H.K. Patil: ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನೇತೃತ್ವದ ಈ ಹೊಸ ಆಡಳಿತದ ಹಡಗು ಸಾಗಲು ಸಜ್ಜಾಗಿ ನಿಂತಿದೆ. ಆದರೆ, ಈ ಸಂಪುಟದ ಒಳಹೊಕ್ಕು ನೋಡಿದರೆ ಅಲ್ಲಿ ಎದ್ದು ಕಾಣುತ್ತಿರುವುದು ಜನಕಲ್ಯಾಣದ ದೂರದೃಷ್ಟಿಗಿಂತ ಹೆಚ್ಚಾಗಿ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳ ಹೆಸರಿನಲ್ಲಿ ನಡೆದ ತಾರ್ಕಿಕ ರಾಜಿಗಳು. ಇಂದಿನ ಚುನಾವಣಾ ರಾಜಕಾರಣದಲ್ಲಿ ಇಂತಹ ತೇಪೆ ಹಚ್ಚುವ ಕೆಲಸಗಳು ರಾಜಕೀಯ ಅನಿವಾರ್ಯತೆ ಇರಬಹುದು. ಆದರೆ, ಅಧಿಕಾರ ನಡೆಸುವ ಇಡೀ ವ್ಯವಸ್ಥೆಯಲ್ಲೇ ಅರ್ಹತೆ ಮತ್ತು ಹಿರಿತನವನ್ನು ಕಡೆಗಣಿಸಿ, ಕೇವಲ ಮತಬ್ಯಾಂಕಿನ ತಕ್ಕಡಿಯನ್ನೇ ಹಿಡಿದು ಅರ್ಹರನ್ನು ತೂಗಲು ಹೊರಟರೆ ಆಡಳಿತದ ಹಳಿ ತಪ್ಪುವುದು ಖಚಿತ.
ದೇಶದ ರಕ್ಷಣೆ ಮಾಡುವ ಸೇನಾ ಪಡೆಗಳು, ವೈಜ್ಞಾನಿಕ ಪ್ರಗತಿಯನ್ನು ನಿರ್ಧರಿಸುವ ಇಸ್ರೋ, ಡಿಆರ್‌ಡಿಒ ಅಥವಾ ಭಾರ್ಕ್‌ನಂತಹ ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ನಾವು ಜಾತಿ-ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಹುಡುಕುವುದಿಲ್ಲ. ಯಾಕೆಂದರೆ ಅಲ್ಲಿ ದೇಶದ ಉಳಿವು ಮತ್ತು ಭವಿಷ್ಯದ ಪ್ರಶ್ನೆ ಇರುತ್ತದೆ; ಅಲ್ಲಿ ಸಾಮರ್ಥ್ಯಕ್ಕಷ್ಟೇ ಬೆಲೆ. ಇದೇ ಮಾನದಂಡ ಪ್ರಜಾಪ್ರಭುತ್ವದ ಅತಿ ದೊಡ್ಡ ಪೀಠವಾದ ಸಚಿವ ಸಂಪುಟಕ್ಕೂ ಅನ್ವಯಿಸಬೇಕು. ಜ್ಞಾನ ಮತ್ತು ಆಡಳಿತಾತ್ಮಕ ಪಕ್ವತೆ ಇಲ್ಲದಿದ್ದರೆ ಇಡೀ ಸರ್ಕಾರವೇ ದಿಕ್ಕು ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಕರ್ನಾಟಕ ರಾಜಕಾರಣದ ಅತ್ಯಂತ ಪ್ರಬುದ್ಧ, ಸಭ್ಯ ಹಾಗೂ ಸೈದ್ಧಾಂತಿಕ ಮುತ್ಸದ್ದಿ ಎಚ್.ಕೆ. ಪಾಟೀಲ್ ಅವರನ್ನು ಮೊದಲ ಹಂತದಲ್ಲೇ ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಇಡೀ ರಾಜ್ಯದ ಪ್ರಜ್ಞಾವಂತ ವಲಯವನ್ನು ತಲ್ಲಣಗೊಳಿಸಿದೆ. ಇದು ಕೇವಲ ಒಬ್ಬ ಹಿರಿಯ ನಾಯಕನಿಗೆ ಮಾಡಿದ ಅಪಮಾನವಲ್ಲ, ಬದಲಿಗೆ ಹೊಸದಾಗಿ ಬಂದ ಸರ್ಕಾರ ತನ್ನದೇ ಕಾಲಿಗೆ ತಾನು ಕೊಡಲಿ ಪೆಟ್ಟು ಹಾಕಿಕೊಂಡ ರಾಜಕೀಯ ಆತ್ಮಹತ್ಯೆಯ ನಿರ್ಧಾರ!
ನಾಲ್ಕು ದಶಕಗಳ ಕಳಂಕರಹಿತ ಸಂಸದೀಯ ಪರಂಪರೆ
ರಾಜಕೀಯ ಎಂದರೆ ಕೇವಲ ಅಧಿಕಾರ ಹಿಡಿಯುವ ತಂತ್ರಗಾರಿಕೆ ಮಾತ್ರವಲ್ಲ, ಅದೊಂದು ಸಾರ್ವಜನಿಕ ಸೇವೆಯ ಸತ್ಪಥ ಎಂಬುದನ್ನು ಬದುಕಿ ತೋರಿಸಿದವರು ಎಚ್.ಕೆ. ಪಾಟೀಲ್ (H.K. Patil). ಕಳೆದ ನಲವತ್ತು ವರ್ಷಗಳಿಂದ ಕಳಂಕವಿಲ್ಲದ, ಅತ್ಯಂತ ಘನತೆಯುಳ್ಳ ಸಾರ್ವಜನಿಕ ಜೀವನವನ್ನು ಅವರು ಮುನ್ನಡೆಸಿಕೊಂಡು ಬಂದಿದ್ದಾರೆ. ವಿಧಾನ ಪರಿಷತ್ತಿನ ಸಭಾಂಗಣ ಇರಲಿ ಅಥವಾ ವಿಧಾನ ಸಭೆ ಇರಲಿ, ಅವರು ಮಂಡಿಸುವ ವಿಷಯಗಳು, ನಡೆಸುವ ಚರ್ಚೆಗಳು ಇಂದಿನ ಯುವ ಜನಪ್ರತಿನಿಧಿಗಳಿಗೆ ಅತ್ಯುತ್ತಮ ಆಡಳಿತದ ಪಠ್ಯಪುಸ್ತಕದಂತಿವೆ. 1984 ರಿಂದ 2008 ರವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸತತ ನಾಲ್ಕು ಅವಧಿಗೆ ಮೇಲ್ಮನೆಯನ್ನು ಪ್ರತಿನಿಧಿಸಿದ್ದ (MLC) ಪಾಟೀಲರು, ತದನಂತರ ಗದಗದಿಂದ ಮೂರು ಬಾರಿ ಸತತವಾಗಿ ಗೆದ್ದು ಕೆಳಮನೆ (MLA) ಪ್ರವೇಶಿಸಿದವರು.
ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ಧರಂಸಿಂಗ್ ಮತ್ತು ಸಿದ್ದರಾಮಯ್ಯನವರಂತಹ ಘಟಾನುಘಟಿ ನಾಯಕರ ಮಾರ್ಗದರ್ಶನದಲ್ಲಿ ಜವಳಿ, ಕೃಷಿ, ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಗ್ರಾಮೀಣಾಭಿವೃದ್ಧಿಯಂತಹ ಅತ್ಯಂತ ಜವಾಬ್ದಾರಿಯುತ ಇಲಾಖೆಗಳನ್ನು ಅವರು ಮುನ್ನಡೆಸಿದ್ದಾರೆ. ಕೇವಲ ಕುರ್ಚಿಯ ಅಲಂಕಾರವಾಗಿರದೆ, ತಾವು ವಹಿಸಿಕೊಂಡ ಪ್ರತಿಯೊಂದು ಖಾತೆಗೂ ಐತಿಹಾಸಿಕ ಘನತೆಯನ್ನು ತಂದುಕೊಟ್ಟಿದ್ದಾರೆ.
ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದಿದ್ದಾಗ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಮಾಹಿತಿ ತಂತ್ರಜ್ಞಾನವನ್ನು ಹಳ್ಳಿಗಾಡಿನ ಆಡಳಿತಕ್ಕೆ ಸಮರ್ಪಕವಾಗಿ ಜೋಡಿಸಿದ ಇವರ ದೂರದೃಷ್ಟಿಗೆ ಕೇಂದ್ರ ಸರ್ಕಾರ ಸತತ ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ಇ-ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ 2017 ರ ಲಖನೌ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಂದು ಪಾಟೀಲರ ಆಡಳಿತಾತ್ಮಕ ಸಾಧನೆಯನ್ನು ಶ್ಲಾಘಿಸಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಬರದ ನಾಡಿಗೆ ಕೃತಕ ಮಳೆಯ ತಂತ್ರಜ್ಞಾನವಾದ ‘ಮೋಡ ಬಿತ್ತನೆ’ಯನ್ನು ಧೈರ್ಯವಾಗಿ ಪರಿಚಯಿಸಿದ್ದು, ಕುಡಿಯುವ ನೀರಿನ ಅಭಾವವಿದ್ದಾಗ ತಮ್ಮ ಸ್ವಂತ ಪರಿಶ್ರಮ ಹಾಗೂ ಸಂಪನ್ಮೂಲ ಬಳಸಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಿ ಸಹಕಾರಿ ರಂಗವನ್ನು ಬಲಪಡಿಸಿದ್ದು ಇವರ ಜನಪರ ಕಾಳಜಿಗೆ ಜ್ವಲಂತ ಸಾಕ್ಷಿ.

ಉತ್ತರ ಕರ್ನಾಟಕದ ಜೀವನಾಡಿ ಮತ್ತು ಗಡಿನಾಡ ಕನ್ನಡಿಗರ ದ್ವನಿ
ಉತ್ತರ ಕರ್ನಾಟಕ ಮತ್ತು ಗಡಿಭಾಗದ ಜನರಿಗೆ ಎಚ್.ಕೆ. ಪಾಟೀಲ್ (H.K. Patil) ಎಂದರೆ ಕೇವಲ ಒಬ್ಬ ನಾಯಕನಲ್ಲ, ಅದೊಂದು ಭರವಸೆ. ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಕೊಳ್ಳದಲ್ಲಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಇವರು ತೋರಿದ ಕಾಳಜಿಯನ್ನು ಆ ಭಾಗದ ರೈತರು ಇಂದಿಗೂ ಅತ್ಯಂತ ಭಕ್ತಿಯಿಂದ ಸ್ಮರಿಸುತ್ತಾರೆ. ಒಣಭೂಮಿಗೆ ಹಸಿರಿನ ಮುನ್ನುಡಿ ಬರೆದ ‘ಶ್ರೀ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ’ ಮತ್ತು ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಆಸರೆಯಾದ ‘ಘಟಪ್ರಭಾ ಬಲದಂಡೆ ಕಾಲುವೆ’ (GLBC) ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳಲು ಪಾಟೀಲರ ಇಚ್ಛಾಶಕ್ತಿಯೇ ಕಾರಣ.
ಅಷ್ಟೇ ಅಲ್ಲ, ಅವರ ರಕ್ತದಲ್ಲೇ ಗಡಿನಾಡಿನ ಮತ್ತು ಕನ್ನಡ ನೆಲದ ಮೇಲಿನ ಪ್ರೀತಿ ಹಾಸುಹೊಕ್ಕಾಗಿದೆ. 1970ರ ದಶಕದಲ್ಲಿ ಅಪ್ರತಿಮ ಮುತ್ಸದ್ದಿ ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಗಡಿ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದ ದಿವಂಗತ ಕೆ.ಎಚ್. ಪಾಟೀಲರ ಪುತ್ರರಾಗಿ, ತಂದೆಯ ಕನ್ನಡದ ಹೋರಾಟದ ಪರಂಪರೆಯನ್ನು ಇವರು ಅಖಂಡವಾಗಿ ಮುಂದುವರಿಸಿದ್ದಾರೆ. ಗಡಿಭಾಗದ ಕನ್ನಡಿಗರ ನೋವು, ನಲಿವುಗಳ ಬಗ್ಗೆ ಆಳವಾದ ಮತ್ತು ತಾರ್ಕಿಕವಾದ ಅಧ್ಯಯನ ನಡೆಸಿದ ಹಿರಿಯ ನಾಯಕ ಇವರು. ಇವರ ಈ ಪರಿಣತಿಯನ್ನು ಗೌರವಿಸಿಯೇ ಅಂದಿನ ಸಿದ್ದರಾಮಯ್ಯ ಸರ್ಕಾರ ಇವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು. ಈಗ ಇಂತಹ ಗಟ್ಟಿಯಾದ ಕನ್ನಡದ ದ್ವನಿಯನ್ನು ಅಧಿಕಾರದಿಂದ ಹೊರಗಿಟ್ಟಿರುವುದು ಗಡಿನಾಡ ಕನ್ನಡಿಗರಲ್ಲಿ ತೀವ್ರ ಆಕ್ರೋಶವನ್ನು ತಂದಿದೆ. ಇತಿಹಾಸದ ದಾಖಲೆಗಳೊಂದಿಗೆ ವಿಡಿಯೋ ಚಿತ್ರಣದಲ್ಲಿ ವಿವರಿಸಿರುವಂತೆ, ಬೆಳಗಾವಿಯ 20 ಕ್ಕೂ ಹೆಚ್ಚು ಪ್ರಮುಖ ಕನ್ನಡಪರ ಸಂಘಟನೆಗಳು ಹಾಗೂ ಹಿರಿಯ ಹೋರಾಟಗಾರರಾದ ಅಶೋಕ ಚಂದರಗಿ ಅವರು ಹೊಸ ಸರ್ಕಾರದ ಈ ನಿರ್ಧಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಹೈಕಮಾಂಡಿಗೆ ಪತ್ರ ಬರೆದಿರುವುದು ಈ ಆಕ್ರೋಶದ ತೀವ್ರತೆಯನ್ನು ತೋರಿಸುತ್ತದೆ.
ಸತ್ಯದ ಖಡ್ಗ ಹಿಡಿದು ರಾಜಕೀಯ ಸಿದ್ಧಾಂತ ಕಾಪಾಡಿದ ನಾಯಕ
ಇಂದಿನ ರಾಜಕೀಯದಲ್ಲಿ ಪಕ್ಷದ ನಾಯಕರು ತಪ್ಪೆಸಗಿದಾಗ ಅಥವಾ ಸಾರ್ವಜನಿಕ ಹಣ ಲೂಟಿಯಾಗುವಾಗ ಮೌನಕ್ಕೆ ಶರಣಾಗುವವರೇ ಹೆಚ್ಚು. ಆದರೆ ಎಚ್.ಕೆ. ಪಾಟೀಲರು ಕೆಲವು ಸಂದರ್ಭಗಳಲ್ಲಿ ತಮ್ಮ ಸ್ವಪಕ್ಷದವರಿಗೂ ಮುಜುಗರವಾಗುವಂತೆ ಸತ್ಯವನ್ನು ನುಡಿದು ಹಲವರ ಹುಬ್ಬೇರಿಸಿದವರು. ಅವರ ಸೈದ್ಧಾಂತಿಕ ಸ್ಪಷ್ಟತೆ ಎಷ್ಟು ಖಡಕ್ ಆಗಿತ್ತೆಂದರೆ, ಕಳೆದ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷಗಳು ಉಚಿತ ಉಡುಗೊರೆಗಳು ಎಂದು ಅಣಕಿಸಿದಾಗ, ಪಾಟೀಲರು ನೀಡಿದ ಚಾಟಿಯೇಟಿನಂತಹ ಉತ್ತರ ಇಡೀ ದೇಶದ ಗಮನ ಸೆಳೆದಿತ್ತು. ಬಡವರಿಗಾಗಿ ನೀಡುವ ಸವಲತ್ತುಗಳನ್ನು ಪ್ರಶ್ನಿಸುವ ಬಂಡವಾಳಶಾಹಿಗಳ ಕಣ್ಣುಗಳನ್ನು ತರೆಸುವಂತೆ, ದೇಶದ ನೂರಾರು ಕೋಟ್ಯಧಿಪತಿಗಳ ಹತ್ತು ಲಕ್ಷ ಕೋಟಿಗೂ ಅಧಿಕ ಸಾಲ ಮನ್ನಾ ಮಾಡಿದ ಕೇಂದ್ರದ ನೀತಿಯನ್ನು ಯಾರು ಪ್ರಶ್ನಿಸುತ್ತಾರೆ ಎಂದು ಗುಡುಗಿದ್ದರು. ಇಂತಹ ತಾರ್ಕಿಕ ಮತ್ತು ದೃಢವಾದ ನಿಲುವುಗಳನ್ನು ಹೊಂದಿರುವ ನಾಯಕರು ಸಂಪುಟದಲ್ಲಿದ್ದಾಗ ಇಡೀ ಸರ್ಕಾರಕ್ಕೊಂದು ಗೌರವ ಬರುತ್ತದೆ.
ಮುತ್ಸದ್ದಿತನವಿಲ್ಲದ ಸಂಪುಟ ಕೇವಲ ಗಮ್ಯವಿಲ್ಲದ ಪಯಣ
ಹಿಂದಿನ ಸಿದ್ದರಾಮಯ್ಯನವರ ಆಡಳಿತದಲ್ಲಿ ಪ್ರತಿಯೊಂದು ನಿರ್ಧಾರದ ಹಿಂದೆ ಹಿರಿಯರ ಅನುಭವದ ಮಾರ್ಗದರ್ಶನವಿತ್ತು. ಆದರೆ ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಂಪುಟದಲ್ಲಿ ಅಂತಹ ಬೌದ್ಧಿಕ ಮುತ್ಸದ್ದಿತನದ ತೀವ್ರ ಕೊರತೆಯಿದೆ. ಯಾವುದೇ ಒಂದು ಸರ್ಕಾರ ಸುಸ್ಥಿರವಾಗಿ, ಹಳಿ ತಪ್ಪದಂತೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಕೇವಲ ಯುವಕರ ಉತ್ಸಾಹವೊಂದೇ ಸಾಲದು, ಹಿರಿಯರ ಜ್ಞಾನದ ಬೇರೂ ಇರಬೇಕು. ಸರ್ಕಾರದ ನೀತಿ ನಿಯಮಗಳ ರಚನೆಯಲ್ಲಿ, ಸಂಕೀರ್ಣ ಕಾನೂನು ತೊಡಕುಗಳನ್ನು ನಿವಾರಿಸುವಲ್ಲಿ ಮತ್ತು ತಲೆದೋರಬಹುದಾದ ಮುಜುಗರದ ಪ್ರಸಂಗಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಹತೋಟಿಗೆ ತರುವಲ್ಲಿ ಎಚ್.ಕೆ. ಪಾಟೀಲರ ಆಡಳಿತಾತ್ಮಕ ಒಳನೋಟ ಇಂದಿನ ಸಂಪುಟಕ್ಕೆ ಅತ್ಯಂತ ತುರ್ತಾಗಿ ಬೇಕಾಗಿದೆ. ಯುವಕರಿಗೆ ಆಡಳಿತದಲ್ಲಿ ಅವಕಾಶ ನೀಡುವುದು ಎಷ್ಟು ಮುಖ್ಯವೋ, ಅನುಭವದ ಗಣಿಯಾಗಿರುವ ಹಿರಿಯರನ್ನು ಕಡೆಗಣಿಸದಿರುವುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಅದು ಕೇವಲ ಆಡಳಿತಾತ್ಮಕ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ.
ಇದನ್ನೂ ಓದಿ: Siddaramaiah ಒಂಟಿಯಾದ್ರಾ? ಇದು ಮಾಧ್ಯಮಗಳ ಬೌದ್ಧಿಕ ನಗ್ನತೆ!
ಹೊಸ ಚಿಗುರು ಮತ್ತು ಹಳೆಯ ಬೇರುಗಳು ಒಟ್ಟಾಗಿ ಸೇರಿದಾಗ ಮಾತ್ರ ಒಂದು ವೃಕ್ಷವು ಸುಂದರವಾಗಿ ಮತ್ತು ಬಿರುಗಾಳಿಗಳಿಗೂ ಜಗ್ಗದೆ ಬಹುಕಾಲ ನಿಲ್ಲಲು ಸಾಧ್ಯ. ಎಐಸಿಸಿ ವರಿಷ್ಠರು ಹಾಗೂ ರಾಜ್ಯ ನಾಯಕತ್ವ ಈ ಸತ್ಯವನ್ನು ಅರಿಯಬೇಕಿದೆ. ಎಚ್.ಕೆ. ಪಾಟೀಲರಂತಹ ಅತ್ಯುನ್ನತ ಸಂಸದೀಯ ಪಟುವನ್ನು ಸಂಪುಟದ ಮೊದಲ ಹಂತದಲ್ಲೇ ಕೈಬಿಡುವ ಮೂಲಕ ಸರ್ಕಾರವು ಸಮಾಜಕ್ಕೆ ಅತ್ಯಂತ ತಪ್ಪು ಸಂದೇಶವನ್ನು ರವಾನಿಸಿದೆ. ಸೈದ್ಧಾಂತಿಕ ಬದ್ಧತೆ, ಅಧ್ಯಯನಶೀಲತೆ ಹಾಗೂ ಜನಪರ ಕಾಳಜಿಗಿಂತ ಕೇವಲ ತೋಳ್ಬಲ ಮತ್ತು ಜಾತಿಯ ಸಂಖ್ಯಾಬಲವೇ ಮುಖ್ಯವೇ ಎಂಬ ಪ್ರಶ್ನೆ ಈಗ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಗಡಿನಾಡಿನ ಹೋರಾಟಗಾರರು ಹಾಗೂ ಪ್ರಜ್ಞಾವಂತ ಜನತೆ ಆಡಳಿತ ಮಂಡಳಿಗೆ ಈಗಾಗಲೇ ತಮ್ಮ ತೀವ್ರ ವಿರೋಧವನ್ನು ತಲುಪಿಸಿದ್ದಾರೆ. ಮುಂದಿನ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಾದರೂ ಎಐಸಿಸಿ ಮತ್ತು ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿದೆ. ರಾಜ್ಯದ ಹಿತದೃಷ್ಟಿಯಿಂದ, ಸುಸ್ಥಿರ ಆಡಳಿತಕ್ಕಾಗಿ ಮತ್ತು ಇಡೀ ಸಚಿವ ಸಂಪುಟಕ್ಕೆ ಒಂದು ತೂಕ ಹಾಗೂ ಘನತೆಯನ್ನು ತರಲು ಎಚ್.ಕೆ. ಪಾಟೀಲ್ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಿ ಜವಾಬ್ದಾರಿಯನ್ನು ವಹಿಸಿಕೊಡಬೇಕು. ಮುತ್ಸದ್ದಿತನವನ್ನು ಮೂಲೆಗುಂಪು ಮಾಡಿದ ಯಾವುದೇ ಸರ್ಕಾರ ಇತಿಹಾಸದಲ್ಲಿ ಹೆಚ್ಚು ಕಾಲ ಯಶಸ್ವಿಯಾಗಿ ಬಾಳಿಲ್ಲ ಎಂಬುದನ್ನು ನಾಯಕತ್ವ ನೆನಪಿನಲ್ಲಿಡಲಿ.

