ಆಲಮಟ್ಟಿ ಜಲಾಶಯದ ಹಿನ್ನೀರಿನ ಹೊಡೆತಕ್ಕೆ ಸಿಲುಕಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ಬದುಕಿನ ನೆಲೆಗಾಗಿ ದಶಕಗಳಿಂದ ಕಣ್ಣೀರಿನಲ್ಲೇ ಕೈತೊಳೆಯುತ್ತಾ ಬಂದಿರುವ ಬಾಗಲಕೋಟೆಯ (Bagalkot) ವ್ಯಾಪಾರ ಸಮುದಾಯದ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಉನ್ನತ ಮಟ್ಟದ ಸಭೆಯಲ್ಲಿ, ಬಾಗಲಕೋಟೆಯಲ್ಲಿ 200 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಮಾರುಕಟ್ಟೆ ಹಾಗೂ ವ್ಯಾಪಾರೋದ್ಯಮ ನಿವೇಶನ ಅಭಿವೃದ್ಧಿಪಡಿಸುವ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (DPR) ತಯಾರಿಸಲು ಅಧಿಕೃತ ಅನುಮತಿ ಸಿಕ್ಕಿದೆ. ಈ ಐತಿಹಾಸಿಕ ತೀರ್ಪು ಕೇವಲ ಕಾಗದದ ಮೇಲಿನ ಒಪ್ಪಿಯಲ್ಲ; ಬದಲಿಗೆ, ತಲೆಮಾರುಗಳಿಂದ ನೊಂದ ಬಾಗಲಕೋಟೆಯ ವ್ಯಾಪಾರ ಸಮುದಾಯದ ರಕ್ತ-ಬೆವರು ಹಾಗೂ ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಜೀವಜಲದಂತಹ ಸಾಂತ್ವನದ ಗೆಲುವು.

ಹಿನ್ನೀರಿನ ಅಂಚಿನಲ್ಲಿ ಕಮರಿದ ವ್ಯಾಪಾರೋದ್ಯಮ ಮತ್ತು ನೋವಿನ ಹಾದಿ
ವರ್ಷಗಳ ಹಿಂದೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ ಬಾಗಲಕೋಟೆ (Bagalkot) ನಗರವು ಮುಳುಗಡೆಯಾದಾಗ, ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಶತಮಾನಗಳಿಂದ ವ್ಯಾಪಾರ-ವಹಿವಾಟು ನಡೆಸಿ ನೆಲೆ ಕಂಡುಕೊಂಡಿದ್ದ ವರ್ತಕರು ಬೀದಿಗೆ ಬಿದ್ದರು. ನಗರದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತುಹೋಗಿ, ವ್ಯಾಪಾರಸ್ಥರು ಅಕ್ಷರಶಃ ಸಂಕಷ್ಟದ ಕೂಪಕ್ಕೆ ಸಿಲುಕಿದರು. “ನಮ್ಮ ಮುಂದಿನ ಮಕ್ಕಳು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗದೆ, ನಮ್ಮದೇ ಬಾಗಲಕೋಟೆಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು. ನಾವೆಲ್ಲರೂ ಅನುಭವಿಸಿದ ಸಂಕಷ್ಟ ನಮ್ಮ ಮಕ್ಕಳಿಗೂ ಬಾರದಿರಲಿ” ಎಂಬ ನೋವು ಮತ್ತು ಕಾಳಜಿಯಿಂದ ಹುಟ್ಟಿಕೊಂಡಿದ್ದೇ ಈ ಬಾಗಲಕೋಟೆ ಯೂನಿಯನ್ ಆಫ್ ಮರ್ಚೆಂಟ್ಸ್ ಅಂಡ್ ಎಂಟರ್ಪ್ರೈಸಸ್ ಅಸೋಸಿಯೇಷನ್. ಈ ಅಸೋಸಿಯೇಷನ್ ಅಧ್ಯಕ್ಷರಾದ ರವಿ ಕುಮಟಗಿ ಹಾಗೂ ಇತರ ವ್ಯಾಪರಸ್ಥರು ತಮ್ಮ ವ್ಯಾಪಾರವನ್ನು ಪುನಶ್ಚೇತನಗೊಳಿಸಲು ಮತ್ತು ಮುಂದಿನ ಪೀಳಿಗೆಯವರಿಗಾದರೂ ಒಂದು ಭದ್ರವಾದ ನೆಲೆಯನ್ನು ಕಲ್ಪಿಸಲು, ಸರ್ಕಾರವು ಯೂನಿಟ್-3ರಲ್ಲಿ 200 ಎಕರೆ ಪ್ರದೇಶದಲ್ಲಿ ಬೃಹತ್ ಮಾರುಕಟ್ಟೆಯನ್ನು ನಿರ್ಮಿಸಿಕೊಡಬೇಕೆಂದು ಬಹುದಿನಗಳಿಂದ ಹೋರಾಟ ನಡೆಸಿದರು.

ಈ ಮಹಾಸಂಕಲ್ಪಕ್ಕೆ ದನಿಯಾಗಿ ನಿಂತ ರವಿ ಕುಮಟಗಿ ಅವರ ಹೋರಾಟ ಸಾಮಾನ್ಯವಾದದ್ದಲ್ಲ. ಸುಮಾರು ವರ್ಷಗಳ ಹಿಂದೆಯೇ, ಅಂದರೆ 2002ರಲ್ಲಿ ಮೊದಲ ಬಾರಿಗೆ ಮುಳುಗಡೆಯ ನೀರು ನಿಂತ ಕಾಲದಿಂದಲೂ ಈ ಬಗ್ಗೆ ಧ್ವನಿ ಎತ್ತುತ್ತಾ ಬರಲಾಗಿದೆ. ಕಿರಾಣಿ, ಬಾಂಡೆ, ಜ್ಯುವೆಲ್ಲರಿ, ಸ್ಟೇಷನರಿ ಸೇರಿದಂತೆ ಬಾಗಲಕೋಟೆಯ ಸುಮಾರು 48 ವಿವಿಧ ವ್ಯಾಪಾರಿ ಸಂಘಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಬೃಹತ್ ಒಕ್ಕೂಟವನ್ನು ರಚಿಸಿ ಹೋರಾಟವನ್ನು ತೀವ್ರಗೊಳಿಸಲಾಯಿತು. ಆದರೆ, ಈ ಹಾದಿ ಹೂವಿನ ಹಾಸಿಗೆಯ ಹಾದಿಯಾಗಿರಲಿಲ್ಲ; ಮುಳ್ಳಿನ ಹಾದಿಯಾಗಿತ್ತು.
ಇದನ್ನೂ ಓದಿ: ಅಹಿಂದಾಕ್ರೋಶ ಯಾತ್ರೆ- ಸಾಮಾಜಿಕ ನ್ಯಾಯದ ಹಾದಿಯಲ್ಲಿ ಯುವ ನಾಯಕ ಯಲ್ಲಪ್ಪ ಹೆಗಡೆ ಅವರ ಐತಿಹಾಸಿಕ ಹೆಜ್ಜೆ
ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಮಾಜಿ ಶಾಸಕರ ಉದ್ಧಟತನದ ಧೋರಣೆ
ಬಾಗಲಕೋಟೆಯ (Bagalkot) ಈ ದೀರ್ಘ ಹೋರಾಟದ ಹಾದಿಯಲ್ಲಿ ವ್ಯಾಪಾರಸ್ಥರು ಅನುಭವಿಸಿದ ಯಾತನೆ ಬಗ್ಗೆ ಬಾಗಲಕೋಟೆ ಯೂನಿಯನ್ ಆಫ್ ಮರ್ಚೆಂಟ್ಸ್ ಅಂಡ್ ಎಂಟರ್ಪ್ರೈಸಸ್ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಟಗಿ ಅವರು ಅಸಲಿ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ್ದಾರೆ. ಸ್ಥಳೀಯ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಅಂದಿನ ಜನಪ್ರತಿನಿಧಿಗಳು, ಅದರಲ್ಲೂ ವಿಶೇಷವಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಬೇಜವಾಬ್ದಾರಿ ಹಾಗೂ ಉದ್ಧಟತನದ ಹೇಳಿಕೆಗಳು ವ್ಯಾಪಾರಸ್ಥರನ್ನು ಇನ್ನಿಲ್ಲದಂತೆ ನೊಂದಾಯಿಸಿದ್ದವು. ಬಾಗಲಕೋಟೆಯ ವಾಸ್ತವಿಕ ಪರಿಸ್ಥಿತಿಯ ಬಗ್ಗೆ ಹಾಗೂ ವ್ಯಾಪಾರಸ್ಥರ ಕಷ್ಟಗಳ ಬಗ್ಗೆ ಎಳ್ಳಷ್ಟೂ ಕಾಳಜಿ ಅಥವಾ ಮಾಹಿತಿಯಿಲ್ಲದ ಚರಂತಿಮಠ ಅವರ ಬಳಿ ವ್ಯಾಪಾರಸ್ಥರು ಸಮಸ್ಯೆ ತೆಗೆದುಕೊಂಡು ಹೋದಾಗ, “ನನಗೆ ಎಲ್ಲವೂ ಗೊತ್ತು, ಹೋಗಿ” ಎನ್ನುವ ಉದ್ಧಟತನದ ಮಾತುಗಳನ್ನಾಡಿ ಹೀಯಾಳಿಸಿದ್ದರು ಎಂದು ರವಿ ಕುಮಟಗಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಜನಪ್ರತಿನಿಧಿಯೊಬ್ಬರ ಇಂತಹ ನಿರ್ಲಕ್ಷ್ಯದ ಧೋರಣೆ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಂತಿತ್ತು.
2023ರಲ್ಲಿ ಬಾಗಲಕೋಟೆ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ದಿವಂಗತ ಎಚ್.ವೈ. ಮೇಟಿ, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಎಂಎಲ್ಸಿ ಪಿ.ಎಚ್. ಪೂಜಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಆಗ ಎಚ್.ವೈ. ಮೇಟಿ ಅವರು ಪ್ರಾಮಾಣಿಕವಾಗಿ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಕಡತಗಳನ್ನು ಚಲಾಯಿಸಲು ಆರಂಭಿಸಿದರು. ಕೇವಲ ವಸತಿ ಪ್ರದೇಶಕ್ಕೆ ಶೇ. 3ರಷ್ಟು ವಾಣಿಜ್ಯ ಮಳಿಗೆಗಳನ್ನು ನೀಡುವ ದೋಷಪೂರಿತ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ, ವ್ಯಾಪಾರಸ್ಥರಿಗೆ ಶೇ. 33ರವರೆಗೆ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕೆಂದು ರವಿ ಕುಮಟಗಿ ನೇತೃತ್ವದ ತಂಡ ಕಾನೂನುಬದ್ಧವಾಗಿ ಹೋರಾಡಿತು.

ರಾಜಕೀಯ ತಿರುವು, ಎಚ್.ವೈ. ಮೇಟಿ ಅವರ ಶ್ರಮ ಮತ್ತು ಉಪಚುನಾವಣೆಯ ಅಸ್ತ್ರ
ದಿವಂಗತ ಶಾಸಕ ಎಚ್.ವೈ. ಮೇಟಿ ಅವರು ಸಿದ್ದರಾಮಯ್ಯ ಅವರ ಆಪ್ತವಲಯದವರಾಗಿದ್ದರಿಂದ, ಸರ್ಕಾರದ ಮಟ್ಟದಲ್ಲಿ ಈ ಯೋಜನೆಗೆ ಜೀವ ತುಂಬಲು ಅವರು ಹಗಲಿರುಳು ಶ್ರಮಿಸಿದರು. ಆದರೆ ವಿಧಿಯಾಟ 2025ರಲ್ಲಿ ಮೇಟಿ ಅವರು ನಿಧನರಾದರು. ಆ ಸಂದರ್ಭದಲ್ಲಿ ಬಾಗಲಕೋಟೆ ನಗರದ ಉಪಚುನಾವಣೆಯು ರಾಜಕೀಯ ರಂಗೇರಿಸಿತು. ನಗರದ ವ್ಯಾಪಾರಸ್ಥರ ಮತಬ್ಯಾಂಕ್ ಅನಿವಾರ್ಯವಾಗಿರುವ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಭದ್ರಕೋಟೆಯಾಗಿದ್ದ ಬಾಗಲಕೋಟೆಯನ್ನು ಭೇದಿಸಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಾರಸ್ಥರ ಬೆಂಬಲ ಅತಿ ಅಗತ್ಯವಾಗಿತ್ತು.
ಈ ಅನಿವಾರ್ಯತೆಯನ್ನು ಮನಗಂಡು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಬಿ. ತಿಮ್ಮಾಪುರ ಮುಂತಾದ ಘಟಾನುಘಡಿ ನಾಯಕರು ಬಾಗಲಕೋಟೆಗೆ ಆಗಮಿಸಿ, ವ್ಯಾಪಾರಸ್ಥರಿಗೆ ಬೃಹತ್ ಮಾರುಕಟ್ಟೆ ನಿರ್ಮಿಸಿಕೊಡುವ ಭರವಸೆಯನ್ನು ಚುನಾವಣಾ ಅಸ್ತ್ರವನ್ನಾಗಿಯೂ ಹಾಗೂ ಪಕ್ಷದ ಪ್ರಮುಖ ಭರವಸೆಯನ್ನಾಗಿಯೂ ಘೋಷಿಸಿದರು. ಮತ್ತೊಂದೆಡೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ಸದನದ ಒಳಗೆ ಎರಡು ಬಾರಿ ಧ್ವನಿ ಎತ್ತಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದರು.
ಈ ಯಶಸ್ಸಿನ ಅಸಲಿ ನಾಯಕರು ಯಾರು?
ಈ ಬೃಹತ್ ಮಾರುಕಟ್ಟೆ ಯೋಜನೆ ಸಾಕಾರಗೊಳ್ಳುವ ಹಿಂದೆ ಹಲವರ ಪರಿಶ್ರಮವಿದ್ದು, ಅವರನ್ನು ಈ ಯಶಸ್ಸಿನ ಅಸಲಿ ನಾಯಕರು ಎಂದು ಸ್ಮರಿಸಲೇಬೇಕು:
- ರವಿ ಕುಮಟಗಿ: ಬಾಗಲಕೋಟೆ ಯೂನಿಯನ್ ಆಫ್ ಮರ್ಚೆಂಟ್ಸ್ ಅಂಡ್ ಎಂಟರ್ಪ್ರೈಸಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಇವರೇ ಈ ಇಡೀ ಹೋರಾಟದ ನಿಜವಾದ ರೂವಾರಿ. ಸುಮಾರು 3 ದಶಕಗಳಿಂದ 48 ಸಂಘಗಳನ್ನು ಒಗ್ಗೂಡಿಸಿ, ಸರ್ಕಾರದ ಮೇಲೆ ನಿರಂತರ ಒತ್ತಡ ತರುವ ಮೂಲಕ ಡಿಪಿಆರ್ ಹಂತದವರೆಗೆ ತಲುಪಿಸುವಲ್ಲಿ ಇವರ ಮುಂಚೂಣಿ ಹೋರಾಟವೇ ಪ್ರಮುಖ ಕಾರಣ.
- ದಿವಂಗತ ಎಚ್.ವೈ. ಮೇಟಿ: ವ್ಯಾಪಾರಸ್ಥರ ಕಷ್ಟಕ್ಕೆ ಸ್ಪಂದಿಸಿ, ಸರ್ಕಾರದ ಮಟ್ಟದಲ್ಲಿ ಕಡತಗಳಿಗೆ ಜೀವ ತುಂಬಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಮುಕ್ಷು ಮಾಜಿ ಶಾಸಕರು.
- ಉಮೇಶ್ ಮೇಟಿ: ಎಚ್.ವೈ. ಮೇಟಿ ಅವರ ನಿಧನದ ಬಳಿಕ ಶಾಸಕರಾಗಿ ಆಯ್ಕೆಯಾಗಿ, ತಮ್ಮ ತಂದೆಯ ಕನಸಿನ ಈ ಮಾರುಕಟ್ಟೆ ಯೋಜನೆಯನ್ನು ಮುಂದುವರಿಸಿ ಯಶಸ್ಸಿನ ಹಾದಿಗೆ ತಂದವರು.
- ಪ್ರಕಾಶ್ ತಪಶೆಟ್ಟಿ: ಬಿಟಿಡಿಎ (BTDA) ಅಧ್ಯಕ್ಷರಾಗಿ, ತಾಂತ್ರಿಕ ಹಾಗೂ ಕಾನೂನಾತ್ಮಕ ಕಡತಗಳನ್ನು ಸಿದ್ಧಪಡಿಸಿ, ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಯೋಜನೆಯ ರೂಪುರೇಷೆಗೆ ಅಚಲವಾಗಿ ಬೆನ್ನೆಲುಬಾಗಿ ನಿಂತವರು.
- ಪಿ.ಎಚ್. ಪೂಜಾರ (ಎಂಎಲ್ಸಿ): ಸರ್ಕಾರದ ಗಮನ ಸೆಳೆಯಲು ಸದನದಲ್ಲಿ ಧ್ವನಿ ಎತ್ತಿ ಹೋರಾಟಕ್ಕೆ ಬಲ ತುಂಬಿದವರು.
- ರಾಜ್ಯದ ಮುಖಂಡರು: ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಹಾಗೂ ಆರ್.ಬಿ. ತಿಮ್ಮಾಪುರ ಅವರು ಚುನಾವಣಾ ಭರವಸೆಯಂತೆ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ಸ್ಪಂದಿಸಿ ಈಗ ಡಿಪಿಆರ್ಗೆ ಅನುಮತಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾವನಾತ್ಮಕ ಗೆಲುವು ಮತ್ತು ಮುಂದಿನ ಹೆಜ್ಜೆ
ಇಂದು ಕೃಷ್ಣಾ ಭಾಗ್ಯ ಜಲ ನಿಗಮದ ಉನ್ನತ ಮಟ್ಟದ ಸಭೆಯಲ್ಲಿ ಡಿಪಿಆರ್ ತಯಾರಿಸಲು ಸಿಕ್ಕಿರುವ ಅನುಮತಿಯು, ಕೇವಲ 200 ಎಕರೆ ಜಾಗದ ಮಾರುಕಟ್ಟೆಯ ಆರಂಭವಲ್ಲ; ಅದು ಬಾಗಲಕೋಟೆಯ ಲಕ್ಷಾಂತರ ವ್ಯಾಪಾರಸ್ಥರ ಸ್ವಾಭಿಮಾನದ ಬದುಕಿಗೆ ಹಾಗೂ ನಾಯಕರ ಸಂಘಟಿತ ಶ್ರಮಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ರಾಜಕೀಯ ಮುಖಂಡರ ಇಚ್ಛಾಶಕ್ತಿ, ಸ್ಥಳೀಯ ನಾಯಕರ ಸಂಘಟಿತ ಹೋರಾಟ ಮತ್ತು ವ್ಯಾಪಾರಸ್ಥರ ಅಚಲ ವಿಶ್ವಾಸದಿಂದ ಸಾಕಾರಗೊಳ್ಳುತ್ತಿರುವ ಈ ಬೃಹತ್ ಮಾರುಕಟ್ಟೆಯು ಉತ್ತರ ಕರ್ನಾಟಕದ ಅತಿ ದೊಡ್ಡ ವಾಣಿಜ್ಯ ನಗರಿಯಾಗಿ ಬಾಗಲಕೋಟೆಯನ್ನು ಮರುಹುಟ್ಟುಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






