Siddaramaiah: ರಾಜ್ಯ ರಾಜಕಾರಣದ ಹೈಡ್ರಾಮಾ ಈಗ ದಿಲ್ಲಿಯ ಇಂದಿರಾ ಭವನದಿಂದ ಬೆಂಗಳೂರಿನ ಕಾವೇರಿ ನಿವಾಸದವರೆಗೆ ಬಂದು ನಿಂತಿದೆ. ನಿನ್ನೆ ರಾತ್ರಿಯಿಂದ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳನ್ನ ನೋಡುತ್ತಿದ್ದರೆ, ಪ್ರಜಾಪ್ರಭುತ್ವದ ನಾಲ್ಕನೇ ಕಣ್ಣಿಗೆ ಏನಾಗಿದೆ ಎಂಬ ಅನುಮಾನ ಬಾರದೇ ಇರದು. ಸತ್ಯಕ್ಕಿಂತ ಹೆಚ್ಚಾಗಿ ಊಹಾಪೋಹಗಳ, ಮಸಾಲೆ ಹಚ್ಚಿದ ಸುಳ್ಳುಗಳ ಸುನಾಮಿಯೇ ಹರಿದುಬರುತ್ತಿದೆ. ಜನಸಾಮಾನ್ಯರನ್ನು ದಾರಿ ತಪ್ಪಿಸುವ ಇಂತಹ ಮಾಧ್ಯಮ ಹಪಾಹಪಿಯ ನಡುವೆ, ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ನಡೆದ ಆ ‘ರಹಸ್ಯ ಸಭೆ’ಯ ಒಳಗಿನ ಅಸಲಿ ಕಥೆಯನ್ನು ನಾವಿಲ್ಲಿ ಅನಾವರಣ ಮಾಡುತ್ತಿದ್ದೇವೆ.
ಮಾಧ್ಯಮಗಳ ಅತಿರೇಕದ ಸುಳ್ಳುಗಳಿಗೆ ಮೊದಲು ಬ್ರೇಕ್ ಹಾಕಬೇಕಿದೆ. ಒಂದು ಪ್ರತಿಷ್ಠಿತ ವಾಹಿನಿ “ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಫರ್ ಹೈಕಮಾಂಡ್ ಕೊಟ್ಟಿದೆ” ಎಂದು ಬೊಬ್ಬೆ ಹೊಡೆದರೆ, ಮತ್ತೊಂದು ವಾಹಿನಿ “ಇಲ್ಲ, ಸಿದ್ದರಾಮಯ್ಯ ಅವರೇ ಮಗನಿಗಾಗಿ ಈ ಬೇಡಿಕೆ ಇಟ್ಟಿದ್ದಾರೆ” ಎಂದು ಸುಳ್ಳಿನ ಕಂತೆ ಬಿಚ್ಚಿಟ್ಟಿದೆ. ಇದು ಅಪ್ಪಟ ಸುಳ್ಳು ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ಘನತೆಗೆ ಮಸಿ ಬಳಿಯುವ ಪ್ರಯತ್ನ. ಅಷ್ಟೇ ಅಲ್ಲ, “ಸಿದ್ದರಾಮಯ್ಯ ಈಗಾಗಲೇ ರಾಜೀನಾಮೆ ನೀಡಲು ಒಪ್ಪಿ ಬಂದಿದ್ದಾರೆ” ಎಂಬ ಸುದ್ದಿಯೂ ಹರಿದಾಡುತ್ತಿದೆ. ರಾಜಕೀಯದಲ್ಲಿ ಐದು ದಶಕಗಳ ಕಾಲ ಪಳಗಿದ, ತಳಸಮುದಾಯಗಳ ನಾಯಕತ್ವ ವಹಿಸಿದ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಶರಣಾಗುವ ವ್ಯಕ್ತಿಯೇ? ಖಂಡಿತ ಇಲ್ಲ. ಹಾಗಾದರೆ ಆ ಸಭೆಯಲ್ಲಿ ನಡೆದದ್ದೇನು?
ರಾಷ್ಟ್ರ ರಾಜಕಾರಣದ ದಾಳ ಉರುಳಿಸಿದ ಹೈಕಮಾಂಡ್!
2023ರ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಕುರಿತು ಒಂದು ಆಂತರಿಕ ಒಪ್ಪಂದ ನಡೆದಿತ್ತು ಎನ್ನುವುದು ಬಹಿರಂಗ ಸತ್ಯ. “ಮೊದಲಾರ್ಧ ನೀವು (Siddaramaiah), ಮುಂದಿನ ಅಧಿಕಾರ ಡಿ.ಕೆ. ಶಿವಕುಮಾರ್ ಅವರಿಗೆ” ಎಂಬ ಸೂತ್ರದ ಅನ್ವಯ ಹೈಕಮಾಂಡ್ ಈಗ ಸಿದ್ದರಾಮಯ್ಯ ಅವರ ಮುಂದೆ ಹೊಸ ದಾಳ ಉರುಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಭಾರೀ ಒತ್ತಡ ಹೇರಿದ್ದಾರೆ.
“ನಿಮ್ಮ ಸಾರಥ್ಯದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಜನಪರ ಕೆಲಸಗಳು, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ನಿಮ್ಮಂತಹ ಹಿರಿಯ ‘ಅಹಿಂದ’ ನಾಯಕರ ಅವಶ್ಯಕತೆ ಈಗ ದೇಶದ ರಾಜಕಾರಣಕ್ಕೆ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ನಿಮ್ಮ ಉಪಸ್ಥಿತಿ ಕಾಂಗ್ರೆಸ್‌ಗೆ ಶಕ್ತಿ ತುಂಬಬಲ್ಲದು. ಹಾಗಾಗಿ ನೀವು ರಾಜ್ಯದ ಅಧಿಕಾರ ಬಿಟ್ಟು ದಿಲ್ಲಿಗೆ ಬನ್ನಿ, ರಾಜ್ಯಸಭೆ ಮೂಲಕ ಮುಂಚೂಣಿಗೆ ಬನ್ನಿ” ಎಂಬುದು ಹೈಕಮಾಂಡ್ ವಾದವಾಗಿತ್ತು. ವಿಶೇಷವೆಂದರೆ, ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಪೂರ್ಣ ಮನಸ್ಸಿನಿಂದ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಆದರೂ ಖರ್ಗೆ ಮತ್ತು ವೇಣುಗೋಪಾಲ್ ಅವರ ತಂತ್ರ ಹಾಗೂ ಒತ್ತಡಕ್ಕೆ ಮಣಿದು ಈ ಸಭೆಯನ್ನು ಆಯೋಜಿಸಲಾಗಿತ್ತು ಎಂಬುದು ನಂಬಲರ್ಹ ಮೂಲಗಳ ಮಾಹಿತಿ.
ಸುತಾರಾಂ ಒಪ್ಪದ ಸಿದ್ದರಾಮಯ್ಯ: “ನನ್ನ ನಿಲುವು ಅಚಲ”
ಹೈಕಮಾಂಡ್ ಇಷ್ಟೆಲ್ಲಾ ಕಸರತ್ತು ನಡೆಸಿದರೂ ಸಿದ್ದರಾಮಯ್ಯ (Siddaramaiah) ಮಾತ್ರ ತಮ್ಮ ಎಂದಿನ ಖಡಕ್ ಶೈಲಿಯಲ್ಲೇ ಉತ್ತರಿಸಿದ್ದಾರೆ. “ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ; ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ನನ್ನ ರಾಜಕಾರಣ ಏನಿದ್ದರೂ ಕರ್ನಾಟಕಕ್ಕೆ ಮಾತ್ರ ಸೀಮಿತ” ಎಂದು ನೇರವಾಗಿಯೇ ನಿರಾಕರಿಸಿದ್ದಾರೆ. ಹೈಕಮಾಂಡ್‌ನ ಯಾವ ದಾಳಕ್ಕೂ ಅವರು ಮಣಿಯಲಿಲ್ಲ. ಕೊನೆಯವರೆಗೂ ರಾಜೀನಾಮೆ ನೀಡುತ್ತೇನೆ ಎಂದಾಗಲಿ, ದಿಲ್ಲಿಗೆ ಬರುತ್ತೇನೆ ಎಂದಾಗಲಿ ಎಲ್ಲೂ ಅಪ್ಪಿತಪ್ಪಿಯೂ ಒಪ್ಪಿಕೊಳ್ಳಲಿಲ್ಲ. ಬದಲಾಗಿ, “ನನಗೆ ಕಾಲಾವಕಾಶ ಬೇಕು, ನನ್ನ ಆಪ್ತರು ಮತ್ತು ಶಾಸಕರೊಂದಿಗೆ ಚರ್ಚಿಸಿ ಎರಡು ದಿನಗಳ ಬಳಿಕ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದು ಸಭೆಯಿಂದ ಹೊರಬಂದಿದ್ದಾರೆ.
ಎರಡು ದಿನಗಳ ಗಡುವು: ಹೈಕಮಾಂಡ್ ಪಾಳಯದಲ್ಲಿ ನಡುಕ!
ಯಾವಾಗ ಸಿದ್ದರಾಮಯ್ಯ ಎರಡು ದಿನಗಳ ಸಮಯ ಕೇಳಿದರೋ, ಅಲ್ಲಿಗೆ ಹೈಕಮಾಂಡ್ ನಾಯಕರಲ್ಲಿ ಧವಧವ ಶುರುವಾಗಿದೆ. ಸಿದ್ದರಾಮಯ್ಯ ಅವರ ಈ ನಡೆ ನಿಗೂಢವಾಗಿದ್ದು, ದಿಲ್ಲಿ ನಾಯಕರ ನಿದ್ದೆಗೆಡಿಸಿದೆ. ಹಳೆಯ ‘ಹಠವಾದಿ’ ಸಿದ್ದರಾಮಯ್ಯ ಈಗ ಯಾವ ತಂತ್ರ ಹೂಡಬಹುದು? ಶಾಸಕರ ಬೆಂಬಲದ ಪತ್ರ ಪ್ರದರ್ಶಿಸುತ್ತಾರಾ? ಅಥವಾ ತಮ್ಮ ಶಕ್ತಿ ಪ್ರದರ್ಶನದ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆಯುತ್ತಾರಾ? ಎನ್ನುವ ಆತಂಕ ಎದುರಾಗಿದೆ.
ಆದರೆ, ಸಿಎಂ ಆಪ್ತ ಮೂಲಗಳು ನೀಡುವ ಮಾಹಿತಿ ಬೇರೆಯದೇ ಇದೆ. ಸಿದ್ದರಾಮಯ್ಯ ಯಾವುದೇ ಬಂಡಾಯದ ಮನಸ್ಥಿತಿಯಲ್ಲಿಲ್ಲ. ತಮಗೆ ರಾಜಕೀಯವಾಗಿ ಸದಾ ಬೆನ್ನೆಲುಬಾಗಿ ನಿಂತಿರುವ ಆಪ್ತ ಸಚಿವರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಾತ್ರ ಅವರು ಈ ಸಮಯ ಕೇಳಿದ್ದಾರೆ ಅಷ್ಟೇ.
ಸಿದ್ದರಾಮಯ್ಯ ‘ಬಂಡಾಯ’ ಏಳುತ್ತಾರಾ? ಆ ಕಾಲ ಕಳೆಯಿತು!
2013ರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಇಂತಹ ಪರಿಸ್ಥಿತಿ ಬಂದಿದ್ದರೆ ಅವರು ಖಂಡಿತಾ ‘ರೆಬೆಲ್’ ಅವತಾರ ತಾಳುತ್ತಿದ್ದರು. ಅಹಿಂದ ಶಕ್ತಿಯನ್ನು ಕಟ್ಟಿ ಹೈಕಮಾಂಡ್ ಬೆವರಿಳಿಸುತ್ತಿದ್ದರು. ಆದರೆ ಈಗಿನ ಸಿದ್ದರಾಮಯ್ಯ ಸಂಪೂರ್ಣವಾಗಿ ಮಾಗಿದ್ದಾರೆ. ರಾಜಕೀಯದ ಏಳುಬೀಳುಗಳನ್ನು ಕಂಡು ಮಾಗಿದ ನಾಯಕರಾಗಿರುವ ಅವರು, ಪಕ್ಷದ ಚೌಕಟ್ಟನ್ನು ಮೀರಿ ರೆಬೆಲ್ ಆಗಿ ತೊಂದರೆ ತಂದುಕೊಳ್ಳುವ ಸಾಹಸಕ್ಕೆ ಕೈಹಾಕುವುದಿಲ್ಲ. ಅವರೀಗ ಮುತ್ಸದ್ದಿ. ತಾಳ್ಮೆಯಿಂದಲೇ ಹೈಕಮಾಂಡ್‌ನ ತಂತ್ರಕ್ಕೆ ಪ್ರತಿತಂತ್ರ ಹೂಡುವ ರಾಜತಾಂತ್ರಿಕ ನಡೆ ಅವರದ್ದಾಗಿದೆ.
ಮುಂದಿನ ಸಿಎಂ ಯಾರು? ಪರಮೇಶ್ವರ್ ಹೆಸರೇ ಮುಂಚೂಣಿ!
ಒಂದು ವೇಳೆ ಅನಿವಾರ್ಯವಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕೆ ಹೈಕಮಾಂಡ್ ಯಾವುದೇ ಮುಕ್ತ ಅವಕಾಶ ನೀಡಿಲ್ಲ. ಸಾಮಾನ್ಯವಾಗಿ ಸಿಎಂ ಹುದ್ದೆ ಬಿಡುವಾಗ ಉತ್ತರಾಧಿಕಾರಿಯ ಹೆಸರನ್ನು ಸೂಚಿಸುವ ಸಂಪ್ರದಾಯವಿದೆ. ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಂತಹ ಅವಕಾಶ ನೀಡಿದ್ದರೆ, ಅವರು ಖಂಡಿತವಾಗಿಯೂ ಗೃಹ ಸಚಿವ, ದಲಿತ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನೇ ಮುಂಚೂಣಿಗೆ ತರುತ್ತಿದ್ದರು. ಆದರೆ, ಸದ್ಯಕ್ಕೆ ಹೈಕಮಾಂಡ್ ನೇರವಾಗಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವುದರಿಂದ ಸಿದ್ದರಾಮಯ್ಯ ಅವರಿಗೆ ಆ ಚಾಯ್ಸ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಇದನ್ನೂ ಓದಿ: Congress: ದಿಲ್ಲಿ ಅಂಗಳದಲ್ಲಿ ಸಿದ್ದರಾಮಯ್ಯ-ಡಿಕೆಶಿ: ಕುರ್ಚಿ ಬದಲಾವಣೆಯೋ ಅಥವಾ ಸಂಪುಟ ಪುನರಚನೆಯೋ?
ಡಿಕೆಶಿ ಸಿಎಂ ಆದ್ರೆ ಸಿದ್ದರಾಮಯ್ಯ ಆಪ್ತರಿಗೆ ಸಂಕಷ್ಟವೇ?
ರಾಜಕೀಯ ವಲಯದಲ್ಲಿ ಮತ್ತೊಂದು ದೊಡ್ಡ ಚರ್ಚೆ ಎಂದರೆ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಪಾಳಯದ ಸಚಿವರಿಗೆ ಮತ್ತು ಆಪ್ತರಿಗೆ ಸಂಕಷ್ಟ ಎದುರಾಗುತ್ತದೆಯೇ ಎನ್ನುವುದು. ಆದರೆ, ಸಿದ್ದರಾಮಯ್ಯ ಅಷ್ಟು ಸುಲಭವಾಗಿ ತಮ್ಮವರನ್ನು ಕೈಬಿಡುವ ನಾಯಕನಲ್ಲ. ಅಧಿಕಾರ ಹಸ್ತಾಂತರದ ಸಂದರ್ಭದಲ್ಲೂ ತಮ್ಮ ಆಪ್ತರ ರಾಜಕೀಯ ಭವಿಷ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು, ಡಿಕೆಶಿ ಪಾಳಯದ ಆಟಾಟೋಪಗಳಿಗೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿಕೊಂಡೇ ಇದ್ದಾರೆ.
ರಾಜೀನಾಮೆ ನೀಡಿದ ಬಳಿಕವೂ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವಿಶೇಷ ಸ್ಥಾನಮಾನ ನೀಡಲೇಬೇಕು. ರಾಷ್ಟ್ರ ರಾಜಕಾರಣಕ್ಕೆ ಹೋದರೂ ಅಥವಾ ರಾಜ್ಯದಲ್ಲೇ ಉಳಿದರೂ, ಕರ್ನಾಟಕ ಸರ್ಕಾರದ ಮೇಲಿನ ತಮ್ಮ ಹಿಡಿತ ಮತ್ತು ಕಣ್ಣನ್ನು ಸಿದ್ದರಾಮಯ್ಯ ಎಂದಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಿಲಿಯನ್ ಡಾಲರ್ ಪ್ರಶ್ನೆ!
ಕೊನೆಯದಾಗಿ ಹೇಳಬೇಕೆಂದರೆ, ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎನ್ನುವುದೇ ಸದ್ಯದ ‘ಮಿಲಿಯನ್ ಡಾಲರ್’ ಪ್ರಶ್ನೆ. ತಳಸಮುದಾಯಗಳ ಧ್ವನಿಯಾಗಿ, ಕರ್ನಾಟಕದ ರಾಜಕಾರಣವನ್ನು ದಶಕಗಳ ಕಾಲ ಆಳಿದ ಈ ಧೀಮಂತ ನಾಯಕ ಹೈಕಮಾಂಡ್ ಒತ್ತಡಕ್ಕೆ ಮಣಿದು ದಿಲ್ಲಿ ವಿಮಾನ ಏರುತ್ತಾರಾ? ಅಥವಾ ತಮ್ಮದೇ ಆದ ಶೈಲಿಯಲ್ಲಿ ರಾಜ್ಯದಲ್ಲೇ ಉಳಿದು ಹೊಸ ರಾಜಕೀಯ ಇತಿಹಾಸ ಬರೆಯುತ್ತಾರಾ? ಕಾದು ನೋಡಬೇಕಿದೆ. ಆದರೆ ಮಾಧ್ಯಮಗಳು ಬಿತ್ತರಿಸುವ ಸುಳ್ಳು ಸುದ್ದಿಗಳಿಗಿಂತ, ಸಿದ್ದರಾಮಯ್ಯ ಅವರ ರಾಜತಾಂತ್ರಿಕ ನಡೆ ಅತ್ಯಂತ ಗಂಭೀರವಾಗಿದೆ ಮತ್ತು ತೂಕದ ಹಾದಿಯಲ್ಲಿದೆ ಎನ್ನುವುದಂತೂ ಸತ್ಯ.

