Thursday, September 10, 2026
Home ವಿಶ್ಲೇಷಣೆ Joshi: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಶಿ ವಿರುದ್ಧ FIR! ಲೈಂಗಿಕ ಕಿರುಕುಳ, ಜೀವ ಬೆದರಿಕೆಯ...

Joshi: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಶಿ ವಿರುದ್ಧ FIR! ಲೈಂಗಿಕ ಕಿರುಕುಳ, ಜೀವ ಬೆದರಿಕೆಯ ಗಂಭೀರ ಆರೋಪ!

Joshi: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಶಿ ವಿರುದ್ಧ FIR! ಲೈಂಗಿಕ ಕಿರುಕುಳ, ಜೀವ ಬೆದರಿಕೆಯ ಗಂಭೀರ ಆರೋಪ!

ಧಾರವಾಡ / ಹುಬ್ಬಳ್ಳಿ: ಅಧಿಕಾರದ ನೆರಳಿನಲ್ಲಿ, ರಾಜಕೀಯ ಬಲದ ದರ್ಪದಲ್ಲಿ ಮತ್ತು ಪ್ರಭಾವಿ ಕುಟುಂಬಗಳ ಹೆಸರಿನ ಮರೆಯಲ್ಲಿ ಸಾಮಾನ್ಯ ನಾಗರಿಕರು ನ್ಯಾಯಕ್ಕಾಗಿ ಹೋರಾಡುವುದು ಭಾರತೀಯ ಸಮಾಜದಲ್ಲಿ ಎಷ್ಟು ಕಷ್ಟಕರ ಮತ್ತು ದುಸ್ತರ ಎಂಬ ಸತ್ಯಕ್ಕೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಧಾರವಾಡದಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣವೇ ಜ್ವಲಂತ ಸಾಕ್ಷಿಯಾಗಿದೆ. ದೇಶದ ಉನ್ನತ ಅಧಿಕಾರದಲ್ಲಿರುವ ಪ್ರಭಾವಿ ಕೇಂದ್ರ ಸಚಿವರ ಸ್ವಂತ ಸಹೋದರ ಗೋಪಾಲ್ ಜೋಶಿ (Joshi) ಅವರ ವಿರುದ್ಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅತ್ಯಂತ ಗಂಭೀರ ಸ್ವರೂಪದ ಎಫ್‌ಐಆರ್ (FIR) ದಾಖಲಾಗಿದೆ.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂತ್ರಸ್ತ ಮಹಿಳೆಯೊಬ್ಬರು ನೀಡಿರುವ ಸುದೀರ್ಘ ದೂರಿನನ್ವಯ ಆರೋಪಿ ಗೋಪಾಲ್ ಜೋಶಿ (A1) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಾಯ್ದೆಯಡಿ ಲೈಂಗಿಕ ಕಿರುಕುಳ, ಮಾನಸಿಕ ಶೋಷಣೆ ಹಾಗೂ ಕೊಲೆ ಬೆದರಿಕೆಯಂತಹ ಜಾಮೀನು ರಹಿತ ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಘಟನೆಯು ಉತ್ತರ ಕರ್ನಾಟಕ ಭಾಗದ ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದು ಸಾರ್ವಜನಿಕರ ಆತಂಕಕ್ಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ? ಬಯಲಾಯ್ತು ಶೋಷಣೆಯ ಭೀಕರ ಕಥನ

ವಿಶ್ವಸನೀಯ ಮೂಲಗಳು ಹಾಗೂ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿರುವ ಅಧಿಕೃತ ಎಫ್‌ಐಆರ್ (Crime No: 105/2026) ಮಾಹಿತಿಯ ಪ್ರಕಾರ, ಆರೋಪಿ ಗೋಪಾಲ್ ಜೋಶಿ (Joshi) ಅವರು ದೂರುದಾರ ಮಹಿಳೆಗೆ ಬಹಳ ದಿನಗಳಿಂದ ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ಕುಟುಂಬ ಮಟ್ಟದಲ್ಲಿ ತೀವ್ರ ತೊಂದರೆ ಮತ್ತು ಕಿರುಕುಳ ನೀಡುತ್ತಾ ಬಂದಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಲಾದ ವಿವರಗಳ ಪ್ರಕಾರ, ಧಾರವಾಡದ ಮಾಳಮಡ್ಡಿ ಪ್ರದೇಶದಲ್ಲಿರುವ ‘ಶ್ರೀ ಪೂರ್ಣ ಅಪಾರ್ಟ್‌ಮೆಂಟ್’ನಲ್ಲಿ ದೂರುದಾರ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅಷ್ಟಕ್ಕೇ ನಿಲ್ಲದೆ, ಈ ಅನ್ಯಾಯದ ವಿರುದ್ಧ ಎಲ್ಲಾದರೂ ಧ್ವನಿ ಎತ್ತಿದರೆ ಅಥವಾ ಪೊಲೀಸ್ ಠಾಣೆಗೆ ತೆರಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಲಾಗಿದೆ. ಈ ದೌರ್ಜನ್ಯ ಮತ್ತು ನಿರಂತರ ಕಿರುಕುಳಗಳು ಮೇ 29, 2022 ರಿಂದ ಆರಂಭಗೊಂಡು ಆಗಸ್ಟ್ 6, 2026 ರವರೆಗೆ ಅಂದರೆ ಸುಮಾರು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಮುಂದುವರಿದಿದ್ದವು ಎಂದು ಎಫ್‌ಐಆರ್ ಸಾರುತ್ತದೆ.

ವರ್ಷಗಳ ಕಾಲ ಅನುಭವಿಸಿದ ತೀವ್ರ ಮಾನಸಿಕ ಕಿರುಕುಳ, ಜೀವ ಭಯ ಹಾಗೂ ಕುಟುಂಬದ ಮೇಲೆ ಬೀಳುತ್ತಿದ್ದ ಒತ್ತಡಗಳನ್ನು ಮೆಟ್ಟಿ ನಿಂತು, ಸಂತ್ರಸ್ತೆ ಕೊನೆಗೂ ಧೈರ್ಯ ಮಾಡಿ, ಕುಟುಂಬದ ಹಿರಿಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಆಗಸ್ಟ್ 6, 2026 ರಂದು ರಾತ್ರಿ ವಿದ್ಯಾಗಿರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು BNS ಕಾಯ್ದೆಯ ಸೆಕ್ಷನ್ 75(2) (ಲೈಂಗಿಕ ಕಿರುಕುಳ) ಹಾಗೂ ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ ಮತ್ತು ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿನಯ್‌ ಕುಲಕರ್ಣಿ ವಿರುದ್ಧದ ಶಿಕ್ಷೆಗೆ ತಡೆ, ಜಾಮೀನು ನೀಡಿದ್ದು ಯಾಕೆ? ವಿರೋಧಿಗಳ ಹತಾಶೆ ಪ್ರಶ್ನೆಗೆ ಹೈಕೋರ್ಟ್ ಆದೇಶವೇ ನೀಡುವ ಖಡಕ್ ಉತ್ತರ ಇಲ್ಲಿದೆ…!

ಪತ್ರಿಕಾಗೋಷ್ಠಿಗೂ ಸಿಗದ ಅವಕಾಶ: ಮಾಧ್ಯಮಗಳ ‘ದ್ವಂದ್ವ ನೀತಿ’ಗೆ ತೀವ್ರ ಆಕ್ರೋಶ!

ಪೋಲಿಸ್ ಠಾಣೆಯ ಮೆಟ್ಟಿಲೇರುವ ಮುನ್ನ, ತನಗಾದ ಅನ್ಯಾಯವನ್ನು ಸಮಾಜದ ಮುಂದೆ ತೆರೆದಿಡಲು ಮತ್ತು ಸಾರ್ವಜನಿಕ ಬೆಂಬಲ ಕೋರಲು ಸಂತ್ರಸ್ತ ಮಹಿಳೆ ಪಟ್ಟ ಪಾಡು ಸಮಸ್ತ ಮಾಧ್ಯಮ ರಂಗವೇ ತಲೆತಗ್ಗಿಸುವಂತಿದೆ. ಪ್ರತ್ಯಕ್ಷದರ್ಶಿಗಳು ಹಾಗೂ ಮಾಧ್ಯಮ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆಯು ಎರಡು ದಿನಗಳ ಹಿಂದೆ ಧಾರವಾಡದ ಪ್ರೆಸ್ ಕ್ಲಬ್‌ಗೆ ತೆರಳಿ ಪತ್ರಿಕಾಗೋಷ್ಠಿ (Press Conference) ನಡೆಸಿ ತಮ್ಮ ಅಳಲು ತೋಡಿಕೊಳ್ಳಲು ತೀವ್ರ ಯತ್ನ ನಡೆಸಿದ್ದರು.

ಆದರೆ, ಅಲ್ಲಿ ನಡೆದ ಘಟನೆ ಕೇವಲ ನಾಚಿಕೆಗೇಡು ಮಾತ್ರವಲ್ಲ, ಪತ್ರಿಕೋದ್ಯಮದ ಮೂಲ ಆಶಯಕ್ಕೇ ಬಡಿದ ಕನ್ನೆಯಾಗಿತ್ತು! ಆರೋಪದ ಗಂಭೀರತೆ, ಮಹಿಳೆಯ ಮಾನಸಿಕ ಸ್ಥಿತಿ ಹಾಗೂ ಆಕೆಯ ಕಣ್ಣೀರನ್ನು ಗ್ರಹಿಸಬೇಕಿದ್ದ ಅಲ್ಲಿನ ಕೆಲವು ಮಾನಗೇಡಿ ಪತ್ರಕರ್ತರು, ಆಕೆಗೆ ಮಾಧ್ಯಮ ಗೋಷ್ಠಿ ನಡೆಸಲು ಅವಕಾಶವನ್ನೇ ನೀಡಲಿಲ್ಲ. “ನಿಮ್ಮ ಬಳಿ ಯಾವುದಾದರೂ ಗಟ್ಟಿ ಸಾಕ್ಷಿ ಇದ್ದರೆ ತೆಗೆದುಕೊಂಡು ಬನ್ನಿ, ಸುಮ್ಮನೆ ಆರೋಪ ಮಾಡಬೇಡಿ” ಎಂದು ಕೇವಲ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ, ಗೇಲಿ ಮಾಡುವ ರೀತಿಯಲ್ಲಿ ಮಾತನಾಡಿ ಆಕೆಯನ್ನು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಾಮಾನ್ಯವಾಗಿ ಸಮಾಜದ ಸಾಮಾನ್ಯ ವ್ಯಕ್ತಿಯೊಬ್ಬನ ಮೇಲೆ ಅಥವಾ ಇನ್ಯಾರೋ ಬೇರೆ ಪಕ್ಷದ ನಾಯಕರ ಮೇಲೆ ಸಣ್ಣ ಆರೋಪ ಬಂದರೂ ಸಾಕು, ‘ಬಿಗ್ ಬ್ರೇಕಿಂಗ್ ನ್ಯೂಸ್’, ‘ಮಹಾ ಸ್ಪೋಟಕ’ ಎಂದು ದಿನವಿಡೀ ಚೀರಾಡುತ್ತಾ ಟಿಆರ್‌ಪಿ (TRP) ಬೆನ್ನತ್ತುವ ಕೆಲ ಎಂಜಲು ಪತ್ರಕರ್ತರು, ಇಲ್ಲಿ ಆರೋಪಿ ಕೇಂದ್ರದ ಅತ್ಯಂತ ಪ್ರಭಾವಿ ಸಚಿವರ ಸ್ವಂತ ಸಹೋದರ ಎಂಬ ಏಕೈಕ ಕಾರಣಕ್ಕೆ ತಮ್ಮ ಧ್ವನಿಯನ್ನು ಅಡವಿಟ್ಟು ಮೌನಕ್ಕೆ ಶರಣಾಗಿದ್ದಾರಾ? ಅಧಿಕಾರದ ಹಂಗಿಗೆ ಬಿದ್ದು, ಪ್ರಭಾವಿಗಳ ಕೃಪಾಕಟಾಕ್ಷಕ್ಕೆ ಕಾಯುತ್ತಾ ಸಂತ್ರಸ್ತೆಯ ಅಳಲನ್ನು ಮೆಟ್ಟಿಹಾಕಿದ ಈ ದ್ವಂದ್ವ ಧೋರಣೆ ಇಡೀ ಮಾಧ್ಯಮ ಕ್ಷೇತ್ರಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದೆ.

ಅಧಿಕಾರದ ದರ್ಪ, ಪ್ರಭಾವದ ಹಂಗು ಮತ್ತು ಕಾನೂನಿನ ಸಾಚಾತನಕ್ಕೆ ಸವಾಲು

ಅಧಿಕಾರದ ಉನ್ನತ ಪೀಠದಲ್ಲಿ ಕುಳಿತಿರುವ ಪ್ರಭಾವಿ ರಾಜಕಾರಣಿಗಳ ಕುಟುಂಬಸ್ಥರು, ಸಂಬಂಧಿಕರು ಅಥವಾ ನೆಂಟರು ಆರೋಪಿಗಳಾದಾಗ, ದೇಶದ ತನಿಖಾ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಹೇಗೆ ವರ್ತಿಸುತ್ತವೆ ಎಂಬುದು ಸದಾ ಅನುಮಾನದ ಕಣ್ಣುಗಳಿಂದಲೇ ನೋಡಲ್ಪಡುವ ವಿಷಯವಾಗಿದೆ. ‘ಕಾನೂನು ಎಲ್ಲರಿಗೂ ಒಂದೇ’ ಎಂದು ಭಾರತೀಯ ಸಂವಿಧಾನ ಅತ್ಯಂತ ಸ್ಪಷ್ಟವಾಗಿ ಸಾರುತ್ತದೆ. ಆದರೆ, ಸಾರ್ವಜನಿಕ ವ್ಯವಸ್ಥೆಯು ಪ್ರಭಾವಿಗಳ ಕಾಲಡಿಯಲ್ಲಿ ಮಂಡಿಯೂರುತ್ತದೆಯೋ ಅಥವಾ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಆರೋಪ ಎದುರಿಸುತ್ತಿರುವ ವ್ಯಕ್ತಿ ಕೇಂದ್ರ ಸಚಿವರ ನೇರ ಸಹೋದರರಾಗಿರುವುದರಿಂದ, ಈ ತನಿಖೆಯ ಪ್ರತಿಯೊಂದು ಹಂತವೂ ಅತ್ಯಂತ ಸೂಕ್ಷ್ಮ, ಸಂಕೀರ್ಣ ಹಾಗೂ ನಿರ್ಣಾಯಕವಾಗಿದೆ. ರಾಜಕೀಯ ಪ್ರಭಾವವನ್ನು, ಸಚಿವರ ಹೆಸರನ್ನು ಅಥವಾ ಹಣದ ಬಲವನ್ನು ಬಳಸಿ ಈ ಪ್ರಕರಣವನ್ನು ಗಂಟೂ ಮೂಟೆ ಕಟ್ಟಿ ಮುಚ್ಚಿಹಾಕುವ ಅಥವಾ ಸಂತ್ರಸ್ತೆಯ ಮೇಲೆ ತನಿಖಾ ಹಂತದಲ್ಲೇ ಮತ್ತೆ ಮಾನಸಿಕ ಹಾಗೂ ಜೀವ ಬೆದರಿಕೆಯ ಒತ್ತಡ ಹೇರುವ ಯತ್ನಗಳು ನಡೆಯಬಾರದು ಎಂಬುದು ನಾಡಿನ ಸಾಕ್ಷಿಪ್ರಜ್ಞೆಯ ನಾಗರಿಕರ ಮತ್ತು ಹಿರಿಯ ನ್ಯಾಯವಾದಿಗಳ ಒತ್ತಾಯವಾಗಿದೆ.

ಮೌನ ಮುರಿಯದ ನಾಯಕರು: ‘ಮಹಿಳಾ ರಕ್ಷಣೆ’ಯ ಭಾಷಣಗಳು ಬರಿ ಬೂಟಾಟಿಕೆಯೇ?

ವೇದಿಕೆ ಸಿಕ್ಕಾಗಲೆಲ್ಲಾ ‘ಮಹಿಳಾ ಸಬಲೀಕರಣ’, ‘ಬೇಟಿ ಬಚಾವೋ’, ‘ಮಹಿಳೆಯರ ಗೌರವ ರಕ್ಷಣೆ’ ಎಂದು ದೊಡ್ಡ ಧ್ವನಿಯಲ್ಲಿ ಭಾಷಣ ಬಿಗಿಯುವ ರಾಜಕೀಯ ನಾಯಕರು, ತಮ್ಮ ಸ್ವಂತ ಮನೆಯವರ, ಸಹೋದರರ ಅಥವಾ ಆತ್ಮೀಯರ ಮೇಲೆ ಇಂತಹ ಭೀಕರ ಹಾಗೂ ನಾಚಿಕೆಗೇಡಿನ ಲೈಂಗಿಕ ಶೋಷಣೆ ಮತ್ತು ಕೊಲೆ ಬೆದರಿಕೆಯ ಆರೋಪಗಳು ಬಂದಾಗ ಏನೆಂದು ಸಮರ್ಥಿಸಿಕೊಳ್ಳುತ್ತಾರೆ?

ಇಂತಹ ಗಂಭೀರ ಪ್ರಕರಣದಲ್ಲಿಯೂ ರಾಜಕೀಯ ಬಣ್ಣ ಬಳಿಯಲು ಯತ್ನಿಸುವುದು ಅಥವಾ ಮೌನಕ್ಕೆ ಶರಣಾಗುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿ ದಾರಿಯಾಗಿದೆ. ಸಾರ್ವಜನಿಕ ಸೇವೆಯಲ್ಲಿರುವ ನಾಯಕರು ತಮ್ಮ ಕುಟುಂಬದವರ ಅಕ್ರಮ ಹಾಗೂ ಅನ್ಯಾಯಗಳಿಗೆ ಬೆಂಬಲವಾಗಿ ನಿಲ್ಲಬಾರದು. ಸಂತ್ರಸ್ತೆಗೆ ಸೂಕ್ತ ಹಾಗೂ ತಕ್ಷಣದ ಪೊಲೀಸ್ ರಕ್ಷಣೆ ಒದಗಿಸುವುದು ಈ ಕ್ಷಣದ ಅತ್ಯಂತ ತುರ್ತು ಅಗತ್ಯವಾಗಿದೆ. ಏಕೆಂದರೆ, ಎಫ್‌ಐಆರ್ ದಾಖಲಾದ ನಂತರವೂ ಪ್ರಭಾವಿ ಆರೋಪಿಗಳಿಂದ ಸಾಕ್ಷಿ ನಾಶಪಡಿಸುವ ಅಥವಾ ಸಂತ್ರಸ್ತೆಗೆ ಆಮಿಷ ಮತ್ತು ಜೀವ ಬೆದರಿಕೆ ಒಡ್ಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ದ್ವೇಷದ ರಾಜಕೀಯಕ್ಕೆ ನ್ಯಾಯಾಂಗದ ಏಟು: ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್! ‘ಅಸಲಿ ಸುದ್ದಿ’ಯ ಸತ್ಯಪಥಕ್ಕೆ ಸಿಕ್ಕಿತು ನ್ಯಾಯಾಂಗದ ಮುದ್ರೆ!

‘ಅಸಲಿ ಸುದ್ದಿ’ಯ ಸ್ಪಷ್ಟ ನಿಲುವು, ರಾಜೀರಹಿತ ಪತ್ರಿಕೋದ್ಯಮ & ಸಾರ್ವಜನಿಕ ಒತ್ತಾಯ

ಯಾವುದೇ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದರೂ ಆತ ಈ ದೇಶದ ಸಂವಿಧಾನ ಮತ್ತು ಕಾನೂನಿಗಿಂತ ದೊಡ್ಡವನಲ್ಲ. ಆರೋಪಿ ಕೇಂದ್ರ ಸಚಿವರ ಸಹೋದರನೇ ಆಗಿರಲಿ ಅಥವಾ ಇನ್ಯಾರೇ ಆಗಿರಲಿ, ಕಾನೂನು ತನ್ನ ನಿಷ್ಪಕ್ಷಪಾತ ಹಾಗೂ ಕಠಿಣ ಚಾಟಿ ಬೀಸಲೇಬೇಕು.

  • ಕೂಡಲೇ ಆರೋಪಿಯ ಬಂಧನ ಮತ್ತು ನಿಷ್ಪಕ್ಷಪಾತ ತನಿಖೆ: ಎಫ್‌ಐಆರ್‌ನಲ್ಲಿ ದಾಖಲಾಗಿರುವ ಸೆಕ್ಷನ್‌ಗಳು ಬಿಎನ್‌ಎಸ್ ಕಾಯ್ದೆಯಡಿ ಅತ್ಯಂತ ಗಂಭೀರ ಹಾಗೂ ಜಾಮೀನು ರಹಿತ ಸ್ವರೂಪದ್ದಾಗಿವೆ. ತನಿಖಾಧಿಕಾರಿಗಳು ಯಾವುದೇ ರಾಜಕೀಯ, ಆರ್ಥಿಕ ಅಥವಾ ಮಾಧ್ಯಮಗಳ ಒತ್ತಡಕ್ಕೆ ಮಣಿಯದೆ ಆರೋಪಿಯನ್ನು ತಕ್ಷಣವೇ ಬಂಧಿಸಿ, ಸತ್ಯಾಸತ್ಯತೆ ಹೊರತರಲು ಕಠಿಣ ವಿಚಾರಣೆಗೆ ಒಳಪಡಿಸಬೇಕು.
  • ಸಂತ್ರಸ್ತೆ ಹಾಗೂ ಸಾಕ್ಷಿಗಳಿಗೆ ಸಂಪೂರ್ಣ ರಕ್ಷಣೆ: ದೂರು ನೀಡಿದ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ತಕ್ಷಣವೇ 24/7 ಸೂಕ್ತ ಪೊಲೀಸ್ ಅಭಯ ಮತ್ತು ಭದ್ರತೆಯನ್ನು ಒದಗಿಸಬೇಕು.
  • ನ್ಯಾಯಾಲಯದಲ್ಲಿ ನಿಖರ ಚಾರ್ಜ್‌ಶೀಟ್: ಪ್ರಕರಣದ ಹಿನ್ನೆಲೆ ಏನೇ ಇದ್ದರೂ, ಯಾವುದೇ ಪ್ರಭಾವಕ್ಕೆ ಒಳಗಾಗದೆ ನ್ಯಾಯಾಲಯದ ಮುಂದೆ ನಿಖರವಾದ ಹಾಗೂ ಭದ್ರವಾದ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಸಂತ್ರಸ್ತೆಗೆ ಶೀಘ್ರ ನ್ಯಾಯ ಸಿಗುವಂತೆ ಮಾಡುವುದು ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದೆ.
  • ಮಾಧ್ಯಮಗಳ ಸ್ವಯಂ ವಿಮರ್ಶೆ: ಪ್ರಭಾವಿಗಳ ಸುದ್ದಿ ಬಂದಾಗ ಕಣ್ಣು-ಬಾಯಿ ಮುಚ್ಚಿಕೊಳ್ಳುವ ‘ಬಿಕರಿ ಮಾಧ್ಯಮಗಳು’ ತಮ್ಮ ದ್ವಂದ್ವ ನೀತಿಯನ್ನು ಬಿಟ್ಟು, ಸಂತ್ರಸ್ತೆಯ ಪರವಾಗಿ ಸತ್ಯವನ್ನು ಜನರೆದುರು ತರುವ ಮಾಧ್ಯಮ ಧರ್ಮವನ್ನು ಪಾಲಿಸಬೇಕಿದೆ.

ಅಧಿಕಾರದ ಮದದಲ್ಲಿ ಮೆರೆಯುವವರಿಗೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಅತ್ಯಂತ ಕ್ಷುಲ್ಲಕವಾಗಿ ಕಾಣುವ ಮಾನಸಿಕತೆಗೆ ಈ ಪ್ರಕರಣದ ತನಿಖೆ ಮತ್ತು ಕಾನೂನು ವಿಧಿಸುವ ಶಿಕ್ಷೆ ಒಂದು ಎಚ್ಚರಿಕೆಯ ಗಂಟೆಯಾಗಬೇಕಿದೆ. ರಾಜ್ಯ ಸರ್ಕಾರ, ಗೃಹ ಇಲಾಖೆ ಮತ್ತು ಕರ್ನಾಟಕ ಪೊಲೀಸ್ ಸಿಬ್ಬಂದಿ ಈ ಪ್ರಕರಣದಲ್ಲಿ ಎಷ್ಟರಮಟ್ಟಿಗೆ ಧೈರ್ಯ, ಪಾರದರ್ಶಕತೆ ಹಾಗೂ ಸಾಚಾತನ ಪ್ರದರ್ಶಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

(ವಿಶೇಷ ಸೂಚನೆ: ಈ ಲೇಖನದಲ್ಲಿ ಪ್ರಕಟವಾಗಿರುವ ವಿವರಗಳು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (FIR) ಪ್ರತಿ ಹಾಗೂ ಪ್ರತ್ಯಕ್ಷದರ್ಶಿ ಮೂಲಗಳ ಆಧಾರಿತ ವರದಿಯಾಗಿದ್ದು, ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಯ ಮೂಲಕ ಪ್ರಕರಣದ ಅಂತಿಮ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರಬರಬೇಕಿದೆ.)

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...