Homeರಾಜ್ಯBagalkot: ರಾಜಕೀಯ ವೈಭವ ಕಳೆದುಕೊಂಡ ಜಿಲ್ಲೆ! ಡಿಕೆಶಿ ಸಂಪುಟದಲ್ಲಿ 'ಸ್ಥಾನ'ಕ್ಕಾಗಿ ಭಿಕ್ಷಾಟನೆ?

Bagalkot: ರಾಜಕೀಯ ವೈಭವ ಕಳೆದುಕೊಂಡ ಜಿಲ್ಲೆ! ಡಿಕೆಶಿ ಸಂಪುಟದಲ್ಲಿ ‘ಸ್ಥಾನ’ಕ್ಕಾಗಿ ಭಿಕ್ಷಾಟನೆ?

ಒಂದು ಕಾಲದಲ್ಲಿ ಇಡೀ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದ್ದ ಬಾಗಲಕೋಟೆ (Bagalkot) ಜಿಲ್ಲೆಯ ರಾಜಕೀಯ ಘನತೆ ಇಂದು ಹರಾಜಿಗೆ ಬಂದಂತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಭಾವಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷ ಗಾದಿಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಈ ವೀರಭೂಮಿಯ ಇಂದಿನ ದುಸ್ಥಿತಿ ನೋಡಿದರೆ ಸಾರ್ವಜನಿಕ ವಲಯದಲ್ಲಿ ಮರುಕ ಹುಟ್ಟುತ್ತಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರ ಸಚಿವ ಸಂಪುಟದಲ್ಲಿ ಕನಿಷ್ಠ ಒಂದು ಸ್ಥಾನ ಗಿಟ್ಟಿಸಿಕೊಳ್ಳಲು ಜಿಲ್ಲೆಯ ನಾಯಕರು ಇಂದು ಕೈಕಟ್ಟಿ, ಅತ್ತು ಕರೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಜಿಲ್ಲೆಯ ರಾಜಕೀಯ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಿದ್ದರಾಮಯ್ಯ (Siddaramaiah) ಅವರ ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಇಡೀ ಜಿಲ್ಲೆಗೆ ಸಿಕ್ಕಿದ್ದು ಕೇವಲ ಒಂದೇ ಒಂದು ಮಂತ್ರಿ ಸ್ಥಾನ! ಹಳೆಯ ಇತಿಹಾಸವನ್ನು ಮೆಲುಕು ಹಾಕುತ್ತಾ ಕಾಲ ಕಳೆಯುತ್ತಿರುವ ಇಲ್ಲಿನ ನಾಯಕರಿಗೆ, ಬದಲಾದ ರಾಜಕೀಯ ಸಮೀಕರಣದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸ್ವಾಭಿಮಾನ ಗಾಳಿಗೆ ತೂರಿ ಶರಣಾದ ನಾಯಕರು: ಹೆಚ್ಚಿದ ಆಂತರಿಕ ಬೇಗುದಿ

ಅಧಿಕಾರಕ್ಕಾಗಿ ಮತ್ತು ಸಚಿವ ಸ್ಥಾನದ ಒಲವೆಗಾಗಿ ಬಾಗಲಕೋಟೆ (Bagalkot) ಜಿಲ್ಲೆಯ ಪ್ರಮುಖ ನಾಯಕರಾದ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ (R. b. Thimmapur), ಶಾಸಕ ಜೆ.ಟಿ.‌ ಪಾಟೀಲ (J.T. Patil) ಹಾಗೂ ವಿಜಯಾನಂದ ಕಾಶಪ್ಪನವರ (Vijayananda Kashyap’s) ಈಗಾಗಲೇ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಸ್ಥಾನಕ್ಕೆ ಅಲೆದಾಟ ಆರಂಭಿಸಿದ್ದಾರೆ. ತಮ್ಮದೇ ನಾಯಕನಿಗೆ ಮಂತ್ರಿ ಸ್ಥಾನ ಸಿಗಬೇಕೆಂದು ಆಯಾ ನಾಯಕರ ಬೆಂಬಲಿಗರು ಬೀದಿಗಿಳಿದು ಆಕ್ರೋಶ, ಒತ್ತಡ ಪ್ರದರ್ಶಿಸುತ್ತಿದ್ದಾರೆಯೇ ಹೊರತು, ಜಿಲ್ಲೆಯ ಹಿತದೃಷ್ಟಿಯಿಂದ ಯಾರೂ ಒಟ್ಟಾಗಿ ಧ್ವನಿ ಎತ್ತುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಹೈಕಮಾಂಡ್‌ಗೆ ಎರಡು ಸಚಿವ ಸ್ಥಾನ ನೀಡಬೇಕೆಂದು ತೇಪೆ ಹಚ್ಚುವ ಮನವಿ ಸಲ್ಲ್ಲಿಸಿದೆಯಾದರೂ, ಹೈಕಮಾಂಡ್ ಮಟ್ಟದಲ್ಲಿ ಇದಕ್ಕೆ ಕಾಸಿನ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ ಎನ್ನುವುದು ಕಟು ಸತ್ಯ. ಭರವಸೆಯ ಮಹಾಪೂರ ಹರಿಯಬೇಕಿದ್ದ ಜಾಗದಲ್ಲಿ ಇಂದು ಕೇವಲ ಮೌನ ಮತ್ತು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಇದನ್ನೂ ಓದಿ: RB Timmapur: ಬಾಗಲಕೋಟೆ ಕೆಡಿಪಿಗೆ ‘ಲಾಕ್’..! ಮುಧೋಳ ‘ಮಿನಿ ಗೋವಾ’? ಸಚಿವರಿಗೆ ತಟ್ಟಿದ ಜನಾಕ್ರೋಶ!

ಇತಿಹಾಸದ ಸುವರ್ಣ ಪುಟಗಳು vs ಇಂದಿನ ಶೂನ್ಯ ಸಂಪಾದನೆ

ಬಾಗಲಕೋಟೆ (Bagalkot) ಜಿಲ್ಲೆ ರಾಜಕಾರಣದಲ್ಲಿ ಎಂದಿಗೂ ಸಾಧಾರಣ ಜಿಲ್ಲೆಯಾಗಿರಲಿಲ್ಲ. ಈ ಮಣ್ಣಿನಿಂದ ಮೂಡಿಬಂದ ಬಿ. ಡಿ.‌ ಜತ್ತಿ ಮತ್ತು ಎಸ್. ಆರ್ ಕಂಠಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ಕರ್ನಾಟಕವನ್ನು ಮುನ್ನಡೆಸಿದವರು. ಹುನಗುಂದದ ನಾಗರಾಳ ಅವರು ಕೆಪಿಸಿಸಿ ಸಾರಥ್ಯ ವಹಿಸಿ ಸಂಘಟನಾ ಶಕ್ತಿ ಪ್ರದರ್ಶಿಸಿದ್ದರು. ಪಿ.ಎಂ. ನಾಡಗೌಡರಂತಹ ಮುತ್ಸದ್ದಿಗಳು ಅತ್ಯಂತ ತೂಕದ ಖಾತೆಗಳನ್ನು ನಿಭಾಯಿಸಿ ಹೆಗ್ಗಳಿಕೆ ಪಾತ್ರರಾಗಿದ್ದರು.

ಅಷ್ಟೇ ಏಕೆ, ಮಾಜಿ ಮುಖ್ಯಮಂತ್ರಿ ಎಸ್.‌ ನಿಜಲಿಂಗಪ್ಪನವರಿಗೆ ರಾಜಕೀಯ ಮರುಜನ್ಮ ನೀಡಿದ್ದೇ ಇದೇ ಬಾಗಲಕೋಟೆ ಮಣ್ಣು. ಧೀಮಂತ ನಾಯಕ ವೀರೇಂದ್ರ ಪಾಟೀಲರು ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ದರ್ಬಾರ್ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸರ್ಕಾರದಲ್ಲೂ ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿ, ಪ್ರಭಾವಿ ಖಾತೆಗಳ ಮೂಲಕ ಜಿಲ್ಲೆಯ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿದ್ದರು. ಇನ್ನು ಸ್ವತಃ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ವಿರೋಧ ಪಕ್ಷದ ನಾಯಕರಾಗಿ ಅಬ್ಬರಿಸಿದ್ದನ್ನು ಇಡೀ ರಾಜ್ಯ ನೋಡಿದೆ. ಇಂತಹ ಭವ್ಯ ಇತಿಹಾಸವಿರುವ ಜಿಲ್ಲೆಗೆ ಇಂದು ಸ್ವತಂತ್ರವಾಗಿ ಒಂದು ಸಚಿವ ಸ್ಥಾನವನ್ನು ಹಕ್ಕಿನಿಂದ ಕೇಳಿ ಪಡೆಯುವ ತಾಕತ್ತಿಲ್ಲದಿರುವುದು ದುರಂತದ ಪರಮಾವಧಿ.

ಒಗ್ಗಟ್ಟಿಲ್ಲದ ಮನೆಯು ಮೂರು ದಿನವೂ ಉಳಿಯದು!

ಇತರ ಜಿಲ್ಲೆಗಳ ರಾಜಕಾರಣವನ್ನು ಒಮ್ಮೆ ಗಮನಿಸಿದರೆ ಬಾಗಲಕೋಟೆಯ ನಾಯಕರ ಅಸಲಿ ಬಣ್ಣ ಬಯಲಾಗುತ್ತದೆ. ರಾಜ್ಯದ ಬೇರೆ ಕೆಲವು ಜಿಲ್ಲೆಗಳಲ್ಲಿ ಯಾವುದೇ ಪಕ್ಷದ ಸರ್ಕಾರ ಬರಲಿ, ಯಾರೆ ಮುಖ್ಯಮಂತ್ರಿಯಾಗಲಿ, ಆಯಾ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಭೇದ ಮರೆತು ಅಥವಾ ಒಗ್ಗಟ್ಟಿನಿಂದ ಹೈಕಮಾಂಡ್ ಮುಂದೆ ನಿಂತು, “ನಮ್ಮ ಜಿಲ್ಲೆಗೆ ಇಂತಿಷ್ಟು ಸ್ಥಾನ ಫಿಕ್ಸ್ ಮಾಡಿ, ನಿಮ್ಮಿಷ್ಟ ಬಂದವರಿಗೆ ಕೊಡಿ” ಎಂದು ಗರ್ಜಿಸುತ್ತಾರೆ. ಇದರಿಂದಾಗಿ ಹೈಕಮಾಂಡ್ ಕೂಡ ಆ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ.

ಆದರೆ, ಬಾಗಲಕೋಟೆ ಜಿಲ್ಲೆಯ ಕಥೆಯೇ ಬೇರೆ. ಇಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ, ಒಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರೆಲ್ಲರೂ ಒಟ್ಟಾಗಿ ಕುಳಿತು, “ನಮ್ಮ ಜಿಲ್ಲೆಯ ಐವರಲ್ಲಿ ಯಾರಿಗಾದರೂ ಮಂತ್ರಿ ಮಾಡಿ, ನಾವು ಒಗ್ಗಟ್ಟಿನಿಂದ ಬೆಂಬಲಿಸುತ್ತೇವೆ” ಎಂದು ಹೈಕಮಾಂಡ್ ಅಥವಾ ಡಿ.ಕೆ. ಶಿವಕುಮಾರ್ ಎದುರು ಜಂಟಿಯಾಗಿ ಪ್ರಸ್ತಾವನೆ ಇಡುವ ಕನಿಷ್ಠ ಸೌಜನ್ಯವನ್ನೂ, ಔದಾರ್ಯವನ್ನೂ ಪ್ರದರ್ಶಿಸಿಲ್ಲ. ಬದಲಾಗಿ, ಒಬ್ಬರ ಬೆನ್ನಿಗೆ ಮತ್ತೊಬ್ಬರು ಚೂರಿ ಹಾಕುವಂತೆ, ಕದ್ದುಮುಚ್ಚಿ ಪ್ರತ್ಯೇಕವಾಗಿ ನಾಯಕರನ್ನು ಭೇಟಿಯಾಗಿ “ಅವರಿಗಿಂತ ನಾನೇ ಶ್ರೇಷ್ಠ, ನನಗೇ ಮಂತ್ರಿ ಸ್ಥಾನ ಕೊಡಿ” ಎಂದು ಹಾದಿಬೀದಿಯಲ್ಲಿ ಅಂಗಲಾಚುತ್ತಿದ್ದಾರೆ.

ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)

ಗುಂಪುಗಾರಿಕೆಯ ಪರಮಾವಧಿ: ಬೀದಿಗೆ ಬಂದ ಬೆಂಬಲಿಗರ ರಂಪಾಟ

ಸಾಂಘಿಕ ಪ್ರಯತ್ನದ ಕೊರತೆಯು ಜಿಲ್ಲೆಯ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಶಿಥಿಲಗೊಳಿಸಿದೆ. ನಾಯಕರ ವೈಯಕ್ತಿಕ ಮಹತ್ವಾಕಾಂಕ್ಷೆಗೆ ಅವರ ಬೆಂಬಲಿಗರು ಕೂಡ ತುಪ್ಪ ಸುರಿಯುತ್ತಿದ್ದಾರೆ. ಪ್ರತ್ಯೇಕ ಪತ್ರಿಕಾಗೋಷ್ಠಿಗಳು, ಸ್ವಾರ್ಥ ಸಾಧನೆಯ ಸಭೆಗಳು ಜಿಲ್ಲೆಯಾದ್ಯಂತ ರಾಜಾರೋಷವಾಗಿ ನಡೆಯುತ್ತಿವೆ. “ನಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗದಿದ್ದರೆ ಉಗ್ರ ಹೋರಾಟ” ಎನ್ನುವ ಇವರ ಬಡಬಡಿಕೆ ಹೈಕಮಾಂಡ್ ಕಿವಿಗೆ ತಮಾಷೆಯಾಗಿ ಕೇಳಿಸುತ್ತಿದೆಯೇ ಹೊರತು ಗಂಭೀರವಾಗಿಯಲ್ಲ. ಇಡೀ ಜಿಲ್ಲೆಯ ಹಿತಾಸಕ್ತಿಯನ್ನು ಬಲಿಕೊಟ್ಟು, ಕೇವಲ ವ್ಯಕ್ತಿಪೂಜೆಗೆ ಇಳಿದಿರುವ ಬೆಂಬಲಿಗರ ನಡೆ ಇಡೀ ಜಿಲ್ಲೆಯ ಘನತೆಯನ್ನು ಹರಾಜು ಹಾಕುತ್ತಿದೆ.

ಮೊದಲ ಪಟ್ಟಿಯಲ್ಲೇ ಔಟ್: ಕಣ್ಣೀರಿನ ಎರಡನೇ ಹಂತದ ನಿರೀಕ್ಷೆ

ಜುಲೈ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಮೊದಲ ಹಂತದಲ್ಲಿ ಅತ್ಯಂತ ಪ್ರಭಾವಿ ಮತ್ತು ಹೈಕಮಾಂಡ್ ವಲಯದಲ್ಲಿ ತೂಕವಿರುವ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಇಡೀ ಬಾಗಲಕೋಟೆ ಜಿಲ್ಲೆಯ ಯಾವುದೇ ಒಬ್ಬ ಶಾಸಕನ ಹೆಸರೂ ಕನಿಷ್ಠ ಉಲ್ಲೇಖಕ್ಕೂ ಸಿಗದಿರುವುದು ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ.

ಮೊದಲ ಹಂತದಲ್ಲೇ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿರುವ ಬಾಗಲಕೋಟೆಗೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಾದರೂ ಸ್ಥಾನ ಸಿಗುತ್ತದೆಯೇ ಅಥವಾ ಅಲ್ಲಿಯೂ ‘ಲೊಲ್ಲೆಕೋಟಿ’ಯಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಒಟ್ಟಿನಲ್ಲಿ, ಸ್ವಾರ್ಥ ರಾಜಕಾರಣ, ಆಂತರಿಕ ಕಲಹ ಮತ್ತು ಒಗ್ಗಟ್ಟಿನ ಕೊರತೆಯಿಂದಾಗಿ ಬಾಗಲಕೋಟೆ ಜಿಲ್ಲೆಯು ರಾಜ್ಯ ರಾಜಕಾರಣದ ಮುಖ್ಯವಾಹಿನಿಯಿಂದ ಮೂಲೆಗುಂಪಾಗುತ್ತಿರುವುದಂತೂ ಸೂರ್ಯನಷ್ಟೇ ಸತ್ಯ. ಇನ್ನು ಮುಂದಾದರೂ ಇಲ್ಲಿನ ನಾಯಕರು ತಮ್ಮ ಅಹಂ ಬಿಟ್ಟು ಒಂದಾಗದಿದ್ದರೆ, ಬಾಗಲಕೋಟೆ ಜಿಲ್ಲೆ ಕೇವಲ ಮತ ಹಾಕುವ ಯಂತ್ರವಾಗಿ ಉಳಿಯಲಿದೆಯೇ ಹೊರತು, ಅಧಿಕಾರ ನಡೆಸುವ ಕೇಂದ್ರವಾಗಲು ಎಂದಿಗೂ ಸಾಧ್ಯವಿಲ್ಲ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments