ಬೆಂಗಳೂರು: ಕರ್ನಾಟಕದ ಕೃಷಿ ವಿಶ್ವವಿದ್ಯಾನಿಲಯಗಳು (Agriculture University) ಇಂದು ಇತಿಹಾಸದಲ್ಲೇ ಕಾಣದಂತಹ ಗಂಭೀರ ನೈತಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟಿನ ಕೂಪದಲ್ಲಿ ಸಿಲುಕಿವೆ. ಅನ್ನದಾತನ ಬದುಕನ್ನು ಹಸನಾಗಿಸುವ, ದೇಶದ ಆಹಾರ ಭದ್ರತೆಯನ್ನು ಬಲಪಡಿಸುವ ಸಂಶೋಧನೆಗಳು ನಡೆಯಬೇಕಾದ ಈ ಪವಿತ್ರ ‘ಜ್ಞಾನ ದೇಗುಲ’ಗಳಲ್ಲಿ, ಇಂದು ‘ಭ್ರಷ್ಟಾಚಾರ’, ‘ಸ್ವಜನಪಕ್ಷಪಾತ’ ಮತ್ತು ‘ಆಡಳಿತಾತ್ಮಕ ವೈಫಲ್ಯ’ದ ಕರಾಳ ನೆರಳು ದಟ್ಟವಾಗಿ ಆವರಿಸಿದೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಆಯ್ಕೆ ಪ್ರಕ್ರಿಯೆಯು ಇದೀಗ ಕೇವಲ ಒಂದು ನೇಮಕಾತಿಯಾಗಿ ಉಳಿದಿಲ್ಲ; ಇದು ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುತ್ತಿರುವ ಒಂದು ದೊಡ್ಡ ಹಗರಣದ ಮುನ್ಸೂಚನೆಯಾಗಿದೆ.
‘ಆರೋಪಿಗಳೇ’ ಆಯ್ಕೆದಾರರೇ? – ಎಂತಹ ವಿಪರ್ಯಾಸ!
ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ವಿಷಯವೆಂದರೆ, ಕರ್ನಾಟಕದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ (Agriculture University) ಕುಲಪತಿ ಹುದ್ದೆಗಳಿಗೆ ಅತ್ಯಂತ ಸಮರ್ಥ, ನೈತಿಕತೆ ಉಳ್ಳ ಮತ್ತು ಕಳಂಕ ರಹಿತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿತ್ತೋ, ಆ ಆಯ್ಕೆ ಪ್ರಕ್ರಿಯೆಯ ‘ಶೋಧನಾ ಸಮಿತಿ’ಯ ಮುಖ್ಯಸ್ಥರನ್ನಾಗಿ, ಸ್ವತಃ ಭ್ರಷ್ಟಾಚಾರದ ಆರೋಪ ಹೊತ್ತು ಲೋಕಾಯುಕ್ತದ ತನಿಖೆ ಎದುರಿಸುತ್ತಿರುವವರನ್ನೇ ನೇಮಿಸಲಾಗಿದೆ. ಕಳ್ಳನ ಕೈಗೆ ಬೀಗದ ಕೈ ನೀಡಿದಂತೆ, ಆರೋಪಿಗಳನ್ನೇ ನೇಮಕಾತಿ ಸಮಿತಿಯ ಚುಕ್ಕಾಣಿ ಹಿಡಿಯುವಂತೆ ಮಾಡಿರುವುದು ಸರ್ಕಾರದ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಶಿವಮೊಗ್ಗ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಡಾ. ಎಸ್. ಎ. ಸುರೇಶ್ ಅವರ ಮೇಲೆ ಈಗಾಗಲೇ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಗಂಭೀರ ಆರೋಪಗಳಿವೆ. ಇಂತಹ ವ್ಯಕ್ತಿ ವಿಶ್ವವಿದ್ಯಾನಿಲಯದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಗಳನ್ನು ಶೋಧಿಸುವುದು ಎಂದರೆ, ಅಲ್ಲಿನ ಪ್ರಕ್ರಿಯೆಯ ಪಾರದರ್ಶಕತೆ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದನ್ನು ಊಹಿಸಬಹುದು. ಇನ್ನು ಧಾರವಾಡ ವಿವಿಯ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಅದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇದು ಕೇವಲ ನಿಯಮದ ಉಲ್ಲಂಘನೆಯಲ್ಲ, ಬದಲಾಗಿ ವ್ಯವಸ್ಥೆಯಲ್ಲಿನ ಹಿತಾಸಕ್ತಿಗಳ ಜಾಲ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.
ಇದನ್ನೂ ಓದಿ: ಸಿಬಿಐ ತನಿಖೆಯ ವಿಶ್ವಾಸಾರ್ಹತೆಗೆ ಸವಾಲು? ಆಯುಧ, ಸಿಮ್ ಕಾರ್ಡ್ ಮತ್ತು ಸಾಕ್ಷ್ಯಗಳ ವಿವಾದದ ಅಸಲಿ ಸತ್ಯ ಇಲ್ಲಿದೆ..!
ಯಾರು ತಡೆಯುತ್ತಾರೆ ಈ ಭ್ರಷ್ಟಾಚಾರವನ್ನು?
ಈ ಅನ್ಯಾಯದ ವಿರುದ್ಧ ದನಿ ಎತ್ತಿರುವವರು ಸಾಮಾನ್ಯರಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (Agriculture University)ದ ನಿವೃತ್ತ ವಿಜ್ಞಾನಿಗಳು, ಹಿರಿಯ ಪ್ರಾಧ್ಯಾಪಕರು, ಹಳೆಯ ವಿದ್ಯಾರ್ಥಿಗಳ ವೇದಿಕೆಯು ಇದೀಗ ರಣಕಹಳೆ ಮೊಳಗಿಸಿದೆ. ಡಾ. ಟಿಎನ್ ಪ್ರಕಾಶ್ ಕಮ್ಮರಡಿ, ಪ್ರೊಫೆಸರ, ವೀರಭದ್ರಯ್ಯ, ಡಾ. ರಾಜಣ್ಣ, ಪ್ರೋ. ವೆಂಕಟರೆಡ್ಡಿ, ಶ್ರೀಲಕ್ಷ್ಮಿನಾರಾಯಣ, ಡಾ. ಶ್ರೀಧರ ಅಡಿಗ, ಶ್ರೀಕೃಷ್ಣರೆಡ್ಡಿ ತಂಡವು ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಮೂಲಕ ಕಾನೂನು ಹೋರಾಟಕ್ಕೆ ಇಳಿದಿದೆ.
ಮಾಜಿ ಸಭಾಧ್ಯಕ್ಷರಾದ ಶ್ರೀ ಕಾಗೋಡು ತಿಮ್ಮಪ್ಪನವರೇ ಈ ನೇಮಕಾತಿಯನ್ನು ತೀವ್ರವಾಗಿ ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿರುವುದು, ಈ ವಿವಾದದ ಗಂಭೀರತೆಯನ್ನು ಜಗಜ್ಜಾಹೀರು ಮಾಡಿದೆ. ಆದರೂ, ಸರ್ಕಾರ ಈ ಆಕ್ಷೇಪಗಳನ್ನು ಕಡೆಗಣಿಸಿ, ಯಾವುದೋ ರಾಜಕೀಯ ಶಕ್ತಿಯ ಒತ್ತಡಕ್ಕೆ ಮಣಿದು ಆಯ್ಕೆ ಪ್ರಕ್ರಿಯೆಯನ್ನು ಯಾಂತ್ರಿಕವಾಗಿ ಪೂರ್ಣಗೊಳಿಸಲು ಹೊರಟಿರುವುದು ಸಂಶಯದ ಹುತ್ತವನ್ನು ಬೆಳೆಸಿದೆ.

ಅಸಲಿ ಸುದ್ದಿಗೆ ಪ್ರಕಾಶ್ ಕಮ್ಮರಡಿ ಅವರ ಕಿಡಿ
ಈ ಕುರಿತು ‘ಅಸಲಿ ಸುದ್ದಿ’ ಸಂಸ್ಥೆಯೊಂದಿಗೆ ಮಾತನಾಡಿದ ಕೃಷಿ ಅರ್ಥಶಾಸ್ತ್ರಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು, ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕಿದ್ದಾರೆ. “ಇದು ಕೇವಲ ಒಂದು ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆಯ ಪ್ರಶ್ನೆಯಲ್ಲ. ಬದಲಾಗಿ, ಇಡೀ ಆಡಳಿತ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಅವ್ಯವಹಾರ ಮತ್ತು ಪಕ್ಷಪಾತದ ವಿರುದ್ಧದ ಸಮರ” ಎಂದು ಅವರು ಬಣ್ಣಿಸಿದ್ದಾರೆ.
ದೇಶ ನಿರ್ಮಾಣದ ಜ್ಞಾನ ದೇಗುಲಕ್ಕೆ ಭ್ರಷ್ಟಾಚಾರದ ಕಲೆ ಹತ್ತಿರುವುದು ತೀವ್ರ ಆತಂಕಕಾರಿ. “ಇದನ್ನು ಒಂದು ಜನಾಂದೋಲನದ ಮೂಲಕ ತಡೆಗಟ್ಟಬೇಕಿದೆ. ಇದಕ್ಕೆ ಜಯಪ್ರಕಾಶ್ ನಾರಾಯಣ ಅವರ ಯುವಜನರ ಕ್ರಾಂತಿ ಮಾದರಿಯಾಗಬೇಕು. ಕೃಷಿ ವಿವಿಗಳಲ್ಲಿ ನಡೆಯುತ್ತಿರುವ ಈ ಹೋರಾಟವು ವ್ಯವಸ್ಥೆಯನ್ನು ಶುದ್ಧೀಕರಿಸುವ ಮೊದಲ ಹೆಜ್ಜೆಯಾಗಿದೆ,” ಎಂದು ಅವರು ಕರೆ ನೀಡಿದ್ದಾರೆ. ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನದ ಅಗತ್ಯವಿದೆ ಮತ್ತು ಅಂತಹ ಸಂದರ್ಭದಲ್ಲಿ ಹಿರಿಯರ ವೇದಿಕೆಗಳು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬುದು ಅವರ ಖಚಿತ ನಿಲುವು.
ಯುಜಿಸಿ (UGC) ನಿಯಮಗಳಿಗೆ ಸಿಕ್ಕಿಲ್ಲ ಗೌರವ
ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ಕಾಪಾಡುವ ಉದ್ದೇಶದಿಂದ ರೂಪಿಸಲಾದ ಯುಜಿಸಿ 2018ರ ನಿಯಮಾವಳಿ ಕಲಂ 7.3(ii) ಅನ್ನು ಇಲ್ಲಿ ಅಕ್ಷರಶಃ ಉಲ್ಲಂಘಿಸಲಾಗಿದೆ. “ಆಯ್ಕೆ ಸಮಿತಿಯ ಸದಸ್ಯರು ಸಂಬಂಧಿತ ವಿಶ್ವವಿದ್ಯಾನಿಲಯದೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದಿರಬಾರದು” ಎಂಬ ಕಠಿಣ ನಿಯಮವಿದ್ದರೂ, ಸ್ವಾರ್ಥ ಸಾಧನೆಗಾಗಿ ಅದನ್ನು ಗಾಳಿಗೆ ತೂರಲಾಗಿದೆ. ತನ್ನದೇ ಸಂಸ್ಥೆಯ ವಿದ್ಯಾರ್ಥಿಯನ್ನು ಅಥವಾ ಅಲ್ಲಿ ಕೆಲಸ ಮಾಡಿದವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದು, ನೇಮಕಾತಿಯ ನಿಷ್ಪಕ್ಷಪಾತದ ಮೇಲೆ ಬರೆ ಹಾಕಿದಂತಾಗಿದೆ.
ಇದನ್ನೂ ಓದಿ: ಸಚಿವರ ಅಳಿಯನ ಅಟ್ಟಹಾಸ! ಅಬಕಾರಿ ಇಲಾಖೆಯನ್ನೇ ಲೂಟಿ ಮಾಡಿದ ‘ಸೂತ್ರಧಾರ’ನಿಗೆ ED ಸಂಕೋಲೆ!”
ನಮ್ಮ ಬೇಡಿಕೆ ಸ್ಪಷ್ಟ ಮತ್ತು ನಿರ್ಣಾಯಕ:
ಈ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಸರ್ಕಾರ ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:
1. ವಿವಾದಾತ್ಮಕ ಸಮಿತಿಗಳ ವಿಸರ್ಜನೆ: ನಿಯಮಗಳನ್ನು ಗಾಳಿಗೆ ತೂರಿ ರಚಿಸಲಾಗಿರುವ ಮತ್ತು ಲೋಕಾಯುಕ್ತ ತನಿಖೆ ಎದುರಿಸುತ್ತಿರುವವರ ನೇತೃತ್ವದ ಎಲ್ಲಾ ಸಮಿತಿಗಳನ್ನು ಕೂಡಲೇ ರದ್ದುಗೊಳಿಸಬೇಕು.
2. ಪಾರದರ್ಶಕ ಆಯ್ಕೆ: ಯಾವುದೇ ಬಾಹ್ಯ ಒತ್ತಡಗಳಿಲ್ಲದ, ಸಂಪೂರ್ಣ ಆರೋಪಮುಕ್ತ ಹಾಗೂ ತಜ್ಞ ವ್ಯಕ್ತಿಗಳನ್ನೊಳಗೊಂಡ ಹೊಸ ಆಯ್ಕೆ ಸಮಿತಿಯನ್ನು ರಚಿಸಬೇಕು.
3. ಫೋರೆನ್ಸಿಕ್ ಆಡಿಟ್: ಕೃಷಿ ವಿವಿಗಳಲ್ಲಿ ಕಳೆದ ದಶಕದಲ್ಲಿ ನಡೆದಿರುವ ನೇಮಕಾತಿ, ಗುತ್ತಿಗೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಆಡಳಿತಾತ್ಮಕ ಫೋರೆನ್ಸಿಕ್ ತಪಾಸಣೆ ನಡೆಸಬೇಕು.
4. ನೈತಿಕ ಹೊಣೆಗಾರಿಕೆ: ತನಿಖೆ ಬಾಕಿಯಿರುವ ವ್ಯಕ್ತಿಗಳನ್ನು ನಿರ್ಣಾಯಕ ಹುದ್ದೆಗಳಿಗೆ ಶಿಫಾರಸು ಮಾಡುವ ಪ್ರಕ್ರಿಯೆಗಳನ್ನು ಸರ್ಕಾರ ನಿಲ್ಲಿಸಬೇಕು.
ಕೃಷಿ ವಿಶ್ವವಿದ್ಯಾನಿಲಯಗಳು ಕೇವಲ ವೇತನ ಪಡೆಯುವವರ ತಾಣಗಳಲ್ಲ; ಅವು ಅನ್ನದಾತನ ಬದುಕಿಗೆ ದಾರಿ ತೋರುವ ಬೆಳಕಿನ ಮಂದಿರಗಳು. ಅಂತಹ ಮಂದಿರದ ದೀಪಗಳನ್ನೇ ಭ್ರಷ್ಟಾಚಾರದ ಕಪ್ಪು ಮಸಿ ಬಳಿದು ನಂದಿಸಲು ಪ್ರಯತ್ನಿಸಿದರೆ, ಅದು ರಾಜ್ಯದ ರೈತಕುಲಕ್ಕೆ ಮಾಡುತ್ತಿರುವ ಅಕ್ಷಮ್ಯ ಅಪರಾಧ. ಕೃಷಿ ವಿಜ್ಞಾನಿಗಳ ತಂಡದ ಈ ಹೋರಾಟವು ಕೇವಲ ವ್ಯಕ್ತಿಗಳ ವಿರುದ್ಧವಲ್ಲ, ವ್ಯವಸ್ಥೆಯಲ್ಲಿ ಬೇರೂರಿರುವ ಅಸಾಂವಿಧಾನಿಕ ಶಕ್ತಿಗಳ ವಿರುದ್ಧವಾಗಿದೆ.
ಸರ್ಕಾರವು ಇನ್ನೂ ಮೈಮರೆತರೆ ಅಥವಾ ಪ್ರಭಾವಿಗಳ ಪರವಾಗಿ ಕೆಲಸ ಮುಂದುವರಿಸಿದರೆ, ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆಯುವುದರಲ್ಲಿ ಸಂಶಯವಿಲ್ಲ. ಇಂದಿನ ಯುವಪೀಳಿಗೆಯ ಭವಿಷ್ಯವು ಪ್ರಶ್ನಾರ್ಥಕವಾಗಿರುವಾಗ, ಈ ಜ್ಞಾನ ದೇಗುಲಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಸರ್ಕಾರ ಎಚ್ಚೆತ್ತುಕೊಳ್ಳುವುದೇ? ಅಥವಾ ಭ್ರಷ್ಟಾಚಾರದ ಕೂಪದಲ್ಲಿ ವ್ಯವಸ್ಥೆಯನ್ನು ಮುಳುಗಿಸಿ, ಅನ್ನದಾತನ ಶಾಪಕ್ಕೆ ಗುರಿಯಾಗುವುದೇ? ನಿರ್ಧಾರ ಸರ್ಕಾರದ್ದೇ!

