Homeವಿಶ್ಲೇಷಣೆNEET Scam: ಮಂತ್ರಿ ಪದವಿ ಬಿಡದ ಪ್ರಧಾನ್; ಮೋದಿ-ಶಾ ಸರ್ಕಾರದ ಗದ್ದುಗೆಯನ್ನೇ ಅಲ್ಲಾಡಿಸಿದ ಜೊಂಡಿಗ್ಯಾಗಳು!

NEET Scam: ಮಂತ್ರಿ ಪದವಿ ಬಿಡದ ಪ್ರಧಾನ್; ಮೋದಿ-ಶಾ ಸರ್ಕಾರದ ಗದ್ದುಗೆಯನ್ನೇ ಅಲ್ಲಾಡಿಸಿದ ಜೊಂಡಿಗ್ಯಾಗಳು!

NEET Scam: “ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ!” – ಇದು ಕೇವಲ ಒಬ್ಬ ಬಿಜೆಪಿ ನಾಯಕ ನೀಡಿದ ಸಾಮಾನ್ಯ ರಾಜಕೀಯ ಹೇಳಿಕೆಯಲ್ಲ. ಬದಲಿಗೆ, ದೇಶದಾದ್ಯಂತ ದಿನಪೂರ್ತಿ ನಿದ್ದೆಗೆಟ್ಟು, ರಕ್ತ-ಬೆವರು ಹರಿಸಿ ಅಭ್ಯಾಸ ಮಾಡಿ ಭವಿಷ್ಯದ ಕನಸು ಕಾಣುತ್ತಿದ್ದ ಕೋಟ್ಯಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮುಖಕ್ಕೆ ಹೊಡೆದಂತೆ ನೀಡಿದ ಅತ್ಯಂತ ನಿರ್ದಯ ಹಾಗೂ ಅಹಂಕಾರದ ಸವಾಲು!

ದೇಶದ ಅತ್ಯುನ್ನತ ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಾದ NEET ಮತ್ತು UGC-NET ಗಳು ಬೀದಿ ಬೀದಿಯಲ್ಲಿ ಹರಾಜಾಗಿದ್ದರೂ, ಪ್ರಶ್ನೆಪತ್ರಿಕೆಗಳು ವಾಟ್ಸಾಪ್‌ ಹಾಗೂ ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ಮಾರಾಟವಾಗಿದ್ದರೂ, ಶಿಕ್ಷಣ ಸಚಿವಾಲಯದ ಮೂಗಿನ ನೇರಕ್ಕೇ ಪರೀಕ್ಷಾ ಮಾಫಿಯಾ ತಾಂಡವವಾಡುತ್ತಿದ್ದರೂ “ನಾವು ರಾಜೀನಾಮೆ ಕೊಡುವುದಿಲ್ಲ” ಎಂದು ಬೀಗುತ್ತಿರುವ ಕೇಂದ್ರ ಸರ್ಕಾರಕ್ಕೆ ಮಾನ-ಮರ್ಯಾದೆಯ ಅರಿವಿದೆಯೇ? ವಿದ್ಯಾರ್ಥಿಗಳ ಕನಸಿನ ಹೆಣದ ಮೇಲೆ ಸಚಿವಗಿರಿಯ ಸುಖ ಅನುಭವಿಸುತ್ತಿರುವ ಆಡಳಿತಗಾರರಿಗೆ ಜನಪ್ರತಿನಿಧಿಗಳೆಂದು ಕರೆದುಕೊಳ್ಳಲು ಕನಿಷ್ಠ ನೈತಿಕತೆಯಾದರೂ ಉಳಿದಿದೆಯೇ?

ಸಂಸತ್ತಿನ ಹೊರಗೆ ಲಾಠಿ ಪ್ರಹಾರ, ಒಳಗೆ ಕಳ್ಳನಂತೆ ಅಡಗಿ ಕುಳಿತ ಸಚಿವ!

ಸೋಮವಾರ ದೇಶದ ಅತ್ಯುನ್ನತ ಪ್ರಜಾಪ್ರಭುತ್ವದ ದೇಗುಲವೆನಿಸಿದ ಸಂಸತ್ ಭವನದ ಹೊರಗೆ ನಡೆದ ದೃಶ್ಯಗಳು ಇಡೀ ದೇಶವೇ ತಲೆತಗ್ಗಿಸುವಂತಿದ್ದವು. ತಮ್ಮ ಭವಿಷ್ಯವನ್ನು ಹಾಳುಗೆಡವಿದ, ಲಕ್ಷಾಂತರ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿದ (NEET Scam) ಶಿಕ್ಷಣ ಸಚಿವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿ ಬೀದಿಗೆಿಳಿದ ಯುವಜನರ ಮೇಲೆ ದೆಹಲಿ ಪೊಲೀಸರನ್ನು ಬಿಟ್ಟು ನಿರ್ದಯವಾಗಿ ಲಾಠಿ ಬೀಸಲಾಯಿತು.

ಪ್ರತಿಭಟನಾಕಾರರು ಸಂಸತ್ತಿನ ಮುಖ್ಯ ದ್ವಾರಕ್ಕೆ ಕೂಗಳತೆ ದೂರದಲ್ಲಿರುವ ರೈಲ್ ಭವನದತ್ತ ಧಾವಿಸುತ್ತಿದ್ದಂತೆ ಬೆದರಿದ ಆಡಳಿತಗಾರರು, ಸಂಸತ್ತಿನ ಬಾಗಿಲುಗಳನ್ನೇ ಬಂದ್ ಮಾಡಿಸಿಕೊಂಡರು! ಸಂಸದರನ್ನೂ ಹೊರಹೋಗಲು ಬಿಡದೆ ಬಂದ್ ಮಾಡಿದ ವಾತಾವರಣ ಸೃಷ್ಟಿಸಲಾಯಿತು.

ಹೊರಗೆ ರಸ್ತೆಯಲ್ಲಿ ದೇಶದ ಭವಿಷ್ಯವೆನಿಸಿದ ಯುವಜನರು ರಕ್ತ ಹರಿಸುತ್ತಿದ್ದರೆ, ಒಳಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗೃಹ ಸಚಿವ ಅಮಿತ್ ಶಾ ಅವರ ಕೊಠಡಿಯಲ್ಲಿ ಗಂಟೆಗಟ್ಟಲೆ ಅಡಗಿ ಕುಳಿತಿದ್ದರು! ತಮ್ಮ ಕುರ್ಚಿ ಉಳಿಸಿಕೊಳ್ಳಲು ಗೃಹ ಸಚಿವರ ಕಾಲಡಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಪ್ರಧಾನ್ ಅವರಿಗೆ, ಹೊರಗೆ ರಸ್ತೆಯಲ್ಲಿ ನಿಂತು ಕಣ್ಣೀರಿಡುತ್ತಿದ್ದ ವಿದ್ಯಾರ್ಥಿಗಳನ್ನು ಮುಖಾಮುಖಿ ಎದುರಿಸುವ ಧೈರ್ಯವಿರಲಿಲ್ಲ. ಸಂಜೆ 4:45ರ ಸುಮಾರಿಗೆ ಮಾಧ್ಯಮಗಳ ಕಣ್ಣು ತಪ್ಪಿಸಿ, ಕಳ್ಳನಂತೆ ಕಾರೇರಿ ಕಾಲ್ಕಿತ್ತ ಈ ಶಿಕ್ಷಣ ಸಚಿವರಿಗೆ ಆ ಅಧಿಕಾರದ ಸೀಟಿನಲ್ಲಿ ಕೂರಲು ಯಾವ ನೈತಿಕ ಹಕ್ಕಿದೆ?

ಇದನ್ನೂ ಓದಿ: NEET Scam ಮುಚ್ಚಿಹಾಕಲು ವಿದ್ಯಾರ್ಥಿಗಳ ತಲೆ ಸೀಳಿತಾ ಖಾಕಿ? ಯುವಶಕ್ತಿಯ ರೋಷಾಗ್ನಿಗೆ ನಡುಗಿದ ದಿಲ್ಲಿ ಸಿಂಹಾಸನ!

ಪರೀಕ್ಷಾ ಮಾಫಿಯಾದ ದಲಾಲಿ ಆಯಿತೇ NTA?

ಕಳೆದ ಕೆಲವು ವರ್ಷಗಳಿಂದ NTA (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ನಡೆಸುತ್ತಿರುವ ಪ್ರತಿಯೊಂದು ಪರೀಕ್ಷೆಯೂ ಬೃಹತ್‌ ಹಗರಣಗಳNEET Scam) ಗೂಡಾಗಿದೆ. ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಪ್ರಾಧ್ಯಾಪಕರನ್ನಾಗಿ ಮಾಡುವ ಕನಸಿನಿಂದ ತಮಗಿದ್ದ ಅಲ್ಪಸ್ವಲ್ಪ ಆಸ್ತಿ ಮಾರಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಕೋಚಿಂಗ್ ಸೆಂಟರ್‌ಗಳಿಗೆ ಸುರಿಯುತ್ತಾರೆ. ಆದರೆ, ವಿದ್ಯಾರ್ಥಿಗಳ ಆ ಸತತ ಪರಿಶ್ರಮವನ್ನು ಕೇವಲ ಕೆಲವೇ ಲಕ್ಷ ರೂಪಾಯಿಗಳಿಗೆ ಪರೀಕ್ಷಾ ಮಾಫಿಯಾಗಳು ಮಾರಾಟ ಮಾಡುತ್ತಿದ್ದರೆ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಾದಾಗಲೆಲ್ಲಾ “ನಾವು ಉನ್ನತ ಮಟ್ಟದ ತನಿಖಾ ಸಮಿತಿ ಮಾಡಿದ್ದೇವೆ” ಎಂದು ಹಳಸಿದ ಟೇಪ್ ರೆಕಾರ್ಡರ್‌ನಂತೆ ಹೇಳಿಕೆ ನೀಡುವ ಸರ್ಕಾರಕ್ಕೆ, ವಿದ್ಯಾರ್ಥಿಗಳು ಅನುಭವಿಸುವ ಮಾನಸಿಕ ಯಾತನೆ, ಕಳೆದುಹೋದ ವರ್ಷಗಳು, ಪೋಷಕರ ಹತಾಶೆ ಮತ್ತು ಹಣದ ಮೌಲ್ಯ ಗೊತ್ತಿದೆಯೇ? ಅಕ್ರಮ ಎಸಗಿದ ಕಿಂಗ್‌ಪಿನ್‌ಗಳನ್ನು ಜೈಲಿಗಟ್ಟುವ ಬದಲು, ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವ ಬದಲು, ಹಗರಣದ ನೇರ ಹೊಣೆ ಹೊರಬೇಕಾದ ಶಿಕ್ಷಣ ಸಚಿವರನ್ನು ರಕ್ಷಿಸಲು ಇಡೀ ಕೇಂದ್ರ ಸಂಪುಟವೇ ಸಾಲಾಗಿ ನಿಂತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

‘ಬಂಧನ’ದ ನಾಟಕ ಮತ್ತು ಬಿಜೆಪಿ ನಾಯಕರ ಅಹಂಕಾರದ ಶಿಖರ

ಸಂಸತ್ತಿನ ಕಾರಿಡಾರ್‌ಗಳಲ್ಲಿ “ಪ್ರಧಾನ್ ಅವರು ಗೃಹ ಸಚಿವಾಲಯದ ಧೋರಣೆಯಡಿ ಬಂದಿಯಾಗಿದ್ದಾರೆ” ಎಂದು ಸ್ವತಃ ನಾಯಕರೇ ಗೇಲಿ ಮಾಡುವ ಮಟ್ಟಕ್ಕೆ ಪರಿಸ್ಥಿತಿ ತಲುಪಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ ಎಲ್ಲರೂ ಅಮಿತ್ ಶಾ ಕೊಠಡಿಗೆ ಓಡೋಡಿ ಬಂದು ಸರಣಿ ಸಭೆಗಳನ್ನು ನಡೆಸಿದ್ದು ನೊಂದ ಯುವಜನರಿಗೆ ನ್ಯಾಯ ಕೊಡಿಸುವುದಕ್ಕಲ್ಲ! ಬದಲಾಗಿ, ಸಚಿವರ ರಾಜೀನಾಮೆ ತಪ್ಪಿಸಿ ತಮ್ಮ ರಾಜಕೀಯ ಮುಖ ಉಳಿಸಿಕೊಳ್ಳಲು ಮತ್ತು ಸರ್ಕಾರ ಬಿದ್ದುಹೋಗದಂತೆ ಕಾಯ್ದುಕೊಳ್ಳಲು!

“ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಈಡೇರಿಸಲಾಗಿದೆ, ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಬಿಜೆಪಿಯ ನಾಯಕರು ಬೀಗುತ್ತಿದ್ದಾರೆ. ಇದು ಯುವ ಸಮುದಾಯದ ಗಾಯದ ಮೇಲೆ ಉಪ್ಪು ಸವರುವ ಅಹಂಕಾರ. ಅಕ್ರಮಗಳು ನಡೆದಿರುವುದು ಜಗಜ್ಜಾಹೀರಾಗಿದ್ದರೂ, ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರೂ, “ನಾವು ಯಾರ ಮಾತಿಗೂ ಜಗ್ಗುವುದಿಲ್ಲ” ಎಂಬ ಈ ನಡವಳಿಕೆಯು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಿಡಿದ ಅತಿ ದೊಡ್ಡ ಶಾಪ.

ಇದನ್ನೂ ಓದಿ: Sonam Wangchuk: ಬ್ರಿಟಿಷರಿಗಿಂತ ಕ್ರೂರವಾಯಿತೇ ಕೇಂದ್ರದ ಧೋರಣೆ? ವಾಂಗ್ಚುಕ್ ಹೋರಾಟ ಹತ್ತಿಕ್ಕಿದ ದೆಹಲಿ ಗದ್ದುಗೆಯ ಸರ್ವಾಧಿಕಾರ!

ʻಜೊಂಡಿಗ್ಯಾ’ಗಳ ಆಡಳಿತಕ್ಕೆ ಯುವಜನತೆಯಿಂದಲೇ ತಕ್ಕ ಶಾಸ್ತಿ ನಿಶ್ಚಿತ!

ಸರ್ಕಾರದ ಒಳಗಿದ್ದುಕೊಂಡೇ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಕೊರೆದು ತಿನ್ನುತ್ತಿರುವ, ಹುದ್ದೆಗೆ ಅಂಟಿಕೊಂಡು ಕೂತಿರುವ ಈ ‘ಜೊಂಡಿಗ್ಯಾ’ಗಳ (ಕಾಕ್ರೋಚ್) ಮೊಂಡುತನಕ್ಕೆ ದೇಶದ ಯುವಜನಾಂಗ ಖಂಡಿತವಾಗಿಯೂ ತಕ್ಕ ಶಾಸ್ತಿ ಮಾಡಲಿದೆ. ಭಾರತದ ಯುವಪಡೆ ಎಚ್ಚರಗೊಂಡು ಬೀದಿಗಿಳಿದರೆ ಎಂತಹ ಬಲಶಾಲಿ ದೆಹಲಿ ಸುಲ್ತಾನರ ಗದ್ದುಗೆಗಳೂ ಧೂಳೀಪಟವಾಗುತ್ತವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ತಮ್ಮ ರಕ್ತ, ಬೆವರು ಹರಿಸಿ ಓದಿದ ವಿದ್ಯಾರ್ಥಿಗಳ ಕಣ್ಣೀರು ಮತ್ತು ಅವರ ಕುಟುಂಬಗಳ ಆಕ್ರೋಶ ಖಂಡಿತವಾಗಿಯೂ ಸುಮ್ಮನೆ ಹೋಗುವುದಿಲ್ಲ.

ಕೇಂದ್ರ ಸರ್ಕಾರಕ್ಕೆ ತಕ್ಷಣವೇ ಎಚ್ಚರಗೊಳ್ಳಲು ಮತ್ತು ತನ್ನ ಮಾನ ಉಳಿಸಿಕೊಳ್ಳಲು ಲಭ್ಯವಿರುವ ಕೊನೆಯ ದಾರಿಗಳು ಇವು ಮಾತ್ರ:

  • ಅಸಮರ್ಥ, ಜವಾಬ್ದಾರಿರಹಿತ ಹಾಗೂ ಹಗರಣದ ಆರೋಪ ಹೊತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು.
  • ಭ್ರಷ್ಟಾಚಾರ ಹಾಗೂ ಅಕ್ರಮಗಳ ಅಡ್ಡಾಯಾಗಿರುವ NTA (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ಸಂಸ್ಥೆಯನ್ನು ತಕ್ಷಣವೇ ವಿಸರ್ಜಿಸಿ, ಪಾರದರ್ಶಕ ಹೊಸ ವ್ಯವಸ್ಥೆಯನ್ನು ರೂಪಿಸಬೇಕು.
  • ಲಕ್ಷಾಂತರ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪರೀಕ್ಷಾ ಮಾಫಿಯಾದ ಅಸಲಿ ಕಿಂಗ್‌ಪಿನ್‌ಗಳನ್ನು ಹಾಗೂ ಅವರಿಗೆ ಸಾಥ್ ನೀಡಿದ ಅಧಿಕಾರಿಗಳನ್ನು ಜೈಲಿಗಟ್ಟಬೇಕು.

ಇದನ್ನು ಮಾಡದೆ, ಅಧಿಕಾರದ ಗರ್ವದಲ್ಲಿ “ರಾಜೀನಾಮೆ ಇಲ್ಲ” ಎಂದು ಮೊಂಡುತನ ಪ್ರದರ್ಶಿಸಿದರೆ, ಮುಂಬರುವ ದಿನಗಳಲ್ಲಿ ದೇಶದ ಮೂಲೆ ಮೂಲೆಯಿಂದ ಏಳುವ ಯುವ ಆಕ್ರೋಶದ ಜ್ವಾಲೆಗೆ ಈ ಮೋದಿ-ಶಾ ಆಡಳಿತದ ಗದ್ದುಗೆ ಸುಟ್ಟು ಭಸ್ಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments