ಬಾಗಲಕೋಟೆ (Bagalkot) ಜಿಲ್ಲಾ ರಾಜಕಾರಣಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಆದರೆ, ಇಲ್ಲಿನ ಕಾಂಗ್ರೆಸ್‌ಗೆ ಹೊಸದಾಗಿ ಬರುವ ಅಧ್ಯಕ್ಷರ ಸ್ಥಾನವೆಂದರೆ ಅದು ಕೇವಲ ಅಧಿಕಾರದ ಪೀಠವಲ್ಲ, ಬದಲಿಗೆ ‘ಬಿಸಿ ತುಪ್ಪ’. ಇತ್ತೀಚೆಗೆ ಮಾಜಿ ಸಂಸದ ದಿವಂಗತ ಎಸ್.ಟಿ. ಪಾಟೀಲರ ಪುತ್ರ ದಯಾನಂದ ಪಾಟೀಲರನ್ನು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಆದೇಶ ಹೊರಬಿದ್ದ ಬೆನ್ನಲ್ಲೇ, ಜಿಲ್ಲಾ ಕೈ ಪಡೆ ಒಳಗೆ ಆಂತರಿಕ ಅಸಮಾಧಾನದ ಪಟಾಕಿ ಸಿಡಿಯಲು ಆರಂಭಿಸಿದೆ. ಹೈಕಮಾಂಡ್ ತಳೆದ ಈ ದಿಢೀರ್ ನಿರ್ಧಾರ, ದಶಕಗಳಿಂದ ಪಕ್ಷಕ್ಕೆ ದುಡಿದು ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದ ನಾಯಕರಿಗೆ ಕಾದ ಹೆಂಚಿನ ಮೇಲೆ ನೀರು ಚೆಲ್ಲಿದಂತಾಗಿದೆ. ಮೇಲ್ನೋಟಕ್ಕೆ ಇದು ಕೇವಲ ಒಂದು ಹುದ್ದೆಯ ನೇಮಕಾತಿ ಎನಿಸಿದರೂ, ಇದರ ಹಿಂದೆ ರಾಜಕೀಯ ಷಡ್ಯಂತ್ರ, ಕಾಯಂ ಒಳಹೊಡೆತದ ಸಂಪ್ರದಾಯ ಹಾಗೂ ನಾಯಕರ ನಡುವಿನ ಮೇಲಾಟದ ಬೃಹತ್ ಇತಿಹಾಸವೇ ಅಡಗಿದೆ.
ಅರ್ಜಿ ಸಲ್ಲಿಸಿದವರಿಗೆ ನಿರಾಸೆ, ಅರ್ಜಿ ಸಲ್ಲಿಸದವರಿಗೆ ಸಿಂಹಾಸನ!
ಪಕ್ಷದಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಾಯಕತ್ವವನ್ನು ಆಯ್ಕೆ ಮಾಡುತ್ತೇವೆ ಎಂದು ಹೈಕಮಾಂಡ್ ನಾಟಕವಾಡಿದ್ದೇ ಈ ಇಡೀ ಗೊಂದಲಕ್ಕೆ ಮೂಲ ಕಾರಣ. ಬಾಗಲಕೋಟೆಗೆ (Bagalkot) ವೀಕ್ಷಕರಾಗಿ ಆಗಮಿಸಿದ್ದ ಬೆಳ್ಳಯ್ಯ ಅವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಸರಣಿ ಸಭೆಗಳನ್ನು ನಡೆಸಿ, ಆಕಾಂಕ್ಷಿಗಳಿಂದ ಅಧಿಕೃತವಾಗಿ ಅರ್ಜಿಗಳನ್ನು ಸ್ವೀಕರಿಸಿದ್ದರು. ತಳಮಟ್ಟದಲ್ಲಿ ಸಂಘಟನೆ ಕಟ್ಟಿದ, ಕಾರ್ಯಕರ್ತರ ಜತೆ ಒಡನಾಟ ಇಟ್ಟುಕೊಂಡಿದ್ದ ಅನೇಕ ಹಿರಿಯ ಮುಖಂಡರು ನಾವೂ-ನೀವು ಎಂದು ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿದ್ದರು. ಆದರೆ ಅಂತಿಮವಾಗಿ ವರಿಷ್ಠರು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಇದ್ದದ್ದು ಅರ್ಜಿ ಸಲ್ಲಿಸದೇ ಇರುವ ದಯಾನಂದ ಪಾಟೀಲರ ಹೆಸರು!
ಅರ್ಜಿ ಸಲ್ಲಿಸಿ, ಪಕ್ಷದ ಚೌಕಟ್ಟಿನಲ್ಲಿ ಕಾಯುತ್ತಿದ್ದ ನಾಯಕರನ್ನು ಸಂಪೂರ್ಣವಾಗಿ ಕಡೆಗಣಿಸಿ, ಅರ್ಜಿ ಹಾಕದ ವ್ಯಕ್ತಿಗೆ ಮಣೆ ಹಾಕಿದ್ದು ಯಾವ ನ್ಯಾಯ ಎಂಬ ಪ್ರಶ್ನೆ ಈಗ ಗಲ್ಲಿ ಗಲ್ಲಿಯಲ್ಲೂ ಕೇಳಿಬರುತ್ತಿದೆ. ಹೈಕಮಾಂಡ್ ನಡೆಸಿದ ಈ ‘ಅರ್ಜಿ ಪ್ರಹಸನ’ ಬರೀ ಕಣ್ಣೊರೆಸುವ ತಂತ್ರವಾಗಿತ್ತೇ? ಹಿರಿಯ ನಾಯಕರನ್ನು ಮೂರ್ಖರನ್ನಾಗಿ ಮಾಡಲು ವೀಕ್ಷಕರನ್ನು ಕಳುಹಿಸಲಾಗಿತ್ತೇ? ಎಂಬ ಆಕ್ರೋಶದ ಮಾತುಗಳು ಆಕಾಂಕ್ಷಿಗಳಿಂದ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ತಪ್ಪು ಮಾಡಿದ್ರಾ ತಪಶೆಟ್ಟಿ? ಶಾಸಕ ಉಮೇಶನದ್ದು ದುರಾಸೆಯೋ ಅಥವಾ ಸೂತಧಾರಿಯ ಕೈಗೊಂಬೆ ಆಟವೋ?
‘ಕಾರ್ಪೊರೇಟ್’ ಶೈಲಿಯ ನಾಯಕತ್ವ ಮತ್ತು ಸಚಿವರ ಅಭಯ ಹಸ್ತ
ಆಯ್ಕೆಯಾಗಿರುವ ದಯಾನಂದ ಪಾಟೀಲರು ಜಿಲ್ಲೆಯ ಸಾಮಾನ್ಯ ಕಾರ್ಯಕರ್ತನಿಗೆ ಅಷ್ಟಾಗಿ ಪರಿಚಿತರಲ್ಲ ಎನ್ನುವುದು ಬಾಗಲಕೋಟೆ (Bagalkot) ಕಾಂಗ್ರೆಸ್ ಒಳಗಿನ ಪ್ರಮುಖ ಆರೋಪ. ಇವರದ್ದು ‘ಕಾರ್ಪೊರೇಟ್ ಮಟ್ಟದ’ ರಾಜಕಾರಣ ಎನ್ನಲಾಗುತ್ತಿದೆ. ಎಸಿ ರೂಮ್‌ಗಳಲ್ಲಿ ರಾಜಕೀಯ ಚರ್ಚೆ ನಡೆಸುವುದು ಬೇರೆ, ಧೂಳು ತುಂಬಿದ ರಸ್ತೆಯಲ್ಲಿ ಕಾರ್ಯಕರ್ತನ ಹೆಗಲ ಮೇಲೆ ಕೈಹಾಕಿ ಪಕ್ಷ ಸಂಘಟಿಸುವುದು ಬೇರೆ. ಕಾರ್ಯಕರ್ತರ ಜತೆ ನೇರ ಸಂಪರ್ಕವಿಲ್ಲದ ಒಬ್ಬ ನಾಯಕ ಹೇಗೆ ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮಾಡಲು ಸಾಧ್ಯ ಎಂಬ ಪ್ರಶ್ನೆ ಇದೀಗ ಕಾಮಗ್ರೆಸ್ ವಲಯದಲ್ಲಿ ಎದ್ದಿದೆ.
ಇನ್ನು ದಯಾನಂದ ಪಾಟೀಲರ ಈ ಅಚ್ಚರಿಯ ನೇಮಕಾತಿಯ ಹಿಂದೆ ರಾಜ್ಯ ರಾಜಕಾರಣದ ಇಬ್ಬರು ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲರ ಬಲವಾದ ಕೃಪಾಕಟಾಕ್ಷವಿದೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಜಿಲ್ಲೆಯ ರೆಡ್ಡಿ ಸಮುದಾಯದ ಹಿರಿಯ ನಾಯಕರ ಬೆಂಬಲವೂ ಇದೆ ಎಂಬುದು ಸುಳ್ಳಲ್ಲ. ಇವರ ಬೆಂಬಲದಿಂದಾಗಿಯೇ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ, ಅರ್ಜಿ ಹಾಕಿದವರನ್ನೇಲ್ಲ ಹಿಂದಿಕ್ಕಿ ಅರ್ಜಿ ಹಾಕದೆಯೇ ಈ ಹುದ್ದೆಯನ್ನು ಗಿಟ್ಟಿಸಿಕೊಳ್ಳಲಾಗಿದೆ. ಬೆಂಗಳೂರು-ಬೆಳಗಾವಿ ಮಟ್ಟದ ಪ್ರಭಾವ ಬಳಸಿ ಅಧ್ಯಕ್ಷರಾಗಿದ್ದು ಜಿಲ್ಲೆಯ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
‘ಪಕ್ಷ ವಿರೋಧಿ’ ಚಟುವಟಿಕೆಯ ಆರೋಪ: ಆರ್‌ಬಿ ತಿಮ್ಮಾಪುರ ಬೆಂಬಲಿಗರ ಆಕ್ರೋಶ
ದಯಾನಂದ ಪಾಟೀಲರ ನೇಮಕಕ್ಕೆ ಅತ್ಯಂತ ಪ್ರಮುಖ ಮತ್ತು ಗಂಭೀರ ವಿರೋಧ ವ್ಯಕ್ತವಾಗುತ್ತಿರುವುದು ಮುಧೋಳ ಕ್ಷೇತ್ರದಿಂದ. ಮಾಜಿ ಸಚಿವ ಆರ್‌ಬಿ ತಿಮ್ಮಾಪುರ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ನೂತನ ಅಧ್ಯಕ್ಷರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ʻʻಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಆರ್‌ಬಿ ತಿಮ್ಮಾಪುರ ಅವರ ವಿರುದ್ಧವಾಗಿ ದಯಾನಂದ ಪಾಟೀಲರು ಹಾಗೂ ಅವರ ಹಿಂಬಾಲಕರು ಕೆಲಸ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಒಳಸಂಚು ನಡೆಸಿದ ವ್ಯಕ್ತಿಗೆ ಇಡೀ ಜಿಲ್ಲೆಯ ಪಕ್ಷದ ಚುಕ್ಕಾಣಿ ನೀಡಿರುವುದು ಪಕ್ಷದ್ರೋಹಕ್ಕೆ ಸಿಕ್ಕ ಬಹುಮಾನವೇʼʼ ಎಂದು ತಿಮ್ಮಾಪುರ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.
ಪಕ್ಷದ ನಿಯಮಾವಳಿಗಳ ಪ್ರಕಾರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಆದರೆ ಬಾಗಲಕೋಟೆಯಲ್ಲಿ ಉಲ್ಟಾ ಗಂಗಾ ಹರಿಯುತ್ತಿದ್ದು, ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರಿಗೇ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ ಎಂಬ ಕೂಗು ಗಟ್ಟಿಯಾಗುತ್ತಿದೆ.
ಜಿಲ್ಲಾ ಕಾಂಗ್ರೆಸ್‌ನಲ್ಲಿನ ಪ್ರಮುಖ ಸವಾಲುಗಳು ಹಾಗೂ ಗೊಂದಲಗಳು
- ಆಂತರಿಕ ಒಳಹೊಡೆತ: ಜಿಲ್ಲೆಯಲ್ಲಿ ಬಿಜೆಪಿಯನ್ನು ಎದುರಿಸುವುದಕ್ಕಿಂತ ಸ್ವಪಕ್ಷೀಯರೇ ಪರಸ್ಪರ ಕಾಲಳೆಯುವ ಸಂಪ್ರದಾಯ ಮೊದಲಿನಿಂದ ನಡೆದುಕೊಂಡು ಬಂದಿದೆ.
- ಕಾರ್ಯಕರ್ತರ ಅಂತರ: ಕಾರ್ಪೊರೇಟ್ ಶೈಲಿಯ ನಾಯಕತ್ವದಿಂದಾಗಿ ತಳಮಟ್ಟದ ಕಾರ್ಯಕರ್ತರು ನಾಯಕರಿಂದ ದೂರವಾಗುವ ಭೀತಿ.
- ಸ್ಥಳೀಯ ಶಾಸಕರ ಅಸಮಾಧಾನ: ಪ್ರಭಾವಿ ಶಾಸಕರು ಹಾಗೂ ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೈಕಮಾಂಡ್ ಏಕಪಕ್ಷೀಯ ತೀರ್ಮಾನ ತಳೆದಿರುವುದು.
- ಸಮುದಾಯಗಳ ತಿಕ್ಕಾಟ: ನೂತನ ಅಧ್ಯಕ್ಷರ ಆಯ್ಕೆಯಿಂದಾಗಿ ಜಿಲ್ಲೆಯ ಆಡಳಿತ ಹಾಗೂ ಸಂಘಟನೆಯಲ್ಲಿ ಜಾತೀಯ ಧ್ರುವೀಕರಣ ಹೆಚ್ಚಾಗುವ ಲಕ್ಷಣಗಳು.
ಒಳಹೊಡೆತದ ಹಳೆಯ ಸಂಪ್ರದಾಯ: ಇಂದಿಗಾದರೂ ಅಂತ್ಯ ಸಿಗುವುದೇ?
ಬಾಗಲಕೋಟೆ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ‘ಒಳಹೊಡೆತ’ ಎಂಬುದು ಒಂದು ಪದ್ಧತಿಯಂತೆ ನಡೆದುಕೊಂಡು ಬಂದಿದೆ. ಚುನಾವಣೆಯ ಸಮಯದಲ್ಲಿ ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ, ತಮ್ಮದೇ ಪಕ್ಷದ ಒಳಗಿರುವ ಆಂತರಿಕ ಶತ್ರುಗಳನ್ನು ಅಥವಾ ಕಾಂಪಿಟೇಟರ್‌ಗಳನ್ನು ವ್ಯವಸ್ಥಿತವಾಗಿ ಸೋಲಿಸುವ ಕೆಲಸವನ್ನು ಇಲ್ಲಿನ ಕೆಲ ನಾಯಕರು ಕಲೆ ಎಂಬಂತೆ ಕರಗತ ಮಾಡಿಕೊಂಡಿದ್ದಾರೆ.
ಈ ಬಾರಿಯ ಅಧ್ಯಕ್ಷರ ನೇಮಕವನ್ನು ನೋಡಿದರೆ, ಆ ಹಳೆಯ ‘ಒಳಹೊಡೆತ’ದ ಸಂಪ್ರದಾಯ ಮುಕ್ತಾಯವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಿಗೆ, ಯಾರನ್ನೋ ರಾಜಕೀಯವಾಗಿ ಮುಗಿಸಲು, ಇನ್ಯಾರೋ ನಾಯಕರನ್ನು ಮೂಲೆಗುಂಪು ಮಾಡಲು ಹೆಣೆದಿರುವ ಬೃಹತ್ ಷಡ್ಯಂತ್ರ ಇದರ ಹಿಂದಿದೆ ಎಂಬ ಅನುಮಾನ ದೃಢವಾಗಿ ಮೂಡಿದೆ. ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಕೃತ್ಯಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಲಿಂಗಾಯತ VS ರೆಡ್ಡಿ: ಜಾತೀಯ ಸಮೀಕರಣ ಮತ್ತು ಉಸ್ತುವಾರಿ ಸಚಿವರ ಇರಿಸುಮುರಿಸು
ಈ ಎಲ್ಲ ಗೊಂದಲಗಳ ನಡುವೆ ಈಗ ಜಿಲ್ಲೆಯಲ್ಲಿ ‘ಲಿಂಗಾಯತ ಹಾಗೂ ರೆಡ್ಡಿ’ ಸಮುದಾಯಗಳ ನಡುವಿನ ಜಾತೀಯ ರಾಜಕೀಯ ಮುನ್ನಲೆಗೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಿಲ್ಲೆಯ ಮಟ್ಟದಲ್ಲಿ ರೆಡ್ಡಿ ಸಮುದಾಯದ ಪ್ರಭಾವಿ ನಾಯಕರೊಂದಿಗೆ ಉಸ್ತುವಾರಿ ಸಚಿವರಿಗೆ ಮೊದಲಿನಿಂದಲೂ ಸೈದ್ಧಾಂತಿಕ ಹಾಗೂ ರಾಜಕೀಯ ಇರಿಸುಮುರಿಸುಗಳು ಇದ್ದೇ ಇವೆ.
ಈಗ ನೇಮಕಗೊಂಡಿರುವ ನೂತನ ಜಿಲ್ಲಾಧ್ಯಕ್ಷರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು, ಉಸ್ತುವಾರಿ ಸಚಿವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಒಂದೆಡೆ ಪಂಚಮಸಾಲಿ ಲಿಂಗಾಯತ ನಾಯಕತ್ವ, ಇನ್ನೊಂದೆಡೆ ರೆಡ್ಡಿ ಸಮುದಾಯದ ಅಧ್ಯಕ್ಷರ ಪ್ರಭಾವ – ಈ ಇಬ್ಬರ ನಡುವಿನ ಶೀತಲ ಸಮರ ಮುಂದೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಬಿರುಕಿಗೆ ಕಾರಣವಾಗಲಿದೆ. ಜಿಲ್ಲೆಯ ಆಡಳಿತ ಯಂತ್ರ ಮತ್ತು ಪಕ್ಷದ ಸಂಘಟನೆ ಎರಡು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿದರೆ, ಕಾರ್ಯಕರ್ತರು ಯಾರ ಮಾತು ಕೇಳಬೇಕು ಎಂಬ ಧರ್ಮಸಂಕಟಕ್ಕೆ ಸಿಲುಕಲಿದ್ದಾರೆ.
2028ರ ಗುರಿ ಸಾಧನೆ ಸಾಧ್ಯವೇ?
ಇತ್ತೀಚೆಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಬೃಹತ್ ಗುರಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಬಾಗಲಕೋಟೆಯಂತಹ ಪ್ರಮುಖ ಜಿಲ್ಲೆಯಲ್ಲೇ ಅಧ್ಯಕ್ಷರ ನೇಮಕಾತಿಯಲ್ಲಿ ಇಷ್ಟೊಂದು ದೊಡ್ಡ ಯಡವಟ್ಟು ಹಾಗೂ ಅಸಮಾಧಾನ ಸೃಷ್ಟಿಯಾಗಿದ್ದರೆ, 2028ರ ಗುರಿಯನ್ನು ಸಾಧಿಸುವುದಾದರೂ ಹೇಗೆ?
ನಿಷ್ಠಾವಂತರನ್ನು ಕಡೆಗಣಿಸಿ, ಪಕ್ಷ ವಿರೋಧಿ ಆರೋಪ ಹೊತ್ತಿರುವ, ಕಾರ್ಯಕರ್ತರ ಸಂಪರ್ಕವಿಲ್ಲದ ನಾಯಕನಿಗೆ ಪಟ್ಟ ಕಟ್ಟಿದರೆ, ಮುಂಬರುವ ಸಾಲು ಸಾಲು ಚುನಾವಣೆಗಳಲ್ಲಿ (ತಾಲೂಕು, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ) ಪಕ್ಷವನ್ನು ಹೇಗೆ ಗೆಲ್ಲಿಸಲು ಸಾಧ್ಯ? ಎಂಬ ಪ್ರಶ್ನೆ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ.
ಇದನ್ನೂ ಓದಿ: “ದಮ್ಮಿದ್ರೆ ಬಾ ತೋರಿಸ್ತೀನಿ!” ಕಾಶಪ್ಪನವರ್‌ಗೆ ದೊಡ್ಡನಗೌಡ ಬಹಿರಂಗ ಸವಾಲು; ನಾಗೇಂದ್ರ ಬಳಿಕ ಬಿಜೆಪಿಗೆ ವಿಜಯಾನಂದ ಟಾರ್ಗೆಟ್?
ಸವಾಲುಗಳ ಸಾಗರದಲ್ಲಿ ನೂತನ ಅಧ್ಯಕ್ಷ
ಈಗ ಬಾಗಲಕೋಟೆ ಕಾಂಗ್ರೆಸ್ ಸಂಪೂರ್ಣವಾಗಿ ಇಬ್ಬಾಗವಾಗಿದೆ. ನೂತನ ಅಧ್ಯಕ್ಷ ದಯಾನಂದ ಪಾಟೀಲರಿಗೆ ಇದು ಸಂಭ್ರಮದ ಸಮಯವಲ್ಲ, ಬದಲಿಗೆ ಬೆಂಕಿಯ ಮೇಲಿನ ನಡಿಗೆ. ಒಂದು ಕಡೆ ತಮ್ಮ ಮೇಲಿರುವ ‘ಪಕ್ಷ ವಿರೋಧಿ’ ಹಾಗೂ ‘ಕಾರ್ಪೊರೇಟ್ ನಾಯಕ’ ಎಂಬ ಅಪವಾದವನ್ನು ತೊಡೆದುಹಾಕಬೇಕಿದೆ. ಇನ್ನೊಂದೆಡೆ, ತಮ್ಮ ನೇಮಕದಿಂದ ಕೋಪಗೊಂಡಿರುವ ಶಾಸಕರು, ಮಾಜಿ ಶಾಸಕರು ಮತ್ತು ಆರ್‌ಬಿ ತಿಮ್ಮಾಪುರ ಅವರಂತಹ ಪ್ರಭಾವಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ.
ಅಷ್ಟೇ ಅಲ್ಲದೆ, ತಳಮಟ್ಟದ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗಿ ಅವರಲ್ಲಿ ನಂಬಿಕೆ ಮೂಡಿಸಬೇಕಿದೆ. ಸಚಿವರುಗಳ ನಡುವಿನ ಆಂತರಿಕ ಕದನಕ್ಕೆ ಬಲಿಯಾಗದೆ, ಜಾತೀಯ ಸಮೀಕರಣಗಳನ್ನು ಸರಿದೂಗಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ದಯಾನಂದ ಪಾಟೀಲರಿಗೆ ಸಣ್ಣ ಸವಾಲಲ್ಲ.
ಮುಂಬರುವ ದಿನಗಳಲ್ಲಿ ಈ ಅಸಮಾಧಾನ ಶಮನವಾಗುತ್ತದೆಯೇ ಅಥವಾ ಬಾಗಲಕೋಟೆ ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಬಂಡಾಯದ ಬಿರುಗಾಳಿ ಏಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹೈಕಮಾಂಡ್ ತಳೆದ ಈ ಒಂದು ನಿರ್ಧಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗಟ್ಟಿತನ ನೀಡುತ್ತದೋ ಅಥವಾ ವಿನಾಶಕ್ಕೆ ಹಾದಿ ಮಾಡಿಕೊಡುತ್ತದೋ ಕಾಲವೇ ಉತ್ತರಿಸಬೇಕಿದೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






