Homeರಾಜ್ಯSiddaramaiah: ಬಂಡಾಯದ ತಂತ್ರ ಕೈಬಿಟ್ಟು ರಾಜೀನಾಮೆಗೆ ಮುಂದಾದ ಸಿದ್ದರಾಮಯ್ಯ! ಅತಂತ್ರವಾಗುತ್ತಾ ಆಪ್ತರ ರಾಜಕೀಯ?

Siddaramaiah: ಬಂಡಾಯದ ತಂತ್ರ ಕೈಬಿಟ್ಟು ರಾಜೀನಾಮೆಗೆ ಮುಂದಾದ ಸಿದ್ದರಾಮಯ್ಯ! ಅತಂತ್ರವಾಗುತ್ತಾ ಆಪ್ತರ ರಾಜಕೀಯ?

ಬೆಂಗಳೂರು: ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ತರ ಅಧ್ಯಾಯ ಲಿಖಿತವಾಗುತ್ತಿದೆ. “ನಾನೇ ಸಾರ್ವಭೌಮ” ಎಂಬಂತೆ ಬೀಗುತ್ತಿದ್ದ ಪ್ರಾದೇಶಿಕ ನಾಯಕತ್ವಕ್ಕೆ, ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ತಾನು ಇಂದಿಗೂ ‘ಸ್ಟ್ರಾಂಗ್’ ಎನ್ನುವ ಖಡಕ್ ಸಂದೇಶವನ್ನು ರವಾನಿಸಿದೆ. ಕೊನೆಗೂ ಹೈಕಮಾಂಡ್ ಸೂಚನೆಗೆ ತಲೆಬಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಇಂದು ಮಧ್ಯಾಹ್ನ ಮೂರು ಗಂಟೆಗೆ ರಾಜೀನಾಮೆ ನೀಡಲು ಒಪ್ಪಿಕೊಳ್ಳುವ ಮೂಲಕ ಸುಗಮ ಅಧಿಕಾರ ಹಸ್ತಾಂತರಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ಬೆಂಗಳೂರಿನ ನಡುವೆ ನಡೆಯುತ್ತಿದ್ದ ಹೈವೋಲ್ಟೇಜ್ ರಾಜಕೀಯ ಡ್ರಾಮಾಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ.

ಹೈಕಮಾಂಡ್ ನಿಟ್ಟುಸಿರು; ರವಾನೆಯಾಯ್ತು ‘ಪವರ್‌ಫುಲ್’ ಸಂದೇಶ

ಸಿದ್ದರಾಮಯ್ಯ (Siddaramaiah) ಅವರು ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂದಿಯಾ ಅಥವಾ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ರೀತಿಯಲ್ಲಿ ಬಂಡಾಯದ ಬಿರುಗಾಳಿಐನ್ನು ಕರ್ನಾಟಕದಲ್ಲಿ ಸೃಷ್ಟಿಯಾಗಬಹುದು ಎಂಬ ತೀವ್ರ ಆತಂಕ ಕಾಂಗ್ರೆಸ್ ವರಿಷ್ಠರಲ್ಲಿ ಇತ್ತು. ಸಿದ್ದರಾಮಯ್ಯ ಅವರ ರಾಜಕೀಯ ಚಾಣಾಕ್ಷತನ ಮತ್ತು ಅವರ ಹಿಂದಿರುವ ಶಾಸಕರ ಬಲವನ್ನು ನೋಡಿ ಹೈಕಮಾಂಡ್ ಅಕ್ಷರಶಃ ನಡುಗಿಹೋಗಿತ್ತು. “ಸಿದ್ದು ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆಯಬಹುದು, ಹೈಕಮಾಂಡ್ ತೀರ್ಮಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇರಬಹುದು” ಎಂಬ ವಿಶ್ಲೇಷಣೆಗಳು ರಾಜಕೀಯ ಕಾರಿಡಾರ್‌ನಲ್ಲಿ ದಟ್ಟವಾಗಿದ್ದವು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹೈಕಮಾಂಡ್‌ಗೆ ಈ ಭೀತಿ ಕೊನೆಯ ಕ್ಷಣದವರೆಗೂ ಇದ್ದದ್ದು ಸುಳ್ಳಲ್ಲ.

ಆದರೆ, ಅಂತಿಮವಾಗಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮಾತಿಗೆ ಗೌರವ ನೀಡಿದ್ದಾರೆ. ಬಂಡಾಯದ ಬಾವುಟ ಹಾರಿಸಲು ಸಿದ್ದರಾಮಯ್ಯ ಅವರ ಆಪ್ತ ವಲಯ ಎಲ್ಲಾ ರೀತಿಯ ರಾಜಕೀಯ ತಂತ್ರಗಳನ್ನು, ಪ್ಲಾನ್‌ಗಳನ್ನು ರೂಪಿಸಿಕೊಂಡಿತ್ತಾದರೂ, ಸಿದ್ದರಾಮಯ್ಯ ಅದಕ್ಕೆ ಅವಕಾಶ ನೀಡಲಿಲ್ಲ. ಪಕ್ಷದ ಶಿಸ್ತು ಮತ್ತು ಹೈಕಮಾಂಡ್ ಅಸ್ತಿತ್ವಕ್ಕೆ ಧಕ್ಕೆ ತರದೇ, ಒಬ್ಬ ಪ್ರಬುದ್ಧ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿ ನಡೆದುಕೊಂಡ ಸಿದ್ದು, ತಾವೊಬ್ಬ ‘Loyal Congressಮನ್’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಎಐಸಿಸಿ ನಾಯಕತ್ವ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಇದನ್ನೂ ಓದಿ: Siddaramaiah: ಇಂದು ಸಿಎಂ ರಾಜೀನಾಮೆ ಇಲ್ಲ! ಸಿದ್ದು ‘ಹಳೆ ಹುಲಿ’ ತಂತ್ರಗಾರಿಕೆಗೆ ಡಿಕೆಶಿ ಮನೆಯಲ್ಲಿ ನೀರವ ಮೌನ; ತೆರೆಮರೆಯಲ್ಲಿ ಜಾರಕಿಹೊಳಿ ಮಾಸ್ಟರ್ ಪ್ಲ್ಯಾನ್!

ಕಾವೇರಿ ನಿವಾಸದ ‘ಪವರ್ ಬ್ರೇಕ್‌ಫಾಸ್ಟ್’ ಮತ್ತು ಕಣ್ಣೀರಿಟ್ಟ ಆಪ್ತರು

ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಚಿವರ ಉಪಹಾರ ಕೂಟ ಕೇವಲ ಔಪಚಾರಿಕ ಸಭೆಯಾಗಿರಲಿಲ್ಲ; ಅದು ಭಾವನೆಗಳ ಮಹಾಪೂರ ಹಾಗೂ ಮುಂಬರುವ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿತ್ತು. ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ (Siddaramaiah) ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯ, “ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದು ಇಲ್ಲದೇ ಏನೂ ಸಾಧ್ಯವಿಲ್ಲ” ಎಂಬ ಸಂದೇಶವನ್ನು ಜಗತ್ತಿಗೆ ಸಾರಿತು. ಅಷ್ಟೇ ಪ್ರಬುದ್ಧತೆಯಿಂದ ವರ್ತಿಸಿದ ಸಿದ್ದರಾಮಯ್ಯ, ಡಿಕೆಶಿ ಅವರನ್ನು ತಬ್ಬಿಕೊಂಡು ಶುಭ ಹಾರೈಸಿದರು.

ಆದರೆ, ಈ ಸೌಹಾರ್ದತೆಯ ಹಿಂದೆ ಸಿದ್ದರಾಮಯ್ಯ ಆಪ್ತರ ಒಡಲಾಳದ ದುಃಖ ಮತ್ತು ಆಕ್ರೋಶ ಎದ್ದು ಕಾಣುತ್ತಿತ್ತು. ಸಿದ್ದರಾಮಯ್ಯ ಅವರ ಪರಮಾಪ್ತ, ಸಚಿವ ಸಂತೋಷ್ ಲಾಡ್ ಸಭೆಯಲ್ಲಿ ಹಾಗೂ ಆನಂತರದ ಹೊರಬಂದಬಳಿಕ ಮಾಧ್ಯಮಗಳ ಎದುರು ಅಕ್ಷರಶಃ ಕಣ್ಣೀರು ಹಾಕಿದ್ದು ಸದ್ಯದ ಹಾಟ್ ಟಾಪಿಕ್. ಇದು ಕೇವಲ ಒಬ್ಬ ಸಚಿವರ ಕಣ್ಣೀರಲ್ಲ, ಬದಲಿಗೆ ಸಿದ್ದರಾಮಯ್ಯ ಅವರ ಮೇಲಿರುವ ಅಚಲ ಪ್ರೀತಿ ಮತ್ತು ಗೌರವದ ಸಂಕೇತ. ಸದ್ಯ ಸಿದ್ದು ಆಪ್ತ ವಲಯ ಸಂಪೂರ್ಣ ದುಃಖದಲ್ಲಿ ಮುಳುಗಿದ್ದರೆ, ಇತ್ತ ತಳಮಟ್ಟದಲ್ಲಿ ಸಿದ್ದರಾಮಯ್ಯ ಅವರ ಶಕ್ತಿಯಾಗಿರುವ ಅಹಿಂದ (AHINDA) ವರ್ಗದ ನಾಯಕರು ಮತ್ತು ಸಾರ್ವಜನಿಕರು ಹೈಕಮಾಂಡ್ ನಿರ್ಧಾರದ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೂನಿಯರ್ ಕೆಳಗೆ ಸೀನಿಯರ್ಸ್? ಸಂಪುಟದಲ್ಲಿ ಭುಗಿಲೇಳಲಿದೆಯೇ ಅಸಮಾಧಾನ?

ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಈಗ ಹೊಸ ತಲೆನೋವು ಶುರುವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಅತ್ಯಂತ ಹಿರಿಯ ಮತ್ತು ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದವರಿಗೆ ಈಗ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಮುಕ್ತವಾಗಿ, ಗೌರವದಿಂದ ಕೆಲಸ ಮಾಡಿಕೊಂಡಿದ್ದ ಹಿರಿಯ ಸಚಿವರಿಗೆ, ಈಗ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ.

ರಾಜಕೀಯ ವಲಯದ ಅತಿ ದೊಡ್ಡ ಪ್ರಶ್ನೆ: ರಾಜಕೀಯವಾಗಿ ತಮಗಿಂತ ಜೂನಿಯರ್ ಆಗಿರುವ ಡಿ.ಕೆ. ಶಿವಕುಮಾರ್ ಅವರ ಕೆಳಗೆ ಕೆಲಸ ಮಾಡಲು ಕಾಂಗ್ರೆಸ್‌ನ ಹಿರಿಯ ಧುರೀಣರು ಒಪ್ಪುತ್ತಾರಾ?

ಮೂಲಗಳ ಪ್ರಕಾರ, ಜೂನಿಯರ್ ಕೆಳಗೆ ಸೀನಿಯರ್ಸ್ ಕೆಲಸ ಮಾಡಲು ತೀವ್ರ ಹಿಂದೇಟು ಹಾಕುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ, ಗೌರವಯುತವಾಗಿ ಸಂಪುಟದಿಂದ ದೂರ ಉಳಿಯಲು ಹಲವು ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದು ಮುಂಬರುವ ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಎದುರಾಗಲಿರುವ ದೊಡ್ಡ ಸವಾಲು.

ಇದನ್ನೂ ಓದಿ: Siddaramaiah: ಸಿಎಂ ರಾಜೀನಾಮೆ ಫಿಕ್ಸ್? ಮಾಧ್ಯಮಗಳ ಸುಳ್ಳಿನ ಸುನಾಮಿ ನಡುವೆ ಸಿದ್ದು ನಿಗೂಢ ನಡೆ, ಹೈಕಮಾಂಡ್‌ಗೆ ಮುಗಿಯದ ಟೆನ್ಷನ್!

ಪಕ್ಷದ ಋಣ ತೀರಿಸಿದ ಸಿದ್ದು; ಆದರೆ ಮುಂದಿನ ಹಾದಿ ಎಲ್ಲಿದೆ?

“ಕಾಂಗ್ರೆಸ್ ಪಕ್ಷ ನನಗೆ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದೆ, ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿದೆ. ಹೀಗಾಗಿ ನನಗೆ ಪಕ್ಷದ ಋಣವಿದೆ, ನಾನು ಪಕ್ಷದ ತೀರ್ಮಾನದ ವಿರುದ್ಧ ಹೋಗಲ್ಲ” ಎನ್ನುವ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದ್ದಾರೆ. ಜೆಡಿಎಸ್ ಬಿಟ್ಟು ಬಂದ ತಮಗೆ ಕಾಂಗ್ರೆಸ್ ನೀಡಿದ ಸ್ಥಾನಮಾನಕ್ಕೆ ಸಿದ್ದು ಇಷ್ಟರಮಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆದರೆ, ಇಲ್ಲಿ ಕಾಡುವ ಯಕ್ಷಪ್ರಶ್ನೆ ಎಂದರೆ—ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ಏನು?
ಅಧಿಕಾರ ಹಸ್ತಾಂತರದ ನಂತರ ಅವರು ಯಾವ ಹುದ್ದೆಯಲ್ಲಿ ಇರುತ್ತಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.

  • ಹೈಕಮಾಂಡ್ ಅವರನ್ನು ದೆಹಲಿಯ ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ದು, ರಾಜ್ಯಸಭಾ ಸ್ಥಾನ ನೀಡಿ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ನೀಡುತ್ತದೆಯೇ?
  • ಒಂದು ವೇಳೆ ರಾಷ್ಟ್ರ ರಾಜಕಾರಣಕ್ಕೆ ಹೋದರೂ, 70ರ ಹರೆಯ ದಾಟಿರುವ ಸಿದ್ದರಾಮಯ್ಯ ಅಲ್ಲಿ ಸಕ್ರಿಯ (Active) ರಾಜಕಾರಣ ಮಾಡಲು ಉತ್ಸುಕರಾಗಿದ್ದಾರೆಯೇ?
  • ಅಥವಾ ಹೈಕಮಾಂಡ್ ಆಫರ್ ಅನ್ನು ನಿರಾಕರಿಸಿ, ಕರ್ನಾಟಕದ ಸ್ಟೇಟ್ ಪಾಲಿಟಿಕ್ಸ್‌ನಲ್ಲೇ ಉಳಿದು ‘ಕಿಂಗ್ ಮೇಕರ್’ ಆಗಿ ಮುಂದುವರಿಯುತ್ತಾರಾ?

ಯಾವುದಕ್ಕೂ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರ ಮುಂದಿನ ದಾರಿ ಸದ್ಯಕ್ಕೆ ದಟ್ಟ ಮಂಜಿನಿಂದ ಆವೃತವಾಗಿದೆ.

ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ರಾಜಕೀಯ ಶಕ್ತಿ. ಹೈಕಮಾಂಡ್ ತಾತ್ಕಾಲಿಕವಾಗಿ ಅವರ ಕೈಯಿಂದ ಅಧಿಕಾರ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿರಬಹುದು ಮತ್ತು ತಾನು ಶಕ್ತಿಶಾಲಿ ಎಂದು ತೋರಿಸಿಕೊಂಡಿರಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಅಥವಾ ಅವರ ಅಹಿಂದ ವರ್ಗದ ಬೆಂಬಲವಿಲ್ಲದೆ ಕಾಂಗ್ರೆಸ್ ಕರ್ನಾಟಕದಲ್ಲಿ ಸುದೀರ್ಘ ಕಾಲ ನೆಮ್ಮದಿಯಿಂದ ಆಡಳಿತ ನಡೆಸುವುದು ಹಗಲುಗನಸು. ರಾಜೀನಾಮೆ ನೀಡಿದರೂ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಕುಗ್ಗುವುದಿಲ್ಲ. ಇಂದು ಕಣ್ಣೀರು ಹಾಕುತ್ತಿರುವ ಅವರ ಬೆಂಬಲಿಗರ ಆಕ್ರೋಶ ಮತ್ತು ಸೀನಿಯರ್ ನಾಯಕರ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments