ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಸಾಮ್ರಾಜ್ಯದ ಮೇಲಿನ ಜಾರಿ ನಿರ್ದೇಶನಾಲಯದ (ED) ದಾಳಿ ತೀವ್ರ ಸಂಚಲನ ಸೃಷ್ಟಿಸಿದೆ. ಒಂದು ಕಡೆ 36 ಗಂಟೆಗಳ ಸುದೀರ್ಘ ಶೋಧ ಕಾರ್ಯದ ಬಳಿಕ ಸ್ವತಃ ಸಚಿವರು ಮಾಧ್ಯಮಗಳ ಮುಂದೆ ಬಂದು ಅತ್ಯಂತ ಸಹಜ, ಶಾಂತ ಎಂಬಂತೆ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಜಾರಿ ನಿರ್ದೇಶನಾಲಯ (ED) ಬಿಡುಗಡೆ ಮಾಡಿರುವ ಅಧಿಕೃತ ಪತ್ರಿಕಾ ಪ್ರಕಟಣೆ ಅತ್ಯಂತ ಗಂಭೀರ ಸತ್ಯಗಳನ್ನು ಹೊರಗೆಡವಿದೆ. ಸತೀಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿಯಲ್ಲಿ “ನಾವು ಸಣ್ಣ ತಪ್ಪು ಮಾಡಿರಬಹುದು” ಎಂದು ತಿಳಿಸುತ್ತಾ ಹಾರಿಕೆ ಉತ್ತರ ನೀಡಲು ಯತ್ನಿಸಿದ್ದರೆ, ED ಬಿಡುಗಡೆ ಮಾಡಿದ ಅಂಕಿ-ಅಂಶಗಳು ಹಾಗೂ ಆರೋಪಗಳ ಪಟ್ಟಿ ಸತ್ಯಪ್ಪ ಸಾಹುಕಾರನ ರಾಜಕೀಯ ಭವಿಷ್ಯವನ್ನೇ ತೂಗುಯ್ಯಾಲೆಗೆ ತಳ್ಳಿದೆ.
ಇತ್ತ ಸಚಿವರು “ಇದು ಬರೀ ಸರ್ಚ್, ಇನ್ನು ತನಿಖೆ ಶುರುವಾಗಿಲ್ಲ” ಎನ್ನುತ್ತಿದ್ದರೆ, ಅತ್ತ ED ನೀಡಿದ ಪತ್ರಿಕಾ ಪ್ರಕಟಣೆ ರಾಜ್ಯದ ಜನತೆಗೆ ನೀಡಿದ ಆಘಾತ ಸಣ್ಣದೇನಲ್ಲ. ಈ ಎರಡೂ ಅಂಶಗಳನ್ನು ಮುಖಾಮುಖಿಯಾಗಿಸಿ ನೋಡಿದಾಗ ಮೂಡುವ ಅತಿ ದೊಡ್ಡ ಪ್ರಶ್ನೆ: ಸಾಹುಕಾರ ನಿಜವಾಗಿಯೂ ಸಿಕ್ಕಿಬಿದ್ದಿದ್ದಾರೆಯೇ?
ED ಪ್ರಕಟಣೆಯ ಅಸಲಿ ಬಾಂಬ್: ಕೋಟಿ ಕೋಟಿ ನಗದು, ವಿದೇಶಿ ಕರೆನ್ಸಿ ಮತ್ತು ಆಫ್ರಿಕನ್ ಸಾಮ್ರಾಜ್ಯ!
ಸತೀಶ್ ಜಾರಕಿಹೊಳಿ (Satish Jarkiholi) ಅವರು ಸುದ್ದಿಗೋಷ್ಠಿಯಲ್ಲಿ “1-2 ಕೋಟಿ ಸಿಕ್ಕಿದೆ, ಅವೆಲ್ಲಾ ನಮ್ಮದೇ ಅಂತ ಒಪ್ಪಿಕೊಂಡಿದ್ದೀವಿ” ಎಂದು ಅತ್ಯಂತ ಹಗುರವಾಗಿ ಹೇಳಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ 09.09.2026 ಮತ್ತು 10.09.2026 ರಂದು ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದ 4 ಪ್ರಮುಖ ನಗರಗಳ 21 ಆವರಣಗಳ ಮೇಲೆ ದಾಳಿ ನಡೆಸಲಾಗಿದೆ.
ED ವಶಪಡಿಸಿಕೊಂಡ ಹಣ ಹಾಗೂ ಆಸ್ತಿಯ ಲೆಕ್ಕಾಚಾರವೇ ಬೇರೆ ಇದೆ:
- ಲೆಕ್ಕವಿಲ್ಲದ ನಗದು: ಒಟ್ಟು 3.3 ಕೋಟಿ ರೂಪಾಯಿ ಭಾರತೀಯ ನಗದು ಹಣ ಹಾಗೂ 15 ಲಕ್ಷ ರೂಪಾಯಿ ಮೌಲ್ಯದ ಯುಎಸ್ ಡಾಲರ್ (USD) ಮತ್ತು ಯುರೋ (EURO) ಸೇರಿದಂತೆ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
- ವಿದೇಶಿ ಗಣಿಗಾರಿಕೆ ಸಾಮ್ರಾಜ್ಯ: ವಿದೇಶದಲ್ಲಿ ಇನ್ನು ಹೂಡಿಕೆ ಮಾಡುತ್ತಿದ್ದೇವೆ ಎಂಬ ಸಚಿವರ ಸಮರ್ಥನೆಗೆ ವ್ಯತಿರಿಕ್ತವಾಗಿ, ಕಾಂಗೋ ಮೂಲದ ‘ಮೆಸರ್ಸ್ ಮ್ಯಾಗ್ನಿಟ್ಯೂಡ್ ಸ್ಟಾರ್ SARL’ ಎಂಬ ಚಿನ್ನದ ಗಣಿಗಾರಿಕೆ (Gold Mining) ಕಂಪನಿಯಲ್ಲಿ ಸತೀಶ್ ಜಾರಕಿಹೊಳಿ ಅವರೇ ಸ್ವತಃ ಸುಮಾರು 40% ಶೇರುಗಳನ್ನು ಹೊಂದಿದ್ದಾರೆ ಎಂಬುದು ಬಯಲಾಗಿದೆ!
- ಕುಟುಂಬಸ್ಥರ ಶೇರುಗಳು: ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಸಹೋದರಿ ಮಹಾದೇವಿ ಮಂಜುನಾಥ್ (ಭಾವಮೈದ ವೈ.ಡಿ. ಮಂಜುನಾಥ್ ಅವರ ಪತ್ನಿ) ಅವರ ಹೆಸರಿನಲ್ಲಿ ಕಾಂಗೋದ ‘M/s. Eldorado Mining Resources’ ಹಾಗೂ ಜಾಂಬಿಯಾದ ‘M/s. Nava Aurum Mining Ltd’ ನಂತಹ ಕಂಪನಿಗಳಲ್ಲಿ ವಿದೇಶಿ ಶೇರು ಹೂಡಿಕೆಗಳಿರುವುದು ಪತ್ತೆಯಾಗಿದೆ.
- PWD ಇಲಾಖೆ ಲಂಚ ಮತ್ತು ಅಕ್ರಮ ಆಸ್ತಿ: ‘ಮೆಸರ್ಸ್ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್’ (BVEPL) ಎಂಬ ಖಾಸಗಿ ಸಂಸ್ಥೆಯು ಲೋಕೋಪಯೋಗಿ (PWD) ಇಲಾಖೆಯಿಂದ ಟೆಂಡರ್ ಪಡೆಯಲು ಸಚಿವರಿಗೆ ಮತ್ತು ಅವರ ಆಪ್ತರಿಗೆ ಭಾರಿ ಮೊತ್ತದ ಲಂಚ ನೀಡಿದ್ದು, ಆ ಹಣವನ್ನೇ ವಿದೇಶಿ ಆಸ್ತಿ ಖರೀದಿಸಲು ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. PWD ಇಲಾಖೆಯ ಕಂಟ್ರಾಕ್ಟರ್‌ಗಳಿಂದ ಹಣ ಸಂಗ್ರಹಿಸಿದ ಬಗ್ಗೆ ಡಿಜಿಟಲ್ ಸಾಕ್ಷ್ಯಗಳು ಮತ್ತು ಇನ್‌ಕ್ರಿಮಿನೇಟಿಂಗ್ ದಾಖಲೆಗಳು ವೈ.ಡಿ. ಮಂಜುನಾಥ್ ಅವರಿಗೆ ಸೇರಿದ ಖಾತೆಗಳಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು! ಸಾಹುಕಾರನ ‘ನಿಗೂಢ’ ಮಾತುಗಳ ಅಸಲಿ ಅರ್ಥವೇನು?
ಉತ್ತರವಿಲ್ಲದ ಪ್ರಶ್ನೆಗಳು, ಲೆಕ್ಕ ಸಿಗದ ಕೋಟಿಗಳು
ಮಾಧ್ಯಮಗಳ ಮುಂದೆ ಬಂದ ಸಾಹುಕಾರನ (Satish Jarkiholi) ಪ್ರತಿಯೊಂದು ಮಾತಿಗೂ, EDಯ ಅಧಿಕೃತ ಪತ್ರಿಕಾ ಹೇಳಿಕೆಗೂ ಎಲ್ಲೂ ತಾಳೆ ಆಗುತ್ತಿಲ್ಲ. ಈ ವಿರೋಧಾಭಾಸಗಳ ಆಳವಾದ ವಿಶ್ಲೇಷಣೆ ಇಲ್ಲಿದೆ:
“ನಾವು ಸಣ್ಣ ತಪ್ಪು ಮಾಡಿರಬಹುದು”: ಸ್ವಯಂ ಅಪರಾಧ ಒಪ್ಪಿಗೆಯೇ?
ಸುದ್ದಿಗೋಷ್ಠಿಯ ಅತ್ಯಂತ ಧ್ವನಿಪೂರ್ಣ ಸಾಲು ಎಂದರೆ: “ನಾವು ಸಣ್ಣ ತಪ್ಪು ಮಾಡಿರಬಹುದು, ನೂರಕ್ಕೆ ನೂರು ನಾವೆಲ್ಲಾ ಸರಿ ಅಂತ ಹೇಳೋಕೆ ಆಗಲ್ಲ…” ಎಂಬುದು.
ಸಚಿವ ಸ್ಥಾನದಲ್ಲಿರುವ ಹಿರಿಯ ನಾಯಕರೊಬ್ಬರು ತನಿಖಾ ಸಂಸ್ಥೆಯ ದಾಳಿಯಾದ ತಕ್ಷಣ “ನಾವು ತಪ್ಪು ಮಾಡಿರಬಹುದು” ಎಂದು ಒಪ್ಪಿಕೊಳ್ಳುವುದು ಕೇವಲ ಆತ್ಮಸಾಕ್ಷಿಯ ಮಾತಲ್ಲ; ಬದಲಿಗೆ ಅದೊಂದು ಅಪರಾಧದ ಪ್ರತ್ಯಕ್ಷ/ಅಪ್ರತ್ಯಕ್ಷ ಒಪ್ಪಿಗೆ (Admission of Guilt).
ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿ PWD ಟೆಂಡರ್‌ಗಳ ಲಂಚ, ಲೆಕ್ಕವಿಲ್ಲದ 3.3 ಕೋಟಿ ರೂಪಾಯಿ ನಗದು ಮತ್ತು $15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ. “ನಮಗಿಂತ ದೊಡ್ಡ ತಪ್ಪು ಮಾಡಿದವರು ಬಿಜೆಪಿಯಲ್ಲಿದ್ದಾರೆ, ಅವರನ್ನು ಬಿಟ್ಟು ಸಣ್ಣ ಮೀನಾದ ನಮ್ಮನ್ನು ಹಿಡಿಯುತ್ತಿದ್ದಾರೆ” ಎಂಬ ಸಮರ್ಥನೆ ನೀಡುವ ಮೂಲಕ ತಾವೇ ಅಧಿಕೃತವಾಗಿ ಅಕ್ರಮವನ್ನು ಒಪ್ಪಿಕೊಂಡಂತಾಗಿದೆ. ಕಾನೂನಿನ ಕಣ್ಣಿನಲ್ಲಿ ಸಣ್ಣ ತಪ್ಪು-ದೊಡ್ಡ ತಪ್ಪು ಎಂದಿರುವುದಿಲ್ಲ. ಮುಂಬರುವ ವಿಚಾರಣೆಯಲ್ಲಿ ಈ ‘ಸಣ್ಣ ತಪ್ಪಿನ ಒಪ್ಪಿಗೆ’ ಸಚಿವರಿಗೆ ಬೂಮರಾಂಗ್ ಆಗುವುದು ನಿಶ್ಚಿತ.
FEMA ಉಲ್ಲಂಘನೆ: “ಅವರು ಮಾಡಿದೀವಿ ಅಂತಾರೆ, ನಾವು ಮಾಡ್ತಿದ್ದೀವಿ ಅಂತೀವಿ”
ವಿದೇಶಿ ಹೂಡಿಕೆ ವಿಚಾರದಲ್ಲಿ ಸಚಿವರು, “ಅವರು ಹೂಡಿಕೆ ಮಾಡಿದ್ದೀರಾ ಎಂದು ಲೆಕ್ಕ ತಂದಿದ್ದಾರೆ, ಆದರೆ ನಾವು ಇನ್ನು ಹೂಡಿಕೆ ಮಾಡುತ್ತಿದ್ದೇವೆ, ಅದಕ್ಕೆ ಆರ್‌ಬಿಐ (RBI) ಹಾಗೂ ಲೀಗಲ್ ಪರ್ಮಿಷನ್ ತೆಗೆದುಕೊಳ್ಳಬೇಕಿದೆ” ಎಂದು ಸಮರ್ಥಿಸಿಕೊಂಡಿದ್ದರು.
ಆದರೆ, ED ಪ್ರಕಟಣೆಯ ಪ್ರಕಾರ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ಈಗಾಗಲೇ ಆಫ್ರಿಕಾ, ಕಾಂಗೋ ಮತ್ತು ಜಾಂಬಿಯಾಗಳಲ್ಲಿನ ಶೇರ್‌ಗಳನ್ನು ಹೊಂದಿದ್ದು, ಗಣಿಗಾರಿಕೆ ಆಸ್ತಿಗಳನ್ನು ಖರೀದಿಸಿದೆ. ಅಷ್ಟೇ ಅಲ್ಲದೆ, ಅನಧಿಕೃತ ಹವಾಲಾ ಮಾರ್ಗಗಳ ಮೂಲಕವೇ ಕಾಂಗೋಗೆ ನಗದು ಹಣವನ್ನು ಹೂಡಿಕೆ ಮಾಡಲು ರವಾನಿಸಲಾಗಿದೆ ಎಂದು ED ಹೇಳಿದೆ. ಆರ್‌ಬಿಐ ಅನುಮತಿ ಪಡೆಯುವ ಮೊದಲೇ ಅಥವಾ ಕಾನೂನುಬಾಹಿರವಾಗಿ ವಿದೇಶಕ್ಕೆ ಕೋಟ್ಯಂತರ ರೂಪಾಯಿ ವರ್ಗಾಯಿಸಿದ್ದರೆ ಅದು ನೇರವಾಗಿ ‘ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್’ (FEMA) ಅಡಿಯಲ್ಲಿ ಗುರುತರ ಅಪರಾಧವಾಗುತ್ತದೆ.
ಕೋಟಿ ಕೋಟಿ ನಗದು ಪತ್ತೆ: “ದುಡ್ಡು ನಮ್ಮದೇ ಅಂತ ಒಪ್ಪಿಕೊಂಡಿದ್ದೀವಿ”
ದಾಳಿಯ ವೇಳೆ ಸಿಕ್ಕ ನಗದಿನ ಬಗ್ಗೆ “1-2 ಕೋಟಿ ಸಿಕ್ಕಿದೆ, ಅವೆಲ್ಲಾ ನಮ್ಮದೇ ಅಂತ ಒಪ್ಪಿಕೊಂಡಿದೀವಿ, ಆಮೇಲೆ ದಾಖಲೆ ಕೊಡ್ತೀವಿ” ಎನ್ನುವುದು ಹಗುರವಾದ ಮಾತಾಯಿತು.
ED ಜಪ್ತಿ ಮಾಡಿರುವುದು ಬರಿ 1-2 ಕೋಟಿ ರೂಪಾಯಿಯಲ್ಲ, ಬದಲಿಗೆ 3.3 ಕೋಟಿ ರೂಪಾಯಿಗೂ ಅಧಿಕ ಭಾರತೀಯ ನಗದು ಮತ್ತು 15 ಲಕ್ಷ ರೂಪಾಯಿಯಷ್ಟು ವಿದೇಶಿ ಹಣ! ಮನೆಯಲ್ಲಿ ಇಷ್ಟೊಂದು ಪ್ರಮಾಣದ ನಗದು ಹಣ ಕಾರ್ಯಾಚರಣೆಯ ವೇಳೆ ಸಿಕ್ಕಾಗ ತಕ್ಷಣ ಸೂಕ್ತ ದಾಖಲೆ ನೀಡಲು ಸಾಧ್ಯವಾಗದೇ ಇರುವುದು, ಮತ್ತು “ಆಮೇಲೆ ದಾಖಲೆ ಕೊಡ್ತೀವಿ” ಎನ್ನುವುದು ಲೆಕ್ಕಕ್ಕೆ ಸಿಗದ ಕಪ್ಪುಹಣದ ನೆರಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.
“ದಾಳಿಯಲ್ಲ, ಬರೀ ಸರ್ಚ್”: ಶಬ್ದಗಳ ಕಸರತ್ತು ಮತ್ತು ಭೀತಿ
“ಇದು ದಾಳಿಯಲ್ಲ, ಬರೀ ಸರ್ಚ್ ಆಗಿದೆ”, “ಇನ್ನು ನೋಟೀಸ್ ನಿಂದ ತನಿಖೆ ಶುರುವಾಗಲಿದೆ”, “ಕಂಟಕದಿಂದ ಪಾರಾಗಿದ್ದೀವಾ ಅಂತ ಈಗಲೇ ಹೇಳೋಕೆ ಆಗಲ್ಲ” ಎಂದು ಸಚಿವರು ಶಬ್ದಗಳ ಕಸರತ್ತು ನಡೆಸಿದ್ದಾರೆ.
ED ಅಧಿಕಾರಿಗಳು ಬೆಂಗಳೂರು, ಗೋಕಾಕ್, ಬೆಳಗಾವಿ ಹಾಗೂ ಕೋಲ್ಕತ್ತಾಗಳಲ್ಲಿರುವ ಸಚಿವರ ನಿವಾಸಗಳು (ಡಾಲರ್ಸ್ ಕಾಲೋನಿ, ಕ್ರೆಸೆಂಟ್ ರಸ್ತೆ), ಆಪ್ತರಾದ ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ಗಿರೀಶ್ ಸೋನವಾಲ್ಕರ್ ಅವರ ಮನೆಗಳ ಮೇಲೆ ದಾಳಿ ಮಾಡಿ 36 ಗಂಟೆ ಶೋಧ ನಡೆಸಿ, ಡಿಜಿಟಲ್ ಸಾಕ್ಷ್ಯಗಳು, ಕಂಟ್ರಾಕ್ಟರ್‌ಗಳ ಲಂಚದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ತನಿಖಾ ಸಂಸ್ಥೆ ಇಷ್ಟೊಂದು ಸಾಕ್ಷ್ಯ ಸಂಗ್ರಹಿಸಿದ ಮೇಲೆಯೂ “ಬರೀ ಸರ್ಚ್” ಎನ್ನುವುದು ಭವಿಷ್ಯದ ಬಂಧನ ಅಥವಾ ಸಮನ್ಸ್ ಭೀತಿಯನ್ನು ಮುಚ್ಚಿಡಲು ನಡೆಸಿದ ಪ್ರಯತ್ನದಂತೆ ಕಾಣುತ್ತಿದೆ.
‘ದೊಡ್ಡ ಮೀನು – ಸಣ್ಣ ಮೀನು’ ಮತ್ತು ಬಿಜೆಪಿ ಸೇರ್ಪಡೆಯ ಮೌನ
“EDಯವರು ದೊಡ್ಡ ಮೀನ ಬಿಟ್ಟು ಸಣ್ಣ ಮೀನ ಹಿಡಿಯುತ್ತಿದ್ದಾರೆ” ಎನ್ನುವ ಮೂಲಕ ತಮ್ಮ ಸ್ವಪಕ್ಷೀಯ ಹಿರಿಯ ನಾಯಕರ ಮೇಲೆಯೂ ಪರೋಕ್ಷ ಅಸಮಾಧಾನ ಹೊರಹಾಕಿರುವ ಸಚಿವರು, ಬಿಜೆಪಿ ಸೇರುವ ಪ್ರಶ್ನೆ ಬಂದಾಗ ತಕ್ಷಣ “ಇಲ್ಲ” ಎಂದು ನಿರಾಕರಿಸಲಿಲ್ಲ. “ಆ ಸ್ಟೇಜ್ ಇನ್ನೂ ಬಂದಿಲ್ಲ, ತನಿಖೆಯಾದ ಬಳಿಕ ಅಂತಹ ಸಂದರ್ಭ ಬರುತ್ತೋ ಇಲ್ವೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ರಾಜಕೀಯವಾಗಿ ಬಾಗಿಲನ್ನು ತೆರೆದೇ ಇಟ್ಟಿದ್ದಾರೆ.
ಸತ್ಯಪ್ಪ ಸಾಹುಕಾರನಿಗೆ ಸಂಕಷ್ಟ ಫಿಕ್ಸ್?
ಸತೀಶ್ ಜಾರಕಿಹೊಳಿ ಅವರು ಸುದ್ದಿಗೋಷ್ಠಿಯಲ್ಲಿ ಎಷ್ಟೇ ‘ಕೂಲ್’ ಆಗಿ ಕಾಣಿಸಿಕೊಳ್ಳಲು ಯತ್ನಿಸಿದರೂ, ED ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಅವರ ಸುತ್ತ ತನಿಖಾ ಜಾಲ ಬಿಗಿಯಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.
PWD ಇಲಾಖೆಯ ಟೆಂಡರ್ ಅಕ್ರಮಗಳು, ಕಂಟ್ರಾಕ್ಟರ್‌ಗಳಿಂದ ಪಡೆದ ಲಂಚದ ಹಣ, ಹವಾಲಾ ರೂಪದಲ್ಲಿ ಆಫ್ರಿಕಾಕ್ಕೆ ಹರಿದುಹೋದ ಕೋಟ್ಯಂತರ ರೂಪಾಯಿ, ಮನೆಯಲ್ಲೇ ಸಿಕ್ಕ 3.3 ಕೋಟಿ ರೂಪಾಯಿ ನಗದು, ಮತ್ತು ಕಾಂಗೋ-ಜಾಂಬಿಯಾಗಳ ಗಣಿಗಾರಿಕೆ ಉದ್ಯಮದ ಶೇರುಗಳು — ಇವೆಲ್ಲವೂ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬವನ್ನು ಸಂಕಷ್ಟದ ಸುಳಿಗೆ ಸಿಲುಕಿಸಿವೆ.
“ನಾವು ಸಣ್ಣ ತಪ್ಪು ಮಾಡಿರಬಹುದು” ಎನ್ನುವ ಸಚಿವರ ಮಾತು ಹಾಗೂ “ಮುಂದಿನ ತನಿಖೆ ಪ್ರಗತಿಯಲ್ಲಿದೆ” ಎನ್ನುವ EDಯ ಕೊನೆಯ ಸಾಲು — ಇವೆರಡೂ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಬಂಧನ ಅಥವಾ ಕಠಿಣ ಕಾನೂನು ಕ್ರಮಗಳ ಮುನ್ಸೂಚನೆಯನ್ನೇ ನೀಡುತ್ತಿವೆ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






