Saturday, September 12, 2026
Home ರಾಜ್ಯ Cylinder Politics: ʻʻಬಣವಿ ಸುಟ್ಟು ಅರಳು ಮುಕ್ಕುವ ಕೆಲಸʼʼ- ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ

Cylinder Politics: ʻʻಬಣವಿ ಸುಟ್ಟು ಅರಳು ಮುಕ್ಕುವ ಕೆಲಸʼʼ- ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ

ಬೆಂಗಳೂರು: ದೇಶದಲ್ಲಿ ಸದ್ಯ ತಲೆದೂರಿರುವ ಪೆಟ್ರೋಲಿಯಂ ಮತ್ತು ಗ್ಯಾಸ್ ದರ ಏರಿಕೆ ಹಾಗೂ ಪೂರೈಕೆಯ ವಿಚಾರ ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ (Cylinder Politics) ವಾಗ್ವಾದಕ್ಕೆ ಕಾರಣವಾಗಿದೆ. ಸಿಲಿಂಡರ್ ಕೊರತೆಯ ನೆಪವೊಡ್ಡಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. “ದೇಶದಲ್ಲಿ ಎಲ್ಲೂ ಇಂಧನದ ಕೊರತೆಯಿಲ್ಲ, ಕಾಂಗ್ರೆಸ್ ಸುಖಾಸುಮ್ಮನೆ ಜನರ ದಾರಿ ತಪ್ಪಿಸುತ್ತಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಜೋಶಿ ಆಕ್ರೋಶದ ನುಡಿಗಳು

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್‌ನ ಸದ್ಯದ ವರ್ತನೆಯನ್ನು “ಬಣವಿ ಸುಟ್ಟು ಅರಳು ಮುಕ್ಕುವ ಕೆಲಸ” ಎಂದು ವ್ಯಂಗ್ಯವಾಡಿದರು. ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವಿದ್ದರೂ ಭಾರತದಲ್ಲಿ ಗ್ಯಾಸ್ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಾಗದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ಆದರೆ, ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರು ಜನರನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

“ಹಿಂದೆ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿತ್ತು. ಆದರೆ ಇಂದಿನ ಕಾಂಗ್ರೆಸ್ ಮಾತ್ರ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ದೇಶದ ಹಿತವನ್ನೇ ಬಲಿಕೊಡುತ್ತಿದೆ”ಪ್ರಲ್ಹಾದ್ ಜೋಶಿ.

ಇದನ್ನೂ ಓದಿ: Hajj Horror: ಹಜ್ ಅಧ್ಯಕ್ಷನಿಗೆ ರೀಲ್ಸ್ ಹುಚ್ಚು; ಇಸಿಜಿ ಹೆಸರಲ್ಲಿ ಮಹಿಳೆಯರ ಮರ್ಯಾದೆ ಹರಾಜು! ಕಣ್ಣೀರಿಟ್ಟ ಯಾತ್ರಿಕರು

ದೇಶದಲ್ಲಿ ಗ್ಯಾಸ್ ಪರಿಸ್ಥಿತಿ ಹೇಗಿದೆ? ಸಚಿವರು ನೀಡಿದ ಸ್ಪಷ್ಟನೆಗಳು:

ಸಚಿವರು ನೀಡಿದ ಪ್ರಮುಖ ಅಂಶಗಳು ಇಲ್ಲಿವೆ:

  • ಕೊರತೆಯ ಆತಂಕ ಬೇಡ: ದೇಶದ 33 ಕೋಟಿ ಕುಟುಂಬಗಳಿಗೆ ತಲುಪುವಷ್ಟು ಎಲ್‌ಪಿಜಿ ಲಭ್ಯವಿದೆ. ಬುಕ್ ಮಾಡಿದ 2-3 ದಿನಗಳಲ್ಲೇ ಸಿಲಿಂಡರ್ ಮನೆಗೆ ತಲುಪುತ್ತಿದೆ.
  • ವಿಸ್ತರಣೆಯಾದ ಮಾರುಕಟ್ಟೆ: ಈ ಹಿಂದೆ ಭಾರತ ಕೇವಲ 20 ದೇಶಗಳಿಂದ ಪೆಟ್ರೋಲಿಯಂ ಆಮದು ಮಾಡಿಕೊಳ್ಳುತ್ತಿತ್ತು. ಈಗ ಅದನ್ನು 40 ರಾಷ್ಟ್ರಗಳಿಗೆ ಹೆಚ್ಚಿಸಲಾಗಿದೆ. ರಷ್ಯಾ, ಆಸ್ಟ್ರೇಲಿಯಾ ಹಾಗೂ ಆಫ್ರಿಕಾ ರಾಷ್ಟ್ರಗಳಿಂದಲೂ ಇಂಧನ ತರಿಸಲಾಗುತ್ತಿದೆ.
  • ಸ್ಥಳೀಯ ಉತ್ಪಾದನೆಗೆ ಒತ್ತು: ದೇಶದ ಒಟ್ಟು ಎಲ್‌ಪಿಜಿ ಬಳಕೆಯಲ್ಲಿ ಶೇ. 20ರಷ್ಟು ಉತ್ಪಾದನೆಯನ್ನು ಭಾರತದಲ್ಲೇ ಮಾಡಲು ಕ್ರಮ ಕೈಗೊಳ್ಳಲಾಗಿದೆ.
  • ಎಥೆನಾಲ್ ಕ್ರಾಂತಿ: ಯುಪಿಎ ಕಾಲದಲ್ಲಿ ಕೇವಲ ಶೇ. 1.5 ರಷ್ಟಿದ್ದ ಎಥೆನಾಲ್ ಮಿಶ್ರಣವನ್ನು ಈಗ ಶೇ. 20ಕ್ಕೆ ಏರಿಸುವ ಮೂಲಕ ಪೆಟ್ರೋಲ್ ಮೇಲಿನ ಅವಲಂಬನೆ ತಗ್ಗಿಸಲಾಗಿದೆ.

ಇದನ್ನೂ ಓದಿ: Guarantee Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್ಮಾಲ್! ಕೋಟಿ-ಕೋಟಿ ಹಣ ಗುಳುಂ? ಅಸಲಿ ಸತ್ಯ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ!

‘ಆತ್ಮನಿರ್ಭರ’ತೆಗೆ ಕಾಂಗ್ರೆಸ್ ಅಡ್ಡಿ?

ಕೇಂದ್ರ ಸರ್ಕಾರವು ಸೋಲಾರ್ ಪಂಪ್‌ಗಳ ಬಳಕೆ, ಕಲ್ಲಿದ್ದಲು ಉತ್ಪಾದನೆ ಹೆಚ್ಚಳ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ನೀಡುವ ಮೂಲಕ ಭಾರತವನ್ನು ಇಂಧನ ಕ್ಷೇತ್ರದಲ್ಲಿ ‘ಆತ್ಮನಿರ್ಭರ’ ಮಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಅಪ್ರಬುದ್ಧವಾಗಿ ವರ್ತಿಸುವ ಮೂಲಕ ಈ ಪ್ರಗತಿಯನ್ನು ಹಾಳುಗೆಡವಲು ಸಂಚು ರೂಪಿಸುತ್ತಿದ್ದಾರೆ ಎಂದು ಜೋಶಿ ದೂರಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿಯಿದ್ದರೂ ಭಾರತದಲ್ಲಿ ಇಂಧನ ಪೂರೈಕೆ ಸುಗಮವಾಗಿದೆ. ಕಮರ್ಷಿಯಲ್ ಗ್ಯಾಸ್ ಬಳಕೆಯ ಮೇಲೆ ನಿಗಾ ಇಟ್ಟಿರುವುದನ್ನೇ ಕಾಂಗ್ರೆಸ್ ಅಭಾವ ಎಂದು ಬಿಂಬಿಸುತ್ತಿದೆ ಎನ್ನುವುದು ಕೇಂದ್ರ ಸಚಿವರ ವಾದ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...