏಕೆ?
ತಂಡದ ಮುಖ್ಯಸ್ಥರಷ್ಟೇ ಅಲ್ಲದೆ, SIT ಸದಸ್ಯರಾಗಿ ನೇಮಕಗೊಂಡಿರುವ ಎಸಿಪಿ ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಎಸ್ಪಿ) ಅವರ ಸೇರ್ಪಡೆಯೂ ಈಗ ಭಾರೀ ಚರ್ಚೆಗೆ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಅಧಿಕಾರಿಯ ಸೇವಾ ಇತಿಹಾಸವನ್ನು ಒಮ್ಮೆ ಕೆದಕಿ ನೋಡಿದರೆ ಸಾಲು ಸಾಲು ಗಂಭೀರ ಆರೋಪಗಳು ಕಣ್ಣಿಗೆ ರಾರಾಜಿಸುತ್ತವೆ:
- ವಕೀಲ ನೌಶಾದ್ ಕಾಸಿಂಜಿ ಕೊಲೆ ಪ್ರಕರಣ: ಈ ಕರಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.
- ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣ: ರಾಜ್ಯಾದ್ಯಂತ ಸದ್ದು ಮಾಡಿದ್ದ ಆಂಬಿಡೆಂಟ್ ಹಗರಣದ ತನಿಖೆ ವೇಳೆಯೂ ಇವರ ಮೇಲೆ ಗಂಭೀರ ಆರೋಪಗಳು ವ್ಯಕ್ತವಾಗಿದ್ದವು.
- ಅಂಡರ್ವರ್ಲ್ಡ್ ರವಿ ಪೂಜಾರಿ ಸಂಪರ್ಕ ಮತ್ತು ತನಿಖಾ ಮಾಹಿತಿ ಸೋರಿಕೆ: ಭೂಗತ ಲೋಕದ ಅಪರಾಧಿ ರವಿ ಪೂಜಾರಿ ಜೊತೆಗಿನ ಸಂಪರ್ಕ ಹಾಗೂ ತನಿಖೆಯ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಕುರಿತಾಗಿಯೂ ಇವರ ಹೆಸರು ಆರೋಪಗಳ ಪಟ್ಟಿಯಲ್ಲಿದೆ.
- ಭ್ರಷ್ಟಾಚಾರದ ಇಲಾಖಾ ತನಿಖೆಗಳು: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದ ತನಿಖೆಗಳು ಹಾಗೂ ವರದಿಗಳು ಇವರ ವಿರುದ್ಧ ದಾಖಲಾಗಿವೆ.
ಸಾಲು ಸಾಲು ಕಪ್ಪು ಚುಕ್ಕೆಗಳನ್ನು ಇಟ್ಟುಕೊಂಡಿರುವ, ಸ್ವತಃ ಇಲಾಖಾ ತನಿಖೆಗಳು ಹಾಗೂ ಗಂಭೀರ ಆರೋಪಗಳ ನೆರಳಿನಲ್ಲಿರುವ ಅಧಿಕಾರಿಯನ್ನು ದೇಶವೇ ಉಸಿರು ಬಿಗಿಹಿಡಿದು ನೋಡುತ್ತಿರುವ ಸೌಜನ್ಯ ತನಿಖಾ ತಂಡಕ್ಕೆ (SIT) ಸೇರಿಸಿದ್ದಾದರೂ ಏಕೆ? ಇಷ್ಟೆಲ್ಲಾ ಆರೋಪಗಳಿದ್ದರೂ ಈ ಮಧ್ಯದಲ್ಲಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. “ಆರೋಪಿತ ಅಧಿಕಾರಿಯೇ ತನಿಖೆ ನಡೆಸಿದರೆ ಸೌಜನ್ಯಗೆ ಸಿಗುವ ನ್ಯಾಯವೆಷ್ಟು?” ಎನ್ನುವುದು ಜನಸಾಮಾನ್ಯರ ನೇರ ಪ್ರಶ್ನೆಯಾಗಿದೆ.
ವೈರಲ್ ಫೋಟೋ ಮತ್ತು ಹಿತಾಸಕ್ತಿಗಳ ಅಸಹ್ಯ ಸಂಘರ್ಷ (Conflict of Interest)
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Soujanya Case) ತನಿಖೆಗೆ SIT ರಚನೆ ಮಾಡಿದ ಬೆನ್ನಲ್ಲೇ ಐಜಿಪಿ ಶಶಿಕುಮಾರ್ ಅವರ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆ ಫೋಟೋದಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಗೋವಿಂದ ಕಾರಜೋಳ ಮತ್ತು ಮಾಧ್ಯಮ ನಿರೂಪಕ ಅಜೀತ್ ಹಣಮಕ್ಕನವರ್ (ಅಜೀತ್ ಜೈನ್) ಜೊತೆ ಶಶಿಕುಮಾರ್ ಅತ್ಯಂತ ನಿಕಟವಾಗಿ ಕಾಣಿಸಿಕೊಂಡಿದ್ದಾರೆ.

ಇಲ್ಲಿ ಅಜೀತ್ ಹಣಮಕ್ಕನವರ್ ಅವರ ಇತಿಹಾಸವನ್ನು ಕೆದಕಿದರೆ ಸಿಗುವುದು ‘ನ್ಯಾಯದ ಮುಖವಾಡ ತೊಟ್ಟ ಪಕ್ಷಪಾತ’. ಸೌಜನ್ಯ ಪ್ರಕರಣದಲ್ಲಿ ಮೊದಲಿನಿಂದಲೂ ಪ್ರಭಾವಿ ಕುಟುಂಬದ ಪರವಾಗಿ ಅಷ್ಟೊಂದು ಗಟ್ಟಿಯಾಗಿ, ಧರ್ಮಸ್ಥಳದ ಪರ ವಕಾಲತ್ತು ವಹಿಸುತ್ತಾ ಬಂದವರು ಈ ಅಜೀತ್. “ನಾನೇ ಸ್ವತಃ ತನಿಖೆ ಮಾಡಿದ್ದೇನೆ, ಸಿಐಡಿ-ಸಿಬಿಐ ತನಿಖೆಗಳೇ ಸರಿ, ಆ ಸಂತೋಷ್ ರಾವ್ ಎಂಬಾತನೇ ಈ ಕೊಲೆಯನ್ನು ಮಾಡಿದ್ದು” ಎಂದು ಟಿವಿ ಸ್ಟುಡಿಯೋಗಳಲ್ಲಿ ಹಾಗೂ ಹೊರಗಿನ ಕಾರ್ಯಕ್ರಮಗಳಲ್ಲಿ ಆಕ್ರೋಶದಿಂದ ಕೂಗಾಡಿದ್ದ ವ್ಯಕ್ತಿ ಈ ನಿರೂಪಕ.
ಆದರೆ, ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳಿದೆ ಗೊತ್ತೇ? “ಸಂತೋಷ್ ರಾವ್ ಸಂಪೂರ್ಣವಾಗಿ ಅಮಾಯಕ, ಆತನನ್ನು ಈ ಮರುತನಿಖೆಯಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಎಳೆದುತರಬಾರದು, ಆತನಿಗೆ ಕಿರುಕುಳ ನೀಡಬಾರದು” ಎಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು ಸ್ಪಷ್ಟ ಕಟ್ಟುನಿಟ್ಟಿನ ಶರತ್ತು ವಿಧಿಸಿದೆ.
ನ್ಯಾಯಾಲಯವೇ ಅಮಾಯಕ ಎಂದು ಸಾಬೀತುಪಡಿಸಿದ ಒಬ್ಬ ವ್ಯಕ್ತಿಯನ್ನು “ಅವನೇ ಕೊಲೆಗಾರ” ಎಂದು ಸಮರ್ಥಿಸಿಕೊಳ್ಳುವ ಅಂಧಾಭಿಮಾನದ ವ್ಯಕ್ತಿಗಳು ಮತ್ತು ಪ್ರಭಾವಿ ರಾಜಕಾರಣಿಗಳ ಜೊತೆಗೆ ಸಲುಗೆಯಿಂದಿರುವ ಅಧಿಕಾರಿಗೆ, ಅದೇ ಪ್ರಕರಣದ ತನಿಖಾ ನಾಯಕತ್ವ ಸಿಕ್ಕಿದರೆ ಪಾರದರ್ಶಕತೆ ಎಲ್ಲಿಂದ ಬರಬೇಕು? ರಾಜಕೀಯ ದುರುದ್ದೇಶದ ಮತ್ತು ಪಕ್ಷಪಾತಿ ಹಿತಾಸಕ್ತಿಗಳ ಜಾಲದ ನಡುವೆ ಈ ತನಿಖೆ ಸಿಲುಕಿ ನಲುಗುವುದಿಲ್ಲವೇ?
ಸೋಷಿಯಲ್ ಮೀಡಿಯಾದಲ್ಲಿ ಜನಾಕ್ರೋಶ ಮತ್ತು ಹೋರಾಟಗಾರರ ಎಚ್ಚರಿಕೆ
SIT ಮುಖ್ಯಸ್ಥರಾಗಿ ಎನ್. ಶಶಿಕುಮಾರ್ ಹಾಗೂ ಸದಸ್ಯರಾಗಿ ವೆಂಕಟೇಶ್ ಪ್ರಸನ್ನ ನೇಮಕವಾಗುತ್ತಿದ್ದಂತೆಯೇ, ಸೋಶಿಯಲ್ ಮೀಡಿಯಾದಲ್ಲಿ ಸೌಜನ್ಯ ಪರ ಧ್ವನಿ ಎತ್ತುವ ನೆಟ್ಟಿಗರು, ಸಾರ್ವಜನಿಕರು ಹಾಗೂ ಹೋರಾಟಗಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಇದು ನ್ಯಾಯ ನೀಡುವ ತನಿಖೆಯಲ್ಲ, ಪ್ರಭಾವಿಗಳನ್ನು ರಕ್ಷಿಸಲು ಹಾಗೂ ಸತ್ಯ ಮುಚ್ಚಿಹಾಕಲು ಹಣೆದಿರುವ ನಾಟಕ” ಎಂದು ನೆಟ್ಟಿಗರು ಪೋಸ್ಟ್ಗಳ ಮೂಲಕ ಕಿಡಿಕಾರುತ್ತಿದ್ದಾರೆ.
ಈ ಕುರಿತು ಸೌಜನ್ಯ ನ್ಯಾಯಪರ ಹೋರಾಟಗಾರರಾದ ಜಯಂತ್ ಟಿ ಅವರು ನೀಡಿರುವ ಹೇಳಿಕೆ ರಾಜ್ಯ ಸರ್ಕಾರದ ಕಣ್ಣು ತೆರೆಸುವಂತಿದೆ:
“ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಯುತ್ತಿರುವುದು ಕೇವಲ ರಾಜ್ಯಕ್ಕಷ್ಟೇ ಅಲ್ಲ, ದೇಶ-ವಿದೇಶಗಳಲ್ಲೂ ತೀವ್ರ ಗಮನಸೆಳೆದಿದೆ. ಇಂತಹ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣದ ತನಿಖೆಯಲ್ಲಿ ಸಾರ್ವಜನಿಕರ ವಿಶ್ವಾಸ ಅತ್ಯಗತ್ಯ. ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಮಾತ್ರ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿಹಿಡಿಯಬಲ್ಲದು. ಸರ್ಕಾರ ಈ ತನಿಖೆಯ ಪ್ರಕ್ರಿಯೆಯಲ್ಲಿ ತಕ್ಷಣವೇ ಸೂಕ್ತ ಎಚ್ಚರಿಕೆ ವಹಿಸಬೇಕು. ಜನರಲ್ಲಿ ಅನುಮಾನ ಮತ್ತು ಆಕ್ರೋಶ ಮುಂದುವರಿದರೆ ಮತ್ತೊಂದು ಉಗ್ರ ಹೋರಾಟ ಅನಿವಾರ್ಯವಾದೀತು. ಸರ್ಕಾರ ಮುಂದಾಗುವ ಅನಾಹುತಗಳನ್ನು ತಪ್ಪಿಸಿ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತಳೆಯಬೇಕು.”
ಹೋರಾಟಗಾರರ ಈ ಎಚ್ಚರಿಕೆಯ ಮಾತುಗಳು, ಇಡೀ ನಾಡಿನ ಜನತೆಯ ಅನುಮಾನ ಮತ್ತು ಆತಂಕಕ್ಕೆ ಧ್ವನಿಯಾಗಿವೆ.
ಆಡಳಿತಾರೂಢ ಅಧಿಕಾರದ ಅಸಹನೆ ಮತ್ತು ಕಪಟತನ
ಪ್ರಸ್ತುತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ನಾಯಕರ ಈ ಹಿಂದಿನ ನಡವಳಿಕೆಗಳನ್ನು ಸಾರ್ವಜನಿಕರು ಇಂದಿಗೂ ಮರೆತಿಲ್ಲ. ಸೌಜನ್ಯ ಅವರ ತಾಯಿ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಗ, ಆ ತಾಯಿಯ ಕಣ್ಣೀರನ್ನು ಒರೆಸುವ ಬದಲು, “ನೀವು ಯಾರದ್ದೋ ಪಾರ್ಟಿಯವರ ಕಿತಾಪತಿಗೆ ಬಲಿಯಾಗುತ್ತಿದ್ದೀರಿ, ಯಾರೋ ನಿಮ್ಮನ್ನು ಎತ್ತಿಕಟ್ಟುತ್ತಿದ್ದಾರೆ” ಎಂದು ಉಡಾಫೆಯಿಂದ ಹಿಯಾಳಿಸಿದವರು ಇದೇ ಆಡಳಿತಗಾರರು.
ಪ್ರಕರಣದ ತಿರುಚುವಿಕೆ ವಿರುದ್ಧ ಮತ್ತು ಪ್ರಭಾವಿಗಳ ಅಕ್ರಮದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನಾಯಕ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರ ಮೇಲೆ ಅಧಿಕಾರವನ್ನು ಬಳಸಿ ಗಡಿಪಾರು ಆದೇಶ ಹೊರಡಿಸಲಾಯಿತು, “ಅವನನ್ನು ಒದ್ದು ಒಳಗ ಹಾಕಿ” ಎಂದು ಮಾಧ್ಯಮಗಳ ಎದುರು ಘರ್ಜಿಸಲಾಯಿತು. ಹೋರಾಟಗಾರರ ಕುರಿತು, ಸಂತ್ರಸ್ತ ಕುಟುಂಬದ ಕುರಿತು ಇಷ್ಟೊಂದು ಅಸಹನೆ, ಕೋಪ ಮತ್ತು ದ್ವೇಷವನ್ನು ಕಾರಿಕೊಂಡವರ ಕೈಯಲ್ಲೇ ಇಂದು ರಾಜ್ಯದ ಅಧಿಕಾರವಿದೆ!
ಅವರಿಂದಲೇ ಈ ‘SIT’ ಎಂಬ ತಂಡ ರಚನೆಯಾಗಿದೆ. ಹೋರಾಟಗಾರರನ್ನು ತುಳಿಯಲು ಯತ್ನಿಸಿದ ಸರ್ಕಾರವೇ ತನಿಖಾ ತಂಡವನ್ನು ರಚಿಸಿದಾಗ, ಅಲ್ಲಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದು ನಿರೀಕ್ಷಿಸುವುದು ಕುರಿ ತನ್ನನ್ನು ಕೊಲ್ಲಲು ಬಂದ ಕಟುಕನಿಂದ ಅನುಕಂಪ ಬಯಸಿದಂತೆ!
14 ವರ್ಷಗಳ ತನಿಖಾ ವೈಫಲ್ಯ vs 3 ತಿಂಗಳ ಗಡುವು: ಮತ್ತೆ ಹಳ್ಳ ಹಿಡಿಯಲಿದೆಯೇ ಕೇಸ್?
2012ರಲ್ಲಿ ನಡೆದ ಈ ದಾರುಣ ಘಟನೆಯಿಂದ ಹಿಡಿದು ಇಂದಿನವರೆಗೆ ನಡೆದ ಪ್ರತಿಯೊಂದು ತನಿಖೆಯೂ ಸಾಕ್ಷ್ಯಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೇ ಆದ್ಯತೆ ನೀಡಿದೆ.
- ಸ್ಥಳೀಯ ಪೊಲೀಸರು: ಘಟನಾ ಸ್ಥಳದ ಪ್ರಮುಖ ಬಟ್ಟೆಗಳು, ಸಾಕ್ಷ್ಯಗಳನ್ನು ತೊಳೆಯುವ ಮೂಲಕ ಸಾಕ್ಷ್ಯನಾಶಕ್ಕೆ ಸಾಕ್ಷಿಯಾದರು.
- ಸಿಐಡಿ: ಪ್ರಭಾವಿ ಕುಟುಂಬದ ಹೆಸರುಗಳು ಹೊರಬರದಂತೆ ಕೇವಲ ಒಬ್ಬ ಮಾನಸಿಕ ಅಸ್ವಸ್ಥನನ್ನು (ಸಂತೋಷ್ ರಾವ್) ಬಲಿಪಶುವನ್ನಾಗಿ ಮಾಡುವ ತರಪೇತಿ ನೀಡಿತು.
- ಸಿಬಿಐ: ದೇಶದ ಪ್ರಮುಖ ತನಿಖಾ ಸಂಸ್ಥೆಯೂ ಪ್ರಭಾವಿಗಳ ಆಸ್ತಿ, ಅಧಿಕಾರ ಮತ್ತು ಹಣದ ಬಲದ ಮುಂದೆ ಮಂಡಿಯೂರಿ, ಸಾಕ್ಷ್ಯಾಧಾರಗಳಿಲ್ಲದ ದುರ್ಬಲ ಚಾರ್ಜ್ಶೀಟ್ ಹಾಕಿ ತನ್ನ ಜವಾಬ್ದಾರಿಯಿಂದ ಕಾಲು ಕತ್ತರಿಸಿಕೊಂಡಿತು.
ಈಗ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನೀಡಿದ್ದು ಕೇವಲ 3 ತಿಂಗಳ ಕಾಲಾವಕಾಶ. 14 ವರ್ಷಗಳಲ್ಲಿ ನಾಶಪಡಿಸಲಾದ, ಕಣ್ಮರೆ ಮಾಡಲಾದ, ಸುಟ್ಟು ಹಾಕಲಾದ ಸಾಕ್ಷ್ಯಗಳನ್ನು ಹುಡುಕಿ, ನಿಜವಾದ ರಾಕ್ಷಸರನ್ನು ಜೈಲಿಗೆ ಅಟ್ಟುವುದು ಈ 90 ದಿನಗಳಲ್ಲಿ ಸಾಧ್ಯವೇ? ಅದೂ ಸೋಶಿಯಲ್ ಮೀಡಿಯಾ ಫೇಮಸ್ ಅಧಿಕಾರಿ ಹಾಗೂ ಆರೋಪಗಳ ನೆರಳಿರುವ ಅಧಿಕಾರಿಗಳು ಇರುವ ತಂಡದಲ್ಲಿ?
ಇದು ಸುಪ್ರೀಂ ಕೋರ್ಟ್ನ ಕಣ್ಣಿಗೆ ಮಣ್ಣೆರಚಲು ಮತ್ತು 3 ತಿಂಗಳ ನಂತರ “ನಾವು ತನಿಖೆ ಮಾಡಿದೆವು, ಆದರೆ ಸಾಕ್ಷ್ಯ ಸಿಗಲಿಲ್ಲ” ಎಂದು ಕೈತೊಳೆದುಕೊಳ್ಳಲು ಹೆಣೆದಿರುವ ಕಾಲಹರಣದ ಯೋಜನೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ….
ಇದನ್ನೂ ಓದಿ: ನಮ್ಮ ‘ಮತ’ ನುಂಗಿದ ಆಯೋಗದ ‘ಕೈ’! ಚುನಾವಣಾ ಆಯೋಗದಲ್ಲೇ ‘ದಂಗೆ’ – ಪ್ರಜಾಪ್ರಭುತ್ವಕ್ಕೆ ಬೀಳುತ್ತಿದೆಯೇ ಮರಣಪೆಟ್ಟು?
ನಿಷ್ಪಕ್ಷಪಾತ ತನಿಖೆಗೆ ಬೆಂಕಿ ಬಿತ್ತಾ?
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೇವಲ ಒಬ್ಬ ಹುಡುಗಿಯ ಸಾವಿನ ಪ್ರಶ್ನೆಯಲ್ಲ; ಈ ದೇಶದ ಕಾನೂನು ವ್ಯವಸ್ಥೆ ಪ್ರಭಾವಿಗಳ ಮುಂದೆ ಬಗ್ಗುತ್ತದೆಯೋ ಅಥವಾ ಒಬ್ಬ ಬಡ ತಾಯಿಯ ಕಣ್ಣೀರಿಗೆ ಜಯ ಸಿಗುತ್ತದೆಯೋ ಎನ್ನುವ ಐತಿಹಾಸಿಕ ಪರೀಕ್ಷೆ.
ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿದಾಗ ಮೂಡಿದ್ದ ಭರವಸೆಯ ಕಿಡಿ, ಸರ್ಕಾರ ರಚಿಸಿರುವ ಈ ‘ಅನುಮಾನಾಸ್ಪದ SIT’ಯಿಂದಾಗಿ ನಂದಿಹೋಗುವ ಭೀತಿ ಎದುರಾಗಿದೆ. ಪ್ರಭಾವಿ ನೆರಳುಗಳ ಜೊತೆ ಫೋಟೋಗೆ ಪೋಸ್ ನೀಡುವ ಅಧಿಕಾರಿಗಳು ಮತ್ತು ಸಾಲು ಸಾಲು ಆರೋಪ ಹೊತ್ತಿರುವ ಅಧಿಕಾರಿಗಳು ಇರುವಾಗ, ಪಾರದರ್ಶಕ ತನಿಖೆ ಎನ್ನುವುದು ಬರೀ ಹಗಲುಗನಸು!
ನ್ಯಾಯ ಸಿಗಬೇಕಾದರೆ, ತಕ್ಷಣವೇ ಸಾರ್ವಜನಿಕರಲ್ಲಿ ಅಪನಂಬಿಕೆ ಮೂಡಿಸಿರುವ ಈ SIT ತಂಡವನ್ನು ಪುನರ್ ರಚಿಸಬೇಕು. ಯಾವುದೇ ರಾಜಕೀಯ, ಪ್ರಭಾವಿ ಅಥವಾ ಕಪ್ಪು ಚುಕ್ಕೆಗಳಿಲ್ಲದ ಅತ್ಯಂತ ಕಠಿಣ ಹಾಗೂ ಶಿಸ್ತಿನ ನಿಷ್ಪಕ್ಷಪಾತ ಅಧಿಕಾರಿಗಳಿಗೆ ತನಿಖೆಯ ಪೂರ್ಣ ಹೊಣೆ ನೀಡಬೇಕು. ಇಲ್ಲವಾದರೆ, 14 ವರ್ಷಗಳಿಂದ ನಡೆದ ತನಿಖಾ ಹಸನುಮಾಡುವಿಕೆಯ ಪ್ರಹಸನ ಮತ್ತೆ ಮುಂದುವರಿಯುತ್ತದೆ, ಮತ್ತು ಧರ್ಮಸ್ಥಳದ ಮಣ್ಣಿನಲ್ಲಿ ಸೌಜನ್ಯಳ ಆತ್ಮ ಹಾಗೂ ಸಾರ್ವಜನಿಕರ ನ್ಯಾಯದ ಭರವಸೆ ಶಾಶ್ವತವಾಗಿ ಹೂತುಹೋಗುತ್ತದೆ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






