ಬಾಗಲಕೋಟೆ: ರಾಜಕೀಯ ಎಂಬುದು ಎರಡೂ ಅಂಚಿನ ಕತ್ತಿಯಿದ್ದಂತೆ. ಇಲ್ಲಿ ಅನುಭವಕ್ಕಿಂತ ಹೆಚ್ಚಾಗಿ ಜನರ ನಾಡಿಮಿಡಿತ ಅರಿಯುವುದು ಮುಖ್ಯವಾಗುತ್ತದೆ. ಬಾಗಲಕೋಟೆಯ ಹಿರಿಯ ರಾಜಕಾರಣಿ, ಬಿವಿವಿ ಸಂಘದ ಸಾರಥಿ ವೀರಣ್ಣ ಚರಂತಿಮಠ (Veeranna Charantimath) ಅವರಿಗೆ ಈ ಉಪಚುನಾವಣೆಯ ಫಲಿತಾಂಶ ದೊಡ್ಡ ಪಾಠ ಕಲಿಸಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರಕೋಟೆ ನಿರ್ಮಿಸಿಕೊಂಡಿದ್ದ ಚರಂತಿಮಠರು, ಈ ಬಾರಿ ಒಬ್ಬ ಹೊಸ ಅಭ್ಯರ್ಥಿಯ ಎದುರು ಮಕಾಡೆ ಮಲಗಿದ್ದು ಆಕಸ್ಮಿಕವಲ್ಲ; ಅದು ಅವರೇ ಮಾಡಿಕೊಂಡ ಸ್ವಯಂಕೃತ ಅಪರಾಧಗಳ ಸರಮಾಲೆ.
ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತೇ?
ವೀರಣ್ಣ ಚರಂತಿಮಠ (Veeranna Charantimath) ಅಂದರೆ ಬಾಗಲಕೋಟೆಯಲ್ಲಿ ಅದೊಂದು ದೊಡ್ಡ ಹೆಸರು. ಶತಮಾನೋತ್ಸವ ಕಂಡ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾಗಿ, ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳ ಜಾಲ ಹೊಂದಿರುವ ಇವರಿಗೆ ವೈಯಕ್ತಿಕ ವರ್ಚಸ್ಸಿನ ಕೊರತೆಯಿರಲಿಲ್ಲ. ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸಗಳು ಅವರ ಕೈ ಹಿಡಿಯಬೇಕಿತ್ತು. ಆದರೆ, ಅಧಿಕಾರದ ಅಮಲು ಮತ್ತು ಸದಾ ಕಠಿಣವಾಗಿ ವರ್ತಿಸುವ ಅವರ ಗುಣ ಕಾರ್ಯಕರ್ತರನ್ನು ಅವರಿಂದ ದೂರ ಮಾಡಿತು. ಹಿರಿಯ ನಾಯಕನೊಬ್ಬ ಜನರೊಂದಿಗೆ ಬೆರೆಯುವಾಗ ಇರಬೇಕಾದ ವಿನಯವನ್ನು ಮರೆತು, ಅಹಂಕಾರದ ಹಾದಿ ತುಳಿದಿದ್ದೇ ಈ ಸೋಲಿಗೆ ಮುನ್ನುಡಿ ಬರೆಯಿತು.
ಅಜ್ಜಾರ ಜೋಳಿಗೆಗೆ ಬಿದ್ದ ಕೋಮುವಾದದ ಕಲ್ಲು
ಚರಂತಿಮಠ ಅವರು ಮೂಲತಃ ಕೋಮುವಾದಿ ರಾಜಕಾರಣಿಯಲ್ಲ. ಈ ಹಿಂದೆ ಬಿಜೆಪಿಯಲ್ಲಿದ್ದರೂ ಸಹ ಸಾವಿರಾರು ಮುಸ್ಲಿಂ ಮತಗಳು ‘ಅಜ್ಜಾರ ಜೋಳಿಗೆ’ಗೆ ನಿರಂತರವಾಗಿ ಬೀಳುತ್ತಿದ್ದವು. ಆದರೆ, ಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಹತಾಶರಾದ ಚರಂತಿಮಠರು, ಈ ಬಾರಿ ‘ಹಾರ್ಡ್‌ಕೋರ್ ಹಿಂದುತ್ವ’ದ ಮೊರೆ ಹೋದರು. ಬಾಗಲಕೋಟೆಯ ಸೌಹಾರ್ದತೆಯ ಮಣ್ಣಿನಲ್ಲಿ ಕೋಮುವಾದದ ವಿಷಬೀಜ ಬಿತ್ತಲು ಹೊರಟರು.
ಉಪಚುನಾವಣೆ ಹತ್ತಿರವಿದ್ದಾಗ ನಡೆದ ಕೋಮುಗಲಭೆಯ ಸಂದರ್ಭದಲ್ಲಿ, “ಮುಸ್ಲಿಮರನ್ನು ಒದ್ದು ಒಳಗಾಕಿ” ಎಂಬ ಅತಿರೇಕದ ಹೇಳಿಕೆ ನೀಡುವ ಮೂಲಕ ಇಡೀ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾದರು. ಬಾಗಲಕೋಟೆಯು ಮಂಗಳೂರಿನಂತೆ ಕೋಮು ಸಂಘರ್ಷದ ನೆಲವಲ್ಲ ಎಂಬ ಸತ್ಯವನ್ನು ಅರಿಯುವಲ್ಲಿ ಅವರು ವಿಫಲರಾದರು. ಇದು ಬಸವಾದಿ ಶರಣರ ನಾಡು, ಇಲ್ಲಿ ಕೋಮುವಾದಕ್ಕಿಂತ ಸೌಹಾರ್ದತೆಗೆ ಬೆಲೆ ಹೆಚ್ಚು ಎಂಬ ಸತ್ಯವನ್ನೇ ಚರಂತಿಮಠರು ಮರೆತುಬಿಟ್ಟರು.
ಯತ್ನಾಳ್-ಸಿಂಹ ಎಂಬ ‘ಡ್ಯಾಮೇಜ್’ ಬ್ರಿಗೇಡ್!
ಚುನಾವಣಾ ಪ್ರಚಾರಕ್ಕೆ ಚರಂತಿಮಠರು ಯಾರನ್ನು ಕರೆಸಿದರು ಎಂಬುದು ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ವಪಕ್ಷದವರಿಂದಲೇ ಉಚ್ಛಾಟನೆಗೊಂಡ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅಂತಹ ವಿವಾದಾತ್ಮಕ ನಾಯಕರನ್ನು ಕರೆಸಿದ್ದು ಚರಂತಿಮಠರ ದೊಡ್ಡ ಎಡವಟ್ಟು.
ವೇದಿಕೆಯ ಮೇಲೆಯೇ ಯತ್ನಾಳ್ ಅವರು ಚರಂತಿಮಠರ ಮುಖದ ಮೇಲಿನ ಸಿಡಿಮಿಡಿಯನ್ನು ಗೇಲಿ ಮಾಡಿದರು. “ಸ್ವಲ್ಪ ನಗೋದನ್ನ ಕಲಿ ಮುತ್ಯಾ, ಜನರ ಜೊತೆ ಪ್ರೀತಿಯಿಂದ ಮಾತಾಡು” ಎಂದು ಯತ್ನಾಳ್ ಜವಾರಿ ಶೈಲಿಯಲ್ಲಿ ಹೇಳಿದ ಮಾತುಗಳು ಮತದಾರರ ಮನದಲ್ಲಿದ್ದ ಆಕ್ರೋಶಕ್ಕೆ ಸಾಕ್ಷಿಯಂತಿತ್ತು. ಒಬ್ಬ ಜನಪ್ರತಿನಿಧಿ ಜನರ ಹತ್ತಿರ ಹೋಗಬೇಕೇ ಹೊರತು, ಜನರಿಂದ ದೂರ ನಿಂತು ದರ್ಪ ತೋರಬಾರದು ಎಂಬ ಪಾಠ ಚರಂತಿಮಠರಿಗೆ ವೇದಿಕೆಯಲ್ಲೇ ಸಿಕ್ಕಿತ್ತು.
ಜಾತಿವಾದದ ರೋಗ ಮತ್ತು ಸಿಸಿ ಪಾಟೀಲ್ ನೀಡಿದ ಹೊಡೆತ
ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಆಡಿದ ಮಾತುಗಳು ಚರಂತಿಮಠರ ಸೋಲನ್ನು ಖಚಿತಪಡಿಸಿದವು. ಮುಸ್ಲಿಂ ಸಮುದಾಯವನ್ನು ‘ಗಡ್ಡದವರು’ ಎಂದೂ ಮತ್ತು ಕುರುಬ ಹಾಗೂ ಅಲೆಮಾರಿ ಸಮುದಾಯವನ್ನು ‘ಟೂರ್ ಮಂದಿ’ ಎಂದು ಜಾತಿನಿಂದನೆ ಮಾಡುವ ಮೂಲಕ ಸಿಸಿ ಪಾಟೀಲ್ ದೊಡ್ಡ ಅನಾಹುತ ಮಾಡಿದರು. ಬಾಗಲಕೋಟೆಯ ಅಹಿಂದ ಮತದಾರರು ಈ ಅವಮಾನವನ್ನು ಸಹಿಸಿಕೊಳ್ಳಲಿಲ್ಲ. ಮುರುಗೇಶ್ ನಿರಾಣಿ ಅವರ “ಲಿಂಗಾಯತರೇ ಎಲ್ಲ ಅಧಿಕಾರ ಹಿಡಿಯಬೇಕು” ಎಂಬ ಹೇಳಿಕೆ ಕೂಡ ಇತರ ಸಮುದಾಯದವರನ್ನು ಬಿಜೆಪಿ ವಿರುದ್ಧ ತಿರುಗಿಬೀಳುವಂತೆ ಮಾಡಿತು.
ಸಿದ್ದರಾಮಯ್ಯ ವಿರುದ್ಧದ ಅಸಹ್ಯಕರ ಟೀಕೆ
ಮತ್ತೊಂದೆಡೆ ಪ್ರತಾಪ್ ಸಿಂಹ ಅವರು ಅಹಿಂದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಬಳಸಿದ ಅಸಹ್ಯಕರ ಪದಗಳು (“ತುದಿ ಕಟ್ ಮಾಡಿಸಿಕೊಳ್ಳಲಿ”) ಕ್ಷೇತ್ರದ ಮತದಾರರಲ್ಲಿ ಅಸಹ್ಯ ಹುಟ್ಟಿಸಿತು. ಚರಂತಿಮಠರು ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನೇ ನಂಬಿ ಚುನಾವಣೆ ಎದುರಿಸಲು ಹೋಗಿ ಮುಗ್ಗರಿಸಿದ್ದಾರೆ.
ಇದು ಅಹಂಕಾರಕ್ಕೆ ಸಿಕ್ಕ ತಕ್ಕ ಶಾಸ್ತಿ
ತಮ್ಮ ವರ್ಷಸ್ಸು ಮತ್ತೆ ಮೋದಿ ಹೆಸರಿನಲ್ಲಿ ಗೆಲ್ಲಬಹುದಾದುದ್ದನ್ನು ಚರಂತಿಮಠರು, ತಮ್ಮ ಸ್ವಯಂಕೃತ ಅಪರಾಧಗಳಿಂದ ಕಳೆದುಕೊಂಡಿದ್ದಾರೆ. ಹೊಸ ಅಭ್ಯರ್ಥಿಯೆದುರು ಅನುಭವದ ಬಲವಿದ್ದೂ ಸೋಲೊಪ್ಪಿಕೊಂಡಿದ್ದು ಅವರ ರಾಜಕೀಯ ಜೀವನದ ದೊಡ್ಡ ಹಿನ್ನಡೆ. ಅತಿಯಾದ ಹಿಂದುತ್ವದ ಜಂಡಾ ಹಿಡಿದು, ಸಹೋದರರಂತೆ ಬದುಕುತ್ತಿದ್ದ ಜನರ ಮಧ್ಯೆ ವಿಷ ಬಿತ್ತಲು ಹೊರಟ ಚರಂತಿಮಠರಿಗೆ ಬಾಗಲಕೋಟೆಯ ಜನತೆ “ಇಲ್ಲಿ ನಿನ್ನ ಬೇಳೆ ಬೇಯಲ್ಲ” ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಒಟ್ಟಾರೆಯಾಗಿ, ಚರಂತಿಮಠರ ಸೋಲು ಕೇವಲ ಒಬ್ಬ ವ್ಯಕ್ತಿಯ ಸೋಲಲ್ಲ; ಅದು ರಾಜಕೀಯ ದರ್ಪ, ಕೋಮುವಾದ ಮತ್ತು ಜಾತಿನಿಂದನೆಯ ವಿರುದ್ಧ ಸಾಮಾನ್ಯ ಜನತೆ ನೀಡಿದ ಪ್ರಬಲ ತೀರ್ಪು. ಅಧಿಕಾರ ಸಿಗುವಾಗ ಜನರ ಕಾಲು ಹಿಡಿಯುವ ನಾಯಕರು, ಅಧಿಕಾರ ಬಂದ ಮೇಲೆ ಜನರನ್ನೇ ಕಾಲಕಸವಾಗಿ ಕಂಡರೆ ಏನಾಗುತ್ತದೆ ಎಂಬುದಕ್ಕೆ ವೀರಣ್ಣ ಚರಂತಿಮಠ ಒಂದು ಜ್ವಲಂತ ಉದಾಹರಣೆ.

