Friday, September 11, 2026
Home ವಿಶ್ಲೇಷಣೆ KMF Scam: ಸುಪ್ರೀಂನಲ್ಲೂ ಮುಗದʻಗೆ ಮುಖಭಂಗ! ಕೇಂದ್ರ ಸಚಿವರ ಆಪ್ತವಲಯದ ನಂಟು ಇದ್ದರೂ ಉಳಿಯಲಿಲ್ಲ ಅಧ್ಯಕ್ಷಗಿರಿ

KMF Scam: ಸುಪ್ರೀಂನಲ್ಲೂ ಮುಗದʻಗೆ ಮುಖಭಂಗ! ಕೇಂದ್ರ ಸಚಿವರ ಆಪ್ತವಲಯದ ನಂಟು ಇದ್ದರೂ ಉಳಿಯಲಿಲ್ಲ ಅಧ್ಯಕ್ಷಗಿರಿ

KMF Scam: ಸುಪ್ರೀಂನಲ್ಲೂ ಮುಗದಗೆ ಮುಖಭಂಗ! ಕೇಂದ್ರ ಸಚಿವರ ಆಪ್ತವಲಯದ ನಂಟು ಇದ್ದರೂ ಉಳಿಯಲಿಲ್ಲ ಅಧ್ಯಕ್ಷಗಿರಿ

KMF Scam: “ನನಗೆ ದೆಹಲಿ ಮಟ್ಟದ ಕಂಟ್ಯಾಕ್ಟ್ ಇದೆ, ಕೇಂದ್ರ ಸಚಿವರ ಆಪ್ತವಲಯದ ನಂಟಿದೆ, ಈ ಹಳ್ಳಿಯ ರೈತರು ಅಥವಾ ಇಲಾಖೆಯ ನಿಯಮಗಳು ನನ್ನನ್ನೇನು ಮಾಡಕ್ಕಾಗಲ್ಲ…” ಎಂಬ ಅಹಂಕಾರದಲ್ಲಿ ಮೆರೆಯುತ್ತಿದ್ದ ಬಿಜೆಪಿ ಮುಖಂಡ, ಕೇಂದ್ರ ಸಚಿವರ ಆಪ್ತ ಶಂಕರ ವೀರಪ್ಪ ಮುಗದ ಅವರ ರಾಜಕೀಯ ದರ್ಪಕ್ಕೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಅಂತಿಮವಾಗಿ ಮರಣಮೃದಂಗ ಬಾರಿಸಿದೆ!

ಧಾರಾವಾಡದ ಶಿವಳ್ಳಿ ಹಾಲು ಉತ್ಪಾದಕರ ಸಂಘದಿಂದ ಶುರುವಾದ ಈ ಅಧಿಕಾರದ ಹಪಾಹಪಿ, ಕೆ.ಎಂ.ಎಫ್ (KMF) ಅಧ್ಯಕ್ಷ ಹುದ್ದೆಯನ್ನು ಕಬಳಿಸಿ, ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಲ್ಲಿಯೂ ವಜಾಗೊಳ್ಳುವ ಮೂಲಕ ಅಂತ್ಯಕಂಡಿದೆ. ರಾಜಕೀಯ ಪ್ರಭಾವ ನೆಚ್ಚಿಕೊಂಡು ಸಹಕಾರ ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದ ಈ ನಾಯಕನಿಗೆ ನ್ಯಾಯಾಲಯಗಳು ನೀಡಿದ ಈ ‘ಡಬಲ್ ಶಾಕ್’ ಇಡೀ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲೇ ಭಾರಿ ಸಂಚಲನ ಮೂಡಿಸಿದೆ.

ರೈತರ ಕಣ್ಣಿಗೆ ಮಣ್ಣೆರಚಿ ‘ಕುರ್ಚಿ ಹೈಜಾಕ್’ ಮಾಡಲು ಹೆಣೆದಿದ್ದ ಸ್ಕೆಚ್!

ಈ ಇಡೀ ಹಗರಣ (KMF Scam) ಹಾಗೂ ಅಕ್ರಮದ ಕಥೆ ಶುರುವಾಗಿದ್ದು ಧಾರವಾಡ ಜಿಲ್ಲೆಯ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ. ಸಹಕಾರ ಸಂಘದ ಕಾಯ್ದೆ ಪ್ರಕಾರ, ಚುನಾವಣೆ ಬಗ್ಗೆ ಕನಿಷ್ಠ 195 ದಿನಗಳ ಮುಂಚಿತವಾಗಿಯೇ ನೋಟಿಸ್ ಕೊಡಬೇಕು. ಆದರೆ, ಈ ಶಂಕರ ಮುಗದ ಅವರಿಗೆ ಹಳ್ಳಿಯ ರೈತರ ಹಕ್ಕುಗಳಿಗಿಂತ ತಾನು ಕುರ್ಚಿಯಲ್ಲಿ ಕೂರುವುದೇ ಮುಖ್ಯವಾಗಿತ್ತು. ಕೇಂದ್ರ ಸಚಿವರ ಬೆಂಬಲದ ಬಲವಿದೆ ಎಂಬ ಹಮ್ಮಿನಲ್ಲಿ, ತಮಗೆ ಬೇಕಾದಂತೆ ತರಾತುರಿಯಲ್ಲಿ ಚುನಾವಣೆ ಮುಗಿಸಿ, ರೈತರನ್ನು ಕತ್ತಲಲ್ಲಿಟ್ಟು ಇಡೀ ಸಂಘವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸ್ಕೆಚ್ ಹಾಕಿದ್ದರು.

ಬಡ ರೈತರು ಜಾಗೃತರಾಗಿ ಅಧಿಕಾರಿಗಳಿಗೆ ದೂರು ನೀಡಿದಾಗ, ಸಹಕಾರ ಇಲಾಖೆ “ನಿಯಮ ಪಾಲಿಸಿ” ಎಂದು ನೋಟಿಸ್ ನೀಡಿತು. ಆದರೆ, ಪ್ರಭಾವದ ಅಮಲಿನಲ್ಲಿದ್ದ ಈ ನಾಯಕನಿಗೆ ಸರ್ಕಾರಿ ಅಧಿಕಾರಿಗಳ ಆದೇಶ ಕಸದ ಬುಟ್ಟಿಗೆ ಸಮಾನವಾಗಿತ್ತು!

ಇದನ್ನೂ ಓದಿ: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಶಿ ವಿರುದ್ಧ FIR! ಲೈಂಗಿಕ ಕಿರುಕುಳ, ಜೀವ ಬೆದರಿಕೆಯ ಗಂಭೀರ ಆರೋಪ!

ಹೈಕೋರ್ಟ್ ಚಾಟಿಯೇಟು ಮತ್ತು 6 ವರ್ಷಗಳ ಅನರ್ಹತೆ’ (Red Card)!

ತಮ್ಮ ಆಟ ನಡೆಯದಿದ್ದಾಗ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಓಡಿದ ಈ ಮುಖಂಡನಿಗೆ, ನ್ಯಾಯಾಲಯವು “ನಿಮ್ಮ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ, ಇದು ವಜಾ ಮಾಡಲು ಯೋಗ್ಯ” ಎಂದು ಮುಖಕ್ಕೆ ಹೊಡೆದಂತೆ ಹೇಳಿ ಹೊರಹಾಕಿತು.

ಹೈಕೋರ್ಟ್‌ನಿಂದ ಛೀಮಾರಿ ಹಾಕಿದ ಮೇಲೂ ಸುಮ್ಮನಿರದ ಈ ನಾಯಕ, ಕೆಳಹಂತದ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬಳಸಿ ಒತ್ತಡ ಹೇರಿ ತಮ್ಮ ಪರ ಆದೇಶ ತರಿಸಿಕೊಂಡರು. ಆದರೆ ಬೆಳಗಾವಿ ಜಂಟಿ ನಿಬಂಧಕರು (JR) ತಕ್ಷಣ ಆ ಅಕ್ರಮ ಆದೇಶಕ್ಕೆ ತಡೆ ನೀಡಿದರು.

ಅಷ್ಟಕ್ಕೇ ಮುಗಿಯಲಿಲ್ಲ, ದಿನಾಂಕ 05-01-2025ಕ್ಕೆ ಆಡಳಿತ ಮಂಡಳಿಯ ಅವಧಿ ಮುಗಿದರೂ ಕುರ್ಚಿ ಬಿಡಲು ಮುಗದ ತಯಾರಿರಲಿಲ್ಲ. ಕೊನೆಗೆ ಸಹಕಾರ ಇಲಾಖೆಯು ಇವರ ರಾಜಕೀಯ ಶಕ್ತಿಗೆ ಡೋಂಟ್ ಕೇರ್ ಎನ್ನುತ್ತಾ ಸರ್ಕಾರಿ ಆಡಳಿತಾಧಿಕಾರಿಯನ್ನು (Administrator) ನೇಮಕ ಮಾಡಿ ಇವರ ಅಧಿಕಾರದ ಮದ ಇಳಿಸಿತು.

ಸಿಕ್ಕಿತು ‘ರೆಡ್ ಕಾರ್ಡ್’: ಸಂಘದಲ್ಲಿ ನಡೆಸಿದ ಸಾಲು ಸಾಲು ಅಕ್ರಮಗಳಿಗೆ ಸಹಕಾರ ಇಲಾಖೆಯು ಕಲಂ 29(ಸಿ) ಅಡಿಯಲ್ಲಿ ಶಂಕರ ವೀರಪ್ಪ ಮುಗದ ಅವರನ್ನು ಮುಂದಿನ 6 ವರ್ಷಗಳ ಕಾಲ ಯಾವುದೇ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸದಂತೆ ಮತ್ತು ನಿರ್ದೇಶಕರಾಗದಂತೆ ‘ಅನರ್ಹ’ಗೊಳಿಸಿ (Red Card) ಆದೇಶ ಹೊರಡಿಸಿತು!

ಒಂದೇ ಏಟಿಗೆ ಹಾರಿಹೋಯಿತು KMF ಒಕ್ಕೂಟದ ‘ಅಧ್ಯಕ್ಷ’ಗಿರಿ!

ಮೂಲ ಶಿವಳ್ಳಿ ಸಂಘದ ಹೆಸರನ್ನು ಬಳಸಿಕೊಂಡು ಶಂಕರ ಮುಗದ ಅವರು ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (KMF) ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಮೆರೆಯುತ್ತಿದ್ದರು. ಆದರೆ ಸಹಕಾರ ಕಾಯ್ದೆಯ ಸೆಕ್ಷನ್ 18B ಪ್ರಕಾರ: ಹಳ್ಳಿಯ ಮೂಲ ಸಂಘದಲ್ಲಿ ಅಧಿಕಾರ ಇದ್ದರೆ ಮಾತ್ರ KMF ನಂತಹ ದೊಡ್ಡ ಒಕ್ಕೂಟದಲ್ಲಿ ಇರಲು ಸಾಧ್ಯ. ಯಾವಾಗ ಮಾತೃ ಸಂಸ್ಥೆಯಾದ ಶಿವಳ್ಳಿ ಸಂಘದಲ್ಲೇ ಇವರ ಸ್ಥಾನ ಹಾರಿಹೋಯಿತೋ, ಜೂನ್ 2025ರಲ್ಲಿ KMF ನಲ್ಲಿದ್ದ ಇವರ ಬೃಹತ್ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನವೂ ಆಟೋಮ್ಯಾಟಿಕ್ ಆಗಿ ಗಾಳಿಯಲ್ಲಿ ತೇಲಿಹೋಯಿತು!

ಅಧಿಕಾರದ ಲಾಲಸೆ ಎಷ್ಟಿತ್ತೆಂದರೆ, ಹೈಕೋರ್ಟ್ ಏಕಸದಸ್ಯ ಪೀಠದಿಂದ ಹೇಗೋ ‘ಯಥಾಸ್ಥಿತಿ’ ಆದೇಶ ತಂದು ಮತ್ತೆ KMF ಒಕ್ಕೂಟದೊಳಗೆ ರಾಜ ಗಾಂಭೀರ್ಯದಿಂದ ನುಗ್ಗಲು ಯತ್ನಿಸಿದರು. ಆದರೆ, ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿದ್ದ ಮಾನ್ಯ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರು, “ಮೂಲ ಬೇರೇ ಇಲ್ಲದ ಮೇಲೆ ರೆಂಬೆಗೆ ಶಕ್ತಿ ಎಲ್ಲಿಂದ ಬರುತ್ತದೆ? ಮೂಲ ಸಂಘದಲ್ಲೇ ಆಡಳಿತಾಧಿಕಾರಿ ಇರುವಾಗ ನೀವು KMF ಅಧ್ಯಕ್ಷರಾಗಿ ಕೂರಲು ಸಾಧ್ಯವಿಲ್ಲ” ಎಂದು ಕಟ್ಟುನಿಟ್ಟಿನ ತಡೆಯಾಜ್ಞೆ (STAY) ನೀಡಿ ಹೊರಗೆ ತಳ್ಳಿದರು.

ಇದನ್ನೂ ಓದಿ: ವಿನಯ್‌ ಕುಲಕರ್ಣಿ ವಿರುದ್ಧದ ಶಿಕ್ಷೆಗೆ ತಡೆ, ಜಾಮೀನು ನೀಡಿದ್ದು ಯಾಕೆ? ವಿರೋಧಿಗಳ ಹತಾಶೆ ಪ್ರಶ್ನೆಗೆ ಹೈಕೋರ್ಟ್ ಆದೇಶವೇ ನೀಡುವ ಖಡಕ್ ಉತ್ತರ ಇಲ್ಲಿದೆ…!

ಸುಪ್ರೀಂ ಕೋರ್ಟ್‌ನಲ್ಲಿ ಹೈಫೈ ವಕೀಲರಿದ್ದರೂ ಉಳಿಯಲಿಲ್ಲ ಸೀಟು!

ಹೈಕೋರ್ಟ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದ ನಂತರವೂ ಈ ಬಿಜೆಪಿ ಮುಖಂಡನಿಗೆ ಬುದ್ಧಿ ಬರಲಿಲ್ಲ. ದೆಹಲಿ ಮಟ್ಟದ ಹಿರಿಯ ವಕೀಲರ ಪಡೆಯನ್ನು ಕಟ್ಟಿಕೊಂಡು ಭಾರತದ ಸರ್ವೋಚ್ಚ ನ್ಯಾಯಾಲಯದ (Supreme Court) ಬಾಗಿಲು ತಟ್ಟಿದರು (Special Leave Petition No. 26208/2025). ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ರಾಜಕೀಯ ಬೆಂಬಲವಾಗಲಿ, ದೆಹಲಿ ವಕೀಲರ ಜಾಣ್ಮೆಯಾಗಲಿ ನಡೆಯಲಿಲ್ಲ. ದಿನಾಂಕ 05-08-2026 ರಂದು ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

ಪ್ರಕರಣದ ನಂತರದ ಬೆಳವಣಿಗೆಗಳು ಹಾಗೂ ಆಡಳಿತಾಧಿಕಾರಿ ನೇಮಕದ ಕಾನೂನುಬದ್ಧತೆಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು: “In view of the subsequent developments, nothing further survives for consideration in the present Special Leave Petition. Accordingly, the Special Leave Petition stands disposed of.” (ಪ್ರಕರಣದ ತದನಂತರದ ಬೆಳವಣಿಗೆಗಳನ್ನು ಗಮನಿಸಿದರೆ, ಈ ಅರ್ಜಿಯಲ್ಲಿ ಪರಿಶೀಲಿಸಲು ಅಥವಾ ವಿಚಾರಣೆ ನಡೆಸಲು ಯಾವುದೇ ವಿಷಯ ಉಳಿದಿಲ್ಲ. ಆದ್ದರಿಂದ ಈ ವಿಶೇಷ ರಜೆ ಅರ್ಜಿಯನ್ನು ವಜಾಗೊಳಿಸಿ ವಿಲೇವಾರಿ ಮಾಡಲಾಗಿದೆ!)

ಈ ಆದೇಶದೊಂದಿಗೆ, ಶಂಕರ ಮುಗದ ಅವರು ಸಲ್ಲಿಸಿದ್ದ ಎಲ್ಲಾ ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿ, ವಿವಾದಕ್ಕೆ ಅಂತಿಮ ಮೊಳೆ ಹೊಡೆದಿದೆ!

KMF Scam: ಸುಪ್ರೀಂನಲ್ಲೂ ಮುಗದಗೆ ಮುಖಭಂಗ! ಕೇಂದ್ರ ಸಚಿವರ ಆಪ್ತವಲಯದ ನಂಟು ಇದ್ದರೂ ಉಳಿಯಲಿಲ್ಲ ಅಧ್ಯಕ್ಷಗಿರಿ
ಸುಪ್ರೀಂ ಕೋರ್ಟ್‌ ಆದೇಶ ಪ್ರತಿ

ಅಧಿಕಾರದ ಮದಕ್ಕೆ ನ್ಯಾಯಾಂಗ ಕೊಟ್ಟ ಖಡಕ್ ಸಂದೇಶ!

ಒಂದು ಸಣ್ಣ ಹಳ್ಳಿಯ ಹಾಲು ಉತ್ಪಾದಕರ ಸಂಘದ ಇಗೋ ಮತ್ತು ಹುದ್ದೆಯ ವ್ಯಾಮೋಹಕ್ಕಾಗಿ ಶುರುವಾದ ಈ ಕಿತ್ತಾಟ, ಇವತ್ತು ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಬಿಜೆಪಿ ಮುಖಂಡನಿಗೆ ಶಾಶ್ವತ ಮುಖಭಂಗ ತಂದಿಟ್ಟಿದೆ.

  • ರಾಜಕೀಯ ನಂಟು ಶಾಶ್ವತವಲ್ಲ: ದೊಡ್ಡ ದೊಡ್ಡ ನಾಯಕರ ಬೆಂಬಲವಿದೆ ಎಂದು ಕಾನೂನನ್ನು ತಮಗೆ ಬೇಕಾದಂತೆ ತಿರುಗಿಸಲು ಹೋದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಹೇಗೆ ಜಾಗ ತೋರಿಸುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
  • ರೈತರ ಬೆವರಿನ ದುಡ್ಡಿನಲ್ಲಿ ರಾಜಕೀಯ ಬೇಡ: ಹಳ್ಳಿಯ ಬಡ ರೈತರು ಕಷ್ಟಪಟ್ಟು ಹೈನುಗಾರಿಕೆ ಮಾಡಿ ತರುವ ಹಾಲಿನ ದುಡ್ಡಿನಲ್ಲಿ ಬೆಳೆಯುವ KMF ನಂತಹ ಸಂಸ್ಥೆಗಳು ರಾಜಕಾರಣಿಗಳ ಸ್ವಸೇವೆಯ ಆಟದ ಮೈದಾನವಾಗಬಾರದು ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ.
  • 6 ವರ್ಷ ರಾಜಕೀಯ ವನವಾಸ: ಮುಂದಿನ 6 ವರ್ಷಗಳ ಕಾಲ ಯಾವುದೇ ಸಹಕಾರ ಸಂಘದ ಚುನಾವಣೆಗೆ ನಿಲ್ಲಲಾಗದೆ ‘ಅನರ್ಹ’ಗೊಂಡು, ಇದ್ದ KMF ಅಧ್ಯಕ್ಷ ಪದವಿಯನ್ನೂ ಕಳೆದುಕೊಂಡು ಶಂಕರ ವೀರಪ್ಪ ಮುಗದ ಈಗ ರಾಜಕೀಯವಾಗಿ ಮಕಾಡೆ ಮಲಗುವಂತಾಗಿದೆ.

“ಕುರ್ಚಿ ಅಥವಾ ರಾಜಕೀಯ ಪ್ರಭಾವ ಎಷ್ಟೇ ದೊಡ್ಡದಿರಲಿ, ಈ ದೇಶದ ಸಂವಿಧಾನ ಮತ್ತು ಕಾನೂನೇ ಎಲ್ಲರಿಗಿಂತ ಮಿಗಿಲು” ಎಂಬುದನ್ನು ಸುಪ್ರೀಂ ಕೋರ್ಟ್‌ನ ಈ ಕಠಿಣ ಆದೇಶ ಬಾರುಕೋಲಿನಂತೆ ಸಾಬೀತುಪಡಿಸಿದೆ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...