Friday, September 11, 2026
Home ವಿಶ್ಲೇಷಣೆ Vijayanand Kashappanavar: “ದಮ್ಮಿದ್ರೆ ಬಾ ತೋರಿಸ್ತೀನಿ!” ಕಾಶಪ್ಪನವರ್‌ಗೆ ದೊಡ್ಡನಗೌಡ ಬಹಿರಂಗ ಸವಾಲು; ನಾಗೇಂದ್ರ ಬಳಿಕ ಬಿಜೆಪಿಗೆ...

Vijayanand Kashappanavar: “ದಮ್ಮಿದ್ರೆ ಬಾ ತೋರಿಸ್ತೀನಿ!” ಕಾಶಪ್ಪನವರ್‌ಗೆ ದೊಡ್ಡನಗೌಡ ಬಹಿರಂಗ ಸವಾಲು; ನಾಗೇಂದ್ರ ಬಳಿಕ ಬಿಜೆಪಿಗೆ ವಿಜಯಾನಂದ ಟಾರ್ಗೆಟ್?

Vijayanand Kashappanavar: "ದಮ್ಮಿದ್ರೆ ಬಾ ತೋರಿಸ್ತೀನಿ!" ಕಾಶಪ್ಪನವರ್‌ಗೆ ದೊಡ್ಡನಗೌಡ ಬಹಿರಂಗ ಸವಾಲು; ನಾಗೇಂದ್ರ ಬಳಿಕ ಬಿಜೆಪಿಗೆ ವಿಜಯಾನಂದ ಟಾರ್ಗೆಟ್?

Vijayanand Kashappanavar: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಹಗರಣಕ್ಕೆ ಸಂಬಂಧಿಸಿದಂತೆ, ಸಚಿವ ಬಿ. ನಾಗೇಂದ್ರ (B. Nagendra) ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಬಿಜೆಪಿ ನಾಯಕರು ಕಾದಾಟ ತೀವ್ರಗೊಳಿಸಿದ್ದಾರೆ. ಈ ಹಗರಣವನ್ನು ಖಂಡಿಸಿ ಹಾಗೂ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದು ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಬಿಜೆಪಿ ನಾಯಕರು ಬೃಹತ್ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಒಂದೆಡೆ ನಾಗೇಂದ್ರ ಅವರ ವಿರುದ್ಧದ ಹೋರಾಟ ಜೋರಾಗಿದ್ದರೆ, ಇನ್ನೊಂದೆಡೆ ವಿಪಕ್ಷ ಬಿಜೆಪಿಯ ಮುಂದಿನ ಟಾರ್ಗೆಟ್ ಸಚಿವ ವಿಜಯಾನಂದ ಕಾಶಪ್ಪನವರ್ (Vijayananda Kashpanavar) ಎಂಬುದು ಸ್ಪಷ್ಟವಾಗುತ್ತಿದೆ. ಬಾಗಲಕೋಟೆಯ ಧರಣಿ ವೇದಿಕೆಯಿಂದಲೇ ಹುನಗುಂದದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ (Doddanagouda Patil) ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದು, “ಕೇವಲ ನಾಗೇಂದ್ರ ಅವರ ರಾಜೀನಾಮೆಯಷ್ಟೇ ಅಲ್ಲ, ವಿಜಯಾನಂದ ಕಾಶಪ್ಪನವರ್ ಅವರ ಸಚಿವ ಸ್ಥಾನಕ್ಕೂ ತಕ್ಷಣವೇ ರಾಜೀನಾಮೆ ಪಡೆಯಬೇಕು” ಎಂದು ಪಟ್ಟು ಹಿಡಿಯುವ ಮೂಲಕ ಬಿಜೆಪಿ ತನ್ನ ರಾಜಕೀಯ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಪ್ರತಿಭಟನಾ ವೇದಿಕೆಯಲ್ಲಿ ಆಕ್ರೋಶದ ಮಳೆ: ನೇರ ಸವಾಲು

ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಹುನಗುಂದ ಕ್ಷೇತ್ರದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಮತ್ತು ಅವರ ಶಿಷ್ಯ ಬಳಗ ನಡೆಸುತ್ತಿರುವ ಅಕ್ರಮ ಮರಳು ದಂಧೆಯ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಷೇತ್ರದ ನೈಸರ್ಗಿಕ ಸಂಪತ್ತಿನ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದ ಅವರು, “ಹುನಗುಂದ ಮತಕ್ಷೇತ್ರದಲ್ಲಿ ಯಾವ ಹಳ್ಳವೂ ಉಳಿದಿಲ್ಲ, ನದಿ ಮೂಲವೂ ಉಳಿದಿಲ್ಲ. ಎಲ್ಲವನ್ನೂ ತಮ್ಮ ಬೆಂಬಲಿಗರ ಮುಖಾಂತರ ಲೂಟಿ ಮಾಡಿಸಲಾಗುತ್ತಿದೆ. ಲೋಕಾಯುಕ್ತರು ಬಂದು ರೇಡ್ ಮಾಡಿದಾಗ ಪತ್ರಕರ್ತರು, ಇದು ವ್ಯವಸ್ಥೆಯ ವೈಫಲ್ಯ ಅಲ್ಲವೇ ಎಂದು ಪ್ರಶ್ನೆ ಮಾಡಿದ್ರೆ, ‘ಕಳ್ಳರು ಹೇಳಿ-ಕೇಳಿ ಬರ್ತಾರೇನ್ರಿ?’ ಎಂದು ಸಚಿವ ಕಾಶಪ್ಪನವರ್ ಹಗುರವಾಗಿ ಮಾತನಾಡುತ್ತಾರೆ. ಆದರೆ, ಉಸುಕು ಕಳವು ಮಾಡುವ ಕಳ್ಳರನ್ನೇ ಪಕ್ಕದಲ್ಲಿ ಇಟ್ಟುಕೊಂಡು ಆ ಹಣದಿಂದಲೇ ಲಾಭ ಪಡೆಯುತ್ತಿರುವಾಗ ಕಳ್ಳರನ್ನು ಹಿಡಿಯಲು ಹೇಗೆ ಸಾಧ್ಯ?”‌ ಎಂದರು.

ಇದೇ ವೇಳೆ, ಕಾಶಪ್ಪನವರ್ ಹಾಕಿದ್ದ ಸವಾಲಿಗೆ ಉತ್ತರಿಸಿದ ದೊಡ್ಡನಗೌಡ ಪಾಟೀಲ್, “ನಾನು ಅಭಿವೃದ್ಧಿ ಮಾಡಿದ್ದೇನೆ, ದಮ್ಮಿದ್ದರೆ ಬಾ ಸ್ಟೇಜ್ ಹಾಕ್ತೀನಿ ಎಂದು ಸವಾಲು ಹಾಕ್ತೀರಲ್ಲ? ಧೈರ್ಯ ಇದ್ದರೆ ನೀವೇ ನೇರವಾಗಿ ಬನ್ನಿ. ನಿಮ್ಮ ಬೆಂಬಲದೊಂದಿಗೆ ಎಲ್ಲೆಲ್ಲಿ ಅಕ್ರಮವಾಗಿ ಮರಳು ಕಳವು ಹಾಗೂ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದನ್ನು ಜಾಗ ತೋರಿಸುತ್ತೇನೆ” ಎಂದು ಬಹಿರಂಗ ಸವಾಲೆಸೆದರು.

ಇದನ್ನೂ ಓದಿ: RB Timmapur: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ ‘ಟಿಕೆಟ್’ ಕಂಠಕವೂ ಬಂತು!

ಬಿಜೆಪಿಯ ಮುಂದಿನ ಟಾರ್ಗೆಟ್ ಕಾಶಪ್ಪನವರ್ ಏಕಾಗಬಹುದು?

ಬಿಜೆಪಿ ನಾಯಕರು ಬಿ. ನಾಗೇಂದ್ರ ಅವರ ಬಳಿಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅವರನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಳ್ಳಲು ಕೇವಲ ಇತ್ತೀಚಿನ ಘಟನೆಗಳಷ್ಟೇ ಕಾರಣವಲ್ಲ; ಇದರ ಹಿಂದೆ ಹಳೆಯ ವಿವಾದಗಳ ದೊಡ್ಡ ಸರಣಿಯೇ ಇದೆ.

  • ಹಳೆಯ ವಿವಾದಗಳ ಹಿನ್ನೆಲೆ: ವಿಜಯಾನಂದ ಕಾಶಪ್ಪನವರ್ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಾಗಲೇ ಬಿಜೆಪಿ ಸೋಷಿಯಲ್ ಮೀಡಿಯಾ ಘಟಕಗಳು ಅವರ ಹಳೆಯ ವಿಡಿಯೋ ಹಾಗೂ ಆಡಿಯೋಗಳನ್ನು ವ್ಯಾಪಕವಾಗಿ ವೈರಲ್ ಮಾಡಿದ್ದವು. ಹಿಂದೆ ಪತ್ರಕರ್ತರೊಬ್ಬರಿಗೆ ಬಹಿರಂಗವಾಗಿ ಧಮ್ಕಿ ಹಾಕಿದ್ದು, ತಮ್ಮ ಕಾರ್ಯಕರ್ತನಿಗೆ ಮನಸೋಇಚ್ಛೆ ಮಾತನಾಡಿದ್ದು ಮತ್ತು ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ನಡೆದಿದ್ದ ದಾಂದಲೆ ಪ್ರಕರಣಗಳನ್ನು ಮುನ್ನೆಲೆಗೆ ತಂದು, ಇವರನ್ನು “ಗೂಂಡಾ ರಾಜಕಾರಣಿ” ಎಂದೇ ಬಿಂಬಿಸಲಾಗಿತ್ತು. ಹೀಗಾಗಿ ಬಿಜೆಪಿಯು ಇವರ ಮೇಲೆ ಮೊದಲಿನಿಂದಲೂ ಹದ್ದಿನ ಕಣ್ಣಿಟ್ಟು, ಸಣ್ಣ ತಪ್ಪಿಗಾಗಿ ಕಾಯುತ್ತಿದೆ.
  • ಕೂಡಲಸಂಗಮ ಶ್ರೀಗಳ ವಿರುದ್ಧ ಏಕವಚನ ಬಳಕೆ: ಸಚಿವರಾದ ಬಳಿಕ ಕಾಶಪ್ಪನವರ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಎನ್ನುವ ಮಾತಿನಂತೆ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ವಿರುದ್ಧವೇ ಏಕವಚನದಲ್ಲಿ ಹರಿಹಾಯ್ದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದು ಸ್ವತಃ ಪಂಚಮಸಾಲಿ ಸಮುದಾಯದವರೇ ಇವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಮಾಡಿತು.
  • ದಲಿತ ವಿರೋಧಿ ಆಡಿಯೋ ವಿವಾದ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೈರಲ್ ಆಡಿಯೋದಲ್ಲಿ ದಲಿತ ಸಮುದಾಯ ಹಾಗೂ ಪರಿಶಿಷ್ಟ ಜಾತಿಯ ವಿರುದ್ಧ ನಿಂದನೀಯ ಪದ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಆಸ್ತ್ರ ಮಾಡಿಕೊಂಡ ದೊಡ್ಡನಗೌಡ ಪಾಟೀಲ್, “ದಲಿತ ಸಮುದಾಯವನ್ನು ಅತ್ಯಂತ ಹಗುರವಾಗಿ ಮಾತನಾಡಿ ಜಾತಿನಿಂದನೆ ಮಾಡಿರುವ ಇಂತಹ ದಲಿತ ವಿರೋಧಿ ಮನಸ್ಥಿತಿಯ ವ್ಯಕ್ತಿ ಸಂಪುಟದಲ್ಲಿದ್ದರೆ ಅದು ಇಡೀ ಸಮಾಜಕ್ಕೇ ಶಾಪ. ಇವರನ್ನು ತಕ್ಷಣವೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ಸಚಿವ ಸ್ಥಾನದಿಂದ ವಜಾಕ್ಕೆ ಮುಖ್ಯಮಂತ್ರಿಗಳಿಗೆ ಒತ್ತಾಯ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಡವರ ಹಣ ಲೂಟಿ ಮಾಡಿದ ಬಿ. ನಾಗೇಂದ್ರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಹುನಗುಂದದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಾಥ್ ನೀಡಿದ ಹಾಗೂ ಎಸ್ಸಿ ಸಮುದಾಯಕ್ಕೆ ಜಾತಿನಿಂದನೆ ಮಾಡಿ ಅಪಮಾನ ಎಸಗಿದ ಸಚಿವ ವಿಜಯಾನಂದ ಕಾಶಪ್ಪನವರನ್ನು ತಕ್ಷಣವೇ ಸಚಿವ ಸಂಪುಟದಿಂದ ಹೊರಹಾಕಬೇಕು ಎಂದು ದೊಡ್ಡನಗೌಡ ಪಾಟೀಲ್ ಮುಖ್ಯಮಂತ್ರಿಗಳಿಗೆ ನೇರ ಸಂದೇಶ ರವಾನಿಸಿದ್ದಾರೆ.

ವಿಪಕ್ಷಗಳ ಮೇಲೆ ಕೇಸ್ ಜಡಿಯುವ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, “ಪೊಲೀಸರನ್ನು ಕರೆಸಿ ಹೆದರಿಸುವ, ಕೇಸ್ ಹಾಕುವ ಬೆದರಿಕೆಗೆಲ್ಲ ಜಗ್ಗುವ ಮಗ ಈ ದೊಡ್ಡನಗೌಡ ಅಲ್ಲ. ಏಟಿಗೆ ಎದುರೇಟು ಕೊಡುವ ಜಾಯಮಾನ ನಮ್ಮದು” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್-ಕಾಶಪ್ಪನವರ್ ರಣಕಹಳೆ! ಬಿ.ಎಲ್. ಸಂತೋಷ್ ‘ರಜಾಕಾರ ಡ್ರಾಮಾ’ ಉಡೀಸ್; ಬೆತ್ತಲಾಯ್ತಾ RSS ಕಪ್ಪು ಹಣದ ಲೆಕ್ಕ?

ರಾಜಕೀಯ ವಿಶ್ಲೇಷಣೆ

ಬಾಗಲಕೋಟೆಯಲ್ಲಿ ಬಿಜೆಪಿ ನಡೆಸಿರುವ ಈ ಹೋರಾಟವು ಕೇವಲ ಸ್ಥಳೀಯ ವಿಚಾರಕ್ಕಷ್ಟೇ ಸೀಮಿತವಾಗಿಲ್ಲ. ವಾಲ್ಮೀಕಿ ನಿಗಮದ ಹಗರಣದಿಂದ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ, ಕಾಶಪ್ಪನವರ್ ವಿರುದ್ಧದ ಮರಳು ಮಾಫಿಯಾ ಮತ್ತು ಜಾತಿನಿಂದನೆ ಆರೋಪಗಳನ್ನು ಮುಂದಿಟ್ಟುಕೊಂಡು ಮತ್ತಷ್ಟು ಇಕ್ಕಟ್ಟು ಸೃಷ್ಟಿಸುವುದು ಬಿಜೆಪಿಯ ತಂತ್ರವಾಗಿದೆ. ಈ ಹಿಂದೆ ಸಾಲು ಸಾಲು ವಿವಾದಗಳಲ್ಲಿ ಸಿಲುಕಿದ್ದ ಕಾಶಪ್ಪನವರ್ ಅವರಿಗೆ ಈಗ ಈ ನೂತನ ಆರೋಪಗಳು ಮತ್ತು ಬಿಜೆಪಿ ತೀವ್ರಗೊಳಿಸಿರುವ ಹೋರಾಟವು ದೊಡ್ಡ ರಾಜಕೀಯ ಕಂಠಕವಾಗಿ ಪರಿಣಮಿಸಿದೆ. ನಾಗೇಂದ್ರ ನಂತರ ಮುಂದಿನ ಟಾರ್ಗೆಟ್ ಕಾಶಪ್ಪನವರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...