Saturday, September 12, 2026
Home ವಿಶ್ಲೇಷಣೆ Vinay Win: ಕಂಗಾಲಾಯ್ತಾ ಕೊರವರ ಗ್ಯಾಂಗ್? ಕಾನೂನು ಹೋರಾಟದಿಂದ ಹಿಂದೆ ಸರಿದ ಯೋಗೀಶ್ ಗೌಡನ ಪತ್ನಿ!

Vinay Win: ಕಂಗಾಲಾಯ್ತಾ ಕೊರವರ ಗ್ಯಾಂಗ್? ಕಾನೂನು ಹೋರಾಟದಿಂದ ಹಿಂದೆ ಸರಿದ ಯೋಗೀಶ್ ಗೌಡನ ಪತ್ನಿ!

Vinay Win: ಕಂಗಾಲಾಯ್ತಾ ಕೊರವರ ಗ್ಯಾಂಗ್? ಕಾನೂನು ಹೋರಾಟದಿಂದ ಹಿಂದೆ ಸರಿದ ಯೋಗೀಶ್ ಗೌಡನ ಪತ್ನಿ!

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಹೈಕೋರ್ಟ್‌ನಿಂದ ಸಿಕ್ಕ ಬಿಗ್ ರಿಲೀಫ್‌, ಇಡೀ ಪ್ರಕರಣದ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣ (Yogesh Gowda murder case) ದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪಿಗೆ ಹೈಕೋರ್ಟ್ ಮಧ್ಯಂತರ ತಡೆ (Stay) ನೀಡಿ, ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಒಂದು ಹಠಾತ್ ಬೆಳವಣಿಗೆಯಿಂದಾಗಿ, ಇಷ್ಟು ದಿನ ವಿನಯ್ ಕುಲಕರ್ಣಿ ಅವರ ವಿರುದ್ಧ ನಿರಂತರ ಕಾನೂನು ಸಮರ ಸಾರಿದ್ದ ಹೋರಾಟಗಾರ ಬಸವರಾಜ್ ಕೊರವರ್ (Basavaraj Koravar) ಹಾಗೂ ಅವರ ಗ್ಯಾಂಗ್ ಸಂಪೂರ್ಣ ಕಂಗಾಲಾದಂತೆ ಕಾಣುತ್ತಿದೆ.

ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಪ್ರಕರಣದ ಪ್ರಮುಖರಾದ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಹಾಗೂ ಸಹೋದರ ಗುರುನಾಥ ಗೌಡ ನೀಡಿರುವ ಪ್ರತಿಕ್ರಿಯೆಗಳು ಇಡೀ ಹೋರಾಟದ ತಂಡದಲ್ಲಿ ಮೂಡಿರುವ ಬಿರುಕು ಮತ್ತು ಗೊಂದಲವನ್ನು ಎತ್ತಿ ತೋರಿಸುತ್ತಿವೆ.

ಕಾನೂನು ಹೋರಾಟದಿಂದ ಸಂಪೂರ್ಣ ಹಿಂದೆ ಸರಿದ ಮಲ್ಲಮ್ಮ!

ಹೈಕೋರ್ಟ್‌ನ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಮಾಧ್ಯಮಗಳ ಮುಂದೆ ಬಂದ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ನೀಡಿದ ಪ್ರತಿಕ್ರಿಯೆ ಪ್ರತಿಯೊಬ್ಬರನ್ನೂ ಬೆರಗುಗೊಳಿಸಿದೆ. “ನಾವೇನು ಹೇಳೋದು, ಇದೆಲ್ಲವೂ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಬಿಟ್ಟ ವಿಚಾರ. ಕೋರ್ಟ್ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿಲ್ಲ. ಆದರೆ ನಾನು ಈ ವಿಚಾರದಲ್ಲಿ ಮುಂದೆ ಕಾನೂನು ಹೋರಾಟವನ್ನು ಮುಂದುವರಿಸುವುದಿಲ್ಲ. ಹೈಕೋರ್ಟ್ ಏನು ತೀರ್ಪು ನೀಡಿದೆಯೋ ಅದು ಸಾಕು, ನನಗೆ ಇಷ್ಟಕ್ಕೆ ಓಕೆ ಇದೆ. ನಾನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುವುದಿಲ್ಲ,” ಎಂದು ಮಲ್ಲಮ್ಮ ಸ್ಪಷ್ಟವಾಗಿ ಹೇಳಿದ್ದಾರೆ.

ವರ್ಷಗಳಿಂದ ಗಂಡನ ಕೊಲೆಗೆ ನ್ಯಾಯ ಸಿಗಬೇಕೆಂದು ಸಾಗಿದ್ದ ಹೋರಾಟದಲ್ಲಿ, ಸ್ವತಃ ಪತ್ನಿಯೇ ಈಗ “ಸಾಕು, ನನಗೆ ಈ ತೀರ್ಪೇ ಓಕೆ, ನಾನು ಸುಪ್ರೀಂ ಕೋರ್ಟ್‌ಗೆ ಹೋಗಲ್ಲ” ಎಂದು ಕಾನೂನು ಹೋರಾಟದಿಂದ ಕಾಲು ಹಿಂದೆ ತೆಗೆದಿರುವುದು, ಕೊರವರ್ ಗ್ಯಾಂಗ್‌ಗೆ ಬಿದ್ದ ಅತಿ ದೊಡ್ಡ ಚಾಟಿಯೇಟಾಗಿದೆ.

ಇದನ್ನೂ ಓದಿ: ದ್ವೇಷದ ರಾಜಕೀಯಕ್ಕೆ ನ್ಯಾಯಾಂಗದ ಏಟು: ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್! ‘ಅಸಲಿ ಸುದ್ದಿ’ಯ ಸತ್ಯಪಥಕ್ಕೆ ಸಿಕ್ಕಿತು ನ್ಯಾಯಾಂಗದ ಮುದ್ರೆ!

ಮೇಲ್ಮನವಿ ಸಲ್ಲಿಸುವ ಭರವಸೆಯಲ್ಲಿ ಯೋಗೇಶ್ ಗೌಡ ಸಹೋದರ!

ಒಂದೆಡೆ ಪತ್ನಿ ಮಲ್ಲಮ್ಮ ಹೋರಾಟದಿಂದ ಹಿಂದೆ ಸರಿದಿದ್ದರೆ, ಇನ್ನೊಂದೆಡೆ ಯೋಗೇಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮಾತ್ರ ಹೋರಾಟ ಮುಂದುವರಿಸುವ ಮಾತನಾಡಿದ್ದಾರೆ. “ಅವರಿಗೂ ಕಾನೂನಿದೆ, ನಮಗೂ ಕಾನೂನಿದೆ. ಕೆಳ ಕೋರ್ಟ್‌‌ನಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಈಗ ಹೈಕೋರ್ಟ್‌ಗೆ ಹೋದಾಗ ಅವರಿಗೆ ಜಾಮೀನು ಮತ್ತು ತಡೆಯಾಜ್ಞೆ ಸಿಕ್ಕಿದೆ. ಹೈಕೋರ್ಟ್ ಯಾವ ಕಾರಣಕ್ಕೆ ಸ್ಟೇ ನೀಡಿದೆ ಎನ್ನುವುದು ಗೊತ್ತಿಲ್ಲ. ಆದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗಲು ನಮಗೂ ಅವಕಾಶವಿದೆ. ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ ಹೋರಾಟ ಮಾಡುತ್ತೇವೆ,” ಎಂದು ಗುರುನಾಥ ಗೌಡ ಹೇಳಿದ್ದಾರೆ.

ಆದರೆ, ಸ್ವತಃ ಕುಟುಂಬದಲ್ಲೇ ಈ ರೀತಿ ಭಿನ್ನಾಭಿಪ್ರಾಯ ಇರುವುದು ಮತ್ತು ಪತ್ನಿಯೇ ಸುಪ್ರೀಂ ಕೋರ್ಟ್‌ಗೆ ಹೋಗಲು ನಿರಾಕರಿಸಿರುವುದು ಗುರುನಾಥ ಗೌಡ ಹಾಗೂ ಕೊರವರ್ ಗ್ಯಾಂಗ್‌ನ ಕಾನೂನು ಸಮರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಕಂಗಾಲಾದ ಕೊರವರ್ ಹಾವಭಾವ ಮತ್ತು ಆತ್ಮವಿಶ್ವಾಸದ ಕುಸಿತ

ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಅತ್ಯಂತ ಉದ್ವೇಗದಿಂದ, ಆಕ್ರೋಶದಿಂದ ಮೀಸೆ ತಿರುವಿ ಗಡ್ಡ ಸವರಿಕೊಂಡು, ವಿನಯ್ ಕುಲಕರ್ಣಿ (Vinay Kulkarni) ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಸವರಾಜ್ ಕೊರವರ್ ಅವರ ಮುಖದಲ್ಲಿ ಈ ಬಾರಿ ಸ್ಪಷ್ಟವಾದ ಕಂಗಾಲಾಟ ಎದ್ದು ಕಾಣುತ್ತಿತ್ತು.

  • ತಡವರಿಸುವ ಮಾತುಗಳು: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದಾಗ, ಅವರು “ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಬೇಲ್ ಸಿಗುವುದು ಸಾಮಾನ್ಯ ಪ್ರಕ್ರಿಯೆ… ಆದರೆ ಶಿಕ್ಷೆಗೆ ತಡೆ ಸಿಕ್ಕಿರುವುದು ನಮಗೆ ಬೇಸರ ತಂದಿದೆ” ಎಂದು ಸಬೂಬು ಹೇಳಲು ಯತ್ನಿಸಿದರು.
  • ಹಿನ್ನಡೆಯನ್ನು ಮುಚ್ಚಿಡುವ ವಿಫಲ ಯತ್ನ: ವರದಿಗಾರರು “ಇದು ನಿಮ್ಮ ತಂಡಕ್ಕೆ ತೀವ್ರ ಹಿನ್ನಡೆಯೇ?” ಎಂದು ನೇರವಾಗಿ ಕೇಳಿದಾಗ, ಕೊರವರ್ “ನಮ್ಮದೇನೂ ತಂಡವಿಲ್ಲ… ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟವರಿಗೆ ಬೇಸರವಾಗಿದೆ” ಎಂದು ವಿಷಯವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದರು.

ಅವರ ಕಣ್ಣುಗಳಲ್ಲಿದ್ದ ಆತಂಕ, ಮಾತುಗಳಲ್ಲಿದ್ದ ಧ್ವನಿ ಕುಸಿತ ಮತ್ತು ಪ್ರಶ್ನೆಗಳಿಗೆ ನೇರ ಉತ್ತರಿಸಲಾಗದೆ ತಡಕಾಡಿದ ಶೈಲಿ, ಅವರು ಆಂತರಿಕವಾಗಿ ಸಂಪೂರ್ಣವಾಗಿ ಕುಸಿದುಬಿದ್ದಿದ್ದಾರೆ ಎನ್ನುವುದನ್ನು ಎತ್ತಿ ತೋರಿಸುತ್ತಿತ್ತು.

ಬಡವರ ಮನೆ ಮಗ ಕೊರವರ್‌ಗೆ ಕೋಟಿ ಕೋಟಿ ಖರ್ಚು ಮಾಡಿ ಕಾನೂನು ಸಮರ ನಡೆಸಲು ಹೇಗೆ ಸಾಧ್ಯ?

ಹೈಕೋರ್ಟ್ ಆದೇಶದಿಂದ ಕಂಗಾಲಾಗಿರುವ ಕೊರವರ್, ಈಗ ಗುರುನಾಥ ಗೌಡ ಅವರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ಇಲ್ಲಿ ಸಾರ್ವಜನಿಕ ವಲಯದಲ್ಲಿ ಅತಿ ದೊಡ್ಡ ಪ್ರಶ್ನೆಯೊಂದು ಎದ್ದು ಕಾಣುತ್ತಿದೆ.

ತಮ್ಮನ್ನು ತಾವು ‘ಬಡವರ ಮನೆ ಮಗ’ ಎಂದು ಕರೆದುಕೊಳ್ಳುವ, ಸಾಮಾನ್ಯ ಹೋರಾಟಗಾರ ಬಸವರಾಜ್ ಕೊರವರ್ ಅವರಿಗೆ ದೆಹಲಿಯ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಹೋರಾಟ ಮುಂದುವರಿಸಲು ಹೇಗೆ ಸಾಧ್ಯ? ಸುಪ್ರೀಂ ಕೋರ್ಟ್‌ನಲ್ಲಿ ದೇಶದ ದೈತ್ಯ ವಕೀಲರನ್ನು ನಿಲ್ಲಿಸಿ, ವಾದ ಮಂಡಿಸಿ ಪ್ರಕರಣವನ್ನು ಮುನ್ನಡೆಸಲು ಕೋಟ್ಯಂತರ ರೂಪಾಯಿ ಹಣದ ಅವಶ್ಯಕತೆ ಇರುತ್ತದೆ. ಯಾವುದೇ ಬಲವಾದ ಆರ್ಥಿಕ ಹಿನ್ನೆಲೆಯಿಲ್ಲದ, ಬಡವರ ಮನೆ ಮಗ ಎಂದು ಹೇಳಿಕೊಳ್ಳುವ ಬಸವರಾಜ್ ಕೊರವರ್‌ಗೆ ಕೋಟಿ ಕೋಟಿ ಖರ್ಚು ಮಾಡಿ ಈ ಬೃಹತ್ ಕಾನೂನು ಹೋರಾಟವನ್ನು ಮುಂದುವರೆಸಲು ನಿಜಕ್ಕೂ ಸಾಧ್ಯವಿದೆಯೇ? ಅಥವಾ ಅದಕ್ಕೆ ಬೇರೆ ಮೂಲಗಳಿಂದ ಫಂಡಿಂಗ್‌ ಆಗುತ್ತಾ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಒಂದೆಡೆ ಕೊಲೆಗೀಡಾದ ವ್ಯಕ್ತಿಯ ಪತ್ನಿ ಮಲ್ಲಮ್ಮ ಅವರೇ “ಸಾಕು, ಸುಪ್ರೀಂ ಕೋರ್ಟ್‌ಗೆ ಹೋಗಲ್ಲ” ಎಂದು ಕೈತೊಳೆದುಕೊಂಡಿದ್ದಾರೆ. ಹೀಗಿರುವಾಗ, ಕೊರವರ್ ಗ್ಯಾಂಗ್ ಕೋಟಿ ಕೋಟಿ ಖರ್ಚು ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಕೇವಲ ಮಾಧ್ಯಮಗಳ ಮುಂದೆ ತಮ್ಮ ಸೋಲನ್ನು ಮುಚ್ಚಿಟ್ಟುಕೊಳ್ಳಲು ನೀಡುತ್ತಿರುವ ಬರಿ ಹೇಳಿಕೆಯೇ? ಎನ್ನುವ ಸಂದೇಹ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಕಲಬುರ್ಗಿ ಸಾವಿಗೆ ಮೌನ, ರೌಡಿ ಶೀಟರ್‌ ಕೊಲೆ ಕೇಸ್‌ಗೆ ಬಿಜೆಪಿಯಿಂದ ಫಂಡಿಂಗ್? ಇದು ನ್ಯಾಯವೋ ಅಥವಾ ವಿನಯ್ ಕುಲಕರ್ಣಿ ವಿರುದ್ಧದ ಸ್ಕ್ರಿಪ್ಟೆಡ್ ಸಂಚೋ?

ಧಾರವಾಡ ಪ್ರವೇಶದ ಗೊಂದಲ ಮತ್ತು ಕೊರವರ್‌ರ ಆತ್ಮವಂಚನೆ

ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮತ್ತು ತಡೆ ಆಜ್ಞೆ ಸಿಕ್ಕಿದ ಮೇಲೆ, ಅವರು ತಮ್ಮ ಸ್ವಕ್ಷೇತ್ರ ಹಾಗೂ ಧಾರವಾಡ ಜಿಲ್ಲೆಗೆ ಪ್ರವೇಶಿಸಬಹುದೇ ಎನ್ನುವ ಪ್ರಶ್ನೆಗೆ ಕೊರವರ್ ನೀಡಿದ ಉತ್ತರ ಅವರಲ್ಲಿರುವ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

ಹೈಕೋರ್ಟ್ ಆದೇಶದ ಸಂಪೂರ್ಣ ವಿವರ ಇನ್ನೂ ಕೈಸೇರಿಲ್ಲ ಎಂದರೂ, “ಅವರ ಮೇಲೆ ಇನ್ನೂ ಪ್ರಕರಣಗಳು ಪೆಂಡಿಂಗ್ ಇವೆ… ಹಾಗಾಗಿ ಅವರಿಗೆ ಜಿಲ್ಲೆ ಪ್ರವೇಶಿಸಲು ಅವಕಾಶ ಸಿಗುವುದಿಲ್ಲ ಅನ್ನಿಸುತ್ತದೆ” ಎಂದು ಕೊರವರ್ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳಲು ಯತ್ನಿಸಿದರು. ಆದರೆ, ಉನ್ನತ ನ್ಯಾಯಾಲಯ ರಾಜಕೀಯ ಪ್ರಭಾವಿ ನಾಯಕನಿಗೆ ಸಂಪೂರ್ಣ ರಿಲೀಫ್ ನೀಡುತ್ತಿರುವಾಗ, ಈ ತಾಂತ್ರಿಕ ನೆಪಗಳು ವಿನಯ್ ಕುಲಕರ್ಣಿ ಅವರ ಹಾದಿಯನ್ನು ತಡೆಯಲಾರವು ಎನ್ನುವ ಕಹಿ ಸತ್ಯ ಕೊರವರ್ ಅವರಿಗೂ ಒಳಗೊಳಗೇ ಅರಿವಾಗಿದೆ.

ಕೊರವರ್ ಗ್ಯಾಂಗ್‌ಗೆ ಎದುರಾದ ಕಠಿಣ ಸವಾಲು

ವರ್ಷಗಳಿಂದ ವಿನಯ್ ಕುಲಕರ್ಣಿ ಅವರ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಮೇಲೆ ಕರಿನೆರಳು ಚಾಚುವಂತೆ ಮಾಡಿದ್ದ ಈ ಕಾನೂನು ಸಮರದಲ್ಲಿ, ಹೈಕೋರ್ಟ್‌ನ ಈ ಮಧ್ಯಂತರ ತೀರ್ಪು ವಿನಯ್ ಕುಲಕರ್ಣಿ ಬೆಂಬಲಿಗರಿಗೆ ಹೊಸ ಉತ್ಸಾಹ ತುಂಬಿದ್ದರೆ, ಬಸವರಾಜ್ ಕೊರವರ್ ಮತ್ತು ಅವರ ಸಂಗಡಿಗರಿಗೆ ಚೇತರಿಸಿಕೊಳ್ಳಲಾಗದ ಆಘಾತ ನೀಡಿದೆ.

ಇಷ್ಟು ದಿನ “ನ್ಯಾಯ ಸಿಕ್ಕೇ ಬಿಟ್ಟಿತು” ಎಂದು ಬೀಗುತ್ತಿದ್ದ ಕೊರವರ್ ಗ್ಯಾಂಗ್, ಈಗ ಹೈಕೋರ್ಟ್‌ನ ಆದೇಶದಿಂದ ಕಂಗಾಲಾದಂತೆ ಕಾಣುತ್ತಿದೆ. ಮಾಧ್ಯಮಗಳ ಮುಂದೆ ಅವರ ಹಾವಭಾವದಲ್ಲಿ ಎದ್ದು ಕಂಡ ಹತಾಶೆ ಮತ್ತು ಗೊಂದಲಗಳು, ಇವರಿಗೆ ಮುಂಬರುವ ದಿನಗಳು ಎಷ್ಟು ಕಠಿಣವಾಗಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...