Saturday, September 12, 2026
Home ವಿಶ್ಲೇಷಣೆ Prajwal Revanna: ಜೈಲಲ್ಲೂ ಮೆರೆಯುತ್ತಿದೆ ಕಾಮಪಿಶಾಚಿಯ ವಿಕೃತಿ! ರೇಪಿಸ್ಟ್‌ಗೆ ‘ಪರಪ್ಪನ ಅಗ್ರಹಾರ’ ಉಚಿತ ರೆಸಾರ್ಟಾ?

Prajwal Revanna: ಜೈಲಲ್ಲೂ ಮೆರೆಯುತ್ತಿದೆ ಕಾಮಪಿಶಾಚಿಯ ವಿಕೃತಿ! ರೇಪಿಸ್ಟ್‌ಗೆ ‘ಪರಪ್ಪನ ಅಗ್ರಹಾರ’ ಉಚಿತ ರೆಸಾರ್ಟಾ?

Prajwal Revanna: ಜೈಲಲ್ಲೂ ಮೆರೆಯುತ್ತಿದೆ ಕಾಮಪಿಶಾಚಿಯ ವಿಕೃತಿ! ರೇಪಿಸ್ಟ್‌ಗೆ 'ಪರಪ್ಪನ ಅಗ್ರಹಾರ' ಉಚಿತ ರೆಸಾರ್ಟಾ?

Prajwal Revanna: ಕನ್ನಡದಲ್ಲೊಂದು ಪ್ರಸಿದ್ಧ ಗಾದೆ ಮಾತಿದೆ— “ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ ಅದು ಎಂದಿಗೂ ನೆಟ್ಟಗಾಗುವುದಿಲ್ಲ” ಎಂದು. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ನೂರಾರು ಮಹಿಳೆಯರ ಜೀವನ ಹಾಳುಗೆಡವಿದ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಗರಣದಲ್ಲಿ ಭಾಗಿಯಾಗಿ, ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪ್ರಸ್ತುತ ನಡೆಯನ್ನು ನೋಡಿದರೆ ಈ ಗಾದೆ ಮಾತು ಶೇ.100 ರಷ್ಟು ಅಕ್ಷರಶಃ ಸತ್ಯವೆನಿಸುತ್ತದೆ.

ಜೈಲು ಎನ್ನುವುದು ಅಪರಾಧಿಗೆ ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು, ಮನಃಪರಿವರ್ತನೆಗೊಂಡು ಸನ್ಮಾರ್ಗಕ್ಕೆ ಬರಲು ಇರುವ ಒಂದು ಸುಧಾರಣಾ ಗೃಹ. ಆದರೆ, ಅಪಾರ ಶ್ರೀಮಂತಿಕೆ, ರಾಜಕೀಯ ಹಿನ್ನೆಲೆ ಹಾಗೂ ಹುಟ್ಟಿನಿಂದಲೇ ರಕ್ತದಲ್ಲಿ ಹರಿದುಬಂದಿರುವ ಅಧಿಕಾರದ ದರ್ಪದ ಬಲದಿಂದ ಪ್ರಜ್ವಲ್ ರೇವಣ್ಣ ಜೈಲನ್ನೂ ತನ್ನ ಪಾಲಿನ ಐಷಾರಾಮಿ “ಸರ್ಕಾರಿ ಲಾಡ್ಜ್”ನ್ನಾಗಿ ಮಾಡಿಕೊಂಡಂತೆ ಕಾಣಿಸುತ್ತಿದೆ. ಕಾನೂನು, ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಅಣುಕಿಸುವ ರೀತಿಯಲ್ಲಿ ನಡೆಯುತ್ತಿರುವ ಈತನ ದರ್ಬಾರ್ ಇಡೀ ರಾಜ್ಯದ ಗೃಹ ಇಲಾಖೆ ಮತ್ತು ಜೈಲು ಆಡಳಿತದ ಮುಖಕ್ಕೆ ಕಪ್ಪು ಮಸಿ ಬಳೆದಂತಿದೆ..

ಜೈಲಿನಲ್ಲಿಯೂ ತೀರದ ವಿಕೃತಿ: ಇದು ಸುಟ್ಟರೂ ಹೋಗದ ಹುಟ್ಟುಗುಣ!

ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಕಠಿಣ ಶಿಕ್ಷೆ ಅನುಭವಿಸಬೇಕಾದ ಕ್ರಿಮಿನಲ್ (Prajwal Revanna) ಕೈಯಲ್ಲಿ ಸ್ಮಾರ್ಟ್‌ಫೋನ್, ಪೆನ್ ಡ್ರೈವ್ ಮತ್ತು ಚಾರ್ಜರ್‌ಗಳು ಸಿಕ್ಕಿಬಿದ್ದಿರುವುದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದಾಗ ಪ್ರಜ್ವಲ್ ರೇವಣ್ಣನ ಬಳಿ 5G ಸ್ಮಾರ್ಟ್‌ಫೋನ್, ಪೆನ್ ಡ್ರೈವ್ ಪತ್ತೆಯಾಗಿವೆ. ಇಷ್ಟಕ್ಕೇ ಮುಗಿಯಲಿಲ್ಲ ಈತನ ಖಯಾಲಿ; ಆ ಮೊಬೈಲ್‌ನಲ್ಲಿ ಬರೋಬ್ಬರಿ 80 ರಿಂದ 90 ಅಶ್ಲೀಲ ವಿಡಿಯೋಗಳನ್ನು (ಪೋರ್ನ್ ವಿಡಿಯೋ) ಡೌನ್‌ಲೋಡ್ ಮಾಡಿ ಇಟ್ಟುಕೊಂಡು ನಿರಂತರವಾಗಿ ವೀಕ್ಷಿಸುತ್ತಿದ್ದ ಅಂಶ ಬಯಲಾಗಿದೆ.

ಯಾವ ಅಶ್ಲೀಲ ವಿಡಿಯೋ ಮತ್ತು ವಿಕೃತ ಕಾಮಕಾಂಡದ ಸಾಕ್ಷ್ಯಗಳಿದ್ದ ಪೆನ್ ಡ್ರೈವ್ ಹಗರಣದಿಂದ ಈತ ಇಡೀ ಜಗತ್ತಿನ ಎದುರು ಬೆತ್ತಲಾಗಿ ಜೈಲು ಪಾಲಾದನೋ, ಅದೇ ಜೈಲಿನೊಳಗೆ ಕುಳಿತು ಮತ್ತೆ ಅದೇ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ವಿಕೃತಿ ಮೆರೆಯುತ್ತಿದ್ದಾನೆ ಎಂದರೆ ಈತನ ಮನಸ್ಥಿತಿ ಎಷ್ಟರಮಟ್ಟಿಗೆ ಕೆಟ್ಟುಹೋಗಿದೆ ಎಂಬುದನ್ನು ಊಹಿಸಬಹುದು. ಇಷ್ಟೇ ಅಲ್ಲದೆ, ಜೈಲಿಗೆ ಬರುವ ದಿನಪತ್ರಿಕೆಗಳಲ್ಲಿ ಅರ್ಧಬರ್ಧ ಉಡುಪು ಧರಿಸಿದ ಹೆಣ್ಣುಮಕ್ಕಳ ಜಾಹೀರಾತು ಫೋಟೋಗಳು ಬಂದರೆ, ಅವುಗಳನ್ನು ಕತ್ತರಿಸಿ ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ ಎಂಬ ಆಘಾತಕಾರಿ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದು ಕೇವಲ ಅಪರಾಧವಲ್ಲ, ಚಿಕಿತ್ಸೆಗೆ ಸಿಗದ ತೀವ್ರತರದ ಮನೋವಿಕೃತಿ. ಶಿಕ್ಷೆಯ ಭಯವಾಗಲಿ, ಸಮಾಜಕ್ಕೆ ಮುಖ ತೋರಿಸಲಾಗದ ನಾಚಿಕೆಯಾಗಲಿ ಈತನಲ್ಲಿ ಎಳ್ಳಷ್ಟೂ ಉಳಿದಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

ಇದನ್ನೂ ಓದಿ: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಶಿ ವಿರುದ್ಧ FIR! ಲೈಂಗಿಕ ಕಿರುಕುಳ, ಜೀವ ಬೆದರಿಕೆಯ ಗಂಭೀರ ಆರೋಪ!

ಜೈಲು ನಿಯಮಗಳ ಧೂಳೀಪಟ: ಇದು ಉಲ್ಲಂಘನೆಯಲ್ಲ, ‘ಸಂಘಟಿತ ಭ್ರಷ್ಟಾಚಾರ’!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂತಹ ಕರ್ಮಕಾಂಡಗಳು ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಕಲಬುರ್ಗಿ, ಶಿವಮೊಗ್ಗ ಅಥವಾ ಬೆಂಗಳೂರಿನ ಜೈಲುಗಳಿರಲಿ, ‘ಜೈಲು ಅಕ್ರಮ’ ಎನ್ನುವುದು ವಾರಕ್ಕೆ ಅಥವಾ ತಿಂಗಳಿಗೊಮ್ಮೆ ಮಾಧ್ಯಮಗಳಲ್ಲಿ ಬಂದು ಹೋಗುವ ನಿತ್ಯ ದಾಸೋಹವಾಗಿದೆ. ಆದರೆ, ಪ್ರಜ್ವಲ್ ರೇವಣ್ಣನಂತಹ (Prajwal Revanna) ಕಾಮಪಿಶಾಚಿಗೆ ಜೀವಾವಧಿ ಶಿಕ್ಷೆ ನೀಡಿದ್ದರೂ ಈತನಿಗೆ ಜೈಲಿನಲ್ಲಿ ಪ್ರತ್ಯೇಕ ಖಾಸಗಿ ಸೌಲಭ್ಯ ಸಿಗುತ್ತಿರುವುದು, ಖಾದಿ ಸಮವಸ್ತ್ರ ಧರಿಸದೇ ಸಿವಿಲ್ ಬಟ್ಟೆಗಳನ್ನು ಧರಿಸಿ ರಾಜಾರೋಷವಾಗಿ ಮೆರೆಯುತ್ತಿರುವುದು ಕೇವಲ ‘ಸಣ್ಣ ನಿಯಮ ಉಲ್ಲಂಘನೆ’ ಅಲ್ಲ. ಇದು ಜೈಲು ಆಡಳಿತ ಮತ್ತು ಭ್ರಷ್ಟ ಅಧಿಕಾರಿಗಳು ಸೇರಿ ನಡೆಸುತ್ತಿರುವ ಅಪ್ಪಟ “ಸಂಘಟಿತ ಭ್ರಷ್ಟಾಚಾರ” (Organized Corruption).

ಬೆಂಗಳೂರು ಎಂದರೆ ಜನ ಸಾಮಾನ್ಯರು ಹೈಫೈ ಜೀವನ, ಮಾಲ್‌ಗಳನ್ನು ನೋಡಲು ಬರುತ್ತಾರೆ. ಆದರೆ, ದೇಶದ ನಾನಾ ಭಾಗಗಳಿಂದ ಬರುವ ಹೈಪ್ರೊಫೈಲ್ ಅಪರಾಧಿಗಳು ಮತ್ತು ರೇಪಿಸ್ಟ್‌ಗಳು “ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋದರೆ ದುಡ್ಡು ಚೆಲ್ಲಿ ಆರಾಮಾಗಿ ಮೆರೆಯಬಹುದು, ಸಕಲ ಸೌಲಭ್ಯಗಳನ್ನೂ ಪಡೆಯಬಹುದು” ಎಂಬ ಭಾವನೆಗೆ ಬಂದಿದ್ದಾರೆ.

  • ಬಡ ಕೈದಿಗೆ ಒಂದು ಸಿಗರೇಟ್ ಸಿಗುವುದು ಕಷ್ಟವಿರುವಾಗ, ಪ್ರಜ್ವಲ್ ರೇವಣ್ಣನ ಬ್ಯಾರಕ್‌ಗೆ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್, ಹೊರರಾಜ್ಯದ (ಆಂಧ್ರಪ್ರದೇಶದ) ಸಿಮ್ ಕಾರ್ಡ್ ಹಾಗೂ ಪೆನ್ ಡ್ರೈವ್ ತಲುಪಿದ್ದು ಹೇಗೆ?
  • ಜೈಲಿನಲ್ಲಿ ಸಿಗ್ನಲ್ ಜಾಮ್ಮರ್‌ಗಳಿದ್ದರೂ ಬೇರೆ ರಾಜ್ಯದ ಸಿಮ್ ಕಾರ್ಡ್‌ಗಳು ಸುಲಭವಾಗಿ ಕೆಲಸ ಮಾಡಲು ಯಾವ ಜೈಲಾಧಿಕಾರಿಗಳು ಲಂಚ ತಿಂದು ಸಹಾಯ ಮಾಡಿದ್ದಾರೆ?

ಖಾಕಿ ಸಮವಸ್ತ್ರ ತೊಟ್ಟ ಕೆಲವು ಅಧಿಕಾರಿಗಳೇ ದುಡ್ಡಿನಾಸೆಗೆ ಬಿದ್ದು ಇಂತಹ ಹೈಪ್ರೊಫೈಲ್ ರೇಪಿಸ್ಟ್‌ಗಳ ಮುಂದೆ ಬೆನ್ನೆಲುಬಿಲ್ಲದೆ ನಿಂತಿರುವುದು ನಮ್ಮ ಕಾನೂನು ವ್ಯವಸ್ಥೆಗೆ ಬಡಿದ ಶಾಪ.

ಸಾಕ್ಷಿಗಳಿಗೆ ಬೆದರಿಕೆ ಹಾಗೂ ಗೃಹ ಇಲಾಖೆಯ ಹೆಜ್ಜೆಗಳು

ಪ್ರಜ್ವಲ್ ರೇವಣ್ಣನಂತಹ ಕ್ರೂರ ಹಿನ್ನೆಲೆಯುಳ್ಳ ಅಪರಾಧಿಯ ಕೈಗೆ ಜೈಲಿನೊಳಗೆ ಮೊಬೈಲ್ ಫೋನ್ ಸಿಕ್ಕಿರುವುದು ಕೇವಲ ವಿಡಿಯೋ ನೋಡಲು ಮಾತ್ರವಲ್ಲ; ಅದು ಹೊರಗಿರುವ ಸಾಕ್ಷಿದಾರರಿಗೆ ಮತ್ತು ಸಂತ್ರಸ್ತರಿಗೆ ಎಸಗಿದ ಭೀಕರ ಭದ್ರತಾ ಲೋಪ. ತನ್ನ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಈತ ಉನ್ನತ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುತ್ತಿದ್ದಾನೆ. ಇಂತಹ ನಿರ್ಣಾಯಕ ಸಮಯದಲ್ಲಿ ಜೈಲಿನಿಂದಲೇ ಹೊರಗಿನ ಪ್ರಭಾವಿ ವ್ಯಕ್ತಿಗಳು, ನ್ಯಾಯವಾದಿಗಳು ಅಥವಾ ಸಂತ್ರಸ್ತೆಯರಿಗೆ ಕರೆ ಮಾಡಿ ಸಾಕ್ಷಿ ನಾಶಪಡಿಸಲು ಅಥವಾ ಬೆದರಿಕೆ ಹಾಕಲು ಈ ಮೊಬೈಲ್ ಬಳಸಿಲ್ಲ ಎಂದು ಏನು ಗ್ಯಾರಂಟಿ?

ಹೊರಗಡೆ ಆತನ ದೌರ್ಜನ್ಯಕ್ಕೆ ಒಳಗಾದ ಬಡ ಮಹಿಳೆಯರು ಮತ್ತು ಸಾಕ್ಷಿಗಳು ಪ್ರತಿದಿನ ಜೀವಭಯದಿಂದ ಕಳೆಯುತ್ತಿರುವಾಗ, ಅಪರಾಧಿ ಜೈಲಿನೊಳಗೆ ಕುಳಿತು ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ, ಒಟಿಟಿ ಮತ್ತು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಾ “ಸರ್ಕಾರಿ ವೆಚ್ಚದಲ್ಲಿ ಸುಖವಾಸ” ಮಾಡುತ್ತಿರುವುದು ಗೃಹ ಇಲಾಖೆಯ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅಥವಾ ಶೋಕಾಸ್ ನೋಟಿಸ್ ನೀಡುವುದು ಕೇವಲ ಕಣ್ಣೊರೆಸುವ ತಂತ್ರವಾಗಬಾರದು. ಜೈಲಿನೊಳಗೆ ಮೊಬೈಲ್ ಜಾಲವನ್ನು ಸೃಷ್ಟಿಸಿದ ಭ್ರಷ್ಟ ಅಧಿಕಾರಿಗಳನ್ನು ನೇರವಾಗಿ ಸೇವೆಯಿಂದ ವಜಾಗೊಳಿಸಿ, ಅವರನ್ನೂ ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಿ ಜೈಲಿಗಟ್ಟಬೇಕಿದೆ.

ಮುಗಿಯದ ಅಧಿಕಾರದ ಮದ ಹಾಗೂ ನಾಗರಿಕ ಸಮಾಜದ ಆಕ್ರೋಶ

“ನನ್ನ ಅಜ್ಜ ದೇಶದ ಪ್ರಧಾನಿಯಾಗಿದ್ದವರು, ನನ್ನ ತಂದೆ ಶಾಸಕರು, ನಮ್ಮ ಕುಟುಂಬದ ಬಳಿ ಕೋಟಿ ಕೋಟಿ ಹಣವಿದೆ, ನಾವು ರಾಜಕೀಯವಾಗಿ ಪ್ರಭಾವಿಗಳು” ಎಂಬ ಅಹಂಕಾರವೇ ಪ್ರಜ್ವಲ್ ರೇವಣ್ಣನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಜೈಲಿಗೆ ಹೋದ ಮೇಲಾದರೂ ತನ್ನ ಸಮಾಜವಿರೋಧಿ ಕೃತ್ಯಗಳಿಗೆ ಪಶ್ಚಾತ್ತಾಪ ಪಡಬೇಕಿದ್ದ ವ್ಯಕ್ತಿ, ಜೈಲಿನಲ್ಲೂ ತನ್ನ ದುಡ್ಡಿನ ದರ್ಪದಿಂದ ಕಾನೂನನ್ನು ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾನೆ.

ಒಬ್ಬ ಸಾಮಾನ್ಯ ಪ್ರಜೆಗೆ ಸಣ್ಣ ತಪ್ಪಿಗೂ ಕಾನೂನಿನ ಚಾವಟಿ ಬೀಸುವ ಈ ವ್ಯವಸ್ಥೆ, ದುಡ್ಡು ಮತ್ತು ರಾಜಕೀಯ ಬೆಂಬಲವಿರುವ ಕ್ರಿಮಿನಲ್‌ಗಳಿಗೆ ಜೈಲಿನಲ್ಲಿಯೂ ‘ರೆಸಾರ್ಟ್ ಮಾದರಿಯ ರಾಜೋಪಚಾರ’ ನೀಡುವುದಾದರೆ, ಈ ದೇಶದಲ್ಲಿ ಕಾನೂನು ಮತ್ತು ನ್ಯಾಯದ ಮೇಲಿನ ಸಾಮಾನ್ಯ ಜನರ ನಂಬಿಕೆ ಸಂಪೂರ್ಣವಾಗಿ ಹೊರಟುಹೋಗುತ್ತದೆ.

ಇದನ್ನೂ ಓದಿ: ಖಾದಿ Vs ಖಾವಿ – ಸೋಷಿಯಲ್ ಮೀಡಿಯಾದಲ್ಲಿ ‘ಪಂಚಮವೇದ’ ರಣಕಹಳೆ! ಹಿನ್ನೆಲೆಗೆ ತಳ್ಳಲ್ಪಟ್ಟಿತೇ 2A ಮೀಸಲಾತಿ?

ಜೈಲುಗಳು ಸುಧಾರಣಾ ಗೃಹಗಳಾಗಲಿ, ಅಡ್ಡಾಗಳಾಗಬಾರದು!

ಪ್ರಜ್ವಲ್ ರೇವಣ್ಣನ ಜೈಲು ಲೀಲೆಯು ರಾಜ್ಯದ ಗೃಹ ಇಲಾಖೆಗೆ ಬಂದಿರುವ ದೊಡ್ಡ ಸವಾಲು. ಗೃಹ ಸಚಿವರು ಹಾಗೂ ಸರ್ಕಾರ “ನಾವು ಯಾವುದೇ ವಿಐಪಿ ಸಂಸ್ಕೃತಿಯನ್ನು ಸಹಿಸುವುದಿಲ್ಲ” ಎಂದು ಬಾಯಲ್ಲಿ ಹೇಳಿದರೆ ಸಾಲದು, ಅದನ್ನು ಕೃತಿಯಲ್ಲಿ ತೋರಿಸಬೇಕಿದೆ.

  • ಪ್ರಜ್ವಲ್ ರೇವಣ್ಣನನ್ನು ತಕ್ಷಣವೇ ಪರಪ್ಪನ ಅಗ್ರಹಾರದಿಂದ ರಾಜ್ಯದ ಅತ್ಯಂತ ಕಠಿಣ ಭದ್ರತೆ ಇರುವ ಅಥವಾ ಹೊರರಾಜ್ಯದ ಕಠಿಣ ಜೈಲಿಗೆ ವರ್ಗಾಯಿಸಬೇಕು.
  • ಆತನಿಗೆ ಸಾಮಾನ್ಯ ಕೈದಿಗೆ ನೀಡುವಂತೆ ಖಾದಿ ಸಮವಸ್ತ್ರವನ್ನೇ ಕಡ್ಡಾಯಗೊಳಿಸಿ, 24 ಗಂಟೆಯೂ ಸಿಸಿಟಿವಿ ಕಣ್ಣಾವಲಿನಲ್ಲಿ ಇಡಬೇಕು.
  • ಜೈಲಿನೊಳಗೆ ಸ್ಮಾರ್ಟ್‌ಫೋನ್ ಮತ್ತು ಸಿಮ್ ಕಾರ್ಡ್ ತಲುಪಿಸಿದ ಪ್ರತಿಯೊಬ್ಬ ಸಿಬ್ಬಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

ವಿಕೃತಿ ಮತ್ತು ಭ್ರಷ್ಟಾಚಾರದ ಸಮ್ಮಿಲನವಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಜೈಲುಗಳು ಅಪರಾಧಿಗಳನ್ನು ಸುಧಾರಿಸುವ ಕೇಂದ್ರಗಳಾಗುವ ಬದಲು, ದುಡ್ಡಿದ್ದವರು ಮೋಜು ಮಾಡುವ ‘ಸುಖಲೋಕದ ಅಡ್ಡಾಗಳು’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...